Wednesday, 2 December 2020

ನವೆಂಬರ್ 8, 2020 ಭಾನುವಾರ

 ನವೆಂಬರ್ 8, 2020 ಭಾನುವಾರ                        [ಹಸಿರು]
ಸಾಧಾರಣ ಕಾಲದ 32ನೇ ಭಾನುವಾರ
ಮೊದಲ ವಾಚನ: ಸುಜ್ಞಾನ 6.12-16
ಕೀರ್ತನೆ 63:1-7 ಶ್ಲೋಕ.1 
ದೇವಾ, ನೀಯೆನ್ನ ದೇವಾ, ನಿನಗಾಗಿ ನಾ ಕಾದಿರುವೆ 
ಎರಡನೇ ವಾಚನ: 1 ಥೆಸಲೋನಿಯರಿಗೆ 4.13-18
ಶುಭಸಂದೇಶ: ಮತ್ತಾಯ 25.1-13
==================
ಮೊದಲನೇ ವಾಚನ
ಸುಜ್ಞಾನ 6.12-16
12 : ಸುಜ್ಞಾನವೆಂಬಾಕೆ ತೇಜೋ ಪುಂಜಳಾಗಿ ಇರುವಳು, ಅವಳ ಕಾಂತಿ ಕುಂದದು. ಪ್ರೀತಿಸುವವರಿಗೆ ಸಹಜವಾಗಿ ಗೋಚರ ಆಗುವಳು, ಅರಸುವವರಿಗೆ ಸಿಕ್ಕುವಳು.
13 : ತನ್ನನ್ನು ತಿಳಿಯಲಪೇಕ್ಷಿಸುವವರ ಹತ್ತಿರಕೆ ತಾನೇ ಬಂದು ತಿಳಿಯಪಡಿಸಿಕೊಳ್ಳುತ್ತಾಳೆ.
14 : ಅವಳನ್ನು ಹುಡುಕಲು ನಸುಕಿನಲೇ ಏಳುವ ಪರಿಶ್ರಮ ಬೇಡ; ಕಾರಣ – ತನ್ನ ಬಾಗಿಲಲೇ ಅವಳು ಕುಳಿತಿರುವುದನ್ನು ಕಾಣುವನಾತ.
15 : ಅವಳ ಮೇಲೇ ನಿಗವಿಟ್ಟಿರುವವನು ಬುದ್ಧಿಸಂಪನ್ನನಾಗುವನು ಅವಳನ್ನೇ ಕಾಯ್ದಿರುವವನು ಚಿಂತೆಯಿಂದ ಬೇಗ ಮುಕ್ತನಾಗುವನು.
16 : ಸುಜ್ಞಾನ ತನಗೆ ಯೋಗ್ಯರಾದವರನು ಅರಸುತ್ತಾ ಸಂಚರಿಸುತ್ತಾಳೆ ಹಾದಿಯಲ್ಲೇ ಅವರಿಗೆ ಪ್ರಸನ್ನಳಾಗಿ ಕಾಣಿಸಿಕೊಳ್ಳುತ್ತಾಳೆ ಅವರ ಪ್ರತಿಯೊಂದು ಆಲೋಚನೆಯಲ್ಲೂ ಅವರೊಂದಿಗಿರುತ್ತಾಳೆ.
===================
ಕೀರ್ತನೆ 
ಕೀರ್ತನೆ 63:2-8ಶ್ಲೋಕ.1 
ದೇವಾ, ನೀಯೆನ್ನ ದೇವಾ, 
ನಿನಗಾಗಿ ನಾ ಕಾದಿರುವೆ 
2 : ನಿನ್ನ ಮಂದಿರದಲಿ 
ನನಗಾದ ದರ್ಶನದಲಿ / 
ನಿನ್ನ ಶಕ್ತಿ ಪ್ರತಿಭೆಯನು 
ಕಂಡಿರುವೆನಲ್ಲಿ //
3 : ಪ್ರಾಣಕ್ಕಿಂತ ಮಿಗಿಲಾದುದು 
ನಿನ್ನಚಲ ಪ್ರೀತಿ / 
ಎಡೆಬಿಡದೆ ಮಾಳ್ಪುದು 
ನನ್ನೀ ತುಟಿ ನಿನ್ನ ಸ್ತುತಿ //
4 : ನಿನ್ನ ಸ್ತುತಿಸುವೆ 
ಜೀವಮಾನ ಪರಿಯಂತ / 
ಕೈ ಮುಗಿವೆ ನಿನ್ನ ನಾಮದ 
ಸ್ಮರಣಾರ್ಥ //
5 : ಮೃಷ್ಟಾನ್ನ ತಿಂದಂತೆ 
ಎನ್ನ ಮನ ಸಂತೃಪ್ತ / 
ಸಂಭ್ರಮದಿಂದ ನಿನ್ನ 
ಹೊಗಳುವುದು ಬಾಯ್ತುಂಬ//
6 : ನಿದ್ರಿಸುವಾಗಲು ಮಾಡುವೆ 
ನಿನ್ನ ಸ್ಮರಣೆ /
ರಾತ್ರಿಯೆಲ್ಲ ನಿನ್ನ ಧ್ಯಾನವೆ 
ನನಗೆ ಜಾಗರಣೆ //
7 : ನನಗೆ ನೀನು 
ನಿರಂತರದ ಸಹಾಯಕ | 
ನಿನ್ನ ರೆಕ್ಕೆಗಳಡಿ ನಾ 
ಸುಖಿ ಗಾಯಕ ||
8 : ನನ್ನಾತ್ಮ 
ನಿನಗಾತುಕೊಂಡಿದೆ /
ನಿನ್ನ ಬಲಗೈ 
ನನಗಿಂಬಾಗಿದೆ //
===============
ಎರಡನೇ ವಾಚನ 
1 ಥೆಸಲೋನಿಯರಿಗೆ 4.13-18
13 : ಸಹೋದರರೇ, ಮೃತರ ಮುಂದಿನ ಸ್ಥಿತಿಗತಿಯ ವಿಷಯವಾಗಿ ನೀವು ತಿಳಿದಿರಬೇಕು ಎಂಬುದೇ ನಮ್ಮ ಬಯಕೆ. ಏಕೆಂದರೆ, ನಂಬಿಕೆ ನಿರೀಕ್ಷೆಯಿಲ್ಲದ ಇತರರಂತೆ ಮೃತರಿಗಾಗಿ ನೀವು ದುಃಖಿಸಬಾರದು
14 : ಯೇಸು ಸತ್ತು ಪುನರುತ್ಥಾನ ಹೊಂದಿದರೆಂದು ನಾವು ವಿಶ್ವಾಸಿಸುತ್ತೇವೆ ಅಲ್ಲವೇ? ಹಾಗೆಯೇ, ಕ್ರಿಸ್ತಯೇಸುವಿನಲ್ಲಿ ವಿಶ್ವಾಸವಿಟ್ಟು ಮರಣಹೊಂದಿದವರನ್ನು ದೇವರು ಯೇಸುಕ್ರಿಸ್ತರೊಡನೆ ಮರಳಿ ಕರೆದುಕೊಳ್ಳುತ್ತಾರೆ.
15 : ಪ್ರಭುವಿನ ವಾಕ್ಯದ ಆಧಾರದ ಮೇಲೆ ನಾವು ನಿಮಗೆ ಹೇಳುತ್ತೇವೆ: ಪ್ರಭು ಪುನರಾಗಮಿಸುವಾಗ, ಇನ್ನೂ ಬದುಕಿರುವ ನಾವು ಮೃತರಾಗಿರುವ ಇತರರಿಗಿಂತಲೂ ಮುಂದಿನವರಾಗುವುದಿಲ್ಲ.
16 : ಆಜ್ಞಾಘೋಷವಾದಾಗ, ಪ್ರಧಾನ ದೂತನ ಧ್ವನಿಯು ಕೇಳಿಬಂದಾಗ, ದೇವರ ತುತೂರಿ ನಾದಗೈದಾಗ, ಪ್ರಭುವೇ ಸ್ವರ್ಗದಿಂದ ಇಳಿದು ಬರುತ್ತಾರೆ. ಆಗ, ಕ್ರಿಸ್ತಸ್ಥರಾಗಿ ಮೃತರಾದವರು ಮೊದಲು ಎದ್ದು ಬರುತ್ತಾರೆ.
17 : ಆಮೇಲೆ, ಇನ್ನೂ ಬದುಕಿರುವ ನಾವು ಎದ್ದುಬಂದವರೊಡನೆ ಆಕಾಶಮಂಡಲದಲ್ಲಿ ಪ್ರಭುವನ್ನು ಎದುರುಗೊಳ್ಳಲು ಮೇಘಾರೂಢರಾಗಿ ಮೇಲಕ್ಕೆ ಒಯ್ಯಲ್ಪಡುತ್ತೇವೆ. ಹೀಗೆ ಸರ್ವದಾ ನಾವು ಪ್ರಭುವಿನೊಂದಿಗೆ ಇರುತ್ತೇವೆ.
18 : ಆದ್ದರಿಂದ, ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿಕೊಳ್ಳಿ.
=======================
ಶುಭಸಂದೇಶ
ಮತ್ತಾಯ 25.1-13
1 : “ಆ ದಿನಗಳಲ್ಲಿ ಸ್ವರ್ಗಸಾಮ್ರಾಜ್ಯ ಹೇಗಿರುವುದು ಎನ್ನುವುದಕ್ಕೆ ಈ ಸಾಮತಿಯನ್ನು ಕೊಡಬಹುದು: ಹತ್ತು ಮಂದಿ ಕನ್ಯೆಯರು ದೀಪಾರತಿ ಹಿಡಿದು ಮದುವಣಿಗನನ್ನು ಎದುರುಗೊಳ್ಳಲು ಹೋದರು.
2 : ಅವರಲ್ಲಿ ಐವರು ವಿವೇಕಿಗಳು, ಐವರು ಅವಿವೇಕಿಗಳು,
3 : ಅವಿವೇಕಿಗಳು ದೀಪಗಳನ್ನು ತೆಗೆದುಕೊಂಡರೇ ಹೊರತು ಜೊತೆಗೆ ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ.
4 : ವಿವೇಕಿಗಳಾದರೋ ದೀಪಗಳ ಜೊತೆಗೆ ಬುಡ್ಡಿಗಳಲ್ಲಿ ಎಣ್ಣೆಯನ್ನೂ ತೆಗೆದುಕೊಂಡರು.
5 : ಮದುವಣಿಗ ಬರುವುದು ತಡವಾಯಿತು. ಅವರೆಲ್ಲರೂ ತೂಕಡಿಸುತ್ತಾ ಹಾಗೇ ನಿದ್ರೆಹೋದರು.
6 : “ನಡುರಾತ್ರಿಯ ವೇಳೆ. ‘ಇಗೋ, ಮದುವಣಿಗ ಬರುತ್ತಿದ್ದಾನೆ; ಬನ್ನಿ, ಆತನನ್ನು ಎದುರುಗೊಳ್ಳಿ,’ ಎಂಬ ಕೂಗು ಕೇಳಿಸಿತು. ಕನ್ಯೆಯರೆಲ್ಲರೂ ಎದ್ದರು.
7 : ತಮ್ಮ ತಮ್ಮ ದೀಪದ ಬತ್ತಿಯನ್ನು ಸರಿಮಾಡಿದರು.
8 : ಅವಿವೇಕಿಗಳು, ‘ನಮ್ಮ ದೀಪಗಳು ಆರಿಹೋಗುತ್ತಾ ಇವೆ; ನಿಮ್ಮ ಎಣ್ಣೆಯಲ್ಲಿ ನಮಗೂ ಕೊಂಚ ಕೊಡಿ,’ ಎಂದು ವಿವೇಕಿಗಳನ್ನು ಕೇಳಿಕೊಂಡರು.
9 : ಅದಕ್ಕೆ ಅವರು, ‘ನಿಮಗೆ ಕೊಟ್ಟರೆ ನಮಗೂ ನಿಮಗೂ ಸಾಲದೆ ಹೋದೀತು. ನೀವು ಅಂಗಡಿಗೆ ಹೋಗಿ ಕೊಂಡುಕೊಂಡರೆ ಒಳ್ಳೆಯದು,’ ಎಂದರು.
10 : ಅಂತೆಯೇ ಅವರು ಎಣ್ಣೆಯನ್ನು ಕೊಂಡುಕೊಳ್ಳಲು ಹೋದಾಗ ಮದುವಣಿಗನು ಬಂದೇಬಿಟ್ಟನು. ಸಿದ್ಧರಾಗಿದ್ದವರು ಅವನ ಸಂಗಡ ವಿವಾಹ ಮಹೋತ್ಸವಕ್ಕೆ ಹೋದರು. ಕಲ್ಯಾಣಮಂಟಪದ ಬಾಗಿಲುಗಳನ್ನು ಮುಚ್ಚಲಾಯಿತು.
11 : ಉಳಿದ ಕನ್ಯೆಯರು ಅನಂತರ ಬಂದರು. ‘ಸ್ವಾವಿೂ, ಸ್ವಾವಿೂ, ನಮಗೆ ಬಾಗಿಲು ತೆರೆಯಿರಿ,’ ಎಂದು ಕೂಗಿಕೊಂಡರು.
12 : ಅದಕ್ಕೆ ಉತ್ತರವಾಗಿ ಆ ಮದುವಣಿಗ, ‘ಅದಾಗದು, ನೀವು ಯಾರೋ ನನಗೆ ಗೊತ್ತಿಲ್ಲ,’ ಎಂದುಬಿಟ್ಟ.
13 : ಆದ್ದರಿಂದ ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು.
===================

ಚಿಂತನೆ
ಸಾಧಾರಣ ಕಾಲದ 32ನೇ ಭಾನುವಾರ

ಪೀಠಿಕೆ
======
ವಿವೇಕವು ಬೆಳಕಿನಂತೆ, ಅವಿವೇಕವು ಕತ್ತಲೆಯಂತೆ, ವಿವೇಕವನ್ನು ಹಿಡಿದುಕೊಂಡು  ಹೊರಟವನಿಗೆ ಎಂತಹ ಪ್ರಸಂಗದಲ್ಲಿಯೂ ದಾರಿ ತಪ್ಪುವುದಿಲ್ಲ. ಕೈಯಲ್ಲಿ ಟಾರ್ಚ್ ಇದ್ದವನಿಗೆ ತನ್ನ ದಾರಿಯಲ್ಲಿರುವ ಅಡೆತಡೆಗಳು ಕಾಣಿಸುತ್ತವೆ. ಅವನು ಅವುಗಳನ್ನು ತಪ್ಪಿಸಿ ಹೆಜ್ಜೆಯಿಡುತ್ತಾನೆ. ಕೆಲ ಮನುಷ್ಯರು ವಿವೇಕ ವಿವೇಚನೆಗಳಿಂದ ಬದುಕಿರುವುದಕ್ಕಿಂತಲೂ ಉದ್ರೇಕ, ಉದ್ವೇಗ, ಅಜಾಗರೂಕತೆಯಿಂದ ಬದುಕುತ್ತಾರೆ. ವಿವೇಕ ವಿವೇಚನೆಗಳೆಂದರೆ ತಿಳಿವಳಿಕೆ, ವ್ಯವಹಾರ ಜ್ಞಾನ, ಮುಂದಾಲೋಚನೆ ಮತ್ತು ಜಾಗೃತಿ ಭಾವ. ಉದಾಸೀನತೆಯಿಂದ ಬದುಕದೆ ಮುಂದಾಲೋಚನೆಯಿಂದ ಬದುಕಲು ನಮಗೆ ಬೇಕಾದ ಅನುಗ್ರಹಕ್ಕಾಗಿ ಪ್ರಾರ್ಥಿಸೋಣ.

ಮೊದಲ ವಾಚನ: ಸುಜ್ಞಾನ 6.12-16
======================
ಗ್ರೀಕರ  ಪ್ರಮುಖ ನಗರವಾದ ಅಲೆಗ್ಸಾಂಡ್ರಿಯಾದಲ್ಲಿ ವಾಸವಾಗಿದ್ದ ಒಬ್ಬ ಯೆಹೂದ್ಯನಿಂದ ಮೂಲತಃ ಗ್ರೀಕ್ ಭಾಷೆಯಲ್ಲಿ ಕ್ರಿ.ಪೂ 100ರಲ್ಲಿ ರಚಿತವಾದ ಗ್ರಂಥವಿದು. ಇದರಲ್ಲಿ ಸುಜ್ಞಾನವನ್ನು ಮಹಿಳೆಗೆ ಹೋಲಿಸಲಾಗಿದೆ. ಸುಜ್ಞಾನ ದೇವರ ಕೊಡುಗೆ. ನಶ್ವರವಾದ ಜ್ಞಾನಕ್ಕಿಂತ ಅಳಿಯದ ಶಾಶ್ವತವಾದ ಜ್ಞಾನಕ್ಕೆ ಹೆಚ್ಚು ಪ್ರಾಮುಖ್ಯ ನೀಡಲು ಇಂದಿನ ವಾಚನ ಕರೆ ನೀಡುತ್ತದೆ.

ಎರಡನೇ ವಾಚನ: 1 ಥೆಸಲೋನಿಯರಿಗೆ 4.13-18
=========================
ಥೆಸಲೋನಿಯರಿಗೆ ಬರೆದ ಈ ಮೊದಲನೆಯ ಪತ್ರದಲ್ಲಿ ಪೌಲನು ಅಲ್ಲಿನ ಕ್ರೈಸ್ತ ವಿಶ್ವಾಸಿಗಳನ್ನು ಹುರಿದುಂಬಿಸಿ, ಅವರು ವಿಶ್ವಾಸದಲ್ಲಿ ಸ್ಥಿರವಾಗಿರಬೇಕೆಂದು ಆದೇಶ ನೀಡುತ್ತಾನೆ. ಥೆಸಲೋನಿಯಾದ ಜನರು ತಮ್ಮ ಜೀವಿತಾವಧಿಯಲ್ಲೇ ಪ್ರಭುವಿನ ಎರಡನೆಯ ಬರುವಿಕೆಗಾಗಿ ಕಾಯುತ್ತಿದ್ದರು. ಹಾಗಾಗಿ ಪೌಲನು ವಿಶ್ವಾಸದಿಂದ ಪ್ರಭುವನ್ನು ಎದುರುನೋಡಲು ಆದೇಶಿಸುತ್ತಾನೆ. 

ಶುಭಸಂದೇಶ: ಮತ್ತಾಯ 25.1-13
=======================
ಪೂಜಾವಿಧಿ ವರ್ಷದ ಅಂತ್ಯದಲ್ಲಿ ಪ್ರಭುಕ್ರಿಸ್ತರ ಪುನರಾಗಮನ, ಅದಕ್ಕೆ ನಾವು ಕೈಗೊಳ್ಳಬೇಕಾದ ಸಿದ್ಧತೆಯ ಬಗ್ಗೆ ಇಂದಿನ ವಾಚನಗಳು ಮತ್ತು ಶುಭಸಂದೇಶ ನಮ್ಮನ್ನು ನೆನಪಿಸುತ್ತವೆ.
ಯೇಸುವು ದೇವರ ಸಾಮ್ರಾಜ್ಯದ ಲಕ್ಷಣಗಳನ್ನು ಸರಳವಾದ ಮಾತುಗಳಲ್ಲಿ ಜಾನಪದ ಸಾಮತಿಗಳಲ್ಲಿ , ಸೃಷ್ಟಿಯ ವಸ್ತುಗಳಲ್ಲಿ, ದಿನನಿತ್ಯದ ಚಟುವಟಿಕೆಗಳ ಮೂಲಕ ವಿವರಿಸುತ್ತಿದ್ದರು. ಅಂತೆಯೇ ಈ ಅಧ್ಯಾಯದಲ್ಲಿ ಯೆಹೂದ್ಯ ಸಂಸ್ಕೃತಿಯಲ್ಲೇ ಪ್ರಾಮುಖ್ಯ ಪಡೆದಿರುವ `ಮದುವೆ ಸಂಭ್ರಮದ’ ಮೂಲಕ ದೇವರ ಸಾಮ್ರಾಜ್ಯಕ್ಕೆ ತಕ್ಕ ಸಿದ್ಧತೆ ಮಾಡಬೇಕೆಂದು ತಿಳಿಸುತ್ತಾರೆ.
ಹಳೆಯ ಒಡಂಬಡಿಕೆಯ ಪ್ರಕಾರ ದೇವರು ಮದುವಣಿಗನಾದರೆ ಇಸ್ರಯೇಲ ಪ್ರಜೆಯು ವಧುವಿನ ಸ್ಥಾನದಲ್ಲಿತ್ತು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ನರಪುತ್ರನು ನಿಯತ ಕಾಲದಲ್ಲಿ ಬರುವನೋ  ಇಲ್ಲವೋ ಎಂದು ತಿಳಿಯುವುದು ನಮ್ಮ ಕೆಲಸವಲ್ಲ. ಯಾವುದೇ ಕ್ಷಣದಲ್ಲಾದರೂ ನರಪುತ್ರನ ಆಗಮನವಾಗಬಹುದು. ತಕ್ಕ ರೀತಿಯಲ್ಲಿ ಸಿದ್ಧರಾರಾಗುವುದು ಮಾತ್ರ ನಮ್ಮ ಹೊಣೆ. ವಿವೇಕಿ ಕನ್ಯೆಯರು ಪ್ರಾಮಾಣಿಕವಾಗಿ ಎಲ್ಲ ರೀತಿಯಲ್ಲಿ ಸಜ್ಜಾಗಿದ್ದರು, ಮುಂಜಾಗ್ರತೆಯಿಂದ ಎಣ್ಣೆಯನ್ನು ಸಹ ತಂದಿದ್ದರು. ಈ ಮುಂಜಾಗ್ರತೆಯರಾಗಿ ಮದುವೆ ಔತಣದಲ್ಲಿ ಭಾಗವಹಿಸಲು ಅವರು ಅರ್ಹರಲ್ಲ.. ಅವಿವೇಕಿ ಕನ್ಯೆಯರೊ ಸಕಾಲದಲ್ಲಿ ತಯಾರಾಗಿರದೆ ಹೊಣೆಗೇಡಿಗಳಾಗಿ ಮದುವೆ ಔತಣದಲ್ಲಿ ಭಾಗಿಯಾಗುವ ಅವಕಾಶ ಕಳೆದುಕೊಂಡರು.
ಈ ಸಾಮತಿಯ ಮೂಲಕ ನಾವು ಯಾವ ರೀತಿಯಲ್ಲಿ ಸಜ್ಜಾಗಿರಬೇಕೆಂದು ಯೇಸು ತಿಳಿಸುತ್ತಾರೆ. ಯೇಸುವಿನ ಹಿಂಬಾಲಕರು ದೇವರ ಆಗಮನವನ್ನು ಎದುರು ನೋಡುವ ಸಮಯದಲ್ಲಿ ಹೊಣೆಗೇಡಿತನವನ್ನು ತೋರಿಸಬಾರದು. ಅಂತಿಮ ಗಳಿಗೆಯ ಸಿದ್ಧತೆಯನ್ನು ದೇವರು ಪುರಸ್ಕರಿಸುವುದಿಲ್ಲ. ಪ್ರತಿಕ್ಷಣವು ದೇವರ ಆಗಮನಕ್ಕಾಗಿ ಸಿದ್ಧರಿರಬೇಕು. ಅವರ ಆಗಮನಕ್ಕೆ ಸಿದ್ಧರಾಗದೆ, ನಿರಾಸಕ್ತಿ ತೋರಿದರೆ ದೇವರ ಸಾಮ್ರಾಜ್ಯದ ಪ್ರವೇಶ ಅಸಾಧ್ಯವಾಗಬಹುದು.

=====================
ಚಿಂತನೆ – ಫಾ ಸೆಬಾಸ್ಟಿನ್, 
ಬೆಂಗಳೂರು ಮಹಾ ಧರ್ಮಕ್ಷೇತ್ರ
=====================

No comments:

Post a Comment