Friday, 4 December 2020

ನವೆಂಬರ್ 30, 2020 ಸೋಮವಾರ

 ನವೆಂಬರ್ 30, 2020 ಸೋಮವಾರ                        [ಬಿಳಿ]
ಸಂತ ಅಂದ್ರೆಯ, ಪ್ರೇಷಿತ
ಮೊದಲ ವಾಚನ: ರೋಮನರಿಗೆ 10.9-18
ಕೀರ್ತನೆ 19:1-4 ಶ್ಲೋಕ.4
ಅವುಗಳ ನುಡಿಮಾತು ವ್ಯಾಪಿಸಿದ ಜಗದಾದ್ಯಂತ
ಶುಭಸಂದೇಶ: ಮತ್ತಾಯ 4.18-22
==================
ಮೊದಲನೇ ವಾಚನ
ರೋಮನರಿಗೆ 10.9-18
9 : “ಯೇಸುಸ್ವಾಮಿಯೇ ಪ್ರಭು” ಎಂದು ನೀನು ಬಾಯಿಂದ ನಿವೇದಿಸಿ, ಅವರನ್ನು ದೇವರು ಸಾವಿನಿಂದ ಪುನರುತ್ಥಾನಗೊಳಿಸಿದ್ದಾರೆಂದು ಹೃದಯದಿಂದ ವಿಶ್ವಾಸಿಸಿದರೆ ಜೀವೋದ್ಧಾರವನ್ನು ಹೊಂದುತ್ತೀಯೆ.
10 : ಹೌದು, ಹೃದಯಪೂರ್ವಕವಾಗಿ ವಿಶ್ವಾಸಿಸುವವನು ದೇವರೊಡನೆ ಸತ್ಸಂಬಂಧವನ್ನು ಪಡೆಯುತ್ತಾನೆ; ಬಾಯಿಂದ ನಿವೇದಿಸುವವನು ಜೀವೋದ್ಧಾರ ಹೊಂದುತ್ತಾನೆ.
11 : ಏಕೆಂದರೆ, “ಅವರಲ್ಲಿ ವಿಶ್ವಾಸ ಇಡುವ ಯಾರಿಗೂ ಆಶಾಭಂಗವಾಗುವುದಿಲ್ಲ,” ಎಂದು ಪವಿತ್ರಗ್ರಂಥದಲ್ಲೇ ಹೇಳಲಾಗಿದೆ.
12 : ಈ ವಿಷಯದಲ್ಲಿ ಯೆಹೂದ್ಯರು, ಯೆಹೂದ್ಯರಲ್ಲದವರು ಎಂಬ ಭೇದಭಾವವಿಲ್ಲ, ಸರ್ವರಿಗೂ ಒಬ್ಬರೇ ಪ್ರಭು. ತಮ್ಮನ್ನು ಬೇಡಿಕೊಳ್ಳುವ ಎಲ್ಲರಿಗೂ ಅವರು ಧಾರಾಳವಾಗಿ ವರದಾನವನ್ನು ನೀಡುತ್ತಾರೆ.
13 : “ಪ್ರಭುವಿನ ನಾಮಸ್ಮರಣೆ ಮಾಡುವ ಪ್ರತಿಯೊಬ್ಬನೂ ಜೀವೋದ್ಧಾರವನ್ನು ಹೊಂದುತ್ತಾನೆ,” ಎಂದು ಲಿಖಿತವಾಗಿದೆ.
14 : ಪ್ರಭುವಿನಲ್ಲಿ ವಿಶ್ವಾಸವಿಲ್ಲದಿದ್ದರೆ ಅವರ ನಾಮಸ್ಮರಣೆ ಮಾಡುವುದಾದರೂ ಹೇಗೆ? ಅವರ ವಿಷಯವನ್ನು ಕುರಿತು ಕೇಳದಿದ್ದರೆ ಅವರನ್ನು ವಿಶ್ವಾಸಿಸುವುದಾದರೂ ಹೇಗೆ? ಬೋಧಿಸುವವರು ಇಲ್ಲದಿದ್ದರೆ ಅವರ ವಿಷಯವನ್ನು ಕುರಿತು ಕೇಳುವುದಾದರೂ ಹೇಗೆ?
15 : ಬೋಧಿಸುವವರನ್ನು ಕಳುಹಿಸದೆ ಹೋದರೆ, ಅವರು ಶುಭಸಂದೇಶವನ್ನು ಬೋಧಿಸುವುದಾದರೂ ಹೇಗೆ? “ಶುಭಸಂದೇಶವನ್ನು ತರುವವರ ಬರುವಿಕೆ ಎಷ್ಟೋ ಶುಭದಾಯಕ,” ಎಂದು ಪವಿತ್ರ ಗ್ರಂಥದಲ್ಲೇ ಬರೆಯಲಾಗಿದೆ.
16 : ಆದರೂ ಈ ಶುಭಸಂದೇಶವನ್ನು ಎಲ್ಲರೂ ಅಂಗೀಕರಿಸಲಿಲ್ಲ. ಆದ್ದರಿಂದಲೇ ಯೆಶಾಯನು, “ಪ್ರಭುವೇ, ನಾವು ಸಾರಿದ ಸಂದೇಶವನ್ನು ನಂಬಿದವರು ಯಾರು?” ಎಂದು ಮೊರೆಯಿಟ್ಟಿದ್ದಾನೆ.
17 : ಇಂತಿರಲು, ಶುಭಸಂದೇಶವನ್ನು ಆಲಿಸುವುದರಿಂದ ವಿಶ್ವಾಸ ಮೂಡುತ್ತದೆ; ಶುಭಸಂದೇಶ ಕ್ರಿಸ್ತಯೇಸುವನ್ನು ಬೋಧಿಸುವುದರ ಮೂಲಕ ಪ್ರಕಟವಾಗುತ್ತದೆ.
18 : ಈಗ ನನ್ನದೊಂದು ಪ್ರಶ್ನೆ: “ಇಸ್ರಯೇಲರಿಗೆ ಶುಭಸಂದೇಶವನ್ನು ಕೇಳುವ ಸಂದರ್ಭ ಇರಲಿಲ್ಲವೆ?” ನಿಶ್ಚಯವಾಗಿ ಇತ್ತು. ಪವಿತ್ರ ಗ್ರಂಥದಲ್ಲಿ ಹೇಳಿರುವಂತೆ: “ಸಾರುವವರ ಧ್ವನಿ ಜಗದಲ್ಲೆಲ್ಲಾ ಹರಡಿತು ಅವರ ನುಡಿ ಭೂಮಿಯ ತುತ್ತತುದಿಯನ್ನು ಮುಟ್ಟಿತು.”
===================
ಕೀರ್ತನೆ 
ಕೀರ್ತನೆ 19:1-4 ಶ್ಲೋಕ.4
ಶ್ಲೋಕ: ಅವುಗಳ ನುಡಿಮಾತು 
           ವ್ಯಾಪಿಸಿದ ಜಗದಾದ್ಯಂತ||
1 : ಆಕಾಶಮಂಡಲ ಸಾರುತಿದೆ 
     ದೇವರ ಮಹಿಮೆಯನು / 
     ತಾರಾಮಂಡಲ ತೋರುತಿದೆ 
     ದೇವರ ಕೈಕೃತಿಗಳನು //
2 : ದಿನವು ಮರುದಿನಕೆ ಮಾಡುತಿದೆ
    ಈ ಪ್ರಕಟಣೆಯನು /
    ರಾತ್ರಿ ಮರುರಾತ್ರಿಗೆ ನೀಡುತಿದೆ
    ಈ ಪ್ರಚಾರವನು //
3 : ಅವುಗಳಿಗೆ ಮಾತಿಲ್ಲ; ಅವುಗಳಿಗೆ ಶಬ್ದವಿಲ್ಲ / 
ಅವುಗಳ ಸ್ವರವಂತೂ ಕೇಳಿ ಬರುವುದಿಲ್ಲ //
4 : ಆದರೂ ಅವುಗಳ ಧ್ವನಿರೇಖೆ 
     ಹರಡಿದೆ ಬುವಿಯಾದ್ಯಂತ / 
    ಅವುಗಳ ನುಡಿಮಾತು
    ವ್ಯಾಪಿಸಿದೆ ಜಗದಾದ್ಯಂತ //
===================
ಶುಭಸಂದೇಶ
ಮತ್ತಾಯ 4.18-22
18 : ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ನಡೆದು ಹೋಗುತ್ತಿದ್ದರು. ಆಗ ಇಬ್ಬರು ಸಹೋದರರನ್ನು ಕಂಡರು. ಇವರೇ ‘ಪೇತ್ರ’ ಎನಿಸಿಕೊಂಡ ಸಿಮೋನ ಮತ್ತು ಅವನ ಸಹೋದರ ಅಂದ್ರೆಯ. ಬೆಸ್ತರಾದ ಇವರು ಸರೋವರದಲ್ಲಿ ಬಲೆ ಬೀಸುತ್ತಾ ಇದ್ದರು.
19 : ""ನನ್ನನ್ನು ಹಿಂಬಾಲಿಸಿ ಬನ್ನಿ. ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು,"" ಎಂದು ಹೇಳಿ ಯೇಸು ಅವರನ್ನು ಕರೆದರು.
20 : ತಕ್ಷಣವೇ, ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
21 : ಅಲ್ಲಿಂದ ಮುಂದಕ್ಕೆ ಹೋಗುತ್ತಿದ್ದಾಗ ಯೇಸು ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನ ಎಂಬ ಇನ್ನಿಬ್ಬರು ಸಹೋದರರನ್ನು ಕಂಡರು. ಇವರು ತಮ್ಮ ತಂದೆ ಜೆಬೆದಾಯನೊಡನೆ ದೋಣಿಯಲ್ಲಿ ಬಲೆಗಳನ್ನು ಸರಿಪಡಿಸುತ್ತಿದ್ದರು. ಯೇಸು ಇವರನ್ನೂ ಕರೆದರು.
22 : ಕೂಡಲೇ ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
===================
ಚಿಂತನೆ
ಗ್ರೀಕ್ ಭಾಷೆಯಲ್ಲಿ ಅಂದ್ರೇಯ ಅಂದರೆ `ಧೈರ್ಯವಂತ’ ಎಂದರ್ಥ. ಅಂದ್ರೇಯ ಯೋನನ ಮಗ, ಪೇತ್ರನ ಸಹೋದರ. ಅಂದ್ರೇಯ ಕಫೆರ್ನವುಮ್ ಊರಿಗೆ ಸೇರಿದವ, ಕಸುಬಿನಲ್ಲಿ ಬೆಸ್ತ. ಬೆಸ್ತರಾದ ಅಂದ್ರೇಯ ಮತ್ತು ಪೇತ್ರ ಸರೋವರದಲ್ಲಿ ಮೀನು ಹಿಡಿಯುವಾಗ ``ನನ್ನನ್ನು ಹಿಂಬಾಲಿಸಿ ಬನ್ನಿ, ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು,’’ ಎಂದು ಯೇಸು ಕರೆದಾಗ ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸುತ್ತಾರೆ. ಯೊವಾನ್ನ 12:20-22ರಲ್ಲಿ ಕಾಣುವಂತೆ ಕೆಲವು ಗ್ರೀಕರು ಯೇಸುವನ್ನು ನೋಡಬೇಕೆಂಬ ಬಯಕೆಯನ್ನು ಫಿಲಿಪ್ಪನಲ್ಲಿ ಹೇಳಿಕೊಂಡಾಗ ಫಿಲಿಪ್ಪನು ಅಂದ್ರೇಯನಿಗೆ ಹೇಳುತ್ತಾನೆ. ಇದು ಅಂದ್ರೇಯನ ನಾಯಕತ್ವದ ಪಾತ್ರವನ್ನು ತಿಳಿಸುತ್ತದೆ. ಐದು ಸಾವಿರ ಮಂದಿಗೆ ಭೋಜನ ನೀಡಿದ ಸಂದರ್ಭದಲ್ಲಿ ಅಂದ್ರೇಯನು 5 ಜವೆಗೋದಿಯ ರೊಟ್ಟಿಗಳಿದ್ದ ಹುಡುಗನನ್ನು ಯೇಸುವಿನ ಬಳಿ ಕರೆತರುತ್ತಾನೆ. ಅಂದ್ರೇಯನು ಯೇಸುವಿನ ಪುನರುತ್ಥಾನದ ನಂತರ ಏಷ್ಯಾ ಮೈನರಿನಲ್ಲಿ ಪ್ರಬೋಧನೆ ಮಾಡಿದರು ಎಂಬ ನಂಬಿಕೆಯಿದೆ. ನೀರೋ ಅರಸನ ಚಿತ್ರಹಿಂಸೆಯ ಕಾಲದಲ್ಲಿಆತನನ್ನು ಕೊಲ್ಲಲಾಯಿತು. ಅವರನ್ನು ಕೊಂದ ರೀತಿ ವಿಶಿಷ್ಟವಾಗಿತ್ತು. ಅವರನ್ನು ಆಕಾಶದ ಶಿಲುಬೆಗೆ ಜಡಿದರು. ಸಂತ ಅಂದ್ರೇಯರು ರಷ್ಯಾ ಮತ್ತು ಸ್ಕಾಟ್ಲೆಂಡಿನ ಪಾಲಕರು, ಮೀನುಗಾರರ ಮತ್ತು ವಿವಾಹವಾಗದ ಹೆಣ್ಣುಮಕ್ಕಳ ಪಾಲಕರೂ ಆಗಿದ್ದಾರೆ.
===================



No comments:

Post a Comment