ಬಿಳಿ/ಸೋಮ/ಪಾಸ್ಖ ಕಾಲದ ಮೂರನೇ ವಾರ
1ನೇ ವಾಚನ - ಪ್ರೇ.ಕಾ 6: 8-15
1ನೇ ವಾಚನ - ಪ್ರೇ.ಕಾ 6: 8-15
8ಸ್ತೇಫನನ ಬಂಧನ ಸ್ತೇಫನನು ದೈವಾನುಗ್ರಹದಿಂದಲೂ
ಶಕ್ತಿಯಿಂದಲೂ ತುಂಬಿದ್ದನು. ಜನರ ಮಧ್ಯೆ ಅದ್ಭುತಗಳನ್ನೂ
ಸೂಚಕಕಾರ್ಯಗಳನ್ನೂ ಮಾಡುತ್ತಿದ್ದನು. 9ಆದರೆ ಕೆಲವರು ಸ್ತೇಫನನ ವಿರೋಧಿಗಳಾಗಿದ್ದರು.
ಇವರು ‘ಬಿಡುಗಡೆ ಹೊಂದಿದವರು’ ಎಂಬವರ
ಪ್ರಾರ್ಥನಾ ಮಂದಿರಕ್ಕೆ ಸೇರಿದವರು. ಸಿರೇನ್ ಮತ್ತು ಅಲೆಕ್ಸಾಂಡ್ರಿಯದಿಂದ
ಬಂದ ಯೆಹೂದ್ಯರೂ ಇದರ ಸದಸ್ಯರಾಗಿದ್ದರು. ಇವರೊಡನೆ
ಸಿಲಿಸಿಯ ಹಾಗೂ ಏಷ್ಯಾದ ಯೆಹೂದ್ಯರೂ
ಸೇರಿ ಸ್ತೇಫನನೊಂದಿಗೆ ತರ್ಕ ಮಾಡತೊಡಗಿದರು. 10ಆದರೆ ಸ್ತೇಫನನ ಮಾತಿನಲ್ಲಿ ಕಂಡುಬಂದ
ಜ್ಞಾನವನ್ನೂ ಪವಿತ್ರಾತ್ಮ ಶಕ್ತಿಯನ್ನೂ ಎದುರಿಸಲು ಅವರಿಂದಾಗಲಿಲ್ಲ. 11ಆದುದರಿಂದ ಕೆಲವರಿಗೆ ಲಂಚಕೊಟ್ಟು ‘ಸ್ತೇಫನನು ಮೋಶೆಯನ್ನೂ ದೇವರನ್ನೂ ದೂಷಿಸುತ್ತಾನೆ; ಇದನ್ನು ನಾವು ಕೇಳಿದ್ದೇವೆ’
ಎಂದು ಹೇಳಿಸಿದರು. 12ಹೀಗೆ ಜನರನ್ನೂ ಪ್ರಮುಖರನ್ನೂ ನ್ಯಾಯಶಾಸ್ತ್ರಜ್ಞರನ್ನೂ
ಪ್ರಚೋದಿಸಿದರು. ಸ್ತೇಫನನನ್ನು ಬಂಧಿಸಿ ನ್ಯಾಯಸಭೆಯ ಮುಂದೆ
ಎಳೆದು ತರುವಂತೆ ಮಾಡಿದರು. 13ಕೆಲವು ಸುಳ್ಳುಸಾಕ್ಷಿಗಳನ್ನು ನೇಮಿಸಿಕೊಂಡು ಅವರಿಂದ, ‘ಇವನು ಯಾವಾಗಲೂ ನಮ್ಮ
ಪವಿತ್ರ ದೇವಾಲಯದ ವಿರುದ್ಧ ಹಾಗೂ
ಮೋಶೆಯ ಧರ್ಮಶಾಸ್ತ್ರದ ವಿರುದ್ಧ ಮಾತನಾಡುತ್ತಾನೆ. 14ನಜರೇತಿನ ಆ ಯೇಸು ಈ
ಮಹಾದೇವಾಲಯವನ್ನು ನಾಶಗೊಳಿಸುವನೆಂದೂ ಮೋಶೆ ನಮಗೆ ವಿಧಿಸಿದ
ಸಂಪ್ರದಾಯಗಳನ್ನು ಬದಲಿಸುವನೆಂದೂ ಇವನು ಹೇಳಿರುತ್ತಾನೆ. ಇದನ್ನು
ನಾವು ಕೇಳಿದ್ದೇವೆ,’ ಎಂದು ಹೇಳಿಸಿದರು. 15ನ್ಯಾಯಸಭೆಯಲ್ಲಿ
ಕುಳಿತಿದ್ದವರೆಲ್ಲರೂ ಅವನ ಮುಖವನ್ನೇ ದಿಟ್ಟಿಸಿ
ನೋಡಿದರು. ಅದು ದೇವದೂತನ ಮುಖದಂತೆ
ಕಂಗೊಳಿಸಿತು.
ಕೀರ್ತನೆ - 119: 23-24, 26-27, 29-3೦
ಪ್ರಭುವಿನ ಶಾಸ್ತ್ರಾನುಸಾರ ನಡೆದವರು ಧನ್ಯರು
ಪ್ರಭುವಿನ ಶಾಸ್ತ್ರಾನುಸಾರ ನಡೆದವರು ಧನ್ಯರು
23ಒಳಸಂಚು ಮಾಡುತ್ತಿದ್ದರು ಒಡೆಯರು ಎನಗೆದುರಾಗಿ / ದಾಸ
ನಾನಿರುವೆ ನಿನ್ನ ಆಜ್ಞೆಗಳಲೆ ಮಗ್ನನಾಗಿ
//
24ನಿನ್ನಾಜ್ಞೆಯು
ಆನಂದದಾಯಕ / ಅವೇ ನನಗೆ ಮಂತ್ರಾಲೋಚಕ
//
25ನನ್ನ ಪ್ರಾಣ ಸೊರಗಿ ಸುಣ್ಣವಾಗಿದೆಯಯ್ಯಾ
/ ನಿನ್ನ ವಾಕ್ಯಾನುಸಾರ ಉಜ್ಜೀವಗೊಳಿಸಯ್ಯಾ //
26ನನ್ನ ಗತನಡತೆಯನು ಕೇಳಿ ಸದುತ್ತರಿಸಿದೆಯಯ್ಯಾ / ನಿನ್ನ
ನಿಬಂಧನೆಗಳನೀಗ ನನಗೆ ಉಪದೇಶಿಸಯ್ಯಾ //
27ನಿನ್ನ ನಿಯಮಗಳ ಪಥವನೆನಗೆ ತಿಳಿಯಪಡಿಸಯ್ಯಾ
/ ನಿನ್ನ ಅದ್ಭುತಕಾರ್ಯಗಳನು ನಾ ಧ್ಯಾನಿಸುವೆನಯ್ಯಾ //
28ದುಃಖದಿಂದ ಸೊರಗಿಹೋಗಿದೆ ಎನ್ನಮನ / ನಿನ್ನ ವಾಕ್ಯಾನುಸಾರ ನೀಡು
ಸಾಂತ್ವನ //
29ಮಿಥ್ಯಮಾರ್ಗವನು
ನನಗೆ ದೂರಮಾಡಯ್ಯಾ / ಧರ್ಮಶಾಸ್ತ್ರವನು ಎನಗೆ ಅನುಗ್ರಹಿಸಯ್ಯಾ //
30ಆರಿಸಿಕೊಂಡಿರುವೆನು
ನಾನು ಸತ್ಯ ಮಾರ್ಗವನು / ಇರಿಸಿಕೊಂಡಿಹೆನು
ಕಣ್ಮುಂದೆ ನಿನ್ನ ನಿಧಿಗಳನು //
ಶುಭಸಂದೇಶ - ಯೊವಾನ್ನ 6: 22-29
22ನೆರೆದಿದ್ದ ಜನರು ಮಾರನೆಯ ದಿನವೂ
ಸರೋವರದ ಆಚೆಕಡೆಯೇ ಉಳಿದಿದ್ದರು. ಹಿಂದಿನ ದಿನ ಅಲ್ಲಿ
ಒಂದೇ ಒಂದು ದೋಣಿ ಇದ್ದುದನ್ನು
ಅವರು ನೋಡಿದ್ದರು. ಯೇಸುಸ್ವಾಮಿ ಶಿಷ್ಯರೊಡನೆ ದೋಣಿಯನ್ನು ಹತ್ತಲಿಲ್ಲವಾದ್ದರಿಂದ ಶಿಷ್ಯರು ಮಾತ್ರ ಹೊರಟು
ಹೋಗಿದ್ದಾರೆಂದು ಅವರಿಗೆ ತಿಳಿದಿತ್ತು. 23ತಿಬೇರಿಯದಿಂದ ಹೊರಟಿದ್ದ ದೋಣಿಗಳು ಅಷ್ಟು ಹೊತ್ತಿಗೆ
ಅಲ್ಲಿಗೆ ಬಂದು ಸೇರಿದವು. ಪ್ರಭುವು
ದೇವರಿಗೆ ಸ್ತೋತ್ರವನ್ನು ಸಲ್ಲಿಸಿ, ಜನರಿಗೆ ರೊಟ್ಟಿ ಬಡಿಸಿದ್ದ
ಸ್ಥಳ ಅಲ್ಲೇ ಪಕ್ಕದಲ್ಲಿತ್ತು. 24ಯೇಸು ಆಗಲಿ, ಅವರ ಶಿಷ್ಯರಾಗಲಿ
ಇಲ್ಲದ್ದನ್ನು ನೋಡಿ ಜನರು ಆ
ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ
ಕಫೆರ್ನವುಮಿಗೆ ಬಂದರು. 25ಜನರು ಯೇಸುಸ್ವಾಮಿಯನ್ನು ಸರೋವರದ ಆಚೆದಡದಲ್ಲಿ ಕಂಡೊಡನೆ,
“ಗುರುದೇವಾ, ತಾವಿಲ್ಲಿಗೆ ಬಂದುದು ಯಾವಾಗ?” ಎಂದು
ಕೇಳಿದರು. 26ಯೇಸು ಅವರಿಗೆ, “ನಾನು ನಿಮಗೆ ಸತ್ಯವಾಗಿ
ಹೇಳುತ್ತೇನೆ: ನೀವು ನನ್ನನ್ನು ಹುಡುಕಿಕೊಂಡು
ಬಂದದ್ದು ಸೂಚಕಕಾರ್ಯಗಳನ್ನು ನೋಡಿ ಗ್ರಹಿಸಿಕೊಂಡಿದ್ದರಿಂದ ಅಲ್ಲ,
ಹೊಟ್ಟೆತುಂಬುವಷ್ಟು ರೊಟ್ಟಿ ಸಿಕ್ಕಿದ್ದರಿಂದ. 27ಅಳಿದುಹೋಗುವ ಆಹಾರಕ್ಕಾಗಿ ದುಡಿಯಬೇಡಿ; ಉಳಿಯುವ ಮತ್ತು ನಿತ್ಯಜೀವವನ್ನು
ಈಯುವ ಆಹಾರಕ್ಕಾಗಿ ದುಡಿಯಿರಿ. ಇಂಥ ಆಹಾರವನ್ನು ನಿಮಗೆ
ನೀಡುವವನು ನರಪುತ್ರನೇ. ಏಕೆಂದರೆ, ಪಿತನಾದ ದೇವರು ತಮ್ಮ
ಅಧಿಕಾರ ಮುದ್ರೆಯನ್ನು ಆತನ ಮೇಲೆ ಒತ್ತಿದ್ದಾರೆ,”
ಎಂದು ಉತ್ತರಕೊಟ್ಟರು. 28ಆಗ ಆ ಜನರು, “ದೇವರು
ಮೆಚ್ಚುವ ಕಾರ್ಯಗಳನ್ನು ನಾವು ಮಾಡಬೇಕಾದರೆ, ಏನು
ಮಾಡಬೇಕು?” ಎಂದು ಕೇಳಿದರು. 29ಅದಕ್ಕೆ ಯೇಸು, “ದೇವರು ಕಳುಹಿಸಿದಾತನನ್ನು
ನೀವು ವಿಶ್ವಾಸಿಸಬೇಕು. ಇದೇ ಅವರು ಮೆಚ್ಚುವ
ಕಾರ್ಯ,” ಎಂದರು.
ಚಿಂತನೆ
ಕೆಲವರು ತಿನ್ನೋಕೆ ಅಂತ
ಬದುಕಿದ್ದಾರೆ; ಇನ್ನು ಕೆಲವರು ಬದುಕೋಕೆ
ಅಂತ ತಿನ್ನುತ್ತಾರೆ. ನಾವು ಯಾವ ಗುಂಪಿಗೆ
ಸೇರಿದವರು ಎಂದು
ನೋಡಬೇಕು. ಕೆಲವರಿಗೆ ಅಡುಗೆ ಮಾಡುವುದೆಂದರೆ ಇಷ್ಟ
ಇನ್ನೂ ಕೆಲವರಿಗೆ ಮಾಡಿದ ಅಡಿಗೆಯನ್ನು ತಿನ್ನುವುದೆಂದರೆ
ಇಷ್ಟ. ಆಹಾರ ಮಾನವನ ಜೀವಕ್ಕೆ
ಅಗತ್ಯವಷ್ಟೇ ಅದೇ ಜೀವನವಲ್ಲ. ಇಂದು
ನಾವು ನಮ್ಮ ಸುತ್ತಮುತ್ತ ಗಮನಿಸಿದರೆ
ತಿಳಿಯುತ್ತದೆ ನಾವು ಅನೇಕ ವೈವಿಧ್ಯಮಯ
ಹೋಟೆಲ್‍ಗಳ ಮಧ್ಯೆ ಜೀವಿಸುತ್ತಿದ್ದೇವೆ ಎಂದು.
ಇಂದು ಅತಿ ವೇಗವಾಗಿ ಬೆಳೆಯುತ್ತಿರುವ
ಉದ್ಯಮವೆಂದರೆ ಅದು ಹೋಟೆಲ್ ಉದ್ಯಮ.
ಹೀಗೆ ಯೇಸು ಸ್ವಾಮಿಯ ಕಾಲದಲ್ಲಿ
ಇಂತಹ ಹೋಟೆಲ್‍ಗಳೇನು ಇರಲಿಲ್ಲ ಆದರೆ ಆಹಾರ
ಪ್ರಿಯರು ಇದ್ದದ್ದು ಮಾತ್ರ ಸತ್ಯ. ಯೇಸು
ಸ್ವಾಮಿ ಬಸವಳಿದ ಜನರಿಗೆ ಆಹಾರವನ್ನು
ಇತ್ತರು ಆದರೆ ಈ ಜನರು
ಅವರ ಬೋಧನೆಗೆ ಬದಲಾಗಿ ಬರೀ
ಆಹಾರಕ್ಕಾಗಿ ಅವರ ಹಿಂದೆ ನೂಕುನುಗ್ಗಲಾಗಿ
ಬರುತ್ತಿದ್ದರು. ಇದನ್ನು ಗ್ರಹಿಸಿದ ಯೇಸು
ಸ್ವಾಮಿ ಅವರಿಗೆ ಅಳಿದು ಹೋಗುವ
ಆಹಾರಕ್ಕಾಗಿ ದುಡಿಯಬೇಡಿ ಉಳಿಯುವ ಮತ್ತು ನಿತ್ಯವೂ
ಜೀವವನ್ನ ಈಯುವ ಅಹಾರಕ್ಕಾಗಿ ದುಡಿಯಿರಿ
ಎಂದು ತಿಳಿಸುತ್ತಾರೆ. ಈ ನಿತ್ಯ ಜೀವ
ಈಯುವ ಆಹಾರ ಪ್ರಭುಯೇಸುವೇ ಆಗಿದ್ದಾರೆ.
ಕಲ್ವಾರಿ ಬಲಿಯಲ್ಲಿ ನಮಗಾಗಿ ತಮ್ಮ ಪ್ರಾಣವನ್ನು
ನೀಡಿದವರು ನಮ್ಮ ನಿತ್ಯ ಜೀವದ
ಆಹಾರವಾಗಿದ್ದಾರೆ.
ಆತ್ಮಾವಲೋಕನ
-
- ನಾನು ಊಟ ಅಥವಾ ಹೊಟ್ಟೆಗಾಗಿಯೇ ಬದುಕುತ್ತಿದ್ದೇನೆಯೇ?
- ಯೇಸು ಸ್ವಾಮಿ ನಿಜವಾದ ಆಹಾರ ಎಂದು ತಿಳಿದು ಪರಮ ಪ್ರಸಾದವನ್ನು ಯೋಗ್ಯವಾಗಿ ಸ್ವೀಕರಿಸುತ್ತಿದ್ದೇನೆಯೇ?
- ಆಹಾರದಿಂದ ಅಲ್ಲ ದೇವರ ವಾಕ್ಯದಲ್ಲಿ ನನ್ನ ನಂಬಿಕೆ ಇದೆಯೇ?
-ಸಹೋ. ವಿನಯ್ ಕುಮಾರ್, ಚಿಕ್ಕಮಗಳೂರು
No comments:
Post a Comment