Friday, 4 December 2020

ನವೆಂಬರ್ 29, 2020 ಭಾನುವಾರ

 ನವೆಂಬರ್ 29, 2020 ಭಾನುವಾರ                        [ನೇರಳೆ]
ಆಗಮನಕಾಲದ 1ನೇ ಭಾನುವಾರ (ವರ್ಷ ಬಿ)
ಮೊದಲ ಮೊದಲ ವಾಚನ: ಯೆಶಾಯ 63.16-17 19; 64:1, 3-8
ಕೀರ್ತನೆ 80:1-2, 14-15, 17-18 ಶ್ಲೋಕ.3
ಓ ದೇವಾ, ಪುನರುದ್ಧಾರ ಮಾಡೆಮ್ಮನು 
ಬೆಳಗಲಿ ನಿನ್ನ ಮುಖಕಾಂತಿ! ಪಡೆವೆವು ರಕ್ಷಣೆಯನು
ಎರಡನೇ ವಾಚನ: 1 ಕೊರಿಂಥಿಯರಿಗೆ 1.3-9
ಶುಭಸಂದೇಶ: ಮಾರ್ಕ 13.33-37
ಮೊದಲನೇ ವಾಚನ
ಯೆಶಾಯ 63.16-17 19; 64:1, 3-8
16 : ನೀವೇ ನಮ್ಮ ತಂದೆ. ಅಬ್ರಹಾಮನು ನಮ್ಮನ್ನು ಅರಿಯದೆ ಇರಬಹುದು, ಇಸ್ರಯೇಲನು ನಮ್ಮನ್ನು ಗುರುತಿಸದೆ ಇರಬಹುದು, ಆದರೆ ಸರ್ವೇಶ್ವರಾ, ನೀವೇ ನಮ್ಮ ತಂದೆ, ನಮ್ಮ ಉದ್ಧಾರಕ; ಆದಿಯಿಂದ ಇರಲು ಅದುವೇ ನಿಮ್ಮ ನಾಮಾಂಕಿತ.
17 : ಸ್ವಾಮೀ, ನಾವು ನಿಮ್ಮ ಮಾರ್ಗ ತಪ್ಪಿ ಅಲೆಯುವಂತೆ ಮಾಡುತ್ತೀರಿ, ಏಕೆ? ನಿಮಗೆ ಭಯಪಡದ ಹಾಗೆ ನಮ್ಮ ಹೃದಯವನ್ನು ಕಠಿಣ ಪಡಿಸುವುದು ಏಕೆ? ನಿಮ್ಮ ಶರಣರ ನಿಮಿತ್ತ, ನಿಮಗೆ ಬಾಧ್ಯರಾದ ಕುಲಗಳ ನಿಮಿತ್ತ, ನಮಗೆ ಪ್ರಸನ್ನಚಿತ್ತರಾಗಿರಿ.
1 : (ಸ್ವಾಮೀ) ಆಕಾಶವನ್ನು ಸೀಳಿ ಇಳಿದು ಬರಲಾರಿರಾ? ನಿಮ್ಮ ದರ್ಶನವನ್ನು ಕಂಡು ಬೆಟ್ಟಗುಡ್ಡಗಳು ಗಡಗಡನೆ ನಡುಗಬಾರದೆ?
2 : ಒಣಗಿಡಕ್ಕೆ ಹಚ್ಚುವ ಕಿಚ್ಚಿನಂತೆ, ನೀರನ್ನು ಕುದಿಸುವ ಬೆಂಕಿಯಂತೆ ನೀವು ಪ್ರತ್ಯಕ್ಷರಾಗಲಾರಿರಾ?
3 : ನಮ್ಮ ನಿರೀಕ್ಷೆಗೆ ಮೀರಿದ ಮಹತ್ಕಾರ್ಯಗಳನ್ನು ನಡೆಸಿ, ನಿಮ್ಮ ನಾಮ ಮಹಿಮೆಯನ್ನು ನಿಮ್ಮ ಶತ್ರುಗಳಿಗೆ ಪ್ರದರ್ಶಿಸಿ, ಅನ್ಯರಾಷ್ಟ್ರಗಳನ್ನು ನಡುಗಿಸಲಾರಿರಾ? ಹೌದು, ನೀವು ಇಳಿದುಬಂದು, ಬೆಟ್ಟಗುಡ್ಡಗಳು ನಡುಗಿದರೆ ಎಷ್ಟೋ ಲೇಸು.
4 : ತಮ್ಮನ್ನು ಕಾದು ಎದುರು ನೋಡುವವರ ಪರವಾಗಿ ಕಾರ್ಯಗತರಾಗುವಂಥ ದೇವರು, ನಿಮ್ಮನ್ನು ಬಿಟ್ಟರೆ, ಯಾರಿದ್ದಾರೆ? ಅಂಥಾ ದೇವರನ್ನು ಲೋಕಾದಿಯಿಂದ ಯಾರೂ ಕಂಡಿಲ್ಲ, ಅಂಥವರು ಯಾರ ಕಿವಿಗೂ ಬೀಳಲಿಲ್ಲ. ಯಾವ ಕಣ್ಣಿಗೂ ಕಾಣಿಸಲಿಲ್ಲ.
5 : ಸದಾಚಾರದಲ್ಲೇ ಸಂತೋಷಪಡುತ್ತಾ, ನಿಮ್ಮ ಮಾರ್ಗದಲ್ಲಿ ನಡೆಯುತ್ತಾ, ನಿಮ್ಮನ್ನು ಸ್ಮರಿಸುತ್ತಾ ಬಂದವರಿಗೆ ಪ್ರತ್ಯಕ್ಷರಾಗುತ್ತೀರಿ. ನಮ್ಮ ಮೇಲಾದರೋ ಕೋಪಗೊಂಡಿರಿ. ಆದರೂ ನಾವು ಪಾಪದಲ್ಲೇ ಮುನ್ನಡೆದೆವು. ಬಹುಕಾಲದಿಂದ ಪಾಪದಲ್ಲಿ ಮುಳುಗಿಹೋದೆವು. ನಮ್ಮಂಥವರಿಗೆ ರಕ್ಷಣೆ ಇದೆಯೇ?
6 : ನಾವೆಲ್ಲರೂ ಅಶುದ್ಧರು, ನಮ್ಮ ಸತ್ಕಾರ್ಯಗಳೆಲ್ಲ ಕೊಳಕು, ತರಗೆಲೆಯಂತೆ ಒಣಗಿ ಹೋಗಿದ್ದೇವೆ. ಬಿರುಗಾಳಿಯಂತೆ ನಮ್ಮನ್ನು ತಳ್ಳಿಕೊಂಡು ಬಂದಿವೆ, ನಮ್ಮ ಅಪರಾಧಗಳು.
7 : ನಿಮ್ಮ ನಾಮಸ್ಮರಣೆ ಮಾಡುವವನು ಯಾರೂ ಇಲ್ಲ. ನಿಮ್ಮ ಆಶ್ರಯ ಕೋರುವ ಆಸಕ್ತನು ಎಲ್ಲಿಯೂ ಇಲ್ಲ. ಏಕೆಂದರೆ ನೀವು ನಮಗೆ ವಿಮುಖರಾಗಿದ್ದೀರಿ. ನಮ್ಮ ಪಾಪಗಳ ವಶಕ್ಕೆ ನಮ್ಮನ್ನು ಬಿಟ್ಟುಬಿಟ್ಟಿದ್ದೀರಿ.
8 : ಆದರೂ ಸ್ವಾಮಿ ಸರ್ವೇಶ್ವರಾ, ನೀವು ನಮ್ಮ ತಂದೆ. ನಾವು ಜೇಡಿಮಣ್ಣು, ನೀವೇ ಕುಂಬಾರ; ನಾವೆಲ್ಲರು ನಿಮ್ಮ ಕೈಯ ಕೃತಿಗಳು.
===================
ಕೀರ್ತನೆ 
ಕೀರ್ತನೆ 80:1-2, 14-15, 17-18 ಶ್ಲೋಕ.3
ಶ್ಲೋಕ: ಓ ದೇವಾ, ಪುನರುದ್ಧಾರ ಮಾಡೆಮ್ಮನು| 
            ಬೆಳಗಲಿ ನಿನ್ನ ಮುಖಕಾಂತಿ! 
            ಪಡೆವೆವು ರಕ್ಷಣೆಯನು||
1 : ಕಿವಿಗೊಟ್ಟು ಆಲಿಸೋ, 
     ಇಸ್ರಯೇಲರ ಮೇಷಪಾಲನೇ / 
    ಜೋಸೆಫನ ವಂಶಜರನು 
    ಕುರಿಹಿಂಡಂತೆ ಕರೆತಂದವನೇ / 
    ವಿರಾಜಿಸು, ಕೆರೂಬಿಯರ 
    ಮಧ್ಯೆ ಆಸೀನನಾದವನೇ //
2 : ಶೋಭಿಸು ಎಫ್ರಯಿಮ್, ಬೆನ್ಯಮಿನ್, 
     ಮನಸ್ಸೆ ಕುಲಗಳ ಮುಂದೆ / 
    ತೋರ್ಪಡಿಸು ನಿನ್ನ ಶೌರ್ಯವನು, 
    ಬಂದು ಜಯಪ್ರದನಾಗು ನಮಗೆ //
14 : ಸರ್ವಶಕ್ತನಾದ ದೇವರೇ, 
       ಮರಳಿ ಮುಖತೋರಿಸು / 
       ಪರದಿಂದೀಕ್ಷಿಸಿ ಆ ದ್ರಾಕ್ಷಾಲತೆಯನು
       ಪರಾಮರಿಸು //
15 : ಕಾಪಾಡು ನಿನ್ನ ಬಲಗೈ ನೆಟ್ಟು 
       ಸಾಕಿದ ಸಸಿಯನು / 
       ಕಾದಿರಿಸು ನಿನಗೆಂದೇ
       ನೀ ಬೆಳೆಸಿದಾ ಬಳ್ಳಿಯನು //
 
17 : ಕೈ ಹಿಡಿದು ಕಾಪಾಡು ನಿನ್ನ ಬಲಗೈ 
       ಉದ್ಧರಿಸಿದ ಪುರುಷನನು / 
       ನಿನಗೆಂದೇ ನೀ ಸಾಕಿ ಬೆಳೆಸಿದಾ
       ವರಪುತ್ರನನು //
18 : ಆಗ ಬಿಟ್ಟಗಲುವುದಿಲ್ಲ 
       ನಾವೆಂದೆಂದಿಗು ನಿನ್ನನು / 
       ಪುನರ್ಜೀವಗೊಳಿಸು, ಮಾಳ್ಪೆವು 
       ನಿನ್ನ ನಾಮಸ್ಮರಣೆಯನು //
===================
ಎರಡನೇ ವಾಚನ 
1 ಕೊರಿಂಥಿಯರಿಗೆ 1.3-9
3 : ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸುಕ್ರಿಸ್ತರಿಂದಲೂ ನಿಮಗೆ ಅನುಗ್ರಹ ಮತ್ತು ಶಾಂತಿಸಮಾಧಾನ ಲಭಿಸಲಿ
4 : ಕ್ರಿಸ್ತಯೇಸುವಿನಲ್ಲಿ ನಿಮಗೆ ಕೊಡಲಾಗಿರುವ ದೇವಾನುಗ್ರಹದ ಸಲುವಾಗಿ ನಾನು ನಿಮಗೋಸ್ಕರ ನನ್ನ ದೇವರಿಗೆ ಸತತವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
5 : ಏಕೆಂದರೆ, ಕ್ರಿಸ್ತಯೇಸುವಿನಲ್ಲಿ ನೀವು ಎಲ್ಲ ದೃಷ್ಟಿಯಿಂದಲೂ ಶ್ರೀಮಂತರು, ಜ್ಞಾನಸಂಪನ್ನರು ಮತ್ತು ವಾಕ್ ಚತುರರು ಆಗಿದ್ದೀರಿ.
6 : ಇದಲ್ಲದೆ, ಕ್ರಿಸ್ತಯೇಸುವನ್ನು ಕುರಿತ ಸಾಕ್ಷ್ಯವು ನಿಮ್ಮಲ್ಲಿ ನೆಲೆಗೊಂಡಿದೆ.
7 : ಇದರಿಂದಾಗಿ ನಮ್ಮ ಪ್ರಭು ಯೇಸುಕ್ರಿಸ್ತರು ಪ್ರತ್ಯಕ್ಷವಾಗುವುದನ್ನೇ ಎದುರು ನೋಡುತ್ತಿರುವ ನಿಮಗೆ ಯಾವ ಕೃಪಾಶೀರ್ವಾದಗಳ ಕೊರತೆಯು ಇಲ್ಲ.
8 : ನಮ್ಮ ಪ್ರಭು ಯೇಸುಕ್ರಿಸ್ತರ ದಿನದಂದು ನೀವು ನಿರ್ದೋಷಿಗಳಾಗಿರುವಂತೆ ಆ ದೇವರೇ, ನಿಮ್ಮನ್ನು ಕಡೆಯವರೆಗೂ ಸ್ಥಿರವಾಗಿ ಕಾಪಾಡುವರು.
9 : ತಮ್ಮ ಪುತ್ರನೂ ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರ ಅನ್ಯೋನ್ಯತೆಗೆ ನಿಮ್ಮನ್ನು ಕರೆದಿರುವ ದೇವರು ನಿಜಕ್ಕೂ ವಿಶ್ವಾಸ ಪಾತ್ರರು.
ಶುಭಸಂದೇಶ
ಮಾರ್ಕ 13.33-37
33 : ಆ ಕಾಲ ಯಾವಾಗ ಬರುವುದು ಎಂದು ನಿಮಗೆ ತಿಳಿಯದ್ದರಿಂದ ಎಚ್ಚರಿಕೆಯಿಂದಿರಿ, ಜಾಗರೂಕರಾಗಿರಿ.
34 : ಪ್ರವಾಸಕ್ಕೆಂದು ಯಜಮಾನನೊಬ್ಬನು ಮನೆಬಿಟ್ಟು ಹೋಗುವಾಗ ತನ್ನ ಸೇವಕರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ಜವಾಬ್ದಾರಿಕೆಯನ್ನು ವಹಿಸಿ, ದ್ವಾರಪಾಲಕನಿಗೆ ‘ನೀನು ಎಚ್ಚರವಾಗಿರಬೇಕು,’ ಎಂದು ಅಪ್ಪಣೆ ಕೊಡುವ ರೀತಿಯಲ್ಲಿ ನಾನು ನಿಮಗೆ ಹೇಳುತ್ತಿದ್ದೇನೆ. ಎಚ್ಚರವಾಗಿರಿ;
35 : ಯಜಮಾನನು ಸಂಜೆಯಲ್ಲೋ ಮಧ್ಯರಾತ್ರಿಯಲ್ಲೋ ಕೋಳಿ ಕೂಗುವಾಗಲೋ ಬೆಳಕು ಹರಿಯುವಾಗಲೋ, ಯಾವಾಗ ಬರುವನೆಂಬುದು ನಿಮಗೆ ತಿಳಿಯದು.
36 : ಅನಿರೀಕ್ಷಿತವಾಗಿ ಅವನು ಬಂದಾಗ ನೀವು ನಿದ್ರಿಸುತ್ತಿರುವುದನ್ನು ಕಂಡಾನು!
37 : ನಿಮಗೆ ಹೇಳುವುದನ್ನೇ ಸರ್ವರಿಗೂ ಹೇಳುತ್ತೇನೆ; ಎಚ್ಚರಿಕೆಯಿಂದಿರಿ!” ಎಂದರು.
===================
ಚಿಂತನೆ
ಆಗಮನ ಕಾಲದ ಪ್ರಥಮ ಭಾನುವಾರ
==========================
ಪೀಠಿಕೆ
=======
ಕಥೋಲಿಕ ಕ್ರೈಸ್ತ ಆರಾಧನಾ ವಿಧಿಯಲ್ಲಿ ಆಗಮನ ಕಾಲ ವಿಶೇಷ ಸ್ಥಾನವನ್ನು ಹೊಂದಿದೆ. ಏಕೆಂದರೆ ಪ್ರಭುವಿನ ಪ್ರಥಮ ಆಗಮನಕ್ಕಾಗಿ ನಮ್ಮ ಪೂರ್ವಜರು ಕಾಯುತ್ತಿದ್ದರು. ಪ್ರವಾದಿಗಳು ಅವರ ಆತುರಕ್ಕೆ ನೀರೆರೆದು ಪೋಷಿಸಿದರು. ಆದರೆ ಪ್ರಭು ಆಗಮಿಸಬೇಕಾದರೆ ಶತಮಾನಗಳೇ ಉರುಳಿದವು. ಆದರೂ ನಮ್ಮ ಪೂರ್ವಜರ ಭರವಸೆ ಮಾತ್ರ ಬತ್ತಿಹೋಗಲಿಲ್ಲ. ಭರವಸೆ ಹುಸಿಯಾಗಲಿಲ್ಲ ಕೊನೆಗೂ ಪ್ರಭು ಕ್ರಿಸ್ತ ಮಾನವನಾಗಿ ಧರೆಗೆ ಆಗಮಿಸಿದರು. ದೈವ ಪ್ರೀತಿಯನ್ನು ಸಾರಿ, ದೈವ ಯೋಜನೆಯನ್ನು ಸಂಪೂರ್ಣಗೊಳಿಸಿ, ಮರಳಿ ಬರುವುದಾಗಿ ಆಭಯವಿತ್ತು ಸ್ವರ್ಗಾರೋಹಣರಾದರು. ಅವರ ಬರುವಿಕೆಗಾಗಿ ಪವಿತ್ರ ಧರ್ಮಸಭೆ ಸದಾ ಎದುರುನೋಡುತ್ತದೆ. ಇದಕ್ಕಾಗಿ ನಾವೆಲ್ಲರೂ ಸಿದ್ಧಗೊಳ್ಳುವಂತೆ ಕರೆನೀಡುತ್ತದೆ. ಪ್ರಥಮ ಆಗಮನ ಸಿದ್ಧಿಯಾಗಿದೆ. ದ್ವಿತೀಯ ಆಗಮನಕ್ಕಾಗಿ ಕಾಯಬೇಕಿದೆ. ಅಂದರೆ ಈ ಆಗಮನ ಕಾಲ ದೇವರು ಮಾನವರಾದ ಆ ಐತಿಹಾಸಿಕ ಘಟನೆಯನ್ನು ಸ್ಮರಿಸಿ ಸಂಭ್ರಮಿಸುವುದರೊಟ್ಟಿಗೆ ದ್ವಿತೀಯ ಆಗಮನಕ್ಕೆ ಸಿದ್ಧರಾಗುವಂತೆ ಕರೆನೀಡುತ್ತದೆ.
 
ಮೊದಲ ವಾಚನ: ಯೆಶಾಯ 63.16-17 19; 64:2-7
=========================
ಇಂದಿನ ಮೊದಲನೆಯ ವಾಚನದಲ್ಲಿ ಪ್ರವಾದಿ ಯೆಶಾಯನು ಅಂದು ಜನರು ನೊಂದು, ಬೆಂದು ಬಳಲಿಹೋಗಿದ್ದರೂ ತಮ್ಮ ದೇವರು ಸರ್ವಶಕ್ತರು, ಅವರು ನಮ್ಮನ್ನು ಅನಾಥರನ್ನಾಗಿ ಬಿಡುವುದಿಲ್ಲ ಎಂದು ಭರವಸೆಯಿಂದ ""ಸ್ವಾಮಿ ಸರ್ವೇಶ್ವರಾ, ನೀವು ನಮ್ಮ ತಂದೆ. ನಾವು ಜೇಡಿಮಣ್ಣು, ನೀವೇ ಕುಂಬಾರ; ನಾವೆಲ್ಲರು ನಿಮ್ಮ ಕೈಯ ಕೃತಿಗಳು"" ನಮ್ಮ ತಪ್ಪುಗಳನ್ನು ಲೆಕ್ಕಿಸದೆ ಕೈಹಿಡಿದು ನಡೆಸಿರಿ ಎಂದು ವಿನಂತಿಸುತ್ತಾರೆ ಎಂದು ತಿಳಿಸುತ್ತಾ ನಾವೂ ಅವರಂತೆ ಆಗಲು ಕರೆ ನೀಡುತ್ತಾನೆ.
ಎರಡನೇ ವಾಚನ: 1 ಕೊರಿಂಥಿಯರಿಗೆ 1.3-9
==========================
ಎರಡನೆಯ ವಾಚನದಲ್ಲಿ ಸಂತ ಪೌಲನು ತನ್ನ ನೆಚ್ಚಿನ ಕೊರಿಂಥಿಯರು ಪ್ರಭುವಿನ ಆಗಮನದ ದಿನಕ್ಕೆ ಸಿದ್ಧರಾಗುವಂತೆಯೂ ತಮಗೆ ದೇವರು ನೀಡಿರುವ ಕೃಪಾಶೀರ್ವಾದಗಳನ್ನು ವ್ಯರ್ಥಮಾಡಿಕೊಳ್ಳದೆ ಅವನ್ನು ಸದುಪಯೋಗಪಡಿಕೊಂಡು ನಿದೋರ್ಷಿಗಳಾಗಿರುವಂತೆಯೂ ಕರೆ ನೀಡುತ್ತಾನೆ
ಶುಭಸಂದೇಶ: ಮಾರ್ಕ 13.33-37
=========================
ಇಂದಿನ ಶುಭಸಂದೇಶವೂ ಪ್ರಭು ಕ್ರಿಸ್ತ ನಾವು ನಿರೀಕ್ಷಿಸದ ಗಳಿಗೆಯಲ್ಲಿ ಆಗಮಿಸುವರು ಅದುದರಿಂದ ಜಾಗರೂಕರಾಗಿರಿ! ಎಂದು ಎಚ್ಚರಿಸುತ್ತದೆ. ಯಾಕೆಂದರೆ ಮಾನವರಾದ ನಾವು ಈ ಲೋಕದ ಜೀವನವನ್ನು ಸುಂದರಗೊಳಿಸುವುದರಲ್ಲಿಯೇ ಮಗ್ನರಾಗಿರುತ್ತೇವೆ. ಆದರೆ ಇವೆಲ್ಲಕ್ಕೂ ಮಿಗಿಲಾಗಿ ಸಂತೃಪ್ತಿಯನ್ನು ನೀಡುವ ಪ್ರಭು ಆಗಮಿಸುವಾಗ ಅವರನ್ನು ಎದುರುಗೊಳ್ಳಲು ನಾವು ಸಿದ್ಧರಾಗದಿದ್ದಲ್ಲಿ ಅನಂತ ಆನಂದವನ್ನು ಕಳೆದುಕೊಳ್ಳುತ್ತೇವೆ ಎಂಬ ಅರಿವು ನಮಗಿರಬೇಕು.ಇದಕ್ಕಾಗಿ ನಾವೇನು ಮಾಡಬೇಕು?
 1. ಭಗವಂತನ ಆಗಮನ ನಿರಂತರವಾಗಿ ಸಾಗುತ್ತಲೇ ಇರುತ್ತದೆ ಅದನ್ನು ಗ್ರಹಿಸಿಕೊಳ್ಳುವ ಅರಿವನ್ನು ದೇವರ ವಾಕ್ಯವನ್ನು ಓದುವುದರ ಮೂಲಕ ವೃದ್ಧಿಗೊಳಿಸಿಕೊಳ್ಳಬೇಕು.
2. ಭಗವಂತನು ಆಗಮಿಸಿದಾಗ ಬರೇ ನಾವು ಇದ್ದರೆ ಸಾಲದು ದೇವಜನರೆಲ್ಲರೂ ಇರಬೇಕು. ಅಂದರೆ. ನಾನು ಮಾತ್ರವಲ್ಲ ನನ್ನ ಸಮುದಾಯವನ್ನು ಅಣುಗೊಳಿಸುವ ಹೊಣೆಗಾರಿಕೆಯೂ ನನಗಿದೆ ಎಂಬ ಜ್ಞಾನವಿರಬೇಕು.
3. ಭಗವಂತನು ಆಗಮಿಸಿದಾಗ ಆತನನ್ನು ಕಣ್ಣು ತುಂಬಿಕೊಳ್ಳಲು ಪ್ರಾರ್ಥನೆ, ಧಾನಧರ್ಮಗಳಿಂದ ನಮ್ಮನ್ನು ಶುದ್ಧೀಕರಿಸಿಕೊಂಡಿರಬೇಕು ಆಗ ಆವರು ನಮಗೆ ದರುಶನವಿತ್ತು ಆತ್ಮಸಂತೃಪ್ತಿಯನ್ನು ನೀಡುವರು.    
=====================
ಚಿಂತನೆ- ಫಾ ವಿಜಯ್ ಕುಮಾರ್, 
ಬಳ್ಳಾರಿ ಧರ್ಮಾಕ್ಷೇತ್ರ
======================


No comments:

Post a Comment