ನವೆಂಬರ್ 9, 2020 ಸೋಮವಾರ [ಬಿಳಿ]
ಲಾಥೆರಾನ್ ಮಹಾದೇವಾಲಯದ ಅಭಿಷೇಕೋತ್ಸವ (ಹಬ್ಬ)
ಮೊದಲ ವಾಚನ: ಯೆಜೆಕಿಯೇಲ 47.1-2, 8-9, 12
ಕೀರ್ತನೆ 46:1-2, 4-5, 7-8. ಶ್ಲೋಕ.4
ನದಿಯೊಂದು ಆನಂದಗೊಳಿಸುವುದು ದೇವನಗರವನು
ಪುನೀತಗೊಳಿಸುವುದು ಪರಾತ್ಪರನ ನಿವಾಸವನು
ಎರಡನೆಯ ವಾಚನ: 1 ಕೊರಿಂಥಿಯರಿಗೆ 3.9-11, 16-17
ಶುಭಸಂದೇಶ: ಯೊವಾನ್ನ 2.13-22
==================
ಮೊದಲನೇ ವಾಚನ
ಯೆಜೆಕಿಯೇಲ 47.1-2, 8-9, 12
1 : ಆಮೇಲೆ ಆ ಪುರುಷ ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದು ತಂದನು: ಇಗೋ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವದಕಡೆಗೆ ಹರಿಯುತ್ತಿತ್ತು. (ದೇವಸ್ಥಾನ ಪೂರ್ವಾಭಿಮುಖವಾಗಿತ್ತು). ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಬಲಿಪೀಠದ ದಕ್ಷಿಣದಲ್ಲಿ ಹರಿಯುತ್ತಿತ್ತು.
2 : ಆಗ ಅವನು ನನ್ನನ್ನು ಉತ್ತರ ಹೆಬ್ಬಾಗಿಲಿನಿಂದ ದೇವಾಲಯದ ಹೊರಗಿನ ಮಾರ್ಗವಾಗಿ ಸುತ್ತಿಸಿಕೊಂಡು ಪೂರ್ವದ ಹೆಬ್ಬಾಗಿಲಿಗೆ ಕರೆದುತಂದನು. ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲಮೆಲ್ಲನೆ ಹರಿಯುವ ನೀರು ಕಾಣಿಸಿತು.
8 : ಆಗ ಅವನು ನನಗೆ ಹೀಗೆ ಹೇಳಿದನು: “ಈ ಪ್ರವಾಹ ಪೂರ್ವಪ್ರಾಂತ್ಯಕ್ಕೆ ಹೊರಟು ಅರಬಾ ಎಂಬ ಕಣಿವೆಗೆ ಇಳಿದು ಲವಣ ಸಮುದ್ರದ ಕಡೆಗೆ ಹರಿಯುವುದು; ದೇವಸ್ಥಾನದಿಂದ ಹೊರಟ ಪ್ರವಾಹವು ಲವಣಸಮುದ್ರಕ್ಕೆ ಸೇರಲು ಅದರ ನೀರು ಸಿಹಿಯಾಗುವುದು.
9 : ಈ ತೊರೆ ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗುಂಪು ಗುಂಪಾಗಿ ಚಲಿಸುವ ಸಕಲವಿಧ ಜಲ ಜಂತುಗಳು ಬದುಕಿ ಬಾಳುವುವು; ವಿೂನುಗಳು ತಂಡೋಪ ತಂಡವಾಗಿರುವುವು. ಈ ನೀರು ಸಮುದ್ರಕ್ಕೆ ಬೀಳಲು ಆ ನೀರೂ ಸಿಹಿಯಾಗುವುದು; ಈ ತೊರೆ ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವುದು.
12 : ತೊರೆಯ ಎರಡು ದಡಗಳಲ್ಲಿಯೂ ಸಕಲ ಫಲವೃಕ್ಷಗಳು ಬೆಳೆಯುವುವು. ಅವುಗಳ ಎಲೆ ಬಾಡದು, ಹಣ್ಣು ತೀರದು. ತೊರೆಯ ನೀರು ಪವಿತ್ರಾಲಯದೊಳಗಿಂದ ಹೊರಟುಬರುವ ಕಾರಣ ಅವು ತಿಂಗಳು ತಿಂಗಳಲ್ಲಿಯೂ ಹೊಸ ಹೊಸ ಫಲವನ್ನು ಕೊಡುತ್ತಲಿರುವುವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷಧಕ್ಕೂ ಅನುಕೂಲಿಸುವುವು.”
===================
ಕೀರ್ತನೆ
ಕೀರ್ತನೆ 46:1-2, 4-5, 7-8. ಶ್ಲೋಕ.4
ನದಿಯೊಂದು ಆನಂದಗೊಳಿಸುವುದು
ದೇವನಗರವನು
ಪುನೀತಗೊಳಿಸುವುದು
ಪರಾತ್ಪರನ ನಿವಾಸವನು
1 : ದೇವರೆಮಗೆ ಆಶ್ರಯ ದುರ್ಗ /
ಸಂಕಟದಲಿ ಸಿದ್ಧ ಸಹಾಯಕ //
2 : ಕಡಲಲ್ಲಿ ಗುಡ್ಡಗಳು
ಮುಳುಗಿದರೂ ದಿಗಿಲಿಲ್ಲ /
ಪೊಡವಿ ಕಂಪಿಸಿದರು
ನಮಗೇನು ಭಯವಿಲ್ಲ //
4 : ನದಿಯೊಂದು ಆನಂದಗೊಳಿಸುವುದು
ದೇವನಗರವನು |
ಪುನೀತಗೊಳಿಸುವುದು
ಪರಾತ್ಪರನ ನಿವಾಸವನು ||
5 : ದೇವನಿರುವನಾ ನಗರ ಮಧ್ಯೆ,
ಅಳಿವಿಲ್ಲ ಅದಕೆ /
ಉದಯಕಾಲದಲೆ ದೇವ
ಬರುವನು ಅದರ ಸಹಾಯಕೆ //
7 : ನಮ್ಮ ಕಡೆಯಿರುವನು
ಸೇನಾಧೀಶ್ವರ ಪ್ರಭುವು /
ಯಕೋಬ ಕುಲದೇವರು
ನಮಗಾಶ್ರಯ ದುರ್ಗವು //
8 : ಪ್ರಭುವಿನ ಕಾರ್ಯಗಳ
ನೋಡಬನ್ನಿ /
ಇಳೆಯೊಳಗೆಸಗಿದ
ಪವಾಡಗಳನು ನೋಡಿ //
==================
ಎರಡನೇ ವಾಚನ
1 ಕೊರಿಂಥಿಯರಿಗೆ 3.9-11, 16-17
9 : ನಾವು ದೇವರ ಸಹಕಾರ್ಮಿಕರು. ನೀವು ದೇವರೆ ಸಾಗುವಳಿ ಮಾಡುವ ಹೊಲ; ಅವರೆ ನಿರ್ಮಿಸುತ್ತಿರುವ ಮಂದಿರ.
10 : ದೇವರು ನನಗಿತ್ತ ವರದಾನಗಳಿಗೆ ಅನುಸಾರವಾಗಿ ನಾನು ಚತುರ ಶಿಲ್ಪಿಯಂತೆ ಅಸ್ತಿವಾರ ಹಾಕಿದೆ. ಇನ್ನೊಬ್ಬನು ಅದರ ಮೇಲೆ ಕಟ್ಟುತ್ತಿದ್ದಾನೆ. ಆದರೆ ಕಟ್ಟುವ ಪ್ರತಿಯೊಬ್ಬನು ತಾನು ಹೇಗೆ ಕಟ್ಟುತ್ತಿದ್ದಾನೆ ಎಂಬುದರ ಬಗ್ಗೆ ಎಚ್ಚರದಿಂದಿರಲಿ.
11 : ಈಗಾಗಲೇ ಅಸ್ತಿವಾರ ಹಾಕಲಾಗಿದೆ. ಯೇಸುಕ್ರಿಸ್ತರೇ ಆ ಅಸ್ತಿವಾರ. ಇದಲ್ಲದೆ, ಬೇರೆ ಅಸ್ತಿವಾರವನ್ನು ಯಾರೂ ಹಾಕಲಾಗದು.
16 : ನೀವು ದೇವರ ಆಲಯವಾಗಿದ್ದೀರಿ. ದೇವರ ಆತ್ಮವು ನಿಮ್ಮಲ್ಲಿ ವಾಸಿಸುತ್ತದೆಂದು ನಿಮಗೆ ಚೆನ್ನಾಗಿ ತಿಳಿದಿದೆ.
17 : ಯಾವನಾದರೂ ದೇವಾಲಯವನ್ನು ನಾಶಮಾಡಿದರೆ ದೇವರು ಅವನನ್ನು ನಾಶಮಾಡುತ್ತಾರೆ. ದೇವರ ಆಲಯವು ಪವಿತ್ರವಾದುದು. ನೀವೇ ಆ ಆಲಯ.
ಶುಭಸಂದೇಶ
==========
ಯೊವಾನ್ನ 2.13-22
13 : ಯೆಹೂದ್ಯರ ಪಾಸ್ಕ ಹಬ್ಬವು ಹತ್ತಿರವಾಗಿದ್ದುದರಿಂದ ಯೇಸುಸ್ವಾಮಿ ಜೆರುಸಲೇಮಿಗೆ ತೆರಳಿದರು.
14 : ಅಲ್ಲಿಯ ಮಹಾದೇವಾಲಯದಲ್ಲಿ ದನ, ಕುರಿ ಮತ್ತು ಪಾರಿವಾಳಗಳನ್ನು ಮಾರುವವರು ಮತ್ತು ನಾಣ್ಯವಿನಿಮಯ ಮಾಡುವವರು ವ್ಯಾಪಾರಕ್ಕೆ ಕುಳಿತಿದ್ದರು.
15 : ಅದನ್ನು ಕಂಡ ಯೇಸು, ಹಗ್ಗವನ್ನು ಚಾವಟಿಯಂತೆ ಹೆಣೆದು ಅದರಿಂದ ಅವರನ್ನೆಲ್ಲಾ ದೇವಾಲಯದಿಂದ ಹೊರಗಟ್ಟಿದರು. ದನಕುರಿಗಳನ್ನು ಓಡಿಸಿದರು. ನಾಣ್ಯವಿನಿಮಯ ಮಾಡುವವರ ಮೇಜುಗಳನ್ನು ಕೆಡವಿ, ಚಿಲ್ಲರೆ ಹಣವನ್ನು ಚೆಲ್ಲಿದರು.
16 : ಪಾರಿವಾಳಗಳನ್ನು ಮಾರುತ್ತಿದ್ದವರಿಗೆ, “ಇವನ್ನು ಇಲ್ಲಿಂದ ತೆಗೆದುಕೊಂಡು ಹೊರಡಿ. ನನ್ನ ಪಿತನ ಆಲಯವನ್ನು ಸಂತೆಯನ್ನಾಗಿ ಮಾಡಬೇಡಿ,” ಎಂದು ಹೇಳಿದರು.
17 : ‘ನಿನ್ನ ಆಲಯದ ಮೇಲಿನ ಅಭಿಮಾನವು ನನ್ನನ್ನು ಬೆಂಕಿಯಂತೆ ದಹಿಸುತ್ತದೆ,’ ಎಂದು ಪವಿತ್ರಗ್ರಂಥದಲ್ಲೇ ಬರೆದಿರುವ ವಾಕ್ಯವು ಶಿಷ್ಯರಿಗೆ ಆಗ ನೆನಪಾಯಿತು.
18 : ಯೆಹೂದ್ಯರು, “ಇಷ್ಟೆಲ್ಲಾ ಮಾಡಲು ನಿನಗೆ ಅಧಿಕಾರವಿದೆ ಎಂದು ರುಜುವಾತು ಪಡಿಸುವುದಕ್ಕೆ ಯಾವ ಪವಾಡವನ್ನು ಮಾಡಿ ತೋರಿಸಬಲ್ಲೆ?” ಎಂದು ಯೇಸುವನ್ನು ಪ್ರಶ್ನಿಸಿದರು.
19 : ಅದಕ್ಕೆ ಯೇಸು, “ಈ ದೇವಾಲಯವನ್ನು ಕೆಡವಿಬಿಡಿ, ಮೂರು ದಿನದಲ್ಲಿ ಅದನ್ನು ಪುನಃ ಎಬ್ಬಿಸುವೆನು,” ಎಂದು ಉತ್ತರಕೊಟ್ಟರು.
20 : ಚಕಿತರಾದ ಯೆಹೂದ್ಯರು, “ಈ ದೇವಾಲಯವನ್ನು ಕಟ್ಟಲು ನಲವತ್ತಾರು ವರ್ಷಗಳು ಹಿಡಿದಿವೆ. ನೀನು ಮೂರು ದಿನಗಳಲ್ಲೇ ಅದನ್ನು ಎಬ್ಬಿಸಬಲ್ಲೆಯಾ?” ಎಂದು ಕೇಳಿದರು.
21 : ಯೇಸು ಹೇಳಿದ್ದು ತಮ್ಮ ದೇಹವೆಂಬ ದೇಗುಲವನ್ನು ಕುರಿತು.
22 : ಅವರು ಸತ್ತು ಪುನರುತ್ಥಾನ ಹೊಂದಿದ ಬಳಿಕ ಶಿಷ್ಯರು ಅವರ ಈ ಮಾತುಗಳನ್ನು ಸ್ಮರಿಸಿಕೊಂಡರು. ಪವಿತ್ರಗ್ರಂಥದಲ್ಲೂ ಯೇಸುವಿನ ಮಾತಿನಲ್ಲೂ ಅವರಿಗೆ ಆಗ ವಿಶ್ವಾಸ ಹುಟ್ಟಿತು.
==================
ಚಿಂತನೆ
ಲ್ಯಾಟರನ್ ದೇವಾಲಯವು ಕ್ರೈಸ್ತ ಇತಿಹಾಸದಲ್ಲೇ ಅತಿ ಪ್ರಾಚೀನ ದೇವಾಲಯ ಹಾಗೂ ಎಲ್ಲಾ ದೇವಾಲಯಗಳಿಗೂ ತಾಯಿ ದೇವಾಲಯವಿದ್ದಂತೆ. ಸಂತ ಪೇತ್ರರ ಬಸಿಲಿಕವನ್ನು ಕಟ್ಟುವ ಮುನ್ನಲ್ಯಾಟರನ್ ಮಹಾದೇವಾಲಯವು ಕ್ರೈಸ್ತರ ಆಡಳಿತ ಕೇಂದ್ರವಾಗಿತ್ತು. ಕ್ರಿ. ಶ. 324, ನವೆಂಬರ್ 9 ರಂದು ಜಗದ್ಗುರು ಸಿಲ್ವೇಸ್ಟರ್ರವರು ಈ ದೇವಾಲಯವನ್ನು ಪ್ರತಿಸ್ಥಾಪಿಸಿದರು.. ಪ್ರತಿ ಧರ್ಮಾಧ್ಯಕ್ಷರಿಗೆ ಪ್ರಧಾನ ದೇವಾಲಯವಿರುವಂತೆ ಜಗದ್ಗುರುಗಳ ಪ್ರಧಾನ ದೇವಾಲಯವೇ ಈ ಲ್ಯಾಟರನ್ ಮಹಾದೇವಾಲಯವಾಗಿತ್ತು. ಅರಸ ಕಾನ್ಸ್ಟಂಟೈನ್ ಲ್ಯಾಟರಾನಿ ಅರಮನೆಯನ್ನು ಜಗದ್ಗುರುಗಳಿಗೆ ಕೊಡುಗೆಯಾಗಿ ನೀಡುತ್ತಾನೆ. ಈ ದೇವಾಲಯವನ್ನು ಸ್ನಾಪಕ ಯೊವಾನರಿಗೆ ಹಾಗೂ ಶುಭಸಂದೇಶಕಾರಯೊವಾನ್ನನಿಗೆ ಅರ್ಪಿಸಲಾಗಿದೆ. ಹಾಗಾಗಿ ಈ ದೇವಾಲಯವನ್ನು ಸಂತ, ಯೊವಾನ್ನರ / ಜಾನರ ಲ್ಯಾಟರನ್ ದೇವಾಲಯವೆನ್ನುತ್ತಾರೆ.
===================
No comments:
Post a Comment