ಅಕ್ಟೋಬರ್ 3, 2020 ಶನಿವಾರ [ಹಸಿರು]
ಮೊದಲ ವಾಚನ: ಯೋಬ 42.1-3, 5-6, 12-17
ಕೀರ್ತನೆ 119: 66, 71, 75, 91, 125, 130. ಶ್ಲೋಕ.135
ಪ್ರಭೂ, ತೋರು ನಿನ್ನ ಮುಖದರ್ಶನ ಈ ದಾಸನಿಗೆ
ಶುಭಸಂದೇಶ: ಲೂಕ 10.17-24
==================
ಮೊದಲನೇ ವಾಚನ
ಯೋಬ 42.1-3, 5-6, 12-17
1 : ಆಗ ಯೋಬನು ಸರ್ವೇಶ್ವರ ಸ್ವಾಮಿಗೆ ಕೊಟ್ಟ ಉತ್ತರ ಇದು:
2 : “ತಾವು ಎಲ್ಲಾ ಕಾರ್ಯಗಳನು ನಡೆಸಲು ಶಕ್ತರೆಂದು ನಾನು ಬಲ್ಲೆ ಯಾವ ಯೋಜನೆಯು ನಿಮಗೆ ಅಸಾಧ್ಯವಿಲ್ಲವೆಂದು ನಾನು ಅರಿತಿರುವೆ.
3 : ‘ಅಜ್ಞಾನದ ಮಾತುಗಳನ್ನಾಡುವ ನೀನು ಯಾರು?’ ‘ಸತ್ಯಾಲೋಚನೆಗಳನು ಮಂಕುಮಾಡುವ ನೀನಾರು?’ ಈ ನಿಮ್ಮ ನುಡಿಯಂತೆ ಅರ್ಥಹೀನ ಮಾತುಗಳನು ನಾನಾಡಿದೆ ನನ್ನ ಬುದ್ದಿಗೆಟುಕದ ಪವಾಡಗಳನ್ನು ಟೀಕಿಸಿದೆ.
5 : ಈವರೆಗೆ ನಿಮ್ಮನು ಕುರಿತು ನಾನು ಕೇಳಿದ್ದು ಬೇರೆಯವರಿಂದ ಈಗಲಾದರೊ ನಿಮ್ಮನು ಕಂಡಿದ್ದೇನೆ ನನ್ನ ಕಣ್ಣುಗಳಿಂದ.
6 : ಆದುದರಿಂದ ನಾನು ಹೇಳಿದ್ದೆಲ್ಲಕ್ಕಾಗಿ ವಿಷಾದಿಸುತ್ತೇನೆ ಬೂದಿಯಲು, ದೂಳಿನಲು ಕುಳಿತು ಪಶ್ಚಾತ್ತಾಪ ಪಡುತ್ತೇನೆ.”
12 : ಸರ್ವೇಶ್ವರ ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು ಹೀಗೆ ಅಧಿಕಗೊಳಿಸಿ ಆಶೀರ್ವದಿಸಿದರು.
13 : ಅವನಿಗೆ ಹದಿನಾಲ್ಕು ಸಾವಿರ ಕುರಿಗಳು, ಆರು ಸಾವಿರ ಒಂಟೆಗಳು, ಒಂದು ಸಾವಿರ ಜೋಡಿ ಎತ್ತುಗಳು, ಒಂದು ಸಾವಿರ ಕತ್ತೆಗಳು ದೊರಕಿದವು.
14 : ಅಲ್ಲದೆ ಏಳು ಮಂದಿ ಗಂಡು ಮಕ್ಕಳು, ಮೂರು ಮಂದಿ ಹೆಣ್ಣು ಮಕ್ಕಳು ಹುಟ್ಟಿದರು. ಮೊದಲನೆಯವಳಿಗೆ ಯೆಮೀಮ, ಎರಡನೆಯವಳಿಗೆ ಕೆಚೀಯ, ಮೂರನೆಯವಳಿಗೆ ಕೆರೆನ್ಹಪ್ಪೂಕ್ ಎಂದು ಹೆಸರಿಟ್ಟನು.
15 : ಯೋಬನ ಮಕ್ಕಳಷ್ಟು ಸುಂದರವಾದ ಹೆಣ್ಣುಗಳು ಆ ನಾಡಿನಲ್ಲೆಲ್ಲೂ ಸಿಕ್ಕುತ್ತಿರಲಿಲ್ಲ. ಅವರ ತಂದೆ, ಅವರ ಅಣ್ಣತಮ್ಮಂದಿರಿಗೆ ಕೊಟ್ಟ ಹಾಗೆ ಅವರಿಗೂ ಸೊತ್ತನ್ನು ಹಂಚಿದನು.
16 : ತರುವಾಯ ಯೋಬನು ನೂರನಾಲ್ವತ್ತು ವರ್ಷಬಾಳಿದನು.
17: ನಾಲ್ಕು ತಲೆಮಾರು ತನಕ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಕಂಡನು. ಹಣ್ಣು ಹಣ್ಣು ಮುದುಕನಾಗಿ ಸತ್ತನು.
===================
ಕೀರ್ತನೆ
ಕೀರ್ತನೆ 119: 66, 71, 75, 91, 125, 130. ಶ್ಲೋಕ.135
ಪ್ರಭೂ, ತೋರು ನಿನ್ನ ಮುಖದರ್ಶನ ಈ ದಾಸನಿಗೆ
66 : ಸುಜ್ಞಾನ ವಿವೇಕಗಳನು ಕಲಿಸೆನಗೆ /
ನಿನ್ನಾಜ್ಞೆಗಳಲಿ ನನಗಿದೆ ನಂಬಿಕೆ //
71 : ಕಷ್ಟಾನುಭವವೂ ಆಯಿತೆನಗೆ ಹಿತಕರ /
ಅದು ತಂದಿತು ನಿನ್ನ ನಿಬಂಧನೆಗಳೆಚ್ಚರ //
75 : ನಾ ಬಲ್ಲೆ ಪ್ರಭು, ನಿನ್ನ ವಿಧಿಗಳು ನೀತಿಯುತವೆಂದು /
ಕಷ್ಟಕೆ ನನ್ನನು ಗುರಿಪಡಿಸಿರುವುದು ಉಚಿತವೆಂದು //
91 : ನಿನ್ನ ವಿಧಿಗನುಸಾರ ಅವು ಇಂದಿಗೂ ಉಳಿದಿವೆ /
ಏಕೆನೆ, ಸರ್ವವೂ ಮಾಡುತಿವೆ ನಿನಗೆ ಸೇವೆ //
125 : ನಿನ್ನ ದಾಸ ನಾನು, ದಯಪಾಲಿಸು ಎನಗೆ /
ನಿನ್ನ ಕಟ್ಟಳೆಗಳನು ಅರಿವ ತಿಳುವಳಿಕೆ //
130 : ತರುವುದು ನಿನ್ನ ವಾಕ್ಯೋಪದೇಶ /
ಸರಳ ಜನರಿಗೆ ಜ್ಞಾನ ಪ್ರಕಾಶ //
===================
ಶುಭಸಂದೇಶ
ಲೂಕ 10.17-24
17 : ಕಳುಹಿಸಲಾಗಿದ್ದ ಎಪ್ಪತ್ತೆರಡು ಮಂದಿ ಸಂತೋಷಭರಿತರಾಗಿ ಹಿಂದಿರುಗಿ ಬಂದು, “ಸ್ವಾವಿೂ, ನಿಮ್ಮ ಹೆಸರಿನಲ್ಲಿ ಆಜ್ಞೆಮಾಡಿದಾಗ ದೆವ್ವಗಳು ಕೂಡ ನಮಗೆ ಅಧೀನವಾಗುತ್ತವೆ,” ಎಂದು ವರದಿ ಮಾಡಿದರು.
18 : ಅದಕ್ಕೆ ಯೇಸು, “ಸೈತಾನನು ಆಕಾಶದಿಂದ ಸಿಡಿಲಿನಂತೆ ಬೀಳುವುದನ್ನು ಕಂಡೆನು.
19 : ಇಗೋ, ಸರ್ಪಗಳನ್ನು ಹಾಗೂ ಚೇಳುಗಳನ್ನು ತುಳಿಯುವುದಕ್ಕೂ ಶತ್ರುವಿನ ಸಮಸ್ತ ಶಕ್ತಿಯನ್ನು ಜಯಿಸುವುದಕ್ಕೂ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯವುದೂ ನಿಮಗೆ ಹಾನಿಮಾಡದು.
20 : ಆದರೂ ದೆವ್ವಗಳು ನಿಮಗೆ ಅಧೀನವಾಗಿವೆಯೆಂದು ಸಂತೋಷಪಡುವುದಕ್ಕಿಂತ ನಿಮ್ಮ ಹೆಸರುಗಳು ಸ್ವರ್ಗದಲ್ಲಿ ಲಿಖಿತವಾಗಿವೆ ಎಂದು ಸಂತೋಷಪಡಿ,” ಎಂದು ಹೇಳಿದರು. ಯೇಸುವಿನ ಸಂತಸ (ಮತ್ತಾ. 11.25-27, 13.16-17)
21 : ಅದೇ ಗಳಿಗೆಯಲ್ಲಿ ಯೇಸುಸ್ವಾಮಿ ಪವಿತ್ರಾತ್ಮರಿಂದ ಹರ್ಷಾವೇಶಗೊಂಡು, “ಪಿತನೇ, ಭೂಸ್ವರ್ಗಗಳ ಒಡೆಯನೇ, ಈ ವಿಷಯಗಳನ್ನು ಜ್ಞಾನಿಗಳಿಗೂ ಮೇಧಾವಿಗಳಿಗೂ ಮರೆಮಾಡಿ, ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ಹೌದು ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ.
22 : ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ. ಪುತ್ರನು ಯಾರೆಂದು ಪಿತನ ಹೊರತು ಬೇರಾರೂ ಅರಿಯರು. ಪಿತನು ಯಾರೆಂದು ಪುತ್ರನು ಮತ್ತು ಯಾರಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ ಅವರೇ ಹೊರತು ಮತ್ತಾರೂ ಅರಿಯರು,” ಎಂದು ಹೇಳಿದರು.
23 : ಅನಂತರ ಯೇಸು ಶಿಷ್ಯರ ಕಡೆ ತಿರುಗಿ, ಅವರಿಗೆ ಪ್ರತ್ಯೇಕವಾಗಿ, “ನೀವು ಕಾಣುವುದನ್ನು ಕಾಣುವ ಕಣ್ಣುಗಳು ಭಾಗ್ಯವುಳ್ಳವು.
24 : ಏಕೆಂದರೆ, ಎಷ್ಟೋ ಪ್ರವಾದಿಗಳು ಹಾಗೂ ಅರಸರು ನೀವು ನೋಡುವುದನ್ನು ನೋಡುವುದಕ್ಕೂ, ನೀವು ಕೇಳುವುದನ್ನು ಕೇಳುವುದಕ್ಕೂ ಆಶಿಸಿದರು. ಆದರೂ ಅದನ್ನು ಅವರು ನೋಡಲೂ ಇಲ್ಲ, ಕೇಳಲೂ ಇಲ್ಲ ಎಂದು ನಿಮಗೆ ಹೇಳುತ್ತೇನೆ,” ಎಂದರು. ಸದಯ ಸಮಾರಿತನ ಸಾಮತಿ
===================
ಚಿಂತನೆ
ಕಳುಹಿಸಲಾಗಿದ್ದ ಎಪ್ಪತ್ತೆರಡು ಮಂದಿ ಸಂತೋಷಭರಿತರಾಗಿ ಹಿಂದಿರುಗಿ ಬಂದು, “ಸ್ವಾವಿೂ, ನಿಮ್ಮ ಹೆಸರಿನಲ್ಲಿ ಅಪ್ಪಣೆಕೊಡಲು ದೆವ್ವಗಳು ಕೂಡ ನಮಗೆ ಅಧೀನವಾಗುತ್ತವೆ,” ಎಂದು ವರದಿ ಮಾಡಿದರು. ಅದಕ್ಕೆ ಯೇಸು, “ಸೈತಾನನು ಆಕಾಶದಿಂದ ಸಿಡಿಲಿನಂತೆ ಬೀಳುವುದನ್ನು ನಾನು ಕಂಡಿದ್ದೇನೆ. ಇಗೋ, ಸರ್ಪಗಳನ್ನು ಹಾಗೂ ಚೇಳುಗಳನ್ನು ತುಳಿಯುವುದಕ್ಕೂ ಶತ್ರುವಿನ ಸಮಸ್ತ ಶಕ್ತಿಯನ್ನು ಜಯಿಸುವುದಕ್ಕೂ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವುದೂ ನಿಮಗೆ ಹಾನಿಮಾಡದು. ಆದರೂ ದೆವ್ವಗಳು ನಿಮಗೆ ಅಧೀನವಾಗಿವೆಯೆಂದು ಸಂತೋಷಪಡುವುದಕ್ಕಿಂತ ನಿಮ್ಮ ಹೆಸರುಗಳು ಸ್ವರ್ಗದಲ್ಲಿ ಲಿಖಿತವಾಗಿವೆ ಎಂದು ಸಂತೋಷಪಡಿ,” ಎಂದು ಹೇಳಿದರು. ಅದೇ ಗಳಿಗೆಯಲ್ಲಿ ಯೇಸುಸ್ವಾಮಿ ಪವಿತ್ರಾತ್ಮರಿಂದ ಹರ್ಷಾವೇಶಗೊಂಡು, “ಪಿತನೇ, ಭೂಸ್ವರ್ಗಗಳ ಒಡೆಯನೇ, ಈ ವಿಷಯಗಳನ್ನು ಜ್ಞಾನಿಗಳಿಗೂ ಮೇಧಾವಿಗಳಿಗೂ ಮರೆಮಾಡಿ, ಮಕ್ಕಳಂತಹವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ಹೌದು ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ. ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ. ಪುತ್ರನು ಯಾರೆಂದು ಪಿತನ ಹೊರತು ಬೇರಾರೂ ಅರಿಯರು. ಪಿತನು ಯಾರೆಂದು ಪುತ್ರನ ಮತ್ತು ಯಾರಿಗೆ ಪುತ್ರನು ಅದನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ ಅವರ ಹೊರತು ಮತ್ತಾರೂ ಅರಿಯರು,” ಎಂದು ಹೇಳಿದರು. ಅನಂತರ ಯೇಸು ಶಿಷ್ಯರ ಕಡೆ ತಿರುಗಿ, ಅವರಿಗೆ ಪ್ರತ್ಯೇಕವಾಗಿ, “ನೀವು ಕಾಣುವುದನ್ನು ಕಾಣುವ ಕಣ್ಣುಗಳು ಭಾಗ್ಯವುಳ್ಳವು. ಏಕೆಂದರೆ, ಎಷ್ಟೋ ಪ್ರವಾದಿಗಳು ಹಾಗೂ ಅರಸರು ನೀವು ನೋಡುವುದನ್ನು ನೋಡುವುದಕ್ಕೂ, ನೀವು ಕೇಳುವುದನ್ನು ಕೇಳುವುದಕ್ಕೂ ಹಂಬಲಿಸಿದರು. ಆದರೂ ಅದನ್ನು ಅವರು ನೋಡಲೂ ಇಲ್ಲ, ಕೇಳಲೂ ಇಲ್ಲ ಎಂದು ನಿಮಗೆ ಯಥಾರ್ಥವಾಗಿ ಹೇಳುತ್ತೇನೆ,” ಎಂದರು.
----------------
ಇಂದು ಎಪ್ಪತ್ತೆರಡು ಮಂದಿ ಸುವಾರ್ತಾ ಪ್ರಚಾರದಿಂದ ಕ್ರಿಸ್ತನೆಡೆಗೆ ಹಿಂದಿರುಗುತ್ತಾರೆ. ಇಲ್ಲಿ ನಾವು ಗಮನಿಸಬೇಕಾದ ಒಂದು ಪ್ರಮುಖವಾದ ಅಂಶ ಇದು; ನಮ್ಮ ಆಧ್ಯಾತ್ಮಿಕ ಪಯಣ ಕ್ರಿಸ್ತನಿಂದ ಪ್ರಾರಂಭವಾಗಿ ಕ್ರಿಸ್ತನೆಡೆಗೆ ಹಿಂತಿರುಗುತ್ತದೆ. ಕ್ರಿಸ್ತನೇ ಕಳುಹಿಸಿದ ಎಪ್ಪತ್ತೆರಡು ಮಂದಿ ಆನಂದದಿಂದ ಹಿಂತಿರುಗುತ್ತಾರೆ. ನಮ್ಮ ದಿನ ಎಲ್ಲಿಂದ, ಯಾರಿಂದ ಆರಂಭವಾಗಿ ಹೇಗೆ ಅಂತ್ಯಗೊಳ್ಳುವುದು ಎಂದು ಬಲ್ಲಿರಾ? ಕ್ರಿಸ್ತರು ನಮ್ಮೊಂದಿಗಿದ್ದಾಗ ಆಗುವ ಪವಾಡಗಳು, ಅದ್ಭುತಗಳು ನಮ್ಮಲ್ಲಿ ಆನಂದವನ್ನು ತರುತ್ತವೆ. ದೇವರು ನಮ್ಮ ಪರ ಇರುವಾಗ ನಮ್ಮನ್ನು ವಿರೋಧಿಸುವವರು ಯಾರು? ಎಂಬ ಪ್ರಶ್ನೆಯನ್ನು ಸಂತ ಪೌಲರು ರೋಮನರೊಡನೆ ಸಂಭಾಷಿಸುವಾಗ ಕೇಳುತ್ತಾರೆ. ಕ್ರಿಸ್ತರೇ ಹೇಳುವಂತೆ, ’ಶತ್ರುಗಳ ಸಮಸ್ತ ಶಕ್ತಿಯನ್ನು ಜಯಿಸುವುದಕ್ಕೆ ಅಧಿಕಾರವನ್ನು ನಿಮಗೆ ಶ್ರುತಪಡಿಸಿದ್ದೇನೆ.’ ಆದ್ದರಿಂದ ಕ್ರಿಸ್ತನನ್ನೇ ಧರಿಸಿಕೊಂಡಾಗ ನಾವು ಎದೆಗುಂದುವುದಿಲ್ಲ, ನಜ್ಜುಗುಜ್ಜಾಗುವುದಿಲ್ಲ ಎಂಬುದು ಸತ್ಯ. ಇಂದಿನ ಮೊದಲನೆಯ ವಾಚನದಲ್ಲಿ ಯೋಬ ತನ್ನ ಬಲಹೀನತೆಯನ್ನು ಸರ್ವೇಶ್ವರನ ಅಪರಿಮಿತ, ಅನಂತ ಶಕ್ತಿಯ ಮುಂದೆ ಸಮರ್ಪಿಸುತ್ತಾನೆ. ನಾನು ಬಲಶಾಲಿ, ಶ್ರೀಮಂತ, ಪಂಡಿತ ಮತ್ತು ಪ್ರತಿಭಾನ್ವಿತನಾಗುವುದು ದೇವರು ಕೊಟ್ಟಿರುವ ವರದಿಂದ ಮಾತ್ರ. ಆದ್ದರಿಂದ ನಮ್ಮ ಕೇಂದ್ರಬಿಂದು ನಾವಲ್ಲ, ಬದಲಾಗಿ ಕ್ರಿಸ್ತ ಎಂಬುದನರಿತು ಈ ಜಗತ್ತಿಗೆ ಕ್ರಿಸ್ತನ ದ್ಯೋತಕಗಳಾಗೋಣ.
==================="
No comments:
Post a Comment