Friday, 4 December 2020

ನವೆಂಬರ್ 27, 2020 ಶುಕ್ರವಾರ

 ನವೆಂಬರ್ 27, 2020 ಶುಕ್ರವಾರ                        [ಹಸಿರು]
ಮೊದಲ ವಾಚನ: ಯೊವಾನ್ನನ ಪ್ರಕಟನೆ 20.1-4, 11 - 21.2
ಕೀರ್ತನೆ 84:2-5, 7. ಶ್ಲೋಕ.ಯೊವಾನ್ನನ ಪ್ರಕಟನೆ 21:3
ಇಗೋ ಮಾನವರ ಮಧ್ಯೆಯೇ ಇದೆ ದೇವಾಲಯ
ಶುಭಸಂದೇಶ: ಲೂಕ 21.29-33
==================
ಮೊದಲನೇ ವಾಚನ
ಪ್ರಕಟನೆ 20.1-4, 11 - 21.2
1 : ತರುವಾಯ ದೇವದೂತನೊಬ್ಬನು ಸ್ವರ್ಗದಿಂದ ಇಳಿದು ಬಂದುದನ್ನು ಕಂಡೆ. ಆತನ ಕೈಯಲ್ಲಿ ಪಾತಾಳದ ಬೀಗದ ಕೈ ಮತ್ತು ದೊಡ್ಡ ಸರಪಣಿ ಇದ್ದವು.
2 : ಪಿಶಾಚಿಯೂ ಸೈತಾನನೂ ಆಗಿರುವ ಘಟಸರ್ಪವನ್ನು, ಅಂದರೆ ಪುರಾತನ ಸರ್ಪವನ್ನು, ಆತನು ಹಿಡಿದು ಒಂದು ಸಾವಿರ ವರ್ಷಗಳ ಕಾಲ ಬಂಧನದಲ್ಲಿಟ್ಟನು.
3 : ಆ ಒಂದು ಸಾವಿರ ವರ್ಷಗಳ ಕಾಲದವರೆಗೆ, ಅದು ಜನಾಂಗಗಳನ್ನು ಮರುಳುಗೊಳಿಸದಂತೆ ದೇವದೂತನು ಸೈತಾನನನ್ನು ಪಾತಾಳಕ್ಕೆ ದಬ್ಬಿ, ಬಾಗಿಲು ಮುಚ್ಚಿ, ಅದಕ್ಕೆ ಮುದ್ರೆ ಹಾಕಿದನು. ಆ ಸಾವಿರ ವರ್ಷಗಳ ಕಾಲ ಮುಗಿದ ಮೇಲೆ ಅವನಿಗೆ ಸ್ವಲ್ಪ ಕಾಲ ಬಿಡುಗಡೆ ದೊರೆಯುವುದು.
4 : ಬಳಿಕ ಸಿಂಹಾಸನಗಳನ್ನು ಕಂಡೆ. ಅವುಗಳ ಮೇಲೆ ಕುಳಿತಿದ್ದವರಿಗೆ ತೀರ್ಪು ಕೊಡುವ ಅಧಿಕಾರವನ್ನು ಕೊಡಲಾಗಿತ್ತು. ಇದಲ್ಲದೆ, ಕ್ರಿಸ್ತೇಸುವಿನ ಪರವಾಗಿ ಸಾಕ್ಷಿಕೊಟ್ಟು ದೇವರ ವಾಕ್ಯದ ಪ್ರಚಾರಕ್ಕಾಗಿ ತಲೆತೆತ್ತ ಜೀವಾತ್ಮಗಳನ್ನು ಕಂಡೆ. ಇವರು ಆ ಮೃಗವನ್ನಾಗಲಿ, ಅದರ ವಿಗ್ರಹವನ್ನಾಗಲಿ ಪೂಜಿಸಿದವರಲ್ಲ; ತಮ್ಮ ಹಣೆಗಳ ಮೇಲಾಗಲಿ, ಕೈಗಳ ಮೇಲಾಗಲಿ ಅದರ ಗುರುತಿನ ಹಚ್ಚೆಯನ್ನೂ ಚುಚ್ಚಿಸಿಕೊಂಡವರಲ್ಲ. ಇವರು ಜೀವಂತರಾಗಿ ಕ್ರಿಸ್ತೇಸುವಿನೊಡನೆ ಒಂದು ಸಾವಿರ ವರ್ಷಗಳು ಆಳುವರು.
11 : ಅನಂತರ ಶ್ವೇತವರ್ಣದ ಒಂದು ಮಹಾ ಸಿಂಹಾಸನವನ್ನು ಕಂಡೆ. ಅದರಲ್ಲಿ ಒಬ್ಬರು ಆಸೀನರಾಗಿದ್ದರು. ಅವರ ಸನ್ನಿಧಿಯಿಂದ ಭೂಮ್ಯಾಕಾಶಗಳು ತಮ್ಮ ಇರುವಿಕೆಯೇ ಇಲ್ಲದಂತೆ ಕಣ್ಮರೆಯಾಗಿ ಹೋದವು.
12 : ಇದಲ್ಲದೆ, ಮೃತರಾಗಿದ್ದ ಹಿರಿಯ ಕಿರಿಯರೆಲ್ಲರೂ ಸಿಂಹಾಸನದ ಸಾನ್ನಿಧ್ಯದಲ್ಲಿ ನಿಂತಿರುವುದನ್ನು ಕಂಡೆ. ಆಗ ಪುಸ್ತಕಗಳನ್ನು ತೆರೆಯಲಾಯಿತು. ಅನಂತರ ಮತ್ತೊಂದು ಪುಸ್ತಕವನ್ನು ತೆರೆಯಲಾಯಿತು. ಅದು ಜೀವಬಾಧ್ಯರ ಪಟ್ಟಿಯುಳ್ಳ ಪುಸ್ತಕ. ಆ ಪುಸ್ತಕದಲ್ಲಿ ಬರೆದಿದ್ದ ಪ್ರಕಾರ ಅವರವರ ಕೃತ್ಯಗಳಿಗೆ ತಕ್ಕಂತೆ ಮೃತರಿಗೆ ನ್ಯಾಯತೀರ್ಪು ಕೊಡಲಾಯಿತು.
13 : ಸಮುದ್ರವು ತನ್ನಲ್ಲಿದ್ದ ಮೃತರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ ತಮ್ಮ ವಶದಲ್ಲಿದ್ದ ಮೃತರನ್ನು ಒಪ್ಪಿಸಿದವು; ಅವರಲ್ಲಿ ಪ್ರತಿಯೊಬ್ಬನಿಗೂ ಅವನವನ ಕೃತ್ಯಗಳಿಗೆ ತಕ್ಕಂತೆ ನ್ಯಾಯತೀರ್ಪು ಆಯಿತು.
14 : ಅನಂತರ ಮೃತ್ಯುವನ್ನೂ ಪಾತಾಳವನ್ನೂ ಅಗ್ನಿಸರೋವರಕ್ಕೆ ಎಸೆಯಲಾಯಿತು. ಆ ಅಗ್ನಿಸರೋವರವೇ ಎರಡನೆಯ ಮರಣ.
15 : ಯಾರ ಯಾರ ಹೆಸರು ಜೀವಬಾಧ್ಯರ ಪಟ್ಟಿಯಲ್ಲಿ ಲಿಖಿತವಾಗಿಲ್ಲವೋ ಅಂಥವರನ್ನು ಅಗ್ನಿ ಸರೋವರಕ್ಕೆ ಎಸೆಯಲಾಯಿತು.
1 : ತರುವಾಯ ನೂತನ ಆಕಾಶ ಮಂಡಲವನ್ನೂ ನೂತನ ಭೂಮಂಡಲವನ್ನೂ ಕಂಡೆ. ಮೊದಲಿದ್ದ ಆಕಾಶಮಂಡಲವೂ ಮೊದಲಿದ್ದ ಭೂಮಂಡಲವೂ ಕಣ್ಮರೆಯಾಗಿ ಹೋದವು. ಸಮುದ್ರವು ಇನ್ನಿಲ್ಲವಾಯಿತು.
2 : ಇದಲ್ಲದೆ, ಪವಿತ್ರ ನಗರವಾದ ನೂತನ ಜೆರುಸಲೇಮ್ ಸ್ವರ್ಗದಿಂದಲೂ ದೇವರ ಸನ್ನಿಧಿಯಿಂದಲೂ ಕೆಳಗಿಳಿದು ಬರುವುದನ್ನು ಕಂಡೆ. ಅದು ಮದುಮಗನನ್ನು ಎದುರುಗೊಳ್ಳುವುದಕ್ಕಾಗಿ ಅಲಂಕೃತಳಾದ ಮದುವಣಗಿತ್ತಿಯಂತೆ ಶೃಂಗಾರಮಯವಾಗಿತ್ತು.
===================
ಕೀರ್ತನೆ 
ಕೀರ್ತನೆ 84:2-5, 7. ಶ್ಲೋಕ.ಯೊವಾನ್ನನ ಪ್ರಕಟನೆ 21:3
ಶ್ಲೋಕ:ಇಗೋ ಮಾನವರ 
            ಮಧ್ಯೆಯೇ ಇದೆ ದೇವಾಲಯ||
2 : ಹಂಬಲಿಸಿ ಸೊರಗಿಹೋಗಿದೆ ಎನ್ನ ಮನ / 
ಕಾಣಬೇಕೆಂದು ಪ್ರಭುವಿನ ಪ್ರಾಂಗಣ //
3 : ಸ್ವಾಮಿ ದೇವ, ಎನ್ನರಸ, ಸ್ವರ್ಗಸೇನಾಧೀ ಶ್ವರ / 
ದೊರಕಿದೆ ಗುಬ್ಬಿಗೆ ಗೂಡು ನಿನ್ನ ವೇದಿಕೆಯ ಹತ್ತಿರ / 
ಪಾರಿವಾಳಕ್ಕು ಅಲ್ಲೇ ಇದೆ ಮರಿಯಿಡಲು ಆಗರ //
4 : ನಿನ್ನ ಮಂದಿರದಲಿ ವಾಸಿಸುವವರು ಧನ್ಯರು / 
ನಿರಂತರವು ನಿನ್ನ ಗುಣಗಾನ ಮಾಡುವರವರು //
5 : ನಿನ್ನಿಂದ ಶಕ್ತಿಪಡೆಯುವವರು ಧನ್ಯರು / 
ಸಿಯೋನ್ ಶಿಖರಕ್ಕವರು ಪ್ರಿಯ ಯಾತ್ರಿಕರು //
7 : ಸಾಗುಸಾಗುತ್ತಾ ಬೆಳೆವುದಾ ಯಾತ್ರಿಕರ ಚೇತನ / 
ಪಡೆವರು ಸಿಯೋನ್ ಗಿರಿಯೊಳು ದೇವಾಧಿದೇವನ ದರ್ಶನ //
===================
ಶುಭಸಂದೇಶ
ಲೂಕ 21.29-33
29 : ಬಳಿಕ ಯೇಸುಸ್ವಾಮಿ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು; “ಅಂಜೂರದ ಹಾಗೂ ಇತರ ಮರಗಳನ್ನು ಗಮನಿಸಿರಿ.
30 : ಅವುಗಳ ಎಲೆಗಳು ಚಿಗುರುತ್ತಲೇ ವಸಂತಕಾಲ ಆರಂಭಿಸಿತೆಂದು ನೀವೇ ಅರಿತುಕೊಳ್ಳುತ್ತೀರಿ.
31 : ಅಂತೆಯೇ ಇವೆಲ್ಲವೂ ಸಂಭವಿಸುವುದನ್ನು ನೋಡುವಾಗ ದೇವರ ಸಾಮ್ರಾಜ್ಯವು ಸಮೀಪಿಸಿತೆಂದು ತಿಳಿದುಕೊಳ್ಳಿರಿ.
32 : ಇವೆಲ್ಲ ಸಂಭವಿಸುವವರೆಗೆ ಈ ಪೀಳಿಗೆ ಗತಿಸಿ ಹೋಗದೆಂದು ಒತ್ತಿಹೇಳುತ್ತೇನೆ.
33 : ಭೂಮ್ಯಾಕಾಶಗಳು ಗತಿಸಿಹೋಗುತ್ತವೆ; ಆದರೆ ನನ್ನ ಮಾತುಗಳು ಶಾಶ್ವತವಾಗಿ ಉಳಿಯುತ್ತವೆ.
===================
ಚಿಂತನೆ
ಅಂಜೂರದ ಮರದಿಂದ ಮುಂಜಾಗರೂಕತೆಯ ಹಾಗೂ ಯೇಸುವಿನ ಆಗಮನದ ಬಗ್ಗೆ ತಿಳಿಯಲು ಶಿಷ್ಯರಿಗೆ  ಸಾಮತಿಯನ್ನು ನೀಡಲಾಗಿದೆ . ಪ್ಯಾಲೆಸ್ತಿನ್ ದೇಶದೆಲ್ಲೆಡೆ ಕಾಣಸಿಗುವ ಅಂಜೂರದ ಮರದ ಬೆಳವಣಿಗೆಯನ್ನು ಅದು ಫಲವನ್ನು ನೀಡುವ ಮುನ್ನ ಸೂಚಿಸುವ ಸಂಕೇತಗಳ ಆಧಾರದ ಮೇರೆಗೆ ದೇವರ ರಾಜ್ಯದ ಆಗಮನದ ಬಗ್ಗೆ ಉಲ್ಲೇಖವಿದೆ. ಪ್ಯಾಲೆಸ್ತಿನ್ ದೇಶದಲ್ಲಿ ಚಳಿಗಾಲವು ಬಂದಾಗ ಎಲ್ಲಾ ಮರಗಳಲ್ಲಿ ಎಲೆಗಳಿರುತ್ತವೆ. ಆದರೆ ಅಂಜೂರದ ಮರದಲ್ಲಿ ಎಲೆಗಳೆಲ್ಲ ಉದುರಿ ಹೋಗುತ್ತವೆ. ಎಲೆ ಉದುರಿಹೋದಾಗ ಅಂಜೂರದ ಮರವು ನಿರ್ಜೀವ ಅಥವಾ ಸತ್ತು ಹೋದ ರೀತಿಯಲ್ಲಿ ಕಾಣುತ್ತದೆ. ಅಂಜೂರದ ಮರವು ಚಿಗುರೊಡೆಯಲು ಪ್ರಾರಂಭಿಸಿದ ತಕ್ಷಣ ವಸಂತಕಾಲ ಸಮೀಪಿಸಿದೆ ಎಂದು ಎಲ್ಲರೂ ಅರಿಯುತ್ತಾರೆ. ಯೇಸುವಲ್ಲಿರಿಸಿದ ವಿಶ್ವಾಸವು ಅಂಜೂರದ ಮರದಂತೆ ಇರಬೇಕು. ಭರವಸೆಯಿಲ್ಲದಿರುವ ಜನರ ಮಧ್ಯೆ ಭರವಸೆಯಿಂದ ಜೀವಿಸಬೇಕು. ಯೇಸುವಿನ ವಾಕ್ಯಗಳು ದೇವರ ವಾಕ್ಯದಂತೆ ಎಂದಿಗೂ ಎಂದೆಂದಿಗೂ ಶಾಶ್ವತ, ಜೀವ ಮತ್ತು ಭರವಸೆಯನ್ನೀಯುವ ವಾಕ್ಯಗಳಾಗಿವೆ.
===================



No comments:

Post a Comment