Monday, 23 November 2020

ಡಿಸೆಂಬರ್ 6, 2020 ಭಾನುವಾರ

ಡಿಸೆಂಬರ್ 6, 2020 ಭಾನುವಾರ [ನೇರಳೆ]
ಆಗಮನಕಾಲದ 2ನೇ ಭಾನುವಾರ (ವರ್ಷ ಬಿ)
ಮೊದಲ ವಾಚನ: ಯೆಶಾಯ 40.1-5, 9-11
ಕೀರ್ತನೆ 85:1-14 ಶ್ಲೋಕ.7 
ತೋರಿಸೆಮಗೆ ಪ್ರಭು ಕರುಣೆಯನು, ಅನುಗ್ರಹಿಸೆಮಗೆ ರಕ್ಷಣೆಯನು
ಎರಡನೇ ವಾಚನ: 2 ಪೇತ್ರ 3.8-14
ಶುಭಸಂದೇಶ: ಮಾರ್ಕ 1.1-8
-----------------------------------
ಸಂತ ನಿಕೋಲಾಸ್, ಧರ್ಮಾಧ್ಯಕ್ಷ
==================
ಮೊದಲನೇ ವಾಚನ
ಯೆಶಾಯ 40.1-5, 9-11
1 : ನಿಮ್ಮ ದೇವರು ಇಂತೆನ್ನುತ್ತಾರೆ: “ಸಂತೈಸಿ, ನನ್ನ ಜನರನ್ನು ಸಂತೈಸಿರಿ.
2 : ಜೆರುಸಲೇಮಿನೊಡನೆ ಪ್ರೀತಿಯಿಂದ ಮಾತನಾಡಿ; ಅದರ ಊಳಿಗತನ ಮುಗಿಯಿತೆನ್ನಿ; ತಕ್ಕ ಪ್ರಾಯಶ್ಚಿತ್ತವಾಗಿದೆ ಅದು ಗೈದ ದೋಷಕೆ ಸರ್ವೇಶ್ವರಸ್ವಾಮಿಯಿಂದಲೇ ಅದರ ಎಲ್ಲಾ ಪಾಪಕೃತ್ಯಗಳಿಗೆ ಇಮ್ಮಡಿ ಶಿಕ್ಷೆಯಾಗಿದೆ ಎಂದು ಕೂಗಿ ಹೇಳಿ ಆ ನಗರಿಗೆ”
3 : ಇಗೋ, ಈ ವಾಣಿಯನ್ನು ಕೇಳಿ: “ಸರ್ವೇಶ್ವರಸ್ವಾಮಿಗೆ ಮಾರ್ಗವನ್ನು ಸಿದ್ಧಮಾಡಿ ಅರಣ್ಯದಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ಸರಾಗಮಾಡಿ ಅಡವಿಯಲಿ.
4 : ತುಂಬಬೇಕು ಎಲ್ಲ ಹಳ್ಳಕೊಳ್ಳಗಳನು ಮಟ್ಟಮಾಡಬೇಕು ಎಲ್ಲ ಬೆಟ್ಟ ಗುಡ್ಡಗಳನು. ನೆಲಸಮಮಾಡಬೇಕು ದಿಬ್ಬದಿಣ್ಣೆಗಳನು ಸಮತಲಗೊಳಿಸಬೇಕು ತಗ್ಗು ಮುಗ್ಗಾದ ಸ್ಥಳಗಳನು.
5 : ಗೋಚರವಾಗುವುದಾಗ ಸರ್ವೇಶ್ವರ ಸ್ವಾಮಿಯ ಮಹಿಮೆಯು, ಮಾನವರೆಲ್ಲರೂ ಅದನ್ನು ಕಾಣುವರು ಒಟ್ಟಿಗೆ, ಸರ್ವೇಶ್ವರಸ್ವಾಮಿಯೇ ಇದನ್ನು ಬಾಯಾರೆ ನುಡಿದಿದ್ದಾರೆ.”
9 : ಪರ್ವತವನ್ನೇರು ಶುಭಸಂದೇಶಕಳಾದ ಸಿಯೋನೇ, ಧ್ವನಿಯೇರಿಸು, ಶುಭವಾರ್ತೆ ಸಾರಬಲ್ಲ ಜೆರುಸಲೇಮೇ, ಧ್ವನಿಯೇರಿಸು, ನಿರ್ಭಯದಿಂದ ಏರಿಸು ‘ಇಗೋ, ನಿಮ್ಮ ದೇವರು’ ಎಂದು ಜೂದ ನಗರಗಳಿಗೆ ಸಾರು.
10 : ಇಗೋ, ಬರುತಿಹನು ಸ್ವಾಮಿ ಸರ್ವೇಶ್ವರ ಶೂರನಂತೆ ರಾಜ್ಯವಾಳುವನು ತನ್ನ ಭುಜಬಲದಿಂದಲೇ ಇಗೋ, ಶ್ರಮಕ್ಕೆ ತಕ್ಕ ಪ್ರತಿಫಲ ಆತನ ಕೈಯಲ್ಲಿದೆ ಆತ ಜಯಿಸಿದ ಪರಿವಾರ ಆತನ ಮುಂದಿದೆ.
11 : ಆತ ಮೇಯಿಸುವನು ತನ್ನ ಮಂದೆಯನ್ನು ಕುರುಬನ ಹಾಗೆ ಮರಿಗಳನ್ನು ಕೈಗೆ ಎತ್ತಿಕೊಳ್ಳುವನು, ಅಪ್ಪಿಕೊಳ್ಳುವನು ಎದೆಗೆ ನಡೆಸುವನು ಹಾಲೂಡಿಸುವ ಕುರಿಗಳನ್ನು ಮೆಲ್ಲಗೆ.
===================

ಕೀರ್ತನೆ 
ಕೀರ್ತನೆ 85:9 -13 ಶ್ಲೋಕ.7 
ಶ್ಲೋಕ: ತೋರಿಸೆಮಗೆ ಪ್ರಭು ಕರುಣೆಯನು| 
ಅನುಗ್ರಹಿಸೆಮಗೆ ರಕ್ಷಣೆಯನು||

9 : ಭಯಭಕ್ತಿಯುಳ್ಳವರಿಗಾತನ ರಕ್ಷಣೆ ಸನ್ನಿಹಿತ / 
ಇದರಿಂದಾತನ ಮಹಿಮೆ
ನಾಡಿಲ್ಲಿರುವುದು ನಿರುತ //
10 : ಪ್ರೀತಿಯೂ ಸತ್ಯವೂ 
ಒಂದನ್ನೊಂದು ಕೂಡಿರುವುವು / 
ನೀತಿಯೂ ಶಾಂತಿಯೂ 
ಒಂದನ್ನೊಂದು ಚುಂಬಿಸುವುವು //

11 : ಸತ್ಯತೆಯು ಹುಟ್ಟುವುದು ಭೂಮಿಯಿಂದ / 
ನೀತಿಯು ದೃಷ್ಟಿಸುವುದು ಗಗನದಿಂದ //

12 : ಪ್ರಭು ಕೊಟ್ಟೇ ತೀರುವನು ಒಳಿತನು / 
ನಮ್ಮ ನಾಡು ನೀಡುವುದು ಬೆಳೆಯನು //

13 : ನಡೆವುದು ಪ್ರಭುವಿನ ಮುಂದೆ ನೀತಿ / 
ಮಾಡುವುದು ಆತನ ಹೆಜ್ಜೆಗೆ ಹಾದಿ //
===================
ಎರಡನೇ ವಾಚನ 
2 ಪೇತ್ರ 3.8-14

8 : ಪ್ರಿಯರೇ, ಮತ್ತೊಂದು ವಿಷಯವನ್ನು ಮರೆಯದಿರಿ: ಪ್ರಭುವಿನ ದೃಷ್ಟಿಯಲ್ಲಿ ಒಂದು ದಿನ ಸಾವಿರ ವರ್ಷಗಳಂತೆಯೂ ಮತ್ತು ಸಾವಿರ ವರ್ಷಗಳು ಒಂದು ದಿನದಂತೆಯೂ ಇವೆ.
9 : ಕೆಲವರು ಭಾವಿಸುವಂತೆ ಪ್ರಭು ತಮ್ಮ ವಾಗ್ದಾನಗಳನ್ನು ನೆರವೇರಿಸುವುದರಲ್ಲಿ ವಿಳಂಬ ಮಾಡುವವರಲ್ಲ; ಆದರೆ ಅವರು ನಿಮ್ಮ ವಿಷಯದಲ್ಲಿ ದೀರ್ಘಶಾಂತಿ, ಸಹನೆಯುಳ್ಳವರು. ಯಾರೊಬ್ಬನೂ ನಾಶವಾಗಬೇಕೆಂಬುದು ಅವರ ಇಚ್ಛೆಯಲ್ಲ; ಎಲ್ಲರೂ ಪಶ್ಚಾತ್ತಾಪಪಟ್ಟು ತಮಗೆ ಅಭಿಮುಖರಾಗಬೇಕೆಂಬುದೇ ಅವರ ಅಪೇಕ್ಷೆ.
10 : ಪ್ರಭುವಿನ ದಿನ ಬಂದೇ ತೀರುವುದು. ಅದು ಕಳ್ಳನಂತೆಯೇ ಬರುವುದು. ಆಗ, ಆಕಾಶ ಮಂಡಲವು ಸಿಡಿಲ ಗರ್ಜನೆಯೊಂದಿಗೆ ಅಳಿದು ಹೋಗುವುದು. ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳು ಸುಟ್ಟು ಲಯವಾಗಿ ಹೋಗುವುವು. ಭೂಮಿಯೂ ಅದರಲ್ಲಿರುವ ಸಮಸ್ತವೂ ಉರಿದು ಭಸ್ಮವಾಗುವುವು.
11 : ಇವೆಲ್ಲವೂ ಹೀಗೆ ನಾಶವಾಗಿ ಹೋಗುವುದರಿಂದ ನೀವು ಎಂಥವರಾಗಿ ಜೀವಿಸಬೇಕು? ಪರಿಶುದ್ಧರಾಗಿಯೂ ಭಕ್ತಿಪೂರಿತರಾಗಿಯೂ ಬಾಳಬೇಕು.
12 : ದೇವರ ಆ ದಿನವನ್ನು ಎದುರು ನೋಡುತ್ತಾ ಅದು ಬೇಗನೆ ಬರಲೆಂದು ಹಾರೈಸಬೇಕು. ಆ ದಿನ, ಆಕಾಶಮಂಡಲವು ಅಗ್ನಿಯಿಂದ ಉರಿದು ಹೋಗುವುದು; ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳು ಶಾಖದಿಂದ ಕರಗಿಹೋಗುವುವು.
13 : ನಾವಾದರೋ, ದೇವರ ವಾಗ್ದಾನದ ಪ್ರಕಾರ ನೀತಿಯ ನೆಲೆಯಾಗಿರುವ ನೂತನ ಆಕಾಶಮಂಡಲವೂ ನೂತನ ಭೂಮಂಡಲವೂ ಬರುವುದನ್ನು ಎದುರು ನೋಡುತ್ತಿರುವೆವು.
14 : ಪ್ರಿಯರೇ, ಇವುಗಳನ್ನು ಎದುರುನೋಡುವವರಾಗಿರುವ ನೀವು ದೇವರ ದೃಷ್ಟಿಯಲ್ಲಿ ನಿರ್ಮಲರೂ ನಿರ್ದೋಷಿಗಳೂ ಆಗಿದ್ದು ಶಾಂತಿ ಸಮಾಧಾನದಿಂದಿರಲು ಪ್ರಯತ್ನಿಸಿರಿ.
===================
ಶುಭಸಂದೇಶ
ಮಾರ್ಕ 1.1-8

1 : ದೇವರ ಪುತ್ರರಾದ ಯೇಸುಕ್ರಿಸ್ತರ ಶುಭಸಂದೇಶ. ಇದು ಪ್ರವಾದಿ ಯೆಶಾಯನು ಮೊದಲೇ ಬರೆದಿಟ್ಟ ಪ್ರಕಾರ ಪ್ರಾರಂಭವಾಯಿತು.
2 : “ಇಗೋ, ನನ್ನ ದೂತನನ್ನು ನಿನಗೆ ಮುಂದಾಗಿ ಕಳಿಸುವೆನು ಆತನು ನಿನ್ನ ಮಾರ್ಗವನ್ನು ಮುಂಚಿತವಾಗಿ ಸಿದ್ಧಗೊಳಿಸುವನು,’ ಎಂದು ದೇವರೇ ನುಡಿದಿದ್ದಾರೆ.”

3 : “ ‘ಸರ್ವೇಶ್ವರನಿಗಾಗಿ ಮಾರ್ಗವನ್ನು ಸಿದ್ಧಪಡಿಸಿರಿ; ಆತನ ಆಗಮನಕ್ಕಾಗಿ ಹಾದಿಯನ್ನು ಸರಾಗಮಾಡಿರಿ,’ ಎಂದೊಬ್ಬನು ಘೋಷಿಸುತ್ತಿದ್ದಾನೆ, ಬೆಂಗಾಡಿನಲ್ಲಿ.”
4 : ಈ ಪ್ರವಾದನೆಗೆ ಅನುಗುಣವಾಗಿ ಯೊವಾನ್ನನು, “ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ; ಸ್ನಾನದೀಕ್ಷೆಯನ್ನು ಪಡೆದುಕೊಳ್ಳಿ. ದೇವರು ನಿಮ್ಮ ಪಾಪಗಳನ್ನು ಕ್ಷಮಿಸಿಬಿಡುವರು,” ಎಂದು ಬೆಂಗಾಡಿನಲ್ಲಿ ಜನರಿಗೆ ಸಾರಿ ಹೇಳುತ್ತಾ ಸ್ನಾನದೀಕ್ಷೆ ಕೊಡುತ್ತಾ ಇದ್ದನು
5 : ಜುದೇಯ ಪ್ರಾಂತ್ಯದ ಎಲ್ಲೆಡೆಗಳಿಂದಲೂ ಜೆರುಸಲೇಮಿನಿಂದಲೂ ಜನರು ಆತನ ಬಳಿಗೆ ಹೋಗುತ್ತಿದ್ದರು. ಅವರು ತಮ್ಮ ಪಾಪಗಳನ್ನು ಒಪ್ಪಿಕೊಳ್ಳುತ್ತಾ ಜೋರ್ಡನ್ ನದಿಯಲ್ಲಿ ಆತನಿಂದ ಸ್ನಾನದೀಕ್ಷೆ ಪಡೆದುಕೊಳ್ಳುತ್ತಿದ್ದರು
6 : ಯೊವಾನ್ನನು ಒಂಟೆಯ ತುಪ್ಪಟದ ಹೊದಿಕೆಯನ್ನು ಹೊದ್ದು, ಸೊಂಟಕ್ಕೆ ತೊಗಲಿನ ನಡುಪಟ್ಟಿಯನ್ನು ಕಟ್ಟಿಕೊಳ್ಳುತ್ತಿದ್ದನು. ಮಿಡತೆಗಳೂ ಕಾಡುಜೇನೂ ಆತನ ಆಹಾರವಾಗಿತ್ತು
7 : ಆತನು, “ನನ್ನಾನಂತರ ನನಗಿಂತಲೂ ಶಕ್ತರೊಬ್ಬರು ಬರುತ್ತಾರೆ; ಬಗ್ಗಿ ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಅರ್ಹನಲ್ಲ
8 : ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಟ್ಟೆನು; ಅವರಾದರೋ ನಿಮಗೆ ಪವಿತ್ರಾತ್ಮ ಅವರಿಂದ ದೀಕ್ಷಾಸ್ನಾನ ಕೊಡುವರು,” ಎಂದು ಘೋಷಿಸುತ್ತಿದ್ದನು. 
===================
ಚಿಂತನೆ
ಆಗಮನಕಾಲದ 2ನೇ ಭಾನುವಾರ
ಪೀಠಿಕೆ
======
ಶುಭಸಂದೇಶ: ಮಾರ್ಕ 1.1-8ಆಗಮನ ಕಾಲವು ದೈವಿಕ ಅನುಗ್ರಹದ ವಿಶೇಷ ಕಾಲವಾಗಿದೆ. ಈ ಕಾಲವು ಕ್ರಿಸ್ತರ ಮೂರು ಬಗೆಯ ಬರುವಿಕೆಯನ್ನು ಏದುರು ನೋಡುವ ಮತ್ತು ಅದಕ್ಕಾಗಿ ನಮ್ಮನ್ನೇ ಸಿದ್ಧಮಾಡುವ ಕಾಲವಾಗಿದೆ. ಮೊದಲನೆಯದಾಗಿ ಕಿಸ್ತರ ವಾರ್ಷಿಕ ಹುಟ್ಟು ಹಬ್ಬದ ಆಚರಣೆಯನ್ನು ಎದುರು ನೋಡುತ್ತೇವೆ, ಎರಡನೆಯದಾಗಿ ಕಾಲಾಂತ್ಯದಲ್ಲಿ ಕ್ರಿಸ್ತರ ಬರುವಿಕೆ ಮತ್ತು ಮೂರನೆಯದಾಗಿ ನಮ್ಮ ದೈನಂದಿನ ಜೀವನದಲ್ಲಿ, ನಮ್ಮ ದಿನ ನಿತ್ಯದ ಹಾಗುಹೋಗುಗಳಲ್ಲಿ ಕ್ರಿಸ್ತರ ಬರುವಿಕೆಯನ್ನು ಸ್ಮರಿಸುವುದು. ನಮ್ಮ ಇತರ ಬಾಹ್ಯ ಸಿದ್ಧತೆಗಳೊಂದಿಗೆ, ಆಧ್ಯಾತ್ಮಿಕ, ಮಾನಸಿಕ ಮತ್ತು ಸಾಮುದಾಯಿಕ ಸಿದ್ಧತೆಗೆ ಹೆಚ್ಚಿನ ಒತ್ತನ್ನು ನೀಡಲು ಇಂದಿನ ದೈವ ವಾಕ್ಯದ ವಿಧಿಯು ನಮಗೆ ಕರೆನೀಡುತ್ತದೆ. 

ಮೊದಲ ವಾಚನ: ಯೆಶಾಯ 40.1-5, 9-11
===============
ಇಂದಿನ ಮೊದಲನೇ ವಾಚನದಲ್ಲಿ ಪ್ರವಾದಿ ಯೆಶಾಯನು ಭರವಸೆಯ ಸಂದೇಶವನ್ನು ನುಡಿಯುತ್ತಾನೆ. ಇಸ್ರಯೇಲಿನ ಜನರು ಬರಲಿರುವ ರಕ್ಷರನ್ನು ಏದುರುಗೊಳ್ಳಲು ಸಿದ್ಧರಾಗಲಿ ಎಂದು ಸಂತೈಸುತ್ತಾನೆ. ತಮ್ಮ ಜೀವನದ ಹಳ್ಳಕೊಳ್ಳಗಳನ್ನು ಒಳ್ಳೆಯ ವಿಷಯಗಳಿಂದ ತುಂಬಲು, ತಮ್ಮ ಬದುಕಿನ ಬೆಟ್ಟಗುಡ್ಡಗಳನ್ನು ನ್ಯಾಯ ನೀತಿಯ ನಡವಳಿಕೆಯಿಂದ ಮಟ್ಟಮಾಡಲು, ಅಹಂಕಾರ, ದರ್ಪ, ಅಹಂನಿಂದ ಕೂಡಿರುವ ದಿಬ್ಬದಿಣ್ಣೆಗಳನ್ನು ವಿನಯ, ವಿಶ್ವಾಸ, ದೈವ ಭಯದಿಂದ ನೆಲಸಮಮಾಡಲು, ತಗ್ಗು ಮುಗ್ಗಾದ ಮನೋದೃಷ್ಟಿ, ವಿಚಾರ, ಮತ್ತು ಚಿಂತನೆಗಳನ್ನು ದೈವ ಜ್ಞಾನ, ಪರ ಚಿಂತನೆ, ಸಹೃದಯಿ ಮನಸ್ಸನ್ನು ಬೆಳೆಸಿಕೊಳ್ಳುವುದರ ಮೂಲಕ ಸಮತಲಗೊಳಿಸಲು ಕರೆನೀಡುತ್ತಾನೆ. 

ಎರಡನೇ ವಾಚನ: 2 ಪೇತ್ರ 3.8-14
====================

ಸಂತ ಪೇತ್ರನು ಎರಡನೇ ವಾಚನದಲ್ಲಿ ಪ್ರಭುವಿನ ಬರುವಿಕೆಯನ್ನು ಎದುರು ನೋಡುವ ನಾವು ನಮ್ಮ ಪಾಪಗಳಿಗೆ ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಿ ಜೀವಿಸಬೇಕು ಎಂದು ತಿಳಿಯಪಡಿಸುತ್ತಾನೆ. ನಾವು ಪರಿಶುದ್ಧರಾಗಿಯೂ, ಭಕ್ತಿಪೂರಿತರಾಗಿಯೂ ಬಾಳಬೇಕು ಮತ್ತು ದೇವರ ದೃಷ್ಟಿಯಲ್ಲಿ ನಿರ್ಮಲರೂ ನಿರ್ದೋಷಿಗಳೂ ಆಗಿದ್ದು ಶಾಂತಿ ಸಮಾಧಾನದಿಂದಿರಲು ಪ್ರಯತ್ನಿಸಬೇಕೆಂದು ಆದೇಶಿಸುತ್ತಾನೆ. 

ಶುಭಸಂದೇಶ: ಮಾರ್ಕ 1.1-8
==================
ಇಂದಿನ ಶುಭಸಂದೇಶವು ಸ್ನಾಪಕ ಯೊವಾನ್ನನ ವ್ಯಕ್ತಿತ್ವ, ಜೀವನ ಶೈಲಿ ಮತ್ತು ಬೋಧನೆಯ ಮೂಲಕ ಬರಲಿರುವ ಲೋಕರಕ್ಷರನ್ನು ಎದುರುಗೊಳ್ಳಲು ಆಹ್ವಾನಿಸುತ್ತದೆ. ದೇವರಿಂದ ನಿಯೋಜಿಸ್ಪಟ್ಟ ಸ್ನಾಪಕ ಯೊವಾನ್ನನು ದೇವ ಪುತ್ರ ಯೇಸುಕ್ರಿಸ್ತರ ಬರುವಿಕೆಯನ್ನು ಮುನ್ನವೇ ತಿಳಿಸುತ್ತಾನೆ. ಮಾತ್ರವಲ್ಲದೆ ಜನರಿಗೆ ಸ್ನಾನದೀಕ್ಷೆಯನ್ನು ನೀಡಿ ಪಾಪಕ್ಷಮೆಗೆ ಸಿದ್ಧಗೊಳಿಸುತ್ತಾರೆ. 

ಅದ್ದರಿಂದ ಆಗಮನ ಕಾಲವು ಸಿದ್ಧತೆಯ, ಶುದ್ಧತೆಯ ಮತ್ತು ಸಂಭ್ರಮಿಸುವ ಕಾಲವಾಗಿದೆ. ನಾವು ನಮ್ಮ ಜೀವನವನ್ನು ಅವಲೋಕಿಸಿ ನಮ್ಮ ರಕ್ಷರರನ್ನು ನಮ್ಮ ವೈಯಕ್ತಿಕ, ಕೌಟುಂಬಿಕ ಮತ್ತು ಕ್ರೈಸ್ತ ಸಮುದಾಯಕ್ಕೆ ತಕ್ಕದಾದ ಆಧ್ಯಾತ್ಮಿಕ ಹಾಗೂ ಮಾನಸಿಕ ಸಿದ್ಧತೆಗಳೊಂದಿಗೆ ಬರಮಾಡಿಕೊಳ್ಳಬೇಕಾಗಿದೆ. ನಮ್ಮ ಸಿದ್ಧತೆ ಕೇವಲ ತೋರಿಕೆಯ, ಬಾಹ್ಯ ಮತ್ತು ಕ್ರಿಯಾವಿಧಿಗಳಿಗೆ ಮಾತ್ರ ಸೀಮಿತಗೊಳ್ಳದೆ ನಮ್ಮಲ್ಲಿ ಸೂಕ್ತವಾದ ಬದಲಾವಣೆಯನ್ನು ತಂದು ಪರಿವರ್ತನೆಯ ಜೀವನ ಜೀವಿಸಲು ನೆರವಾಗುವುದರಲ್ಲಿ ಅಡಕವಾಗಿದೆ. 

ಕ್ರಿಸ್ತರ ಬರುವಿಕೆಗೆ ನಮ್ಮ ಜೀವನವನ್ನು ಶುದ್ಧಪಡಿಸಿಕೊಳ್ಳುವುದರ ಮೂಲಕ ನಾವು ಏದುರು ನೋಡಬೇಕಾಗಿದೆ. ಅದಕ್ಕಾಗಿ ನಮ್ಮ ದೇಹದ, ಮಾತಿನ ಮತ್ತು ಮನಸ್ಸಿನ ಶುದ್ಧತೆಯ ಅಗತ್ಯವಿದೆ. ಅನೇಕ ಬಾರಿ ನಮ್ಮ ನಡೆ, ನುಡಿ ಮತ್ತು ಚಿಂತನೆಗಳು ಅಶುದ್ಧತೆಯಿಂದ ಕೂಡಿ ನಮ್ಮ ಬದುಕನ್ನು ಕಲ್ಮಷಗೊಳಿಸುತ್ತಿವೆ. ಕ್ರಿಸ್ತರನ್ನು ನಮ್ಮ ಮನಸ್ಸಿಗೆ, ಮನೆಗಳಿಗೆ ಬರಮಾಡಿಕೊಳ್ಳಲು ಅಶುದ್ಧತೆಯನ್ನು ಶುಚಿಗೊಳಿಸಿ ನಿರ್ಮಲ ಜೀವನ ನಾವು ಜೀವಿಸಬೇಕಾಗಿದೆ. 

ಕ್ರಿಸ್ತರ ಆಗಮನವು ಸಂಧಾನದ ಕಾಲ. ದೇವರ ಮತ್ತು ಮನುಷ್ಯರ ನಡುವೆ, ವ್ಯಕ್ತಿ ವ್ಯಕ್ತಿಗಳ ನಡುವೆ; ಮಾನವ ಮತ್ತು ಪರಿಸರದ ನಡುವೆ ಮುರಿದಿರುವ ಸಂಬಂಧವನ್ನು ಬೆಸೆಯುವ ಕಾಲ. ನಮ್ಮ ಜೀವ ಮತ್ತು ಜೀವನದ ಮೂಲ ದೇವರು ಮಾತ್ರ ಎಂದು ಮನಗಂಡು. ನಮ್ಮ ಅವಿಶ್ವಾಸವನ್ನು ತೊರೆದು ನಿಜ ದೇವರಲ್ಲಿ ವಿಶ್ವಾಸವನ್ನು ನಿವೇದಿಸುವುದರ ಮೂಲಕ; ನಮ್ಮ ಕಠಿಣ ಹೃದಯವನ್ನು ಕರಗಿಸಿ, ಕಷ್ಟ ನೋವಿನಲ್ಲಿರುವವರರಿಗೆ ಪ್ರೀತಿ, ಅನುಕಂಪದಿಂದ ಸ್ಪಂದಿಸುವುದರ ಮೂಲಕ; ನಿರಾಶೆ, ಸಂಶಯ ಮತ್ತು ಹತಾಶೆಯಿಂದ ಬಾಡಿರುವ ಮನಸ್ಸುಗಳನ್ನು ಪ್ರೇರಿಸುವುದರ ಮೂಲಕ, ಸ್ವಾರ್ಥದ ಬದುಕನ್ನು ತೊರೆದು ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳುವುದರ ಮೂಲಕ ನಾವು ಆಗಮನ ಕಾಲದಲ್ಲಿ ಸಂಧಾನ ಏರ್ಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. 

ಆದ್ದರಿಂದ ನಾವು ಪ್ರವಾದಿ ಯೆಶಾಯನ ಮತ್ತು ಸ್ನಾಪಕ ಯೊವಾನ್ನನ ಕರೆಯನ್ನು ಮನ್ನಿಸಿ ನಮ್ಮ ಮನವನ್ನು ಪರಿವರ್ತಿಸಿ, ಜೀವನಶೈಲಿಯನ್ನು ಬದಲಿಸಿ, ಕ್ರಿಸ್ತರಿಗಾಗಿ ನಮ್ಮ ಹೃಯದ ಹಾದಿಯನ್ನು ಸಿದ್ಧಪಡಿಸೋಣ. 
=================
ಚಿಂತನೆ – ಫಾ ಎಡ್ವರ್ಡ್ ಫಿಲಿಪ್ ಎಸ್ ಜೆ.
===================

No comments:

Post a Comment