Friday, 4 December 2020

ನವೆಂಬರ್ 23, 2020 ಸೋಮವಾರ

 ನವೆಂಬರ್ 23, 2020 ಸೋಮವಾರ                        [ಹಸಿರು]
ಸಂತ ಕ್ಲೆಮೆಂಟ್ 1, ವಿಶ್ವಗುರು ಮತ್ತು ರಕ್ತಸಾಕ್ಷಿ (ಐಚ್ಛಿಕ ಸ್ಮರಣೆ)
ಸಂತ ಕೊಲುಂಬಾನ್, ಮಠಾಧಿಪತಿ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಯೊವಾನ್ನನ ಪ್ರಕಟನೆ 14.1-5
ಕೀರ್ತನೆ 24:1-6 ಶ್ಲೋಕ.6
ಇಂಥವರೇ ದೇವರ ದರ್ಶನಾಭ್ಯರ್ಥಿಗಳು
ಶುಭಸಂದೇಶ: ಲೂಕ 21.1-4
==================
ಮೊದಲನೇ ವಾಚನ
ಯೊವಾನ್ನನ ಪ್ರಕಟನೆ 14.1-5
1 : ಅನಂತರ ಸಿಯೋನ್ ಬೆಟ್ಟದ ಮೇಲೆ ಯಜ್ಞದ ಕುರಿಮರಿಯಾದಾತನು, ನಿಂತಿರುವುದನ್ನು ಕಂಡೆ. ಆತನ ಸಂಗಡ ಒಂದು ಲಕ್ಷದ ನಲವತ್ತನಾಲ್ಕು ಸಾವಿರ ಮಂದಿ ಇದ್ದರು. ಇವರು ತಮ್ಮ ಹಣೆಯ ಮೇಲೆ ಯಜ್ಞದ ಕುರಿಮರಿಯ ಮತ್ತು ಆತನ ಪಿತನ ನಾಮಾಂಕಿತವನ್ನು ಬರೆಸಿಕೊಂಡಿದ್ದರು.
2 : ಇದಲ್ಲದೆ, ಸ್ವರ್ಗದಿಂದ ಮಹಾಧ್ವನಿಯೊಂದು ಕೇಳಿಸಿತು. ಅದು ಭೋರ್ಗರೆಯುವ ಜಲ ಪ್ರವಾಹದಂತೆಯೂ ದೊಡ್ಡ ಗುಡುಗಿನ ಗರ್ಜನೆಯಂತೆಯೂ ಇತ್ತು. ನಾವು ಕೇಳಿದಂಥ ಧ್ವನಿ ಕಿನ್ನರಿಯನ್ನು ನುಡಿಸುತ್ತಿರುವ ವಾದ್ಯಗಾರರ ಸ್ವರದಂತಿತ್ತು.
3 : ಒಂದು ಲಕ್ಷದ ನಲವತ್ತ ನಾಲ್ಕು ಸಾವಿರ ಜನರು ಸಿಂಹಾಸನದ ಸಾನ್ನಿಧ್ಯದಲ್ಲಿಯೂ ನಾಲ್ಕು ಜೀವಿಗಳ ಮುಂದೆಯೂ ಸಭಾಪ್ರಮುಖರ ಎದುರಿನಲ್ಲಿಯೂ ನಿಂತು ಒಂದು ಹೊಸಗೀತೆಯನ್ನು ಹಾಡುತ್ತಿದ್ದರು. ಇಡೀ ಮಾನವಕುಲದವರಲ್ಲಿ ವಿಮೋಚನೆಯನ್ನು ಹೊಂದಿದವರು ಇವರೇ. ಇವರನ್ನುಳಿದು ಬೇರೆ ಯಾರಿಂದಲೂ ಆ ಹಾಡನ್ನು ಕಲಿಯಲಾಗಲಿಲ್ಲ.
4 : ಇವರು ಸ್ತ್ರೀಸಂಸರ್ಗದಿಂದ ಮಲಿನರಾಗದವರು; ಕನ್ಯೆಯರಂತೆ ಕಳಂಕರಹಿತರು; ಇವರು ಯಜ್ಞದ ಕುರಿಮರಿ ಹೋದೆಡೆಯಲ್ಲೆಲ್ಲಾ ಹಿಂಬಾಲಿಸುವವರು; ದೇವರಿಗೂ ಯಜ್ಞದ ಕುರಿಮರಿಗೂ ಅರ್ಪಿತವಾದ ಪ್ರಥಮ ಫಲದಂತೆ ಮಾನವಕುಲದವರಲ್ಲಿ ವಿಮೋಚನೆಯನ್ನು ಹೊಂದಿದವರು ಇವರು.
5 : ಸುಳ್ಳು ಮಾತು ಅವರ ಬಾಯಿಂದ ಬರುವುದಿಲ್ಲ; ಅವರು ನಿರ್ದೋಷಿಗಳು. 
===================
ಕೀರ್ತನೆ 
ಕೀರ್ತನೆ 24:1-6 ಶ್ಲೋಕ.6
ಶ್ಲೋಕ:ಇಂಥವರೇ ದೇವರ ದರ್ಶನಾಭ್ಯರ್ಥಿಗಳು||
1 : ಪೊಡವಿಯೂ ಅದರಲ್ಲಿರುವುದೆಲ್ಲವೂ ಪ್ರಭುವಿನದೇ / 
     ಜಗವೂ ಅದರ ಜೀವಜಂತುಗಳೆಲ್ಲವೂ ಆತನದೇ //
2 : ಕಡಲನು ತಳಪಾಯವನಾಗಿಸಿದವನು ಆತನೆ / 
ಜಲರಾಶಿ ನಡುವೆ ಅದನು ಸ್ಥಿರಗೊಳಿಸಿದವನಾತನೆ //
3 : ಪ್ರಭುವಿನ ಶಿಖರವನು ಏರಬಲ್ಲವನಾರು? / 
ಆ ನಿವಾಸದಲಿ ನಿಲ್ಲಲು ಯೋಗ್ಯನಾರು? //
4 : ಅಂಥವನಿರಬೇಕು ಶುದ್ಧ ಹಸ್ತನು, ಸುಮನಸ್ಕನು / 
     ಅನಾಚಾರಕೆ, ಅಪಮಾಣಿಕತೆಗೆ ಒಲಿಯನವನು //
5 : ಲಭಿಸುವುದಾತನಿಗೆ ಶುಭ ಪ್ರಭುವಿನಿಂದ / 
ನೀತಿಯ ಸತ್ಫಲ ರಕ್ಷಕ ದೇವನಿಂದ //
6 : ಇಂಥವರೆ ದೇವರ ದರ್ಶನಾಭ್ಯರ್ಥಿಗಳು / 
ಇಂಥವರೆ ಯಕೋಬ ದೇವನ ಭಕ್ತಾದಿಗಳು //
===================
ಶುಭಸಂದೇಶ
ಲೂಕ 21.1-4
1 : ದೇವಾಲಯದ ಕಾಣಿಕೆಯ ಪೆಟ್ಟಿಗೆಯಲ್ಲಿ ಧನವಂತರು ತಮ್ಮ ಕಾಣಿಕೆಯನ್ನು ಹಾಕುತ್ತಿದ್ದುದನ್ನು ಯೇಸುಸ್ವಾಮಿ ಗಮನಿಸಿದರು.
2 : ಅಷ್ಟರಲ್ಲಿ ಒಬ್ಬ ಬಡವಿಧವೆ ಅಲ್ಲಿಗೆ ಬಂದು, ತಾಮ್ರದ ಚಿಕ್ಕ ನಾಣ್ಯಗಳೆರಡನ್ನು ಕಾಣಿಕೆಯಾಗಿ ಹಾಕಿದಳು.
3 : ಅದನ್ನು ಕಂಡ ಯೇಸು, “ಈ ಬಡವಿಧವೆ ಅವರೆಲ್ಲರಿಗಿಂತಲೂ ಹೆಚ್ಚಾಗಿ ಅರ್ಪಿಸಿದಳೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ.
4 : ಅವರೆಲ್ಲರು ತಮ್ಮ ಅಪರಿಮಿತ ಐಶ್ವರ್ಯದಿಂದ ಕಾಣಿಕೆಯಿತ್ತರು; ಈಕೆಯಾದರೋ, ತನ್ನ ಕಡುಬಡತನದಲ್ಲೂ ತನಗಿದ್ದ ಜೀವನಾಧಾರವನ್ನೆಲ್ಲಾ ಕೊಟ್ಟುಬಿಟ್ಟಳು,” ಎಂದರು.
===================
ಚಿಂತನೆ
ಯೇಸು ತಮ್ಮ ಶಿಷ್ಯರಿಗೆ ಫರಿಸಾಯರ ಮತ್ತು ಧರ್ಮಶಾಸ್ತ್ರಿಗಳ ಕಪಟತನವನ್ನು ಮತ್ತು ಡಂಭಾಚಾರವನ್ನು ವರ್ಣಿಸಿದ ಬಳಿಕ ದೇವಾಲಯಕ್ಕೆನ ಹೋಗಿ ಕಾಣಿಕೆ ಪೆಟ್ಟಿಗೆ ಕಾಣುವಂತೆ ಕುಳಿತು ಕೊಳ್ಳುತ್ತಾರೆ. ಯೇಸು ಹಣ ಹಾಕುವವರನ್ನು ನೋಡಲು ಕೂರಲಿಲ್ಲ. ಹಲವಾರು ಜನ ಕಾಣಿಕೆ ಪೆಟ್ಟಿಗೆಯಲ್ಲಿ ಕಾಣಿಕೆ ಹಾಕುತ್ತಿರುವುದು ಯೇಸುವಿನ ಕಣ್ಣಿಗೆ ಬಿತ್ತು. ಬಡವಿಧವೆಯ ತನ್ನ ಬಳಿ ಇದ್ದ 2 ತಾಮ್ರದ ನಾಣ್ಯಗಳನ್ನು ಹಾಕುತ್ತಾಳೆ. ಆ `ಬಡವಿಧವೆ’ಗೆ ಈ ಎರಡು ತಾಮ್ರದ ನಾಣ್ಯಗಳು ಬಹಳ ಬೆಲೆಯುಳ್ಳವು. ಆದರೆ ಅವಳು ಅದ್ಯಾವುದನ್ನೂ ಲೆಕ್ಕಿಸದೆ ದೇವರಿಗೆ ಕಾಣಿಕೆಯಾಗಿ ಕೊಟ್ಟುಬಿಡುತ್ತಾಳೆ. ಇತರರು ತಮ್ಮ ಅಪರಿಮಿತ ಐಶ್ವರ್ಯದಿಂದ ಕಾಣಿಕೆ ನೀಡಿದರೆ ಬಡ ವಿಧವೆಯು ತನ್ನ ಸಮಸ್ತವನ್ನು ಅರ್ಪಿಸಿದಳು. ನಾನು ಎಷ್ಟು ನೀಡಿದೆ ಎನ್ನುವುದಕ್ಕಿಂತ ಎಷ್ಟು ಕಳೆದುಕೊಂಡೆ ಎಂಬುದು ಮುಖ್ಯ. ಆ ಬಡ ಮಹಿಳೆಯಂತೆ ನಾವು ಉದಾರಿಗಳಾಗಬೇಕು ಮತ್ತು ನಮ್ಮನ್ನೇ ಸಂಪೂರ್ಣವಾಗಿ ದೇವರಿಗೆ ಅರ್ಪಿಸಬೇಕೆಂದೇ ಆವರ ಆದೇಶ.
===================


No comments:

Post a Comment