Thursday, 26 November 2020

ಅಕ್ಟೋಬರ್ 6, 2020 ಮಂಗಳವಾರ

 ಅಕ್ಟೋಬರ್ 6, 2020 ಮಂಗಳವಾರ                        [ಹಸಿರು]
ಸಂತ ಬ್ರೂನೋ, ಯಾಜಕ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಗಲಾತ್ಯರಿಗೆ 1.13-24
ಕೀರ್ತನೆ 139: 1-3, 13-15. ಶ್ಲೋಕ.24
ಪ್ರಭೂ, ನಡೆಸೆನ್ನನು ಆ ಸನಾತನ ಪಥದಲಿ
ಶುಭಸಂದೇಶ: ಲೂಕ 10.38-42
==================
ಮೊದಲನೇ ವಾಚನ
ಗಲಾತ್ಯರಿಗೆ 1.13-24
13 : ಹಿಂದೊಮ್ಮೆ ನಾನು ಯೆಹೂದ್ಯ ಮತಸ್ಥನಾಗಿದ್ದಾಗ ನನ್ನ ನಡತೆ ಹೇಗಿತ್ತೆಂದು ನೀವು ಚೆನ್ನಾಗಿ ಬಲ್ಲಿರಿ. ಆಗ ನಾನು ದೇವರ ಸಭೆಯನ್ನು ಕ್ರೂರವಾಗಿ ಹಿಂಸಿಸಿದೆ; ಅದನ್ನು ಧ್ವಂಸಮಾಡಲು ಪ್ರಯತ್ನಿಸಿದೆ.
14 : ಇದಲ್ಲದೆ, ನಾನು ನನ್ನ ಪೂರ್ವಜರ ಮತಸಂಪ್ರದಾಯಗಳಲ್ಲಿ ಅತ್ಯಧಿಕ ನಿಷ್ಠೆಯುಳ್ಳವನಾಗಿದ್ದೆ. ಯೆಹೂದ್ಯ ಮತಾಚರಣೆಯಲ್ಲಿ ಅನೇಕ ಸಮವಯಸ್ಕರಿಗಿಂತ ಎಷ್ಟೋ ಮುಂದಾಗಿದ್ದೆ.
15 : ಆದರೆ, ನಾನಿನ್ನೂ ತಾಯಿಯ ಗರ್ಭದಲ್ಲಿ ಇದ್ದಾಗಲೇ ದೇವರು ನನ್ನನ್ನು ತಮ್ಮ ಅನುಗ್ರಹದಿಂದ ಆರಿಸಿಕೊಂಡು ತಮ್ಮ ಸೇವೆಗೆ ಕರೆದರು.
16 : ನಾನು ಯೆಹೂದ್ಯರಲ್ಲದವರಿಗೆ ಶುಭಸಂದೇಶವನ್ನು ಸಾರಬೇಕೆಂದು ದೇವರು ತಮ್ಮ ಮಗನನ್ನು ನನಗೆ ಶ್ರುತಪಡಿಸಿದರು. ಆಗ ಸಲಹೆಗಾಗಿ ನಾನು ಯಾರ ಬಳಿಗೂ ಹೋಗಲಿಲ್ಲ.
17 : ನನಗಿಂತ ಮುಂಚಿತವಾಗಿ ಪ್ರೇಷಿತರಾದವರನ್ನು ಕಾಣಲೆಂದು ನಾನು ಜೆರುಸಲೇಮಿಗೂ ಹೋಗಲಿಲ್ಲ. ಬದಲಿಗೆ, ನೇರವಾಗಿ ಅರೇಬಿಯಾಕ್ಕೆ ಹೋದೆ. ಅಲ್ಲಿಂದ ದಮಸ್ಕಸ್ ನಗರಕ್ಕೆ ಹಿಂದಿರುಗಿದೆ.
18 : ಮೂರು ವರ್ಷಗಳ ನಂತರವೇ ಕೇಫನನ್ನು ಕಂಡು ಮಾತನಾಡಲು ಜೆರುಸಲೇಮಿಗೆ ಹೋದೆ; ಹದಿನೈದು ದಿನ ಆತನೊಂದಿಗೆ ತಂಗಿದ್ದೆ.
19 : ಆಗ, ಉಳಿದ ಪ್ರೇಷಿತರಲ್ಲಿ ಪ್ರಭುವಿನ ಸಹೋದರ ಯಕೋಬನಲ್ಲದೆ ಬೇರೆ ಯಾವ ಪ್ರೇಷಿತರನ್ನೂ ನಾನು ಕಾಣಲಿಲ್ಲ.
20 : ನಾನು ನಿಮಗೆ ಬರೆಯುವ ಸಂಗತಿಗಳು ಸುಳ್ಳಲ್ಲ ಎಂಬುದಕ್ಕೆ ದೇವರೇ ಸಾಕ್ಷಿ.
21 : ಅನಂತರ ನಾನು ಸಿರಿಯ ಮತ್ತು ಸಿಲಿಸಿಯ ಪ್ರಾಂತ್ಯಗಳಿಗೆ ಹೋದೆ.
22 : ಆಗ ಜುದೇಯ ಪಾಂತ್ಯದಲ್ಲಿದ್ದ ಕ್ರೈಸ್ತ ಸಭೆಗಳಿಗೆ ನನ್ನ ಪರಿಚಯವಾಗಿರಲಿಲ್ಲ.
23 : ‘ಹಿಂದೊಮ್ಮೆ ನಮ್ಮನ್ನು ಹಿಂಸಿಸುತ್ತಿದ್ದವನು, ತಾನು ನಾಶ ಮಾಡಲೆತ್ನಿಸಿದ ವಿಶ್ವಾಸವನ್ನೇ ಈಗ ಪ್ರಚಾರ ಮಾಡುತ್ತಿದ್ದಾನೆ’, ಎಂಬ ಸುದ್ದಿಯನ್ನು ಮಾತ್ರ ಕೇಳಿದ್ದರು.
24 : ಈ ಕಾರಣ ನನ್ನನ್ನು ಕುರಿತು ಅವರು ದೇವರನ್ನು ಕೊಂಡಾಡುತ್ತಿದ್ದರು.
===================
ಕೀರ್ತನೆ 
ಕೀರ್ತನೆ 139: 1-3, 13-15. ಶ್ಲೋಕ.24
ಪ್ರಭೂ, ನಡೆಸೆನ್ನನು ಆ ಸನಾತನ ಪಥದಲಿ
1 : ಪ್ರಭು, ಪರಿಶೋಧಿಸಿರುವೆ 
ನೀ ನನ್ನನು / 
ಅರಿತುಕೊಂಡಿರುವೆ 
ಅಂತರಂಗವನು //
2 : ನಾ ಕೂರುವುದೂ ಏಳುವುದೂ 
ನಿನಗೆ ಗೊತ್ತಿದೆ / 
ನನ್ನಾಲೋಚನೆ ದೂರದಿಂದಲೇ
ನಿನಗೆ ತಿಳಿದಿದೆ //
3 : ನನ್ನ ನಡೆಯನು, ನಿದ್ರೆಯನು 
ನೀ ಬಲ್ಲಾತ / 
ನನ್ನ ನಡತೆಯೆಲ್ಲವು ನಿನಗೆ 
ಸುಪರಿಚಿತ //
13 : ನನ್ನ ಅಂತರಂಗವನು 
ಉಂಟುಮಾಡಿದಾತ ನೀನು / 
ತಾಯಗರ್ಭದಲೆ ನನ್ನ 
ರೂಪಿಸಿದಾತ ನೀನು //
14 : ನಿನಗೆ ವಂದನೆ, 
ನೀ ನನ್ನ ಭಯಭಕ್ತಿಗೆ ಪಾತ್ರ / 
ನಿನ್ನ ಕೃತ್ಯಗಳು ಅದ್ಭುತಕರ
ಹಾಗೂ ವಿಚಿತ್ರ / 
ನನ್ನ ಬಗ್ಗೆ ನಿನಗಿರುವ ಪೂರ್ಣ 
ಅರಿವು ಸಮರ್ಥ //
 
15 : ನನ್ನ ಅಸ್ಥಿಪಂಜರವನು 
ರೂಪಿಸುವಾಗ / 
ತಾಯಗರ್ಭದೊಳು ಅಚ್ಚರದಿ 
ರಚಿಸುವಾಗ / 
ಗುಟ್ಟಾಗಿ ನಾನಲ್ಲಿ 
ಬೆಳೆಯುತ್ತಿದ್ದಾಗ / 
ಮರೆಯಾಗಿರಲಿಲ್ಲ ನಾನು 
ನಿನಗಾಗ //
===================
ಲೂಕ 10.38-42
38 : ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಪ್ರಯಾಣ ಮುಂದುವರಿಸಿ ಒಂದು ಹಳ್ಳಿಗೆ ಬಂದರು. ಅಲ್ಲಿ ಮಾರ್ತಳೆಂಬ ಮಹಿಳೆ ಅವರನ್ನು ತಮ್ಮ ಮನೆಗೆ ಆಮಂತ್ರಿಸಿದಳು.
39 : ಆಕೆಗೆ ಮರಿಯಳೆಂಬ ಸೋದರಿ ಇದ್ದಳು. ಈಕೆ ಪ್ರಭುವಿನ ಪಾದತಳದಲ್ಲಿ ಕುಳಿತುಕೊಂಡು ಅವರ ಬೋಧನೆಯನ್ನು ಆಲಿಸುತ್ತಿದ್ದಳು.
40 : ಮಾರ್ತಳಾದರೋ, ಅತಿಥಿಸತ್ಕಾರದ ಗಡಿಬಿಡಿಯಲ್ಲಿ ಇದ್ದಳು. ಅವಳು ಬಂದು, “ಪ್ರಭೂ, ನನ್ನ ಸೋದರಿ ಈ ಕೆಲಸವನ್ನೆಲ್ಲಾ ನನ್ನೊಬ್ಬಳಿಗೇ ಬಿಟ್ಟಿದ್ದಾಳೆ. ನೀವಿದನ್ನು ಗಮನಿಸಬಾರದೇ? ನನಗೆ ಸಹಾಯ ಮಾಡುವಂತೆ ಅವಳಿಗೆ ಹೇಳಿ,” ಎಂದಳು.
41 : ಯೇಸು ಆಕೆಗೆ ಪ್ರತ್ಯುತ್ತರವಾಗಿ, “ಮಾರ್ತಾ, ಮಾರ್ತಾ, ನೀನು ಅನಾವಶ್ಯ ಚಿಂತೆ ಪೇಚಾಟಗಳಿಗೆ ಒಳಗಾಗಿರುವೆ.
42 ಆದರೆ ಅಗತ್ಯವಾದುದು ಒಂದೇ. ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ. ಅದನ್ನು ಆಕೆಯಿಂದ ಕಸಿದುಕೊಳ್ಳಲಾಗದು,” ಎಂದರು.
===================
ಚಿಂತನೆ
ಮಾರ್ಥಳು ಅತಿಥಿ ಸತ್ಕಾರದಲ್ಲಿ ತನ್ನನ್ನೇ ತೊಡಗಿಸಿಕೊಂಡಿದ್ದು ತಪ್ಪಲ್ಲ ಆದರೆ ಅತಿಥಿ ಸತ್ಕಾರದ ಚಿಂತೆ ಪೇಚಾಟದಲ್ಲಿ ಅತಿಥಿಯನ್ನೇ ಮರೆತು ಹೋದಳು. ನಮ್ಮ ಬದುಕಿನ ಜಂಜಾಟದಲ್ಲಿ, ಚಿಂತೆ-ಪೇಚಾಟಗಳಲ್ಲಿ, ಹಬ್ಬ-ಹರಿದಿನದ ಸಿದ್ಧತೆಯ ಗಡಿಬಿಡಿಯಲ್ಲಿ, ನಮ್ಮ ಲೌಖಿಕ ಸುಖ-ಭೋಗ, ಸಂತೋಷ-ಸಂಭ್ರಮಗಳಲ್ಲಿ ಎಷ್ಟರ ಮಟ್ಟಿಗೆ ದೇವರು ಅವೆಲ್ಲವುಗಳ ಪ್ರಮುಖ ಭಾಗವಾಗಿರುತ್ತಾರೆ.  ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ ಎಂದು ಯೇಸು ನುಡಿದರೇ ವಿನಃ ಮಾರ್ಥಳು ಮಾಡುತ್ತಿರುವುದು ಸರಿಯಲ್ಲ, ಅದು ತಪ್ಪೆಂದು ಆಕೆಯನ್ನು ದೂಷಿಸಲಿಲ್ಲ. ನಾವು ಮಾರ್ಥಳಂತೆ ಸೇವೆ ಸಲ್ಲಿಸುವುದು ಮುಖ್ಯ ಆದರೆ ಆ ಸೇವೆಯಲ್ಲಿ ಸದುದ್ದೇಶವಿರಬೇಕಾದರೆ, ನಿಸ್ವಾರ್ಥ-ಸೂಕ್ಷತೆಗಳಿರಬೇಕಾದರೆ, ಪ್ರೀತಿಯಿಂದ ಕೂಡಿರಬೇಕಾದರೆ ಆ ಮರಿಯಳಂತೆ ನಾವು ಕೂಡ ಪ್ರಭುವಿನಿಂದ ಪ್ರೇರಣೆ, ಶಕ್ತಿ-ಸಾಮರ್ಥ್ಯಗಳನ್ನು ಪಡೆದುಕೊಳ್ಳಬೇಕಾಗಿದೆ.  
===================

No comments:

Post a Comment