ಡಿಸೆಂಬರ್ 30, 2020 ಬುಧವಾರ [ಬಿಳಿ]
ಮೊದಲ ವಾಚನ: 1 ಯೊವಾನ್ನ 2.12-17
ಕೀರ್ತನೆ 96: 7-10, ಶ್ಲೋಕ.11
ಹರ್ಷಿಸಲಿ ಆಕಾಶವು, ಸಂತೋಷಿಸಲಿ ಭೂಲೋಕವು
ಶುಭಸಂದೇಶ: ಲೂಕ 2.36-40
==================
ಮೊದಲನೇ ವಾಚನ
1 ಯೊವಾನ್ನ 2.12-17
12 : ಬರೆಯುತಿಹೆನು ಪ್ರಿಯಮಕ್ಕಳಿರಾ, ಇದನ್ನು ಏಕೆನೆ, ಕ್ರಿಸ್ತ ನಾಮದ ನಿಮಿತ್ತ ಕ್ಷಮಿಸಲಾಯಿತು ನಿಮ್ಮ ಪಾಪಗಳನ್ನು.
13 : ಬರೆಯುತ್ತಿಹೆನು ತಂದೆಗಳಿರಾ, ಇದನ್ನು ಏಕೆನೆ, ಬಲ್ಲವರಾದಿರಿ ಆದಿಯಿಂದಿರುವಾತನನ್ನು. ಬರೆಯುತಿಹೆನು ಯುವಜನರಿರಾ, ಇದನ್ನು ಏಕೆನೆ, ನೀವು ಜಯಿಸಿದ್ದಾಯಿತು ಆ ಕಡುಗೇಡಿಗನನ್ನು.
14 : ಬರೆದಿಹೆನು ಮಕ್ಕಳಿರಾ, ಇದನ್ನು ಏಕೆನೆ, ಬಲ್ಲವರಾದಿರಿ ಪರಮ ಪಿತನನ್ನು. ಬರೆದಿಹೆನು ಶಕ್ತಿಯುತ ಯುವಜನರಿರಾ, ಇದನ್ನು ಏಕೆನೆ, ನೆಲೆಗೊಳಿಸಿರುವಿರಿ ನಿಮ್ಮಲ್ಲಿ ದೈವವಾಕ್ಯವನ್ನು. ಮಾತ್ರವಲ್ಲ, ನೀವು ಜಯಿಸಿದ್ದಾಯಿತು ಆ ಕಡುಗೇಡಿಗನನ್ನು.
15 : ಲೋಕಕ್ಕೂ ಲೌಕಿಕವಾದವುಗಳಿಗೂ ನೀವು ಒಲಿಯಬಾರದು. ಈ ಲೋಕವನ್ನು ಒಲಿದರೆ ಪಿತನಲ್ಲಿ ನಿಮಗೆ ಒಲವಿಲ್ಲವೆಂದಾಯಿತು.
16 : ಲೋಕಸಂಬಂಧವಾದ ದೈಹಿಕ ದುರಿಚ್ಛೆ, ಕಣ್ಣಿನ ಕಾಮುಕತೆ, ಐಶ್ವರ್ಯದ ಅಹಂಭಾವ - ಇಂಥವು ಪಿತನಿಂದ ಬಂದುವಲ್ಲ, ಲೋಕದಿಂದಲೇ ಬಂದುವು.
17 : ಲೋಕವೂ ಅದರ ವ್ಯಾಮೋಹವೂ ಗತಿಸಿ ಹೋಗುವುದು. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಚಿರಂಜೀವಿಯಾಗಿ ಬಾಳುವನು.
===================
ಕೀರ್ತನೆ
ಕೀರ್ತನೆ 96: 7-10, ಶ್ಲೋಕ.11
ಶ್ಲೋಕ: ಹರ್ಷಿಸಲಿ ಆಕಾಶವು,
ಸಂತೋಷಿಸಲಿ ಭೂಲೋಕವು||
7 : ಶಕ್ತಿಸಾಮಥ್ರ್ಯ ಪ್ರಭುವಿನದೇ ಎಂದು /
ಜಗದ ರಾಷ್ಟ್ರಗಳು ಘನಪಡಿಸಲಿ
ಆತನನು ಎಂದೆಂದು //
8 : ಆತನ ನಾಮಕೆ
ತನ್ನಿ ಘನತೆಗೌರವವನು /
ಆತನ ಮಂದಿರಕೆ ಬನ್ನಿ
ಕಾಣಿಕೆ ಹೊತ್ತು //
9 : ಪ್ರಭುವಿಗೆ ಮಣಿಯಿರಿ
ಪವಿತ್ರ ವಸ್ತ್ರಧಾರಿಗಳಂತೆ /
ಅಂಜಿಕೆಯಿಂದ ನಡುಗಲಿ
ಜಗವಿಡೀ ಆತನ ಮುಂದೆ //
10 : ಪ್ರಭು ರಾಜನೆಂದು
ಸಾರಿರಿ ರಾಷ್ಟ್ರಗಳಿಗೆ /
ಕದಲದ ಸ್ಥಿರತೆಯನು
ಇತ್ತಿಹನು ಧರೆಗೆ /ನ್ಯಾಯವಾದ
ತೀರ್ಪು ಕೊಡುವನು ಜನಾಂಗಕೆ //
===================
ಶುಭಸಂದೇಶ
ಲೂಕ 2.36-40
36 : ಇದಲ್ಲದೆ ಅಲ್ಲಿ ಅಶೇರನ ವಂಶಕ್ಕೆ ಸೇರಿದ ಘನುವೇಲನ ಮಗಳಾದ ಅನ್ನಳೆಂಬ ಪ್ರವಾದಿನಿಯಿದ್ದಳು. ಅವಳು ಮುದಿಪ್ರಾಯದವಳು, ಮದುವೆಯಾಗಿ ಏಳು ವರ್ಷ ಮಾತ್ರ ಗಂಡನೊಡನೆ ಬಾಳಿ ವಿಧವೆಯಾದವಳು.
37 : ಅವಳಿಗೆ ಸುಮಾರು ಎಂಭತ್ತನಾಲ್ಕು ವರ್ಷ ವಯಸ್ಸು. ಮಹಾ ದೇವಾಲಯವನ್ನು ಬಿಟ್ಟು ಅವಳು ಎಲ್ಲಿಗೂ ಹೋಗುತ್ತಿರಲಿಲ್ಲ; ಹಗಲಿರುಳು ಉಪವಾಸ ಪ್ರಾರ್ಥನೆಗಳಿಂದ ದೇವಾರಾಧನೆಯಲ್ಲಿ ನಿರತಳಾಗಿದ್ದಳು.
38 : ಅವಳು ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದು, ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸಿ, ಜೆರುಸಲೇಮಿನ ವಿಮೋಚನೆಯನ್ನು ಎದುರು ನೋಡುತ್ತಿದ್ದ ಅಲ್ಲಿಯವರಿಗೆಲ್ಲಾ ಆ ಶಿಶುವಿನ ವಿಷಯವಾಗಿ ಹೇಳತೊಡಗಿದಳು. ಮರಳಿ ನಜರೇತಿಗೆ
39 : ಸರ್ವೇಶ್ವರನ ಧರ್ಮಶಾಸ್ತ್ರಕ್ಕನುಸಾರ ಎಲ್ಲ ವಿಧಿಗಳನ್ನು ನೆರವೇರಿಸಿದ ಮೇಲೆ ಜೋಸೆಫ್ ಮತ್ತು ಮರಿಯಳು ಗಲಿಲೇಯ ಪ್ರಾಂತ್ಯದಲ್ಲಿದ್ದ ತಮ್ಮ ಸ್ವಗ್ರಾಮವಾದ ನಜರೇತಿಗೆ ಹಿಂದಿರುಗಿದರು.
40 : ಬಾಲಕ ಯೇಸು ಬೆಳೆದಂತೆ ಶಕ್ತರೂ ಜ್ಞಾನ ಸಂಪೂರ್ಣರೂ ಆದರು. (ಇದಲ್ಲದೆ) ದೈವಾನುಗ್ರಹ ಅವರ ಮೇಲಿತ್ತು.
===================
ಚಿಂತನೆ
ಅನ್ನಳು ಅಶೇರನ ಬುಡಕಟ್ಟಿಗೆ ಸೇರಿದವಳು. ಇಸ್ರಯೇಲರ ಅನೇಕ ಬುಡಕಟ್ಟು ಅಥವಾ ಗೋತ್ರದವರು ಅಸ್ಸೀರಿಯಾದವರೊಂದಿಗೆ ಮದುವೆಯಾಗಿ ತಮ್ಮ 10 ಗೋತ್ರಗಳನ್ನು ಕಳೆದುಕೊಳ್ಳುತ್ತಾರೆ. ಅವುಗಳಲ್ಲಿ ಅಶೇರ ಗೋತ್ರವು ಒಂದು. ಆದರೆ ಅವುಗಳಲ್ಲಿ ಕೆಲವು ಕುಟುಂಬಗಳು ಸರ್ವೇಶ್ವರ ಸ್ವಾಮಿಗೆ ಪ್ರಾಮಾಣಿಕವಾಗಿ ಉಳಿದವು. ಅನ್ನಳು ಅಂತಹ ಪ್ರಾಮಾಣಿಕ ಕುಟುಂಬಕ್ಕೆ ಸೇರಿದವಳು, ಹಳೆಯ ಒಡಂಬಡಿಕೆಯು ನಾಲ್ಕು ಪ್ರವಾದಿನಿಗಳನ್ನು ಹೆಸರಿಸಿದೆ. ಮಿರಿಯಮ್ (ವಿ.ಕಾ. 15:20), ದೆಬೋರಾ (ನ್ಯಾಯ ಸ್ಥಾಪಕರು 4:4), ಹುಲ್ದ (2 ಅರಸ 22:14) ಹಾಗೂ ಯೆಶಾಯನ ಮಡದಿ (ಯೆಶಾಯ 8:3). ಆದರೆ ಹೊಸ ಒಡಂಬಡಿಕೆಯಲ್ಲಿ ಕಾಣಬರುವ ಏಕೈಕ ಪ್ರವಾದಿನಿ ಅನ್ನಳು. ಅನ್ನಳು ದೈವಭಕ್ತಳು, ಬರಲಿರುವ ರಕ್ಷಕನಿಗಾಗಿ ಆತುರದಿಂದ ಕಾಯುತ್ತಿದ್ದಳು. ರಕ್ಷಕನನ್ನು ಕಂಡೊಡನೆ ನೆರೆದಿದ್ದವರಿಗೆ ತಿಳಿಸಿದಳು. ಅನ್ನಳಂತೆ ನಾವು ದೈವಭಕ್ತರಾಗಿ ರಕ್ಷಕನನ್ನು ಇತರರಿಗೆ ನಮ್ಮ ನಡೆನುಡಿಯ ಮೂಲಕ ಪರಿಚಯಿಸಬೇಕಿದೆ.
===================
No comments:
Post a Comment