Thursday, 26 November 2020

ಅಕ್ಟೋಬರ್ 4, 2020 ಭಾನುವಾರ

 ಅಕ್ಟೋಬರ್ 4, 2020 ಭಾನುವಾರ                        [ಹಸಿರು]
ಸಾಧಾರಣ ಕಾಲದ 27ನೇ ಭಾನುವಾರ
ಮೊದಲ ವಾಚನ: ಯೆಶಾಯ 5.1-7
ಕೀರ್ತನೆ 80: 8, 11, 12-13, 14-15, 18-19. ಶ್ಲೋಕ.ಯೆಶಾಯ 5:7
ಅನುಗ್ರಹಿಸಿದನು ಪ್ರಭು ಸ್ವರ್ಗದ ದವಸ ಧಾನ್ಯವನು
ಎರಡನೇ ವಾಚನ: ಫಿಲಿಪ್ಪಿಯರಿಗೆ 4.6-9
ಶುಭಸಂದೇಶ: ಮತ್ತಾಯ 21.33-43
----------------------
ಆಸಿಸಿಯ ಸಂತ ಫ್ರಾನ್ಸಿಸ್
==================
ಮೊದಲನೇ ವಾಚನ
ಯೆಶಾಯ 5.1-7
1 : ಹಾಡುವೆ ನಾನೆನ್ನ ಪ್ರಿಯನಿಗೆ ಗೀತೆಯೊಂದನು ಅವನ ದ್ರಾಕ್ಷಾವನದ ಕುರಿತು ಪ್ರೇಮಗೀತೆಯನು: ಪ್ರಿಯತಮನಿಗೆ ಇತ್ತೊಂದು ದ್ರಾಕ್ಷಿಯ ತೋಟ ಫಲವತ್ತಾಗಿಹ ಗುಡ್ಡದ ಮೇಲಿನ ತೋಟ. ಆರಿಸಿ ಎಸೆದನು ಕಲ್ಲುಮುಳ್ಳುಗಳನು ಅಗೆದು ಹದಮಾಡಿದನಾತ ಗುಡ್ಡವನು.
2 : ನೆಟ್ಟನು ಒಳ್ಳೊಳ್ಳೆ ದ್ರಾಕ್ಷಿಯ ಸಸಿಗಳನು ಕಟ್ಟಿದನು ಕಾವಲಿಗಾಗಿ ಅಟ್ಟಣೆಯೊಂದನು ಕಟ್ಟಿದನು ಅದರೊಳಗೆ ಆಲೆಯೊಂದನು. ನಿರೀಕ್ಷಿಸುತ್ತಿರೆ ಆತ ಸಿಹಿದ್ರಾಕ್ಷಿ ಹಣ್ಣನು, ಬಿಟ್ಟಿತದೋ ಅವನಿಗೆ ಹುಳಿ ಹಣ್ಣನು !
3 : ಆದುದರಿಂದ ನನ್ನ ಪ್ರಿಯನು ಹೀಗೆಂದು ಕೇಳುತ್ತಾನೆ: “ಜೆರುಸಲೇಮಿನ ನಿವಾಸಿಗಳೇ, ಜುದೇಯದ ಜನರೇ, ನನಗೂ ನನ್ನ ತೋಟಕ್ಕೂ ಮಧ್ಯೆ ಇರುವ ವ್ಯಾಜ್ಯವನ್ನು ತೀರಿಸಿರಿ.
4 : ನನ್ನ ತೋಟಕ್ಕಾಗಿ ನಾನು ಮಾಡಿದ್ದಕ್ಕಿಂತಲೂ ಇನ್ನೇನು ಮಾಡಬೇಕಾಗಿತ್ತು? ಅದು ಸಿಹಿದ್ರಾಕ್ಷಿಯನ್ನು ಕೊಡುವುದೆಂದು ನಾನು ನಿರೀಕ್ಷಿಸುತ್ತಿರಲು, ಅದು ಹುಳಿ ಹಣ್ಣನ್ನು ಕೊಟ್ಟಿತೇಕೆ? ನನ್ನ ಈ ತೋಟಕ್ಕೆ ಏನು ಮಾಡುವೆನೆಂದು ಹೇಳುತ್ತೇನೆ, ಕೇಳಿ:
5 : ಕಿತ್ತೆಸೆಯುವೆನು ಅದರ ಬೇಲಿಯನು; ತುತ್ತಾಗುವುದದು ದನಕರುಗಳಿಗೆ. ಕೆಡವಿ ಹಾಕುವೆನು ಅದರ ಗೋಡೆಯನು; ಈಡಾಗುವುದದು ಪರರ ತುಳಿದಾಟಕ್ಕೆ.
6 : ಬಂಜರು ಭೂಮಿಯಾಗಿಸುವೆನು ಅದನ್ನು; ಕುಡಿಕತ್ತರಿಸುವರಾರೂ ಇರರು ಅದಕ್ಕೆ. ಮುಳ್ಳುಕಳೆ ಬೆಳೆಯುವುದು ಅದರೊಳಗೆ. ನೀಡುವೆನು ಆಣತಿಯೊಂದನು ಮೋಡಗಳಿಗೆ; ಸುರಿಸವು ತುಂತುರು ಮಳೆಯನ್ನೂ ಅದಕ್ಕೆ.
7 : ಇಸ್ರಯೇಲ್ ಮನೆತನವೇ ಸೇನಾಧೀಶ್ವರ ಸರ್ವೇಶ್ವರ ನೆಟ್ಟ ಆ ದ್ರಾಕ್ಷಿಯ ತೋಟ. ಜುದೇಯದ ಜನರೇ ಆತ ನಾಟಿಮಾಡಿದಾ ಸುಂದರ ಸಸಿತೋಟ. ನ್ಯಾಯನೀತಿಯನು ನಿರೀಕ್ಷಿಸಿದನಾತ ಆದರೆ ಸಿಕ್ಕಿತವನಿಗೆ ರಕ್ತಪಾತ ! ಸತ್ಸಂಬಂಧವನು ಎದುರುನೋಡಿದನಾತ ಇಗೋ, ದಕ್ಕಿತವನಿಗೆ ದುಃಖಿತರ ಆರ್ತನಾದ !
===================
ಕೀರ್ತನೆ 
ಕೀರ್ತನೆ 80: 9, 11, 12-13, 14-15, 18-19. ಶ್ಲೋಕ.ಯೆಶಾಯ 5:7
ಅನುಗ್ರಹಿಸಿದನು ಪ್ರಭು ಸ್ವರ್ಗದ ದವಸ ಧಾನ್ಯವನು
9 : ಹದಮಾಡಿದೆ ಅದಕೆ ಬೇಕಾದ 
ನೆಲವನ್ನೆಲ್ಲಾ / 
ಬೇರೂರಿ ಹಬ್ಬಿಕೊಂಡಿತದು 
ನಾಡಿನಲ್ಲೆಲ್ಲಾ //
11 : ಹರಡಿವೆ ಅದರ ಕೊಂಬೆಗಳು 
ಸಮುದ್ರದವರೆಗೆ / 
ಬೆಳೆದಿವೆ ಆ ರೆಂಬೆಗಳು 
ಮಹಾನದಿಯ ವರೆಗೆ //
12 : ಕಿತ್ತುಹಾಕಿದೆಯೇಕೆ ಅದರ 
ಬೇಲಿಯನು?/ 
ತರಿದುಬಿಡುವವರಲ್ಲವೆ 
ದಾರಿಗರು ಅದನು?//
13 : ನಾಶಮಾಡುವುವು ಅದನು 
ಕಾಡುಹಂದಿಗಳು / 
ತಿಂದುಹಾಕುವುವು ಅದನು 
ಅರಣ್ಯ ಮೃಗಗಳು //
14 : ಸರ್ವಶಕ್ತನಾದ ದೇವರೇ, 
ಮರಳಿ ಮುಖತೋರಿಸು / 
ಪರದಿಂದೀಕ್ಷಿಸಿ ಆ ದ್ರಾಕ್ಷಾಲತೆಯನು 
ಪರಾಮರಿಸು //
15 : ಕಾಪಾಡು ನಿನ್ನ ಬಲಗೈ ನೆಟ್ಟು 
ಸಾಕಿದ ಸಸಿಯನು / 
ಕಾದಿರಿಸು ನಿನಗೆಂದೇ ನೀ ಬೆಳೆಸಿದಾ 
ಬಳ್ಳಿಯನು //
18 : ಆಗ ಬಿಟ್ಟಗಲುವುದಿಲ್ಲ 
ನಾವೆಂದೆಂದಿಗು ನಿನ್ನನು / 
ಪುನರ್ಜೀವಗೊಳಿಸು, ಮಾಳ್ಪೆವು ನಿನ್ನ
 ನಾಮಸ್ಮರಣೆಯನು //
19 : ಸರ್ವಶಕ್ತನಾದ ದೇವನೆ,
 ಉದ್ಧರಿಸು ನಮ್ಮನು / 
ಬೆಳಗಲಿ ನಿನ್ನ ಮುಖಕಾಂತಿ, 
ಪಡೆವೆವು ರಕ್ಷಣೆಯನು //
===================
ಎರಡನೇ ವಾಚನ 
ಫಿಲಿಪ್ಪಿಯರಿಗೆ 4.6-9
6 : ಯಾವ ವಿಷಯದಲ್ಲೂ ಚಿಂತಿಸದೆ, ನಿಮ್ಮ ಅಗತ್ಯಗಳಿಗಾಗಿ ದೇವರಲ್ಲಿ ಪ್ರಾರ್ಥಿಸಿರಿ. ಪ್ರಾರ್ಥಿಸುವಾಗಲೆಲ್ಲಾ ನಿಮ್ಮಲ್ಲಿ ಕೃತಜ್ಞತಾ ಭಾವ ಇರಲಿ.
7 : ಆಗ ಮನುಷ್ಯಗ್ರಹಿಕೆಗೂ ವಿೂರಿದ ದೈವಶಾಂತಿಯು ನಿಮ್ಮ ಹೃನ್ಮನಗಳನ್ನು ಕ್ರಿಸ್ತೇಸುವಿನ ಅನ್ಯೋನ್ಯತೆಯಲ್ಲಿ ಸುರಕ್ಷಿತವಾಗಿ ಕಾಪಾಡುವುದು.
8 : ಕಡೆಯದಾಗಿ ಸಹೋದರರೇ, ಯಾವುದು ಸತ್ಯವು-ಮಾನ್ಯವು, ನ್ಯಾಯವು-ಶುದ್ಧವು, ಪ್ರೀತಿಕರವು-ಮನೋಹರವು ಆಗಿದೆಯೋ ಯಾವುದು ಸದ್ಗುಣವು-ಸ್ತುತ್ಯಾರ್ಹವು ಆಗಿದೆಯೋ ಅಂಥವುಗಳಲ್ಲಿ ಮಗ್ನರಾಗಿರಿ.
9 : ನೀವು ನನ್ನಿಂದ ಕಲಿತವು ಹಾಗೂ ಅರಿತವುಗಳನ್ನು, ಕೇಳಿದವು ಹಾಗೂ ಕಂಡವುಗಳನ್ನು ನಿಮ್ಮ ಜೀವಿತದಲ್ಲಿ ಕಾರ್ಯರೂಪಕ್ಕೆ ತನ್ನಿರಿ. ಆಗ ಶಾಂತಿದಾಯಕ ದೇವರು ನಿಮ್ಮ ಸಂಗಡ ಇರುವರು.
==========
ಶುಭಸಂದೇಶ
ಮತ್ತಾಯ 21.33-43
33 : “ಇನ್ನೊಂದು ಸಾಮತಿಗೆ ಕಿವಿಗೊಡಿ: ಒಬ್ಬ ಯಜಮಾನ ಒಂದು ದ್ರಾಕ್ಷಿತೋಟ ಮಾಡಿಸಿದ. ಅದರ ಸುತ್ತ ಬೇಲಿಯನ್ನು ಹಾಕಿಸಿದ. ದ್ರಾಕ್ಷಾರಸವನ್ನು ತೆಗೆಯಲು ಅಲೆಯನ್ನು ಹೂಡಿಸಿ, ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದ. ಅನಂತರ ಅದನ್ನು ಗೇಣಿದಾರರಿಗೆ ವಹಿಸಿ ಹೊರನಾಡಿಗೆ ಹೊರಟುಹೋದ.
34 : ಫಲಕೊಡುವ ಕಾಲ ಹತ್ತಿರವಾದಾಗ, ತನಗೆ ಬರಬೇಕಾದ ಪಾಲನ್ನು ತರುವುದಕ್ಕಾಗಿ ಆಳುಗಳನ್ನು ಗೇಣಿದಾರರ ಬಳಿಗೆ ಕಳುಹಿಸಿದ.
35 : ಇವರು ಆ ಆಳುಗಳ ಮೇಲೆ ಬಿದ್ದು ಒಬ್ಬನನ್ನು ಬಡಿದರು, ಇನ್ನೊಬ್ಬನನ್ನು ಕಡಿದರು, ಮತ್ತೊಬ್ಬನ ಮೇಲೆ ಕಲ್ಲು ತೂರಿದರು.
36 : ತೋಟದ ಯಜಮಾನ ಮೊದಲಿಗಿಂತಲೂ ಹೆಚ್ಚು ಆಳುಗಳನ್ನು ಕಳುಹಿಸಿದ. ಅವರಿಗೂ ಅದೇ ಗತಿ ಆಯಿತು.
37 : ಕಟ್ಟಕಡೆಗೆ ಯಜಮಾನ, ‘ನನ್ನ ಮಗನಿಗೆ ಇವರು ಮರ್ಯಾದೆ ಕೊಟ್ಟೇಕೊಡುವರು’ ಎಂದುಕೊಂಡು ತನ್ನ ಮಗನನ್ನೇ ಕಳುಹಿಸಿದ.
38 : ಆದರೆ ಗೇಣಿದಾರರು ಮಗನನ್ನು ಕಂಡೊಡನೇ, ‘ಈ ತೋಟಕ್ಕೆ ಇವನೇ ಉತ್ತರಾಧಿಕಾರಿ; ಬನ್ನಿ, ಇವನನ್ನು ಮುಗಿಸಿಬಿಡೋಣ. ಇವನಿಗೆ ಬರುವ ಸೊತ್ತನ್ನು ನಮ್ಮದಾಗಿಸಿಕೊಳ್ಳೋಣ,’ ಎಂದು ತಮ್ಮತಮ್ಮಲ್ಲೇ ಒಳಸಂಚು ಮಾಡಿಕೊಂಡರು.
39 : ಅಂತೆಯೇ ಅವನನ್ನು ಹಿಡಿದು, ತೋಟದಿಂದ ಹೊರಕ್ಕೆ ದಬ್ಬಿಕೊಂಡು ಹೋಗಿ, ಕೊಂದುಹಾಕಿದರು.
40 : “ಈಗ ನೀವೇ ಹೇಳಿ: ತೋಟದ ಯಜಮಾನ ಬಂದಾಗ ಆ ಗೇಣಿದಾರರರಿಗೆ ಏನು ಮಾಡುವನು?” ಎಂದು ಯೇಸು ಕೇಳಿದರು.
41 : “ಆ ಕೇಡಿಗರನ್ನು ಕ್ರೂರವಾಗಿ ಸಂಹರಿಸುವನು. ತರುವಾಯ ಕಾಲಕಾಲಕ್ಕೆ ಸರಿಯಾಗಿ ಪಾಲನ್ನು ಸಲ್ಲಿಸುವ ಬೇರೆಯವರಿಗೆ ತೋಟವನ್ನು ಗೇಣಿಗೆ ಕೊಡುವನು,” ಎಂದು ಅಲ್ಲಿದ್ದವರು ಉತ್ತರಕೊಟ್ಟರು.
42 : ಬಳಿಕ ಯೇಸು ಇಂತೆಂದರು: “ ‘ಮನೆ ಕಟ್ಟುವವರು ಬೇಡವೆಂದು ಬಿಸಾಡಿದ ಆ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು! ಸರ್ವೇಶ್ವರನಿಂದಲೇ ಆದ ಈ ಕಾರ್ಯ ನಮ್ಮ ಕಣ್ಣಿಗೆ ಅದೆಂಥ ಆಶ್ಚರ್ಯ!’ ಎಂಬ ವಾಕ್ಯವನ್ನು ನೀವು ಪವಿತ್ರ ಗ್ರಂಥದಲ್ಲಿ ಓದಿಲ್ಲವೆ?
43 : ಆದುದರಿಂದ ನಾನು ನಿಮಗೆ ಹೇಳುತ್ತೇನೆ, ‘ದೇವರ ಸಾಮ್ರಾಜ್ಯವನ್ನು ನಿಮ್ಮಿಂದ ಕಿತ್ತುಕೊಂಡು ತಕ್ಕ ಫಲಕೊಡುವ ಜನತೆಗೆ ನೀಡಲಾಗುವುದು.
===================
ಚಿಂತನೆ
ಸಾಧಾರಣ ಕಾಲದ 27 ನೇ ಭಾನುವಾರ
=====================
ಪೀಠಿಕೆ
========
ನಿಷ್ಠಾವಂತ ಬಾಳ್ವೆಗೆ ಪ್ರಭುವಿನ ಮೆಚ್ಚುಗೆ
ಒಬ್ಬ ನಿಷ್ಠಾವಂತ ತಂದೆಯೇ ದೇವರು. ತಮ್ಮ ಮಕ್ಕಳ ಪರಿಪಾಲನೆಯ ಆರೈಕೆಯೇ ಅವರ ಫಲ.   ಅವರು ನೀತಿವಂತರು, ಸಹನಶೀಲರು ಮತ್ತು ಪ್ರೀತಿಮಯರು. ಮನುಕುಲದ ಉದ್ದಾರಕ್ಕಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡು ಎಂದಿಗೂ ನಮ್ಮ ಒಳಿತಿಗಾಗಿ ಸಿದ್ದರಿರುವವರು. ತಂದೆ ದೇವರ ನಿಷ್ಠೆ, ಪ್ರಾಮಾಣಿಕತೆ, ಪ್ರೀತಿಗೆ ಪ್ರತಿಯಾಗಿ ನಮ್ಮಿಂದ ಅವರಿಗೆ ಲಭಿಸುವ ಪ್ರತಿಫಲವೇನು? ನಾವು ದೇವರ ಪ್ರೀತಿಗೆ ಹುಳಿದ್ರಾಕ್ಷಿಯನ್ನು ನೀಡುವವರೆ?ಅವರ ಪ್ರೀತಿಯನ್ನು, ದಯೆಯನ್ನು ಅಪವ್ಯಯಮಾಡುವವರೆ? ಇಲ್ಲವೆ   ಅವರ ಪ್ರೀತಿಗೆ ಫಲನೀಡುವವರೇ? ಸಕಲವನ್ನು ನೀಡಿದ ಆ ತಂದೆ ದೇವರಿಗೆ ನಮ್ಮ ಲೆಕ್ಕವನ್ನು ಒಪ್ಪಿಸಬೇಕು (ರೊಮ 14:12 “ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರಿಗೆ ಲೆಕ್ಕವನ್ನು ಒಪ್ಪಿಸಬೇಕು.) ಹಾಗೂ ಅದರ ಫಲಿತಾಂಶವನ್ನು ಅವರೇ ನೀಡುವರು. ಇವನ್ನೆಲ್ಲ ನಮ್ಮ ಕಣ್ಣ ಮುಂದಿಟ್ಟು  ಅವರ ಪ್ರೀತಿ, ಪ್ರಾಮಾಣಿಕತೆಗೆ ನಾವು ನಿಷ್ಠರಾಗಿ ಬಾಳುವಂತೆ ಕರುಣಿಸಿಕೊಂಡು ಈ ಬಲಿಪೂಜೆಯಲ್ಲಿ ಪ್ರಾರ್ಥಿಸೋಣ.
ಮೊದಲನೆಯ ವಾಚನ ಯೆಶಾಯ 5:1-7
=======================
ದೇವರೇ ಈ ಸೃಷ್ಟಿಯೆಂಬ ದ್ರಾಕ್ಷಾತೋಟದ ಮಾಲಿಕ. ಈ ದ್ರಾಕ್ಷ ತೋಟವೇ ದೇವಜನತೆ. ದೇವಜನರಿಗೆ ಸೃಷ್ಠಿಕರ್ತನಲ್ಲಿ ನಿಷ್ಠೆಯನ್ನು ತೋರ್ಪಡಿಸುವ ಸ್ವಾತಂತ್ರ್ಯವನ್ನು ನೀಡಲಾಗಿದೆ. ತಮಗೆ ನೀಡಿದ ಸ್ವಾತಂತ್ರ್ಯವನ್ನು ಅವರು ಸದುಪಯೋಗ ಮಾಡಲೂಬಹುದು, ದುರುಪಯೋಗ ಮಾಡಲೂಬಹುದು. ಆದರೆ ಅವರೆಲ್ಲರ ನ್ಯಾಯ ತೀರ್ಪು ಅಂತ್ಯದಲ್ಲಿ ಬರುವುದು ಎಂಬುದನ್ನು ಇಂದಿನ ಮೊದಲನೆಯ ವಾಚನದಲ್ಲಿ ಆಲಿಸುತ್ತೇವೆ.
ಎರಡನೆಯ ವಾಚನ ಫಿಲಿಪ್ಪಿ 4:6-9
====================
ಸಂತ ಪೌಲರು ‘ಚಿಂತಿಸಬೇಡಿ’ ಎಂಬ ಕರೆಯನ್ನು ಫಿಲಿಪ್ಪಿಯದ ಜನರಿಗೆ ನೀಡುತ್ತಾರೆ. ಯಾವ ವಿಷಯದಲ್ಲೂ ಬೇಸರಗೊಳ್ಳದೇ ನಿಮ್ಮ ಅಗತ್ಯಗಳಿಗಾಗಿ ಪ್ರಾರ್ಥಿಸುತ್ತಾ ದೇವರನ್ನು ಸ್ತುತಿಸಿರಿ. ಆಗ ಮನುಷ್ಯ ಗ್ರಹಿಕೆಗೂ ಮೀರಿದ ದೈವಶಾಂತಿಯನ್ನು ಪ್ರಭು  ದಯಪಾಲಿಸುವರು, ಶಾಂತಿದಾಯಕ ದೇವರು ನಿಮ್ಮ ಸಂಗಡ ಇರುವರು ಇದೇ ಸಂದೇಶವನ್ನು ನಾವೂ ಈಗ ಆಲಿಸೋಣ.
ಶುಭಸಂದೇಶ ಮತ್ತಾಯ 21:33-44
=====================
• ಗೇಣಿದಾರರ ಸಾಮತಿ ಸಾಂಕೇತಿಕವಾಗಿ ಬಳಸಲಾಗಿದೆ 
• ಇದರಲ್ಲಿ ಯಜಮಾನ - ದೇವರು, ದ್ರಾಕ್ಷಾ ತೋಟ – ಇಸ್ರಯೇಲ್ ಜನಾಂಗ, ಗೇಣಿದಾರರು – ಇಸ್ರಯೇಲ್ ಜನತೆ/ ಅದರ ಧಾರ್ಮಿಕ ಮುಖಂಡರು, ಸೇವಕರು /   ಆಳುಗಳು - ಪ್ರವಾದಿಗಳು, ‘ಮಗ’ - ಪ್ರಭು ಯೇಸುಕ್ರಿಸ್ತರನ್ನು ಸೂಚಿಸುತ್ತದೆ.
• ದೇವರು ಇಸ್ರಯೇಲರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡು ಪ್ರವಾದಿಗಳನ್ನು ಅವರ ಬಳಿ ಕಳುಹಿಸಿದರು. ಆದರೆ ಆ ಕೃತಘ್ನರಾಗಿದ್ದ ಗೇಣಿದಾರರು ಅವರನ್ನು ಕೊಂದುಬಿಟ್ಟರು. 1 ಅರಸು 19:10-14 “ಇಸ್ರಯೇಲರು ದೇವರ ನಿಬಂಧನೆಗಳನ್ನು ಮೀರಿ ಬಲಿ ಪೀಠಗಳನ್ನು ಕೆಡವಿ, ಪ್ರವಾದಿಗಳನ್ನು ಕತ್ತಿಯಿಂದ ಸಂಹರಿಸಿದ್ದಾರೆ”. 2ಪೂರ್ವ 24:18-22, ಪ್ರೇ.ಕಾ. 7:51-53 “ಎಂತಹ ಕಠಿಣ ಹೃದಯಿಗಳು ನೀವು, ದೇವರ ಸಂದೇಶಕ್ಕೆ ಕಿವುಡರು . ಮತ್ತಾಯ 23:29-39. 
• ದೇವರು ತಮ್ಮ ಏಕೈಕ ಪುತ್ರ ಪ್ರಭು ಯೇಸುವನ್ನು ಕಳುಹಿಸಿದರು. ಇಸ್ರಯೇಲರು ಅವರನ್ನುಸಂಹರಿಸಿದರು..
• ದೇವರು ಕೃತಘ್ನ ಗೇಣಿದಾರರಿಗೆ (ಇಸ್ರಯೇಲರಿಗೆ) ತೀರ್ಪು ಕೊಡುವರು. ಅದರ ಪ್ರಕಾರವೇ ಕ್ರಿ. ಶ.70 ರಲ್ಲಿ ಜೆರುಸಲೇಮ್ ದೇವಾಲಯದ ಪತನವಾಯಿತು. 
• ದೇವರು ಕಾಲ ಕಾಲಕ್ಕೆ ಸರಿಯಾಗಿ ಪಾಲನ್ನು ಸಲ್ಲಿಸುವವರಿಗೆ (ಧರ್ಮಸಭೆಗೆ) ತಮ್ಮ ದ್ರಾಕ್ಷಾ ತೋಟವನ್ನು (ಮಂದೆ) ಒಪ್ಪಿಸಿದರು. 
• ಈ ಸಾಮತಿ  ಸಾರುವ ಸಂದೇಶವಿದು: ನಿಷ್ಠರಲ್ಲದವರಿಗೆ ಸ್ವರ್ಗ ಸಾಮ್ರಾಜ್ಯವನ್ನು ಪ್ರವೇಶಿಸುವ ಅವಕಾಶ ಲಭಿಸದು., ಪ್ರಾಮಾಣಿಕ, ನಿಷ್ಠಾವಂತರಿಗೆ ಮಾತ್ರ ಪ್ರಭುವಿನ ಸಾಮ್ರಾಜ್ಯದಲ್ಲಿ ಹೊಕ್ಕು ಬಾಳುವ ಭಾಗ್ಯವು.
• ಪ್ರಭು ಅಂದು ನೀಡಿದ ಸಂದೇಶ ಇಂದಿಗೂ ಪ್ರಸ್ತುತ. ದೇವರ ಮಕ್ಕಳಾಗಿ, ಪ್ರಭು ಯೇಸುವಿನ ಸಹೋದರ ಸಹೋದರಿಯರಾಗಿ ನಾವು ಫಲ ನೀಡಿದ ಹೊರತು, ಕಾಲ ಕಾಲಕ್ಕೆ ಸರಿಯಾಗಿ ಪಾಲನ್ನು ಸಲ್ಲಿಸದಿದ್ದಲ್ಲಿ ನಮ್ಮ ಸ್ನಾನದೀಕ್ಷೆಯಲ್ಲಿ ನಾವು ಪಡೆದ ಸ್ವರ್ಗಸಾಮ್ರಾಜ್ಯದ ಪಾಲನ್ನು ಕಳೆದುಕೊಳ್ಳಲ್ಲಿದ್ದೇವೆ. ಸರ್ವಶಕ್ತರಾದ ದೇವರು ನ್ಯಾಯದ ತೀರ್ಪಿಡುವುದು ಖಚಿತ. 
===================
ಚಿಂತನೆ – ಫಾ ಸ್ಟೀವನ್ ಡಿ’ಸಾ, ಶಿವಮೊಗ್ಗ ಧರ್ಮಕ್ಷೇತ್ರ
====================

No comments:

Post a Comment