ಬಿಳಿ/ಶುಕ್ರ/ಪಾಸ್ಖ ಕಾಲದ ಮೂರನೇ ವಾರ
-ಸಹೋ. ವಿನಯ್ ಕುಮಾರ್, ಚಿಕ್ಕಮಗಳೂರು
1ನೇ ವಾಚನ - ಪ್ರೇ.ಕಾ 9 1-2೦
1ಇತ್ತ ಸೌಲನು ಯೇಸುಸ್ವಾಮಿಯ ಅನುಯಾಯಿಗಳಿಗೆ
ಬೆದರಿಕೆ ಹಾಕುತ್ತಾ ಅವರನ್ನು ಸಂಹರಿಸಬೇಕೆಂದಿದ್ದನು. 2ಈ ಹೊಸಮಾರ್ಗವನ್ನು ಅವಲಂಬಿಸುವವರು ಹೆಂಗಸರೇ ಆಗಿರಲಿ, ಗಂಡಸರೇ
ಆಗಿರಲಿ, ದಮಸ್ಕಸಿನಲ್ಲಿದ್ದರೆ ಅವರನ್ನು ಬಂಧಿಸಿ ಜೆರುಸಲೇಮಿಗೆ
ಎಳೆದು ತರಬೇಕೆಂದಿದ್ದನು. ಇದಕ್ಕೆ ಬೇಕಾದ ಪತ್ರಗಳನ್ನು
ಕೇಳುವುದಕ್ಕಾಗಿ ಪ್ರಧಾನ ಯಾಜಕನ ಬಳಿಗೆ
ಹೋದನು. ದಮಸ್ಕಸಿನಲ್ಲಿರುವ ಪ್ರಾರ್ಥನಾ ಮಂದಿರದ ಅಧಿಕಾರಿಗಳಿಗೆ ತೋರಿಸಲು
ಆ ಪತ್ರಗಳನ್ನು ಪಡೆದನು. 3ಅವನು ಅಲ್ಲಿಂದ ಪ್ರಯಾಣ ಮಾಡುತ್ತಾ
ದಮಸ್ಕಸ್ ಪಟ್ಟಣವನ್ನು ಸಮೀಪಿಸಿದನು. ಇದ್ದಕ್ಕಿದ್ದಂತೆ ಆಕಾಶದಿಂದ ಬೆಳಕೊಂದು ಮಿಂಚಿ ಅವನ ಸುತ್ತಲೂ
ಆವರಿಸಿತು. 4ಅವನು ನೆಲಕ್ಕುರುಳಿದನು. “ಸೌಲನೇ, ಸೌಲನೇ, ನನ್ನನ್ನೇಕೆ
ಹಿಂಸಿಸುತ್ತಿರುವೆ?” ಎಂಬ ವಾಣಿ ಅವನಿಗೆ
ಕೇಳಿಸಿತು.
5ಆಗ ಅವನು, “ಪ್ರಭೂ, ನೀವಾರು?”
ಎಂದನು. “ನೀನು ಹಿಂಸೆಪಡಿಸುತ್ತ ಇರುವ
ಯೇಸುವೇ ನಾನು.
6ನೀನೆದ್ದು ಪಟ್ಟಣಕ್ಕೆ ಹೋಗು, ಏನು ಮಾಡಬೇಕೆಂದು
ನಿನಗೆ ಅಲ್ಲಿ ತಿಳಿಸಲಾಗುವುದು,” ಎಂದು
ಆ ವಾಣಿ ಹೇಳಿತು. 7ಸೌಲನೊಡನೆ ಪ್ರಯಾಣ ಮಾಡುತ್ತಿದ್ದವರಿಗೆ ಆ
ವಾಣಿ ಕೇಳಿಸಿತೇ ಹೊರತು, ಯಾರೂ ಕಾಣಿಸಲಿಲ್ಲ.
ಅವರು ಸ್ತಬ್ದರಾದರು. 8ಸೌಲನು ಮೇಲಕ್ಕೆದ್ದು ಕಣ್ಣರಳಿಸಿ ನೋಡಿದರೂ ಅವನಿಗೇನೂ ಕಾಣಿಸಲಿಲ್ಲ.
ಆದುದರಿಂದ ಸಂಗಡಿಗರು ಅವನ ಕೈಹಿಡಿದು ದಮಸ್ಕಸ್
ಪಟ್ಟಣಕ್ಕೆ ಕರೆದುಕೊಂಡು ಹೋದರು. 9ಮೂರು ದಿನಗಳವರೆಗೂ ಅವನಿಗೆ ಕಣ್ಣು ಕಾಣಿಸಲಿಲ್ಲ.
ಅಲ್ಲದೆ ಅದುವರೆಗೂ ಅವನು ಅನ್ನಪಾನಗಳನ್ನು ಮುಟ್ಟಲಿಲ್ಲ.
10ದಮಸ್ಕಸಿನಲ್ಲಿ
ಅನನೀಯ ಎಂಬ ಶಿಷ್ಯನಿದ್ದನು. ಪ್ರಭು
ಅವನಿಗೆ ದರ್ಶನವಿತ್ತು, “ಅನನೀಯಾ” ಎಂದು ಕರೆಯಲು
ಅವನು, “ಸ್ವಾವಿೂ, ಅಪ್ಪಣೆಯಾಗಲಿ,” ಎಂದನು. 11ಪ್ರಭು ಅವನಿಗೆ, “ನೀನೆದ್ದು ‘ನೇರಬೀದಿ’ ಎಂಬ ಹಾದಿಗೆ ಹೋಗು;
ತಾರ್ಸದ ಸೌಲ ಎಂಬ ವ್ಯಕ್ತಿಗಾಗಿ
ಯೂದನ ಮನೆಯಲ್ಲಿ ವಿಚಾರಿಸು. ಆ ಸೌಲನು ಪ್ರಾರ್ಥನೆಯಲ್ಲಿರುವುದನ್ನು
ಕಾಣುವೆ. 12ಅಲ್ಲದೆ ಅನನೀಯ ಎಂಬವನು ತನ್ನ
ಬಳಿಗೆ ಬಂದು ತಾನು ಮರಳಿ
ದೃಷ್ಟಿಯನ್ನು ಪಡೆಯುವಂತೆ ತನ್ನ ಮೇಲೆ ಹಸ್ತನಿಕ್ಷೇಪ
ಮಾಡುವುದನ್ನು ದರ್ಶನದಲ್ಲಿ ಕಂಡಿದ್ದಾನೆ,” ಎಂದರು. 13ಅನನೀಯ ಪ್ರತ್ಯುತ್ತರವಾಗಿ, “ಪ್ರಭೂ, ಈ ಮನುಷ್ಯ
ಜೆರುಸಲೇಮಿನಲ್ಲಿ ತಮ್ಮ ಭಕ್ತರಿಗೆ ಎಷ್ಟು
ಕೇಡು ಮಾಡಿದ್ದಾನೆಂಬುದ್ದನ್ನು ಅನೇಕರ ಬಾಯಿಂದ ಕೇಳಿದ್ದೇನೆ. 14ಅಷ್ಟು ಮಾತ್ರವಲ್ಲ, ತಮ್ಮ ನಾಮಸ್ಮರಣೆ ಮಾಡುವವರೆಲ್ಲರನ್ನು
ಬಂಧಿಸಲು ಮುಖ್ಯಯಾಜಕರಿಂದ ಅಧಿಕಾರವನ್ನು ಪಡೆದು ಇಲ್ಲಿಗೆ ಬಂದಿದ್ದಾನೆ,”
ಎಂದನು.
15ಪ್ರಭು ಅವನಿಗೆ, “ನೀನು ಹೋಗು, ನನ್ನ
ನಾಮವನ್ನು ಅನ್ಯಧರ್ಮದವರಿಗೂ ಅರಸರಿಗೂ ಇಸ್ರಯೇಲಿನ ಜನರಿಗೂ
ಪ್ರಕಟಿಸಲು ನಾನು ಆರಿಸಿಕೊಂಡಿರುವ ಸಾಧನ
ಅವನು.
16ಅವನು ನನ್ನ ನಾಮದ ನಿಮಿತ್ತ
ಎಷ್ಟು ಕಷ್ಟಕಾರ್ಪಣ್ಯಗಳನ್ನು ಅನುಭವಿಸಬೇಕೆಂಬುದನ್ನು ನಾನೇ ಅವನಿಗೆ ತೋರಿಸುತ್ತೇನೆ,”
ಎಂದರು.
17ಅಂತೆಯೇ ಅನನೀಯನು ಹೊರಟು ಆ
ಮನೆಗೆ ಹೋದನು. ಸೌಲನ ಮೇಲೆ
ಹಸ್ತನಿಕ್ಷೇಪಮಾಡಿ, “ಸಹೋದರ ಸೌಲನೇ, ಪ್ರಭು
ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾರೆ.
ನೀನು ಬರುವಾಗ ದಾರಿಯಲ್ಲಿ ಕಾಣಿಸಿಕೊಂಡ
ಯೇಸುಸ್ವಾಮಿಯೇ, ನೀನು ದೃಷ್ಟಿಯನ್ನು ಮರಳಿ
ಪಡೆಯುವಂತೆಯೂ ಪವಿತ್ರಾತ್ಮಭರಿತನಾಗುವಂತೆಯೂ ನನ್ನನ್ನು ಕಳುಹಿಸಿದ್ದಾರೆ,” ಎಂದನು. 18ಆ ಕ್ಷಣವೇ ಸೌಲನ ಕಣ್ಣುಗಳಿಂದ
ಪರೆಯೊಂದು ಕಳಚಿಬಿದ್ದಿತು. ಅವನಿಗೆ ಪುನಃ ಕಣ್ಣು
ಕಾಣತೊಡಗಿತು. ಎದ್ದು ದೀಕ್ಷಾಸ್ನಾನವನ್ನು ಪಡೆದನು. 19ತರುವಾಯ ಊಟಮಾಡಿದ ಮೇಲೆ ಅವನಿಗೆ
ತ್ರಾಣ ಬಂದಿತು. ಸೌಲನು ಕೆಲವು
ದಿನಗಳವರೆಗೆ ದಮಸ್ಕಸಿನಲ್ಲಿ ಭಕ್ತವಿಶ್ವಾಸಿಗಳೊಡನೆ ಇದ್ದನು. 20ಅನಂತರ ಸೌಲನು ತಡಮಾಡದೆ ಯೆಹೂದ್ಯರ
ಪ್ರಾರ್ಥನಾಮಂದಿರಗಳಿಗೆ ಹೋಗಿ ಯೇಸುವೇ ‘ದೇವರ
ಪುತ್ರ’ ಎಂದು ಬೋಧಿಸಲು ಆರಂಭಿಸಿದನು.
ಕೀರ್ತನೆ - 117: 1-2
ಸ್ತುತಿ ಮಾಡಿ ಪ್ರಭುವನು ಸಮಸ್ತ ರಾಷ್ಟ್ರಗಳೇ
1ಸ್ತುತಿ ಮಾಡಿ ಪ್ರಭುವನು ಸಮಸ್ತ
ರಾಷ್ಟ್ರಗಳೇ / ಆತನನು ಹೊಗಳಿ ಹಾಡಿ
ಸರ್ವಜನಾಂಗಗಳೇ //
2ನಮ್ಮ ಮೇಲೆ ಆತನಿಗಿರುವ ಪ್ರೀತಿ
ಅಚಲ / ಆತನ ಸತ್ಯಪರತೆ ಇರುವುದು
ಅನಂತ ಕಾಲ //
ಶುಭಸಂದೇಶ - ಯೊವಾನ್ನ 6: 52-59
52ಅಷ್ಟಕ್ಕೆ ಆ ಯೆಹೂದ್ಯರಲ್ಲಿ ತೀವ್ರ
ವಾಗ್ವಾದ ಉಂಟಾಯಿತು. “ಈತನು ತನ್ನ ಮಾಂಸವನ್ನು
ತಿನ್ನಲು ಹೇಗೆ ಕೊಟ್ಟಾನು?” ಎಂದು
ಕೇಳತೊಡಗಿದರು. 53ಅದಕ್ಕೆ ಯೇಸು, “ನಾನು ನಿಮಗೆ
ಸತ್ಯವಾಗಿ ಹೇಳುತ್ತೇನೆ: ನೀವು ನರಪುತ್ರನ ಮಾಂಸವನ್ನು
ತಿನ್ನದೆ, ಆತನ ರಕ್ತವನ್ನು ಕುಡಿಯದೆ
ಹೋದರೆ ನಿಮ್ಮಲ್ಲಿ ಜೀವ ಇರುವುದಿಲ್ಲ. 54ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು
ಕುಡಿಯುವವನಲ್ಲಿ ನಿತ್ಯಜೀವ ಇರುತ್ತದೆ. ಅಲ್ಲದೆ ಅಂತಿಮ ದಿನದಂದು
ನಾನು ಅವನನ್ನು ಜೀವಕ್ಕೆ ಎಬ್ಬಿಸುತ್ತೇನೆ. 55ನನ್ನ ಮಾಂಸವೇ ನಿಜವಾದ ಆಹಾರ;
ನನ್ನ ರಕ್ತವೇ ನಿಜವಾದ ಪಾನ. 56ನನ್ನ ಮಾಂಸವನ್ನು ತಿಂದು, ನನ್ನ ರಕ್ತವನ್ನು
ಕುಡಿಯುವವನು ನನ್ನಲ್ಲಿ ನೆಲೆಸಿರುತ್ತಾನೆ. ನಾನು ಅವನಲ್ಲಿ ನೆಲೆಸಿರುತ್ತೇನೆ. 57ಜೀವಸ್ವರೂಪಿ ಆದ ಪಿತನು ನನ್ನನ್ನು
ಕಳುಹಿಸಿಕೊಟ್ಟಿರುವರು. ನಾನು ಅವರಿಂದಲೇ ಜೀವಿಸುತ್ತೇನೆ.
ಅಂತೆಯೇ ನನ್ನನ್ನು ಭುಜಿಸುವವನು ನನ್ನಿಂದಲೇ ಜೀವಿಸುತ್ತಾನೆ. 58ಸ್ವರ್ಗದಿಂದ ಇಳಿದು ಬಂದ ರೊಟ್ಟಿ
ಇದೇ. ನಿಮ್ಮ ಪೂರ್ವಜರು ‘ಮನ್ನಾ’ವನ್ನು ತಿಂದರೂ ಸಾವಿಗೆ
ತುತ್ತಾದರು. ಇದು ಹಾಗಲ್ಲ, ಈ
ರೊಟ್ಟಿಯನ್ನು ತಿನ್ನುವವನು ಚಿರಕಾಲ ಬಾಳುವನು,” ಎಂದು
ಹೇಳಿದರು. 59ಕಫೆರ್ನವುಮಿನ ಪ್ರಾರ್ಥನಾಮಂದಿರದಲ್ಲಿ ಯೇಸು ಬೋಧನೆ ಮಾಡುತ್ತಿದ್ದಾಗ
ಆಡಿದ ಮಾತುಗಳಿವು.
ಚಿಂತನೆ
ತಿರಸ್ಕಾರ ಎನ್ನುವುದು ಯಾರು ಕೂಡ ಸ್ವೀಕರಿಸುವಂತಹ ವಿಷಯವಲ್ಲ. ಯೊವಾನ್ನರ ಶುಭ ಸಂದೇಶದಲ್ಲಿ ನಾವು ನೋಡುತ್ತೇವೆ, ಪ್ರಭುವಿನ ಸ್ವಂತ ಜನರೇ ಅವರನ್ನು ತಿರಸ್ಕರಿಸುತ್ತಾರೆ. ಇದೇ ವಿಪರ್ಯಾಸ. ಪ್ರಭುವನ್ನು ಅವರ ಸ್ವಂತ ಜನರೇ ಗುರುತಿಸದೇ ಹೋದದ್ದು ಬಹಳ ದುಃಖಕರವಾದ ವಿಷಯ. ಈ ತಿರಸ್ಕಾರದ ಒಂದು ಪ್ರಮೇಯವನ್ನು ಇಂದಿನ ಶುಭ ಸಂದೇಶದಲ್ಲಿ ನಾವು ಕಾಣುತ್ತೇವೆ. ಬೇಡ ಎನ್ನುವ ಗಂಡನಿಗೆ ಮೊಸರಲ್ಲೂ ಕಲ್ಲು ಎಂಬ ಒಂದು ಗಾದೆ ಇದೆ. ಯಾರಾದರೂ ಆಗದ ವ್ಯಕ್ತಿ ಇದ್ದರೆ ನಮಗೆ ಅವರಿಗೆ ಏನು ಮಾಡಿದರೂ ಅದು ಇಷ್ಟವಾಗುವುದಿಲ್ಲ. ಕಾರಣ ಆ ವ್ಯಕ್ತಿಯ ವ್ಯಕ್ತಿತ್ವ. ವ್ಯಕ್ತಿಯಿಂದ ಹೊರಬರುವ ಆತನ ವ್ಯಕ್ತಿತ್ವ ಮಾತು ಕ್ರಿಯೆ ಎಲ್ಲವೂ ಆತನೇ ಆಗಿರುತ್ತಾನೆ. ಇದಕ್ಕಾಗಿ ಆತನಿಂದ ಹೊರ ಬರುವುದಿಲ್ಲವೂ ನಮಗೆ ಇಷ್ಟವಾಗುವುದಿಲ್ಲ. ಇದೇ ರೀತಿ ಯೆಹೂದ್ಯರೂ ಕೂಡ ಯೇಸು ಸ್ವಾಮಿಯನ್ನು ದ್ವೇಷಿಸುತ್ತಿದ್ದರು. ಆದ್ದರಿಂದ ಅವರು ಆಡಿದ ಮಾತು, ಅವರು ಮಾಡಿದ ಕೆಲಸಗಳ ಬಗ್ಗೆ ಮತ್ತು ಅವರು ಮಾಡಿದ ಪವಾಡಗಳ ಬಗ್ಗೆ ಹೆಚ್ಚು ವಿರೋಧವನ್ನ ವ್ಯಕ್ತ ಪಡಿಸುತ್ತಿದ್ದರು. ಯೇಸು ಸ್ವಾಮಿ ಇಂದಿನ ಶುಭ ಸಂದೇಶದಲ್ಲಿ ನನ್ನ ಮಾಂಸವೇ ನಿಜವಾದ ಆಹಾರ, ನನ್ನ ರಕ್ತವೇ ನಿಜವಾದ ಪಾನ ವೆಂದು ಹೇಳುತ್ತಾರೆ. ಇದನ್ನು ಕೇಳಿದ ಯೆಹೂದ್ಯರಿಗೆ ಈ ಮಾತನ್ನು ಜೀರ್ಣಿಸಿಕೊಳ್ಳಲು ಆಗಲಿಲ್ಲ. ಕಾರಣ ಇದಾಗಲೇ ಅವರು ಯೇಸು ಸ್ವಾಮಿಯನ್ನು ದ್ವೇಷಿಸುತ್ತಿದ್ದರು. ದ್ವೇಷ ಒಳ್ಳೆಯತನವನ್ನು ಕಾಣಲು ಬಿಡುವುದಿಲ್ಲ. ಹಲವು ಕಲಹ ಮತ್ತು ಕಿತ್ತಾಟಕ್ಕೆ ದ್ವೇಷವೇ ಕಾರಣ. ಇಂತಹ ದ್ವೇಷವನ್ನು ಬಿಟ್ಟು ಎಲ್ಲರಲ್ಲಿ ಒಳ್ಳೆಯತನವನ್ನು ಕಾಣುವ ಬದುಕು ನಮ್ಮದಾಗಲಿ.
ಆತ್ಮಾವಲೋಕನ
1. ವ್ಯಕ್ತಿ ಮತ್ತು ವ್ಯಕ್ತಿತ್ವ
ಎರಡು ಬೇರೆ ಬೇರೆಯೇ?
2. ದ್ವೇಷ ಇತರರನ್ನು ಕೊಲ್ಲದೆ
ನಮ್ಮನ್ನೇ ಕೊಲ್ಲುತ್ತದೆ. ಇಂತಹ ದ್ವೇಷ ನಮ್ಮಲ್ಲಿದೆಯೇ?
3. ಒಳ್ಳೆಯತನ ಕಾಣುವ ಒಳ್ಳೆಯ ಮನಸ್ಸು
ನನ್ನಲ್ಲಿದೆಯೇ?
-ಸಹೋ. ವಿನಯ್ ಕುಮಾರ್, ಚಿಕ್ಕಮಗಳೂರು
No comments:
Post a Comment