ಬಿಳಿ/ ಭಾನು/ ಪಾಸ್ಖ ಕಾಲದ ಮೂರನೇ ಭಾನುವಾರ (3)
1ನೇ ವಾಚನ - ಪ್ರೇ.ಕಾ 5: 27-32, 4೦-41
27ಪ್ರೇಷಿತರನ್ನು ಕರೆತಂದು ನ್ಯಾಯಸಭೆಯ ಮುಂದೆ ನಿಲ್ಲಿಸಲಾಯಿತು. ಪ್ರಧಾನ ಯಾಜಕನು ಅವರನ್ನು ಉದ್ದೇಶಿಸಿ, 28“ಆ
ವ್ಯಕ್ತಿಯ ಹೆಸರಿನಲ್ಲಿ ಉಪದೇಶ ಮಾಡಕೂಡದು ಎಂದು ನಿಮಗೆ ಕಟ್ಟಪ್ಪಣೆ ಮಾಡಿದೆವು. ಆದರೂ ನೀವು ಮಾಡಿರುವುದೇನು? ನಿಮ್ಮ ಬೋಧನೆ ಜೆರುಸಲೇಮ್ ಆದ್ಯಂತ ಹಬ್ಬಿಹರಡಿದೆ. ಅಷ್ಟು ಮಾತ್ರವಲ್ಲ, ಆ ವ್ಯಕ್ತಿಯ ಕೊಲೆಗೆ ನಮ್ಮನ್ನೇ ಹೊಣೆಗಾರರನ್ನಾಗಿ ಮಾಡಬೇಕೆಂದಿರುವಿರಿ,” ಎಂದು ಆಪಾದಿಸಿದನು. 29ಅದಕ್ಕೆ ಪ್ರತ್ಯುತ್ತರವಾಗಿ ಪೇತ್ರ ಮತ್ತು ಉಳಿದ ಪ್ರೇಷಿತರು, “ನಾವು ವಿಧೇಯರಾಗಬೇಕಾದದ್ದು ದೇವರಿಗೆ, ಮಾನವರಿಗಲ್ಲ. 30ನೀವು ಶಿಲುಬೆಗೇರಿಸಿ ಕೊಂದು ಹಾಕಿದ ಯೇಸುಸ್ವಾಮಿಯನ್ನು ನಮ್ಮ ಪಿತೃಗಳ ದೇವರು ಜೀವಕ್ಕೆ ಎಬ್ಬಿಸಿದ್ದಾರೆ. 31ದೇವರು ಅವರನ್ನು ತಮ್ಮ ಬಲಪಾಶ್ರ್ವಕ್ಕೆ ಏರಿಸಿ ಮುಂದಾಳನ್ನಾಗಿಯೂ ಲೋಕೋದ್ಧಾರಕನನ್ನಾಗಿಯೂ
ನೇಮಿಸಿದ್ದಾರೆ. ಇಸ್ರಯೇಲಿನ ಜನರು ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಿ ಪಾಪಕ್ಷಮೆಯನ್ನು ಪಡೆಯಲು ಇವರ ಮುಖಾಂತರ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾರೆ. 32ಈ ಘಟನೆಗಳಿಗೆ ನಾವು ಸಾಕ್ಷಿಗಳು; ನಾವು ಮಾತ್ರವಲ್ಲ, ದೈವೇಚ್ಛೆಯಂತೆ ನಡೆಯುವವರಿಗೆ ದೇವರು ದಯಪಾಲಿಸುವ ಪವಿತ್ರಾತ್ಮ ಅವರು ಕೂಡ ಸಾಕ್ಷಿಯಾಗಿದ್ದಾರೆ,” ಎಂದನು. 40ಪ್ರೇಷಿತರನ್ನು ಒಳಗೆ ಕರೆದು, ಚಾವಟಿಯಿಂದ ಹೊಡೆದು, ಇನ್ನು ಮೇಲೆ ಯೇಸುವಿನ ಹೆಸರಿನಲ್ಲಿ ಬೋಧಿಸಬಾರದೆಂದು ಕಟ್ಟಪ್ಪಣೆಮಾಡಿ ಅವರನ್ನು ಬಿಟ್ಟುಬಿಟ್ಟರು. 41ಯೇಸುವಿನ
ನಾಮಕ್ಕೋಸ್ಕರ ಅಪಮಾನವನ್ನು ಅನುಭವಿಸುವ ಅರ್ಹತೆಯನ್ನು ಪಡೆದೆವೆಂದು ಪ್ರೇಷಿತರು ಸಂತೋಷಭರಿತರಾಗಿ ನ್ಯಾಯಸಭೆಯಿಂದ ಹೊರಬಂದರು.
ಕೀರ್ತನೆ - 3೦: 1, 3-5, 1೦-11, 12
1ನಿನಗೆನ್ನ
ವಂದನೆ ಪ್ರಭು, ನನ್ನನುದ್ಧರಿಸಿದೆ / ಶತ್ರುಗಳೆನ್ನ ಕುರಿತು ಹಿಗ್ಗದಂತೆ ಮಾಡಿದೆ //
2‘ಹೇ ಪ್ರಭು, ಎನ್ನ ದೇವಾ’ ಎಂದೆ / ನಾ ಮೊರೆಯಿಡೆ, ನೀ ಗುಣಪಡಿಸಿದೆ //
3ಪಾತಾಳದಿಂದೆನ್ನ ಪ್ರಾಣವನು ಮೇಲೆತ್ತಿದೆ / ಎನ್ನ ಬದುಕಿಸಿದೆ ದೇವಾ, ಸಮಾಧಿ ಸೇರಗೊಡದೆ //
4ಭಕ್ತರೇ,
ಸಂಕೀರ್ತಿಸಿರಿ ಪ್ರಭುವನು / ಮಾಡಿರಿ ಆತನ ನಾಮಸ್ಮರಣೆಯನು //
5ಆತನ ಕೋಪ ಕ್ಷಣಮಾತ್ರ / ಆತನ ಕೃಪೆ ಜೀವನ ಪರಿಯಂತ // ಇರುಳು ಬರಲು ಇರಬಹುದು ಅಳಲು / ನಲಿವು ಉಲಿವುದು ಹಗಲು ಹರಿಯಲು //
6ನಾನಾದರೋ
ಉಲ್ಲಾಸದಿಂದಿರುವಾಗಲೂ / ನನ್ನನು ಅಲ್ಲಾಡಿಸಲಾಗದೆಂದೆ ಯಾರಿಂದಲೂ //
7ಪ್ರಭು, ನಿನ್ನ ಕೃಪೆ ನನ್ನ ಗುಡ್ಡಕೆ ಅಡಿಬಂಡೆ / ನಿನ್ನ ಮುಖ ಮರೆಯಾದುದೆ ನಾ ಕಳವಳಗೊಂಡೆ //
8ಹೇ ಪ್ರಭು, ಮೊರೆಯಿಟ್ಟೆನು ನಿನಗೆ / ಬಿನ್ನವಿಸಿದೆನು ನನ್ನೊಡೆಯನಿಗೆ //
9“ನನ್ನ ಪ್ರಾಣ ನಷ್ಟದಿಂದ ನಿನಗೇನು ಫಲ? / ಸಮಾಧಿಗೆ ನಾನಿಳಿದರೆ ನಿನಗೇನು ಲಾಭ?”// “ಸತ್ತವರ ಬೂದಿ ನಿನ್ನ ಸ್ತುತಿಸಬಲ್ಲುದೆ?/ ನಿನ್ನ ಸತ್ಯತೆಯನ್ನದು ಸಾರಲು ಬಲ್ಲುದೆ?”//
10“ಆಲಿಸು ಪ್ರಭು, ಕರುಣಿಸು, ನೆರವಾಗು ಬೇಗ”/ ಎಂದು ಪ್ರಭು ನಾನಿನ್ನನು ಪ್ರಾರ್ಥಿಸಿದಾಗ /
11ಎನ್ನ ಗೋಳಾಟವನು ನೀ ಕುಣಿದಾಟವಾಗಿಸಿದೆ / ಎನ್ನ ಗೋಣಿತಟ್ಟನು ಹರ್ಷಾಭರಣವಾಗಿಸಿದೆ //
12ಎಂದೇ ಮೌನವಿರದೆ ಎನ್ನ ಮನವು ನಿನಗೆ ಹಾಡಲಿ ಕೀರ್ತನೆ / ಹೇ ಪ್ರಭು, ಎನ್ನ ದೇವ, ನಿನಗೆನ್ನ ಅನಂತ ಧನ್ಯ ವಂದನೆ //
2ನೇ ವಾಚನ - ಪ್ರಕಟಣೆ 5: 11-14
11ಅನಂತರ ಅವರ ಸಿಂಹಾಸನದ, ನಾಲ್ಕು ಜೀವಿಗಳ ಹಾಗೂ ಸಭಾಪ್ರಮುಖರ ಸುತ್ತಲೂ ನಿಂತಿದ್ದ ಬಹುಮಂದಿ ದೇವದೂತರ ಸ್ವರವನ್ನು ಕೇಳಿಸಿಕೊಂಡೆ. ಅವರ ಸಂಖ್ಯೆ ಲಕ್ಷೋಪಲಕ್ಷವಾಗಿಯೂ ಕೋಟ್ಯಾನುಕೋಟಿಯಾಗಿಯೂ ಇತ್ತು. 12ಅವರೆಲ್ಲರೂ
ಉಚ್ಛಕಂಠದಿಂದ: “ವಧಿತ ಕುರಿಮರಿಯಾದಾತನು ಶಕ್ತಿಯನು, ಸಿರಿತನವನು ಗೌರವವನು, ಘನಮಾನವನು ಸ್ತುತಿಯನು, ಸುಜ್ಞಾನವನು ಹೊಂದಲು ಯೋಗ್ಯನು,” ಎಂದು ಹಾಡಿದರು. 13ಇದಲ್ಲದೆ,
ಸ್ವರ್ಗ, ಭೂಮಿ, ಪಾತಾಳಗಳಲ್ಲೂ ಸಮುದ್ರದಲ್ಲೂ ಇರುವ ಸಮಸ್ತ ಸೃಷ್ಟಿಗಳು ಹೀಗೆ ಹಾಡುವುದನ್ನು ಕೇಳಿಸಿಕೊಂಡೆ: “ಸಿಂಹಾಸನದಲ್ಲಿ ಕುಳಿತವನಿಗೆ, ಯಜ್ಞಕುರಿಮರಿಯಾದಾತನಿಗೆ ಸಲ್ಲಲಿ ಯುಗಯುಗಾಂತರಕ್ಕೆ ಘನಮಾನ, ಗೌರವ, ಪರಾಕ್ರಮ, ಮತ್ತು ಮಹಿಮೆ.” 14ಇದಕ್ಕುತ್ತರವಾಗಿ ಆ ನಾಲ್ಕು ಜೀವಿಗಳು, ‘ಆಮೆನ್’ ಎಂದು ಹೇಳಿದವು. ಸಭಾಪ್ರಮುಖರು ಸಾಷ್ಟಾಂಗವೆರಗಿ ನಮಸ್ಕಾರಮಾಡಿ ಆರಾಧಿಸಿದರು.
ಶುಭಸಂದೇಶ - ಯೊವಾನ್ನ 21: 1-19
ಅಥವಾ 21: 1-14
1ತರುವಾಯ ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಮತ್ತೊಮ್ಮೆ ತಿಬೇರಿಯ ಸರೋವರದ ಬಳಿ ಕಾಣಿಸಿಕೊಂಡರು. ಅದು ಹೀಗೆ ನಡೆಯಿತು: 2ಸಿಮೋನ ಪೇತ್ರನು, ದಿದುಮನೆಂಬ ತೋಮನು, ಗಲಿಲೇಯದ ಕಾನಾ ಊರಿನ ನತಾನಯೇಲನು, ಜೆಬೆದಾಯನ ಪುತ್ರರು ಮತ್ತು ಯೇಸುವಿನ ಇನ್ನಿಬ್ಬರು ಶಿಷ್ಯರು ಒಟ್ಟಿಗೆ ಸೇರಿದ್ದರು. 3ಆಗ ಸಿಮೋನ ಪೇತ್ರನು, “ನಾನು ಮೀನು ಹಿಡಿಯಲು ಹೋಗುತ್ತೇನೆ,” ಎಂದನು. ಮಿಕ್ಕವರು, “ನಾವೂ ನಿನ್ನೊಡನೆ ಬರುತ್ತೇವೆ,” ಎಂದರು. ಅವರೆಲ್ಲರೂ ಹೊರಟು ದೋಣಿಯನ್ನು ಹತ್ತಿದರು. ಆ ರಾತ್ರಿಯೆಲ್ಲಾ ಅವರಿಗೆ ಒಂದು ವಿೂನೂ ಸಿಗಲಿಲ್ಲ. 4ಬೆಳಗಾಗುವಷ್ಟರಲ್ಲಿ ಯೇಸು ತೀರದಲ್ಲಿ ನಿಂತಿದ್ದರು. ಆದರೆ ಅವರು ಯೇಸು ಎಂದು ಶಿಷ್ಯರಿಗೆ ಹೊಳೆಯಲಿಲ್ಲ. 5ಯೇಸು ಅವರಿಗೆ, “ಮಕ್ಕಳೇ, ಊಟಕ್ಕೆ ಏನಾದರೂ ಸಿಕ್ಕಿತೇ?” ಎಂದು ಕೇಳಿದರು. “ಏನೂ ಇಲ್ಲ,” ಎಂದರು ಅವರು. 6 “ದೋಣಿಯ ಬಲಗಡೆಗೆ ಬಲೆ ಬೀಸಿರಿ; ವಿೂನುಗಳು ಸಿಗುತ್ತವೆ,” ಎಂದು ಯೇಸು ಹೇಳಲು ಅವರು ಹಾಗೆಯೇ ಮಾಡಿದರು. ಆಗ ವಿೂನುಗಳು ರಾಶಿರಾಶಿಯಾಗಿ ಸಿಕ್ಕಿದವು. ಬಲೆಯನ್ನು ಎಳೆಯಲೂ ಆಗದೆ ಹೋಯಿತು. 7ಆಗ ಯೇಸುವಿನ ಆಪ್ತಶಿಷ್ಯನು ಪೇತ್ರನಿಗೆ, “ಅವರೇ ಪ್ರಭು” ಎಂದನು. ಪ್ರಭುವೆಂದು ಕೇಳಿದ್ದೇ ತಡ, ಬರೀ ಮೈಯಲ್ಲಿದ್ದ ಪೇತ್ರನು ಬಟ್ಟೆಯನ್ನು ಹಾಕಿಕೊಂಡು ನೀರಿಗೆ ಧುಮುಕಿದನು.
8ಮಿಕ್ಕ ಶಿಷ್ಯರು ವಿೂನು ತುಂಬಿದ್ದ ಬಲೆಯನ್ನು ಎಳೆಯುತ್ತಾ ಸುಮಾರು ಮುನ್ನೂರು ಅಡಿ ದೂರದಲ್ಲಿದ್ದ ದಡಕ್ಕೆ ದೋಣಿಯಲ್ಲೇ ಬಂದರು. 9ಅವರು ದಡವನ್ನು ಸೇರಿದಾಗ ಅಲ್ಲಿ ಇದ್ದಲಿನ ಬೆಂಕಿ ಮಾಡಲಾಗಿತ್ತು. ಕೆಂಡದ ಮೇಲೆ ವಿೂನುಗಳಿದ್ದವು. ರೊಟ್ಟಿಯೂ ಅಲ್ಲಿತ್ತು. 10ಯೇಸು ಅವರಿಗೆ, “ನೀವು ಈಗ ತಾನೇ ಹಿಡಿದ ವಿೂನುಗಳಲ್ಲಿ ಕೆಲವನ್ನು ತನ್ನಿ,” ಎಂದು ಹೇಳಿದರು. 11ಸಿಮೋನ ಪೇತ್ರನು ದೋಣಿಯನ್ನು ಹತ್ತಿ ಬಲೆಯನ್ನು ದಡಕ್ಕೆ ಎಳೆದು ತಂದನು. ಬಲೆಯ ತುಂಬ ದೊಡ್ಡ ವಿೂನುಗಳು - ಒಟ್ಟಿಗೆ ನೂರೈವತ್ತಮೂರು ಇದ್ದವು. ಅಷ್ಟು ವಿೂನುಗಳಿದ್ದರೂ ಬಲೆಯು ಹರಿದಿರಲಿಲ್ಲ. 12ಯೇಸು ಅವರಿಗೆ, “ಬಂದು ಊಟಮಾಡಿ,” ಎಂದು ಅವರನ್ನು ಕರೆದರು. ಅವರು ಪ್ರಭುವೆಂದು ಅರಿತಿದ್ದ ಕಾರಣ ಶಿಷ್ಯರಲ್ಲಿ ಒಬ್ಬನಿಗಾದರೂ, “ನೀವು ಯಾರು?” ಎಂದು ಕೇಳುವಷ್ಟು ಧೈರ್ಯ ಇರಲಿಲ್ಲ.
13ಯೇಸು ಹತ್ತಿರಕ್ಕೆ ಬಂದು ರೊಟ್ಟಿಯನ್ನು ತೆಗೆದುಕೊಂಡು ಅವರಿಗೆ ಕೊಟ್ಟರು; ಹಾಗೆಯೇ ವಿೂನನ್ನೂ ಕೊಟ್ಟರು. 14ಯೇಸು ಸತ್ತು ಜೀವಂತರಾಗಿ ಎದ್ದ ಬಳಿಕ ತಮ್ಮ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಾರಿ. ಯೇಸು ಮತ್ತು ಪೇತ್ರ 15ಅವರೆಲ್ಲರ
ಊಟವಾದ ಮೇಲೆ ಯೇಸು ಸಿಮೋನ ಪೇತ್ರನನ್ನು ನೋಡಿ, “ಯೊವಾನ್ನನ ಮಗನಾದ ಸಿಮೋನನೇ, ಇವರಿಗಿಂತಲೂ ಹೆಚ್ಚಾಗಿ ನೀನು ನನ್ನನ್ನು ಪ್ರೀತಿಸುತ್ತೀಯಾ?” ಎಂದು ಕೇಳಿದರು. ಅದಕ್ಕೆ ಪೇತ್ರನು, “ಹೌದು ಪ್ರಭೂ, ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ನೀವೇ ಬಲ್ಲಿರಿ,” ಎಂದನು. ಯೇಸು ಅವನಿಗೆ, “ನನ್ನ ಕುರಿಮರಿಗಳನ್ನು ಮೇಯಿಸು,” ಎಂದರು. 16ಯೇಸು ಎರಡನೆಯ ಬಾರಿ, “ಯೊವಾನ್ನನ ಮಗನಾದ ಸಿಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯಾ?” ಎಂದು ಕೇಳಲು, “ಹೌದು ಪ್ರಭುವೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ನೀವೇ ಬಲ್ಲಿರಿ,” ಎಂದು ಮರುನುಡಿದನು. ಯೇಸು ಅವನಿಗೆ, “ನನ್ನ ಕುರಿಗಳನ್ನು ಕಾಯಿ,” ಎಂದರು. 17ಮೂರನೇ ಬಾರಿಯೂ ಯೇಸು, “ಯೊವಾನ್ನನ ಮಗನಾದ ಸಿಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯಾ?” ಎಂದು ಕೇಳಿದರು. “ನೀನು ನನ್ನನ್ನು ಪ್ರೀತಿಸುತ್ತೀಯಾ?” ಎಂದು ಯೇಸು ಮೂರನೇ ಬಾರಿ ಕೇಳಿದ್ದನ್ನು ಕಂಡು ಪೇತ್ರನು ನೊಂದುಕೊಂಡನು. “ಪ್ರಭುವೇ, ನಿಮಗೆ ಎಲ್ಲವು ತಿಳಿದೇ ಇದೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದೂ ನಿಮಗೆ ತಿಳಿದಿದೆ,” ಎಂದು ಹೇಳಿದನು. ಅದಕ್ಕೆ ಯೇಸು, “ನನ್ನ ಕುರಿಗಳನ್ನು ಮೇಯಿಸು; 18ನಾನು ನಿನಗೆ ಸತ್ಯವಾಗಿ ಹೇಳುತ್ತಾನೆ, ಕೇಳು: ತಾರುಣ್ಯದಲ್ಲಿ ನೀನೇ ನಡುಕಟ್ಟಿಕೊಂಡು ಇಷ್ಟಬಂದ ಕಡೆ ನಡೆದೆ. ವೃದ್ಧಾಪ್ಯದಲ್ಲಾದರೋ ನೀನು ಕೈಚಾಚುವೆ. ಬೇರೊಬ್ಬನು ನಿನ್ನ ನಡುಕಟ್ಟಿ ನಿನಗಿಷ್ಟವಿಲ್ಲದ ಕಡೆ ನಿನ್ನನ್ನು ನಡೆಸಿಕೊಂಡು ಹೋಗುವನು,” ಎಂದು ನುಡಿದರು. 19ಪೇತ್ರನು
ಎಂಥ ಸಾವಿನಿಂದ ದೇವರ ಮಹಿಮೆಯನ್ನು ಬೆಳಗಿಸಲಿದ್ದಾನೆಂದು ಸೂಚಿಸಿ ಹಾಗೆ ಹೇಳಿದರು. ಇದಾದ ಮೇಲೆ ಯೇಸು ಪೇತ್ರನಿಗೆ, “ನೀನು ನನ್ನನ್ನು ಹಿಂಬಾಲಿಸಿ ಬಾ,” ಎಂದರು.
ಚಿಂತನೆ
ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ ಎಂಬ ಗಾದೆ ಮಾತಿದೆ. ಕೆಲವೊಂದು ಗುಣಗಳು ನಾವು ಚಿಕ್ಕವರಿದ್ದಾಗ ಕಲಿತದ್ದನ್ನು ಮರೆಯಲು ಸಾಧ್ಯವಿಲ್ಲ. ಅವು ನಮ್ಮೊಳಗೆ ಹಾಸು ಹೊಕ್ಕಾಗಿರುತ್ತವೆ. ಇಂಥದ್ದೇ ಒಂದು ನಿದರ್ಶನವನ್ನು ನಾವು ಇಂದಿನ ಶುಭ ಸಂದೇಶದಲ್ಲಿ ಕಾಣುತ್ತೇವೆ. ಪ್ರೀತಿ ಎಂಬ ಶಾಲೆಯಲ್ಲಿ ಯೇಸು ಎಂಬ ಗುರುವಿನ ಬಳಿ ವಿಶ್ವಾಸವೆಂಬ ಪಾಠ ಕಲಿತರು, ಸ್ವಾಮಿಯ ಮರಣದ ನಂತರ ಎಲ್ಲವನ್ನು ಮರೆತು ಮತ್ತೆ ತಮ್ಮ ಹಳೆಯ ಕೆಲಸಕ್ಕೆ ಬರುತ್ತಾರೆ ಈ ಶಿಷ್ಯರು. ಆದರೆ ಯೇಸು ಸ್ವಾಮಿ ಅವರನ್ನು ಇದ್ದ ಸ್ಥಿತಿಯಲ್ಲಿಯೇ ಬಿಡದೆ ಮತ್ತೆ ಅವರ ಜೀವನಕ್ಕೆ ಬಂದು ಅವರ ವಿಶ್ವಾಸದ ಕಣ್ಣುಗಳನ್ನು ತೆರೆಸುತ್ತಾರೆ. ದಾರಿ ತಪ್ಪಿದ ಶಿಷ್ಯರ ಗುಂಪಿನ ನಾಯಕನಾದ ಪೇತ್ರನಿಗೆ ವಿಶೇಷ ತರಗತಿಯನ್ನು ತೆಗೆದುಕೊಂಡು ಪ್ರಶ್ನೆಯನ್ನು ಕೇಳುತ್ತಾರೆ. ಬಹುಷ್ಯ ಈ ಮೂರು ಬಾರಿ ಕೇಳಿದ ಪ್ರಶ್ನೆ ಪೇತ್ರ ಮೂರು ಬಾರಿ ನಿರಾಕರಿಸಿದ್ದನ್ನು ಸೂಚಿಸುತ್ತದೆ ಎನಿಸುತ್ತದೆ.
ಮೂರು ಬಾರಿಯೂ ಯೇಸು ಸ್ವಾಮಿ ನೀನು ನನ್ನನ್ನು ಪ್ರೀತಿಸುತ್ತೀಯಾ? ಎಂದು ಪ್ರಶ್ನೆಯನ್ನು ಕೇಳುತ್ತಾರೆ. ಪೇತ್ರ ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಉತ್ತರ ನೀಡುತ್ತಾನೆ. ಯೇಸು ಸ್ವಾಮಿ ಅವರ ಕಣ್ಣುಗಳನ್ನು ತೆರೆಸಲು ಹಲವು ಕಾರ್ಯಗಳನ್ನು ಮಾಡುತ್ತಾರೆ. ಇಂದಿನ ವಾಚನಗಳಲ್ಲಿ ಎರಡು ವಿಷಯಗಳನ್ನು ನಾವು ಗಮನಿಸುವುದು ಸೂಕ್ತವಾಗಿದೆ. 1. ಪೇತ್ರ ಪ್ರಭು ಎಂದು ತಿಳಿದಿದ್ದೆ ಎಲ್ಲವನ್ನು ಬಿಟ್ಟು ಪ್ರಭುವಿನೊಡನೆ ಹೋದದ್ದು. 2. ಯೇಸು ಪೇತ್ರನಿಗೆ ನೀನು ನನ್ನನ್ನು ಹಿಂಬಾಲಿಸು ಎಂದದ್ದು.
ಆತ್ಮಾವಲೋಕನ
1. ನಮ್ಮಲ್ಲಿ ಅಂಜಿಕೆ ನಾಚಿಕೆ ಇದೆಯೇ?
2. ನಮಗೆ ಯೇಸು ಸ್ವಾಮಿ ನೀನು ನನ್ನನ್ನು ಪ್ರೀತಿಸುತ್ತೀಯಾ? ಎಂದು ಕೇಳಿದರೆ ನಮ್ಮ ಉತ್ತರ.
3. ವಿಶ್ವಾಸದಿಂದ ಕೂಡಿದೆಯೇ?
- ಸಹೋ. ವಿನಯ್ ಕುಮಾರ್, ಚಿಕ್ಕಮಗಳೂರು, ಧರ್ಮಾಕ್ಷೇತ್ರ
No comments:
Post a Comment