Monday, 23 November 2020

ಡಿಸೆಂಬರ್ 7, 2020 ಸೋಮವಾರ

ಡಿಸೆಂಬರ್ 7, 2020 ಸೋಮವಾರ [ನೇರಳೆ]
ಸಂತ ಅಂಬ್ರೊಸ್, ಧರ್ಮಾಧ್ಯಕ್ಷ ಮತ್ತು ಧರ್ಮಸಭೆಯ ಪಂಡಿತ (ಸ್ಮರಣೆ)
ಮೊದಲ ವಾಚನ: ಯೆಶಾಯ 35:1-10
ಕೀರ್ತನೆ 85:9-14 ಶ್ಲೋಕ.ಯೆಶಾಯ 35:4
ಅಗೋ ದೇವನು ತಾನೇ ಬರುವನು ನಿಮ್ಮನು ರಕ್ಷಿಸಲು
ಶುಭಸಂದೇಶ: ಲೂಕ 5.17-26
===============
ಮೊದಲ ವಾಚನ
ಯೆರೆ 31: 10 ಯೆಶಾ 35: 4
ರಾಷ್ಟ್ರಗಳೇ, ಸರ್ವೇಶ್ವರನ ವಾಕ್ಯವನ್ನು ಕೇಳಿರಿ; 
ದೂರದ ದ್ವೀಪಗಳಲ್ಲೂ ಅದನ್ನು ಸಾರಿರಿ.
ಭಯಪಡಬೇಡಿ, ಎದೆಗುಂದಬೇಡಿ;
ತಾನೇ ಬರುವನು ಆ ದೇವನು ನಿಮ್ಮನ್ನು ರಕ್ಷಿಸಲು.
--------------------------------
ಮೊದಲನೇ ವಾಚನ
ಯೆಶಾಯ 35:1-10
1 : ಆನಂದಿಸಲಿ ಅರಣ್ಯವೂ ಮರುಭೂಮಿಯೂ ಹೂಗಳಂತೆ ಅರಳಿ ಹರ್ಷಿಸಲಿ ಒಣನೆಲವು.
2 : ಉಲ್ಲಾಸಿಸಲಿ ಅದು ಹುಲುಸಾಗಿ ಹೂಬಿಟ್ಟು ಹೌದು, ಸಂತಸ ಸಂಗೀತ ಹಾಡುವಷ್ಟು. ದೊರಕಲಿ ಅದಕ್ಕೆ ಲೆಬನೋನಿನ ಮಹಿಮೆಯು ಕರ್ಮೆಲಿನ ಮತ್ತು ಶಾರೋನಿನ ವೈಭವವು. ಕಾಣುವುವು ಸರ್ವೇಶ್ವರನ ಮಹಿಮೆಯನು ನೋಡುವುವು ಇವೆಲ್ಲ ನಮ್ಮ ದೇವರ ವೈಭವವನು.
3 : ಜೋಲುಬಿದ್ದ ಕೈಗಳನ್ನು ಬಲಗೊಳಿಸಿರಿ ನಡುಗುವ ಕಾಲುಗಳನ್ನು ದೃಢಗೊಳಿಸಿರಿ.
4 : ಚಂಚಲ ಹೃದಯರಿಗೆ ಹೀಗೆಂದು ಹೇಳಿ: “ಭಯಪಡಬೇಡಿ; ಎದೆಗುಂದಬೇಡಿ; ಬರುವನು ಆ ದೇವನು ಮುಯ್ಯಿತೀರಿಸಲು ಬರುವನು ಆ ದೇವನು ಪ್ರತೀಕಾರವೆಸಗಲು ತಾನೇ ಬರುವನು ನಿಮ್ಮನ್ನು ರಕ್ಷಿಸಲು.”
5 : ಕುರುಡರ ಕಣ್ಣು ಕಾಣುವುದಾಗ ಕಿವುಡರ ಕಿವಿ ತೆರೆಯುವುದಾಗ.
6 : ಜಿಗಿಯುವನು ಕುಂಟನು ಜಿಂಕೆಯಂತೆ ಹಾಡುವುದು ಮೂಕನ ನಾಲಿಗೆ ಹರ್ಷಗೀತೆ. ಒರತೆಗಳು ಒಡೆಯುವುವು ಅರಣ್ಯದಲಿ ನದಿಗಳು ಹುಟ್ಟಿಹರಿಯುವುವು ಒಣನೆಲದಲಿ.
7 : ಸರೋವರವಾಗುವುದಾ ಉರಿಗಾಡು ಬುಗ್ಗೆಯಾಗುವುದಾ ಬುವಿ ಬರಡು. ನರಿಗಳು ನಿವಾಸಿಸುವ ಗುಹೆಗಳು ಆಗುವುವು ಹುಲುಸಾದ ಹುಲ್ಲುಗಾವಲುಗಳು.
8 : ಅಲ್ಲಿರುವುದೊಂದು ರಾಜಮಾರ್ಗ ಅದೆನಿಸಿಕೊಳ್ಳುವುದು ಪವಿತ್ರಮಾರ್ಗ ನಡೆಯನು ಅದರೊಳು ಪಾಪಾತ್ಮನು; ಅದಾಗುವುದು ಜನರಿಗೆ ಮೀಸಲು ದಾರಿತಪ್ಪನು ಅಲ್ಲಿ ನಡೆಯುವ ಮೂಢನು.
9 : ಅಲ್ಲಿರದು ಸಿಂಹ ಸಿಂಹಿಣಿ, ಅಲ್ಲಿ ಸೇರದು ಕ್ರೂರ ಪ್ರಾಣಿ. ಕಾಣಸಿಗದಲ್ಲಿ ಇದಾವ ಹಾನಿ, ಪಾಪವಿಮುಕ್ತರೇ ನಡೆವರಲ್ಲಿ.
10 : ಹಿಂದಿರುಗುವರು ಸರ್ವೇಶ್ವರನಿಂದ ವಿಮೋಚನೆ ಪಡೆದವರು ಜಯಜಯಕಾರದೊಂದಿಗೆ ಸಿಯೋನನು ಸೇರುವರು. ನಿತ್ಯಾನಂದ ಸುಖವಿರುವುದು ಕಿರೀಟಪ್ರದವಾಗಿ ಸಿಗುವುದವರಿಗೆ ಹರ್ಷಾನಂದದ ಸವಿ ತೊಲಗುವುದು ದುಃಖದುಗುಡದ ಕಹಿ.
===============

ಕೀರ್ತನೆ 
ಕೀರ್ತನೆ 85:9-13 ಶ್ಲೋಕ.ಯೆಶಾಯ 35:4
ಶ್ಲೋಕ:ಅಗೋ ದೇವನು ತಾನೇ
ಬರುವನು ನಿಮ್ಮನು ರಕ್ಷಿಸಲು||

9 : ಭಯಭಕ್ತಿಯುಳ್ಳವರಿಗಾತನ ರಕ್ಷಣೆ ಸನ್ನಿಹಿತ / 
ಇದರಿಂದಾತನ ಮಹಿಮೆ ನಾಡಿಲ್ಲಿರುವುದು ನಿರುತ //

10 : ಪ್ರೀತಿಯೂ ಸತ್ಯವೂ ಒಂದನ್ನೊಂದು ಕೂಡಿರುವುವು / 
ನೀತಿಯೂ ಶಾಂತಿಯೂ ಒಂದನ್ನೊಂದು ಚುಂಬಿಸುವುವು //

11 : ಸತ್ಯತೆಯು ಹುಟ್ಟುವುದು ಭೂಮಿಯಿಂದ / 
ನೀತಿಯು ದೃಷ್ಟಿಸುವುದು ಗಗನದಿಂದ //

12 : ಪ್ರಭು ಕೊಟ್ಟೇ ತೀರುವನು ಒಳಿತನು / 
ನಮ್ಮ ನಾಡು ನೀಡುವುದು ಬೆಳೆಯನು //

13 : ನಡೆವುದು ಪ್ರಭುವಿನ ಮುಂದೆ ನೀತಿ / 
ಮಾಡುವುದು ಆತನ ಹೆಜ್ಜೆಗೆ ಹಾದಿ //
===================
ಶುಭಸಂದೇಶ

ಲೂಕ 5.17-26

17 : ಒಮ್ಮೆ ಯೇಸುಸ್ವಾಮಿ ಬೋಧನೆ ಮಾಡುತ್ತಾ ಇದ್ದಾಗ, ಫರಿಸಾಯರೂ ಧರ್ಮಶಾಸ್ತ್ರಜ್ಞರೂ ಅವರ ಹತ್ತಿರ ಕುಳಿತಿದ್ದರು. ಇವರು ಗಲಿಲೇಯ ಹಾಗೂ ಜುದೇಯ ಪ್ರಾಂತ್ಯದ ಊರೂರುಗಳಿಂದಲೂ ಜೆರುಸಲೇಮ್ ಪಟ್ಟಣದಿಂದಲೂ ಬಂದಿದ್ದರು. ಗುಣಪಡಿಸುವಂತಹ ದೈವಶಕ್ತಿ ಯೇಸುವಿನಲ್ಲಿತ್ತು.

18 : ಆಗ ಕೆಲವರು ಒಬ್ಬ ಪಾಶ್ರ್ವವಾಯು ರೋಗಿಯನ್ನು ಹಾಸಿಗೆಯ ಸಮೇತ ಹೊತ್ತುಕೊಂಡು ಅಲ್ಲಿಗೆ ಬಂದರು. ರೋಗಿಯನ್ನು ಒಳಕ್ಕೆ ತೆಗೆದುಕೊಂಡು ಹೋಗಿ ಯೇಸುವಿನ ಮುಂದೆಯೇ ಇಡಬೇಕೆಂದು ಪ್ರಯತ್ನಿಸಿದರು.
19 : ಆದರೆ ಜನಸಂದಣಿಯ ನಿಮಿತ್ತ ದಾರಿಮಾಡಲಾಗಲಿಲ್ಲ. ಆಗ ಅವರು ಮನೆಯ ಮೇಲೆ ಹತ್ತಿ, ಹೆಂಚುಗಳನ್ನು ತೆಗೆದು, ಅಲ್ಲಿಂದ ರೋಗಿಯನ್ನು ಹಾಸಿಗೆಯ ಸಹಿತ ಯೇಸುವಿನ ಮುಂದೆ ಇಳಿಸಿದರು.
20 : ಯೇಸು ಅವರ ವಿಶ್ವಾಸವನ್ನು ಮೆಚ್ಚಿ, “ತಮ್ಮಾ, ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ,” ಎಂದರು.
21 : ಇದನ್ನು ಕೇಳಿದ ಧರ್ಮಶಾಸ್ತ್ರಿಗಳೂ ಫರಿಸಾಯರೂ, “ದೇವದೂಷಣೆ ಆಡುತ್ತಿರುವ ಇವನಾರು? ದೇವರೊಬ್ಬರನ್ನು ಬಿಟ್ಟರೆ ಪಾಪಗಳನ್ನು ಕ್ಷಮಿಸಿ ಪರಿಹರಿಸಲು ಬೇರೆ ಯಾರಿಂದ ಸಾಧ್ಯ?” ಎಂದು ತಮ್ಮಲ್ಲೇ ಹೇಳಿಕೊಳ್ಳಲು ಆರಂಭಿಸಿದರು.
22 : ಯೇಸು ಅವರ ಆಲೋಚನೆಗಳನ್ನು ಗ್ರಹಿಸಿಕೊಂಡು, “ನೀವು ನಿಮ್ಮ ಮನಸ್ಸಿನಲ್ಲಿ ಆಲೋಚಿಸುತ್ತಾ ಇರುವುದೇನು?
23 : ‘ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ,’ ಎನ್ನುವುದು ಸುಲಭವೋ ಅಥವಾ ‘ಎದ್ದು ನಡೆ’ ಎನ್ನುವುದು ಸುಲಭವೋ?
24 : ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸಲು ನರಪುತ್ರನಿಗೆ ಅಧಿಕಾರ ಉಂಟೆಂದು ಈ ಮೂಲಕ ನಿಮಗೆ ಖಚಿತವಾಗಬೇಕು,” ಎಂದು ಹೇಳಿ, ಆ ಪಾಶ್ರ್ವವಾಯು ರೋಗಿಯ ಕಡೆ ನೋಡಿ, “ ‘ಏಳು, ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೊರಡು,’ ಎಂದು ನಿನಗೆ ಆಜ್ಞಾಪಿಸುತ್ತೇನೆ” ಎಂದರು.
25 : ತಕ್ಷಣವೇ ಅವರೆಲ್ಲರೂ ನೋಡುತ್ತಿದ್ದ ಹಾಗೆ ಅವನು ಎದ್ದು, ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು, ದೇವರನ್ನು ಸ್ತುತಿಸುತ್ತಾ ತನ್ನ ಮನೆಗೆ ಹೋದನು.
26 : ಎಲ್ಲರೂ ನಿಬ್ಬೆರಗಾಗಿ, ‘ನಾವು ಈ ದಿನ ಎಂಥ ಅಪೂರ್ವ ಕಾರ್ಯವನ್ನು ಕಂಡೆವು!’ ಎಂದು ಭಯಭಕ್ತಿಯಿಂದ ದೇವರನ್ನು ಕೊಂಡಾಡಿದರು
===================
ಚಿಂತನೆ
ಪಾಪ ವಿಮೋಚಕ ಯೇಸು
ಇಂದಿನ ಶುಭಸಂದೇಶದಲ್ಲಿ ಪ್ರಭುಕ್ತಿಸ್ತರು ಪಾರ್ಶ್ವವಾಯು ರೋಗಿಗೆ ದೈಹಿಕವಾಗಿ ಮಾತ್ರವಲ್ಲ ಪಾಪಗಳಿಂದಲೂ ಮುಕ್ತಿ ನೀಡುತ್ತಾರೆ. ನಾವೊ ನಮ್ಮಲ್ಲಿರುವ ಪಾಪಮಯ ಪ್ರವೃತ್ತಿ ಹಾಗೂ ಪಾಪಮಯ ಜೀವನದಿಂದಾಗಿ ಒಳ್ಳೆಯವರಾಗಿ ಬಾಳಲು ಕಷ್ಟಪಡುತ್ತಿದ್ದೇವೆ. ಇಂದಿನ ಆಧುನಿಕತೆಗೆ ಮಾರುಹೋಗಿ ಪ್ರತಿಯೊಬ್ಬ ಮಾನವನು ಕೂಡ ಪಾಪಪ್ರಜ್ಞೆಯನ್ನೇ ಕಳೆದುಕೊಂಡು ಜೀವಿಸುತ್ತಿದ್ದಾನೆ. ಇದಕ್ಕೆ ಕಾರಣ ಪ್ರಗತಿಯ ನಾಗಾಲೋಟ ಹಾಗೂ ದೇವರಲ್ಲಿ ಆಳವಾದ ವಿಶ್ವಾಸ ಇಲ್ಲದೆ ಇರುವುದು. ಪಾಪನಿವೇದನಾ ಸಂಸ್ಕಾರವು ಸಹ ಇಂದು ಸರಿಯಾದ ರೀತಿಯಲ್ಲಿ ಆಚರಿಸಲ್ಪಡುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಮನುಷ್ಯನಲ್ಲಿ ಮನುಷ್ಯತ್ವವೇ ಸತ್ತು ಹೋಗಿರುವುದು. ಆತ್ಮವಿಮರ್ಶೆಯನ್ನು ಮಾಡಲು ಸಹ ಹಿಂದೇಟು ಹಾಕಿದಾಗ ಅನೇಕ ಮಾನಸಿಕ, ಶಾರೀರಿಕ ಖಾಯಿಲೆಗಳಿಗೆ ತುತ್ತಾಗುತ್ತಿರುವುದು ಒಂದು ದುರಂತವೇ ಸರಿ. ಪ್ರಭುಯೇಸು ಪಾಪವಿಮೋಚಕರಾಗಿದ್ದಾರೆ. ಅವರಲ್ಲಿ ನಮ್ಮ ಪಶ್ಚಾತ್ತಾಪ ಭರಿತ ಹೃದಯವನ್ನು ಸಮರ್ಪಿಸಿ ಪಾಪಗಳಿಂದ ಮುಕ್ತಿ ಪಡೆಯೋಣ. 
===================

No comments:

Post a Comment