Thursday, 18 July 2019

ಸಾಧರಣ ಕಾಲದಹದಿನೈದನೇ ವಾರ ಶುಕ್ರವಾರ

19/ಹಸಿರು/  ಶುಕ್ರ/ ಸಾಧರಣ ಕಾಲದಹದಿನೈದನೇ ವಾರ
1ನೇ ವಾಚನ - ವಿಮೋ 11: 1೦-12: 14
ಕೀರ್ತನೆ - 116: 12-13, 15-18
ಶುಭಸಂದೇಶ - ಮತ್ತಾಯ 12: 1-8

1ನೇ ವಾಚನ - ವಿಮೋ 11: 1೦-12: 14 
10 : ಮೋಶೆ ಮತ್ತು ಆರೋನರು ಫರೋಹನ ಮುಂದೆ ಈ ಸೂಚಕಕಾರ್ಯಗಳನ್ನೆಲ್ಲಾ ಮಾಡಿದ್ದರೂ ಸರ್ವೇಶ್ವರ ಫರೋಹನ ಹೃದಯವನ್ನು ಕಲ್ಲಾಗಿಸಿದ್ದರು. ಅವನು ತನ್ನ ದೇಶವನ್ನು ಬಿಟ್ಟು ಹೊರಡುವುದಕ್ಕೆ ಇಸ್ರಯೇಲರಿಗೆ ಅಪ್ಪಣೆ ಕೊಡದೆ ಹೋದನು.
1 : ಈಜಿಪ್ಟ್ ದೇಶದಲ್ಲಿ ಸರ್ವೇಶ್ವರಸ್ವಾಮಿ ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ ಹೀಗೆಂದರು:
2 : “ಎಲ್ಲ ಮಾಸಗಳಲ್ಲಿ ಇದೇ ನಿಮಗೆ ಆದಿ ಮಾಸವಾಗಿರಬೇಕು. ಇದೇ ನಿಮಗೆ ಪ್ರತಿ ವರ್ಷದ ಮೊದಲನೆಯ ತಿಂಗಳಾಗಿರಬೇಕು.
3 : ಈ ವಿಷಯದಲ್ಲಿ ನೀವು ಇಸ್ರಯೇಲರ ಸಮಾಜಕ್ಕೆಲ್ಲ ಈ ರೀತಿ ಕಟ್ಟಳೆ ಇಡಬೇಕು: ‘ಈ ತಿಂಗಳ ಹತ್ತನೆಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊಂದು ಮನೆಯವರು ಒಂದೊಂದು ಕುರಿಮರಿಯನ್ನಾಗಲಿ, ಆಡುಮರಿಯನ್ನಾಗಲಿ ಆರಿಸಿಕೊಳ್ಳಬೇಕು
4 : ಕುಟುಂಬವು ಚಿಕ್ಕದಾಗಿದ್ದು ಒಂದು ಮರಿಯನ್ನು ಪೂರ್ತಿಯಾಗಿ ತಿನ್ನಲಾಗದಿದ್ದರೆ ಹತ್ತಿರದ ನೆರೆಮನೆಯ ಕುಟುಂಬದೊಂದಿಗೆ ಸೇರಿ ಒಬ್ಬೊಬ್ಬನು ಇಷ್ಟಿಷ್ಟು ತಿನ್ನುವನೆಂದು ಲೆಕ್ಕ ಹಾಕಿ ಜನಗಳ ಸಂಖ್ಯಾನುಸಾರ ಮರಿಗಳನ್ನು ಆರಿಸಿಕೊಳ್ಳಲಿ.
5 : ಆ ಮರಿಯು ಯಾವ ದೋಷವೂ ಇಲ್ಲದ ಒಂದು ವರ್ಷದ ಗಂಡಾಗಿರಬೇಕು. ಕುರಿಗಳಿಂದಾಗಲಿ ಆಡುಗಳಿಂದಾಗಲಿ ಅದನ್ನು ಆರಿಸಿಕೊಳ್ಳಬಹುದು.
6 : ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಂಡಿದ್ದು ಆ ದಿನದ ಸಂಜೆ ವೇಳೆಯಲ್ಲಿ ಇಸ್ರಯೇಲ್ ಸಮಾಜದವರೆಲ್ಲರು ತಮ್ಮ ತಮ್ಮ ಕೂಟಗಳಲ್ಲಿ ಕೊಯ್ಯಬೇಕು
7 : ಅವುಗಳ ರಕ್ತದಲ್ಲಿ ಸ್ವಲ್ಪ ತೆಗೆದು ತಾವು ಆ ಭೋಜನ ಮಾಡುವ ಮನೆಯ ಬಾಗಿಲಿನ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗೂ ಹಚ್ಚಬೇಕು.
8 : ಆ ರಾತ್ರಿಯಲ್ಲೇ ಆ ಮಾಂಸವನ್ನು ತಿನ್ನಬೇಕು. ಅದನ್ನು ಬೆಂಕಿಯಲ್ಲಿ ಸುಟ್ಟು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿ ಆದ ಪಲ್ಯಗಳ ಸಮೇತ ಊಟಮಾಡಬೇಕು.
9 : ಅದನ್ನು ಹಸಿಯಾಗಿಯೋ ಅಥವಾ ನೀರಿನಲ್ಲಿ ಬೇಯಿಸಿಯೋ ತಿನ್ನಕೂಡದು. ಅದನ್ನೆಲ್ಲಾ, ತಲೆ, ಕಾಲು, ಒಳ ಭಾಗಗಳ ಸಹಿತವಾಗಿ, ಬೆಂಕಿಯಲ್ಲಿ ಸುಟ್ಟೇ ತಿನ್ನಬೇಕು.
10 : ಮರುದಿನದ ಬೆಳಗಿನ ತನಕ ಅದರಲ್ಲಿ ಸ್ವಲ್ಪವನ್ನಾದರು ಮಿಗಿಸಕೂಡದು. ಬೆಳಗಿನವರೆಗೆ ಮಿಕ್ಕದ್ದನ್ನು ಬೆಂಕಿಯಿಂದ ಸುಟ್ಟು ಬಿಡಬೇಕು.
11 : ಆ ಭೋಜನವನ್ನು ಮಾಡಬೇಕಾದ ಕ್ರಮ ಇದು: ನೀವು ನಡುಕಟ್ಟಿಕೊಂಡು, ಕೆರಮೆಟ್ಟಿಕೊಂಡು ಊರುಗೋಲನ್ನು ಹಿಡಿದುಕೊಂಡು, ಬೇಗಬೇಗನೆ ಊಟ ಮಾಡಬೇಕು. ಏಕೆಂದರೆ ಅದು ಸರ್ವೇಶ್ವರಸ್ವಾಮಿಗೆ ಆಚರಿಸತಕ್ಕ ಪಾಸ್ಕಹಬ್ಬ.
12 : ‘ಆ ರಾತ್ರಿ ನಾನು ಈಜಿಪ್ಟ್ ದೇಶದ ನಡುವೆ ಹಾದು ಹೋಗುವೆನು; ಮನುಷ್ಯರಾಗಿ ಇರಲಿ, ಪ್ರಾಣಿಗಳಾಗಿರಲಿ ಚೊಚ್ಚಲಾದುದೆಲ್ಲವನ್ನು ಸಂಹರಿಸುವೆನು. ಈಜಿಪ್ಟ್ ದೇಶದ ಸಮಸ್ತ ದೇವತೆಗಳನ್ನೂ ದಂಡಿಸುವೆನು. ನಾನೇ ಸರ್ವೇಶ್ವರ!
13 : ನೀವು ಬಾಗಿಲಿಗೆ ಹಚ್ಚಿದ ಆ ರಕ್ತವು ನೀವಿರುವ ಮನೆಗಳನ್ನು ಸೂಚಿಸುವುದು. ಅದನ್ನು ಕಂಡು ನಿಮಗೆ ಯಾವ ಹಾನಿಯನ್ನು ಮಾಡದೆ ಮುಂದಕ್ಕೆ ದಾಟಿ ಹೋಗುವೆನು. ನಾನು ಈಜಿಪ್ಟಿನವರನ್ನು ಸಂಹರಿಸುವಾಗ ನಿಮಗೆ ಯಾವ ಕೇಡೂ ಆಗದು.
14 : ಆ ದಿನವು ನಿಮಗೆ ಸ್ಮರಣೀಯ ದಿನವಾಗಿರುವುದು. ಅಂದು ನೀವು ಸರ್ವೇಶ್ವರನ ಗೌರವಾರ್ಥ ಹಬ್ಬವನ್ನು ಕೊಂಡಾಡಬೇಕು. ಅದನ್ನು ಶಾಶ್ವತ ನಿಯಮವೆಂದು ತಲತಲಾಂತರಕ್ಕೂ ಆಚರಿಸಬೇಕು’.

ಕೀರ್ತನೆ - 116: 12-13, 15-18 
ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು
12 : ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ / ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ? //
13 : ಎತ್ತಿ ಹಿಡಿವೆನು ರಕ್ಷಣೆಯ ಪಾನಪಾತ್ರೆಯನು / ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು //
15 : ಪ್ರಭು ಅಲ್ಪವೆಂದೆಣಿಸನು / ತನ್ನ ಭಕ್ತರ ಮರಣವನು //
16 : ಹೇ ಪ್ರಭು, ಕರುಣಿಸು, ನಾ ನಿನ್ನ ಕಿಂಕರನು / ನಿನ್ನ ದಾಸಿಯ ಮಗನು, ನಿನ್ನ ಸೇವಕನು / ಬಿಡಿಸಿರುವೆ ನೀನು ನನ್ನ ಬಂಧನಗಳನು //
17 : ಅರ್ಪಿಸುವೆ ನಾ ನಿನಗೆ ಕೃತಜ್ಞತಾ ಬಲಿಗಳನು / ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು //
18 : ಹೇ ಜೆರುಸಲೇಮೇ, ನಿನ್ನ ಮಧ್ಯದೊಳು / ಆತನಿರುವ ಮಂದಿರದ ಅಂಗಳದೊಳು /

ಶುಭಸಂದೇಶ - ಮತ್ತಾಯ 12: 1-8
1 : ಒಂದು ಸಬ್ಬತ್ ದಿನ ಯೇಸುಸ್ವಾಮಿ ಗೋದಿಯ ಹೊಲಗಳನ್ನು ಹಾದು ಹೋಗುತ್ತಿದ್ದರು. ಅವರ ಸಂಗಡವಿದ್ದ ಶಿಷ್ಯರಿಗೆ ಹಸಿವಾಯಿತು. ಅವರು ಗೋದಿಯ ತೆನೆಗಳನ್ನು ಕಿತ್ತು ತಿನ್ನಲಾರಂಭಿಸಿದರು.
2 : ಇದನ್ನು ಕಂಡ ಫರಿಸಾಯರು, "ನೋಡು, ನೋಡು, ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ನಿಷಿದ್ಧವಾದುದನ್ನು ಮಾಡುತ್ತಿದ್ದಾರೆ," ಎಂದರು.
3 : ಅದಕ್ಕೆ ಯೇಸು, "ಹಿಂದೆ ಅರಸ ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಏನು ಮಾಡಿದರೆಂದು ನೀವು ಓದಿರಬೇಕಲ್ಲವೆ?
4 : ಅವನು ದೇವಮಂದಿರದೊಳಕ್ಕೆ ಹೋಗಿ ಯಾಜಕರ ಹೊರತು ತಾನೇ ಆಗಲಿ, ಸಂಗಡಿಗರೇ ಆಗಲಿ, ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತಿನ್ನಲಿಲ್ಲವೆ?
5 : ಇದಲ್ಲದೆ, ಪ್ರತಿಯೊಂದು ಸಬ್ಬತ್ ದಿನವೂ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನದ ನಿಯಮಗಳನ್ನು ಉಲ್ಲಂಘಿಸಿಯೂ ನಿರ್ದೋಷಿಗಳಾಗಿದ್ದಾರೆ. ಇದನ್ನು ನೀವು ಮೋಶೆಯ ಧರ್ಮಶಾಸ್ತ್ರದಲ್ಲಿ ಓದಿಲ್ಲವೆ?
6 : ದೇವಾಲಯಕ್ಕಿಂತಲೂ ಶ್ರೇಷ್ಠವಾದವನು ಇಲ್ಲಿದ್ದಾನೆಂಬುದು ನಿಮಗೆ ತಿಳಿದಿರಲಿ.
7 : ‘ನನಗೆ ಬೇಕಾದುದು ದಯೆ, ಯಜ್ಞ ಬಲಿಯಲ್ಲ’ ಎಂಬ ವಾಕ್ಯದ ಅರ್ಥ ನಿಮಗೆ ತಿಳಿದಿದ್ದರೆ, ನಿರ್ದೋಷಿಗಳನ್ನು ನೀವು ಖಂಡಿಸುತ್ತಿರಲಿಲ್ಲ.
8 : ಏಕೆಂದರೆ ನರಪುತ್ರನು ಸಬ್ಬತ್ತಿಗೆ ಒಡೆಯ," ಎಂದರು.

ಚಿಂತನೆ
ದಯೆಯೇ ಧರ್ಮದ ಮೂಲ 
ಆಂಟನಿ ಡಿಮೆಲ್ಲೊ ಎಂಬ ಪ್ರಖ್ಯಾತ ಲೇಖಕರು ತಮ್ಮ `ಟೇಕಿಂಗ್ ಫ್ಲೈಟ್' ಎಂಬ ಪುಸ್ತಕದಲ್ಲಿ ಈ ದೃಷ್ಟಾಂತವನ್ನು ಕೊಡುತ್ತಾರೆ: ಒಂದಾನೊಂದು ಕಾಲದಲ್ಲಿ ಅರಣ್ಯವೊಂದರಲ್ಲಿ ಹಗಲೊತ್ತು ಹಕ್ಕಿಗಳು ಚಿಲಿಪಿಲಿಗುಟ್ಟುತ್ತಾ ಹಾಡುತ್ತಿದ್ದವು. ರಾತ್ರಿಯ ಹೊತ್ತು ಹುಟುಹುಪ್ಪಟೆಗಳು, ಕ್ರಿಮಿಕೀಟಗಳು ಝೇಂಗುಡುತ್ತಿದ್ದವು. ಮರಗಿಡಬಳ್ಳಿಗಳು ಆ ಅರಣ್ಯದಲ್ಲಿ ನಳನಳಿಸುತ್ತಿದ್ದವು. ಹೂಗಳು ಅರಳುತ್ತಿದ್ದವು. ಮತ್ತು ಪ್ರಾಣಿಗಳೆಲ್ಲವೂ ಸ್ವತಂತ್ರವಾಗಿ ಓಡಾಡಿ ಜೀವಿಸುತ್ತಿದ್ದವು. ಅರಣ್ಯವನ್ನು ಪ್ರವೇಶಿಸಿದವರೆಲ್ಲರಿಗೂ ಆ ಪ್ರಶಾಂತ ವಾತಾವರಣದಲ್ಲಿ ಹುದುಗಿರುವ ದೇವರ ಅನುಭವವಾಗುತ್ತಿತ್ತು. ಆ ಸ್ವಾಭಾವಿಕ ಸೌಂದರ್ಯದ ಸ್ಥಾನ ದೇವರ ವಾಸಸ್ಥಾನವಾಗಿತ್ತು. 
ಆದರೆ ಆಧುನಿಕ ಯುಗದ ಆಗಮನವಾದಾಗ ಜನರಿಗೆ ಕ್ಷಣ ಮಾತ್ರದಲ್ಲಿ ಮರಗಳನ್ನು ಕಡಿದು, ಹರಿಯುತ್ತಿದ್ದ ಹಳ್ಳಕೊಳ್ಳ ತೊರೆಗಳಿಗೆ ಅಣೆಕಟ್ಟು ಕಟ್ಟಿ ಸಾವಿರಾರು ಅಡಿಗಳಷ್ಟೆತ್ತರದ ಕಟ್ಟಡಗಳನ್ನು ನಿರ್ಮಿಸಲು ಸಾಧ್ಯವಾಯಿತು. ಕಡಿದ ಮರಗಳಿಂದಲೂ, ಅರಣ್ಯದ ಮಣ್ಣಿನಡಿಯಲ್ಲಿದ್ದ ಕಲ್ಲುಗಳಿಂದಲೂ ದೇವಾಲಯಗಳನ್ನು ಕಟ್ಟಲಾಯಿತು. ದೇವಾಲಯದ ಗೋಪುರಗಳು ಆಕಾಶದೆಡೆಗೆ ಚಾಚಿದವು. ಗಾಳಿಯಲ್ಲೆಲ್ಲಾ ದೇವಾಲಯದ ಘಂಟೆಗಳ , ಪಠಿಸಿದ ಮಂತ್ರಗಳ, ಪ್ರಾರ್ಥನೆಯ ಹಾಡಿನ ಸ್ವರಗಳ ಸುಂದರ ನೀನಾದ. ಪರಿಣಾಮ? ದೇವರೊಂದು ಮನೆಯಿಲ್ಲದೆ ನಿರಾಶ್ರಿತರಾದರು!!! 

ಇಂದಿನ ಶುಭಸಂದೇಶದಲ್ಲಿ ಯೇಸು ನುಡಿಯುತ್ತಾರೆ, ನನಗೆ ಬೇಕಾಗಿರುವುದು ದಯೆ; ಯಜ್ಞ ಬಲಿಯಲ್ಲ. ಧರ್ಮಶಾಸ್ತ್ರದ ಸಂಕೋಲೆಯಲ್ಲಿ ಬಂಧಿತರಾಗಿದ್ದ ಫರಿಸಾಯರು ದಯೆ, ಕರುಣೆ, ಮಾನವೀಯತೆಗಳನ್ನು ಮರೆತುಬಿಟ್ಟಿದ್ದರು. ತಮ್ಮ ಸಂಕುಚಿತ ಮನೋಭಾವದಿಂದ ಹಳೇ ನಿಯಮದ ಮೌಲ್ಯವನ್ನೇ ಮುಸುಕುಗೊಳಿಸಿದ್ದರು. ಆದುದರಿಂದ ಯೆಹೂದ್ಯ ಧರ್ಮ ರುಚಿರಹಿತ ಉಪ್ಪಾಗಿತ್ತು. 
ಯೇಸು ಸಬ್ಬತ್ ದಿನದ ಆಚರಣೆಗೆ ಹೊಸ ಅರ್ಥ ಕೊಡುತ್ತಾರೆ. ಮನುಷ್ಯನಿರುವುದು ಸಬ್ಬತ್ಗೋಸ್ಕರವಲ್ಲ. ಕಟ್ಟಳೆಗಳು ಅಗತ್ಯ ನಿಜ. ಆದರೆ ಈ ಕಟ್ಟಳೆಗಳು ನಮ್ಮನ್ನು ಹೆಚ್ಚು ಹೆಚ್ಚು ಮಾನವೀಯರಾಗಿ ಮಾಡಬೇಕು. ಇಲ್ಲವಾದಲ್ಲಿ ಈ ಕಟ್ಟಳೆಗಳು ತಮ್ಮ ಉದ್ದೇಶವನ್ನೇ ಕಳೆದುಕೊಳ್ಳುತ್ತವೆ. ದಯೆ, ಮಾನವೀಯತೆಯೇ ಧರ್ಮದ ತಿರುಳು. ಫರಿಸಾಯರು ಇದನ್ನೇ ಮರೆತಿದ್ದರು. ನಾವು? 
ಪ್ರೀತಿ ಪ್ರೇಮ ಇಲ್ಲದಿದ್ದರೆ ಈ ಭೂಲೋಕ ಒಂದು ಗೋರಿಯಾಗುತ್ತದೆ. -ರಾಬರ್ಟ್ ಬ್ರೌನಿಂಗ್

No comments:

Post a Comment