ಡಿಸೆಂಬರ್ 29, 2020 ಮಂಗಳವಾರ [ಬಿಳಿ]
ಸಂತ ತೋಮಸ್ ಬೆಕೆಟ್, ಧರ್ಮಾಧ್ಯಕ್ಷ ಮತ್ತು ರಕ್ತಸಾಕ್ಷಿ (ಐಚ್ಛಿಕ ಸ್ಮರಣೆ)
ಮೊದಲ ವಾಚನ: 1 ಯೊವಾನ್ನ 2.3-11
ಕೀರ್ತನೆ 96: 1-3, 5-6, ಶ್ಲೋಕ.11
ಹರ್ಷಿಸಲಿ ಆಕಾಶವು, ಸಂತೋಷಿಸಲಿ ಭೂಲೋಕವು
ಶುಭಸಂದೇಶ: ಲೂಕ 2.22-35
==================
ಮೊದಲನೇ ವಾಚನ
1 ಯೊವಾನ್ನ 2.3-11
3 : ನಾವು ದೇವರ ಆಜ್ಞೆಗಳನ್ನು ಕೈಗೊಂಡು ನಡೆದರೆ ಅದರಿಂದಲೇ ಅವರ ಅರಿವು ನಮಗಿದೆ ಎಂದು ಖಚಿತವಾಗುತ್ತದೆ.
4 : ದೇವರನ್ನು ಬಲ್ಲೆನೆಂದು ಹೇಳಿಕೊಳ್ಳುತ್ತಾ ಅವರ ಆಜ್ಞೆಗಳನ್ನು ಕೈಗೊಳ್ಳದೆ ಇರುವವನು ಸುಳ್ಳುಗಾರ ಮತ್ತು ಸತ್ಯವೆಂಬುದೇ ಅವನಲ್ಲಿ ಇರುವುದಿಲ್ಲ.
5 : ಆದರೆ ದೇವರ ವಾಕ್ಯವನ್ನು ಕೈಗೊಂಡು ನಡೆಯುವವನಲ್ಲಿ ಪ್ರೀತಿ ನಿಜಕ್ಕೂ ಸಿದ್ಧಿಗೆ ಬಂದಿರುತ್ತದೆ.
6 : ತಾನು ದೇವರಲ್ಲಿ ನೆಲೆಸಿದ್ದೇನೆಂದು ಹೇಳುವವನು ಕ್ರಿಸ್ತಯೇಸು ಜೀವಿಸಿದಂತೆಯೇ ಜೀವಿಸಬೇಕು. ಇದರಿಂದಲೇ ನಾವು ದೇವರಲ್ಲಿ ನೆಲೆಗೊಂಡಿದ್ದೇವೆಂದು ತಿಳಿದುಕೊಳ್ಳುತ್ತೇವೆ.
7 : ಪ್ರಿಯರೇ, ನಾನು ನಿಮಗೆ ಬರೆಯುತ್ತಿರುವುದು ಹೊಸ ಆಜ್ಞೆಯೇನೂ ಅಲ್ಲ, ಮೊದಲಿನಿಂದಲೂ ನೀವು ಪಡೆದಿರುವ ಹಳೆಯ ಆಜ್ಞೆಯೇ. ಈ ಆಜ್ಞೆಯೇ ನೀವು ಈಗಾಗಲೇ ಕೇಳಿರುವ ಸಂದೇಶ.
8 : ಆದರೂ ನಾನೀಗ ನಿಮಗೆ ಬರೆಯುತ್ತಿರುವುದು ಒಂದು ವಿಧದಲ್ಲಿ ಹೊಸ ಆಜ್ಞೆಯೇ ಸರಿ. ಅದರ ನೈಜಗುಣವು ಕ್ರಿಸ್ತಯೇಸುವಿನಲ್ಲಿ ಬೆಳಗಿದಂತೆ, ನಿಮ್ಮ ಜೀವನದಲ್ಲೂ ಬೆಳಗುತ್ತದೆ. ಏಕೆಂದರೆ, ಕತ್ತಲು ಕಳೆದುಹೋಗುತ್ತಿದೆ; ನಿಜವಾದ ಬೆಳಕು ಈಗಾಗಲೇ ಪ್ರಕಾಶಿಸುತ್ತಿದೆ.
9 : “ನಾನು ಬೆಳಕಿನಲ್ಲಿದ್ದೇನೆ” ಎಂದು ಹೇಳಿಕೊಂಡು ತನ್ನ ಸಹೋದರನನ್ನು ದ್ವೇಷಿಸುವವನು ಇನ್ನೂ ಕತ್ತಲಲ್ಲೇ ಇದ್ದಾನೆ.
10 : ತನ್ನ ಸಹೋದರನನ್ನು ಪ್ರೀತಿಸುವವನಾದರೋ ಬೆಳಕಿನಲ್ಲಿ ನೆಲೆಗೊಂಡಿರುತ್ತಾನೆ. ಎಡವಿ ಪಾಪದಲ್ಲಿ ಬೀಳಿಸುವಂಥದ್ದೇನೂ ಅವನಲ್ಲಿ ಇರದು.
11 : ತನ್ನ ಸಹೋದರನನ್ನು ದ್ವೇಷಿಸುವವನು ಕತ್ತಲಲ್ಲಿ ಇದ್ದಾನೆ; ಕತ್ತಲಲ್ಲೇ ನಡೆಯುತ್ತಾನೆ. ಕತ್ತಲು ಅವನನ್ನು ಕುರುಡಾಗಿಸಿರುವುದರಿಂದ ಎತ್ತ ಹೋಗುತ್ತಿದ್ದಾನೆಂದು ಅವನಿಗೇ ತಿಳಿಯದು.
===================
ಕೀರ್ತನೆ
ಕೀರ್ತನೆ 96: 1-3, 5-6, ಶ್ಲೋಕ.11
ಶ್ಲೋಕ: ಹರ್ಷಿಸಲಿ ಆಕಾಶವು,
ಸಂತೋಷಿಸಲಿ ಭೂಲೋಕವು||
1 : ಹೊಸಗೀತೆಯನು ಹಾಡಿರಿ ಪ್ರಭುವಿಗೆ /
ವಿಶ್ವವೆಲ್ಲವು ಹಾಡಲಿ ಆತನಿಗೆ //
2 : ಪ್ರಭುವಿಗೆ ಹಾಡಿರಿ,
ಆತನ ನಾಮವನು ಕೊಂಡಾಡಿರಿ /
ಆತನ ಮುಕ್ತಿಮಾರ್ಗವನು
ಪ್ರತಿನಿತ್ಯವೂ ಸಾರಿರಿ //
3 : ಪ್ರಸಿದ್ಧಪಡಿಸಿರಿ ಆತನ
ಘನತೆಯನು ರಾಷ್ಟ್ರಗಳಿಗೆ /
ಆತನದ್ಭುತ ಕಾರ್ಯಗಳನು
ಸಕಲ ಜನಾಂಗಗಳಿಗೆ //
5 : ಶೂನ್ಯ ಪ್ರತಿಮೆಗಳು
ಅನ್ಯರಾಷ್ಟ್ರಗಳ ದೇವರುಗಳೆಲ್ಲ /
ಪ್ರಭುವಿನಿಂದಲೇ ಉಂಟಾಯಿತು
ಆಕಾಶ ಮಂಡಲವೆಲ್ಲ //
6 : ಇವೆ ಮಹಿಮೆ, ಮಹತ್ವ,
ಆತನ ಸನ್ನಿಧಿಯಲಿ /
ಶಕ್ತಿಸೌಂದರ್ಯ ಆತನ
ಗರ್ಭಗುಡಿಯಲಿ //
===================
ಶುಭಸಂದೇಶ
ಲೂಕ 2.22-35
22 : ಮೋಶೆಯ ನಿಯಮದ ಪ್ರಕಾರ ಸೂತಕ ದಿನಗಳು ಮುಗಿದು ಶುದ್ಧೀಕರಣ ದಿನ ಬಂದಾಗ, ತಂದೆತಾಯಿಗಳು ಆ ಮಗುವನ್ನು ಎತ್ತಿಕೊಂಡು ಜೆರುಸಲೇಮಿಗೆ ಹೋದರು.
23 : ಏಕೆಂದರೆ, ‘ಮೊದಲು ಜನಿಸಿದ ಪ್ರತಿಯೊಂದು ಗಂಡು ಮಗುವನ್ನು ಸರ್ವೇಶ್ವರನಿಗೆ ಸಮರ್ಪಿಸಬೇಕಾಗಿತ್ತು.
24 : ಅಲ್ಲದೆ, ಧರ್ಮಶಾಸ್ತ್ರದಲ್ಲೇ ಉಲ್ಲೇಖಿಸಿರುವಂತೆ ಒಂದು ಜೋಡಿ ಬೆಳವಹಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ, ಬಲಿಯನ್ನಾಗಿ ಅರ್ಪಿಸಬೇಕಾಗಿತ್ತು.
25 : ಆಗ ಜೆರುಸಲೇಮಿನಲ್ಲಿ ಸಿಮೆಯೋನನೆಂಬ ಒಬ್ಬನು ವಾಸವಾಗಿದ್ದನು. ಸತ್ಪುರುಷನೂ ದೈವಭಕ್ತನೂ ಆದ ಇವನು, ಇಸ್ರಯೇಲ್ ಜನತೆಯ ಉದ್ಧಾರಕ ಯಾವಾಗ ಬರುವನೋ ಎಂದು ನಿರೀಕ್ಷಿಸುತ್ತಾ ಇದ್ದನು. ಪವಿತ್ರಾತ್ಮ ಇವನಲ್ಲಿ ನೆಲೆಸಿದ್ದರು.
26 : ಸರ್ವೇಶ್ವರ ಕಳುಹಿಸಲಿರುವ ಅಭಿಷಿಕ್ತನಾದ ಲೋಕೋದ್ಧಾರಕನ ದರ್ಶನವಾಗುವವರೆಗೆ ತನಗೆ ಸಾವಿಲ್ಲವೆಂದು ಪವಿತ್ರಾತ್ಮರಿಂದಲೇ ಆಶ್ವಾಸನೆ ಪಡೆದಿದ್ದನು.
27 : ಆ ಪವಿತ್ರಾತ್ಮರಿಂದ ಪ್ರೇರಿತನಾಗಿ ಅವನು ಮಹಾದೇವಾಲಯಕ್ಕೆ ಬಂದನು. ಧರ್ಮಶಾಸ್ತ್ರದ ವಿಧಿಯನ್ನು ಪೂರೈಸಲು ಬಾಲಯೇಸುವನ್ನು ತಂದೆತಾಯಿಗಳು ದೇವಾಲಯಕ್ಕೆ ತಂದಾಗ,
28 : ಸಿಮೆಯೋನನು ಆ ಮಗುವನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ದೇವರನ್ನು ಹೀಗೆಂದು ಸ್ತುತಿಸಿದನು:
29 : “ನಿನ್ನ ಮಾತು ಸರ್ವೇಶ್ವರಾ, ನೆರವೇರಿತಿಂದು; ಇನ್ನು ತೆರಳಬಿಡು ಶಾಂತಿಯಿಂದ ನಿನ್ನ ದಾಸನಾದ ಎನ್ನನು.
30 : ನೀನಿತ್ತ ಉದ್ದಾರಕನನು ನಾ ಕಂಡೆ ಕಣ್ಣಾರೆ
31 : ಜನರೆಲ್ಲರ ಸಮ್ಮುಖದಲ್ಲಿ ನೀನೀತನನು ಪ್ರತ್ಯಕ್ಷ ಮಾಡಿರುವೆ.
32 : ಈತ ಅನ್ಯ ಜನರನ್ನು ಬೆಳಗಿಸುವ ಜ್ಯೋತಿ; ನಿನ್ನ ಜನ ಇಸ್ರಯೇಲರಿಗೆ ತರುವನು ಕೀರ್ತಿ.”
33 : ಮಗುವಿನ ವಿಷಯವಾಗಿ ಹೇಳಿದ ಈ ಮಾತುಗಳನ್ನು ಕೇಳಿ ತಂದೆ ತಾಯಿಗಳು ಆಶ್ಚರ್ಯಪಟ್ಟರು.
34 : ಅವರನ್ನು ಸಿಮೆಯೋನನು ಆಶೀರ್ವದಿಸಿದನು. ತಾಯಿ ಮರಿಯಳಿಗೆ, “ಇಗೋ, ಈ ಮಗು ಇಸ್ರಯೇಲರಲ್ಲಿ ಅನೇಕರ ಉನ್ನತಿಗೂ ಅನೇಕರ ಅವನತಿಗೂ ಕಾರಣನಾಗುವನು. ಅನೇಕರು ಪ್ರತಿಭಟಿಸುವ ದೈವಸಂಕೇತವಾಗುವನು. ಇದರಿಂದ ಅನೇಕರ ಹೃದಯದಾಳದ ಭಾವನೆಗಳು ಬಯಲಾಗುವುವು.
35 : (ನಿನ್ನ ವಿಷಯದಲ್ಲಿ ಹೇಳುವುದಾದರೆ, ದುಃಖವೆಂಬ ಅಲಗೊಂದು ನಿನ್ನ ಅಂತರಂಗವನ್ನು ಸೀಳುವುದು,)” ಎಂದು ಹೇಳಿದನು.
===================
ಚಿಂತನೆ
ಪ್ರತಿಯೊಂದು ಮಗುವಿನ ಜನನ ಒಂದು ಜಾತಿಯ, ಧರ್ಮದ, ಗೋತ್ರದ ಮತ್ತು ಕುಟುಂಬದ ಚೌಕಟ್ಟಿನಲ್ಲಿ ಆಗುತ್ತದೆ. ಆ ಮಗುವು ತನಗೆ ಗೊತ್ತಿಲ್ಲದ ಹಾಗೇ ತಾನು ಹುಟ್ಟಿ ಬೆಳೆದ ಚೌಕ್ಕಟ್ಟಿನ ಒಳಗೆ ಪ್ರವೇಶಿಸಿ ಆ ವ್ಯವಸ್ಥೆಯ ಸದಸ್ಯನಾಗಿ ಅದನ್ನು ಪಾಲಿಸಲು ಮುಂದಾಗುತ್ತದೆ. ಪುಟ್ಟಮಗು ತನ್ನ ಹುಟ್ಟಿನಿಂದ ಪ್ರಾರಂಭವಾಗಿ, ತನ್ನ ಸಾವಿನವರೆಗೂ ಅನೇಕ ಸಂಪ್ರದಾಯ ಹಾಗೂ ಆಚರಣೆಗಳನ್ನು ಮಾಡಬೇಕಾಗುತ್ತದೆ. ಅದರಲ್ಲೂ ಮಗುವಿನ ಜನನದ ಆಚರಣೆ ಬಹಳ ಮುಖ್ಯವಾದದ್ದು ಮತ್ತು ಮಹತ್ವಪೂರ್ಣವಾದದ್ದು. ಇದೇ ರೀತಿ ಯೆಹೂದ್ಯ ಧರ್ಮದಲ್ಲಿ ಒಂದು ಗಂಡು ಮಗುವಿನ ಜನನದಲ್ಲಿ ಅನೇಕ ಕಟ್ಟಳೆಗಳನ್ನು ಆಚರಿಸಲಾಗುತ್ತದೆ. ಯೇಸುಸ್ವಾಮಿಯ ತಂದೆತಾಯಿ ಈ ಸಂಪ್ರದಾಯ ಮತ್ತು ಧರ್ಮಶಾಸ್ತ್ರವನ್ನು ಚಾಚೂ ತಪ್ಪದೆ ಪಾಲಿಸಿದರು, ಈ ಧರ್ಮಶಾಸ್ತ್ರದಂತೆ ಎಂಟನೆಯ ದಿನ ಸುನ್ನತಿ ಮಾಡಿಸಬೇಕಿತ್ತು. ನಲ್ವತ್ತನೆಯ ದಿನ ಚೊಚ್ಚಲ ಮಗುವನ್ನು ಜೆರುಸಲೇಮಿನ ದೇವಾಲಯಕ್ಕೆ ತಂದು ಸಮರ್ಪಿಸಬೇಕಿತ್ತು. ಜೊತೆಗೆ ಒಂದು ಜೋಡಿ ಬೆಳವ ಹಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ ಬಲಿಯಾನ್ನಾಗಿ ಅರ್ಪಿಸಬೇಕಿತ್ತು. ಈ ಎಲ್ಲಾ ಆಚರಣೆಯನ್ನು ಚಾಚೂ ತಪ್ಪದೆ ಮಾಡುತ್ತಿರುವುದನ್ನು ಇಂದಿನ ಶುಭಸಂದೇಶದಲ್ಲಿ ನಾವು ಕಾಣಬಹುದಾಗಿದೆ. ಇದರ ಜೊತೆಗೆ ಸಿಮೋನ ಪ್ರವಾದಿಯ ಪ್ರವಾದನೆಯನ್ನು ಯೇಸುಸ್ವಾಮಿಯ ತಂದೆತಾಯಿಗೆ ಕೇಳಿಸಲಾಯಿತು. ಈ ಪ್ರವಾದನೆ ಬರೇ ಅವರಿಗೆ ಮಾತ್ರ ಸೀಮಿತವಾಗಿರದೇ, ಇಡೀ ವಿಶ್ವಕುಲಕ್ಕೆ ಸೇರಿದ್ದಾಗಿದೆ. ಆ ಪ್ರವಾದನೆಯಲ್ಲಿ ಒಂದು ಮಾತಿದೆ: ಈತ ಅನ್ಯ ಜನರನ್ನು ಬೆಳಗಿಸುವ ಜ್ಯೋತಿ. ತಂದೆ ತಾಯಿಗೆ ಈ ಮಾತು ಅರ್ಥವಾಗದೆ ಇರಬಹುದು. ಆದರೆ ಮುಂದೆ ಈತ ಜ್ಯೋತಿಯಾಗಿ ಪ್ರಕಾಶಿಸಿ ಇತರರಿಗೆ ಬೆಳಕನ್ನು ನೀಡುವಾಗ ಅದು ಅರ್ಥವಾಗಿರಬೇಕು. ಅದಕ್ಕೆ ಕ್ರಿಸ್ತ ’ನೀವು ಈ ಧರೆಗೆ ಬೆಳಕು’ ಎಂದು ಹೇಳಿದ್ದು (ಮಾತ್ತಾಯ ೫: ೧೩) ಅಂದರೆ ನಾವು ಕೂಡಾ ಕ್ರಿಸ್ತನಂತಾಗಬೇಕು, ಬರೀ ಬೆಳಕಾಗದೆ ಜ್ಯೋತಿ ಕೂಡ ಆಗಬೇಕು ಎಂಬುದು ಕ್ರಿಸ್ತನ ಕರೆ.
ಆತ್ಮಾವಲೋಕನ:
• ನಾವು ಬರೀ ಆಚರಣೆಯಲ್ಲಿ ಮುಳುಗಿದ್ದೇವೆಯೇ ಅಥವಾ ಅದರ ಅರ್ಥ ತಿಳಿದಿದ್ದೇವೆಯೇ?
• ನಾವು ಪ್ರವಾದಿ ಸಿಮೋನನಂತೆ ಯೇಸುವಿನ ನಾಮವನ್ನು ಪ್ರಕಟ ಪಡಿಸಿದ್ದೇವೆಯೇ?
• ನಾವು ಇತರರಿಗೆ ಬೆಳಕಾಗಿದ್ದೇವೆಯೇ?
===================
No comments:
Post a Comment