Friday, 4 December 2020

ನವೆಂಬರ್ 24, 2020 ಮಂಗಳವಾರ

 ನವೆಂಬರ್ 24, 2020 ಮಂಗಳವಾರ                        [ಕೆಂಪು]
ಸಂತ ಆಂಡ್ರ್ಯೂ, ದುಂಗ್ಲಾಕ್, ಯಾಜಕ ಮತ್ತು ಸಂಗಡಿಗರು, ರಕ್ತಸಾಕ್ಷಿಗಳು (ಸ್ಮರಣೆ)
ಮೊದಲ ವಾಚನ: ಯೊವಾನ್ನನ ಪ್ರಕಟನೆ 14.14-19
ಕೀರ್ತನೆ 96:10-11, 12-13. ಶ್ಲೋಕ.13
ಪ್ರಭು ಧರೆಗೆ ನ್ಯಾಯ ತೀರಿಸಲು ಬಂದೇ ಬರುವರು ಖರೆಯಾಗಿ
ಶುಭಸಂದೇಶ: ಲೂಕ 21.5-11
==================
ಮೊದಲನೇ ವಾಚನ
ಯೊವಾನ್ನನ ಪ್ರಕಟನೆ 14.14-19
14 : ನಂತರ ನನ್ನ ಕಣ್ಣಿಗೆ ಒಂದು ಬಿಳಿಯ ಮೋಡ ಕಾಣಿಸಿತು. ಆ ಮೋಡದ ಮೇಲೆ ನರಪುತ್ರನಂಥ ವ್ಯಕ್ತಿಯೊಬ್ಬನು ಕುಳಿತಿದ್ದನು. ಆತನ ತಲೆಯ ಮೇಲೆ ಚಿನ್ನದ ಕಿರೀಟವಿತ್ತು; ಕೈಯಲ್ಲಿ ಹರಿತವಾದ ಕುಡುಗೋಲಿತ್ತು.
15 : ಇನ್ನೊಬ್ಬ ದೇವದೂತನು ದೇವಮಂದಿರದಿಂದ ಹೊರಗೆ ಬಂದನು. ಈತನು ಮೋಡದ ಮೇಲೆ ಕುಳಿತಿದ್ದ ಅವನನ್ನು ಉದ್ದೇಶಿಸಿ, “ಭೂಮಿಯ ಫಸಲು ಮಾಗಿದೆ, ಕೊಯ್ಲಿನ ಕಾಲ ಬಂದಿದೆ. ನಿನ್ನ ಕುಡುಗೋಲನ್ನು ತೆಗೆದು ಕೊಯಿಲು ಮಾಡಲು ಆರಂಭಿಸು”, ಎಂದು ಗಟ್ಟಿಯಾಗಿ ಕೂಗಿ ಹೇಳಿದನು.
16 : ಆಗ ಮೋಡದ ಮೇಲೆ ಕುಳಿತಿದ್ದವನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಬೀಸಿದನು. ಭೂಮಿಯ ಕೊಯಿಲು ಮುಗಿಯಿತು.
17 : ಮಗದೊಬ್ಬ ದೇವದೂತನು ಸ್ವರ್ಗದ ದೇವಮಂದಿರದಿಂದ ಹೊರಗೆ ಬಂದನು. ಆತನ ಕೈಯಲ್ಲೂ ಹರಿತವಾದ ಕುಡುಗೋಲು ಇತ್ತು.
18 : ಬೆಂಕಿಯ ಮೇಲೆ ಅಧಿಕಾರ ಪಡೆದಿದ್ದ ಒಬ್ಬ ದೇವದೂತನು, ಆಗ ಬಲಿಪೀಠದ ಬಳಿಯಿಂದ ಬಂದನು. ಈತ ಕೈಯಲ್ಲಿ ಹರಿತವಾದ ಕುಡುಗೋಲನ್ನು ಹಿಡಿದಿದ್ದ ದೇವದೂತನನ್ನು ಉದ್ದೇಶಿಸಿ, “ನಿನ್ನ ಹರಿತವಾದ ಕುಡುಗೋಲನ್ನು ಕಳುಹಿಸು, ಭೂಮಿಯ ದ್ರಾಕ್ಷಾಫಲಗಳು ಪೂರ್ಣವಾಗಿ ಮಾಗಿವೆ; ಆ ಗೊಂಚಲುಗಳನ್ನು ಕೊಯ್ಯಬೇಕಾಗಿದೆ”, ಎಂದು ಕೂಗಿ ಹೇಳಿದನು.
19 : ಆ ದೇವದೂತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಬೀಸಿ ದ್ರಾಕ್ಷಿಯ ಗೊಂಚಲುಗಳನ್ನು ಕೊಯ್ದನು; ಅವುಗಳನ್ನು ದೇವರ ರೋಷವೆಂಬ ದ್ರಾಕ್ಷಿಯ ದೊಡ್ಡ ಆಲೆಗೆ ಎಸೆದನು.
===================
ಕೀರ್ತನೆ 
ಕೀರ್ತನೆ 96:10-11, 12-13. ಶ್ಲೋಕ.13
ಶ್ಲೋಕ: ಪ್ರಭು ಧರೆಗೆ ನ್ಯಾಯ ತೀರಿಸಲು 
           ಬಂದೇ ಬರುವರು ಖರೆಯಾಗಿ
10 : ಪ್ರಭು ರಾಜನೆಂದು ಸಾರಿರಿ ರಾಷ್ಟ್ರಗಳಿಗೆ / 
ಕದಲದ ಸ್ಥಿರತೆಯನು ಇತ್ತಿಹನು ಧರೆಗೆ /
ನ್ಯಾಯವಾದ ತೀರ್ಪು ಕೊಡುವನು ಜನಾಂಗಕೆ //|
11 : ಹರ್ಷಿಸಲಿ ಆಕಾಶವು, ಸಂತೋಷಿಸಲಿ ಭೂಲೋಕವು /
      ಗರ್ಜಿಸಲಿ ಸಮುದ್ರವು ಮತ್ತು ಅದರೊಳಿರುವುದೆಲ್ಲವು //
12 : ಉಲ್ಲಾಸಿಸಲಿ ಹೊಲಗದ್ದೆಗಳು, ಪೈರುಪಚ್ಚೆಗಳು /
       ಹರ್ಷಧ್ವನಿಗೈಯಲಿ ಕಾಡಿನ ಫಲವೃಕ್ಷಗಳು //
13 : ಪ್ರಭು ಧರೆಗೆ ನ್ಯಾಯತೀರಿಸಲು
      ಬಂದೇ ಬರುವನು ಖರೆಯಾಗಿ /
       ಜಗಕು, ಜನತೆಗು ತೀರ್ಪಿಸುವನು
      ನೀತಿನಿಯಮಾನುಸಾರವಾಗಿ //
===================
ಶುಭಸಂದೇಶ
ಲೂಕ 21.5-11
5 : “ಈ ಮಹಾದೇವಾಲಯವು ಅಂದವಾದ ಕಲ್ಲುಗಳಿಂದಲೂ ಅಮೂಲ್ಯವಾದ ಕೊಡುಗೆಗಳಿಂದಲೂ ಎಷ್ಟು ಅಲಂಕೃತವಾಗಿದೆ!” ಎಂದು ಕೆಲವರು ಮಾತನಾಡುತ್ತಿದ್ದರು.
6 : ಆಗ ಯೇಸು, “ಇವುಗಳನ್ನು ನೀವು ನೋಡುತ್ತಿದ್ದೀರಲ್ಲವೆ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದು; ಎಲ್ಲವನ್ನೂ ಕೆಡವಿಹಾಕುವ ಕಾಲವೊಂದು ಬರುವುದು,” ಎಂದರು.
7 : “ಗುರುವೇ, ಇದು ಸಂಭವಿಸುವುದು ಯಾವಾಗ? ಇದೀಗಲೆ ಸಂಭವಿಸಲಿದೆ ಎಂದು ತಿಳಿಸುವ ಪೂರ್ವಸೂಚನೆ ಯಾವುದು?” ಎಂದು ಕೆಲವರು ಕೇಳಿದರು.
8 : ಅದಕ್ಕೆ ಯೇಸುಸ್ವಾಮಿ, “ನೀವು ಮೋಸಹೋಗದಂತೆ ಜಾಗರೂಕರಾಗಿರಿ. ಅನೇಕರು ‘ನಾನೇ ಆತ, ನಾನೇ ಆತ,’ ಎನ್ನುತ್ತಾ ನನ್ನ ಹೆಸರನ್ನೇ ಇಟ್ಟುಕೊಂಡು ಬಂದು, ‘ಕಾಲವು ಸಮೀಪಿಸಿಬಿಟ್ಟಿತು,’ ಎಂದು ಹೇಳುತ್ತಾರೆ. ಅವರನ್ನು ಹಿಂಬಾಲಿಸಬೇಡಿ.
9 : ಸಮರ ಸಂಕಲಹಗಳ ಸುದ್ದಿ ಬಂದಾಗ ದಿಗಿಲುಗೊಳ್ಳಬೇಡಿ; ಇವೆಲ್ಲವೂ ಮೊದಲು ಸಂಭವಿಸಲೇಬೇಕು. ಆದರೂ ಅಂತ್ಯವು ಕೂಡಲೇ ಬರುವುದಿಲ್ಲ,” ಎಂದರು.
10 : ಅದೂ ಅಲ್ಲದೆ ಯೇಸು ಇಂತೆಂದರು: “ಜನಾಂಗಕ್ಕೆ ವಿರುದ್ಧವಾಗಿ ಜನಾಂಗ, ರಾಷ್ಟ್ರಕ್ಕೆ ವಿರುದ್ಧವಾಗಿ ರಾಷ್ಟ್ರ ಯುದ್ಧಕ್ಕಿಳಿಯುವುವು;
11 : ಭೀಕರ ಭೂಕಂಪಗಳಾಗುವುವು; ಕ್ಷಾಮಡಾಮರಗಳು ತಲೆದೋರುವುವು; ಭಯಂಕರ ಘಟನೆಗಳೂ ಬಾಹ್ಯಾಕಾಶದಲ್ಲಿ ಅಪೂರ್ವ ಸೂಚನೆಗಳೂ ಕಾಣಿಸಿಕೊಳ್ಳುವುವು.
===================
ಚಿಂತನೆ
ಕ್ರಿ.ಪೂ. 28-64ರ ತನಕ ಅರಸ ಹೆರೋದನು ಮಹಾದೇವಾಲಯದ ಜೀರ್ಣೋದ್ಧಾರ ಕಾರ್ಯ ಕೈಗೊಂಡು ದೇವಾಲಯವನ್ನು ಸುಂದರಗೊಳಿಸುತ್ತಾನೆ. ಈ ದೇವಾಲಯ ರೋಮ್ ಸಾಮ್ರಾಜ್ಯದಲ್ಲೇ ಅತಿ ದೊಡ್ಡ ಕಟ್ಟಡವಾಗಿತ್ತು. ಪ್ರಾಚೀನ ಜಗತ್ತಿನ 7 ಆದ್ಭುತಗಳಲ್ಲಿ ಇದು ಒಂದಾಗಿತ್ತು. ಯೇಸುವಿನ ಬಹಿರಂಗ ಹಾಗೂ ಪ್ರಬೋಧನ ಕಾಲದಲ್ಲಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿತ್ತು. ಇಸ್ರೆಯೇಲರ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕೇಂದ್ರವೂ ಅದು ಆಗಿತ್ತು. ಇಸ್ರೆಯೇಲರ ಬದುಕಲ್ಲಿ ಈ ಮಹಾದೇವಾಲಯವು ಬಹಳಷ್ಟು ಪ್ರಾಮುಖ್ಯವನ್ನುಪಡೆದಿತ್ತು. ಇಂತಹ ದೇವಾಲಯದ ಅಂತ್ಯದ ಕುರಿತು ಯೇಸು ಇಂದು ಮುಂತಿಳಿಸುತ್ತಾರೆ. ಫ್ಲಾವಿಯುಸ್ ಜೋಸೇಪುಸ್ ಪ್ರಕಾರ ರೋಮನ್ನರು ಕ್ರಿ.ಶ. 70ರಲ್ಲಿ ಈ ಮಂದಿರವನ್ನು ಸಂಪೂರ್ಣ ನಾಶಮಾಡುತ್ತಾರೆ. ದೇವಾಲಯದ ನಾಶವು ದೇವರ ನ್ಯಾಯತೀರ್ಪಿನ ಮುನ್ಸೂಚನೆಯಾಗಿದೆ.
===================




No comments:

Post a Comment