Monday, 23 November 2020

ಡಿಸೆಂಬರ್ 4, 2020 ಶುಕ್ರವಾರ

ಡಿಸೆಂಬರ್ 4, 2020 ಶುಕ್ರವಾರ [ನೇರಳೆ]
ಸಂತ ಜಾನ್ ಡಮಸಿನ್, ಯಾಜಕ ಮತ್ತು ಧರ್ಮಸಭೆಯ ಪಂಡಿತ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಯೆಶಾಯ 29.17-24 
ಕೀರ್ತನೆ 27:1, 4, 13-14 
ನನಗೆ ಬೆಳಕು, ನನಗೆ ರಕ್ಷೆ ಪ್ರಭುವೇ
ಶುಭಸಂದೇಶ: ಮತ್ತಾಯ 9.27-31
==================
ಮೊದಲನೇ ವಾಚನ
ಯೆಶಾಯ 29 :17-24 
17 : ಕೊಂಚ ಕಾಲದೊಳಗೆ ಲೆಬನೋನ್ ಅರಣ್ಯವು ತೋಟವಾಗುವುದು. ಈಗಿನ ತೋಟವಾದರೋ ಅರಣ್ಯವಾಗಿ ಕಾಣಿಸುವುದು.
18 : ಆ ದಿನದಂದು ಕಿವುಡರು ಗ್ರಂಥ ವಾಕ್ಯಗಳನ್ನು ಓದುವುದನ್ನು ಕೇಳುವರು. ಕುರುಡರಿಗೆ ಮಬ್ಬಿನಲ್ಲೂ ಕತ್ತಲಲ್ಲೂ ಕಣ್ಣು ಕಾಣಿಸುವುದು.
19 : ದೀನದಲಿತರು ಸರ್ವೇಶ್ವರನಲ್ಲಿ ಅತಿಯಾಗಿ ಆನಂದಿಸುವರು. ಬಡಬಗ್ಗರು ಇಸ್ರಯೇಲಿನ ಪರಮ ಪಾವನ ಸ್ವಾಮಿಯಲ್ಲಿ ಉಲ್ಲಾಸಿಸುವರು.
20 : ಏಕೆಂದರೆ ಭಯೋತ್ಪಾದಕರು ನಿಶ್ಯೇಷರಾಗುವರು, ಧರ್ಮನಿಂದಕರು ನಿರ್ನಾಮವಾಗುವರು.
21 : ಸುಳ್ಳು ಸಾಕ್ಷಿ ಹೇಳಿ ತಪ್ಪುಹೊರಿಸುವವರು, ನ್ಯಾಯ ಸ್ಥಾನದಲ್ಲಿ ದೋಷವನ್ನು ಖಂಡಿಸುವವರಿಗೆ ಉರುಲೊಡ್ಡುವವರು, ನೀತಿವಂತನಿಗೆ ನ್ಯಾಯ ತಪ್ಪಿಸುವವರು - ಹೀಗೆ ಅಧರ್ಮದಲ್ಲಿ ನಿರತರಾಗಿರುವ ಇವರೆಲ್ಲರು ನಿರ್ಮೂಲರಾಗುವರು.
22 : ಹೀಗಿರಲು ಅಬ್ರಹಾಮನನ್ನು ಉದ್ಧರಿಸಿದ ಸರ್ವೇಶ್ವರಸ್ವಾಮಿ ಯಕೋಬನ ಮನೆತನದ ವಿಷಯವಾಗಿ ಹೀಗೆನ್ನುತ್ತಾರೆ: “ಯಕೋಬ ವಂಶದವರೇ, ಇನ್ನು ಮೇಲೆ ನೀವು ನಾಚಿಕೆಗೀಡಾಗುವುದಿಲ್ಲ, ನಿಮ್ಮ ಮುಖ ಇನ್ನು ಬಾಡುವುದಿಲ್ಲ.
23 : ನಿಮ್ಮ ವಂಶಜರು ತಮ್ಮ ಮಧ್ಯದಲ್ಲಿ ನಾನು ಎಸಗುವ ಕಾರ್ಯಗಳನ್ನು ನೋಡಿ, ನನ್ನ ನಾಮವೇ ಪರಮಪೂಜಿತವೆಂದು ಸ್ಥಿರಪಡಿಸುವರು. ಹೌದು, ಯಕೋಬ ವಂಶದ ಪರಮಪಾವನ ಸ್ವಾಮಿಯಾದ ನನ್ನನ್ನು ಪ್ರತಿಷ್ಠಾಪಿಸುವರು. ಇಸ್ರಯೇಲರ ದೇವರಾದ ನನ್ನಲ್ಲಿ ಭಯಭಕ್ತಿಯಿಂದಿರುವರು.
24 : ಚಂಚಲಚಿತ್ತರು ಬುದ್ಧಿವಂತರಾಗುವರು. ಗೊಣಗುಟ್ಟುವವರು ಧ್ಯಾನ ಮಗ್ನರಾಗುವರು.
===================
ಕೀರ್ತನೆ 
ಕೀರ್ತನೆ 27:1, 4, 13-14 
ಶ್ಲೋಕ: ನನಗೆ ಬೆಳಕು, ನನಗೆ ರಕ್ಷೆ ಪ್ರಭುವೇ||

1 : ನನಗೆ ಬೆಳಕು, ನನಗೆ ರಕ್ಷೆ, ಪ್ರಭುವೆ / 
ನಾನಾರಿಗೂ ಅಳುಕೆನು // 
ನನ್ನ ಬಾಳಿಗಾಧಾರ ಪ್ರಭುವೆ / 
ನಾನಾರಿಗೂ ಅಂಜೆನು //

4 : ನಾನೊಂದನು ಕೋರಿದೆ ಪ್ರಭುವಿನಿಂದ /
ನಾನದನ್ನೇ ನಿರೀಕ್ಷಿಸಿದೆ ಆತನಿಂದ : /
ವಾಸಿಸಬೇಕು ಜೀವಮಾನವೆಲ್ಲ 
ನಾನಾತನ ಮಂದಿರದಲಿ /
ನಾ ತಲ್ಲೀನನಾಗಬೇಕು 
ಅಲ್ಲಾತನ- ಪ್ರಸನ್ನತೆಯಲಿ //

13 : ಪ್ರಭುವಿನೊಳಿತನು ನಾ ಕಾಣುವೆ 
ಜೀವಲೋಕದೊಳು / 
ನಾನಿಟ್ಟಿರುವೆ ನಂಬಿಕೆ 
ನಿರೀಕ್ಷೆ ಅದರೊಳು //

14 : ಪ್ರಭುವನು ಎದುರುನೋಡುತ್ತಿರು ಮನವೇ / 
ಧೈರ್ಯದಿಂದ ನಿರೀಕ್ಷಿಸುತ್ತಿರು ಎದೆಗುಂದದೆ //
===================
ಶುಭಸಂದೇಶ
ಮತ್ತಾಯ 9:27-31

27 : ಯೇಸುಸ್ವಾಮಿ ಅಲ್ಲಿಂದ ಹೋಗುತ್ತಿರುವಾಗ ಇಬ್ಬರು ಕುರುಡರು, ""ಸ್ವಾವಿೂ, ದಾವೀದ ಕುಲಪುತ್ರರೇ, ನಮಗೆ ದಯೆತೋರಿ,"" ಎಂದು ದನಿಯೆತ್ತಿ ಕೂಗಿಕೊಳ್ಳುತ್ತಾ ಅವರ ಹಿಂದೆ ಹೋದರು.
28 : ಯೇಸು ಮನೆ ಸೇರಿದಾಗ ಆ ಕುರುಡರು ಸಮೀಪಕ್ಕೆ ಬಂದರು. ""ನಾನು ನಿಮ್ಮನ್ನು ಗುಣಪಡಿಸಬಲ್ಲೆನೆಂದು ನೀವು ವಿಶ್ವಾಸವಿಡುತ್ತೀರೋ?"" ಎಂದು ಯೇಸು ಪ್ರಶ್ನಿಸಿದರು. ""ಹೌದು ಸ್ವಾವಿೂ, ಹೌದು,"" ಎಂದು ಅವರು ಉತ್ತರವಿತ್ತರು.
29 : ಆಗ ಯೇಸು ಅವರ ಕಣ್ಣುಗಳನ್ನು ಮುಟ್ಟಿ, ""ನೀವು ವಿಶ್ವಾಸವಿಟ್ಟ ಪ್ರಕಾರವೇ ನಿಮಗೆ ಗುಣವಾಗಲಿ,"" ಎಂದರು.
30 : ಅವರಿಗೆ ದೃಷ್ಟಿ ಬಂದಿತು. ""ಈ ವಿಷಯ ಯಾರಿಗೂ ತಿಳಿಯಬಾರದು, ಎಚ್ಚರಿಕೆ!"" ಎಂದು ಯೇಸು ಅವರಿಗೆ ಕಟ್ಟಪ್ಪಣೆ ಮಾಡಿದರು.
31 : ಆದರೂ ಅವರು ಹೋಗಿ ಆ ಪ್ರಾಂತ್ಯದಲ್ಲೆಲ್ಲಾ ಸ್ವಾಮಿಯ ಕೀರ್ತಿಯನ್ನು ಹರಡಿದರು. 
===================
ಚಿಂತನೆ

ಬೆಳಕು ಅಥವಾ ದೃಷ್ಟಿ ಇಲ್ಲದವನಿಗೆ ಬದುಕೇ ಇಲ್ಲ, ಬದುಕಿಗೆ ಬೆಳಕೇ ಮೂಲಾಧಾರವಾಗಿದೆ. ಮನುಷ್ಯನಿಗೆ ಜಗತ್ತು ದೇವರು ಕೊಟ್ಟ ಬಹುದೊಡ್ಡ ವರದಾನವೆಂದರೆ ಬೆಳಕು ಎಂಬುರಲ್ಲಿ ಸಂದೇಹವಿಲ್ಲ. ಬೆಳಕು ಕತ್ತಲೆಯನ್ನು ನಿವಾರಿಸುತ್ತದೆ. ಯೇಸು ಜಗತ್ತಿಗೆ ಜ್ಯೋತಿಯಾಗಿ ಬಂದರು. ಅಂಧಕಾರದಲ್ಲಿದ್ದವರನ್ನು ಬೆಳಕಿನೆಡೆಗೆ ಕರೆ ತರುವ ಪ್ರಯತ್ನ ಮಾಡಿದರು. ಇಂದು ಮನುಷ್ಯನಿಗೆ ಪ್ರಜ್ಞೆಯ ಮತ್ತು ಬೆಳಕಿನ ಅವಶ್ಯಕತೆ ಇದೆ. ಕತ್ತಲು ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲ ಬೆಳಕನ್ನು ಕೊಂಡೊಯ್ಯುವ ಜನರ ಅವಶ್ಯಕತೆ ಇದೆ. “ಸ್ವಾಮಿ, ದಾವೀದ ಕುಲಪುತ್ರರೇ, ನಮಗೆ ದಯತೋರಿರಿ” ಎಂದು ಕುರುಡರು ಕೂಗಿ ಕೊಂಡಂತೆ ‘ಬಾ ಕರುಣಾಳು ಬೆಳಕೇ, ಮುಸುಕಿದ ಮಬ್ಬಿನಲ್ಲಿ ಕೈ ಹಿಡಿದು, ನಡೆಸೆನ್ನನು’ ಎಂದು ಕ್ರಿಸ್ತನನ್ನು ಕೂಗ ಬೇಕಿದೆ. 
===================

No comments:

Post a Comment