ಬಿಳಿ/ಗುರು/ಪಾಸ್ಖ ಕಾಲದನಾಲ್ಕನೇ ವಾರ
1ನೇ ವಾಚನ - ಪ್ರೇ.ಕಾ: 13: 13-25
13 : ಪಿಸಿದಿಯದ
ಅಂತಿಯೋಕ್ಯದಲ್ಲಿ ಪೌಲನ ಪ್ರಬೋಧನೆ ಪೌಲ ಮತ್ತು ಸಂಗಡಿಗರು ಪಾಫೊಸಿನಿಂದ ನೌಕಾಯಾನ ಮಾಡಿ ಪಾಂಫೀಲಿಯದ ಪೆರ್ಗ ಎಂಬಲ್ಲಿಗೆ ಬಂದರು. ಮಾರ್ಕನೆನಿಸಿಕೊಂಡ ಯೊವಾನ್ನನು ಅವರನ್ನು ಅಲ್ಲೇ ಬಿಟ್ಟು ಜೆರುಸಲೇಮಿಗೆ ಹಿಂದಿರುಗಿದನು.
14 : ಉಳಿದವರು
ಪೆರ್ಗದಿಂದ ಹೊರಟು ಪಿಸಿದಿಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಬಂದರು. ಸಬ್ಬತ್ದಿನದಲ್ಲಿ ಪ್ರಾರ್ಥನಾಮಂದಿರಕ್ಕೆ ಹೋಗಿ ಕುಳಿತುಕೊಂಡರು.
15 : ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರಂಥಗಳಿಂದ ವಾಚನವಾದ ನಂತರ ಪ್ರಾರ್ಥನಾ ಮಂದಿರದ ಅಧಿಕಾರಿಗಳು ಅವರಿಗೆ, “ಸಹೋದರರೇ, ಜನರಿಗೆ ಉಪಯುಕ್ತವಾದ ಹಿತೋಕ್ತಿ ಏನಾದರೂ ಇದ್ದರೆ ಉಪದೇಶಮಾಡಿ,” ಎಂದು ಕೇಳಿಕೊಂಡರು.
16 : ಆಗ ಪೌಲನು ಎದ್ದುನಿಂತು ಜನರಿಗೆ ನಿಶ್ಯಬ್ದವಾಗಿರುವಂತೆ ಕೈಸನ್ನೆ ಮಾಡಿ, ಹೀಗೆಂದು ಉಪದೇಶ ಮಾಡಲಾರಂಭಿಸಿದನು:
17 : “ಇಸ್ರಯೇಲ್
ಬಾಂಧವರೇ, ಹಾಗು ನಿಜ ದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ, ಕೇಳಿ:ಇಸ್ರಯೇಲ್ ಜನರ ದೇವರು ನಮ್ಮ ಪೂರ್ವಜರನ್ನು ಆರಿಸಿಕೊಂಡರು. ಈಜಿಪ್ಟಿನಲ್ಲಿ ಪರಕೀಯರಾಗಿ ವಾಸಿಸುತ್ತಿದ್ದ ನಮ್ಮ ಜನರನ್ನು ಪ್ರಬಲ ಜನಾಂಗವನ್ನಾಗಿ ಮಾಡಿದರು. ತಮ್ಮ ಮಹಾಶಕ್ತಿಯನ್ನು ಪ್ರಯೋಗಿಸಿ ಅವರನ್ನು ಈಜಿಪ್ಟಿನಿಂದ ಹೊರಗೆ ತಂದರು.
18 : ಬೆಂಗಾಡಿನಲ್ಲಿ ಸುಮಾರು ನಾಲ್ವತ್ತು ವರ್ಷಗಳ ಕಾಲ ಅವರನ್ನು ಕಾಪಾಡಿದರು.
19 : ಕಾನಾನ್ ನಾಡಿನ ಏಳು ಜನಾಂಗಗಳನ್ನು ನಾಶಮಾಡಿ ನಮ್ಮ ಜನರಿಗೆ ಆ ನಾಡನ್ನು ಸ್ವಾಸ್ತ್ಯವಾಗಿ ಕೊಟ್ಟರು.
20 : ಹೀಗೆ ಸುಮಾರು ನಾನೂರ ಐವತ್ತು ವರ್ಷಗಳು ಕಳೆದವು. ಅನಂತರ ಪ್ರವಾದಿ ಸಮುವೇಲನ ಕಾಲದವರೆಗೆ ದೇವರು ಅವರಿಗೆ ನ್ಯಾಯಾಧಿಪತಿಗಳನ್ನು ಕಳುಹಿಸಿದರು.
21 : ತಮಗೆ ಅರಸನು ಬೇಕೆಂದು ಕೇಳಿಕೊಂಡಾಗ ದೇವರು ಬೆನ್ಯವಿೂನ ಗೋತ್ರದ ಕೀಷನ ಮಗ ಸೌಲನನ್ನು ನೇಮಿಸಿದರು. ಇವನು ನಾಲ್ವತ್ತು ವರ್ಷ ಆಳಿದನು.
22 : ಅನಂತರ ದೇವರು ಸೌಲನನ್ನು ತ್ಯಜಿಸಿ ದಾವೀದನನ್ನು ಅರಸನನ್ನಾಗಿ ನೇಮಿಸಿದರು. ಇವನ ಬಗ್ಗೆ ದೇವರು, “ಜೆಸ್ಸೆಯನ ಮಗ ದಾವೀದನು ನನಗೆ ಮೆಚ್ಚುಗೆಯಾದ ವ್ಯಕ್ತಿ; ಇವನು ನನ್ನ ಆಶೆ ಆಕಾಂಕ್ಷೆಗಳನ್ನೆಲ್ಲಾ ಪೂರೈಸುವನು,” ಎಂದು ತಮ್ಮ ಒಪ್ಪಿಗೆಯನ್ನು ಸೂಚಿಸಿದರು.
23 : ಈ ದಾವೀದನ ಸಂತತಿಯಿಂದಲೇ ದೇವರು ತಮ್ಮ ವಾಗ್ದಾನದ ಪ್ರಕಾರ ಇಸ್ರಯೇಲ್ ಜನರಿಗೆ ಒಬ್ಬ ಉದ್ಧಾರಕನನ್ನು ಕಳುಹಿಸಿದರು. ಇವರೇ ಯೇಸುಸ್ವಾಮಿ.
24 : ಇವರ ಆಗಮನಕ್ಕೆ ಸಿದ್ಧತೆಯಾಗಿ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿ ಸ್ನಾನದೀಕ್ಷೆಯನ್ನು ಪಡೆಯಬೇಕೆಂದು ಯೊವಾನ್ನನು ಇಸ್ರಯೇಲಿನ ಎಲ್ಲ ಜನರಿಗೆ ಸಾರಿದನು.
25 : ಯೊವಾನ್ನನು
ತನ್ನ ನಿಯೋಗವನ್ನು ಪೂರೈಸುತ್ತಿದ್ದಂತೆ ಜನರಿಗೆ, ‘ನಾನು ಯಾರೆಂದು ನೀವು ನೆನೆಸುತ್ತೀರಿ? ನೀವು ಎದುರು ನೋಡುತ್ತಿರುವ ವ್ಯಕ್ತಿ ನಾನಲ್ಲ. ನನ್ನ ಅನಂತರ ಒಬ್ಬರು ಬರುವರು; ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,’ ಎಂದನು.
ಕೀರ್ತನೆ - 89: 1-2, 2೦-21, 24, 26
ಪ್ರಭು, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು
1 : ಪ್ರಭು, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು / ಸಾರುವೆನು ತಲತಲಾಂತರಕು ನಿನ್ನ ಸತ್ಯತೆಯನು //
2 : ನಿನ್ನಚಲ
ಪ್ರೀತಿ ಪ್ರಭು, ನನಗೆ ಶಾಶ್ವತ ಸಿದ್ಧ / ನಿನ್ನ ಸತ್ಯತೆ ಆಗಸದಂತೆ ಸ್ಥಿರ ಸ್ಥಾಪಿತ //
21 : ನನ್ನ ಕೈಯ ಆಸರೆ ಅವನಿಗಿದೆ ಸತತ / ನನ್ನ ಭುಜಬಲವು ಅವನಿಗೆ ಶಕ್ತಿಯುತ //
24 : ನನ್ನ ಪ್ರೀತಿಸತ್ಯತೆಗಳು ಇರುವುವು ಅವನೊಂದಿಗೆ / ನನ್ನ ನಾಮ ಪ್ರಯುಕ್ತ ಕೋಡು ಮೂಡುವುದವನಿಗೆ //
26 : ‘ನನಗೆ ಪಿತ, ದೈವ, ದುರ್ಗ, ಉದ್ಧಾರಕ, ನೀನು’| ಇಂತೆಂದೇ ನನ್ನನು ಸಂಬೋಧಿಸುವನವನು ||
ಶುಭಸಂದೇಶ - ಯೊವಾನ್ನ 13: 16-2೦
16 : ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಧಣಿಗಿಂತ ದಾಸನು ದೊಡ್ಡವನಲ್ಲ. ಅಂತೆಯೇ ಕಳುಹಿಸಲಾದವನು ಕಳುಹಿಸುವವನಿಗಿಂತ ಶ್ರೇಷ್ಠನಲ್ಲ.
17 : ಇದನ್ನೆಲ್ಲಾ
ಅರ್ಥಮಾಡಿಕೊಂಡು ಅದರಂತೆ ನಡೆದರೆ, ನೀವು ಧನ್ಯರು! ಉಂಡವರ ಮನೆಗೆ ಎರಡು ಬಗೆ
18 : “ನಾನು ನಿಮ್ಮೆಲ್ಲರನ್ನೂ ಕುರಿತು ಹೀಗೆ ಹೇಳುತ್ತಾ ಇಲ್ಲ. ಯಾರನ್ನು ನಾನು ಆರಿಸಿಕೊಂಡಿದ್ದೇನೆಂಬುದು
ನನಗೆ ಗೊತ್ತು. ಆದರೆ ‘ನನ್ನೊಡನೆ ಉಂಡವನೇ ನನಗೆ ದ್ರೋಹ ಬಗೆದನು’ ಎಂಬುದಾಗಿ ಪವಿತ್ರಗ್ರಂಥದಲ್ಲಿ ಬರೆದಿದೆ. ಆ ಮಾತು ಈಡೇರಬೇಕಾಗಿದೆ.
19 : ಅದು ಈಡೇರುವಾಗ ‘ಇರುವಾತನು ನಾನೇ’ ಎಂದು ನೀವು ವಿಶ್ವಾಸಿಸುವಂತೆ ಅದು ಈಡೇರುವುದಕ್ಕೆ ಮುಂಚೆಯೇ ನಿಮಗೆ ಹೇಳುತ್ತಿದ್ದೇನೆ.
20 : ನಾನು ಕಳುಹಿಸಿದಾತನನ್ನು ಬರಮಾಡಿಕೊಳ್ಳುವವನು ನನ್ನನ್ನೇ ಬರಮಾಡಿಕೊಳ್ಳುತ್ತಾನೆ.
ನನ್ನನ್ನು ಬರಮಾಡಿಕೊಳ್ಳುವವನು ನನ್ನನ್ನು ಕಳುಹಿಸಿದಾತನನ್ನೇ ಬರಮಾಡಿಕೊಳ್ಳುತ್ತಾನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.
ಚಿಂತನೆ
ಪಾದ ತೊಳೆಯುವ ಸಂಸ್ಕೃತಿ ನಮಗೆ ಹೊಸದೇನಲ್ಲ.
ಭಾರತೀಯರಾದ ನಾವು ಇದನ್ನು ಕಣ್ಣಾರೆ ಕಂಡಿದ್ದೇವೆ. ನಮ್ಮ ಹಿಂದು ಮಿತ್ರರು ತಮ್ಮ ಧಾರ್ಮಿಕ ಗುರುಗಳನ್ನು ಮತ್ತು ಮಠಾಧೀಶರನ್ನು ಮನೆಗೆ ಸ್ವಾಗತಿಸುವ ಮೊದಲು
ಅಥವಾ ಪೂಜೆ ಮಾಡುವಾಗ ಪಾದ ತೊಳೆಯುವುದು ಒಂದು ಆಚರಣೆ. ಇಂದಿಗೂ ನಮ್ಮ ಬುಡಕಟ್ಟು ಜನಾಂಗದವರು
ಕಾಲು ತೊಳೆಯದೆ ಬಂದ ಅತಿಥಿಗಳನ್ನು ಸ್ವಾಗತಿಸುವುದಿಲ್ಲ. ಪಾದ ತೊಳೆಯುವ ಆಚರಣೆ ಹೊಸತಲ್ಲ ಆದರೆ
ಅದನ್ನು ಯಾರು ತೊಳೆಯುವರು ಎಂಬುದು ಇಲ್ಲಿ ವಿಶೇಷತೆ. ಕಾರಣ ನಮ್ಮಲ್ಲಿ
ದೊಡ್ಡವರ ಕಾಲುಗಳನ್ನು ಚಿಕ್ಕವರು ತೊಳೆಯುತ್ತಾರೆ. ಧಾರ್ಮಿಕ ವ್ಯಕ್ತಿಗಳ ಪಾದವನ್ನು ನರ
ತೊಳೆಯುತ್ತಾರೆ. ಶಿಷ್ಯ ಗುರುವಿನ ಪಾದವನ್ನು ತೊಳೆಯುತ್ತಾನೆ. ಆದರೆ ಇಲ್ಲಿ ಗುರುವೇ ಶಿಷ್ಯನ
ಪಾದಗಳನ್ನು ತೊಳೆಯುವ ಪ್ರಸಂಗ. ಇದು ವಿಚಿತ್ರ ಹಾಗೂ ವಿಭಿನ್ನ. ದಯೆ ಮತ್ತು ದೀನತೆಯ
ಪಾಠವನ್ನು ಶಿಷ್ಯರಿಗೆ ಕಲಿಸಲು ಯೇಸು ಸ್ವಾಮಿ ಅವರ ಪಾದಗಳನ್ನು ತೊಳೆಯುತ್ತಾರೆ. ಬರೀ ಬೋಧಿಸಿ
ಸುಮ್ಮನಾಗದ ಕ್ರಿಸ್ತ ಬೋಧಿಸಿದ ಜೀವನದ ಪರಿಯನ್ನು ಕಾರ್ಯರೂಪಕ್ಕೆ ತಂದು ತಿಳಿಸುತ್ತಾರೆ. ಇಂತಹ
ಕಲಿಕೆ ಎಂಥವರಿಗೂ ಮನ ಮುಟ್ಟುತ್ತದೆ, ಅದರ ಜೊತೆಗೆ ತನ್ನೊಡನೆ ಉಂಡವರೆ ದ್ರೋಹ ಬಗೆಯುತ್ತಾರೆ
ಎಂದು ತಿಳಿದಿದ್ದರೂ ಆತನೊಡನೆ ಹಂಚಿ ತಿಂದ ಘಟನೆ ಹೃದಯ ಕಲಕುವಂತಹದ್ದು. ನಮಗೆ ಯಾರಾದರೂ
ಏನಾದರೂ ಹೇಳಿದರೆ ಅವರ ಮುಖ ನೋಡಲು ನಮ್ಮಿಂದ ಆಗದು. ಆದರೆ ಇಲ್ಲಿ ದ್ರೋಹ ಬಗೆಯುವ ಮನೆಗೆ ಉಪಚಾರ.
ಇಂತಹ ಮನಸ್ಸು ಮತ್ತು ಆತ್ಮ ಸ್ಥೈರ್ಯ ನಮ್ಮದಾಗಲಿ.
ಆತ್ಮಾವಲೋಕನ-
1. ನಾನು ಇನ್ನೊಬ್ಬರ ಪಾದಗಳನ್ನು ತೊಳೆಯಲು
ಸಿದ್ಧನಿದ್ದೇನೆಯೇ?
2. ಇಂತಹ ಮನಸ್ಸು
ನನ್ನಲ್ಲಿ ಇದೆಯೇ?
ಸಹೋ ವಿನಯ್ ಕುಮಾರ್, ಚಿಕ್ಕಮಗಳೂರು ಧರ್ಮಾಕ್ಷೇತ್ರ
No comments:
Post a Comment