13 ಹಸಿರು ಶನಿವಾರ ಸಾಧಾರಣ ಕಾಲದ ಹದಿನಾಲ್ಕನೇ ವಾರ
ಐಚ್ಛಿಕ ಸ್ಮರಣೆ - ಸಂತ ಹೆನ್ರಿ.
1ನೇ ವಾಚನ - ಆದಿ 49: 29-32, 5೦: 15-25
1ನೇ ವಾಚನ - ಆದಿ 49: 29-32, 5೦: 15-25
29 : ಯಕೋಬನು ತನ್ನ ಮಕ್ಕಳಿಗೆ ಕೊಟ್ಟ ಆಜ್ಞೆ ಇದು: “ನಾನು ನನ್ನ ದಿವಂಗತ ಪೂರ್ವಜರನ್ನು ಸೇರುವ ಕಾಲ ಸವಿೂಪಿಸಿತು. ಹಿತ್ತಿಯನಾದ ಎಫ್ರೋನನ ಭೂಮಿಯಲ್ಲಿರುವ ಗವಿಯೊಳಗೆ, ಪಿತೃಗಳ ಬಳಿಯಲ್ಲಿ ನನ್ನನ್ನು ಸಮಾಧಿಮಾಡಬೇಕು.
30 : ಆ ಗವಿ ಕಾನಾನ್ ನಾಡಿನ ಮಮ್ರೆಗೆದುರಾಗಿರುವ ಮಕ್ಬೇಲ ಎಂಬ ಬಯಲಿನಲ್ಲಿದೆ. ಅದನ್ನು ಅಬ್ರಹಾಮನು ಅದರ ಸುತ್ತಲಿರುವ ಭೂಮಿ ಸಹಿತ ಹಿತ್ತಿಯನಾದ ಎಫ್ರೋನನಿಂದ ಸ್ವಂತ ಸ್ಮಶಾನ ಭೂಮಿಗಾಗಿ ಕೊಂಡು ಕೊಂಡನು.
31 : ಅಲ್ಲೇ ಅಬ್ರಹಾಮನಿಗೂ ಅವನ ಪತ್ನಿ ಸಾರಳಿಗೂ ಸಮಾಧಿಯಾಯಿತು. ಅಲ್ಲೇ ಇಸಾಕನಿಗೂ ಅವನ ಮಡದಿ ರೆಬೆಕ್ಕಳಿಗೂ ಸಮಾಧಿ ಆಯಿತು. ಲೇಯಳನ್ನೂ ನಾನು ಅಲ್ಲಿ ಸಮಾಧಿ ಮಾಡಿದ್ದೇನೆ.
32 : ಹೊಲದ ಸಮೇತ ಹಿತ್ತಿಯರಿಂದ ಕ್ರಯಕ್ಕೆ ಕೊಂಡುಕೊಂಡ ಆ ಗವಿಯೊಳಗೆ ನನಗೂ ಸಮಾಧಿಯಾಗಲಿ,” ಎಂದನು.
33 : ಮಕ್ಕಳಿಗೆ ಈ ಆಜ್ಞೆಯನ್ನು ಕೊಟ್ಟು ಮುಗಿಸಿದನಂತರ ಯಕೋಬನು ಹಾಸಿಗೆಯಲ್ಲಿ ತನ್ನ ಕಾಲುಗಳನ್ನು ಮಡಚಿಕೊಂಡು ಪ್ರಾಣಬಿಟ್ಟು, ಮೃತರಾದ ಪಿತೃಗಳ ಬಳಿಗೆ ಸೇರಿದನು.
15 : ತಂದೆ ಸತ್ತ ಬಳಿಕ ಜೋಸೆಫನ ಅಣ್ಣತಮ್ಮಂದಿರು, “ಜೋಸೆಫನು ಬಹುಶಃ ನಮ್ಮನ್ನು ದ್ವೇಷಿಸಿಯಾನು! ನಾವು ಅವನಿಗೆ ಮಾಡಿದ ಎಲ್ಲ ಹಾನಿಗೆ ಪ್ರತಿಯಾಗಿ ಶಿಕ್ಷಿಸಿಯಾನು,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
16 : ಆದುದರಿಂದ ಜೋಸೆಫನಿಗೆ ಹೀಗೆಂದು ಹೇಳಿಕಳಿಸಿದರು: “ನಿನ್ನ ತಂದೆ ಸಾಯುವುದಕ್ಕೆ ಮುಂಚೆ ನಮಗೆ ಅಪ್ಪಣೆಮಾಡಿದ್ದೇನೆಂದರೆ -
17 : ‘ನೀವು ಜೋಸೆಫನಿಗೆ - ನಿನ್ನ ಅಣ್ಣಂದಿರಾದ ನಾವು ನಿನಗೆ ಹಾನಿಮಾಡಿದ್ದೇನೋ ನಿಜ; ಆದರೂ ನಮ್ಮ ಅಪರಾಧವನ್ನು, ಪಾಪವನ್ನು ಕ್ಷಮಿಸು - ಎಂದು ಕೇಳಿಕೊಳ್ಳಬೇಕು.’ ಅವರು ಹೀಗೆ ವಿಧಿಸಿದ್ದರಿಂದ ನಾವು ಮಾಡಿದ ಅಪರಾಧವನ್ನು ಈಗ ನೀನು ಕ್ಷಮಿಸಬೇಕೆಂದು ಬೇಡಿಕೊಳ್ಳುತ್ತಿದ್ದೇವೆ.” ಈ ಮಾತುಗಳನ್ನು ಕೇಳಿ ಜೋಸೆಫನು ಕಣ್ಣೀರು ಸುರಿಸಿದನು.
18 : ಇದೂ ಅಲ್ಲದೆ, ಅಣ್ಣಂದಿರು ತಾವೇ ಬಂದು ಅವನಿಗೆ ಅಡ್ಡಬಿದ್ದರು. “ಇಗೋ ನಾವು ನಿನಗೆ ಗುಲಾಮರು,” ಎಂದು ಹೇಳಿದರು.
19 : ಆದರೆ ಜೋಸೆಫನು ಅವರಿಗೆ, “ಹೆದರಬೇಡಿ; ನಾನು ದೇವರ ಸ್ಥಾನದಲ್ಲಿ ಇಲ್ಲ;
20 : ನೀವೇನೋ ನನಗೆ ಹಾನಿಮಾಡಬೇಕೆಂದು ಎಣಿಸಿದಿರಿ. ಆದರೆ ದೇವರು ಒಳಿತಾಗಬೇಕೆಂದು ಸಂಕಲ್ಪಿಸಿದರು; ಇದರಿಂದ ಅನೇಕ ಜನರ ಪ್ರಾಣ ಉಳಿಯುವಂತೆ ಮಾಡಿದರು. ಇಂದಿಗೂ ಈ ಕಾರ್ಯ ನಡೆಯುತ್ತಿದೆ.
21 : ಆದುದರಿಂದ ನೀವು ಸ್ವಲ್ಪವೂ ಸಂಕೋಚಪಡಬೇಕಾಗಿಲ್ಲ. ನಾನು ನಿಮ್ಮನ್ನೂ ನಿಮಗೆ ಸೇರಿದೆ ಎಲ್ಲರನ್ನೂ ಪೋಷಿಸುತ್ತೇನೆ,” ಎಂದು ಹೇಳಿ ಅವರನ್ನು ಸಂತೈಸಿ, ಅವರ ಸಂಗಡ ಪ್ರೀತಿಯಿಂದ ಮಾತಾಡಿದನು.
22 : ಜೋಸೆಫನೂ ಅವನ ತಂದೆಯ ಕುಟುಂಬದವರೂ ಈಜಿಪ್ಟಿನಲ್ಲಿ ವಾಸಮಾಡುತ್ತಾ ಬಂದರು. ಜೋಸೆಫನು ನೂರಹತ್ತು ವರ್ಷ ಬದುಕಿದ್ದನು;
23 : ಎಫ್ರಯಿಮನ ಮಕ್ಕಳ ಮೊಮ್ಮಕ್ಕಳನ್ನೂ ನೋಡಿದನು. ಮನಸ್ಸೆಯ ಮಗನಾದ ಮಾಕೀರನಿಗೂ ಮಕ್ಕಳು ಹುಟ್ಟಿದಾಗ ಜೋಸೆಫನು ಅವರನ್ನೂ ತನ್ನ ಮಡಲಿಗೆ ಬರಮಾಡಿಕೊಂಡನು.
24 : ಜೋಸೆಫನು ತನ್ನ ಅಣ್ಣ ತಮ್ಮಂದಿರಿಗೆ, “ನನ್ನ ಮರಣಕಾಲವು ಸವಿೂಪಿಸಿತು. ಆದರೆ ದೇವರು ನಿಶ್ಚಯವಾಗಿ ನಿಮ್ಮನ್ನು ಕಾಪಾಡಲು ಬರುವರು; ತಾವು ಅಬ್ರಹಾಮ್, ಇಸಾಕ್, ಯಕೋಬರಿಗೆ ಕೊಡುವುದಾಗಿ ವಾಗ್ದಾನಮಾಡಿರುವ ನಾಡಿಗೆ ನೀವು ಹೋಗಿ ಸೇರುವಂತೆ ಮಾಡುವರು,” ಎಂದು ಹೇಳಿದನು.
25 : ಇದೂ ಅಲ್ಲದೆ ಜೋಸೆಫನು ಆ ಇಸ್ರಯೇಲನ ಮಕ್ಕಳಿಗೆ, “ದೇವರು ನಿಸ್ಸಂದೇಹವಾಗಿ ನಿಮ್ಮನ್ನು ಕಾಪಾಡಲು ಬರುವರು; ಆಗ ನೀವು ನನ್ನ ಶವವನ್ನು ನಿಮ್ಮ ಸಂಗಡ ಹೊತ್ತುಕೊಂಡು ಹೋಗಬೇಕು,” ಎಂದು ಹೇಳಿ, “ಹಾಗೆಯೇ ಮಾಡುತ್ತೇನೆ,” ಎಂಬುದಾಗಿ ಅವರಿಂದ ಪ್ರಮಾಣ ಮಾಡಿಸಿದನು.
ಕೀರ್ತನೆ - 1೦5: 1-4, 6-7
1 : ಸಲ್ಲಿಸಿ ಪ್ರಭುವಿಗೆ ಕೃತಜ್ಞತಾಸ್ತೋತ್ರವನು / ಮಾಡಿರಿ ಆತನ ನಾಮಸ್ಮರಣೆಯನು / ಸಾರಿರಿ ಜಗಕೆ ಆತನ ಸತ್ಕಾರ್ಯಗಳನು //
2 : ಹಾಡಿ ಪಾಡಿ ಹೊಗಳಿರಿ ಪ್ರಭುವನು / ಧ್ಯಾನಿಸಿ ನೀವು ಆತನ ಪವಾಡಗಳನು //
3 : ಹೆಮ್ಮೆಪಡಿ, ನೆನೆದಾತನ ಶ್ರೀನಾಮ / ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ //
4 : ಅರಸಿರಿ ಪ್ರಭುವನೂ ಆತನ ಶಕ್ತಿಯನೂ / ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು //
6 : ನೆನೆಯಿರಿ ಆತನದ್ಭುತಗಳನು, ಮಹತ್ಕಾರ್ಯಗಳನು / ಆತನ ವದನ ವಿಧಿಸಿದಾ ನ್ಯಾಯನಿರ್ಣಯಗಳನು //
7 : ಪ್ರಭು ನಮ್ಮ ದೇವನೆಂಬುದು ಶ್ರುತ / ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ //
ಶುಭಸಂದೇಶ - ಮತ್ತಾಯ 1೦: 24-33.
24 : ಗುರುವಿಗಿಂತ ಶಿಷ್ಯನು ಶ್ರೇಷ್ಟನಲ್ಲ; ದಾಸನು ದಣಿಗಿಂತ ದೊಡ್ಡವನಲ್ಲ.
25 : ಗುರುವಿನಂತೆ ಶಿಷ್ಯನೂ ದಣಿಯಂತೆ ದಾಸನೂ ಆದರೆ ಸಾಕು. ಮನೆಯ ಯಜಮಾನನನ್ನೇ ‘ಬೆಲ್ಜಬೂಲ್’ ಎಂದು ಕರೆದಿರುವಾಗ ಅವನ ಮನೆಯವರನ್ನು ಇನ್ನೆಷ್ಟು ಅವಹೇಳನ ಮಾಡಲಾರರು?"
26 : "ಜನರಿಗೆ ಭಯಪಡಬೇಡಿ. ಮುಚ್ಚುಮರೆ ಆಗಿರುವುದೆಲ್ಲ ಬಟ್ಟಬಯಲಾಗುವುದು. ಗುಟ್ಟಾಗಿ ಇರುವುದೆಲ್ಲ ರಟ್ಟಾಗುವುದು.
27 : ನಾನು ಕತ್ತಲಲ್ಲಿ ಹೇಳುವುದನ್ನು ನೀವು ಬೆಳಕಿನಲ್ಲಿ ಪ್ರಚುರ ಪಡಿಸಿರಿ. ಕಿವಿಮಾತಾಗಿ ಕೇಳಿದ್ದನ್ನು ಮನೆ ಮಾಳಿಗೆಯ ಮೇಲೆ ನಿಂತು ಸಾರಿರಿ.
28 : ದೇಹವನ್ನು ಕೊಂದು ಹಾಕುವವರಿಗೆ ಭಯಪಡಬೇಡಿ; ಏಕೆಂದರೆ, ಅವರಿಂದ ಆತ್ಮವನ್ನು ಕೊಲ್ಲಲು ಆಗದು. ಆದರೆ ದೇಹಾತ್ಮಗಳೆರಡನ್ನೂ ನರಕದಲ್ಲಿ ನಾಶಮಾಡಬಲ್ಲ ದೇವರಿಗೆ ಭಯಪಡಿ.
29 : ಒಂದು ಕಾಸಿಗೆ ಎರಡು ಗುಬ್ಬಚ್ಚಿಗಳನ್ನು ಮಾರುವುದಿಲ್ಲವೆ? ಆದರೂ ಅವುಗಳಲ್ಲಿ ಒಂದಾದರೂ ನಿಮ್ಮ ತಂದೆಯ ಅನುಮತಿಯಿಲ್ಲದೆ ನೆಲಕ್ಕೆ ಬೀಳುವುದಿಲ್ಲ.
30 : ಅಲ್ಲದೆ ನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ.
31 : ಆದುದರಿಂದ ಭಯಪಡಬೇಡಿ; ಅನೇಕ ಗುಬ್ಬಚ್ಚಿಗಳಿಗಿಂತ ನೀವು ಎಷ್ಟೋ ಮೌಲ್ಯವುಳ್ಳವರು.
32 : "ಜನರ ಮುಂದೆ, ತಾನು ನನ್ನವನೆಂದು ಬಹಿರಂಗವಾಗಿ ಒಪ್ಪಿಕೊಳ್ಳುವ ಪ್ರತಿಯೊಬ್ಬನನ್ನು ನಾನು ಸಹ ಸ್ವರ್ಗದಲ್ಲಿರುವ ನನ್ನ ಪಿತನ ಮುಂದೆ ನನ್ನವನೆಂದು ಒಪ್ಪಿಕೊಳ್ಳುತ್ತೇನೆ.
33 : ಆದರೆ ಯಾವನಾದರೂ ತಾನು ನನ್ನವನಲ್ಲ ಎಂದು ಜನರ ಮುಂದೆ ಬಹಿರಂಗವಾಗಿ ನಿರಾಕರಿಸಿದರೆ, ಅಂಥವನನ್ನು ನಾನು ಸಹ ಸ್ವರ್ಗದಲ್ಲಿರುವ ನನ್ನ ಪಿತನ ಮುಂದೆ ನನ್ನವನಲ್ಲವೆಂದು ನಿರಾಕರಿಸುತ್ತೇನೆ.
ಇಂದಿನ ಶುಭಸಂದೇಶದಲ್ಲಿ ದಣಿಗಿಂತ ದಾಸನು ದೊಡ್ಡವನಲ್ಲ
ಎಂಬ ಹೇಳಿಕೆಯ ಮೂಲಕ ಜೀವಕೊಟ್ಟ ದೇವರಿಗಿಂತ ಮನುಷ್ಯನು ಹೆಚ್ಚೇನಲ್ಲ’ ಎಂದು ತಿಳಿಸುತ್ತಾರೆ. ಇದರಲ್ಲಿ ನಾವು ಅನೇಕ ಪಾಠ ಕಲಿಯಬಹುದು. ಹಾಗೆಯೇ
ಯೇಸು ’ಆತ್ಮದೊಡೆಯನಾದ ದೇವರಿಗೆ ಭಯಪಡಿ, ಆದರೆ ಮನುಜರಿಗಲ್ಲ” ಎಂಬ ಹಿತವಚನವನ್ನು ನೀಡುತ್ತಾರೆ. ದೈವಚಿತ್ತ ನಿರ್ಭಯದಿಂದ ಕೂಡಿದ್ದು ಯಾವುದೇ ಮುಚ್ಚುಮರೆಯಿಲ್ಲದೆ ಸತ್ಯತೆಯನ್ನು ಮನೆಯ ಮಾಳಿಗೆಯಿಂದ
ಸಾರುತ್ತದೆ ಎನ್ನುತ್ತಾರೆ. ಹೀಗೆ ’ಗುಟ್ಟಾಗಿರುವುದು ರಟ್ಟಾಗುವುದು ಕೇಳೋ
ಮನುಜ’ ಎಂದು ಉಪದೇಶಿಸುತ್ತಾರೆ. ಇಂದಿನ ಭ್ರಷ್ಟಾಚಾರ ಮತ್ತು ಅಸತ್ಯತೆಯ ಕಾಲದಲ್ಲಿ ನಾವೆಷ್ಟು
ಸತ್ಯತೆಯನ್ನು ಸಾರುತ್ತಿದ್ದೇವೆ ಎಂಬುದನ್ನು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ. ಈ ಜೀವ ಕೊಟ್ಟ ದೇವರಿಗೆ ತಿಳಿಯಲಾದುದು ಯಾವುದೂ ಇಲ್ಲ. ನಮ್ಮ ಪ್ರತಿ ಯೋಚನೆಗಳು, ಕಾರ್ಯಗಳು, ಏಕೆ ನಮ್ಮ ತಲೆಗೂದಲು ಸಹ ದೇವರ ಕಣ್ಸನ್ನೆಯಿಂದ ತಪ್ಪಿಸಿಕೊಳ್ಳಲಾಗದು ಎಂಬುದರಲ್ಲಿ ದೇವರಿಗೆ
ನಮ್ಮಲ್ಲಿರುವ ಪ್ರೀತಿ ಅಪಾರವೆಂದು ತೋರಿಸಿಕೊಡುತ್ತದೆ. ಈ ಅಪಾರ ದೈವ ಪ್ರೀತಿಯನ್ನು ಒಪ್ಪಿದರೆ ದೇವರು ನಮ್ಮನ್ನು ಸಹ ದೇವರ
ಮಕ್ಕಳೆಂದು ಒಪ್ಪಿಕೊಳ್ಳಲು ಹಿಂಜರಿಯುವುದಿಲ್ಲ.
No comments:
Post a Comment