Sunday, 12 May 2019

13 ಮೇ 2೦19


ಬಿಳಿ/ಸೋಮ/ಪಾಸ್ಖ ಕಾಲದ ನಾಲ್ಕನೇ ವಾರ /ಫಾತಿಮಾ ಮಾತೆಯ ಸ್ಮರಣೆ    
1ನೇ  ವಾಚನ  -  ಪ್ರೆ.ಕಾ   11:  1-18
1 : ಅನ್ಯಧರ್ಮದವರೂ ಸಹ ದೈವವಾಕ್ಯವನ್ನು ಸ್ವೀಕರಿಸಿದರೆಂಬ ಸುದ್ಧಿ ಜುದೇಯದಲ್ಲಿದ್ದ ಪ್ರೇಷಿತರಿಗೂ ವಿಶ್ವಾಸಿಗಳಿಗೂ ಮುಟ್ಟಿತು.
2 : ಪೇತ್ರನು ಜೆರುಸಲೇಮಿಗೆ ಹೋದಾಗ ಅನ್ಯಧರ್ಮದವರಿಗೆ ಸುನ್ನತಿಯಾಗಬೇಕು ಎನ್ನುತ್ತಿದ್ದ ಪಂಗಡದವರು ಮುಂದೆ ಬಂದು,
3 : “ನೀನು ಸುನ್ನತಿಯಿಲ್ಲದ ಅನ್ಯಧರ್ಮದವರ ಮನೆಗೆ ಭೇಟಿಕೊಟ್ಟು ಅವರೊಡನೆ ಊಟಮಾಡಿದ್ದೇಕೆ?” ಎಂದು ಆಕ್ಷೇಪಿಸಿದರು.
4 ಅದಕ್ಕೆ ಪೇತ್ರನು ನಡೆದ ವೃತ್ತಾಂತವನ್ನು ಆಮೂಲಾಗ್ರವಾಗಿ ಅವರಿಗೆ ವಿವರಿಸಿದನು:
5 : “ಜೊಪ್ಪ ಪಟ್ಟಣದಲ್ಲಿ ನಾನು ಧ್ಯಾನಪರವಶನಾಗಿದ್ದಾಗ ದರ್ಶನವೊಂದನ್ನು ಕಂಡೆ. ಸ್ವರ್ಗದಿಂದ ದೊಡ್ಡ ದುಪ್ಪಟಿಯಂಥ ವಸ್ತು ಒಂದು ಕೆಳಕ್ಕೆ ಇಳಿಯಿತು. ಅದರ ನಾಲ್ಕು ಮೂಲೆಗಳನ್ನು ಹಿಡಿದು ಕೆಳಕ್ಕೆ ಇಳಿಬಿಡಲಾಗಿತ್ತು. ಅದು ಬಂದು ನನ್ನ ಪಕ್ಕದಲ್ಲೇ ನಿಂತಿತು.
6 : ಅದನ್ನು ಗಮನಿಸಿ ನೋಡಿದಾಗ ಅದರಲ್ಲಿ ಪ್ರಾಣಿಗಳೂ ಕಾಡುಮೃಗಗಳೂ ಹರಿದಾಡುವ ಕ್ರಿಮಿಕೀಟಗಳೂ ಹಾರಾಡುವ ಪಕ್ಷಿಗಳೂ ಕಂಡುಬಂದವು.
7 : ಆಗ, ‘ಪೇತ್ರ, ಏಳು, ಕೊಯ್ದು ತಿನ್ನುಎಂಬ ವಾಣಿ ನನಗೆ ಕೇಳಿಸಿತು.
8 : ಅದಕ್ಕೆ ನಾನು, ‘ಬೇಡವೇ ಬೇಡ ಸ್ವಾಮಿ, ಅಶುದ್ದ ಹಾಗು ಅಸ್ಪøಶ್ಯವಾದುದು ಯಾವುದೂ ನನ್ನ ಬಾಯನ್ನು ಎಂದೂ ಹೊಕ್ಕಿಲ್ಲ,’ ಎಂದೆ.
9 : ಮತ್ತೊಮ್ಮೆ ವಾಣಿ ಸ್ವರ್ಗಲೋಕದಿಂದ, ‘ದೇವರೇ ಶುದ್ಧೀಕರಿಸಿರುವ ಏನನ್ನೂ ನೀನು ಅಶುದ್ಧವೆನ್ನಬೇಡ,’ ಎಂದು ಉತ್ತರಿಸಿತು.
10 : ಹೀಗೆ ಮೂರು ಬಾರಿ ನಡೆದ ಮೇಲೆ, ಅವೆಲ್ಲವನ್ನೂ ಒಟ್ಟಿಗೆ ಸ್ವರ್ಗಕ್ಕೆ ಮರಳಿ ಎಳೆದುಕೊಳ್ಳಲಾಯಿತು.
11 : “ಅದೇ ಸಮಯಕ್ಕೆ ಸರಿಯಾಗಿ, ಸೆಜರೇಯದಿಂದ ಕಳುಹಿಸಲಾದ ಮೂವರು ಮಂದಿ ನನ್ನನ್ನು ಹುಡುಕಿಕೊಂಡು, ನಾನು ತಂಗಿದ್ದ ಮನೆಗೆ ಬಂದರು.
12 : ನಾನು ಸಂಕೋಚಪಡದೆ ಅವರೊಡನೆ ಹೋಗಬೇಕೆಂದು ಪವಿತ್ರಾತ್ಮ ತಿಳಿಸಿದರು. ಜೊಪ್ಪದ ಆರುಮಂದಿ ಭಕ್ತರೂ ನನ್ನೊಡನೆ ಸೆಜರೇಯಕ್ಕೆ ಬಂದರು. ನಾವೆಲ್ಲರೂ ಕೊರ್ನೇಲಿಯನ ಮನೆಯನ್ನು ಪ್ರವೇಶಿಸಿದೆವು.
13 : ಅವನು, “ನನ್ನ ಮನೆಯಲ್ಲೇ ದೂತನೊಬ್ಬನು ಕಾಣಿಸಿಕೊಂಡು, ‘ಈಗಲೇ ಯಾರನ್ನಾದರೂ ಜೊಪ್ಪಕ್ಕೆ ಕಳುಹಿಸಿ ಪೇತ್ರ ಎಂದು ಕರೆಯಲಾಗುವ ಸಿಮೋನನನ್ನು ಬರಹೇಳು.
14 : ಅವನು, ನೀನೂ ನಿನ್ನ ಕುಟುಂಬದವರೆಲ್ಲರೂ ಪಡೆಯಬಹುದಾದಂಥ ಜೀವೋದ್ಧಾರದ ಸಂದೇಶವನ್ನು ನೀಡುವನು,’ ಎಂದು ತಿಳಿಸಿದನುಎಂದು ನಮಗೆ ಹೇಳಿದನು.
15 : ನಾನು ಉಪದೇಶಮಾಡಲು ಪ್ರಾರಂಭಿಸಿದ ಕೂಡಲೇ ನಮ್ಮ ಮೇಲೆ ಇಳಿದಂತೆ ಅವರ ಮೇಲೂ ಪವಿತ್ರಾತ್ಮ ಇಳಿದು ಬಂದರು.
16 : ಕೊಟ್ಟನು. ನೀವಾದರೋ ಪವಿತ್ರಾತ್ಮ ಅವರಿಂದ ದೀಕ್ಷಾಸ್ನಾನವನ್ನು ಪಡೆಯುವಿರಿ,’ ಎಂಬ ಪ್ರಭುವಿನ ಮಾತುಗಳು ನೆನಪಿಗೆ ಬಂದವು.
17 : ನಾವು ಪ್ರಭು ಯೇಸುಕ್ರಿಸ್ತರನ್ನು ವಿಶ್ವಾಸಿಸಿದಾಗ ನಮಗೆ ಕೊಟ್ಟ ವರವನ್ನೇ ದೇವರು ಅನ್ಯಧರ್ಮದವರಿಗೂ ಕೊಟ್ಟಿರುವರು. ಹೀಗಿರುವಲ್ಲಿ ದೇವರನ್ನು ತಡೆಗಟ್ಟಲು ನಾನಾರು?” ಎಂದನು.
18 : ಮಾತುಗಳನ್ನು ಕೇಳಿದ ಮೇಲೆ ಅವರು ತಮ್ಮ ಆಕ್ಷೇಪಣೆಯನ್ನು ನಿಲ್ಲಿಸಿದರು. ಮಾತ್ರವಲ್ಲ, ‘ಅನ್ಯಧರ್ಮದವರೂ ಪಶ್ಚಾತ್ತಾಪಪಟ್ಟು ನವಜೀವ ಪಡೆಯುವ ಸದವಕಾಶವನ್ನು ದೇವರು ದಯಪಾಲಿಸಿದ್ದಾರಲ್ಲಾ!’ ಎಂದು ದೈವಸ್ತುತಿ ಮಾಡಿದರು.
           
ಕೀರ್ತನೆ - 42: 1-2, 43: 3-4
ಜೀವಂತ ದೇವನಿಗಾಗಿ ದಾಹದಿಂದಿದೆ ಎನ್ನ ಮನ / ನಾ ತೆರಳಿ ಪಡೆವುದೆಂತು  ದೇವನ ಮುಖದರ್ಶನ       
1 : ಬಾಯಾರಿದ ಜಿಂಕೆ ಹಾತೊರೆಯು ವಂತೆ ತೊರೆಯಾಗಿ / ದಣಿದೆನ್ನ ಮನ ದೇವಾ, ಹಂಬಲಿಸುತಿದೆ ನಿನಗಾಗಿ
2 : ಜೀವಂತ ದೇವನಿಗಾಗಿ ದಾಹದಿಂದಿದೆ ಎನ್ನ ಮನ / ನಾ ತೆರಳಿ ಪಡೆವುದೆಂತು ದೇವನ ಮುಖದರ್ಶನ? //
3 : ಕಳುಹಿಸು ನಿನ್ನ ಜ್ಯೋತಿಯನು, ನಿನ್ನ ಸತ್ಯವನ್ನು ನನ್ನ ನಡೆಸಲಿಕೆ / ಸೇರಿಸಲೆನ್ನನು ನಿನ್ನ ಪವಿತ್ರ ಪರ್ವತಕೆ, ನಿನ್ನಯ ನಿವಾಸಕೆ //
4 : ಬರುವೆನಾಗ ನಿನ್ನ ಬಲಿಪೀಠದ ಬಳಿಗೆ / ನನ್ನಾನಂದ ನಿಧಿಯಾದ ನಿನ್ನ ಸನ್ನಿಧಿಗೆ / ವೀಣೆ ನುಡಿಸಿ ದೇವಾ, ನಿನ್ನ ಸ್ತುತಿಸಲಿಕೆ //

ಶುಭಸಂದೇಶ - ಯೊವಾನ್ನ 1೦: 1-1೦
1 : “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಹಟ್ಟಿಗೆ ಬಾಗಿಲ ಮೂಲಕ ಬರದೆ ಗೋಡೆ ಹತ್ತಿ ಬರುವವನು ಕಳ್ಳ ಹಾಗೂ ಕೊಳ್ಳೆಗಾರ.
2 : ಬಾಗಿಲ ಮೂಲಕ ಬರುವವನು ಕುರಿಗಾಹಿ.
3 : ಕಾವಲುಗಾರನು ಅವನಿಗೆ ಬಾಗಿಲು ತೆರೆಯುತ್ತಾನೆ. ಕುರಿಗಳು ಅವನ ಸ್ವರವನ್ನು ಕೇಳುತ್ತವೆ. ಅವನು ತನ್ನ ಕುರಿಗಳನ್ನು ಹೆಸರಿಟ್ಟು ಕರೆದು ಹೊರಗೆ ಬಿಡುತ್ತಾನೆ.
4 : ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ನಂತರ ಅವನು ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಹಿಂದೆ ಹೋಗುತ್ತವೆ. ಏಕೆಂದರೆ ಅವುಗಳಿಗೆ ಅವನ ಸ್ವರ ಗೊತ್ತು.
5 : ಅಪರಿಚಿತನನ್ನು ಅವು ಹಿಂಬಾಲಿಸುವುದಿಲ್ಲ; ಅವನಿಂದ ದೂರ ಓಡಿಹೋಗುತ್ತವೆ. ಅಪರಿಚಿತರ ಸ್ವರವನ್ನು ಅವು ಗುರುತಿಸುವುದಿಲ್ಲ.”
6 : ಯೇಸುಸ್ವಾಮಿ ಹೇಳಿದ ಸಾಮತಿಯನ್ನು ಕೇಳಿದವರು ಅರ್ಥಮಾಡಿಕೊಳ್ಳಲಿಲ್ಲ.
7 : ಆದುದರಿಂದ ಯೇಸುಸ್ವಾಮಿ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಗಳಿಗೆ ನಾನೇ ಬಾಗಿಲು.
8 : ನನಗಿಂತ ಮೊದಲು ಬಂದವರೆಲ್ಲರು ಕಳ್ಳರು ಹಾಗೂ ಕೊಳ್ಳೆಗಾರರು, ಕುರಿಗಳು ಅವರಿಗೆ ಕಿವಿಗೊಡಲಿಲ್ಲ.
9 : ಹೌದು, ನಾನೇ ಬಾಗಿಲು, ನನ್ನ ಮೂಲಕ ಒಳಹೋಗುವವನು ಸುರಕ್ಷಿತನಾಗಿರುತ್ತಾನೆ. ಅವನು ಒಳಗೆ ಹೋಗುತ್ತಾನೆ, ಹೊರಗೆ ಬರುತ್ತಾನೆ; ಮೇವನ್ನು ಕಂಡುಕೊಳ್ಳುತ್ತಾನೆ.
10 : ಕಳ್ಳನು ಬರುವುದು ಕಳ್ಳತನಕ್ಕಾಗಿ, ಕೊಲ್ಲುವುದಕ್ಕಾಗಿ ಮತ್ತು ನಾಶಮಾಡುವುದಕ್ಕಾಗಿ ಮಾತ್ರ, ನಾನು ಬಂದದ್ದಾದರೋ ಜೀವನೀಡಲು, ಯಥೇಚ್ಛವಾಗಿ ನೀಡಲು.
ಚಿಂತನೆ
ಧರ್ಮದ ವ್ಯವಸ್ಥೆ ಹರಿವ  ನೀರಂತೆ ಆಗಬೇಕೆ ವಿನಹ ನಿಂತ ನೀರಾಗಬಾರದು.  ಆಗ ಧರ್ಮದ ವೃಕ್ಷ ಆಳವಾಗಿ ಬೇರೂರಿ ತನ್ನ ಕವಲುಗಳನ್ನು ಹರಡಿ ಫಲ ನೀಡುವ  ವೃಕ್ಷದಂತೆ ಫಲಕಾರಿಯಾಗುತ್ತದೆ. ಧರ್ಮವು ಮೂಢನಂಬಿಕೆ ಮತ್ತು ಮೂಲಭೂತವಾದಕ್ಕೆ ಬಲಿಯಾದರೆ ಅದು ನಿಂತ ನೀರಾಗಿ ಸ್ಥಾವರದಂತೆ ತಟಸ್ಥ ಸ್ಥಿತಿಯಲ್ಲಿರುತ್ತದೆ. ಅದು ಫಲಕಾರಿಯಾಗುವುದಿಲ್ಲ.  ಈ ಎರಡರ ಧರ್ಮಸಂಕಟದಲ್ಲಿ ನಲುಗಿ ಹೋದ ಪೇತ್ರನ ನಿದರ್ಶನವನ್ನು ನಾವು ಇಂದಿನ ವಾಚನದಲ್ಲಿ ಕಾಣುತ್ತೇವೆ. ಕ್ರೈಸ್ತ ಧರ್ಮ ಯೆಹೂದ್ಯ ಧರ್ಮದಿಂದ ಕವಲೊಡೆದ ಧರ್ಮವಾಗಿ ಕಂಡುಬರುತ್ತದೆ. ಆರಂಭದಲ್ಲಿ ಅನ್ಯ ಧರ್ಮೀಯರು ಎಂದರೆ ಯೆಹೂದ್ಯರಲ್ಲದವರು ದೇವರ ವಾಕ್ಯವನ್ನು ಸ್ವೀಕರಿಸುವುದನ್ನು ಕಂಡವರು ಗಸಿಬಿಸಿ ಕೊಳ್ಳುತ್ತಾರೆ. ಇದಕ್ಕೆ ಕಾರಣ ಅವರು ಅರ್ಥೈಸಿಕೊಂಡ ಧರ್ಮದ ಅರ್ಥವೇ ಬೇರೆ, ಕ್ರಿಸ್ತ ಹೇಳಿದ ಅರ್ಥವೇ ಬೇರೆ. ಇಂದು ಪ್ರಭು ಕ್ರಿಸ್ತರು ನಮಗೆ ಹೇಳುವ ವಾಕ್ಯ ನಾನು ಬಂದದ್ದಾದರೂ ಜೀವ ನೀಡಲು, ಯಥೇಚ್ಛವಾಗಿ ನೀಡಲು ಎಂದು. ಜೀವ ನೀಡಿದ ಜನಕನೇ ಜೀವ ನೀಡಿರುವಾಗ ಅದಕ್ಕೆ ಬದಲಾಗಿ ನಾವು ನೀಡುವ ಪ್ರತಿಕ್ರಿಯೆ: ವಿಶ್ವಾಸ- ಈ ವಿಶ್ವಾಸಕ್ಕೆ ಯೇಸು ಸ್ವಾಮಿ ನೀಡುವ ವರದಾನ ಯಥೇಚ್ಛವಾದ ಜೀವ.. ಇಂತಹ ವರದಾನ ನಮ್ಮದಾಗಲಿ.         
ಆತ್ಮಾವಲೋಕನ -                                       
1. ನನ್ನ ಪ್ರಕಾರ ಧರ್ಮ ಎಂದರೇನು?
2. ಧರ್ಮಾಂಧತೆ ನನ್ನಲಿ ಇದೆಯೇ?                 
3. ಯೇಸು ಸ್ವಾಮಿ ಜೀವ ನೀಡಲು ಬಂದಿದ್ದಾರೆ ಆದರೆ ನಾನು ಸ್ವೀಕರಿಸಲು ಸಿದ್ಧನಿದ್ದೇನೆಯೇ?    

ಫಾತಿಮಾ ಮಾತೆಯ ದರ್ಶನ
ತಾರಮುಕುಟ ಮೌಳಿಭೂಷಿತೇನಮೋ ನಮೋ
ಇಂದಿಗೆ ನೂರು ವರ್ಷ(2017); ನಭಭೂಷಿತೆ ಜಗಪೋಷಿತೆ, ಧರ್ಮಪಾಲಕಿ, ದೇವರತಾಯಿ ಮರಿಯಮ್ಮನವರು ಈ ಲೋಕದಲ್ಲಿ ನರಮಾನವರಿಗೆ ದರ್ಶನವಿತ್ತ ಆ ಮಹೋನ್ನತ ಘಳಿಗೆಗೆ ನೂರು ವರ್ಷವಾಗಿದೆ.  ಅಂದ ಹಾಗೆ ಈ ಜಗತ್ತಿನಲ್ಲಿ ತಾಯಿ ಮರಿಯಳ ಸದೃಶ್ಯ ಸ್ವರೂಪ ಕಂಡದ್ದು ಅದೇ ಮೊದಲೆನಲ್ಲ! ಮೇರಿಯನ್ ಆಪರಿಶನ್(Marian Apparitions) ಎಂದು ಗೂಗಲಿಸಿದರೆ 15ಕ್ಕೂ ಹೆಚ್ಚು ಅಧಿಕೃತವಾಗಿರುವ ಆಕೆಯ ದರ್ಶನದ ವಿವರಗಳು ಕಾಣಸಿಗುತ್ತವೆ. ಅದರಲ್ಲಿ ಫಾತಿಮಾ ಮಾತೆಯ “ಅತಿಮಾನುಷ ದರ್ಶನ” Supernatural Appearence ಪ್ರಪಂಚದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಭೂಲೋಕದಲ್ಲಿ ಮಾತೆಯನ್ನು ನಂಬಿರುವ, ಅಪಾರವಾಗಿ ಪ್ರೀತಿರುವ ದೊಡ್ಡ ಸಮೂಹವೇ ಇದ್ದು. ಆಕೆ ದರ್ಶನವಿತ್ತ ಪ್ರಾಂತ್ಯದ ಅಥವಾ ಸ್ಥಳ-ಮಹಿಮೆಯ ಅನುಗುಣವಾಗಿ, ಇನ್ನೂ ಕೆಲವೊಮ್ಮೆ ಆಕೆಯಿಂದಾದ ಅದ್ಭುತಗಳ ನೆಪಕ್ಕಾಗಿ, ತಮ್ಮ ಹರಕೆಗಳ ಪ್ರತಿರೂಪವಾಗಿ ಒಂದೊಂದು ಹೆಸರಿಂದ ಮಾತೆಯನ್ನು ಗುರುತಿಸುತ್ತೇವೆ. ಅತಿ ಹೆಚ್ಚು ಬಿರುದನ್ನು ಪಡೆದ ಮಹಾನ್ ಶಕ್ತಿ ಆಕೆ. ಫಾತಿಮಾ ಮಾತೆಯ ನಾಮಾಂಕಿತ ಕೂಡ ಅಂತಹದ್ದೇ ಒಂದು  ವೈಶಿಷ್ಟ್ಯಗಳಲ್ಲೊಂದು.
ಪೋರ್ಚುಗಲ್‍ನ  ಫಾತಿಮಾ
ಫಾತಿಮಾ’ ಪೋರ್ಚುಗಲ್ ದೇಶದಲ್ಲಿರುವ ಪುಟ್ಟ ಗ್ರಾಮ. ಪೋರ್ಚುಗಲ್ ದೇಶವೇನು ಭಾರತಕ್ಕೆ ಅಪರಿಚಿತವಲ್ಲ. ಬ್ರಿಟಿಷರಂತೆ ತಾವು ಕೂಡ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದಿದ್ದರು. ಮಿಷನರಿಗಳ ದಂಡೆ ಇಲ್ಲಿ ಸಕ್ರಿಯರಾಗಿ ಭಾರತದಲ್ಲಿ ಕ್ರೈಸ್ತರ ಬೆಳವಣಿಗೆಯಲ್ಲಿ ಅಪಾರ ಕೊಡುಗೆ ಕೊಟ್ಟವರು. ಪೋರ್ಚುಗಲ್ ಬಗ್ಗೆ ಹೆಳುವುದಾದರೆ ಇದು ಯುರೋಪ್ ಖಂಡದಲ್ಲಿರುವ ದೇಶ. ಅದೇಕೋ ಕ್ರೈಸ್ತರು ಹೆಚ್ಚಿರುವ ಯುರೋಪ್ ದೇಶದ ಎಲ್ಲೆಲ್ಲೂ ಆಗ ಸಮರಗಳ ಸದ್ದು. ದೇಶ ದೇಶಗಳ ನಡುವೆ ಅಧಿಕಾರದ ಮೋಹವೆದ್ದು, ಸರ್ವಾಧಿಕಾರದ ಮದವೇರಿತ್ತು. ಮಾನವೀಯತೆಯ ಅದಃಪತನ ಪ್ರಾರಂಭವಾಗಿತ್ತು. ಇದು ಹದ್ದು ಮೀರಿ ಪ್ರಪಂಚದ ಮಹಾಯುದ್ಧಕ್ಕೆ ನಾಂದಿಯಾಯಿತು. 1914 ರ ನಂತರ ದೊಡ್ಡ ಮಟ್ಟದಲ್ಲಿ ವ್ಯಾಪಿಸಿದ ಈ ಗಲಭೆಯಿಂದಾಗಿ ಸುಮಾರು 7 ಲಕ್ಷ ಜನ ಯುರೋಪ್ ಒಂದರಲ್ಲೇ ಹತರಾಗಿ ಹೋದರು. 70 ಲಕ್ಷಕ್ಕೂ ಅಧಿಕ ಜನರು ನಿರಾಶ್ರಿತರಾಗಿ ತೊಂದರೆಗಿಡಾಗಿದ್ದರು. ಇಂತಹ ಘನ ಘೋರ ಸಮಯದಲ್ಲಿ ಅದೆಷ್ಟು ಜನ ದೇವರ ಮೊರೆ ಹೋಗಿದ್ದರೋ ಏನೋ? ಮಾತೆ ಮರಿಯಳ ದರ್ಶನವಂತೂ ಆಯಿತು.  ಹೌದು ಆಶ್ಚರ್ಯವೆಂದರೆ ಆ ಲಕ್ಷಾಂತರ ಮಂದಿಯ ಬೇಡಿಕೆಗಳ ನಡುವೆ ಆ ದಿವ್ಯ ದರ್ಶನ ಸಿಕ್ಕಿದ್ದು ಮಾತ್ರ ಮಕ್ಕಳಿಗೆ. "ಜನರ ರಕ್ಷಣೆಗೆ ಪ್ರಾರ್ಥನೆ ಮಾಡುವುದೊಂದೇ ದಾರಿ" ಎಂದು ತಿಳಿಸಿದರು
ಮೂರು ಮಕ್ಕಳಿಗೆ ದರುಶನ ಭಾಗ್ಯ 
ಅಂದು 1917 ಮೇ 13. ಫ್ರಾನ್ಸಿಸ್ಕೋ, ಜಸಿಂತ ಮತ್ತು ಲೂಸಿಯ ಎಂಬ ಮೂರು ಮಕ್ಕಳು ಕುರಿಗಳನ್ನು ಮೇಯಿಸುತ್ತಿರುವಾಗ ಪ್ರಕಾಶಮಾನವಾದ ಬೆಳಕಿನ ಮಧ್ಯೆ ಹೆಣ್ಣ ರೂಪದಲ್ಲಿ ಕಂಡ ಆ ಆಕಾರ, ಜರಿಯ ಅಂಚುಳ್ಳ ಶ್ವೇತಾಂಬರ ತೊಟ್ಟು, ಕೈಯಲ್ಲಿ ಜಪಸರ ಹಿಡಿದು ಆ ಮಕ್ಕಳೊಂದಿಗೆ ಮಾತನಾಡಿತು. ಈ ಶೋಭಾಯಮಾನ ಘಳಿಗೆಗೂ ಮೊದಲು ಮೂರು ಬಾರಿ ದೇವದೂತರು ಕಾಣಿಸಿಕೊಂಡು ಹೇಗೆ ಪ್ರಾರ್ಥಿಸಬೇಕು ಮತ್ತು ಪ್ರೀತಿ ತ್ಯಾಗದ ಮಹತ್ವಗಳು ಏನು ಎಂದು ಕಲಿಸಿಕೊಟ್ಟಿದ್ದರು. ಇದನ್ನು ಅಭ್ಯಸಿಸಿಕೊಂಡಿದ್ದ ಆ ಮಕ್ಕಳು ತಮ್ಮ ಹೊಲದ ಬಂಡೆಗಳ ನಡುವೆ ಗುಹೆಯಂತಿದ್ದ ಸ್ಥಳದಲ್ಲಿ ದಿನಾಲೂ ಮೊಣಕಾಲೂರಿ ಪ್ರಾರ್ಥಿಸುವುದನ್ನೇ ಕಾಯಕ ಮಾಡಿಕೊಂಡಿದ್ದರು. ಆ ದಿನ ದರ್ಶನ  ನೀಡಿದ ಮಾತೆಯ ಬಗ್ಗೆ ಮನೆಗೆ ಬಂದು ತಮ್ಮ ಪೋಷಕರಿಂದ ಊರಿನ ಗುರುಗಳಿಗೆ ವಿಷಯ ತಿಳಿಸಿದರು. ಈ ದರ್ಶನದ ಉದ್ದೇಶ ತಿಳಿಯಲು ಗೊತ್ತಾಗದ ಮಕ್ಕಳಿಗೆ ಗುರುಗಳು ನೀವು ಅಲ್ಲೇ ದಿನನಿತ್ಯದ ಪ್ರಾರ್ಥನೆಯನ್ನು ಎಂದು ಮುಂದುವರಿಸಿ ಎಂದು ಸಲಹೆ ನೀಡಿದರು. ಅಂದು ಜೂನ್ 13, ಫಾತಿಮಾ ಊರಿನ ದರ್ಮಕೇಂದ್ರದ ಪಾಲಕ ಸಂತ ಅಂತೋಣಿಯವರ ಹಬ್ಬದ ದಿನ. ಅದೇ ಶೋಭಾಯಮಾನದೊಂದಿಗೆ  ಕಾಣಿಸಿಕೊಂಡ ಆ ಹೆಣ್ಣನ್ನು ತಾಯಿ ಮರಿಯಳೇ ಎಂಬ ವಿಶ್ವಾಸದಿಂದ ಅವರ ಮಾತುಗಳನ್ನು ಆಲಿಸಿದರು. ನೀವು ನಿಮ್ಮನ್ನು ತ್ರಯೇಕ ದೇವರಿಗೆ ಅರ್ಪಿಸಿಕೊಳ್ಳಿ, ದೇಶದಲ್ಲಿ ಶಾಂತಿ ನೆಲಸಲು ಮತ್ತು ನಡೆಯುತ್ತಿರುವ ಯುದ್ಧವು ಶೀಘ್ರವೇ ಅಂತ್ಯ ಕಾಣಲು ಪ್ರತಿ ದಿನ ಜಪಸರ ಮತ್ತು ಇದನ್ನು ಎಲ್ಲರಿಗೂ ತಿಳಿಸಿ ಎಂದು ಹೇಳಿ ಅದೃಶ್ಯರಾದರು. ಮತ್ತೆ ಜುಲೈ 13 ರಂದು ಕಾಣಿಸಿಕೊಂಡಾಗ ಆ ಮಕ್ಕಳಿಗೆ ಪರಮ ವೈಭವಿಪೋತ ಸ್ವರ್ಗದ ದರ್ಶನವನ್ನೇ ಮಾಡಿಸಿದರು ತಾಯಿ. ಇದೆ ಸಂದರ್ಭದಲ್ಲಿ ಫ್ರಾನ್ಸಿಸ್ಕೋ ಮತ್ತು ಜಸಿಂತರು ಶೀಘ್ರದಲ್ಲಿ ಈ ಸರ್ಗಕ್ಕೆ ಬರಲಿದ್ದಾರೆ. ಲೂಸಿಯ ಮಾತ್ರ ಈ ಘಟನೆಗೆ ಸಾಕ್ಷಿಯಾಗಿ ಸುದೀರ್ಘ ದಿನಗಳು ಭೂಲೋಕದಲ್ಲೇ ಇರುವರು ಎಂದು  ಹೇಳಿದ್ದನ್ನು ಲೂಸಿಯಾರು ಮುಂದೊಂದು ದಿನ ತಾವು ಬರೆದ ಪುಸ್ತಕದಲ್ಲಿ ದಾಖಲಿಸುತ್ತಾರೆ.
13ರ  ಸೋಜಿಗ
ಅದಾಗಲೇ 13ರ ಸೋಜಿಗ ಪಟ್ಟಣದಾದ್ಯಂತ ಹಬ್ಬಿ ಆಗಸ್ಟ್ 13 ಕ್ಕೆ ಭಾರೀ ಜನರು ಕೋವಾ-ಡಾ-ಇರಿಯ(Cova-Da-Iria) ದಲ್ಲಿ ಸೇರುತ್ತಾರೆ. ಇದು ಲೂಸಿಯರವರ ತಂದೆ ತಾಯಿಗೆ ಸೇರಿದ ಹೊಲದ ಹೆಸರು. ಅಲ್ಲೇ ಆ ಮಕ್ಕಳು ಪ್ರತಿ ದಿನ ಪಾರ್ಥಿಸುತ್ತಿದ್ದದು. ಆದರೆ ಆ ದಿನ ಮಾತೆಯ ದರ್ಶನವಾಗಲಿಲ್ಲ. ಆ ಪ್ರಾಂತ್ಯದ ಅಧಿಕಾರಿ ಆರ್ತರ್ ಸ್ಯಾಂಟೋಸ್ ಎಂಬಾತ ಇದೊಂದು ಸುಳ್ಳು ಸುದ್ದಿ. ರಾಜಕೀಯ ನಡೆಗಳಿಗೆ ಇಂತಹ ಸುದ್ಧಿಗಳು ವಿಚ್ಛಿದ್ರಕಾರಕ ಎಂದು ಆ ಮಕ್ಕಳನ್ನು ಜೈಲಿಗಟ್ಟುವ ಬೆದರಿಕೆ ಒಡ್ಡಿ, ಇನ್ನು ಮುಂದೆ ಇಂತದ್ದನ್ನು ಬಹಿರಂಗ ಪಡಿಸಬಾರದು ಎಂದು ತಾಕೀತು ಮಾಡುತ್ತಾನೆ. ನೆರೆದವರೆಲ್ಲರೂ ನಿರಾಶರಾದರೂ. ಆದರೆ ಆ ದಿನ ನಡೆಯದೆ ಹೋದ  ನಡೆಯದೆ ಹೋದ 13 ರ ಸೋಜಿಗ 19 ರಂದು ನಡೆಯುತ್ತದೆ. ಮಕ್ಕಳು ಮಾತ್ರ ಇರುವಾಗ ಮಾತೆ ಕಾಣಿಸಿಕೊಂಡು ‘ಗತ ಆತ್ಮಗಳಿಗಾಗಿ ಪ್ರಾರ್ಥಿಸುವಂತೆ ತಿಳಿಸುತ್ತಾರೆ ಮತ್ತು ಆಕ್ಟೋಬರ್ 13 ರಂದು ಪುನಃ ತಮ್ಮ ದರ್ಶನಕ್ಕಾಗಿ ಕಾಯಿರಿ ಎಂದು ಮುನ್ಸೂಚಿಸಿ ಅದೃಶ್ಯರಾಗುತ್ತಾರೆ.
ಸೂರ್ಯನ  ನರ್ತನ
ಈ ಮಾತು ಪ್ರಚಾರ ಪಡೆದು ಆಕ್ಟೋಬರ್ 13 ರಂದು, ಅಂದಾಜು 70 ಸಾವಿರಕ್ಕೂ ಅಧಿಕ ಜನಸ್ತೋಮ Cova-Da-Iria ದಲ್ಲಿ ಸೇರುತ್ತದೆ. ಅಲ್ಲಿ ಆಗ ತಾನೇ ತುಂತುರು ಮಳೆ ಸುರಿದು ನಿಂತಿತ್ತು. ತೆಳುವಾಗಿ ಮೋಡದ ಮೆದೆ ಹಾಸಿತ್ತು. ಇದ್ದಕ್ಕಿದಂತೆ ಲೂಸಿಯ ಕೂಗಿಕೊಳ್ಳುತ್ತಾರೆ. “ಅಲ್ಲಿ ನೋಡಿ ಉಜ್ವಲ ಬೆಳಕು”. ಅದು ಮರಿಯಳ ಕೈಯಲ್ಲಿ ಉದಯಿಸಿದ ಬೆಳ್ಳಿಯ ತಟ್ಟೆಯಂತೆ ಬಾಲಕಿಗೆ ಕಂಡಿದೆ. ನೆರೆದವರೆಲ್ಲ ಆ ಸೂರ್ಯನನ್ನು ದಿಟ್ಟಿಸಲು ಶುರುಮಾಡಿದರು. ತಣಿದಿದ್ದ ಆಗಸದಲ್ಲಿ ಇಲ್ಲಿಯವರೆಗೂ ಅಷ್ಟು ಉಜ್ವಲಭರಿತ ಸೂರ್ಯನನ್ನು ನೋಡಿದ್ದೆ ಇಲ್ಲ. ಎಲ್ಲಿಯೂ ಕೂಡ!. ಬದಲಾದ ಬಣ್ಣಗಳಲ್ಲಿ ವಿಕಿರಣಗಳು ಕಾಣಿಸಿಕೊಳ್ಳುತ್ತಿದ್ದವು. ಬರಿಗಣ್ಣಿನಿಂದ ದಿಟ್ಟಿಸಲಾಗದ ಸೂರ್ಯನನ್ನು ಅಷ್ಟು ಕಾಂತಿಮಯಾನಾದ ನಡುವೆಯೂ ತುಂಬಾ ಹೊತ್ತು ದಿಟ್ಟಿಸಿ ನೋಡಿದರು ಜನ. ಸೂರ್ಯ ಸಣ್ಣಗೆ ನಲಿದಾಡುತಲಿದ್ದ (ನುಲಿದಾಡುತಿದ್ದ). Yes. He danced. ಈ ಬಗ್ಗೆ ದೊಡ್ಡ ಚರ್ಚೆಗಳೂ ಆರಂಭವಾದವು. ವೈಜ್ಞಾನಿಕವಾಗಿ, ಈ ವಿಷಯ ಆಧ್ಯಾತ್ಮಿಕವಾಗಿ ಚರ್ಚೆಗೆ ಅನುವು ಮಾಡಿಕೊಟ್ಟಿತು. ಅದೇನೇ ಇರಲಿ ಫಾತಿಮಾ ನಗರ ಮತ್ತು ಸುತ್ತಮುತ್ತ ಪ್ರದೇಶದಲ್ಲಿ ಮಾತ್ರವೇ ಸಂಭವಿಸಿದ್ದ ಈ ವಿದ್ಯಮಾನ "Miracle of Sun” ಎಂದೇ ಹೆಸರಾಯಿತು. ಅಪಾರ ಜನ ಸೇರಿದ್ದರಿಂದ ಈ 13 ರ ಮಹಿಮೆ ಬಹು ಬೇಗ ಪ್ರಚಾರ ಪಡೆದು ಹೆಚ್ಚು ಹೆಚ್ಚು ಯಾತ್ರಿಕರು ಬರಲು ಪ್ರಾರಂಭಿಸಿದರು.
ನಂಬುಗೆಗೆ ಯೋಗ್ಯ’ ಎಂಬ ಘೋಷ ವಾಕ್ಯ
ದಿನ ಕಳೆದಂತೆ ಆ ಸ್ಥಳದಲ್ಲಿ ಸ್ಥಳೀಯರು ಮರಿಯಳ ಸ್ವರೂಪವನ್ನು ಸ್ಥಾಪಿಸಿ Capelinha ಸಣ್ಣ ದೇವಾಲಯವನ್ನು ಕಟ್ಟಿದರು. 1924 ರಲ್ಲಿ ಮೊಟ್ಟಮೊದಲ ಬಲಿಪೂಜೆಯನ್ನು ಅರ್ಪಿಸಲಾಯಿತು. ಪೇಪಲ್ ಸಮಿತಿಯೊಂದು 1930 ರಲ್ಲಿ  ಫಾತಿಮಾಗೆ ಭೇಟಿ ನೀಡಿ, ಇದೊಂದು ‘ನಂಬುಗೆಗೆ ಯೋಗ್ಯವಾಗಿದೆ’ (worthy of belief) ಎಂದು ಘೋಷಿಸಿ ಪುಣ್ಯಕ್ಷೇತ್ರವನ್ನಾಗಿ ಪರಿವರ್ತಿಸಲು ಶಿಫಾರಸು ಮಾಡುತ್ತದೆ. ಪೋಪ್ ಪಾಯಸ್ XI ಅದನ್ನು ಅಧಿಕೃತವಾಗಿ ಅನುಮೋದಿಸಿದರು. ಅದಾಗಲೇ ಅಲ್ಲಿ ದಾರ್ಮಿಕ ಆಚರಣೆಗೆ ಪೂರಕವಾಗಿ ಅನಾರೋಗ್ಯ ಪೀಡಿತರಿಗಾಗಿ ಸೇವಾಶ್ರಮಗಳು, ಯಾತ್ರಿಗಳಿಗಾಗಿ ತಂಗುದಾಣಗಳು, ಬೆಟ್ಟದ ತಪ್ಪಲಲಿ ಶಿಲುಬೆಹಾದಿಯ ಸ್ಥಳಗಳನ್ನು ನಿರ್ಮಿಸಲಾಗುತ್ತದೆ. ಈಗ ಭವ್ಯವಾದ ಬೆಸಿಲಿಕಾ,  Sanctuary of Our Lady of Fátima, ಪ್ರವಾಸಿಗರನ್ನು ಯಾಥ್ರಿಗಳನ್ನು ಕೈ ಬಿಸಿ ಕರೆಯುತಿದೆ. 1940 ಮೇ 13 ರಂದು ಪೋಪ್ ಪಾಯಸ್ XI, ಫಾತಿಮಾ ಮೇರಿಯಾ ಪುತ್ಥಳಿಗೆ ಕಿರೀಟಧಾರಣೆಯೊಂದಿಗೆ ಪಟ್ಟಾಭಿಷೇಕ (Canonical Coronation) ಮಾಡಿ ಲೋಕಾರ್ಪಣೆ ಮಾಡಿದರು. 21 ನೇ ಶತಮಾನದ ಪ್ರಸಿದ್ಧ ಯಾತ್ರಾಕ್ಷೇತ್ರಗಳಲ್ಲಿ  ಫ್ರಾನ್ಸಿನ ಲೂರ್ಧುನಗರದ ಲೂರ್ಧುಮಾತೆ ಪುಣ್ಯಕ್ಷೇತ್ರದ ನಂತರದಲ್ಲಿ ಫಾತಿಮಾ ಮಾತೆ ಪುಣ್ಯಕ್ಷೇತ್ರದ್ದು ದೊಡ್ಡ ಹೆಸರು.
ಗುಂಡುಗಳಿಂದ  ಅಲಂಕರಿಸಲ್ಪಟ್ಟ  ಕಿರೀಟ
ಪೋಪ್ ಪಯಸ್ XI, ಪೋಪ್ ಪಾಲ್ VI ಮತ್ತು ಪೋಪ್ ಜಾನ್ ಪಾಲ್ II  ಮೂವರು ಕೂಡ ಈ ಪುಣ್ಯಕ್ಷೇತ್ರಕ್ಕೆ ಭೇಟಿಕೊಟ್ಟು ಕನ್ಯಾಮರಿಯಳ ದರ್ಶನದ ಸದುದ್ದೇಶವನ್ನು ಹೆಚ್ಚು ವಿವರಣೆಗಳೊಂದಿಗೆ ವ್ಯಾಖ್ಯಾನಿಸಿದ್ದಾರೆ. ಪೋಪ್ ಪಾಯಸ್ XI ರವರ ಭೇಟಿಯಲ್ಲಿ ಸಿಸ್ಟರ್ ಲೂಸಿಯರವರು ಬರೆದಿಟ್ಟಿದ್ದ (Sr. Lúcia's memoirs)ಮಾತೆಯ ದರ್ಶನದ ಅನೇಕ ವಿವರಗಳನ್ನು ಆವರ ಆಶಯದಂತೆ ಪೊರ್ಚುಗಲ್ ಜನತೆ ಮುಂದೆ ತೆರೆದಿಟ್ಟರು ಮತ್ತ. ಜನತೆಯು Immaculate Heart of the Virgin ಮಾತೆಗೆ ತಮ್ಮನ್ನೇ ಅರ್ಪಿಸಿಕೊಳ್ಳಬೇಕೆಂದು ಕರೆಕೊಟ್ಟರು. 1981 ರಲ್ಲಿ ಪೋಪ್ ಜಾನ್ ಪಾಲ್ ರ ಮೇಲೆ ಗುಂಡಿನ ದಾಳಿ ನಡೆದಾಗ ಅದೃಷ್ಟವಷಾತ್ ಬದುಕುಳಿದರು. ಅದು  ಮೇ 13 ಫಾತಿಮಾ ಮಾತೆಯ ಹಬ್ಬದ ದಿನವಾಗಿತ್ತು. ಹಾಗಾಗಿ ತಾಯಿ ಫಾತಿಮಾ ಮಾತೆಯೆ ರಕ್ಷಿಸಿದ್ದಾರೆ ಎಂಬ ವಿಶ್ವಾಸವನ್ನು ಪ್ರಕಟಿಸುತ್ತಾರೆ. ಅದನ್ನು ದೃಡೀಕರಿಸಲು ತಮಗೆ ತಗುಲಿದ್ದ ಆ ಗುಂಡುಗಳನ್ನು Canonical Coronation ಮಾಡಿದ ಫಾತಿಮಾ ಮಾತೆಯ ಕಿರೀಟಕ್ಕೆ ಪೋಣಿಸಿ ಇಡಲಾಗಿದೆ. ಪೋಪ್ ಬೇನೆಡಿಕ್ಟರು ಸಹ ಆಕೆಯ ದರ್ಶನವನ್ನು ಬಲವಾಗಿ ಸಮರ್ಥಿಸಿ ಒಂದು ಗೋಲ್ಡನ್ ರೋಸ್ ಅನ್ನು ತಮ್ಮ ಭೇಟಿಯ ಪ್ರಯುಕ್ತ ನೀಡಿದ್ದಾರೆ.
ಶತಮಾನೋತ್ಸವ
೧೯೧೭ರಲ್ಲಿ ನಡೆದ ಮಾತೆಯ ದರ್ಶನಕ್ಕೆ ಈಗ  ೧೦೦ ರ ಸಂಭ್ರಮ. ಈಗ ಪೋಪ್ ಪ್ರಾನ್ಸಿಸರವರು ಮೇ 2017ರಂದು ಫಾತಿಮಾ ನಗರಕ್ಕೆ ಭೇಟಿ  ನೀಡಲಿದ್ದಾರೆ. ಆ ಸಂಧರ್ಭದಲ್ಲಿ ಮಾರಿಯಂ ಅಪರಿಷನ್ ಗೆ ಸಾಕ್ಷಿಗಳಾಗಿದ್ದ, ಚಿಕ್ಕವಯಸಿನಲ್ಲೇ ಸರ್ಗಸ್ಥರಾದ ಪ್ರಾನ್ಸಿಸ್ಕೋ, ಜಸಿಂತರನ್ನು ಮತ್ತು ಲೂಸಿಯರನ್ನು  ಸಂತರ ಪದವಿಗೇರಿಸಲಿರುವರು. ಮಾತೆಮೇರಿಯ ಆಶಯವನ್ನು ದಾಟಿಸುವಲ್ಲಿ ಮತ್ತು ನೆರವೇರಿಸುವಲ್ಲಿ ಕಾರ್ಯನಿರುತರಾದ ಲೂಸಿಯರವರು ಮುಂದೆ Sisters of St. Dorothy  ಸಭೆ ಸೇರಿ ಕನ್ಯಾಸ್ತ್ರಿಯಾಗುತ್ತಾರೆ. ತಾವು ಅನುಭವಿಸಿದ ಮಾತೆಯ ದರ್ಶನಗಳ ವಿವರಣೆಗಳನ್ನು 6 ಪುಸ್ತಕಗಳಾಗಿ ಬರೆದು ಲೋಕಾರ್ಪಣೆ ಮಾಡಿದ್ದಾರೆ. ಅನೇಕ ವಿಚಾರಗಳನ್ನು ಪೋಪೆರೊಂದಿಗೆ ಚರ್ಚಿಸುತ್ತಾ ಅದು ನೆರವೇರುವಂತೆ ನೋಡಿಕೊಳ್ಳುತ್ತಾರೆ. ಅವು ರಹಸ್ಯಗಳೆಂದೇ ಗುರುತಿಸಲ್ಪಟ್ಟವು. ಮೂವರು ಮಕ್ಕಳಲ್ಲಿ ಬದುಕುಳಿದಿದ್ದ ಲೂಸಿಯರವರು ತಮ್ಮ 97 ನೇ ವಯಸ್ಸಿನಲ್ಲಿ 2005 ರ ಫೆಬ್ರುವರೀ 13 ಸ್ವರ್ಗಸ್ಥರಾದರು. ಇದು ಸಹ 13ರ ರ ಸೋಜಿಗವೆ ಸರಿ. ಪ್ರತಿ ವರ್ಷ ಮೇ ತಿಂಗಳಿಂದ ಅಕ್ಟೋಬರ್ ತಿಂಗಳ ಪ್ರತಿ 13 ನೇ ತಾರೀಖಿನ ದಿನವನ್ನು ವಿಶೇಷ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ಶತಮಾನೋತ್ಸವ ಅಚರಿಕೊಳ್ಳುತ್ತಿರುವ ವರ್ಷ.  ಪುಣ್ಯಕ್ಷೇತ್ರದ ಅದ್ಭುತವುಳ್ಳ ಪ್ರತಿಮೆಯನ್ನು ಪ್ರಾರ್ಥನೆಗಳಿಗೆ, ನವೇನಗಳಿಗಾಗಿ ಜಗತಿನಾದ್ಯಂತ ಕೊಂಡೊಯ್ಯೊಯಲಾಗುತಿದೆ. ಅದುವೇ ಮಾತೆಯ ಆಶಯ ಕೂಡ. ಅದರಲಿ ನಮ್ಮ ಪಾತ್ರವೂ ಇರಲಿ. ಈ ಮೂಲಕ ನಾವು ಸಹ ಮಾತೆಯ ದರ್ಶನ ಪಡೆದ ಪುಣ್ಯವಂತರಾಗೋಣ.

¨ ಸಂತೋಷ್ ಇಗ್ನೇಷಿಯಸ್ ಎಸ್
            

No comments:

Post a Comment