Friday, 4 December 2020

ನವೆಂಬರ್ 28, 2020 ಶನಿವಾರ

 ನವೆಂಬರ್ 28, 2020 ಶನಿವಾರ                        [ಹಸಿರು]
ಮೊದಲ ವಾಚನ: ಪ್ರಕಟನಾ 22.1-7
ಕೀರ್ತನೆ 95:1-7 ಶ್ಲೋಕ.ಯೊವಾನ್ನನ ಪ್ರಕಟನೆ 22:20
ಪ್ರಭು ಯೇಸುವೇ, ಬನ್ನಿ
ಶುಭಸಂದೇಶ: ಲೂಕ 21.34-36
==================
ಮೊದಲನೇ ವಾಚನ
ಪ್ರಕಟನಾ 22.1-7
1 : ಬಳಿಕ ಆ ದೇವದೂತನು ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ಸ್ಫಟಿಕದಂತೆ ಮಿನುಗುತ್ತಿತ್ತು. ಅದು ದೇವರ ಹಾಗೂ ಯಜ್ಞದ ಕುರಿಮರಿಯ ಸಿಂಹಾಸನದಲ್ಲಿ ಉಗಮಿಸಿ,
2 : ನಗರದ ಹೆದ್ದಾರಿಯ ಮಧ್ಯದಲ್ಲಿ ಹರಿಯುತ್ತಿತ್ತು. ಆ ನದಿಯ ಎರಡು ದಡಗಳಲ್ಲೂ ಜೀವವೃಕ್ಷವಿತ್ತು. ಅದು ವರ್ಷದಲ್ಲಿ ಹನ್ನೆರಡು ಸಾರಿ ಫಲ ಕೊಡುವಂಥದ್ದು; ಪ್ರತೀ ತಿಂಗಳೂ ಫಸಲನ್ನೀಯುವಂಥದ್ದು. ಆ ವೃಕ್ಷದ ಎಲೆಗಳನ್ನು ರಾಷ್ಟ್ರಗಳಿಗೆ ಸಿದ್ದೌಷಧಿಯನ್ನಾಗಿ ಉಪಯೋಗಿಸಲಾಗುವುದು.
3 : ಶಾಪಗ್ರಸ್ತವಾದುದು ಯಾವುದೂ ಆ ನಗರದಲ್ಲಿ ಇರದು. ದೇವರ ಮತ್ತು ಯಜ್ಞದ ಕುರಿಮರಿಯ ಸಿಂಹಾಸನವು ಅಲ್ಲಿರುವುದು. ಸದಾ ಯಾಜಕ ಸೇವೆ ಸಲ್ಲಿಸುವ ಅವರ ದಾಸರಿಗೆ ಅದರ ಮುಖದರ್ಶನವಾಗುವುದು.
4 : ಆ ಹೆಸರು ಆ ದಾಸರ ಹಣೆಗಳ ಮೇಲೆ ಲಿಖಿತವಾಗಿರುವುದು.
5 : ರಾತ್ರಿ ಎಂಬುದೇ ಅಲ್ಲಿ ಇರದು; ದೀಪದ ಇಲ್ಲವೇ ಸೂರ್ಯನ ಬೆಳಕಿನ ಅವಶ್ಯಕತೆಯೂ ಇರದು; ದೇವರಾದ ಪ್ರಭುವೇ ಅವರಿಗೆ ಬೆಳಕಾಗಿರುವರು. ಯುಗಯುಗಾಂತರಕ್ಕೂ ಅವರು ರಾಜ್ಯವಾಳುವರು. ಯೇಸುವಿನ ಪುನರಾಗಮನ
6 : ಅನಂತರ ಆ ದೇವದೂತನು ನನಗೆ, “ಈ ಮಾತುಗಳು ಸತ್ಯವಾದುವು, ನಂಬಲರ್ಹವಾದುವು. ಪ್ರವಾದಿಗಳಿಗೆ ಆತ್ಮ ಪ್ರೇರಣೆಯನ್ನೀಯುವ ದೇವರಾದ ಪ್ರಭುವೇ ಬೇಗನೆ ಸಂಭವಿಸಲಿರುವುವುಗಳನ್ನು ತಮ್ಮ ದಾಸರಿಗೆ ತಿಳಿಸಲು ತಮ್ಮ ದೂತನನ್ನೇ ಕಳಿಸಿದ್ದಾರೆ.
7 : “ಯೇಸುಸ್ವಾಮಿ ನುಡಿಯುವುದನ್ನು ಕೇಳು: ‘ಇಗೋ, ನಾನು ಬೇಗನೆ ಬರುತ್ತೇನೆ.’ ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾ ವಾಕ್ಯಗಳನ್ನು ಕೈಗೊಂಡು ನಡೆಯುವವನು ಧನ್ಯನು!” ಎಂದು ಹೇಳಿದನು.
===================
ಕೀರ್ತನೆ 
ಕೀರ್ತನೆ 95:1-7 ಶ್ಲೋಕ.ಯೊವಾನ್ನನ ಪ್ರಕಟನೆ 22:20
ಶ್ಲೋಕ: ಪ್ರಭು ಯೇಸುವೇ, ಬನ್ನಿ
1 : ಬನ್ನಿ, ಸ್ತುತಿಗೀತೆ ಹಾಡೋಣ ಬನ್ನಿ, ಪ್ರಭುವಿಗೆ / 
ಜಯಘೋಷ ಮಾಡೋಣ ನಮ್ಮ ರಕ್ಷಕ ದೇವನಿಗೆ //
2 : ಆತನ ಸನ್ನಿಧಿ ಸೇರೋಣ ಕೃತಜ್ಞತಾಸ್ತುತಿಯೊಂದಿಗೆ / 
ಜಯಜಯಕಾರ ಮಾಡೋಣ ಕೀರ್ತನೆಗಳಿಂದಾತನಿಗೆ //
3 : ಏಕೆಂದರೆ ಪ್ರಭು ದೇವಾಧಿದೇವನು /
ದೇವರುಗಳಲೆಲ್ಲ ರಾಜಾಧಿರಾಜನು //
4 : ಆತನ ಕೈಯಲ್ಲಿವೆ ಬುವಿಯಂತರಾಳಗಳು / 
ಆತನವೇ ಪರ್ವತಗಳಾ ತುತ್ತತುದಿಗಳು //
5 : ಸಮುದ್ರವು ಆತನದೆ-ಅದ ನಿರ್ಮಿಸಿದವ ಆತನೆ / 
ಒಣನೆಲವು ಆತನದೆ-ಅದ ರೂಪಿಸಿದವ ಆತನೆ //
6 : ಬನ್ನಿ, ಆರಾಧಿಸೋಣ ಬನ್ನಿ, ಬಾಗಿ ವಂದಿಸೋಣ / 
ನಮ್ಮನು ಸೃಜಿಸಿದಾ ಪ್ರಭುವಿಗೆ ಸಾಷ್ಟಾಂಗವೆರಗೋಣ //
7 : ಆತನೆಮ್ಮ ದೇವರು, ನಾವು ಆತನ ಕೈಮಂದೆ / 
ಆತನಿಂದಲೇ ಪಾಲನೆಪೋಷಣೆ ಪಡೆದ ಜನತೆ //
===================
ಶುಭಸಂದೇಶ
ಲೂಕ 21.34-36
34 : “ಮಿತಿಮೀರಿದ ಭೋಜನದಿಂದಾಗಲಿ, ಕುಡಿತದಿಂದಾಗಲಿ, ಲೌಕಿಕ ಚಿಂತೆಗಳಿಂದಾಗಲಿ ಮಂದಮತಿಗಳಾಗಬೇಡಿ. ಆ ದಿನವು ಅನಿರೀಕ್ಷಿತ ಉರುಲಿನಂತೆ ನಿಮ್ಮನ್ನು ಸಿಕ್ಕಿಸೀತು, ಜಾಗರೂಕರಾಗಿರಿ!
35 : ಜಗತ್ತಿನ ಎಲ್ಲಾ ನಿವಾಸಿಗಳೂ ಅದಕ್ಕೆ ಸಿದ್ಧರಾಗಿರಬೇಕು.
36 : ಬಂದೊದಗಲಿರುವ ಇವೆಲ್ಲವುಗಳಿಂದ ಪಾರಾಗಿ ನರಪುತ್ರನ ಮುಂದೆ ನಿಲ್ಲಲು ನೀವು ಶಕ್ತರಾಗುವಂತೆ ನಿರಂತರವಾಗಿ ಪ್ರಾರ್ಥನೆ ಮಾಡುತ್ತಾ ಎಚ್ಚರಿಕೆಯಿಂದಿರಿ,” ಎಂದರು.
===================
ಚಿಂತನೆ
ನಾವು ಸೂಕ್ಷ್ಮವಾಗಿ ಟಿವಿ ಜಾಹಿರಾತುಗಳನ್ನು ಗಮನಿಸಿದರೆ, ಅಲ್ಲಿ ಬರೀ ತಿಂಡಿ ತಿನಿಸುಗಳ ಬಗ್ಗೆ, ಕುಡಿಯುವುದರೆ ಬಗ್ಗೆ ಸೌಂದರ್ಯ ಹೆಚ್ಚಿಸುವುದರ ಬಗ್ಗೆಯೇ ಕೊಡುವ ವರ್ಣನೆಯಲ್ಲಿನಾವು ನೋಡುತ್ತೇವೆ. ಇವೆಲ್ಲವೂ ನಮ್ಮನ್ನು ಲೌಕಿಕ ಆಶಾಪಾಶಗಳಿಗೆ ಒಳಗಾಗುವಂತೆ ಮಾಡುತ್ತಿವೆ. ಆದರೆ ಕ್ರೈಸ್ತರಾದ ನಾವು ನಮ್ಮ ಲೋಕದ ಪರಿಚಯವನ್ನು ಮಾಡಿಕೊಳ್ಳಬೇಕು. ಅದು ಪರಲೋಕ ತಂದೆಯ ನಿವಾಸ, ಸ್ವಾಮಿ ಯೇಸುವಿನ ಶ್ರೀವಾಸ. ಅಲ್ಲಿಗೆ ಹೋಗಬೇಕಾದವರು ಬಹಳ ಜಾಗರೂಕರಾಗಿರಬೇಕು. ನಾವು ನಮ್ಮ ಮನೆಗಳಲ್ಲಿ ಆಫೀಸುಗಳಲ್ಲಿ ಶಾಲೆಕಾಲೇಜುಗಳಲ್ಲಿ ನೋಡುತ್ತೇವೆ: ಏನಾದರೂ ಕಾರ್ಯಕ್ರಮ ಇದ್ದರೆ ಆದರೆ ಜೊತೆ ಊಟ ಇದ್ದೇ ಇರುತ್ತದೆ. ಊಟದ ವಿಷಯ ಮಾತನಾಡದೇ ಇದ್ದರೆ ಯಾರೂ ನಮ್ಮ ಕಾರ್ಯಕ್ರಮಗಳಿಗೆ ಬರುವುದಿಲ್ಲ. ಊಟ ಬಲು ಮುಖ್ಯವಾದ ವಿಷಯವಾಗಿಬಿಟ್ಟಿದೆ. ಊಟದ ವಿಷಯದಲ್ಲಿ ನಾವು ಎರಡು ಬಗೆಯ ಜನರನ್ನು ಕಾಣುತ್ತೇವೆ . ಜೀವಿಸುವುದಕ್ಕಾಗಿ ಊಟ ಮಾಡುವುದು, ಊಟ ಮಾಡುವುದಕ್ಕಾಗಿಯೇ ಜೀವಿಸುವುದು. ಯೇಸುಸ್ವಾಮಿ ಎರಡನೇ ವರ್ಗದ ಜನರಿಗೆ ಬಲು ಕಠೋರವಾಗಿ ಇಂದಿನ ಶುಭಸಂದೇಶದಲ್ಲಿ ಎಚ್ಚರಿಸುತ್ತಿದ್ದಾರೆ. ಸದಾ ಏನು ತಿನ್ನುವುದು ಏನು ಕುಡಿಯುವುದು ಎನ್ನದೆ ನಮ್ಮ ದೇಹದ ಆಸೆ ಆಕಾಂಕ್ಷೆಗಳು ನಮ್ಮ ಇಂದ್ರಿಯಗಳು ನಮ್ಮ ಹಿಡಿತದಲ್ಲಿ ಇರಬೇಕು, ಆಗ ಮಾತ್ರ ನಾವು ಯಶಸ್ಸನ್ನು ಗಳಿಸಲು ಸಾಧ್ಯ. ಆ ಯಶಸ್ಸು ನಮ್ಮದಾಗಬೇಕಾದರೆ ಯೇಸುಸ್ವಾಮಿ ಹೇಳಿದಂತೆ ಪ್ರಾರ್ಥನೆಯ ಜೀವನವನ್ನು ನಾವು ಅಪ್ಪಿಕೊಳ್ಳಬೇಕು. ಸದಾ ಜಾಗರೂಕರಾಗಿರಬಹುದು. ಲೌಕಿಕ ಆಸೆಗಳಿಗೆ ತಿಲಾಂಜಲಿ ಕೊಡಬಹುದು. ಇದೆಲ್ಲಾ ನಮ್ಮಿಂದಾದರೆ ಮಾತ್ರ ನಾವು ಪರಲೋಕ ಸೇರುವುದು ಖಚಿತ . ಅದರ ಪ್ರವೇಶ ಉಚಿತ.
ಆತ್ಮಾವಲೋಕನ
•        ನನ್ನ ಆಸೆ ಯಾವ ಬಗೆದು? ಲೌಕಿಕದ್ದೋ ಅಥವಾ ಅಧ್ಯಾತ್ಮಿಕದ್ದೋ?
•        ನನ್ನ ಯೋಚನೆ ಬರೀ ಊಟ ಮಾಡುವುದರ ಮತ್ತು ಕುಡಿಯುವುದರ ಕುರಿತೆ?
•        ಪ್ರಾರ್ಥನೆಗೆ ನನ್ನಲ್ಲಿ ಸ್ಥಳವಿದೆಯೇ?
===================


No comments:

Post a Comment