ಬಿಳಿ/ಭಾನು/ಪಾಸ್ಖ ಕಾಲದ ಐದನೇ ಭಾನುವಾರ
1ನೇ ವಾಚನ - ಪ್ರೇ.ಕಾ: 14: 21-27
21 : ಸಿರಿಯದ ಅಂತಿಯೋಕ್ಯಕ್ಕೆ ಮರುಪ್ರಯಾಣ ದೆರ್ಬೆಯಲ್ಲಿ ಪೌಲ ಮತ್ತು ಬಾರ್ನಬ ಶುಭಸಂದೇಶವನ್ನು ಸಾರಿ ಅನೇಕರನ್ನು ಭಕ್ತವಿಶ್ವಾಸಿಗಳನ್ನಾಗಿ
ಮಾಡಿಕೊಂಡರು. ಅನಂತರ ಅಲ್ಲಿಂದ ಲುಸ್ತ್ರಕ್ಕೂ ಇಕೋನಿಯಕ್ಕೂ ಅಂತಿಯೋಕ್ಯಕ್ಕೂ ಹಿಂದಿರುಗಿ ಬಂದರು.
22 : ಅಲ್ಲಿ ಭಕ್ತಾದಿಗಳನ್ನು ದೃಢಪಡಿಸಿ ವಿಶ್ವಾಸದಲ್ಲಿ ನಿಷ್ಠರಾಗಿರುವಂತೆ ಪ್ರೋತ್ಸಾಹಿಸಿದರು. ‘ಕಷ್ಟಸಂಕಟಗಳ ಮೂಲಕ ನಾವು ದೇವರ ಸಾಮ್ರಾಜ್ಯವನ್ನು ಪ್ರವೇಶಿಸಬೇಕಾಗಿದೆ’ ಎಂದು ಬೋಧಿಸಿದರು.
23 : ಇದಲ್ಲದೆ
ಪ್ರತಿಯೊಂದು ಕ್ರೈಸ್ತಸಭೆಗೂ ಪ್ರಮುಖರನ್ನು ನೇಮಿಸಿದರು. ಪ್ರಾರ್ಥನೆ ಮತ್ತು ಉಪವಾಸ ಮಾಡಿ ತಾವು ಅಚಲವಾಗಿ ನಂಬಿದ್ದ ಪ್ರಭುವಿಗೆ ಅವರನ್ನು ಒಪ್ಪಿಸಿದರು.
24 : ಇದಾದ ಮೇಲೆ ಪಿಸಿದಿಯ ಪ್ರದೇಶವನ್ನು ದಾಟಿ ಪಾಂಫಿಲೀಯ ಎಂಬಲ್ಲಿಗೆ ಬಂದರು.
25 : ಪೆರ್ಗದಲ್ಲಿ
ಶುಭಸಂದೇಶವನ್ನು ಸಾರಿ ಅತ್ತಾಲಿಯ ಎಂಬಲ್ಲಿಗೆ ಹೋದರು.
26 : ಅಲ್ಲಿಂದ
ನೌಕಾಯಾನ ಮಾಡಿ ಅವರು ಅಂತಿಯೋಕ್ಯಕ್ಕೆ ಮರಳಿದರು. ಈವರೆಗೆ ಮಾಡಿ ಮುಗಿಸಿದ್ದ ಸೇವಾಕಾರ್ಯಕ್ಕಾಗಿ ಅವರು ದೇವರ ಕೃಪಾಶ್ರಯಕ್ಕೆ ಮೊದಲು ಸಮರ್ಪಿತರಾದದ್ದು ಇಲ್ಲಿಯೇ.
27 ಇಲ್ಲಿಗೆ
ತಲುಪಿದ ಕೂಡಲೇ ಅವರು ಕ್ರೈಸ್ತಸಭೆಯನ್ನು ಒಟ್ಟುಗೂಡಿಸಿದರು. ದೇವರು ತಮ್ಮೊಡನೆ ಇದ್ದು ಸಾಧಿಸಿದ್ದೆಲ್ಲವನ್ನೂ ವರದಿಮಾಡಿದರು; ಅದೂ ಅಲ್ಲದೆ, ದೇವರು ಅನ್ಯಧರ್ಮೀಯರಿಗೆ ವಿಶ್ವಾಸದ ದ್ವಾರವನ್ನು ಹೇಗೆ ತೆರೆದರೆಂದು ವಿವರಿಸಿದರು.
28 : ತರುವಾಯ ಭಕ್ತವಿಶ್ವಾಸಿಗಳ ಸಂಗಡ ಹೆಚ್ಚುಕಾಲ ತಂಗಿದ್ದರು.
ಕೀರ್ತನೆ
- 145: 8-13
ದೇವಾ ನನ್ನೊಡೆಯ ಮಾಡುವೆ ನಿನ್ನ ಗುಣಗಾನ!
8 : ಪ್ರಭು ದಯಾನಿಧಿ, ಕೃಪಾಸಾಗರನು / ಸಹನಶೀಲನು, ಪ್ರೀತಿಪೂರ್ಣನು
9 : ಪ್ರಭುವಿನ
ಕರುಣೆ ಎಲ್ಲರ ಮೇಲೆ / ಆತನ ಕೃಪೆಯು ಸೃಷ್ಟಿಯ ಮೇಲೆ
10 : ಪ್ರಭು, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು / ಕೊಂಡಾಡುವುದು ನಿನ್ನನು ಭಕ್ತ ಸಮೂಹವು
11 : ಪ್ರಸಿದ್ಧಪಡಿಸುವರು ನಿನ್ನ ರಾಜ್ಯದ ಮಹತ್ವವನು / ವರ್ಣಿಸುವರವರು ನಿನ್ನ ಶಕ್ತಿ ಸಾಮಥ್ರ್ಯವನು
12 : ಅರಿವರಿಂತು
ಜನರು ನಿನ್ನ ಶೂರ ಕಾರ್ಯಗಳನು / ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ ಪ್ರಭಾವವನು
13 : ಶಾಶ್ವತವಾದುದು ನಿನ್ನ ರಾಜ್ಯವು / ಇರುವುದೆಂದಿಗು ನಿನ್ನ ಆಳ್ವಿಕೆಯು
2ನೇ ವಾಚನ - ಪ್ರಕಟಣೆ 21: 1-5
1 : ತರುವಾಯ ನೂತನ ಆಕಾಶ ಮಂಡಲವನ್ನೂ ನೂತನ ಭೂಮಂಡಲವನ್ನೂ ಕಂಡೆ. ಮೊದಲಿದ್ದ ಆಕಾಶಮಂಡಲವೂ ಮೊದಲಿದ್ದ ಭೂಮಂಡಲವೂ ಕಣ್ಮರೆಯಾಗಿ ಹೋದವು. ಸಮುದ್ರವು ಇನ್ನಿಲ್ಲವಾಯಿತು.
2 : ಇದಲ್ಲದೆ,
ಪವಿತ್ರ ನಗರವಾದ ನೂತನ ಜೆರುಸಲೇಮ್ ಸ್ವರ್ಗದಿಂದಲೂ ದೇವರ ಸನ್ನಿಧಿಯಿಂದಲೂ ಕೆಳಗಿಳಿದು ಬರುವುದನ್ನು ಕಂಡೆ. ಅದು ಮದುಮಗನನ್ನು ಎದುರುಗೊಳ್ಳುವುದಕ್ಕಾಗಿ ಅಲಂಕೃತಳಾದ ಮದುವಣಗಿತ್ತಿಯಂತೆ ಶೃಂಗಾರಮಯವಾಗಿತ್ತು.
3 : ಆಗ ಸಿಂಹಾಸನದ ಕಡೆಯಿಂದ ಬಂದ ಮಹಾಧ್ವನಿ ಇಂತೆಂದಿತು: “ಇಗೋ ಮಾನವರ ಮಧ್ಯೆಯೇ ಇದೆ ದೇವಾಲಯ, ಆತನವರೊಡನೆ ವಾಸಿಸುವನು; ಅವರಾತನಿಗೆ ಪ್ರಜೆಗಳಾಗುವರು; ದೇವರೇ ಅವರುಗಳ ಜೊತೆಗಾರ; ಆತನಲ್ಲದೆ ಅವರಿಗಿಲ್ಲ ಬೇರಾವ ದೇವ.
4 : ಒರಸುವನಾತ
ಅವರ ಕಂಬನಿಯನೆಲ್ಲಾ, ಇರದಿನ್ನು ಸಾವುನೋವು ಅವರಿಗೆಲ್ಲಾ; ಇರವು ಶೋಕ ದುಃಖಗಳಾವುವು ಮರೆಯಾಗಿ ಹೋದವು ಹಿಂದಿನದೆಲ್ಲವು.”
5 : ಸಿಂಹಾಸನಾರೂಢನಾಗಿದ್ದವನು ಆಗ, “ಇಗೋ, ನಾನೆಲ್ಲವನ್ನೂ ಹೊಸದಾಗಿಸುತ್ತೇನೆ,” ಎಂದನು. ಅಲ್ಲದೆ ಅವನು, “ಇದನ್ನು ನೀನು ಬರೆ, ಈ ಮಾತುಗಳು ಸತ್ಯವಾದುವು ಹಾಗೂ ವಿಶ್ವಾಸಾರ್ಹವಾದುವು,”
ಎಂದು ಹೇಳಿದನು.
ಶುಭಸಂದೇಶ - ಯೊವಾನ್ನ 13: 31-35
31 : ಯೂದನು ಹೊರಟುಹೋದಮೇಲೆ ಯೇಸುಸ್ವಾಮಿ ಹೀಗೆಂದರು: “ಈಗ ನರಪುತ್ರನ ಮಹಿಮೆ ಪ್ರಕಟವಾಗುವುದು. ಆತನಲ್ಲಿ ದೇವರ ಮಹಿಮೆಯೂ ಪ್ರಕಟವಾಗುವುದು.
32 : ದೇವರ ಮಹಿಮೆ ಆತನಲ್ಲಿ ಪ್ರಕಟವಾದರೆ, ದೇವರೇ ನರಪುತ್ರನ ಮಹಿಮೆಯನ್ನು ತಮ್ಮಲ್ಲಿ ಪ್ರಕಟಪಡಿಸುವರು, ತಕ್ಷಣವೇ ಪ್ರಕಟಪಡಿಸುವರು.
33 : ಪ್ರಿಯ ಮಕ್ಕಳೇ, ಇನ್ನು ತುಸುಕಾಲ ಮಾತ್ರ ನಾನು ನಿಮ್ಮೊಡನೆ ಇರುತ್ತೇನೆ, ಆಮೇಲೆ ನೀವು ನನ್ನನ್ನು ಹುಡುಕುವಿರಿ, ‘ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ನಿಮಗೂ ಹೇಳುತ್ತೇನೆ.
34 : ನಿಮಗೊಂದು
ಹೊಸ ಆಜ್ಞೆಯನ್ನು ಕೊಡುತ್ತೇನೆ: ಒಬ್ಬರನ್ನೊಬ್ಬರು ಪ್ರೀತಿಸಿರಿ. ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಿರಿ.
35 : ನಿಮ್ಮ ಈ ಪರಸ್ಪರ ಪ್ರೀತಿಯನ್ನು ಕಂಡು ನೀವು ನನ್ನ ಶಿಷ್ಯರೆಂದು ಜನರೆಲ್ಲರೂ ಅರಿತುಕೊಳ್ಳುವರು.” ಪೇತ್ರನ ಅಲ್ಲಗಳಿಕೆಯ ಮುನ್ಸೂಚನೆ.
ಚಿಂತನೆ
ಕ್ರೈಸ್ತ ಧರ್ಮದಲ್ಲಿ ಅನೇಕ ಪಂಗಡಗಳಿವೆ. ಆ
ಪಂಗಡಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಆದರೆ ಅದೆಲ್ಲ ಮುಖ್ಯವಲ್ಲ, ಮುಖ್ಯವಾದ 2 ಪಂಗಡಗಳು ಅಥವಾ ಭೇದಗಳು
ಕ್ರೈಸ್ತರಲ್ಲಿ ಇವೆ. 1. ಆರಾಧಿಸುವ ಕ್ರೈಸ್ತರು.
2 ಸಾಕ್ಷಿ ನೀಡುವ
ಕ್ರೈಸ್ತರು. ಕ್ರೈಸ್ತರಾದ ನಾವು ಯಾವ ಪಂಗಡಕ್ಕೆ ಸೇರಿದವರಾಗಿದ್ದೇವೆ ಎಂಬುದು ಪ್ರಶ್ನೆ? ಎಂತಹ ಕ್ರೈಸ್ತರಾಗಿರಲಿ ಅವರು ಈ ಎರಡು ವಿಭಾಗಕ್ಕೆ ಸೇರಿದವರಾಗಿರುತ್ತಾರೆ.
ಇವರ ಗುಣ ವಿಶೇಷಗಳನ್ನು ತಿಳಿಯುವುದು ಸೂಕ್ತ.
1. ಆರಾಧಿಸುವ ಕ್ರೈಸ್ತರು- ಈ ವಿಭಾಗಕ್ಕೆ ಸೇರಿದವರು
ಕ್ರಿಸ್ತನನ್ನು ತಮ್ಮ ಜೀವನದ ಆರಾಧ್ಯ ದೈವವನ್ನಾಗಿಸಿ ದೇವರಿಗೊಂದು. ಪೀಠ ಕಟ್ಟಿಸಿ, ದೀಪಗಳನ್ನು ಹಚ್ಚಿ ಧೂಪ
ಹಾಕಿ ಪೂಜಿಸುತ್ತಾರೆ. ಪೂಜೆ ಪ್ರಾರ್ಥನೆಗಳು ಇವರ ದೈನಂದಿನ ಕಾರ್ಯ.
2. ಸಾಕ್ಷಿ ನೀಡುವ
ಕ್ರೈಸ್ತರು- ಈ ವಿಭಾಗಕ್ಕೆ ಸೇರಿದವರು ಕ್ರಿಸ್ತನನ್ನು ಪೀಠದಿಂದ ಕೆಳಗಿಳಿಸಿ ಜನರ ಜೀವನುರಾಗಕ್ಕೆ ಇಳಿಸಿ ಆತನನ್ನು
ಅನುಭಾವದ ಅನುಭವಕ್ಕೆ ತರುತ್ತಾರೆ. ತಮ್ಮ ನಡೆ, ನುಡಿ ಕಾರ್ಯದಲ್ಲಿ ಕ್ರಿಸ್ತನನ್ನು ಕಾಯಾ-ವಾಚಾ-ಮನಸಾ
ಇತರರಿಗೆ ಸಾಕ್ಷಿ ನೀಡುತ್ತಾರೆ. ಕ್ರಿಸ್ತ ಕೂಡ ಬಯಸುವುದು ನಮ್ಮಿಂದ ಇದನ್ನೇ. ಇಂದಿನ ಶುಭ
ಸಂದೇಶದಲ್ಲಿ ನಾವು ಕಾಣುತ್ತೇವೆ ನಿಮ್ಮ ಈ ಪರಸ್ಪರ ಪ್ರೀತಿಯನ್ನು ಕಂಡು ನೀವು ನನ್ನ ಶಿಷ್ಯರೆಂದು
ಜನರೆಲ್ಲರೂ ಅರಿತುಕೊಳ್ಳುವರು ಎಂದು. ಇತರರಿಗೆ ನಾವು ಕ್ರಿಸ್ತನನ್ನು ಕುರಿತು ಸಾಕ್ಷಿ ನೀಡಬೇಕಾದರೆ
ನಮ್ಮ ಜೀವನದ ಪರಿ ಪ್ರೀತಿಯಿಂದ ಕೂಡಿರಬೇಕು.
ಆತ್ಮಾವಲೋಕನ-
1. ನಾನು ಆರಾಧಿಸುವ ಕ್ರೈಸ್ತನೋ? ಅಥವಾ ಸಾಕ್ಷಿ ನೀಡುವ
ಕ್ರೈಸ್ತನೋ?
2. ಪ್ರೀತಿ ನನ್ನಲ್ಲಿದೆಯೇ?
ಸಹೋ ವಿನಯ್ ಕುಮಾರ್, ಚಿಕ್ಕಮಗಳೂರು ಧರ್ಮಾಕ್ಷೇತ್ರ
No comments:
Post a Comment