ಬಿಳಿ/ಶನಿ/ಪಾಸ್ಖ ಕಾಲದ ಎರಡನೇ ವಾರ
2ಪ್ರಭುವನು ಕೊಂಡಾಡಿ ಕಿನ್ನರಿಯನು ನುಡಿಸುತ / ಕೀರ್ತಿಸಿ ದಶತಂತಿ ವೀಣೆಯನು ಬಾರಿಸುತ //
1ನೇ ವಾಚನ - ಪ್ರೇ.ಕಾ 6: 1-7
1ಇತ್ತ ಭಕ್ತವಿಶ್ವಾಸಿಗಳ ಸಂಖ್ಯೆ ಹೆಚ್ಚುತ್ತಾ ಬಂದಿತು. ಆಗ ಗ್ರೀಕ್ ಮಾತನಾಡುತ್ತಾ ಇದ್ದವರ ಹಾಗೂ ಸ್ಥಳೀಯ ಭಾಷೆ ಮಾತನಾಡುತ್ತಿದ್ದವರ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು. ದಿನನಿತ್ಯ ಮಾಡುವ ದೀನದಲಿತರ ಸೇವೆಯಲ್ಲಿ ತಮ್ಮ ಕಡೆಯ ವಿಧವೆಯರನ್ನು ಅಲಕ್ಷ್ಯಮಾಡಲಾಗುತ್ತಿದೆ ಎಂದು ಗ್ರೀಕರು ಗೊಣಗುಟ್ಟಿದರು.
2ಆಗ ಹನ್ನೆರಡು ಮಂದಿ ಪ್ರೇಷಿತರು ಭಕ್ತವಿಶ್ವಾಸಿಗಳ ಸಭೆಯನ್ನು ಕರೆದು, “ನಾವು ದೇವರ ವಾಕ್ಯದ ಬೋಧನೆಯನ್ನು ಅವಗಣಿಸಿ ಊಟೋಪಚಾರಗಳ ಸೇವೆಯಲ್ಲಿ ಮಗ್ನರಾಗಿ ಇರುವುದು ಸರಿಯಲ್ಲ. 3ಆದುದರಿಂದ
ಸಹೋದರರೇ, ಪವಿತ್ರಾತ್ಮಭರಿತರೂ ಜ್ಞಾನಸಂಪನ್ನರೂ ಸನ್ಮಾನಿತರೂ ಆಗಿರುವ ಏಳು ವ್ಯಕ್ತಿಗಳನ್ನು ನಿಮ್ಮಿಂದ ಆರಿಸಿಕೊಳ್ಳಿ. ನಾವು ಅವರಿಗೆ ಈ ಜವಾಬ್ದಾರಿಯನ್ನು ವಹಿಸುತ್ತೇವೆ. 4ನಾವಾದರೋ
ಪ್ರಾರ್ಥನೆಯಲ್ಲೂ ವಾಕ್ಯೋಪದೇಶದಲ್ಲೂ ನಿರತರಾಗುತ್ತೇವೆ,” ಎಂದರು. 5ಪ್ರೇಷಿತರ
ಈ ಸಲಹೆಯನ್ನು ಇಡೀ ಸಭೆ ಅನುಮೋದಿಸಿತು. ಅಂತೆಯೇ ಅಗಾಧ ವಿಶ್ವಾಸ ಉಳ್ಳವನೂ ಪವಿತ್ರಾತ್ಮಭರಿತನೂ ಆದ ಸ್ತೇಫನ, ಫಿಲಿಪ್ಪ, ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ ಮತ್ತು ಯೆಹೂದ್ಯ ಮತಾವಲಂಬಿಯಾದ ಅಂತಿಯೋಕ್ಯದ ನಿಕೊಲಾಯ ಎಂಬ ಏಳು ಮಂದಿಯನ್ನು ಆರಿಸಿಕೊಂಡರು. 6ಪ್ರೇಷಿತರ
ಮುಂದೆ ಅವರನ್ನು ನಿಲ್ಲಿಸಿದರು. ಪ್ರೇಷಿತರು ಪ್ರಾರ್ಥನೆಮಾಡಿ ಅವರ ಮೇಲೆ ಹಸ್ತನಿಕ್ಷೇಪ ಮಾಡಿದರು. 7ದೇವರ ವಾಕ್ಯವು ಪ್ರವರ್ಧಿಸತೊಡಗಿತು. ವಿಶ್ವಾಸಿಗಳ ಸಂಖ್ಯೆ ಜೆರುಸಲೇಮಿನಲ್ಲಿ ಬಹಳವಾಗಿ ಹೆಚ್ಚಿತು. ಬಹುಮಂದಿ ಯಾಜಕರೂ ಆ ವಿಶ್ವಾಸಕ್ಕೆ ಶರಣಾದರು.
ಕೀರ್ತನೆ - 33: 1-2, 4-5, 18-19
1ಸಜ್ಜನರೇ, ಮಾಡಿರಿ ಪ್ರಭುವಿನ ಗುಣಗಾನ / ನೀತಿವಂತರೇ, ಆತನ ಸ್ತುತಿ ನಿಮಗೆ ಸುಗುಣ //
1ಸಜ್ಜನರೇ, ಮಾಡಿರಿ ಪ್ರಭುವಿನ ಗುಣಗಾನ / ನೀತಿವಂತರೇ, ಆತನ ಸ್ತುತಿ ನಿಮಗೆ ಸುಗುಣ //
2ಪ್ರಭುವನು ಕೊಂಡಾಡಿ ಕಿನ್ನರಿಯನು ನುಡಿಸುತ / ಕೀರ್ತಿಸಿ ದಶತಂತಿ ವೀಣೆಯನು ಬಾರಿಸುತ //
3ನೂತನ ಕೀರ್ತನೆಯನು ಆತನಿಗೆ ಹಾಡಿರಿ / ಇಂಪಾಗಿ ಬಾರಿಸಿ, ಸೊಂಪಾಗಿ ಭಜಿಸಿರಿ //
4ಸತ್ಯವಾದುದು
ಆತನ ಪವಿತ್ರ ವಾಕ್ಯ / ಸ್ತುತ್ಯವಾದುದು ಆತನ ಪುನೀತ ಕಾರ್ಯ //
5ಸತ್ಯಸಂಧನು,
ನ್ಯಾಯಪ್ರಿಯನು ಆತನು | ಅಚಲ ಪ್ರೀತಿಯಿಂದ ಜಗವನು ತುಂಬಿಹನು ||
18ಪ್ರಭುವಾದರೋ
ಕಟಾಕ್ಷಿಸುವನು ತನಗಂಜಿ ನಡೆದವರನು / ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು //
19ತಪ್ಪಿಸುವನವನು ಪ್ರಾಣವನು ಮರಣದಿಂದ / ಉಳಿಸುವನು ಜೀವವನು ಕ್ಷಾಮಡಾಮರದಿಂದ //
ಶುಭಸಂದೇಶ - ಯೊವಾನ್ನ 6: 16-21
16ಸಾಯಂಕಾಲವಾದ
ಮೇಲೆ ಯೇಸುಸ್ವಾಮಿಯ ಶಿಷ್ಯರು ಸರೋವರಕ್ಕೆ ಹೋಗಿ 17ದೋಣಿಯನ್ನು
ಹತ್ತಿ ಕಫೆರ್ನವುಮಿನ ಕಡೆ ಸಾಗಿದರು. ಆಗಲೇ ಕತ್ತಲು ಕವಿದಿತ್ತು. ಯೇಸು ಅವರ ಬಳಿಗೆ ಇನ್ನೂ ಬಂದಿರಲಿಲ್ಲ. 18ಅಷ್ಟರಲ್ಲಿ
ರಭಸವಾದ ಗಾಳಿ ಬೀಸತೊಡಗಿತು. ಸರೋವರವು ಅಲ್ಲೋಲಕಲ್ಲೋಲವಾಯಿತು. 19ಐದು ಆರು ಕಿಲೋಮೀಟರಿನಷ್ಟು ಹುಟ್ಟು ಹಾಕಿರಬೇಕು. ಆಗ ಯೇಸು ನೀರಿನ ಮೇಲೆ ನಡೆಯುತ್ತಾ ದೋಣಿಯನ್ನು ಸಮೀಪಿಸುತ್ತಿರುವುದು ಶಿಷ್ಯರಿಗೆ ಕಾಣಿಸಿತು. ಅದನ್ನು ನೋಡಿ ಅವರು ಹೆದರಿದರು. 20ಆಗ ಯೇಸು, “ನಾನೇ, ಇನ್ಯಾರೂ ಅಲ್ಲ; ಅಂಜಬೇಡಿ,” ಎಂದು ಹೇಳಿದರು. 21ಶಿಷ್ಯರು
ಅವರನ್ನು ದೋಣಿಯೊಳಕ್ಕೆ ಬರಮಾಡಿಕೊಳ್ಳುವುದರಲ್ಲಿದ್ದರು. ಅಷ್ಟರಲ್ಲಿ, ದೋಣಿಯು ಸೇರಬೇಕಾಗಿದ್ದ ದಡವನ್ನು ತಲುಪಿತು.
ಚಿಂತನೆ
ಹಲ್ಲು ಇದ್ದವರಿಗೆ ಕಡ್ಲೆ ಇಲ್ಲ, ಕಡ್ಲೆ ಇದ್ದವನಿಗೆ ಹಲ್ಲು ಇಲ್ಲ ಎಂಬ ಗಾದೆ ಮಾತಿದೆ . ಈ ಗಾದೆ ಮಾತು ಕೇಳಿದ ನಾವು ಕಾಣುವುದು ಕೊರತೆಯನ್ನು, ಇಲ್ಲದವರ ಕೊರತೆಯೇ ಹೀಗೆ. ಈ ಕೊರತೆ ಎಂಬ ಕಾಯಿಲೆಯನ್ನು ನಾವು ಅನೇಕರಲ್ಲಿ ಕಾಣುತ್ತೇವೆ. ಕೆಲವರಿಗೆ ಎಲ್ಲವೂ ಇದ್ದರೂ ಏನೋ ಒಂದು ಕೊರತೆ ಇದೆ ಎನ್ನುವ ಭಾವನೆ ಉಂಟಾಗುತ್ತದೆ. ಕಾರಣ ಅವರ ಜೀವನದಲ್ಲಿ ಯೇಸುಸ್ವಾಮಿ ಇಲ್ಲದೆ ಇರುವುದಾಗಿದೆ. ಪ್ರತಿಯೊಬ್ಬ ಮಾನವನ ಜೀವನದಲ್ಲಿ ದೇವರಿಗೆ ಪ್ರಮುಖ ಸ್ಥಾನವನ್ನು ನೀಡಬೇಕು ನೀಡದೇ ಹೋದಾಗ ಜೀವನ ಶೂನ್ಯ ವೆನಿಸುತ್ತದೆ. ಎಲ್ಲ ಇದ್ದು ಏನೂ ಇಲ್ಲದ ಹಾಗೆ ಕಾಡುತ್ತದೆ ಈ ಕೊರತೆ. ಇಂತಹ ಕೊರತೆಯನ್ನು ನೀಗಿಸುವುದು ಪ್ರಭು ಯೇಸು ಸ್ವಾಮಿ. ಯೇಸು ಸ್ವಾಮಿ ತಮ್ಮ ಶಿಷ್ಯರು ಬಿಡುವಿಲ್ಲದೆ ಅವರೊಡನೆ ತಿರುಗಾಡುತ್ತಿರುವುದನ್ನ ಕಂಡು ವಿಶ್ರಾಂತಿಯ ಕೊರತೆ ಅವರಲ್ಲಿದೆ ಎಂದು ಅರಿತು ಅವರನ್ನು ಸರೋವರದ ಆಚೆ ದಡಕ್ಕೆ ಹೋಗುವಂತೆ ಹೇಳಿ ಕಳುಹಿಸುತ್ತಾರೆ. ಶಿಷ್ಯರಲ್ಲಿ ಇದ್ದಂತಹ ವಿಶ್ರಾಂತಿಯ ಕೊರತೆಯನ್ನು ಯೇಸುಸ್ವಾಮಿ ತಮ್ಮ ಸೂಕ್ಷ್ಮ ಮನೋನೇತ್ರದ ಮೂಲಕ ಗ್ರಹಿಸುತ್ತಾರೆ. ಆದರೆ ಶಿಷ್ಯರಾದರು ವಿಶ್ವಾಸದ ಕೊರತೆಯಿಂದ ಬರುತ್ತಿದ್ದರು . ದೂರದಲ್ಲಿ ಬರುತ್ತಿದ್ದ ಯೇಸುವನ್ನು ಕಂಡು ಹೆದರಿದರು. ಅವರನ್ನು ನಮ್ಮ ಪ್ರಭು ಎಂದು ಅವರು ಗುರುತಿಸಲಿಲ್ಲ. ಬಹುಶಃ ಯೇಸು ಸ್ವಾಮಿ ಇದಕ್ಕಾಗಿ ನೊಂದಿರಬೇಕು. ಶಿಷ್ಯರ ಕೊರತೆಯನ್ನು ಕಂಡಂತಹ ಪ್ರಭು ಅವರಲ್ಲಿ ಬಂದು ಪ್ರಸನ್ನರಾಗುತ್ತಾರೆ. ಈ ವಾಚನವನ್ನು ಗಮನಿಸಿದ ನಮಗೆ ತಿಳಿಯುವುದು ಜೀವನವೆಂಬ ನೌಕೆಯಲ್ಲಿ ಕಷ್ಟವೆಂಬ ಅಲೆಗಳು ಪ್ರಯಾಣಿಸುತ್ತಿರುವ ನಮ್ಮನ್ನು ಬಂಧಿಸುತ್ತದೆ. ಆದರೆ ಪ್ರಭು ಕ್ರಿಸ್ತರು ಇದ್ದರೆ ಮಾತ್ರ ನಾವು ದಡ ಸೇರುವುದು. ಇದನ್ನು ನಾವು ಮರೆಯುವಂತಿಲ್ಲ. ಆತನೇ ನಮ್ಮ ಜೀವನವೆಂಬ ನೌಕೆಯ ನಾವಿಕ.
ಆತ್ಮವಲೋಕನ.
1. ಕೊರತೆ ನನ್ನಲ್ಲಿದೆಯೇ?
2. ಜೀವನವೆಂಬ ನಮ್ಮ ನೌಕೆಯಲ್ಲಿ ಯೇಸುವೆಂಬ ನಾವಿಕನಿದ್ದಾನೆಯೇ?
3. ವಿಶ್ವಾಸದ ಕೊರತೆ ನಮ್ಮಲ್ಲಿದೆಯೇ?
ಸಹೋ. ವಿನಯ್ ಕುಮಾರ್, ಚಿಕ್ಕಮಗಳೂರು ಧರ್ಮಾಕ್ಷೇತ್ರ
No comments:
Post a Comment