ನವೆಂಬರ್ 1, 2020 ಭಾನುವಾರ, ಕನ್ನಡ ರಾಜ್ಯೋತ್ಸವ [ಬಿಳಿ]
ಸಕಲ ಸಂತರು, ಮಹೋತ್ಸವ
ಮೊದಲ ವಾಚನ: ಯೊವಾನ್ನನ ಪ್ರಕಟನೆ 7.2-4, 9-14
ಕೀರ್ತನೆ 24:1-6. ಶ್ಲೋಕ.6
ಇಂಥವರೇ ದೇವರ ದರ್ಶನಾಭ್ಯರ್ಥಿಗಳು
ಎರಡನೇ ವಾಚನ: 1 ಯೊವಾನ್ನ 3.1-3
ಶುಭಸಂದೇಶ: ಮತ್ತಾಯ 5.1-12
==================
ಮೊದಲನೇ ವಾಚನ
ಯೊವಾನ್ನನ ಪ್ರಕಟನೆ 7.2-4, 9-14
2 : ಆಗ ಪೂರ್ವದಿಕ್ಕಿನಿಂದ ಮತ್ತೊಬ್ಬ ದೇವದೂತನು ಏರಿಬಂದನು. ಅವನು ಜೀವಸ್ವರೂಪಿಯಾದ ದೇವರ ಮುದ್ರೆಯನ್ನು ಕೈಯಲ್ಲಿ ಹಿಡಿದಿದ್ದನು. ಅವನು ಭೂಮಿಗೂ ಸಮುದ್ರಕ್ಕೂ ಕೇಡನ್ನು ಮಾಡುವ ಅಧಿಕಾರವನ್ನು ಪಡೆದಿದ್ದ ನಾಲ್ಕು ಮಂದಿ ದೇವದೂತರಿಗೆ:
3 : “ನಮ್ಮ ದೇವರ ದಾಸರಿಗೆ ಹಣೆಯ ಮೇಲೆ ನಾವು ಮುದ್ರೆಯೊತ್ತುವ ತನಕ ಭೂಮಿಗಾಗಲಿ, ಸಮುದ್ರಕ್ಕಾಗಲಿ, ಇಲ್ಲವೇ ಮರಗಳಿಗಾಗಲಿ ಕೇಡನ್ನು ಮಾಡಬೇಡಿ,” ಎಂದು ಗಟ್ಟಿಯಾಗಿ ಕೂಗಿ ಹೇಳಿದನು.
4 : ಮುದ್ರೆಯೊತ್ತಿಸಿಕೊಂಡವರ ಸಂಖ್ಯೆ ನನಗೆ ಕೇಳಿಬಂತು. ಇಸ್ರಯೇಲರು ಪ್ರತಿಯೊಂದು ಕುಲದಲ್ಲಿ ಮುದ್ರೆಯೊತ್ತಿಸಿಕೊಂಡವರು ಒಂದು ಲಕ್ಷದ ನಲವತ್ತ ನಾಲ್ಕು ಸಾವಿರ ಮಂದಿ. ಅವರ ಬಿಡಿ ಸಂಖ್ಯೆ ಹೀಗಿತ್ತು:
9 : ಇದಾದ ಬಳಿಕ ನಾನು ಇನ್ನೊಂದು ದಿವ್ಯದರ್ಶನವನ್ನು ಕಂಡೆ: ಯಾರಿಂದಲೂ ಎಣಿಸಲಾಗದಷ್ಟು ಒಂದು ದೊಡ್ಡ ಜನಸಮೂಹವು ನೆರೆದಿತ್ತು. ಅವರು ಎಲ್ಲಾ ದೇಶ, ಭಾಷೆ, ಕುಲ, ಗೋತ್ರಗಳಿಂದ ಬಂದವರಾಗಿದ್ದರು. ಶ್ವೇತಾಂಬರರಾಗಿ ಸಿಂಹಾಸನದ ಮತ್ತು ಯಜ್ಞದ ಕುರಿಮರಿಯಾದಾತನ ಸಾನ್ನಿಧ್ಯದಲ್ಲಿ ನಿಂತಿದ್ದರು. ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದಿದ್ದರು.
10 : ಅವರು ಗಟ್ಟಿಯಾದ ಧ್ವನಿಯಿಂದ: “ಸಿಂಹಾಸನಾರೂಢರಾದ ದೇವರಿಂದ, ಬಲಿಯರ್ಪಿತರಾದ ಯಜ್ಞದ ಕುರಿಮರಿಯಿಂದ ಲಭಿಸುತ್ತದೆಮಗೆ ಜೀವೋದ್ಧಾರ,” ಎಂದು ಹಾಡಿದರು.
11 : ಆಗ ಸಭಾಪ್ರಮುಖರ ಮತ್ತು ನಾಲ್ಕು ಜೀವಿಗಳ ಸಮೇತ ದೇವದೂತರೆಲ್ಲರೂ ಸಿಂಹಾಸನದ ಸುತ್ತಲೂ ನಿಂತಿದ್ದರು. ಅವರೆಲ್ಲರೂ ಸಿಂಹಾಸನದ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿ,
12 : “ಆಮೆನ್, ಸ್ತುತಿಸ್ತೋತ್ರವೂ ಘನಮಾನವೂ ಜ್ಞಾನವೂ ಧನ್ಯವಾದವೂ ಶಕ್ತಿಯೂ ಪರಾಕ್ರಮವೂ ಸಲ್ಲಲಿ ಯುಗಯುಗಾಂತರಕ್ಕೂ ಆಮೆನ್,” ಎಂದು ಹಾಡುತ್ತಾ ದೇವರನ್ನು ಆರಾಧಿಸಿದರು.
13 : ಸಭಾಪ್ರಮುಖರಲ್ಲಿ ಒಬ್ಬನು, “ಶ್ವೇತಾಂಬರರಾದ ಇವರೆಲ್ಲರೂ ಯಾರು? ಎಲ್ಲಿಂದ ಬಂದರು?” ಎಂದು ನನ್ನನ್ನು ಪ್ರಶ್ನಿಸಿದನು.
14 : ಅದಕ್ಕೆ ನಾನು, “ಸ್ವಾವಿೂ ನೀವೇ ಬಲ್ಲಿರಿ”, ಎಂದು ಉತ್ತರಕೊಟ್ಟೆ. ಆಗ ಆತನು ನನಗೆ ಹೀಗೆಂದನು: “ಇವರು ಆ ಭೀಕರ ಹಿಂಸೆ ಬಾಧೆಯನ್ನು ಅನುಭವಿಸಿ ಬಂದವರು. ತಮ್ಮ ನಿಲುವಂಗಿಗಳನ್ನು ಯಜ್ಞದ ಕುರಿಮರಿಯ ರಕ್ತದಿಂದ ತೊಳೆದು ಬಿಳುಪಾಗಿಸಿಕೊಂಡಿದ್ದಾರೆ.
===================
ಕೀರ್ತನೆ
ಕೀರ್ತನೆ 24:1-6. ಶ್ಲೋಕ.6
ಇಂಥವರೇ ದೇವರ ದರ್ಶನಾಭ್ಯರ್ಥಿಗಳು
1 : ಪೊಡವಿಯೂ
ಅದರಲ್ಲಿರುವುದೆಲ್ಲವೂ ಪ್ರಭುವಿನದೇ /
ಜಗವೂ ಅದರ ಜೀವಜಂತುಗಳೆಲ್ಲವೂ
ಆತನದೇ //
2 : ಕಡಲನು
ತಳಪಾಯವನಾಗಿಸಿದವನು ಆತನೆ /
ಜಲರಾಶಿ ನಡುವೆ ಅದನು
ಸ್ಥಿರಗೊಳಿಸಿದವನಾತನೆ //
3 : ಪ್ರಭುವಿನ ಶಿಖರವನು
ಏರಬಲ್ಲವನಾರು? /
ಆ ನಿವಾಸದಲಿ ನಿಲ್ಲಲು
ಯೋಗ್ಯನಾರು? //
4 : ಅಂಥವನಿರಬೇಕು ಶುದ್ಧ ಹಸ್ತನು,
ಸುಮನಸ್ಕನು /
ಅನಾಚಾರಕೆ,
ಅಪಮಾಣಿಕತೆಗೆ ಒಲಿಯನವನು //
5 : ಲಭಿಸುವುದಾತನಿಗೆ
ಶುಭ ಪ್ರಭುವಿನಿಂದ /
ನೀತಿಯ ಸತ್ಫಲ
ರಕ್ಷಕ ದೇವನಿಂದ //
6 : ಇಂಥವರೆ ದೇವರ
ದರ್ಶನಾಭ್ಯರ್ಥಿಗಳು /
ಇಂಥವರೆ ಯಕೋಬ
ದೇವನ ಭಕ್ತಾದಿಗಳು //
================
ಎರಡನೇ ವಾಚನ
1 ಯೊವಾನ್ನ 3.1-3
1 : ನಾವು ದೇವರ ಮಕ್ಕಳು ಎನಿಸಿಕೊಂಡಿರಬೇಕಾದರೆ ಪಿತನು ನಮ್ಮನ್ನು ಎಷ್ಟಾಗಿ ಪ್ರೀತಿಸುತ್ತಾರೆಂಬುದನ್ನು ಗಮನಿಸಿರಿ. ನಿಜಕ್ಕೂ ನಾವು ದೇವರ ಮಕ್ಕಳೇ. ಲೋಕವು ಅವರನ್ನು ಅರಿತುಕೊಳ್ಳಲಿಲ್ಲವಾದ ಕಾರಣ ನಾವು ಎಂಥವರೆಂದು ಅದು ಅರಿತಿಲ್ಲ.
2 : ಪ್ರಿಯರೇ, ನಾವೀಗ ದೇವರ ಮಕ್ಕಳು. ಮುಂದೆ ನಾವು ಎಂಥವರಾಗುತ್ತೇವೆ ಎಂಬುದು ಇನ್ನೂ ವಿಷದವಾಗಿಲ್ಲ. ಆದರೆ ಕ್ರಿಸ್ತಯೇಸು ಪ್ರತ್ಯಕ್ಷವಾಗುವಾಗ ನಾವೂ ಅವರಂತೆಯೇ ಇರುತ್ತೇವೆಂದು ಬಲ್ಲೆವು. ಏಕೆಂದರೆ, ಅವರನ್ನು ನಾವು ಅವರ ಯಥಾರ್ಥ ರೂಪದಲ್ಲೇ ಕಾಣುತ್ತೇವೆ.
3 : ಕ್ರಿಸ್ತಯೇಸುವಿನಲ್ಲಿ ನಂಬಿಕೆ ನಿರೀಕ್ಷೆಯನ್ನಿಟ್ಟಿರುವ ಪ್ರತಿಯೊಬ್ಬನೂ ಅವರು ಶುದ್ಧರಾಗಿರುವಂತೆಯೇ ತನ್ನನ್ನು ಶುದ್ಧವಾಗಿಟ್ಟುಕೊಳ್ಳುತ್ತಾನೆ.
================
ಶುಭಸಂದೇಶ
ಮತ್ತಾಯ 5.1-12
1 : ಜನರ ದೊಡ್ಡ ಗುಂಪನ್ನು ಕಂಡು ಯೇಸುಸ್ವಾಮಿ ಒಂದು ಬೆಟ್ಟವನ್ನು ಹತ್ತಿ ಕುಳಿತುಕೊಂಡರು. ಅವರ ಶಿಷ್ಯರು ಸುತ್ತಲೂ ನೆರೆದರು.
2 : ಆಗ ಯೇಸು ಇಂತೆಂದು ಪ್ರಬೋಧಿಸಿದರು :
3 : ""ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು; ಸ್ವರ್ಗಸಾಮ್ರಾಜ್ಯ ಅವರದು.
4 : ದುಃಖಿಗಳು ಭಾಗ್ಯವಂತರು; ದೇವರು ಅವರನ್ನು ಸಂತೈಸುವರು.
5 : ವಿನಯಶೀಲರು ಭಾಗ್ಯವಂತರು; ದೇವರ ವಾಗ್ದತ್ತ ನಾಡಿಗೆ ಬಾಧ್ಯಸ್ಥರು ಅವರು.
6 : ನ್ಯಾಯನೀತಿಗಾಗಿ ಹಸಿದು ಹಾತೊರೆಯು ವವರು ಭಾಗ್ಯವಂತರು; ದೇವರು ಅವರಿಗೆ ತೃಪ್ತಿಯನ್ನೀಯುವರು.
7 : ದಯಾವಂತರು ಭಾಗ್ಯವಂತರು; ದೇವರ ದಯೆ ಅವರಿಗೆ ದೊರಕುವುದು.
8 : ನಿರ್ಮಲ ಹೃದಯಿಗಳು ಭಾಗ್ಯವಂತರು; ಅವರು ದೇವರನ್ನು ಕಾಣುವರು.
9 : ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು; ಅವರು ದೇವರ ಮಕ್ಕಳೆನಿಸಿಕೊಳ್ಳುವರು.
10 : ನ್ಯಾಯನೀತಿಯ ನಿಮಿತ್ತ ಹಿಂಸೆಯನ್ನು ತಾಳುವವರು ಭಾಗ್ಯವಂತರು; ಸ್ವರ್ಗಸಾಮ್ರಾಜ್ಯ ಅವರದು.""
11 : ""ನನ್ನ ಶಿಷ್ಯರು ನೀವಾದ್ದರಿಂದ ಜನರು ನಿಮ್ಮನ್ನು ಧಿಕ್ಕರಿಸುವರು, ಹಿಂಸಿಸುವರು, ಅನ್ಯಾಯವಾಗಿ ಇಲ್ಲಸಲ್ಲದ್ದನ್ನು ನಿಮ್ಮ ಮೇಲೆ ಹೊರಿಸುವರು; ಆಗ ನೀವು ಭಾಗ್ಯವಂತರು.
12 : ಅದಕ್ಕಾಗಿ ಹರ್ಷಿಸಿ ಆನಂದಪಡಿ; ಏಕೆಂದರೆ ಸ್ವರ್ಗದಲ್ಲಿ ನಿಮಗೆ ಸಿಗುವ ಪ್ರತಿಫಲ ಹಿರಿದು.
===================
ಚಿಂತನೆ
ಸಕಲ ಸಂತರ ಮಹೋತ್ಸವ
ಪೀಠಿಕೆ
=============
ಧರ್ಮಸಭೆಯಿಂದ ಗುರುತಿಸಲ್ಪಟ್ಟು ವಿಧ್ಯುಕ್ತವಾಗಿ ಘೋಷಿಸಲಾದ ಸಂತರು ಒಂದೆಡೆಯಾದರೆ, ಮತ್ತೊಂದೆಡೆ ಸರಳ ಸಜ್ಜನಿಕೆಯ ಜೀವನವನ್ನು ಜೀವಿಸಿ ಯಾರ ಗಮನಕ್ಕೂ ಬಾರದೆ, ಅಷ್ಟೇನೂ ಪ್ರಚಾರವಿಲ್ಲದೆ ಎಲೆಮರೆಯ ಕಾಯಿಗಳಂತೆ ತೆರೆಗೆ ಸರಿದುಹೋದವರ ಸಂಖ್ಯೆ ಅಪಾರ. ಅಂತಹ ಅಸಂಖ್ಯಾತರನ್ನು ಸನ್ಮಾನಿಸಿ ಗೌರವಿಸಲು ಧರ್ಮಸಭೆ ಸಕಲ ಸಂತರ ಮಹೋತ್ಸವವನ್ನು ಆಚರಿಸುತ್ತದೆ.
ಮೊದಲನೆಯ ವಾಚನ: ಪ್ರಕಟಣಾ ಗ್ರಂಥ 7:2-4;9-14
=============================
ಇಹಲೋಕದ ಬಾಳುವೆ ಮುಗಿದ ನಂತರ ಎಲ್ಲರೂ ದೇವರ ಮುಂದೆ ಬಂದು ನಿಲ್ಲಲೇಬೇಕು, ದೇವರ ತೀರ್ಪು ಕಟ್ಟಿಟ್ಟ ಬುತ್ತಿ. ಆದರೆ ನಾವು ಭಯಪಡಬೇಕಿಲ್ಲ ದೇವರಲ್ಲಿ ನಂಬಿಕೆಯಿಟ್ಟು ನಮ್ಮ ಜೀವನವನ್ನು ಪ್ರಾಮಾಣಿಕವಾಗಿ ಜೀವಿಸಿದಲ್ಲಿ ಖಂಡಿತವಾಗಿಯೂ ನಾವು ಅಲ್ಲಿ ಯೋಗ್ಯರೆನಿಸಿಕೊಳ್ಳಬಹುದು. ದೇವರ ಚಿತ್ತದಂತೆ ಯೋಗ್ಯ ಬಾಳುವೆ ನಡೆಸಿದ ಸರ್ವರನ್ನೂ ಅವರು ಆದರಿಸಿ ಸತ್ಕರಿಸುತ್ತಾರೆ, ಜಾತಿ, ಧರ್ಮ, ವರ್ಣವೆನ್ನದೆ ದೇವರ ಸಮ್ಮುಖದಲ್ಲಿ ನಿಲ್ಲುವ ಸಮಾನ ಅವಕಾಶ ಎಲ್ಲರಿಗೂ ಸಿಗುತ್ತದೆ ಎಂಬ ಭರವಸೆ ಈ ವಾಚನದಲ್ಲಿ ನಮಗೆ ದೊರಕುತ್ತದೆ.
ಎರಡನೆಯ ವಾಚನ: 1 ಯೊವಾನ್ನ 3:1-3
=========================
ಯಾರೇ ಆಗಲಿ ಒಂದೇ ದಿನದಲ್ಲಿ ಸಂತರಾಗಲಿ ಪಾಪಿಗಳಾಗಲಿ ಆಗುವುದಿಲ್ಲ. ಸಂತರಾಗುವುದು ಒಂದು ಸುದೀರ್ಘ ಹಾದಿ, ಇದೊಂದು ಪ್ರಕ್ರಿಯೆ. ಕ್ರಿಸ್ತಯೇಸುವನ್ನು ಅನುಸರಿಸಿ ನಡೆಯುವವರು ಕ್ರಿಸ್ತಯೇಸುವಿನಂತೆಯೇ ಆಗುತ್ತಾರೆ, ಕ್ರಿಸ್ತಯೇಸುವಿನಂತೆ ಪರಿಶುದ್ಧರಾಗಿ ಜೀವಿಸಿದವರಿಗೆ ಮಾತ್ರವೇ ದೇವರ ಮುಂದೆ ನಿಲ್ಲುವುದು ಸಾಧ್ಯ ಎಂಬುದನ್ನು ನಾವು ಇಂದಿನ ಎರಡನೆಯ ವಾಚನದಲ್ಲಿ ಓದಬಹುದು.
ಶುಭಸಂದೇಶ: ಮತ್ತಾಯ 5.1-12
=========================
ರಿಕ್ ವಾರೆನ್ ಎಂಬ ಲೇಖಕರು, “ನಾವು ದೇವರಿಂದ ಸೃಷ್ಟಿಸಲ್ಪಟ್ಟವರು ಮತ್ತು ದೇವರಿಗಾಗಿ ಸೃಷ್ಟಿಸಲ್ಪಟ್ಟವರು” ಎಂದು ಬರೆಯುತ್ತಾರೆ. ನಾವು ಎಲ್ಲಿಂದ ಬಂದಿದ್ದೇವೆಯೋ ಅಲ್ಲಿಗೇ ಹೋಗಿ ತಲುಪಬೇಕಿದೆ. ಆದರೆ ದೇವರು ನಮಗೆ ಬೇಕಾದದ್ದನ್ನು ಮಾಡುವ, ಬೇಕಿದ್ದಂತೆ ಜೀವಿಸುವ ಮುಕ್ತ ಸ್ವಾತಂತ್ರ್ಯವನ್ನು ನೀಡಿದ್ದಾರೆ. ನಮ್ಮ ಆಯ್ಕೆಗಳು ನಮ್ಮ ಜೀವನದ ದಿಕ್ಕನ್ನು ಮತ್ತು ತಲುಪಬೇಕಾದ ಗುರಿಯನ್ನು ನಿರ್ಧರಿಸುತ್ತವೆ. ಸಕಲ ಸಂತರ ಮಹೋತ್ಸವ ನಮ್ಮನ್ನು ಸ್ವರ್ಗಲೋಕದ ಕಡೆಗೆ ತಿರುಗುವಂತೆ ಮಾಡುತ್ತದೆ. ಸಂತರು ಅತಿಮಾನುಷ ಶಕ್ತಿಯನ್ನು ಹೊಂದಿದವರಲ್ಲ, ಅಸಾಧಾರಣರಲ್ಲ ಅವರು ನಮ್ಮಂತೆಯೇ ಜೀವನದಲ್ಲಿ ಏಳುಬೀಳುಗಳನ್ನು ಕಂಡವರೇ, ಶೋಧನೆ ಮತ್ತು ಸಂಕಷ್ಟಗಳನ್ನು ವಿಶ್ವಾಸ ಮತ್ತು ತಾಳ್ಮೆಯಿಂದ ಸಹಿಸಿಕೊಂಡು ಜೀವಿಸಿದವರು. ತಮ್ಮ ಜೀವಿತಾವಧಿಯಲ್ಲಿ ಶುಭಸಂದೇಶ ಮೌಲ್ಯಗಳ ನಿಮಿತ್ತ ಹಿಂಸೆಬಾಧೆಗಳನ್ನನುಭವಿಸಿದವರು, ಈ ಲೋಕದಿಂದ ತಿರಸ್ಕೃತರಾದವರು ದೇವರಿಂದ ಸಂಭಾವಿತರೆನಿಸಿಕೊಂಡವರು.
ಪ್ರಕಟಣಾ ಗ್ರಂಥದಲ್ಲಿ ಸಂತಯೊವಾನ್ನರು ಕಂಡ ದಿವ್ಯದರ್ಶನದ ದೃಶ್ಯಾವಳಿಯ ವಿವರಣೆ ಇಂದಿನ ವಾಚನದಲ್ಲಿದೆ ಮೊದಲನೆಯ ಹಂತದಲ್ಲಿ ಇಸ್ರಯೇಲ್ ಜನಾಂಗದ 12 ಕುಲಗಳ 1,44,000 ಮಂದಿಗೆ ದೇವದೂತನು ಮುದ್ರೆಯೊತ್ತುತ್ತಾನೆ. ತದನಂತರ ಶ್ವೇತವಸ್ತ್ರಧಾರಿಗಳಾದ ಯಜ್ಞದ ಕುರಿಮರಿ (ಕ್ರಿಸ್ತಯೇಸುವಿನ)ಯ ರಕ್ತದಿಂದ ತೊಳೆದುಕೊಂಡು ಶುದ್ಧರಾದ ಕ್ರಿಸ್ತಾನುಯಾಯಿಗಳ ದೊಡ್ಡ ಸಮೂಹವೊಂದು ಸ್ವರ್ಗೀಯ ಮಹಿಮೆಯನ್ನು ಹೊಂದುವುದನ್ನು ವರ್ಣಿಸಲಾಗಿದೆ. “ಇಕ್ಕಟ್ಟಾದ ಬಾಗಿಲಿನಿಂದಲೇ ಒಳಕ್ಕೆ ಹೋಗಿರಿ ಏಕೆಂದರೆ ವಿನಾಶಕ್ಕೆ ಒಯ್ಯುವ ಬಾಗಿಲು ಹಿರಿದು; ಅದರ ಮಾರ್ಗ ಸರಾಗ; ಅಮರ ಜೀವಕ್ಕೆ ಕೊಂಡೊಯ್ಯುವ ಮಾರ್ಗ ದುರ್ಗಮ, ಅದರ ಬಾಗಿಲು ಕಿರಿದು; ಅದನ್ನು ಗುರುತಿಸುವವರೂ ಕೆಲವರು” ಎನ್ನುವ ಪ್ರಭುಯೇಸು ಸ್ವರ್ಗಸಾಮ್ರಾಜ್ಯಕ್ಕೆ ಹೋಗುವ ಅಷ್ಟಸೂತ್ರಗಳನ್ನು ನಮಗೆ ನೀಡಿದ್ದಾರೆ. ಸಂತರೆನಿಸಿಕೊಂಡವರೆಲ್ಲರೂ ಈ ಸೂತ್ರಗಳನ್ನು ಅರಿತು ಅರಿಗಿಸಿಕೊಂಡರೆನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಕ್ರಿಸ್ತಯೇಸುವಿನ ಈ ಸೂತ್ರಗಳು ಲೌಕಿಕ ನಿಯಮಗಳಿಗೆ ವಿರುದ್ಧವಾದವು ಅಷ್ಟೆ.
ಈ ಲೋಕದ ದೃಷ್ಟಿಯಲ್ಲಿ ಬಡತನ ಒಂದು ಶಾಪ, ಆದರೆ ಸ್ವರ್ಗಲೋಕದಲ್ಲಿ ಆರ್ಥಿಕ ಮತ್ತು ಆತ್ಮಿಕ ಸರಳತೆ, ತೋರಿಕೆಯಿಲ್ಲದ, ಡಂಭಾಚಾರವಿಲ್ಲದ ಸರಳಜೀವನ ನಡೆಸಿದವರೆಗೆ ಮಾತ್ರವೇ ಪ್ರವೇಶ.
ಈ ಲೋಕ ದುಃಖಿಸುವವರ ಕಡೆಗೆ ನೋಡುವುದೇ ಕಡಿಮೆ, ಪ್ರತಿದಿನ ಸಾಯುವವರಿಗಾಗಿ ಅಳುವವರು ಇಲ್ಲಿ ಯಾರೂ ಇಲ್ಲ, ಆದರೆ ದೇವರು ಸ್ವತಃ ತಾವೇ ದುಃಖಿಗಳನ್ನು ಸಂತೈಸುತ್ತಾರೆ.
ಈ ಲೋಕ ‘ಬಲಾಢ್ಯರೇ ಪ್ರಬಲರು’ ಎನ್ನುತ್ತದೆ. ಆದರೆ ದೇವರ ದೃಷ್ಟಿಯಲ್ಲಿ ವಿನಯಶೀಲರೇ ವಿಜಯಶೀಲರು.
ಈ ಲೋಕದಲ್ಲಿ ನ್ಯಾಯನೀತಿಯನ್ನು ಗಾಳಿಗೆ ತೂರಿ ಯಶಸ್ಸಿನ ಏಣಿಯನ್ನು ಹತ್ತುವವರೇ ಹೆಚ್ಚು, ಆದರೆ ನ್ಯಾಯನೀತಿಗಾಗಿ ಶ್ರಮಿಸುವವರು ದೇವರಿಂದ ತೃಪ್ತಿಯನ್ನು ಪಡೆಯುತ್ತಾರೆ.
ಈ ಲೋಕದಲ್ಲಿ ಪರರ ಕಷ್ಟಕ್ಕೆ ಅಳುವವರಾರು? ಆದರೆ ದೇವರೆ ಪರರ ಕಷ್ಟಗಳಿಗಾಗಿ ಕಣ್ಣೀರು ಮಿಡಿಯುವ ದಯಾವಂತರನ್ನು ಯಾವಾಗಲೂ ಕಾದು ಕಾಪಾಡುತ್ತಾರೆ.
ಈ ಲೋಕದಲ್ಲಿ ಮೋಸ, ವಂಚನೆ, ಕುತಂತ್ರ, ಕಲ್ಮಷಗಳೇ ತುಂಬಿ ತುಳುಕುತ್ತವೆ. ಇವುಗಳ ನಡುವೆಯೂ ತಮ್ಮ ಹೃದಯ ಪಾವಿತ್ರ್ಯವನ್ನು ಕಾಪಾಡಿಕೊಂಡ ನಿರ್ಮಲ ಹೃದಯಿಗಳು ದೇವರ ಮುಂದೆ ನಿಲ್ಲಲು ಯೋಗ್ಯರೆನಿಸಿಕೊಳ್ಳುತ್ತಾರೆ.
ದ್ವೇಷ, ಪ್ರತೀಕಾರ, ಹಿಂಸೆ, ಅನಾಚಾರಗಳು ಇಂದು ಬದುಕುವ ಮಾರ್ಗವಾಗಿದೆ. ಹೊಡಿ, ಬಡಿ, ಕಡಿ ಎನ್ನುವ ಕಲಹ ಪೂರಿತ ಸಮಾಜದಲ್ಲಿ ಶಾಂತಿಗಾಗಿ ಶ್ರಮಿಸುವವರು ದೇವರ ಮಕ್ಕಳಾಗುತ್ತಾರೆ.
.
ಅನ್ಯಾಯ ಅಕ್ರಮಗಳಲ್ಲಿ ಭಾಗಿಯಾಗದಿದ್ದರೂ ಅವುಗಳನ್ನು ಖಂಡಿಸದೇ ತಟಸ್ಥರಾಗಿಯೇ ಉಳಿದರೆ ನಾವು ಸಹ ಆ ಅನ್ಯಾಯದಲ್ಲಿ ಪಾಲುದಾರರೇ. ನ್ಯಾಯನೀತಿಯ ನಿಮಿತ್ತ ಹಿಂಸೆಯನ್ನೂ ಎದುರಿಸಬಲ್ಲೆ ಎನ್ನುವವರು ಮಾತ್ರವೇ ಸ್ವರ್ಗಸಾಮ್ರಾಜದ ಮಕ್ಕಳಾಗುತ್ತಾರೆ.
“ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯ ಇಲ್ಲಿಸಲ್ಲುವರು ಅಲ್ಲಿ ಸಲ್ಲುವರಯ್ಯಾ, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು” ಎನ್ನುವ ಬಸವಣ್ಣನ ಮಾತು ಕೂಡ ಕ್ರಿಸ್ತಯೇಸುವಿನ ಅಷ್ಟಭಾಗ್ಯಗಳಿಗೆ ಹೊಂದಾಣಿಕೆಯಾಗುತ್ತದೆ. ಈ ಲೋಕದ ಜೀವನ ಮುಂದಿನ ಜೀವನಕ್ಕೆ ಸಾಗುವ ಪ್ರಯಾಣವಾಗಬೇಕೇ ಹೊರತು, ಇಲ್ಲಿಯೇ ನಿಲ್ಲುವ ನಿಲ್ದಾಣವಾಗಬಾರದು. ಇಹಲೋಕದ ಜೀವನ ಮುಂದಿನ ಸ್ವರ್ಗಲೋಕದ ಶಾಶ್ವತ ಬದುಕಿಗೆ ಸಿದ್ಧತೆಯಷ್ಟೇ ಎಂಬ ಅರಿವು ನಮಗಿರಬೇಕು. ಇದೇ ಪ್ರಜ್ಞೆಯಲ್ಲಿ ಬಾಳಿ ಬೆಳಗಿದ ಸಂತರ ಜೀವನ ನಮಗೆ ಆದರ್ಶವಾಗಲಿ.
=====================
ಚಿಂತನೆ – ಫಾ ಪೀಟರ್ ಸಿ,
ಬೆಂಗಳೂರು ಮಹಾ ಧರ್ಮಕ್ಷೇತ್ರ
====================="
No comments:
Post a Comment