Saturday, 18 May 2019

20 ಮೇ 2019

 ಬಿಳಿ/  ಸೋಮ / ಪಾಸ್ಖ ಕಾಲದ ಐದನೇ ವಾರ 
 ಐಚ್ಛಿಕ ಸ್ಮರಣೆ - ಸಿಯೆನ್ನದ ಸಂತ ಬೆರ್ನಾಡಿನ್ (ಯಾ)  
1ನೇ  ವಾಚನ  -  ಪ್ರೇ.ಕಾ145-18    
5 : ಅನ್ಯಧರ್ಮದವರು ಮತ್ತು ಯೆಹೂದ್ಯರು ತಮ್ಮ ಅಧಿಕಾರಿಗಳೊಡನೆ ಸೇರಿ ಪ್ರೇಷಿತರಿಗೆ ಕಿರುಕುಳಕೊಡಲು ಹಾಗೂ ಅವರ ಮೇಲೆ ಕಲ್ಲು ತೂರಲು ಪ್ರಯತ್ನಿಸಿದರು.
6 : ಇದನ್ನರಿತುಕೊಂಡ ಪ್ರೇಷಿತರು ಅಲ್ಲಿಂದ ಪಲಾಯನಮಾಡಿ ಲುಕವೋನಿಯದ ಪಟ್ಟಣಗಳಾದ ಲುಸ್ತ್ರ ಮತ್ತು ದೆರ್ಬೆಗೂ ಅದರ ಸುತ್ತಮುತ್ತಲ ಪ್ರದೇಶಗಳಿಗೂ ಹೊರಟುಹೋದರು.
7 : ಅಲ್ಲೂ ಶುಭಸಂದೇಶವನ್ನು ಸಾರತೊಡಗಿದರು.
8 ಲುಸ್ತ್ರದಲ್ಲಿ ಒಬ್ಬ ಕುಂಟನಿದ್ದ. ಅವನೊಬ್ಬ ಹುಟ್ಟುಕುಂಟ. ಎಂದೂ ಕಾಲೂರಿ ನಡೆದವನಲ್ಲ.
9 : ಒಮ್ಮೆ, ಅವನು ಕುಳಿತಲ್ಲೇ ಪೌಲನ ಮಾತುಗಳನ್ನು ಆಲಿಸುತ್ತಿದ್ದನು. ಆಗ ಪೌಲನು ಅವನನ್ನೇ ದಿಟ್ಟಿಸಿ ನೋಡಿದನು. ಅವನಲ್ಲಿ ಸ್ವಸ್ಥ ಪಡೆಯುವಷ್ಟು ವಿಶ್ವಾಸವನ್ನು ಕಂಡು ಸ್ವರವೆತ್ತಿ,
10 : “ಎದ್ದೇಳು, ಕಾಲೂರಿ ನೆಟ್ಟಗೆ ನಿಲ್ಲು,” ಎಂದು ಹೇಳಿದನು. ಮನುಷ್ಯನು ನೆಗೆದುನಿಂತು ನಡೆಯಲಾರಂಭಿಸಿದನು.
11 : ಪೌಲನು ಮಾಡಿದ ಮಹತ್ಕಾರ್ಯವನ್ನು ಜನಸಮೂಹವು ನೋಡಿತು. “ದೇವರುಗಳೇ ಮನುಷ್ಯರೂಪದಲ್ಲಿ ನಮ್ಮಲ್ಲಿಗೆ ಬಂದಿದ್ದಾರೆ,” ಎಂದು ತಮ್ಮ ಲುಕವೋನಿಯ ಭಾಷೆಯಲ್ಲಿ ಗಟ್ಟಿಯಾಗಿ ಕೂಗಲಾರಂಭಿಸಿತು.
12 : ಜನರು ಬಾರ್ನಬನನ್ನುಜೆಯುಸ್ದೇವರೆಂದೂ ಪೌಲನು ಮುಖ್ಯ ಭಾಷಣಕಾರನಾದುದರಿಂದ, ಅವನನ್ನುಹೆರ್ಮೆದೇವರೆಂದೂ ಕರೆಯಲಾರಂಭಿಸಿದರು.
13 : ಜೆಯುಸ್ ದೇವರ ಗುಡಿ ಪಟ್ಟಣದ ಮುಂದೆಯೇ ಇತ್ತು. ಅಲ್ಲಿಯ ಅರ್ಚಕನು ದ್ವಾರದ ಬಳಿಗೆ ಹೋರಿಗಳನ್ನೂ ಹೂವಿನ ಹಾರಗಳನ್ನೂ ತೆಗೆದುಕೊಂಡು ಬಂದನು. ಜನರೊಡನೆ ಸೇರಿ ಪ್ರೇಷಿತರಿಗೆ ಬಲಿಯನ್ನು ಅರ್ಪಿಸಬೇಕೆಂದಿದ್ದನು.
14 : ಇದನ್ನು ಕೇಳಿದ ಬಾರ್ನಬ ಮತ್ತು ಪೌಲರು ಸಿಟ್ಟಿನಿಂದ ತಮ್ಮ ಮೇಲಂಗಿಗಳನ್ನು ಹರಿದು ಜನಸಂದಣಿಯತ್ತ ಧಾವಿಸಿ ಹೀಗೆಂದು ಕೂಗಿ ಹೇಳಿದರು:
15 : “ಮಹಾಜನರೇ, ನೀವು ಮಾಡುತ್ತಿರುವುದೇನು? ನಾವು ನಿಮ್ಮಂತೆ ಕೇವಲ ನರಮಾನವರು. ನಾವು ಬಂದಿರುವುದು ನಿಮಗೆ ಶುಭಸಂದೇಶವನ್ನು ಸಾರುವುದಕ್ಕೆ; ನೀವು ನಿರರ್ಥಕ ಕಾರ್ಯವನ್ನು ಬಿಟ್ಟುಬಿಡಬೇಕು; ಭೂಮ್ಯಾಕಾಶವನ್ನೂ ಸಮುದ್ರ ಸರೋವರವನ್ನೂ ಮತ್ತು ಅವುಗಳಲ್ಲಿರುವ ಸಮಸ್ತ ಸೃಷ್ಟಿಯನ್ನೂ ಉಂಟುಮಾಡಿದ ಜೀವಂತ ದೇವರ ಭಕ್ತರಾಗಬೇಕು.
16 : ಹಿಂದಿನ ಕಾಲದಲ್ಲಿ ಸಮಸ್ತ ಜನಾಂಗಗಳು ತಮಗೆ ಇಷ್ಟಬಂದಂತೆ ನಡೆಯಲೆಂದು ದೇವರು ಬಿಟ್ಟುಬಿಟ್ಟರು.
17 : ಆದರೆ ತಮ್ಮ ಅಸ್ತಿತ್ವವನ್ನು ಅರಿತುಕೊಳ್ಳುವಂತೆ ಸುಕೃತ್ಯಗಳ ಸಾಕ್ಷ್ಯ ನೀಡುತ್ತಲೇ ಬಂದಿದ್ದಾರೆ; ನಿಮಗೆ ಆಕಾಶದಿಂದ ಮಳೆಯನ್ನೂ ಸಕಾಲಕ್ಕೆ ಬೆಳೆಯನ್ನೂ ಕೊಡುತ್ತಾ ಆಹಾರವನ್ನು ಒದಗಿಸಿ, ನಿಮ್ಮ ಹೃದಯವನ್ನು ಪರಮಾನಂದಗೊಳಿಸುತ್ತಾ ಬಂದಿದ್ದಾರೆ.”
18 : ಪ್ರೇಷಿತರು ಇಷ್ಟು ಹೇಳಿದರೂ ಜನರು ತಮಗೆ ಬಲಿಯರ್ಪಿಸುವುದನ್ನು ತಡೆಯುವುದು ಕಷ್ಟಸಾಧ್ಯವಾಯಿತು.
ಕೀರ್ತನೆ  -  1151-415-16 
ನಮಗಲ್ಲ ಹೇ ಪ್ರಭುನಮಗಲ್ಲ ಮಹಿಮೆ / ನಿನ್ನ ನಾಮಕೇ ಸಲ್ಲಲಿ  ಮಹಿಮೆ
1 : ನಮಗಲ್ಲ ಹೇ ಪ್ರಭು. ನಮಗಲ್ಲ ಮಹಿಮೆ / ನಿನ್ನ ನಾಮಕೇ ಸಲ್ಲಲಿ ಮಹಿಮೆ / ನಿನ್ನ ನೀತಿ ಸತ್ಯತೆಗಳ ನಿಮಿತ್ತವೆ //
2 : ಅನ್ಯ ಜನರು ನುಡಿಯುವುದೆಂತು: / “ಅವರ ದೇವರೆಲ್ಲಿ?” ಎಂದು //
3 : ಪರದಲ್ಲಿಹನು ನಮ್ಮ ದೇವನು / ಗೈವನು ತನಗಿಷ್ಟ ಬಂದುದನು //
15 : ಇಹಪರಗಳನು ಉಂಟುಮಾಡಿದ ಪ್ರಭುವಿಂದ / ಲಭಿಸುವಂತಾಗಲಿ ನಿಮಗೆ ಆಶೀರ್ವಾದ //
16 : ಪ್ರಭುವಿಗೆ ಸ್ವಂತವಾದುದು ಪರಲೋಕ / ನರರಿಗೆ ಕೊಟ್ಟಿಹನಾತನು ಭೂಲೋಕ //
ಶುಭಸಂದೇಶ - ಯೊವಾನ್ನ 14: 21-26  
21 : ನನ್ನ ಆಜ್ಞೆಗಳನ್ನು ಅಂಗೀಕರಿಸಿ ಅವುಗಳ ಪ್ರಕಾರ ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ಪಿತನಿಗೂ ಪ್ರಿಯನಾಗಿರುವನು. ನಾನೂ ಅವನನ್ನು ಪ್ರೀತಿಸಿ ನನ್ನನ್ನೇ ಅವನಿಗೆ ಸಾಕ್ಷಾತ್ಕರಿಸಿ ಕೊಡುವೆನು.”
22 : ಆಗ ಯೂದನು, (ಈತ ಇಸ್ಕರಿಯೋತಿನ ಯೂದನಲ್ಲ) “ಪ್ರಭೂ, ನೀವು ಲೋಕಕ್ಕೆ ನಿಮ್ಮನ್ನು ಸಾಕ್ಷಾತ್ಕರಿಸಿಕೊಳ್ಳದೆ ನಮಗೆ ಮಾತ್ರ ಸಾಕ್ಷಾತ್ಕರಿಸಿಕೊಳ್ಳುತ್ತೀರಲ್ಲಾ, ಏಕೆ?” ಎಂದು ಕೇಳಿದನು.
23 : ಆಗ ಯೇಸು, “ನನ್ನನ್ನು ಪ್ರೀತಿಸುವವನು ನನ್ನ ಮಾತನ್ನು ಕೈಗೊಂಡು ನಡೆಯುವನು. ಅವನನ್ನು ನನ್ನ ಪಿತನೂ ಪ್ರೀತಿಸುವರು ಮತ್ತು ನಾವಿಬ್ಬರೂ ಅವನ ಬಳಿ ಬಂದು ಅವನಲ್ಲಿ ನೆಲೆಸುವೆವು.
24 : ನನ್ನನ್ನು ಪ್ರೀತಿಸದೆ ಇರುವವನು ನನ್ನ ಮಾತನ್ನು ಕೈಗೊಂಡು ನಡೆಯುವುದಿಲ್ಲ. ನೀವು ಕೇಳುತ್ತಿರುವ ಮಾತು ನನ್ನದಲ್ಲ, ನನ್ನನ್ನು ಕಳುಹಿಸಿದ ಪಿತನದೇ.
25 : ನಾನು ನಿಮ್ಮೊಡನೆ ಇರುವಾಗಲೇ ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ.
26 : ಆದರೆ ಪಿತನು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪೋಷಕರಾದ ಪವಿತ್ರಾತ್ಮ ನಿಮಗೆ ಎಲ್ಲವನ್ನೂ ಬೋಧಿಸಿ ನಾನು ಹೇಳಿರುವುದನ್ನೆಲ್ಲಾ ನಿಮ್ಮ ನೆನಪಿಗೆ ತರುವರು.
ಚಿಂತನೆ                                       
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಬ್ಬ ಸಂತ ಮತ್ತು ಒಬ್ಬ ಸೈತಾನ ಇರುತ್ತಾನೆ.    ಜೀವನದ ಪ್ರತಿ ಹಂತದಲ್ಲೂ ಪ್ರತಿಕ್ಷಣದಲ್ಲೂ ಸಂತ ಮತ್ತು ಸೈತಾನನ ನಡುವೆ ಸಂಘರ್ಷ ನಡೆಯುತ್ತಿರುತ್ತದೆ. ಒಳ್ಳೆಯತನ ಜಾಸ್ತಿ ಇದ್ದು ಅದು ಜಯ ಸಾಧಿಸಿದರೆ ನಮ್ಮಲ್ಲಿರುವ ಸಂತ ಗೆಲ್ಲುತ್ತಾನೆ. ಕೆಟ್ಟತನ ಜಾಸ್ತಿ ಇದ್ದು ಅದು ಜಯ ಸಾಧಿಸಿದರೆ ನಮ್ಮಲ್ಲಿರುವ ಸೈತಾನ ಗೆಲ್ಲುತ್ತಾನೆ. ಕ್ರೈಸ್ತ ಧರ್ಮದ ವಿಶ್ವಾಸ - ಪ್ರತಿಯೊಂದು ಒಳ್ಳೆಯ ಕಾರ್ಯ ಮಾಡುವವನು ಪವಿತ್ರಾತ್ಮಭರಿತನಾಗಿ ಇರುತ್ತಾನೆ ಎಂದು. ನಾವು ಸೂಕ್ಷ್ಮವಾಗಿ ಪ್ರತಿಯೊಬ್ಬ ಸಂತರ ಜೀವನವನ್ನು ಅವಲೋಕಿಸಿದರೆ ನಮಗೆ ಪವಿತ್ರಾತ್ಮರ  ಹೆಜ್ಜೆಗಳನ್ನು ಕಂಡುಹಿಡಿಯಬಹುದಾಗಿದೆ. ಒಳ್ಳೆಯತನ ಮತ್ತು ಒಳ್ಳೆಯತನಕ್ಕೆ ಬೇಕಾದ ಧೈರ್ಯ ತುಂಬಲು ಒಬ್ಬ ಪೋಷಕರ ಕುರಿತು ಇಂದು ತಮ್ಮ ಶಿಷ್ಯರಿಗೆ ಯೇಸುಸ್ವಾಮಿ ತಿಳಿಸುತ್ತಾರೆ. ಸ್ವಾಮಿ ಹೇಳಿದ್ದನ್ನೆಲ್ಲಾ ನೆನಪಿಟ್ಟು ಅದರಂತೆ ಅವರು ನಡೆಯಲು ಬರೀ ಮಾನವಶಕ್ತಿಯಿಂದ ಸಾಲದು ಎಂದು ಅರಿತು ಪ್ರಭು ಶಿಷ್ಯರಿಗೆ ತಾವು ಬೋಧಿಸಿದ£Éßಲ್ಲಾ ನೆನಪಿನಲ್ಲಿಟ್ಟು  ಕೊಳ್ಳಲು ಪೋಷಕ ಪವಿತ್ರಾತ್ಮರನ್ನು ನೀಡುತ್ತಿದ್ದಾರೆ. ಇಂತಹ ಶಕ್ತಿಶಾಲಿ ಪವಿತ್ರಾತ್ಮರು ನಮ್ಮ ಜೀವ ಮತ್ತು ಜೀವನದಲ್ಲಿ ನೆಲೆಸಲಿ ಎಂಬ ಪ್ರಾರ್ಥನೆ ನಮ್ಮದಾಗಲಿ.           
ಆತ್ಮಾವಲೋಕನ
1) ನನ್ನ ಜೀವನದ ಸಂಘರ್ಷದಲ್ಲಿ ಯಾರು ಗೆಲ್ಲುವುದು ?ನನ್ನಲ್ಲಿರುವ ಸಂತನೋ? ಸೈತಾನನೋ?       
2) ನನ್ನಲ್ಲಿ ಪವಿತ್ರಾತ್ಮನ ವಾಸವಾಗಿದೆಯೇ?

- ಸಹೋ ವಿನಯ್ ಕುಮಾರ್
             

No comments:

Post a Comment