ಬಿಳಿ/ ಗುರು/ ಪಾಸ್ಖ
ಕಾಲದ ಮೂರನೇ ವಾರ
ಆತ್ಮಾವಲೋಕನ
-ಸಹೋ. ವಿನಯ್ ಕುಮಾರ್, ಚಿಕ್ಕಮಗಳೂರು
1ನೇ ವಾಚನ - ಪ್ರೇ.ಕಾ 8: 26-4೦
26ಅನಂತರ ದೇವದೂತನು ಫಿಲಿಪ್ಪನಿಗೆ, “ನೀನು ಎದ್ದು ದಕ್ಷಿಣಾಭಿಮುಖವಾಗಿ
ಹೋಗು. ಅದು ಜೆರುಸಲೇಮಿನಿಂದ ಗಾಜಕ್ಕೆ
ಹೋಗುವ ಅರಣ್ಯಮಾರ್ಗ,” ಎಂದನು. 27ಅಂತೆಯೇ ಫಿಲಿಪ್ಪನು ಹೊರಟನು. ಆಗ ಇಥಿಯೋಪಿಯದ
ಕಂಚುಕಿಯೊಬ್ಬನು ಅದೇ ಮಾರ್ಗವಾಗಿ ಬರುತ್ತಿದ್ದನು.
ಅವನು ಆ ದೇಶದ ರಾಣಿ
ಕಂದಾಕಿಯ ಕೋಶಾಧಿಕಾರಿ ಹಾಗೂ ಸಚಿವ. 28ದೇವಾರಾಧನೆಗೆಂದು
ಜೆರುಸಲೇಮಿಗೆ ಹೋಗಿ ಹಿಂದಿರುಗುತ್ತಿದ್ದನು. ಅವನು
ತನ್ನ ರಥದಲ್ಲಿ ಕುಳಿತು ಯೆಶಾಯನ
ಪ್ರವಾದನೆಯನ್ನು ಓದುತ್ತಿದ್ದನು. 29ಪವಿತ್ರಾತ್ಮರು
ಫಿಲಿಪ್ಪನಿಗೆ, “ನೀನು ಮುಂದೆ ಹೋಗಿ
ಆ ರಥದ ಜೊತೆಯಲ್ಲೇ
ನಡೆ,” ಎಂದು ತಿಳಿಸಿದರು. 30ಫಿಲಿಪ್ಪನು ಮುಂದಕ್ಕೆ ಧಾವಿಸಿ, ಅವನು ಯೆಶಾಯನ
ಪ್ರವಾದನೆಯನ್ನು ಓದುತ್ತಿರುವುದನ್ನು ಕೇಳಿಸಿಕೊಂಡನು. “ನೀವು ಓದುತ್ತಿರುವುದು ಅರ್ಥವಾಗುತ್ತಿದೆಯೇ?”
ಎಂದು ಪ್ರಶ್ನಿಸಿದನು. 31ಆ ಅಧಿಕಾರಿ ಪ್ರತ್ಯುತ್ತರವಾಗಿ, “ಯಾರಾದರೂ
ವಿವರಿಸಿದ ಹೊರತು ಇದು ನನಗೆ
ಅರ್ಥವಾಗುವುದಾದರೂ ಹೇಗೆ?” ಎಂದನು. ರಥವನ್ನು
ಹತ್ತಿ ಕುಳಿತುಕೊಳ್ಳುವಂತೆ ಫಿಲಿಪ್ಪನನ್ನು ಆಹ್ವಾನಿಸಿದನು. 32ಅವನು ಓದುತ್ತಿದ್ದ ಪ್ರವಾದನೆ ಇದು: “ವಧ್ಯಸ್ಥಾನಕ್ಕೆ ಒಯ್ದ
ಕುರಿಯಂತೆ ತುಪ್ಪಟ ಕತ್ತರಿಸುವವನ ಮುಂದಿರುವ
ಮೂಕ ಕುರಿಮರಿಯಂತೆ ಆತನು ಬಾಯ್ದೆರೆಯಲಿಲ್ಲ. 33ಆತನನ್ನು ಅವಮಾನಪಡಿಸಲಾಯಿತು, ನ್ಯಾಯವನ್ನೇ ಆತನಿಗೆ ನಿರಾಕರಿಸಲಾಯಿತು, ಆತನ
ಸಂತತಿಯ ಮಾತೇಎತ್ತದಂತಾಯಿತು. ಇದಕಾರಣ ಆತನ ಭೌತಿಕ
ಜೀವವನ್ನೇ ಮೊಟಕುಗೊಳಿಸಲಾಯಿತು.” 34ಆ ಅಧಿಕಾರಿ ಫಿಲಿಪ್ಪನಿಗೆ, “ಇಲ್ಲಿ
ಪ್ರವಾದಿ ಯಾರನ್ನು ಕುರಿತು ಈ
ಮಾತುಗಳನ್ನು ಹೇಳಿದ್ದಾನೆ. ತನ್ನನ್ನು ಕುರಿತೋ ಅಥವಾ ಬೇರೆಯವರನ್ನು
ಕುರಿತೋ, ಹೇಳಬಲ್ಲೆಯಾ?” ಎಂದು ಕೇಳಿದನು. 35ಆಗ ಫಿಲಿಪ್ಪನು ಮರುತ್ತರವಾಗಿ, ಆ ಪ್ರವಾದನೆಯನ್ನೇ ಆಧಾರವಾಗಿ
ತೆಗೆದುಕೊಂಡು, ಯೇಸುವಿನ ಶುಭಸಂದೇಶವನ್ನು ಅವನಿಗೆ
ಬೋಧಿಸಿದನು.
36ಅವರು ಪ್ರಯಾಣ ಮಾಡುತ್ತಾ ದಾರಿಯಲ್ಲಿ
ನೀರಿದ್ದ ಒಂದು ಸ್ಥಳಕ್ಕೆ ಬಂದರು.
ಅದನ್ನು ಕಂಡ ಆ ಅಧಿಕಾರಿ,
“ಇಲ್ಲಿ ನೀರಿದೆ. ನಾನು ದೀಕ್ಷಾಸ್ನಾನವನ್ನು
ಪಡೆಯಲು ಏನಾದರೂ ಅಭ್ಯಂತರವಿದೆಯೇ” ಎಂದನು. 37(ಫಿಲಿಪ್ಪನು,
“ನೀವು ಹೃದಯಪೂರ್ವಕವಾಗಿ ವಿಶ್ವಾಸಿಸುವುದಾದರೆ ದೀಕ್ಷಾಸ್ನಾನವನ್ನು ಪಡೆಯಬಹುದು,” ಎಂದನು. “ಯೇಸುಕ್ರಿಸ್ತ ದೇವರ
ಪುತ್ರ ಎಂದು ನಾನು ವಿಶ್ವಾಸಿಸುತ್ತೇನೆ,”
ಎಂದು ಅಧಿಕಾರಿ ಪ್ರತ್ಯುತ್ತರವಿತ್ತನು). 38ಅಧಿಕಾರಿಯ ಆಜ್ಞೆಯಂತೆ ರಥವನ್ನು ಅಲ್ಲಿಯೇ ನಿಲ್ಲಿಸಲಾಯಿತು.
ಅವರಿಬ್ಬರೂ ನೀರಿಗೆ ಇಳಿದರು. ಫಿಲಿಪ್ಪನು
ಅಧಿಕಾರಿಗೆ ದೀಕ್ಷಾಸ್ನಾನವನ್ನು ಕೊಟ್ಟನು. 39ಅವರಿಬ್ಬರು ನೀರಿನಿಂದ ಮೇಲಕ್ಕೆ ಬಂದೊಡನೆ ಪ್ರಭುವಿನ
ಆತ್ಮವು ಫಿಲಿಪ್ಪನನ್ನು ಅಲ್ಲಿಂದ ಕೊಂಡೊಯ್ಯಿತು. ಆ
ಅಧಿಕಾರಿ ಫಿಲಿಪ್ಪನನ್ನು ಪುನಃ ಕಾಣಲಿಲ್ಲ; ಅವನು
ಸಂತೋಷಭರಿತನಾಗಿ ಪ್ರಯಾಣವನ್ನು ಮುಂದುವರಿಸಿದನು. 40ಫಿಲಿಪ್ಪನಾದರೋ
ಆಜೋತ್ ಎಂಬಲ್ಲಿ ಕಾಣಿಸಿಕೊಂಡನು. ಅಲ್ಲಿಂದ
ಸೆಜರೇಯವನ್ನು ತಲುಪುವವರೆಗೆ ಎಲ್ಲಾ ಊರುಗಳಲ್ಲೂ ಶುಭಸಂದೇಶವನ್ನು
ಸಾರುತ್ತಾ ಹೋದನು.
ಕೀರ್ತನೆ - 66: 8-9, 16-17, 2೦
ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ
8ಜನಾಂಗಗಳೇ, ನಮಿಸಿರಿ ನಮ್ಮ ದೇವನನು
/ ಗಟ್ಟಿಯಾಗಿ ಮಾಡಿರಿ ಅವನ ಗುಣಗಾನವನು
//
9ನಮ್ಮ ಪ್ರಾಣವನ್ನಾತ ಉಳಿಸಿದನಯ್ಯಾ / ಕಾಲೆಡವದಂತೆ ಕಾಪಾಡಿದನಯ್ಯಾ //
16ಬಂದು ಕೇಳಿರಿ ದೇವನಲಿ ಭಯಭಕ್ತಿಯುಳ್ಳವರೆ
/ ದೇವನೆನಗೆ ಮಾಡಿದ ಕಾರ್ಯಗಳ ತಿಳಿಸುವೆ
ನಿಮಗೆ //
17ದೇವನಿಗೆನ್ನ ಮನ ಸ್ವರವೆತ್ತಿ ಮೊರೆಯಿಟ್ಟಿತು
/ ಆತನ ಸ್ತುತಿ ನನ್ನ ಬಾಯಲಿ
ತುಳುಕುತ್ತಿತ್ತು //
20ಎನ್ನ ಪ್ರಾರ್ಥನೆಯನು ತಿರಸ್ಕರಿಸದ ದೇವನಿಗೆ ಸ್ತುತಿ / ತನ್ನ
ಪ್ರೀತಿಯನೆನಗೆ ನಿರಾಕರಿಸದಾತನಿಗೆ ಸನ್ನುತಿ //
ಶುಭಸಂದೇಶ - ಯೊವಾನ್ನ 6: 44-51
44ನನ್ನನ್ನು ಕಳುಹಿಸಿಕೊಟ್ಟ ಪಿತನು, ನನ್ನತ್ತ ಸೆಳೆಯದ
ಹೊರತು, ಯಾರೂ ನನ್ನ ಬಳಿಗೆ
ಬಾರರು. ಬಂದವರನ್ನು ನಾನು ಅಂತಿಮ ದಿನದಂದು
ಜೀವಕ್ಕೆ ಎಬ್ಬಿಸುತ್ತೇನೆ. 45‘ದೇವರಿಂದಲೇ ಅವರೆಲ್ಲರೂ ಬೋಧನೆ ಪಡೆಯುವರು,’ ಎಂದು
ಪ್ರವಾದಿಗಳ ಗ್ರಂಥದಲ್ಲಿ ಬರೆದಿದೆ. ಪಿತನಿಗೆ ಕಿವಿಗೊಟ್ಟು ಅವರಿಂದಲೇ
ಕಲಿತುಕೊಂಡ ಪ್ರತಿ ಒಬ್ಬನೂ ನನ್ನ
ಬಳಿಗೆ ಬರುತ್ತಾನೆ. 46ಹಾಗೆಂದ ಮಾತ್ರಕ್ಕೆ ಪಿತನನ್ನು ಯಾರಾದರೂ ಕಣ್ಣಾರೆ ಕಂಡಿದ್ದಾರೆ
ಎಂದಲ್ಲ, ದೇವರಿಂದ ಬಂದಿರುವ ಒಬ್ಬನು
ಮಾತ್ರ ಪಿತನನ್ನು ಕಂಡಿದ್ದಾನೆ. 47ವಿಶ್ವಾಸವುಳ್ಳವನಲ್ಲಿ
ನಿತ್ಯಜೀವ ಇದೆಯೆಂದು ನಾನು ನಿಮಗೆ ಸತ್ಯವಾಗಿ
ಹೇಳುತ್ತೇನೆ. 48ಜೀವದಾಯಕ ರೊಟ್ಟಿ ನಾನೇ. 49ನಿಮ್ಮ ಪೂರ್ವಜರು ಮರಳುಗಾಡಿನಲ್ಲಿ ‘ಮನ್ನಾ’ವನ್ನು ತಿಂದರು;
ಆದರೂ ಸಾವಿಗೆ ತುತ್ತಾದರು. 50ಸ್ವರ್ಗದಿಂದ ಇಳಿದು ಬಂದ ರೊಟ್ಟಿಯಾದರೋ
ಹಾಗಲ್ಲ. ಇದನ್ನು ತಿನ್ನುವ ಯಾರಿಗೂ
ಸಾವೆಂಬುದು ಇಲ್ಲ. 51ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ
ರೊಟ್ಟಿ. ಈ ರೋಟ್ಟಿಯನ್ನು ತಿಂದವನು
ಚಿರಕಾಲ ಬಾಳುತ್ತಾನೆ. ಲೋಕೋದ್ಧಾರಕ್ಕಾಗಿ ನಾನು ಅರ್ಪಿಸುವ ನನ್ನ
ಮಾಂಸವೇ ನಾನು ಕೊಡುವ ರೊಟ್ಟಿ,”
ಎಂದು ಹೇಳಿದರು.
ಚಿಂತನೆ
ಯೋವಾನ್ನನ ಶುಭ ಸಂದೇಶವನ್ನು ವೈವಿಧ್ಯತೆಯಿಂದ ಕೂಡಿದ ಶುಭಸಂದೇಶ ಮತ್ತು ವಿಶಿಷ್ಟ ದೈವ ಶಾಸ್ತ್ರದಿಂದ ಕೂಡಿದ ಶುಭಸಂದೇಶ ಎಂದು ಕರೆಯಲಾಗುತ್ತದೆ. ಈ ಶುಭಸಂದೇಶವನ್ನು ಚಿಕ್ಕ ಮಕ್ಕಳು ಮತ್ತು ದೊಡ್ಡ ವಯಸ್ಕರು ಇಬ್ಬರೂ ಜೊತೆಯಲ್ಲಿ ಸೇರಿ ಓದುವಂತಹ ಶುಭಸಂದೇಶವಾಗಿದೆ. ಅದೇ ರೀತಿ ಇಬ್ಬರೂ ಅವರವರ ಶಕ್ತಿಗೆ ಅನುಗುಣವಾಗಿ ಅರ್ಥೈಸಿಕೊಳ್ಳುವಂತಹ ಶುಭಸಂದೇಶ ಇದಾಗಿದೆ. ಇದಕ್ಕೆ ಸಾಕ್ಷಿ ಎಂಬಂತಿದೆ ಇಂದಿನ ಶುಭಸಂದೇಶದ ವಾಚನ. ಇಂದಿನ ಶುಭಸಂದೇಶದಲ್ಲಿ ಅನೇಕ ವಿಷಯಗಳನ್ನು ನಾವು ಗಮನಿಸಬಹುದು. ವಯಸ್ಕರು " ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿ ಈ ರೊಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ" ಈ ವಾಕ್ಯವನ್ನು ಧ್ಯಾನಿಸುವುದು ಸೂಕ್ತವಾಗಿದೆ. ಪ್ರಬುದ್ಧ ಜೀವಿಗಳಿಗೆ " ವಿಶ್ವಾಸವುಳ್ಳವನಲ್ಲಿ ನಿತ್ಯ ಜೀವ ಇದೆ ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ" ಧ್ಯಾನಿಸಲು ಬಹಳ ಸೂಕ್ತವಾಗಿದೆ. ಖ್ಯಾತ ತತ್ವಶಾಸ್ತ್ರ ಪರಿಣಿತ ಕಿರ್ಕೆಗಾರ್ಡ್ ಎನ್ನುವರು ವಿಶ್ವಾಸದ ಬಗ್ಗೆ ಹೀಗೆನ್ನುತ್ತಾರೆ “ Leap in to the dark ” ಕತ್ತಲ್ಲಿಗೆ ನೆಗೆಯುವುದು ಎಂದು. ವಿಶ್ವಾಸವೇ ಹಾಗೆ ಒಬ್ಬ ವ್ಯಕ್ತಿಯನ್ನು ಏನು ಬೇಕಾದರೂ ಮಾಡಿಸಿಬಿಡುತ್ತದೆ. ಆದಿಕಾಂಡ 22ರಲ್ಲಿ ನಾವು ನೋಡುತ್ತೇವೆ ಅಬ್ರಹಾಮನ ವಿಶ್ವಾಸವೇ ಆತನ ಒಬ್ಬನ್ನೇ ಮಗನನ್ನು ಬಲಿ ಕೊಡಲು ಪ್ರೇರೇಪಿಸುತ್ತದೆ. ಇದು ಒಂದು ರೀತಿ ಕತ್ತಲಲ್ಲಿ ನಡೆಯುವುದೇ ಆಗಿದೆ. ಇಂತಹ ವಿಶ್ವಾಸ ಪ್ರತಿಯೊಬ್ಬನ ಬದುಕಿನಲ್ಲಿ ಮೂಡಬೇಕು ಆಗ ಬದುಕಿದ ಬಾಳಿಗೊಂದು ಅರ್ಥ ಬರುತ್ತದೆ.
ಆತ್ಮಾವಲೋಕನ
1. ನನ್ನ ವಿಶ್ವಾಸ ಎಂತದ್ದು?
2.
ಕತ್ತಲಲ್ಲಿ
ನೆಗೆಯುವುದು ನನ್ನಿಂದ ಸಾಧ್ಯವೇ?
-ಸಹೋ. ವಿನಯ್ ಕುಮಾರ್, ಚಿಕ್ಕಮಗಳೂರು
No comments:
Post a Comment