ಬಿಳಿ/ ಮಂಗಳ/ ಪಾಸ್ಖ ಕಾಲದ ಐದನೇ ವಾರ
ಐಚ್ಛಿಕ ಸ್ಮರಣೆ - ಕ್ರಿಸ್ಟೋಫರ್ ಮಗಲ್ಲಾನೆಸ್ (ಯಾ ಮತ್ತು ಸಂಗಡಿಗರು) (ರ.ಸಾ)
1ನೇ ವಾಚನ - ಪ್ರೇ.ಕಾ: 14: 19-28
19 : ಆಗ ಅಂತಿಯೋಕ್ಯ ಮತ್ತು ಇಕೋನಿಯದಿಂದ ಕೆಲವು ಯೆಹೂದ್ಯರು ಅಲ್ಲಿಗೆ ಬಂದರು. ಅವರು ಜನಸಮೂಹವನ್ನು ತಮ್ಮ ಕಡೆ ಒಲಿಸಿಕೊಂಡು ಪೌಲನ ಮೇಲೆ ಕಲ್ಲು ಬೀರಿ, ಅವನು ಸತ್ತನೆಂದು ಭಾವಿಸಿ, ಪಟ್ಟಣದಿಂದ ಹೊರಗೆ ಎಳೆದು ಹಾಕಿದರು.
20 : ಆದರೆ, ಭಕ್ತವಿಶ್ವಾಸಿಗಳು ಬಂದು ಅವನ ಸುತ್ತಲೂ ನೆರೆದಿದ್ದಾಗ ಅವನು ಎದ್ದು ಪಟ್ಟಣವನ್ನು ಪ್ರವೇಶಿಸಿದನು. ಮರುದಿನ ಅವನು ಬಾರ್ನಬನ ಸಂಗಡ ದೆರ್ಬೆಗೆ ಹೊರಟು ಹೋದನು.
21 : ಸಿರಿಯದ ಅಂತಿಯೋಕ್ಯಕ್ಕೆ ಮರುಪ್ರಯಾಣ ದೆರ್ಬೆಯಲ್ಲಿ ಪೌಲ ಮತ್ತು ಬಾರ್ನಬ ಶುಭಸಂದೇಶವನ್ನು ಸಾರಿ ಅನೇಕರನ್ನು ಭಕ್ತವಿಶ್ವಾಸಿಗಳನ್ನಾಗಿ ಮಾಡಿಕೊಂಡರು. ಅನಂತರ ಅಲ್ಲಿಂದ ಲುಸ್ತ್ರಕ್ಕೂ ಇಕೋನಿಯಕ್ಕೂ ಅಂತಿಯೋಕ್ಯಕ್ಕೂ ಹಿಂದಿರುಗಿ ಬಂದರು.
22 : ಅಲ್ಲಿ ಭಕ್ತಾದಿಗಳನ್ನು ದೃಢಪಡಿಸಿ ವಿಶ್ವಾಸದಲ್ಲಿ ನಿಷ್ಠರಾಗಿರುವಂತೆ ಪ್ರೋತ್ಸಾಹಿಸಿದರು. ‘ಕಷ್ಟಸಂಕಟಗಳ ಮೂಲಕ ನಾವು ದೇವರ ಸಾಮ್ರಾಜ್ಯವನ್ನು ಪ್ರವೇಶಿಸಬೇಕಾಗಿದೆ’ ಎಂದು ಬೋಧಿಸಿದರು.
23 : ಇದಲ್ಲದೆ ಪ್ರತಿಯೊಂದು ಕ್ರೈಸ್ತಸಭೆಗೂ ಪ್ರಮುಖರನ್ನು ನೇಮಿಸಿದರು. ಪ್ರಾರ್ಥನೆ ಮತ್ತು ಉಪವಾಸ ಮಾಡಿ ತಾವು ಅಚಲವಾಗಿ ನಂಬಿದ್ದ ಪ್ರಭುವಿಗೆ ಅವರನ್ನು ಒಪ್ಪಿಸಿದರು.
24 : ಇದಾದ ಮೇಲೆ ಪಿಸಿದಿಯ ಪ್ರದೇಶವನ್ನು ದಾಟಿ ಪಾಂಫಿಲೀಯ ಎಂಬಲ್ಲಿಗೆ ಬಂದರು.
25 : ಪೆರ್ಗದಲ್ಲಿ ಶುಭಸಂದೇಶವನ್ನು ಸಾರಿ ಅತ್ತಾಲಿಯ ಎಂಬಲ್ಲಿಗೆ ಹೋದರು.
26 : ಅಲ್ಲಿಂದ ನೌಕಾಯಾನ ಮಾಡಿ ಅವರು ಅಂತಿಯೋಕ್ಯಕ್ಕೆ ಮರಳಿದರು. ಈವರೆಗೆ ಮಾಡಿ ಮುಗಿಸಿದ್ದ ಸೇವಾಕಾರ್ಯಕ್ಕಾಗಿ ಅವರು ದೇವರ ಕೃಪಾಶ್ರಯಕ್ಕೆ ಮೊದಲು ಸಮರ್ಪಿತರಾದದ್ದು ಇಲ್ಲಿಯೇ.
27 ಇಲ್ಲಿಗೆ ತಲುಪಿದ ಕೂಡಲೇ ಅವರು ಕ್ರೈಸ್ತಸಭೆಯನ್ನು ಒಟ್ಟುಗೂಡಿಸಿದರು. ದೇವರು ತಮ್ಮೊಡನೆ ಇದ್ದು ಸಾಧಿಸಿದ್ದೆಲ್ಲವನ್ನೂ ವರದಿಮಾಡಿದರು; ಅದೂ ಅಲ್ಲದೆ, ದೇವರು ಅನ್ಯಧರ್ಮೀಯರಿಗೆ ವಿಶ್ವಾಸದ ದ್ವಾರವನ್ನು ಹೇಗೆ ತೆರೆದರೆಂದು ವಿವರಿಸಿದರು.
28 : ತರುವಾಯ ಭಕ್ತವಿಶ್ವಾಸಿಗಳ ಸಂಗಡ ಹೆಚ್ಚುಕಾಲ ತಂಗಿದ್ದರು.
ಕೀರ್ತನೆ - 145: 1೦-13, 22
ಅರಿವರಿಂತು ಜನರು ನಿನ್ನ ಶೂರ ಕಾರ್ಯಗಳನು / ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ ಪ್ರಭಾವವನು
ಅರಿವರಿಂತು ಜನರು ನಿನ್ನ ಶೂರ ಕಾರ್ಯಗಳನು / ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ ಪ್ರಭಾವವನು
10 : ಪ್ರಭು, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು / ಕೊಂಡಾಡುವುದು ನಿನ್ನನು ಭಕ್ತ ಸಮೂಹವು
11 : ಪ್ರಸಿದ್ಧಪಡಿಸುವರು ನಿನ್ನ ರಾಜ್ಯದ ಮಹತ್ವವನು / ವರ್ಣಿಸುವರವರು ನಿನ್ನ ಶಕ್ತಿ ಸಾಮಥ್ರ್ಯವನು
12 : ಅರಿವರಿಂತು ಜನರು ನಿನ್ನ ಶೂರ ಕಾರ್ಯಗಳನು / ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ ಪ್ರಭಾವವನು
13 : ಶಾಶ್ವತವಾದುದು ನಿನ್ನ ರಾಜ್ಯವು / ಇರುವುದೆಂದಿಗು ನಿನ್ನ ಆಳ್ವಿಕೆಯು
22 : ಉಸುರುತಿದೆ ನನ್ನ ನಾಲಿಗೆ ಪ್ರಭುವಿನ ಸ್ತೋತ್ರವನು / ನರರೆಲ್ಲರು ಸ್ತುತಿಸಲಿ ಸತತ ಆತನ ಶ್ರೀನಾಮವನು
ಶುಭಸಂದೇಶ - ಯೊವಾನ್ನ 14: 27-31
27 : ನಾನು ಶಾಂತಿಸಮಾಧಾನವನ್ನು ನಿಮಗೆ ಬಿಟ್ಟು ಹೋಗುತ್ತೇನೆ; ನನ್ನ ಶಾಂತಿಸಮಾಧಾನವನ್ನು ನಿಮಗೆ ಕೊಡುತ್ತೇನೆ. ಈ ಲೋಕವು ಕೊಡುವ ರೀತಿಯಲ್ಲಿ ನಾನದನ್ನು ನಿಮಗೆ ಕೊಡುವುದಿಲ್ಲ. ನೀವು ಹೃದಯದಲ್ಲಿ ಕಳವಳಗೊಳ್ಳದಿರಿ, ಭಯಪಡಬೇಡಿ.
28 : ನಾನು ಹೊರಟು ಹೋಗುತ್ತೇನೆಂದೂ ಮತ್ತೆ ನಿಮ್ಮ ಬಳಿಗೆ ಬರುತ್ತೇನೆಂದೂ ನಾನು ಹೇಳಿದ್ದನ್ನು ನೀವು ಕೇಳಿದ್ದೀರಿ. ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ನಾನು ಪಿತನ ಬಳಿಗೆ ಹೋಗುತ್ತಿರುವುದನ್ನು ಕುರಿತು ಹಿಗ್ಗುತ್ತಿದ್ದಿರಿ. ಏಕೆಂದರೆ ಪಿತ ನನಗಿಂತಲೂ ಶ್ರೇಷ್ಠರು.
29 : ಇದೆಲ್ಲಾ ಈಡೇರುವಾಗ ನೀವು ವಿಶ್ವಾಸಿಸುವಂತೆ ಅದು ಈಡೇರುವುದಕ್ಕೆ ಮುಂಚೆಯೇ ನಿಮಗೆ ತಿಳಿಯಪಡಿಸಿದ್ದೇನೆ.
30 : ಇಹದ ಲೋಕಾಧಿಪತಿ ಬರುವ ಸಮಯವಾಯಿತು. ಇನ್ನು ಬಹಳ ಹೊತ್ತು ನಾನು ನಿಮ್ಮೊಡನೆ ಮಾತನಾಡಲು ಕಾಲಾವಕಾಶವಿಲ್ಲ. ನನ್ನ ಮೇಲೆ ಅವನಿಗೆ ಯಾವ ಅಧಿಕಾರವೂ ಇಲ್ಲ.
31 : ಆದರೆ ನಾನು ಪಿತನನ್ನು ಪ್ರೀತಿಸುತ್ತೇನೆಂಬುದನ್ನೂ ಅವರು ವಿಧಿಸಿದಂತೆಯೇ ಮಾಡುತ್ತೇನೆ ಎಂಬುದನ್ನೂ ಲೋಕವು ತಿಳಿಯಬೇಕು. ಏಳಿ, ಇಲ್ಲಿಂದ ಹೋಗೋಣ,” ಎಂದರು.
ಚಿಂತನೆ
ನಾವು ನಮ್ಮ ಪ್ರಸ್ತುತ ಕಾಲಘಟ್ಟವನ್ನು ಬಿಟ್ಟು ಕೆಲ ದಶಕಗಳ ಹಿಂದೆ ಜನರು ತಮ್ಮ ಮಕ್ಕಳಿಗೆ ಹೆಸರು ನಾಮಕರಣ ಮಾಡುವುದನ್ನು ಗಮನಿಸಿದರೆ, ಬಹಳಷ್ಟು ಮಂದಿಗೆ ಶಾಂತಿ ,ಶಾಂತಿ ಮೇರಿ, ಶಾಂತಲಾ, ಶಾಂತಕುಮಾರ್, ಶಾಂತರಾಜ್ ಹೀಗೆ ಶಾಂತಿಗೆ ಸಂಬಧಿಸಿದ ಹೆಸರುಗಳನ್ನು ಇಡುತ್ತಿದ್ದ
ವಿಷಯವನ್ನು ನಾವು ಗ್ರಹಿಸಬಹುದು. ಕಾರಣ ಆಗೆಲ್ಲ ಅವರ ಕುಟುಂಬಗಳಲ್ಲಿ ಶಾಂತಿ ನೆಲೆಸಿರುತಿತ್ತು. ಅವರೆಲ್ಲರೂ ಶಾಂತಿ ಮತ್ತು ಸಂಯಮದಿಂದ ವರ್ತಿಸುತ್ತಿದ್ದರು. ಶಾಂತಿ ಎಲ್ಲಿರುತ್ತದೊ ಅಲ್ಲಿ ಆತಂಕವಾಗಲಿ ಭಯವಾಗಲಿ ಇರುವುದಿಲ್ಲ. ಯೇಸುಸ್ವಾಮಿ ಪುನರುತ್ಥಾನದ ನಂತರ ಶಿಷ್ಯರನ್ನು ಭೇಟಿ ಮಾಡುವಾಗ ಪ್ರತಿಬಾರಿಯೂ ಶಾಂತಿ ನಿಮ್ಮೊಡನೆ ಇರಲಿ ಎಂದು ಹಾರೈಸುತ್ತಾರೆ. ಇದಕ್ಕೊಂದು ಕಾರಣವಿದೆ - ಪುನರುತ್ಥಾನದ ನಂತರ ಶಿಷ್ಯರು ಭಯಭೀತರಾಗಿದ್ದರು. ಯೆಹೂದಿ ಮುಖಂಡರು ತಮ್ಮನ್ನು ಏನಾದರು ಮಾಡುತ್ತಾರೆ ಎಂದು
ಅಂಜಿ ಸಭೆ ಸೇರುತ್ತಿದ್ದರು, ಮನೆಯೊಳಗೆ ಇದ್ದರು. ಅವರ ಮನಸ್ಸುಗಳು ವಿಚಲಿತಗೊಂಡಿದ್ದವು, ಅವರು ಕಳವಳಗೊಂಡಿದರು. ಇದನ್ನು ತಿಳಿದ ಯೇಸು ಸ್ವಾಮಿ ಅವರ ಮಧ್ಯ ಪ್ರಸನ್ನರದಾಗಲೆಲ್ಲ ಶಾಂತಿ ನಿಮ್ಮಲ್ಲಿರಲಿ ಎಂದು ಹಾರೈಸುತ್ತಾರೆ. ನಾವು ಕೂಡ ನಮ್ಮ ಜೀವನದಲ್ಲಿ ಅನೇಕ ತೊಂದರೆ ತೊಡಕುಗಳಿಗೆ ಬಲಿಯಾಗಿ ಚಿಂತಾಕ್ರಾಂತರಾUÀÄvÉÛÃವೆ. ನಮ್ಮ ಮಧ್ಯೆಯೂ ಪ್ರಭು ಬಂದು ಶಾಂತಿಯನ್ನು ಕೋರಲಿ. ನಮ್ಮ ಕುಟುಂಬಗಳು ಶಾಂತಿಯುತವಾಗಿಸಲೆಂದು ಪ್ರಭುವಿನಲ್ಲಿ ಪ್ರಾರ್ಥಿಸೋಣ .
ಆತ್ಮಾವಲೋಕನ-
1. ನಮ್ಮ ಹೃದಯದಲ್ಲಿ ಆತಂಕವಿದೆಯೇ?
2. ಯೇಸು ಸ್ವಾಮಿ ನಮ್ಮ ಮಧ್ಯೆ ಪ್ರಸನ್ನರಾದgÉ ನನ್ನನ್ನು ನೋಡಿ ಏನನ್ನು ಹಾರೈಸಬಹುದು?
- ಸಹೋ ವಿನಯ್ ಕುಮಾರ್
No comments:
Post a Comment