ಡಿಸೆಂಬರ್ 3, 2020 ಗುರುವಾರ [ಬಿಳಿ]
ಸಂತ ಫ್ರಾನ್ಸಿಸ್ ಕ್ಸೇವಿಯರ್, ಭಾರತದ ಪಾಲಕರು (ಸ್ಮರಣೆ)
ಯೆಶಾಯ 26.1-6
ಕೀರ್ತನೆ 118:1, 8-9, 19-21, 25-27 ಶ್ಲೋಕ.26
ಪ್ರಭುವಿನ ನಾಮದಲ್ಲಿ ಬರುವವನಿಗೆ ಜಯಮಂಗಳ!
ಶುಭಸಂದೇಶ: ಮತ್ತಾಯ 7.21, 24-27
==================
ಮೊದಲನೇ ವಾಚನ
ಯೆಶಾಯ 26.1-6
1 : ಕಾಲ ಬರುವುದು; ಆಗ ಹಾಡುವರು ಜುದೇಯ ನಾಡಿನಲ್ಲಿ ಈ ಗೀತೆಯನು: ನಮಗಿದೆ ಸುಭದ್ರ ನಗರ, ದೇವರೇ ಅದರ ದುರ್ಗ, ಪ್ರಾಕಾರ.
2 : ತೆರೆಯಿರಿ ನಗರ ದ್ವಾರಗಳನು, ಪ್ರವೇಶಿಸಲಿ ವಿಶ್ವಾಸವುಳ್ಳ ಸಜ್ಜನರು.
3 : ನಿನ್ನ ನೆಚ್ಚಿದವರಿಗೆ, ಸ್ಥಿರ ಚಿತ್ತವುಳ್ಳವರಿಗೆ, ಚಿರಶಾಂತಿಯ ನೀ ನೀಡುವೆ.
4 : ಶಾಶ್ವತ ಆಶ್ರಯಗಿರಿ, ಸ್ವಾಮಿ ಸರ್ವೇಶ್ವರನೇ, ಸತತ ಭರವಸೆಯಿಡಿರಿ ಆತನಲ್ಲೇ.
5 : ತಗ್ಗಿಸುವನಾತ ಎತ್ತರದಲಿ ವಾಸಿಸುವವರನು, ಕೆಡವಿ, ನೆಲಸಮಮಾಡಿ, ಧೂಳಾಗಿಸುವನು ಅವರು ವಾಸಮಾಡುವಾ ಉನ್ನತ ನಗರವನು.
6 : ಈಡಾಗುವುದದು ಕಾಲತುಳಿತಕೆ ದೀನದಲಿತರ ಪಾದತುಳಿತಕೆ.
===================
ಕೀರ್ತನೆ
ಕೀರ್ತನೆ 118:1, 8-9, 19-21, 25-27 ಶ್ಲೋಕ.26
ಶ್ಲೋಕ: ಪ್ರಭುವಿನ ನಾಮದಲ್ಲಿ
ಬರುವವನಿಗೆ ಜಯಮಂಗಳ||
1 : ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ /
ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ //
8 : ಮನುಜರಲಿ ಭರವಸೆಯಿಡುವುದಕ್ಕಿಂತ /
ಪ್ರಭುವನು ಆಶ್ರಯಿಸಿಕೊಳ್ಳುವುದು ಹಿತ //
9 : ರಾಜರಲಿ ಭರವಸೆಯಿಡುವುದಕ್ಕಿಂತ /
ಪ್ರಭುವನು ಆಶ್ರಯಿಸಿಕೊಳ್ಳುವುದು ಹಿತ //
19 : ತೆರೆಯಿರಿ ಎನಗೆ ನೀತಿದ್ವಾರಗಳನು /
ಒಳನುಗ್ಗಿ ಹೊಗಳುವೆನು ಪ್ರಭುವನು //
20 : ಇದುವೇ ದ್ವಾರ ಪ್ರಭುವಿನ ಮಂದಿರಕೆ /
ಇದುವೇ ಪ್ರವೇಶಮಾರ್ಗ ಸಜ್ಜನರಿಗೆ //
21 : ಸದುತ್ತರ ಪಾಲಿಸಿದ ಪ್ರಭೂ, ನಿನಗೆ ವಂದನೆ /
ಉದ್ಧಾರ ಮಾಡಿದೆ, ನಿನಗೆ ಕೃತಜ್ಞತಾವಂದನೆ //
25 : ರಕ್ಷಿಸು ಪ್ರಭೂ, ರಕ್ಷಿಸು ದಯವಿಟ್ಟು /
ಸುಕ್ಷೇಮ ನೀಡು ಪ್ರಭು ಕರುಣೆಯಿಟ್ಟು //
26 : ಪ್ರಭುವಿನ ನಾಮದಲಿ
ಬರುವವನಿಗೆ ಜಯಮಂಗಳ /
ಪ್ರಭುವಿನ ಮಂದಿರದಲ್ಲಿಹ
ನಮ್ಮಿಂದ ಶುಭಮಂಗಳ //
27 : ಪ್ರಭುವೆ ದೇವನು, ನಮ್ಮ ಮೇಲೆ
ಜ್ಯೋತಿಯನು ಬೆಳಗಿದವನು /
ಪ್ರದಕ್ಷಿಣೆ ಮಾಡಿರಿ, ಬಲಿಪೀಠದ ಸುತ್ತ,
ಹಿಡಿದು ರೆಂಬೆಗಳನು //
===================
ಶುಭಸಂದೇಶ
ಮತ್ತಾಯ 7.21, 24-27
21 : ""ನನ್ನನ್ನು ""ಸ್ವಾವಿೂ, ಸ್ವಾವಿೂ,"" ಎನ್ನುವ ಪ್ರತಿಯೊಬ್ಬನೂ ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸನು. ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತಾನುಸಾರ ನಡೆಯುವವನು ಮಾತ್ರ ಅದನ್ನು ಪ್ರವೇಶಿಸುವನು.
24 : ""ನನ್ನ ಈ ಮಾತನ್ನು ಕೇಳಿ ಅದರಂತೆ ನಡೆಯುವ ಪ್ರತಿಯೊಬ್ಬನೂ ಬಂಡೆಯ ಮೇಲೆ ಮನೆ ಕಟ್ಟಿಕೊಂಡ ಬುದ್ದಿವಂತನನ್ನು ಹೋಲುತ್ತಾನೆ.
25 : ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು. ಆದರೂ ಅದು ಬೀಳಲಿಲ್ಲ. ಕಾರಣ ಅದರ ಅಡಿಗಟ್ಟು ಬಂಡೆಯ ಮೇಲಿತ್ತು.
26 : ನನ್ನ ಈ ಮಾತುಗಳನ್ನು ಕೇಳಿಯೂ ಅದರಂತೆ ನಡೆಯದ ಪ್ರತಿಯೊಬ್ಬನೂ ಮರಳಿನ ಮೇಲೆ ಮನೆ ಕಟ್ಟಿಕೊಂಡ ಬುದ್ದಿಹೀನನನ್ನು ಹೋಲುತ್ತಾನೆ.
27 : ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು; ಅದು ಕುಸಿದು ಬಿತ್ತು. ಅದಕ್ಕಾದ ಪತನವೋ ಅಗಾಧ!""
===================
ಚಿಂತನೆ
ಸ್ಪೇನ್ ದೇಶದ ದಾನ್ ಜುವಾನ್ ಮತ್ತು ಮರಿಯಾ ದಂಪತಿಗಳಿಗೆ ಎಪ್ರಿಲ್ 7, 1505 ರಲ್ಲಿ ಹುಟ್ಟಿದ ಫ್ರಾನ್ಸಿಸ್ ವಿದ್ಯಾಭ್ಯಾಸಕ್ಕಾಗಿ ಪ್ಯಾರಿಸ್ಗೆ ಹೊರಡುತ್ತಾರೆ. ತಂದೆ ರಾಜನ ಆಸ್ಥಾನದಲ್ಲಿ ಪ್ರಮುಖ ಹುದ್ದೆಯಲ್ಲಿದ್ದು ಮಗ ತನಗಿಂತ ಎತ್ತರ ಬೆಳೆಯಬೇಕೆಂದು ಆಶಿಸಿದ್ದ. ಫ್ರ್ರಾನ್ಸಿಸ್ ಪ್ರತಿಭಾವಂತ, ತತ್ವ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡ. ಸಂತ ಇಗ್ನೇಷಿಯಸ್ ಲೊಯೊಲಾರವರಿಂದ ಪ್ರೇರಣೆ ಪಡೆದು ಆಗಸ್ಟ್ 15, 1534 ರಲ್ಲಿ ಜನ್ಮ ತಾಳುತ್ತಿದ್ದ ಜೆಸುವಿಟ್ ಸಭೆಯ ಸದಸ್ಯನಾಗಿ ಜೂನ್ 24, 1537 ರಲ್ಲಿ ಧರ್ಮಗುರುವಾದರು. ಮೇ 6, 1542 ರಂದು ಗೋವಾಕ್ಕೆ ಬಂದ ಫ್ರಾನ್ಸೀಸ್, ಮುಂದಿನ ಹತ್ತು ವರ್ಷಗಳಲ್ಲಿ ಸ್ಥಳೀಯರ ಭಾಷೆ ಕಲಿತು ಬೋಧನೆ ಮಾಡಿದರು. ಗೋವಾ, ಕೇರಳ, ತಮಿಳುನಾಡಿನ ಸಮುದ್ರತೀರದ ಪ್ರವೇಶಗಳು, ಶ್ರೀಲಂಕಾ, ಮಲೇಷಿಯಾ ಹಾಗೂ ಜಪಾನ್ ರಾಷ್ಡ್ರಗಳಲ್ಲಿ ಧರ್ಮಪ್ರಚಾರ ಮಾಡಿದರು. ಪಾಶ್ಚಾತ್ಯ ಸಂಸ್ಕ್ರತಿ ಮತ್ತು ಜೀವನ ಶೈಲಿ ಬದಿಗೊತ್ತಿ ಸ್ಥಳೀಯರ ಭಾಷೆ, ಸಂಸ್ಕøತಿಗೆ ಆದ್ಯತೆ ನೀಡಿದರು. ತಮ್ಮ ಬೋಧನೆ, ವ್ಯಕ್ತಿತ್ವ, ಸರಳ ಜೀವನ ಶೈಲಿಯಿಂದ ಜನರನ್ನು ಕ್ರಿಸ್ತಡೆಗೆ ಕರೆತಂದರು.
===================
No comments:
Post a Comment