ನವೆಂಬರ್ 2, 2020 ಸೋಮವಾರ [ನೇರಳೆ]
ಮೃತರಾದ ಸಕಲ ಭಕ್ತಾದಿಗಳ ಸ್ಮರಣೆ
ಮೊದಲ ವಾಚನ: ಸುಜ್ಞಾನ 3:1-9
ಕೀರ್ತನೆ: 23:1-6 ಶ್ಲೋಕ.1 [ಅಥವಾ] ಶ್ಲೋಕ.4
ಪ್ರಭು ಕುರಿಗಾಹಿಯಾಗಿರಲು ನನಗೆ ಕುಂದುಕೊರತೆಗಳೆಲ್ಲಿಯವು ಎನಗೆ?
ಎರಡನೇ ವಾಚನ: ರೋಮನರಿಗೆ 8 : 31-35, 37 -39
ಶುಭಸಂದೇಶ: ಲೂಕ 23:44 - 49 , 24 : 1- 5
==================
ಮೊದಲನೇ ವಾಚನ
===============
ಸುಜ್ಞಾನ 3:1-9
1 : “ಅವರು ಪೂರ್ಣ ದಹನಬಲಿಯಂತೆ ಅಂಗೀಕೃತರಾದರು”. ಸಜ್ಜನರ ಆತ್ಮಗಳಿರುವುವು ದೇವರ ಕೈಯೊಳು ಅವರನ್ನು ಮುಟ್ಟದು ಮಹಾಯಾತನೆ ಯಾವುದು.
2 : ಮಂದಮತಿಯ ಕಣ್ಣಿಗೆ ಸತ್ತವರಂತೆ ಅವರು ಕಾಣಿಸಿಕೊಂಡರು ಅವರು ಗತಿಸಿ ಹೋದುದು ಅವನಿಂದ ತೊಲಗಿದ ಕೇಡಂತಿತ್ತು.
3 : ಸಜ್ಜನರಿಗಾದ ಸಾವು ಮಹಾ ವಿಪತ್ತು ಎಂದವನಿಗೆ ತೋರಿತು ಅವರಾದರೋ ಶಾಂತಿಸಮಾಧಾನದಿಂದ ನೆಮ್ಮದಿಯಾಗಿರುವರು.
4 : ಮಾನವನ ದೃಷ್ಟಿಯಲ್ಲಿ ಅವರು ಕಂಡುಬಂದರು ಶಿಕ್ಷಿಸಲ್ಪಟ್ಟವರಂತೆ ಅವರಲ್ಲಾದರೋ ತುಂಬಿತ್ತು ಅಮರತ್ವದ ನಂಬಿಕೆ ನಿರೀಕ್ಷೆ.
5 : ಅವರು ಅನುಭವಿಸಿದ ಶಿಕ್ಷೆ ಅಲ್ಪ, ಹೊಂದುವ ಸೌಭಾಗ್ಯ ಅಪಾರ ಶೋಧಿಸಿದ ತರುವಾಯ ದೇವರಿಗೆ ಅವರು ಕಂಡುಬಂದರು ಯೋಗ್ಯಾರ್ಹ.
6 : ಶೋಧಿಸಿದರವರನು ಪುಟಕ್ಕಿಟ್ಟ ಚಿನ್ನದಂತೆ ಅಂಗೀಕೃತರಾದರು ಪೂರ್ಣ ದಹನಬಲಿಯಂತೆ.
7 : ಪ್ರಕಾಶಿಸುವರು ದೇವರನು ಸಂದರ್ಶಿಸುವ ಕಾಲದಲಿ ಹೊಳೆಯುವರು ಒಣಹುಲ್ಲಿನೊಳಗಿನ ಕಿಡಿಗಳೋಪಾದಿ.
8 : ನ್ಯಾಯತೀರಿಸುವರವರು ಜನಾಂಗಗಳಿಗೆ ದೊರೆತನ ಮಾಡುವರವರು ಜನಗಳ ಮೇಲೆ ದೇವರ ಪ್ರಜೆಗಳಾಗಿರುವರು ಸದಾಕಾಲಕೆ.
9 : ಸತ್ಯವನು ಅರಿವರು ದೇವರಲಿ ಭರವಸೆಯಿಡುವವರು ಅವರೊಂದಿಗೆ ಪ್ರೀತಿಯಿಂದ ಬಾಳುವರು ನಂಬಿಗಸ್ತರು. ದೇವರಿಂದ ಆಯ್ಕೆಯಾದವರಿಗಿರುವುದು ಕೃಪಾನುಗ್ರಹವು ದೇವರೇ ಕಾಪಾಡುವರು ಸಜ್ಜನರನು.
===================
ಕೀರ್ತನೆ
ಕೀರ್ತನೆ: 23:1-6 ಶ್ಲೋಕ.1 [ಅಥವಾ] ಶ್ಲೋಕ.4
ಪ್ರಭು ಕುರಿಗಾಹಿಯಾಗಿರಲು
ನನಗೆ ಕುಂದುಕೊರತೆಗಳೆಲ್ಲಿಯವು ಎನಗೆ?
1 : ನನಗೆ ಬೆಳಕು,
ನನಗೆ ರಕ್ಷೆ, ಪ್ರಭುವೆ /
ನಾನಾರಿಗೂ ಅಳುಕೆನು //
ನನ್ನ ಬಾಳಿಗಾಧಾರ ಪ್ರಭುವೆ /
ನಾನಾರಿಗೂ ಅಂಜೆನು //
2 : ಕೇಡು ಮಾಡಬಂದರೆನಗೆ
ಕೊಲೆಗಡುಕರು /
ಎಡವಿಬಿದ್ದರು,
ತಾವೇ ಅಳಿದುಹೋದರು //
3 : ಸೇನೆ ಸಮೇತ
ಶತ್ರು ಬಂದರೂ ಎದೆಗುಂದೆನು /
ಸಮರಕ್ಕೆರಗಿದರೂ ನಾ
ಭರವಸೆಯಿಂದಿರುವೆನು //
4 : ನಾನೊಂದನು ಕೋರಿದೆ
ಪ್ರಭುವಿನಿಂದ /
ನಾನದನ್ನೇ ನಿರೀಕ್ಷಿಸಿದೆ
ಆತನಿಂದ /
ವಾಸಿಸಬೇಕು ಜೀವಮಾನವೆಲ್ಲ
ನಾನಾತನ ಮಂದಿರದಲಿ /
ನಾ ತಲ್ಲೀನನಾಗಬೇಕು
ಅಲ್ಲಾತನ- ಪ್ರಸನ್ನತೆಯಲಿ //
5 : ಕೇಡುಕಾಲದಲ್ಲಿ
ಅವಿತಿಸಿಡುವನು ನನ್ನನ್ನು ತನ್ನ ಗುಡಾರದಲಿ /
ಇರಿಸುವನು ಮರೆಯಾಗಿ
ಗರ್ಭಗುಡಿಯಲಿ,
ಸುರಕ್ಷಿತ ಶಿಖರದಲಿ //
6 : ಸುತ್ತಲು ನೆರೆದಿಹ
ಶತ್ರುಗಳ ನಡುವೆ ತಲೆಯೆತ್ತಿ ನಡೆವೆನು /
ದೇವಾಲಯದೊಳು ಜಯಜಯ
ಘೋಷ ದೊಡನೆ
ಬಲಿಗಳನರ್ಪಿಸುವೆನು /
ಪ್ರಭುವಿಗೆ ಹಾಡುವೆನು,
ವಾದ್ಯ ನುಡಿಸುತ ಕೊಂಡಾಡುವೆನು //
===================
ಎರಡನೇ ವಾಚನ
ರೋಮನರಿಗೆ 8 : 31-35, 37 -39
31 : ಹೀಗಿರುವಲ್ಲಿ ನಾವು ಏನು ಹೇಳೋಣ? ದೇವರೇ ನಮ್ಮ ಪರ ಇರುವಾಗ ನಮ್ಮನ್ನು ವಿರೋಧಿಸುವವರು ಯಾರು?
32 : ದೇವರು ತಮ್ಮ ಸ್ವಂತ ಪುತ್ರನನ್ನೇ ನಮ್ಮೆಲ್ಲರಿಗಾಗಿ ಕೊಡಲು ಹಿಂಜರಿಯಲಿಲ್ಲ. ತಮ್ಮ ಪುತ್ರನನ್ನೇ ಬಲಿದಾನವಾಗಿ ಅರ್ಪಿಸಿದ ದೇವರು ಮತ್ತೇನನ್ನು ತಾನೇ ನಮಗೆ ವರದಾನವಾಗಿ ಕೊಡದಿರಲಾರರು?
33 : ದೇವರೇ ಆರಿಸಿಕೊಂಡವರ ಮೇಲೆ ಯಾರು ತಾನೇ ದೋಷಾರೋಪಣೆ ಮಾಡಬಲ್ಲರು? ದೇವರೇ ಅವರನ್ನು ನಿರ್ದೋಷಿಗಳೆಂದು ನಿರ್ಣಯಿಸಿರುವಾಗ ಅವರನ್ನು ದೋಷಿಗಳೆಂದು ನಿರ್ಣಯಿಸುವವರು ಯಾರು?
34 : ಪ್ರಾಣತ್ಯಾಗ ಮಾಡಿದ್ದಲ್ಲದೆ ಪುನರುತ್ಥಾನ ಹೊಂದಿದ ಕ್ರಿಸ್ತಯೇಸುವೇ ದೇವರ ಬಲಪಾಶ್ರ್ವದಲ್ಲಿದ್ದುಕೊಂಡು ನಮ್ಮ ಪರವಾಗಿ ಬಿನ್ನಯಿಸುತ್ತಿದ್ದಾರೆ.
35 : ಕ್ರಿಸ್ತಯೇಸುವಿನ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಯಾರಿಂದ ಸಾಧ್ಯ? ಕಷ್ಟ-ಸಂಕಟ, ಇಕ್ಕಟ್ಟು-ಬಿಕ್ಕಟ್ಟು, ಹಿಂಸೆ ಬಾಧೆ ಇವುಗಳಿಂದ ಸಾಧ್ಯವೆ? ಇಲ್ಲ. ಹಸಿವು ನೀರಡಿಕೆ, ನಗ್ನಸ್ಥಿತಿ, ಆಪತ್ತು-ವಿಪತ್ತು, ಖಡ್ಗ-ಕಠಾರಿಗಳಿಂದ ಸಾಧ್ಯವೆ? ಎಂದಿಗೂ ಇಲ್ಲ.
37 : ನಮ್ಮನ್ನು ಪ್ರೀತಿಸಿದ ಯೇಸುಕ್ರಿಸ್ತರ ಮುಖಾಂತರ ಇವೆಲ್ಲವುಗಳಲ್ಲಿಯೂ ನಾವು ಪೂರ್ಣ ಜಯಶಾಲಿಗಳಾಗುತ್ತೇವೆ.
38 : ಸಾವಾಗಲಿ ಜೀವವಾಗಲಿ, ದೇವದೂತರಾಗಲಿ ದುರಾತ್ಮರಾಗಲಿ, ಈಗಿನ ಸಂತತಿಗಳೇ ಆಗಲಿ, ಭವಿಷ್ಯದ ಆಗುಹೋಗುಗಳೇ ಆಗಲಿ, ಯಾವ ಶಕ್ತಿಗಳೇ ಆಗಲಿ ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ತೋರಿಬಂದ ದೈವಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲಾರವು.
39 : ಅಂತೆಯೇ, ಮೇಲಣ ಲೋಕವಾಗಲಿ, ಕೆಳಗಣ ಲೋಕವಾಗಲಿ, ಸೃಷ್ಟಿಸಮಸ್ತಗಳಲ್ಲಿ ಯಾವುದೇ ಆಗಲಿ, ಆ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಇದು ನಿಶ್ಚಯ.
===============
ಶುಭಸಂದೇಶ
ಲೂಕ 23:44 - 49 , 24 : 1- 5
44 : ಆಗ ಸುಮಾರು ನಡುಮಧ್ಯಾಹ್ನ. ಆಗಿನಿಂದ ಮೂರು ಗಂಟೆಯವರೆಗೂ ಸೂರ್ಯನು ಕಾಂತಿಹೀನನಾದನು; ನಾಡಿನಲ್ಲೆಲ್ಲಾ ಕತ್ತಲೆ ಕವಿಯಿತು.
45 : ಮಹಾದೇವಾಲಯದ ತೆರೆಯು ಇಬ್ಭಾಗವಾಗಿ ಸೀಳಿಹೋಯಿತು.
46 : ಯೇಸುಸ್ವಾಮಿ, “ಪಿತನೇ, ನನ್ನಾತ್ಮವನ್ನು ನಿಮ್ಮ ಕೈಗೊಪ್ಪಿಸುತ್ತೇನೆ,” ಎಂದು ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು.
47 : ನಡೆದುದನ್ನು ಕಂಡ ಶತಾಧಿಪತಿ ದೇವರನ್ನು ಹೊಗಳುತ್ತಾ, “ಈ ಮನುಷ್ಯ ಖಂಡಿತವಾಗಿ ಸತ್ಪುರುಷನೇ ಸರಿ,” ಎಂದನು.
48 : ಈ ದೃಶ್ಯವನ್ನು ನೋಡಲು ಕೂಡಿದ್ದ ಜನರೆಲ್ಲರು ಅಲ್ಲಿ ನಡೆದುದನ್ನು ನೋಡಿ ದುಃಖದಿಂದ ಎದೆಬಡಿದುಕೊಳ್ಳುತ್ತಾ ಹಿಂದಿರುಗಿದರು.
49 : ಯೇಸುವಿನ ಪರಿಚಿತರೆಲ್ಲರು ಹಾಗೂ ಗಲಿಲೇಯದಿಂದ ಹಿಂಬಾಲಿಸಿ ಬಂದಿದ್ದ ಮಹಿಳೆಯರು ದೂರದಲ್ಲಿ ನಿಂತುಕೊಂಡು ಇದೆಲ್ಲವನ್ನು ನೋಡುತ್ತಿದ್ದರು.
1 : ಭಾನುವಾರ ಮುಂಜಾನೆ ಆ ಮಹಿಳೆಯರು ತಾವು ಸಿದ್ಧಮಾಡಿದ್ದ ಸುಗಂಧ ದ್ರವ್ಯಗಳನ್ನು ತೆಗೆದುಕೊಂಡು ಸಮಾಧಿಯ ಬಳಿಗೆ ಬಂದರು.
2 : ಸಮಾಧಿಯ ದ್ವಾರಕ್ಕೆ ಮುಚ್ಚಿದ್ದ ಕಲ್ಲು ಅಲ್ಲಿಂದ ಉರುಳಿ ಬಿದ್ದಿತ್ತು.
3 : ಒಳಕ್ಕೆ ಪ್ರವೇಶಿಸಿ ನೋಡಿದಾಗ ಪ್ರಭು ಯೇಸುವಿನ ಪಾರ್ಥಿವ ಶರೀರ ಕಾಣಲಿಲ್ಲ.
4 : ಅವರು ತಬ್ಬಿಬ್ಬಾಗಿ ಅಲ್ಲೇ ನಿಂತರು. ಆಗ ತೇಜೋಮಯವಾದ ಉಡುಪನ್ನು ಧರಿಸಿದ್ದ ಇಬ್ಬರು ವ್ಯಕ್ತಿಗಳು ಫಕ್ಕನೆ ಅಲ್ಲೇ ಕಾಣಿಸಿಕೊಂಡರು.
5 : ಮಹಿಳೆಯರು ಭಯಭ್ರಾಂತರಾದರು. ಅವರ ದೃಷ್ಟಿ ನೆಲನಾಟಿತು. ಆಗ ಆ ವ್ಯಕ್ತಿಗಳು, “ಸಜೀವವಾಗಿರುವವರನ್ನು ಸತ್ತವರ ಮಧ್ಯೆ ಹುಡುಕುವುದೇನು? ಅವರು ಇಲ್ಲಿಲ್ಲ; ಪುನರುತ್ಥಾನ ಹೊಂದಿದ್ದಾರೆ.
===============
ಚಿಂತನೆ
ಜೀವನ ದೇವರ ಮಹದ್ಭುತ ಕೊಡುಗೆ. ಅದು ಸಾರ್ಥಕವಾಗಿ ದೇವರಿಗೂ ಮಾನವರಿಗೂ ಮೆಚ್ಚಿಗೆಯಾಗಬೇಕಾದರೆ ’ದೇವರು ನೀಡಿರುವ ಆಜ್ಞೆಗಳನ್ನು ಹೃದಯದಲ್ಲಿಟ್ಟು ಧ್ಯಾನಿಸಿ ಪಾಲಿಸಬೇಕು. ಅದು ನಮಗೆ ದೀರ್ಘಾಯುಸ್ಸನ್ನು ತರುತ್ತದೆ’ (ಸುಜ್ಞಾನ ೩: ೧) ಹಾಗೂ ಈ ಲೋಕದ ಜೀವನ ಅಂತ್ಯವಾದಾಗ ನಮ್ಮ ಆತ್ಮಗಳು ದೇವರ ಬಳಿ ಸೇರುತ್ತವೆ. ಅಂಥವರು ಪಡೆಯುವರು ಶಾಂತಿ ಸಮಾಧಾನ. ಮಾನವನಿಗೆ ಮರಣ ಅಂತ್ಯವಲ್ಲ. ಅದು ನವ ಜೀವನದ ಉಗಮ. ಅದು ದೇವರ ಉಚಿತ ಕೊಡುಗೆ. ಆ ಉನ್ನತ ಸ್ಥಿತಿಯನ್ನು ಮೃತ ವಿಶ್ವಾಸಿಗಳು ತಲುಪಲು ಹಲವರಿಗೆ ನಮ್ಮ ತ್ಯಾಗ ಹಾಗೂ ಪ್ರಾರ್ಥನೆ ಅವಶ್ಯಕ. ಅದನ್ನು ವರ್ಷಕ್ಕೊಮ್ಮೆಯಾದರೂ ಕಾರ್ಯಗತಗೊಳಿಸಲು ಪವಿತ್ರ ಧರ್ಮಸಭೆಯ ಸದಸ್ಯರೆಲ್ಲರೂ, ನಮಗಿಂತ ಮುಂಚಿತವಾಗಿ ಸ್ವರ್ಗದೆಡೆ ಪಯಣಿಸಿರುವ ಸಕಲ ವಿಶ್ವಾಸಿಗಳನ್ನು ಸ್ಮರಿಸಿ ಅವರಿಗಾಗಿ ಪ್ರಾರ್ಥಿಸಿ ಅವರ ಅಳಿದುಳಿದ ಪಾಪಗಳನ್ನು ಕ್ಷಮಿಸಿ ಅವರಿಗೆ ಸ್ವರ್ಗಭಾಗ್ಯವನ್ನು ನೀಡುವಂತೆ ನಿವೇದಿಸಲು ಧರ್ಮಸಭೆ ಕರೆ ನೀಡುತ್ತದೆ.
ನಮ್ಮ ನೆರೆಹೊರೆಯವರನ್ನು ಪ್ರೀತಿಸಿ ಅವರಿಗೆ ನಮ್ಮ ದಿನನಿತ್ಯದ ಜೀವನದ ಆಗುಹೋಗುಗಳಲ್ಲಿ ನೆರವಾಗುವುದಾದರೆ ಅದಕ್ಕೆ ದೇವರು ಅಪಾರವಾದ ಸಂಭಾವನೆಯನ್ನು ನೀಡುತ್ತಾರೆ ಎಂದು ಇಂದಿನ ಶುಭಸಂದೇಶ ಭರವಸೆ ನೀಡುತ್ತದೆ. ನಮ್ಮ ನೆರೆಹೊರೆಯವರಿಗೆ ನೆರವಾಗುವುದೆಂದರೆ, ಅದನ್ನು ನಾವು ದೇವರಿಗೆ ಮಾಡಿದಂತೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಶುದ್ಧೀಕರಣ ಸ್ಥಳದಲ್ಲಿರುವ ಆತ್ಮಗಳಿಗೆ ಸಂತೃಪ್ತಿಯಾಗಬೇಕಾದರೆ ನಮ್ಮ ಸಹೋದರ ಸಹೋದರಿಯರು ಸಂತೃಪ್ತರಾಗಬೇಕು. ಆಗ ನಾವು ಮಾಡುವ ಪ್ರಾರ್ಥನೆ ದಾನಧರ್ಮಗಳು ಫಲಪ್ರದವಾಗುತ್ತವೆ.
===================
No comments:
Post a Comment