Sunday, 12 May 2019

18 ಮೇ 2019


ಬಿಳಿ/ಶನಿ/ಪಾಸ್ಖ ಕಾಲದ ನಾಲ್ಕನೇ ವಾರ
ಐಚ್ಛಿಕ ಸ್ಮರಣೆ -  ಸಂತ ಜಾನ್, ಜಗ ಮತ್ತು .ಸಾ              
1ನೇ  ವಾಚನ  ಪ್ರೇ.ಕಾ:  13:  44-52        
44 : ಮುಂದಿನ ಸಬ್ಬತ್ದಿನ ದೇವರ ವಾಕ್ಯವನ್ನು ಕೇಳಲು ನಗರಕ್ಕೆ ನಗರವೇ ಆಗಮಿಸಿತು.
45 : ಜನರು ತಂಡೋಪತಂಡವಾಗಿ ಬರುತ್ತಿರುವುದನ್ನು ಕಂಡು ಯೆಹೂದ್ಯರು ಮತ್ಸರಭರಿತರಾದರು. ಅವರು ಪೌಲನ ಮಾತುಮಾತಿಗೂ ವಿರೋಧವಾಗಿ ವಾದಿಸಿ ದೂಷಣೆಮಾಡತೊಡಗಿದರು.
46 : ಪೌಲ ಮತ್ತು ಬಾರ್ನಬ ಮತ್ತಷ್ಟು ಧೈರ್ಯದಿಂದ ಮಾತನಾಡಿದರು: “ದೇವರ ವಾಕ್ಯವನ್ನು ಮೊಟ್ಟಮೊದಲು ನಿಮಗೆ ಬೋಧಿಸುವುದು ಅಗತ್ಯವಾಗಿತ್ತು. ಆದರೆ ನೀವು ಅದನ್ನು ನಿರಾಕರಿಸಿ ಅಮರಜೀವಕ್ಕೆ ಅಪಾತ್ರರೆಂದು ನಿಮ್ಮನ್ನು ನೀವೇ ತೀರ್ಮಾನಿಸಿಕೊಂಡಿರಿ. ಆದುದರಿಂದ ನಾವು ನಿಮ್ಮನ್ನು ಬಿಟ್ಟು ಅನ್ಯಧರ್ಮದವರ ಕಡೆ ಹೋಗುತ್ತೇವೆ.
47 : ಏಕೆಂದರೆ ಪ್ರಭು ನಮಗಿತ್ತ ಆಜ್ಞೆ ಹೀಗಿದೆ: ‘ಅನ್ಯಧರ್ಮೀಯರಿಗೆ ಜ್ಯೋತಿಯನ್ನಾಗಿಯೂ ವಿಶ್ವಪೂರ್ತಿಗೆ ಜೀವೋದ್ಧಾರದ ಸಾಧನವಾಗಿಯೂ ನಾನು ನಿನ್ನನ್ನು ನೇಮಿಸಿದ್ದೇನೆ’.
48 : ಇದನ್ನು ಕೇಳಿದ ಅನ್ಯಧರ್ಮೀಯರು ಸಂತೋಷಪಟ್ಟು ದೇವರ ಸಂದೇಶಕ್ಕಾಗಿ ಸ್ತುತಿಸಿದರು. ಅಮರಜೀವಕ್ಕೆ ಆಯ್ಕೆಯಾದವರೆಲ್ಲರೂ ವಿಶ್ವಾಸಿಗಳಾದರು.
49 : ಪ್ರಭುವಿನ ವಾಕ್ಯ ಪ್ರದೇಶದಲ್ಲೆಲ್ಲಾ ಹಬ್ಬಿ ಹರಡಿತು.
50 : ಯೆಹೂದ್ಯರಾದರೋ ದೇವಭಕ್ತೆಯರಾದ ಕುಲೀನ ಸ್ತ್ರೀಯರನ್ನೂ ಪಟ್ಟಣದ ಪ್ರಮುಖ ಜನರನ್ನೂ ಪ್ರಚೋದಿಸಿದರು: ಪೌಲ ಮತ್ತು ಬಾರ್ನಬರನ್ನು ಹಿಂಸಿಸುವಂತೆ ಹುರಿದುಂಬಿಸಿ, ಅವರನ್ನು ಪ್ರದೇಶದಿಂದ ಹೊರಗಟ್ಟಿಸಿದರು.
51 : ಇದಕ್ಕೆ ಪ್ರತಿಯಾಗಿ ಪ್ರೇಷಿತರು ತಮ್ಮ ಪಾದ ಧೂಳನ್ನು ಝಾಡಿಸಿ ಇಕೋನಿಯಕ್ಕೆ ಹೊರಟು ಹೋದರು.
52 : ಭಕ್ತ ವಿಶ್ವಾಸಿಗಳಾದರೋ ಪರಮಾನಂದಪಟ್ಟರು, ಪವಿತ್ರಾತ್ಮಭರಿತರಾದರು.

ಕೀರ್ತನೆ  -  98:  1-4
ಕಂಡು ಬಂದಿತು ಜಗದ ಎಲ್ಲೆ ಎಲ್ಲೆಗೆ, ನಮ್ಮ ದೇವ ಸಾಧಿಸಿದ ಜಯಗಳಿಕೆ
1 : ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು / ಎಸಗಿಹನಾತನು ಪವಾಡಕಾರ್ಯಗಳನು / ಗಳಿಸಿತಾತನ ಕೈ ಪೂತಭುಜ ಗೆಲುವನು //
2 : ಪ್ರಕಟಿಸಿಹನಾ ಪ್ರಭು ತನ್ನ ಮುಕ್ತಿವಿಧಾನವನು / ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು //
3 : ಕಂಡು ಬಂದಿತು ಜಗದ ಎಲ್ಲೆಎಲ್ಲೆಗೆ / ನಮ್ಮ ದೇವ ಸಾಧಿಸಿದ ಜಯಗಳಿಕೆ // ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು / ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು //
4 : ಭೂನಿವಾಸಿಗಳೇ, ಮಾಡಿರಿ ಜಯಕಾರ ಪ್ರಭುವಿಗೆ / ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ //
5 : ಪ್ರಭುವನು ಸ್ತುತಿಸಿರಿ ಕಿನ್ನರಿಯೊಂದಿಗೆ / ಭಜಿಸಿರಿ ಆತನನು ವಾದ್ಯಮೇಳದೊಂದಿಗೆ //
           
ಶುಭಸಂದೇಶ - ಯೊವಾನ್ನ 14: 7-14        
7 : ನೀವು ನನ್ನನ್ನು ಅರಿತವರಾಗಿದ್ದರೆ ನನ್ನ ಪಿತನನ್ನು ಕೂಡ ಅರಿಯುತ್ತಿದ್ದಿರಿ. ಈಗಿನಿಂದ ಅವರನ್ನು ನೀವು ಅರಿತವರಾಗಿದ್ದೀರಿ ಹಾಗೂ ಕಂಡೂ ಇದ್ದೀರಿ,” ಎಂದು ನುಡಿದರು.
8 : ಆಗ ಫಿಲಿಪ್ಪನು, “ಪ್ರಭೂ, ನಮಗೆ ಪಿತನನ್ನು ತೋರಿಸಿ; ಅಷ್ಟೇ ಸಾಕು,” ಎಂದನು.
9 : ಅದಕ್ಕೆ ಉತ್ತರವಾಗಿ ಯೇಸು, “ನಾನು ಇಷ್ಟುಕಾಲ ನಿಮ್ಮೊಡನೆ ಇದ್ದರೂ ನಾನು ಯಾರೆಂಬುದನ್ನು ನೀನು ಅರಿತುಕೊಳ್ಳಲಿಲ್ಲವೆ? ನನ್ನನ್ನು ನೋಡಿದವನು ಪಿತನನ್ನೇ ನೋಡಿದವನಾಗಿದ್ದಾನೆ. ಹೀಗಿರುವಾಗ, ಫಿಲಿಪ್ಪನೇ, ‘ನಮಗೆ ಪಿತನನ್ನು ತೋರಿಸಿಎಂದು ಹೇಗೆ ಕೇಳುತ್ತೀ?
10 : ನಾನು ಪಿತನಲ್ಲಿ ಇದ್ದೇನೆ. ಪಿತನು ನನ್ನಲ್ಲಿ ಇದ್ದಾರೆ. ಇದನ್ನು ನೀನು ವಿಶ್ವಾಸಿಸುವುದಿಲ್ಲವೇ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುತ್ತಿಲ್ಲ. ಪಿತನೇ ನನ್ನಲ್ಲಿದ್ದುಕೊಂಡು ತಮ್ಮ ಕಾರ್ಯವನ್ನು ಸಾಧಿಸುತ್ತಾರೆ.
11 : ‘ನಾನು ಪಿತನಲ್ಲಿ ಇದ್ದೇನೆ, ಪಿತನು ನನ್ನಲ್ಲಿ ಇದ್ದಾರೆ,’ ಎನ್ನುವ ನನ್ನ ಮಾತುಗಳನ್ನು ವಿಶ್ವಾಸಿಸಿರಿ; ಇಲ್ಲವೇ, ನಾನು ಸಾಧಿಸಿದ ಸುಕೃತ್ಯಗಳ ನಿಮಿತ್ತದಿಂದಾದರೂ ವಿಶ್ವಾಸಿಸಿರಿ.
12 : ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನನ್ನಲ್ಲಿ ವಿಶ್ವಾಸವುಳ್ಳವನು ನಾನು ಸಾಧಿಸುವ ಕಾರ್ಯಗಳನ್ನು ಆತನೂ ಸಾಧಿಸುವನು. ಅಷ್ಟೇ ಏಕೆ, ಅವುಗಳಿಗಿಂತಲೂ ಮಹತ್ತಾದುವುಗಳನ್ನು ಸಾಧಿಸುವನು. ಏಕೆಂದರೆ ನಾನು ಪಿತನ ಬಳಿಗೆ ಹೋಗುತ್ತೇನೆ.
13 : ಇದಲ್ಲದೆ ನೀವು ನನ್ನ ಹೆಸರಿನಲ್ಲಿ ಕೇಳಿಕೊಳ್ಳುವುದನ್ನೆಲ್ಲಾ ಮಾಡುತ್ತೇನೆ. ಹೀಗೆ ಪಿತನಿಗೆ ಪುತ್ರನಲ್ಲಿ ಮಹಿಮೆ ಉಂಟಾಗುವುದು.
14 : ಹೌದು, ನನ್ನ ಹೆಸರಿನಲ್ಲಿ ನೀವು ಏನನ್ನು ಕೇಳಿದರೂ ನಾನು ಅದನ್ನು ಮಾಡಿಯೇ ತೀರುವೆನು.

ಚಿಂತನೆ                              

ನಂಬಿಕೆ ಎನ್ನುವ ಪದವು ಬಹಳ ಶಕ್ತಿಯುತವಾದದ್ದು. ನಾವು ಯಾವುದೇ ಕೆಲಸ ಮಾಡಿದರೂ ಅದರ ಮೇಲೆ ಹಾಗೂ ನಮ್ಮ ಮೇಲೆ ನಂಬಿಕೆ ಇರಬೇಕು. ಬೇರೆಯವರನ್ನು ನಾವು ಬಲವಾಗಿ ನಂಬಬೇಕಾದರೆ ನಮ್ಮಲ್ಲಿ ಮುಖ್ಯವಾಗಿ ಬೇಕಾಗಿರುವುದು ನಂಬಿಕೆ.    ನಂಬಿಕೆ ಎನ್ನುವುದು ಬಲವಾದಷ್ಟು ವ್ಯಕ್ತಿ ತನ್ನ ಜೀವನದಲ್ಲಿ ಅನೇಕ ಕೆಲಸಗಳನ್ನು ಮಾಡುತ್ತಾನೆ. ಕ್ರಿಸ್ತ ನಮ್ಮಿಂದ ಬಯಸುವುದು ಇದನ್ನೇ. ಇಂದಿನ ಶುಭ ಸಂದೇಶದಲ್ಲಿ ನಾವು ಗಮನಿಸಬೇಕಾದದ್ದು " ನೀವು ನನ್ನ ಹೆಸರಿನಲ್ಲಿ ಕೇಳಿಕೊಳ್ಳುವುದನ್ನೆಲ್ಲ ಮಾಡುತ್ತೇನೆ" ಈ ವಾಕ್ಯದಲ್ಲಿ ಅಪಾರವಾದ ಶಕ್ತಿ ಇದೆ ಅದಕ್ಕೆ ನಾವು ನಂಬಿಕೆ ಇಡಬೇಕು. ಕ್ರಿಸ್ತ ನಮ್ಮ ಮನದಾಳದ ಬಯಕೆಯನ್ನು ಈಡೇರಿಸುತ್ತಾರೆ. ಕೇಳಿದ್ದನ್ನೆಲ್ಲ ಕೊಡುತ್ತಾರೆ ಎಂಬ ನಂಬಿಕೆ ಇದ್ದರೆ ನಮ್ಮ ಜೀವನದಲ್ಲಿ ಅನೇಕ ಪವಾಡಗಳಾಗುತ್ತವೆ. ಇಂತಹ ಪವಾಡಗಳು ನಮ್ಮ ಜೀವನದಲ್ಲಾಗಲಿ; ಇದಕ್ಕೆ ಪೂರಕವಾದ ನಂಬಿಕೆ ನಮ್ಮದಾಗಲಿ. ಆತ್ಮಾವಲೋಕನ-                                         
1. ನಂಬಿಕೆ ನನ್ನಲ್ಲಿದೆಯೇ?                             
2.  ಪವಾಡಗಳನ್ನು ಬಯಸುವ ಮನಸ್ಸು ನನ್ನದೇ? ಅದಕ್ಕೆ ನಾನು ಪ್ರಯತ್ನಿಸಿದ್ದೇನೆಯೇ?     
ಸಹೋ ವಿನಯ್ ಕುಮಾರ್, ಚಿಕ್ಕಮಗಳೂರು ಧರ್ಮಾಕ್ಷೇತ್ರ                                                                                              

No comments:

Post a Comment