Sunday, 5 May 2019

12 ಮೇ 2೦19

ಬಿಳಿ/ಭಾನು/ಪಾಸ್ಖ ಕಾಲದ ನಾಲ್ಕನೇ ಭಾನುವಾರ (4)

ಭಾನುವಾರವನ್ನು ದೈವಕರೆಯ ಭಾನುವಾರವೆಂದು ಕರೆಯಲಾಗುತ್ತದೆ. ದೈವಕರೆಗಾಗಿ ವಿಶೇಷವಾಗಿ ಪ್ರಾರ್ಥಿಸಲಾಗುವುದು.
               
1ನೇ ವಾಚನ - ಪ್ರೇ.ಕಾ 13: 14, 43-52 
14ಉಳಿದವರು ಪೆರ್ಗದಿಂದ ಹೊರಟು ಪಿಸಿದಿಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಬಂದರು. ಸಬ್ಬತ್ದಿನದಲ್ಲಿ ಪ್ರಾರ್ಥನಾಮಂದಿರಕ್ಕೆ ಹೋಗಿ ಕುಳಿತುಕೊಂಡರು.

43ಪ್ರಾರ್ಥನಾಕೂಟ ಮುಗಿದಮೇಲೆ ಅನೇಕ ಯೆಹೂದ್ಯರೂ ಯೆಹೂದ್ಯ ಮತಾವಲಂಬಿಗಳಾದ ಅನ್ಯರೂ ಪೌಲ ಮತ್ತು ಬಾರ್ನಬರನ್ನು ಹಿಂಬಾಲಿಸಿದರು. ಪ್ರೇಷಿತರು ಅವರೊಡನೆ ಮಾತನಾಡಿ ದೈವಾನುಗ್ರಹದಲ್ಲಿ ದೃಢವಾಗಿ ಬಾಳುವಂತೆ ಪ್ರೋತ್ಸಾಹಿಸಿದರು44ಮುಂದಿನ ಸಬ್ಬತ್ದಿನ ದೇವರ ವಾಕ್ಯವನ್ನು ಕೇಳಲು ನಗರಕ್ಕೆ ನಗರವೇ ಆಗಮಿಸಿತು45ಜನರು ತಂಡೋಪತಂಡವಾಗಿ ಬರುತ್ತಿರುವುದನ್ನು ಕಂಡು ಯೆಹೂದ್ಯರು ಮತ್ಸರಭರಿತರಾದರು. ಅವರು ಪೌಲನ ಮಾತುಮಾತಿಗೂ ವಿರೋಧವಾಗಿ ವಾದಿಸಿ ದೂಷಣೆಮಾಡತೊಡಗಿದರು46ಪೌಲ ಮತ್ತು ಬಾರ್ನಬ ಮತ್ತಷ್ಟು ಧೈರ್ಯದಿಂದ ಮಾತನಾಡಿದರು: “ದೇವರ ವಾಕ್ಯವನ್ನು ಮೊಟ್ಟಮೊದಲು ನಿಮಗೆ ಬೋಧಿಸುವುದು ಅಗತ್ಯವಾಗಿತ್ತು. ಆದರೆ ನೀವು ಅದನ್ನು ನಿರಾಕರಿಸಿ ಅಮರಜೀವಕ್ಕೆ ಅಪಾತ್ರರೆಂದು ನಿಮ್ಮನ್ನು ನೀವೇ ತೀರ್ಮಾನಿಸಿಕೊಂಡಿರಿ. ಆದುದರಿಂದ ನಾವು ನಿಮ್ಮನ್ನು ಬಿಟ್ಟು ಅನ್ಯಧರ್ಮದವರ ಕಡೆ ಹೋಗುತ್ತೇವೆ47ಏಕೆಂದರೆ ಪ್ರಭು ನಮಗಿತ್ತ ಆಜ್ಞೆ ಹೀಗಿದೆ: ‘ಅನ್ಯಧರ್ಮೀಯರಿಗೆ ಜ್ಯೋತಿಯನ್ನಾಗಿಯೂ ವಿಶ್ವಪೂರ್ತಿಗೆ ಜೀವೋದ್ಧಾರದ ಸಾಧನವಾಗಿಯೂ ನಾನು ನಿನ್ನನ್ನು ನೇಮಿಸಿದ್ದೇನೆ’.

48ಇದನ್ನು ಕೇಳಿದ ಅನ್ಯಧರ್ಮೀಯರು ಸಂತೋಷಪಟ್ಟು ದೇವರ ಸಂದೇಶಕ್ಕಾಗಿ ಸ್ತುತಿಸಿದರು. ಅಮರಜೀವಕ್ಕೆ ಆಯ್ಕೆಯಾದವರೆಲ್ಲರೂ ವಿಶ್ವಾಸಿಗಳಾದರು49ಪ್ರಭುವಿನ ವಾಕ್ಯ ಪ್ರದೇಶದಲ್ಲೆಲ್ಲಾ ಹಬ್ಬಿ ಹರಡಿತು.

50ಯೆಹೂದ್ಯರಾದರೋ ದೇವಭಕ್ತೆಯರಾದ ಕುಲೀನ ಸ್ತ್ರೀಯರನ್ನೂ ಪಟ್ಟಣದ ಪ್ರಮುಖ ಜನರನ್ನೂ ಪ್ರಚೋದಿಸಿದರು: ಪೌಲ ಮತ್ತು ಬಾರ್ನಬರನ್ನು ಹಿಂಸಿಸುವಂತೆ ಹುರಿದುಂಬಿಸಿ, ಅವರನ್ನು ಪ್ರದೇಶದಿಂದ ಹೊರಗಟ್ಟಿಸಿದರು51ಇದಕ್ಕೆ ಪ್ರತಿಯಾಗಿ ಪ್ರೇಷಿತರು ತಮ್ಮ ಪಾದ ಧೂಳನ್ನು ಝಾಡಿಸಿ ಇಕೋನಿಯಕ್ಕೆ ಹೊರಟು ಹೋದರು.  52ಭಕ್ತ ವಿಶ್ವಾಸಿಗಳಾದರೋ ಪರಮಾನಂದಪಟ್ಟರು, ಪವಿತ್ರಾತ್ಮಭರಿತರಾದರು.

ಕೀರ್ತನೆ  -  1೦೦:  1-3,5
ಆತನವರು ನಾವು ಆತನ ಜನ, ಆತನೇ ಮೇಯಿಸುವ ಕುರಿಗಳು ನಾವು
1ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ /
2ಅತಿ ಸಂತೋಷದಿಂದ ಸೇವೆ ಮಾಡಿ ಆತನಿಗೆ / ಹಾಡುತ, ಪಾಡುತ, ಬನ್ನಿ ಆತನ ಸನ್ನಿಧಿಗೆ //
3ಪ್ರಭುವೇ ದೇವರೆಂಬುದನು ಮರೆತುಬಿಡಬೇಡಿ ನೀವು / ನಮ್ಮ ಸೃಷ್ಟಿಕರ್ತ ಆತನು, ಆತನವರು ನಾವು / ಆತನ ಜನ, ಆತನೆ ಮೇಯಿಸುವ ಕುರಿಗಳು, ನಾವು //
4ಆತನ ಗೃಹದ್ವಾರವನು ಪ್ರವೇಶಿಸಿ ಧನ್ಯವಾದದೊಂದಿಗೆ | ಆತನ ಆವರಣದಲಿ ನಿಲ್ಲಿರಿ ಸ್ತುತಿಸ್ತೋತ್ರಗಳೊಂದಿಗೆ | ಆತನ ನಾಮವನು ಕೊಂಡಾಡಿ ಉಪಕಾರಸ್ಮರಣೆಯೊಂದಿಗೆ ||
5ಹೌದು, ಪ್ರಭುವೆನಿತೋ ಒಳ್ಳೆಯವನು / ಇರುವುದಾತನ ಪ್ರೀತಿ ಯುಗಯುಗಕು / ಆತನ ಸತ್ಯತೆ ತಲತಲಾಂತರಕು //
               
2ನೇ ವಾಚನ - ಪ್ರಕಟಣೆ 7: 9, 14-17
9ಇದಾದ ಬಳಿಕ ನಾನು ಇನ್ನೊಂದು ದಿವ್ಯದರ್ಶನವನ್ನು ಕಂಡೆ: ಯಾರಿಂದಲೂ ಎಣಿಸಲಾಗದಷ್ಟು ಒಂದು ದೊಡ್ಡ ಜನಸಮೂಹವು ನೆರೆದಿತ್ತು. ಅವರು ಎಲ್ಲಾ ದೇಶ, ಭಾಷೆ, ಕುಲ, ಗೋತ್ರಗಳಿಂದ ಬಂದವರಾಗಿದ್ದರು. ಶ್ವೇತಾಂಬರರಾಗಿ ಸಿಂಹಾಸನದ ಮತ್ತು ಯಜ್ಞದ ಕುರಿಮರಿಯಾದಾತನ ಸಾನ್ನಿಧ್ಯದಲ್ಲಿ ನಿಂತಿದ್ದರು. ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದಿದ್ದರು.

14ಅದಕ್ಕೆ ನಾನು, “ಸ್ವಾವಿೂ ನೀವೇ ಬಲ್ಲಿರಿ”, ಎಂದು ಉತ್ತರಕೊಟ್ಟೆ. ಆಗ ಆತನು ನನಗೆ ಹೀಗೆಂದನು: “ಇವರು ಭೀಕರ ಹಿಂಸೆ ಬಾಧೆಯನ್ನು ಅನುಭವಿಸಿ ಬಂದವರು. ತಮ್ಮ ನಿಲುವಂಗಿಗಳನ್ನು ಯಜ್ಞದ ಕುರಿಮರಿಯ ರಕ್ತದಿಂದ ತೊಳೆದು ಬಿಳುಪಾಗಿಸಿಕೊಂಡಿದ್ದಾರೆ15ಇರುವರು ದೇವರ ಸಿಂಹಾಸನದ ಸಮ್ಮುಖದಲ್ಲೇ ಆರಾಧಿಪರಾತನನು ಹಗಲಿರುಳು ದೇವಾಲಯದಲ್ಲೇ ಸಂರಕ್ಷಿಪನಾತನು ಅವರನ್ನು ಗುಡಾರದಂತೆ16ಇನ್ನಿರದು ಅವರಿಗೆ ಹಸಿವು ಬಾಯಾರಿಕೆ ತಟ್ಟದವರನು ಬಿಸಿಲಿನ ತಾಪ, ಸೂರ್ಯನ ಕೋಪ17ನಿಂತಿಹನು ಕುರಿಮರಿಯಾದಾತನು ಸಿಂಹಾಸನದ ನಡುವೆ ಕಾಯುವನು ಅವರುಗಳನು ಕುರುಬನಂತೆ ನಡೆಸುವನು ಅವರನು ಜೀವಜಲದ ಒರತೆಗಳ ಬಳಿಗೆ ದೇವನೊರಸುವನು ಅವರ ಕಂಬನಿಗಳನು ಬಿಡದೆ’,” ಎಂದು ನನಗೆ ತಿಳಿಸಿದನು.
        
ಶುಭಸಂದೇಶ - ಯೊವಾನ್ನ 1೦: 27-3೦
27ನನ್ನ ಕುರಿಗಳಾದರೋ ನನ್ನ ಸ್ವರವನ್ನು ಗುರುತಿಸುತ್ತವೆ. ನಾನು ಅವನ್ನು ಬಲ್ಲೆನು. ಅವು ನನ್ನನ್ನು ಹಿಂಬಾಲಿಸುತ್ತವೆ28ನಾನು ಅವುಗಳಿಗೆ ನಿತ್ಯ ಜೀವವನ್ನು ಕೊಡುತ್ತೇನೆ. ಅವು ಎಂದಿಗೂ ನಾಶ ಆಗುವುದಿಲ್ಲ. ನನ್ನ ಕೈಯಿಂದ ಅವನ್ನು ಯಾರೂ ಕಸಿದುಕೊಳ್ಳಲಾರರು29ಅವನ್ನು ನನಗೆ ಕೊಟ್ಟ ಪಿತ ಸರ್ವಶ್ರೇಷ್ಠರು. ಪಿತನ ಕೈಯಿಂದ ಅವನ್ನು ಯಾರೂ ಕಸಿದುಕೊಳ್ಳಲಾರರು30ನಾನೂ ಪಿತನೂ ಒಂದೇ ಆಗಿದ್ದೇವೆ,” ಎಂದರು.

ಚಿಂತನೆ                                           
ಪ್ರಾಣಿಗಳಲ್ಲಿ ಸೌಮ್ಯವಿರುವ ಪ್ರಾಣಿಗಳ ಗುಂಪಿನಲ್ಲಿ ಕುರಿಯನ್ನು ಸಹ ಸೇರಿಸಬಹುದು. ಮುಗ್ಧತೆ, ಸೌಮ್ಯತೆ, ನಿಷ್ಠೆ ಮತ್ತು ಸೇವೆಗೆ ಕುರಿಯನ್ನು ಹೋಲಿಸುತ್ತಾರೆ. ಕುರಿಯು ನೋಡಲು ತುಂಬಾ ಸುಂದರವಾಗಿರುತ್ತದೆ. ಬಹುಶಃ ಇದಕ್ಕೆ ಇರಬೇಕು ಯೇಸುಸ್ವಾಮಿ ಕುರಿಯ ಸಂಕೇತವನ್ನು ತಮ್ಮ ಪ್ರವಚನಗಳಲ್ಲಿ ಬಳಸುತ್ತಾರೆ. ಇದಕ್ಕೆ ಐತಿಹಾಸಿಕ ಕಾರಣವೂ ಇದೆ. ಯೇಸು ಸ್ವಾಮಿಯ ಕಾಲದಲ್ಲಿ ಪ್ಯಾಲೆಸ್ತೀನ್ ಪ್ರದೇಶದಲ್ಲಿ ಅನೇಕರು ಕುರಿ ಕಾಯುವ ವೃತ್ತಿಯನ್ನು ಮಾಡುತ್ತಿದ್ದರು . ಅದಕ್ಕೆ ಯೇಸು ಸ್ವಾಮಿ ಈ ಸಂಕೇತದ ಮೂಲಕ ತನ್ನ ಸಂದೇಶವನ್ನು ಕೇಳುವವರ ಮನಕ್ಕೆ ಮುಟ್ಟಿಸಲು ಮುಂದಾಗುತ್ತಾರೆ. ಕುರಿಗಾಹಿಯ ಸ್ವರ ಕೇಳಿ ಕುರಿಗಳು ಸುಮ್ಮನೆ ಅವನ ಹಿಂದೆ ಹೋಗುವುದನ್ನು ನಾವು ಕಾಣುತ್ತೇವೆ. ಕುರಿಗೆ ತನ್ನ ಕುರಿಗಾಹಿಯ ಸ್ವರ ಚೆನ್ನಾಗಿ ತಿಳಿದಿದೆ ಅದೇ ಇದರ ವಿಶೇಷತೆ. ಆದರೆ ಇಲ್ಲಿ ಕುರಿಗಾಹಿಗೂ ಎಲ್ಲಾ ಕುರಿಗಳ ಪರಿಚಯವಿದೆ ಆತನ ಸ್ವರದ ಜೊತೆ ಕುರಿಗಳ ಸ್ವರವು ಆತನಿಗೆ ಗೊತ್ತು. ಅದಕ್ಕೆ ಆತ ಹೇಳಿದ್ದು " ನಾನು ಅವನ್ನು ಬಲ್ಲೆನು" ಎಂದು. ಇಂತಹ ಕುರಿಗಾಹಿ ನಮ್ಮವರಾಗಿರಬೇಕಾದರೆ ನಾವು ಒಳ್ಳೆಯ  ಕುರಿಗಳಾಗಬೇಕು; ಅವರ ಸ್ವರ ಕೇಳಿ ಅವರ ಹಿಂದೆ ಹೋಗಬೇಕು. ಇಂದಿನ ಪ್ರಸ್ತುತ ಸನ್ನಿವೇಶದಲ್ಲಿ ಅವರ ಸ್ವರ ನಮಗೆ ಕೇಳುವುದೇ ಕಷ್ಟ. ನಮ್ಮ ಸ್ವರ ಅವರಿಗೆ ಅವರ ಸ್ವರ ನಮಗೆ ಕೇಳಲಿ ಎಂಬ ಪ್ರಾರ್ಥನೆ ನಮ್ಮದಾಗಲಿ.        

ಆತ್ಮಾವಲೋಕನ                                  
1.       ನನ್ನನ್ನುನನ್ನ ವ್ಯಕ್ತಿತ್ವವನ್ನು ಕುರಿಗೆ ಹೋಲಿಸಬಹುದೇ?                                         
2.       ಪ್ರಸ್ತುತ ಪ್ರಾಪಂಚಿಕ ಗಳಿಗೆಯಲಿ ಜೀವಿಸುತ್ತಿರುವ ನಮಗೆ ಕುರಿಗಾಹಿಯ ಸ್ವರ ಕೇಳುತ್ತಿದೆಯೇ?                                               
3.       ಕ್ರಿಸ್ತ ಕುರಿಗಾಹಿ ನಿಜ ಆದರೆ ನಾನು ಆತನ ಕುರಿ ಮಂದೆಗೆ ಸೇರಬಹುದೇ?

-ಸಹೋವಿನಯ್ ಕುಮಾರ್, ಚಿಕ್ಕಮಗಳೂರು   

No comments:

Post a Comment