ಸಾಧಾರಣ ಕಾಲದ ಹದಿನೆಂಟನೇ ವಾರ ಮಂಗಳವಾರ
6/ಬಿಳಿ/ಮಂಗಳ/ಯೇಸುಸ್ವಾಮಿಯ ರೂಪಾಂತರದಹಬ್ಬ.
1ನೇ ವಾಚನ-ದಾನಿ 7: 9-1೦, 13-14
ಕೀರ್ತನೆ - 97: 1-2, 5-6, 9
2ನೇ ವಾಚನ - 2 ಪೇತ್ರ 1: 16-19
ಶುಭಸಂದೇಶ - ಲೂಕ 9: 28-36
1ನೇ ವಾಚನ-ದಾನಿ 7: 9-1೦, 13-14
6/ಬಿಳಿ/ಮಂಗಳ/ಯೇಸುಸ್ವಾಮಿಯ ರೂಪಾಂತರದಹಬ್ಬ.
1ನೇ ವಾಚನ-ದಾನಿ 7: 9-1೦, 13-14
ಕೀರ್ತನೆ - 97: 1-2, 5-6, 9
2ನೇ ವಾಚನ - 2 ಪೇತ್ರ 1: 16-19
ಶುಭಸಂದೇಶ - ಲೂಕ 9: 28-36
1ನೇ ವಾಚನ-ದಾನಿ 7: 9-1೦, 13-14
ನಾನು ನೋಡುತ್ತಿದ್ದ ಹಾಗೆ: ಸಿಂಹಾಸನಗಳನ್ನು ಹಾಕಲಾಯಿತು. ಮಹಾವೃದ್ಧನೊಬ್ಬನು ಆಸೀನನಾದನು. ಆತನ ಉಡುಪು ಬೆಳ್ಳಗಿತ್ತು ಹಿಮದಂತೆ. ಆತನ ತಲೆಗೂದಲಿತ್ತು ನಿರ್ಮಲವಾದ ಬಿಳಿಯ ಉಣ್ಣೆಯಂತೆ. ಆತನ ಸಿಂಹಾಸನ ಅಗ್ನಿಜ್ವಾಲೆಗಳು. ಧಗಧಗಿಸುವ ಬೆಂಕಿ ಅದರ ಚಕ್ರಗಳು. ಆ ಸಿಂಹಾಸನದ ಸಮ್ಮುಖದಿಂದ ಪ್ರಜ್ವಲ ಪ್ರವಾಹವೊಂದು ಉಕ್ಕಿ ಹರಿದು ಬಂದಿತು. ಲಕ್ಷೋಪಲಕ್ಷ ದೂತರು ಆತನಿಗೆ ಸೇವೆ ಸಲ್ಲಿಸುತ್ತಿದ್ದರು. ಕೋಟ್ಯಾನುಕೋಟಿ ಕಿಂಕರರು ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ತೀರ್ಪು ನೀಡಲು ಕುಳಿತುಕೊಂಡರು. ಪಟ್ಟಿ ಪುಸ್ತಕಗಳನ್ನು ತೆರೆಯಲಾಯಿತು. ನಾನು ಕಂಡ ರಾತ್ರಿಯ ಕನಸಿನಲ್ಲಿ ನರಪುತ್ರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ಧನನ್ನು ಸಮೀಪಿಸಿದನು. ಅವನನ್ನು ಆತನ ಸನ್ನಿಧಿಗೆ ತಂದರು. ಸಕಲ ರಾಷ್ಟ್ರ-ಕುಲ-ಭಾಷೆಗಳವರು ಅವನಿಗೆ ಸೇವೆ ಸಲ್ಲಿಸಲೆಂದು ಅವನಿಗೆ ದೊರೆತನ, ಘನತೆ, ರಾಜ್ಯತ್ವ ಇವುಗಳನ್ನು ಕೊಡಲಾಯಿತು. ಅವನ ಆಳ್ವಿಕೆಗೆ ಅಂತ್ಯವಿಲ್ಲ, ಅದು ಶಾಶ್ವತವಾದುದು, ಅವನ ರಾಜ್ಯ ಎಂದಿಗೂ ಅಳಿಯದು!
ಕೀರ್ತನೆ - 97: 1-2, 5-6, 9
1 : ಇದೆ ಪ್ರಭುವಿನ ಕೈಯಲಿ ರಾಜ್ಯಾಧಿಕಾರ / ಉಲ್ಲಾಸಿಸಲಿ ಧರಣಿಮಂಡಲದಾದ್ಯಂತ / ಸಂತೋಷಿಸಲಿ ಕಡಲಿನ ದ್ವೀಪಗಳೆಲ್ಲ //
2 : ಇವೇ ಮುಗಿಲೂ ಕಾರ್ಮುಗಿಲೂ ಆತನ ಸುತ್ತಲು / ನ್ಯಾಯ-ನೀತಿ ಆತನ ಗದ್ದುಗೆಯಸ್ತಿವಾರಗಳು //
5 : ಸಾರ್ವಭೌಮನಾದ ಪ್ರಭುವಿನ ಮುಂದೆ / ಕರಗುತ್ತವೆ ಬೆಟ್ಟಗುಡ್ಡಗಳು ಮೇಣದಂತೆ //
6 : ಘೋಷಿಸುತ್ತದೆ ಗಗನಮಂಡಲ ಆತನ ನೀತಿಯನು / ಕಾಣುತ್ತವೆ ಸಕಲ ಜನಾಂಗ ಆತನ ಮಹಿಮೆಯನು //
9 : ಸರ್ವಾಧಿಕಾರಿ ನೀನು ಲೋಕಕ್ಕೆಲ್ಲಾ / ಮಹೋನ್ನತನು ನೀನು ದೇವರುಗಳಿಗೆಲ್ಲಾ //
2ನೇ ವಾಚನ - 2 ಪೇತ್ರ 1: 16-19
ಕ್ರಿಸ್ತ ಮಹಿಮೆಯನ್ನು ಕಂಡವರ ಸಾಕ್ಷ್ಯ ನಮ್ಮ ಪ್ರಭು ಯೇಸುಕ್ರಿಸ್ತರ ಶಕ್ತಿ ಸಾಮಥ್ರ್ಯವನ್ನು ಮತ್ತು ಅವರ ಪುನರಾಗಮನವನ್ನು ನಿಮಗೆ ತಿಳಿಯಪಡಿಸುವಾಗ ಚಮತ್ಕಾರದಿಂದ ಕಲ್ಪಿಸಿದ ಕಟ್ಟುಕತೆಗಳನ್ನು ಆಧರಿಸಿ ನಾವು ಮಾತನಾಡಲಿಲ್ಲ. ನಾವೇ ಅವರ ಮಹತ್ತನ್ನು ಕಣ್ಣಾರೆಕಂಡು ಅದನ್ನು ತಿಳಿಯಪಡಿಸಿದ್ದೇವೆ. ತಂದೆಯಾದ ದೇವರಿಂದ ಅವರು ಗೌರವವನ್ನೂ ಮಹಿಮೆಯನ್ನೂ ಪಡೆದಾಗ, “ಈತನು ನನ್ನ ಪುತ್ರ, ನನಗೆ ಪ್ರಿಯನಾದವನು; ನನ್ನ ಅಪಾರ ಮೆಚ್ಚುಗೆಗೆ ಪಾತ್ರನು,” ಎಂದು ಅವರನ್ನು ಕುರಿತೇ ವಾಣಿಯೊಂದು ಮಹೋನ್ನತ ವೈಭವದಿಂದ ಕೇಳಿಬಂದಿತು. ಆಗ ನಾವು ಆ ಪುನೀತ ಪರ್ವತದ ಮೇಲೆ ಅವರೊಡನೆ ಇದ್ದೆವು; ಸ್ವರ್ಗದಿಂದ ಆ ವಾಣಿಯನ್ನು ನಾವು ಕೇಳಿದೆವು. ಆದ್ದರಿಂದ ಪ್ರವಾದನೆಯ ಸಂದೇಶವು ನಮಗೆ ಮತ್ತಷ್ಟು ಖಚಿತವಾಗಿ ಗೊತ್ತಾಗಿದೆ. ಇದನ್ನು ನೀವು ಕತ್ತಲಲ್ಲಿ ಬೆಳಗುವ ದೀಪವೆಂದು ಪರಿಗಣಿಸಿ ಲಕ್ಷ್ಯಕೊಟ್ಟರೆ ಒಳ್ಳೆಯದು. ನಿಮ್ಮ ಹೃದಯದಲ್ಲಿ ಬೆಳಕು ಹರಿದು ಅರುಣೋದಯದ ನಕ್ಷತ್ರವು ಮೂಡುವವರೆಗೂ ಈ ದೀಪವು ಬೆಳಗುತ್ತಿರುತ್ತದೆ.
ಶುಭಸಂದೇಶ - ಲೂಕ 9: 28-36
ಇದನ್ನೆಲ್ಲ ಹೇಳಿ ಸುಮಾರು ಎಂಟು ದಿನಗಳಾದ ಬಳಿಕ ಪೇತ್ರ, ಯೊವಾನ್ನ ಮತ್ತು ಯಕೋಬ ಇವರನ್ನು ತಮ್ಮೊಡನೆ ಕರೆದುಕೊಂಡು ಯೇಸುಸ್ವಾಮಿ ಪ್ರಾರ್ಥನೆಮಾಡಲು ಬೆಟ್ಟವನ್ನು ಹತ್ತಿದರು. ಪ್ರಾರ್ಥನೆಮಾಡುವ ಸಮಯದಲ್ಲಿ ಯೇಸುವಿನ ಮುಖಚರ್ಯೆಯು ಮಾರ್ಪಟ್ಟಿತು. ಅವರ ಉಡುಪು ಬೆಳ್ಳಗೆ ಪ್ರಜ್ವಲಿಸಿತು. ಇದ್ದಕಿದ್ದ ಹಾಗೆ ಮೋಶೆ ಮತ್ತು ಎಲೀಯ ಎಂಬ ಇಬ್ಬರು ಪ್ರವಾದಿಗಳು ಅವರೊಡನೆ ಮಾತನಾಡುತ್ತಿದ್ದರು. ದಿವ್ಯ ವೈಭವದಿಂದ ಕಂಗೊಳಿಸುತ್ತಿದ್ದ ಇವರಿಬ್ಬರು ಯೇಸು ಜೆರುಸಲೇಮಿನಲ್ಲಿ ಪ್ರಾಣತ್ಯಾಗಮಾಡಿ ದೈವೇಚ್ಛೆಯನ್ನು ನೆರವೇರಿಸಲಿದ್ದ ವಿಷಯವಾಗಿ ಸಂಭಾಷಿಸುತ್ತಿದ್ದರು. ಗಾಢ ನಿದ್ರೆಯಲ್ಲಿದ್ದ ಪೇತ್ರ ಮತ್ತು ಸಂಗಡಿಗರು ಎಚ್ಚೆತ್ತಾಗ ಯೇಸುವಿನ ಮಹಿಮೆಯನ್ನೂ ಅವರೊಡನೆ ನಿಂತಿದ್ದ ಆ ಇಬ್ಬರನ್ನೂ ಕಂಡರು.
ಅವರಿಬ್ಬರೂ ಯೇಸುವನ್ನು ಬಿಟ್ಟುಹೋಗುತ್ತಿರುವಾಗ, ಪೇತ್ರನು ಯೇಸುವಿಗೆ, “ಗುರುದೇವಾ, ನಾವು ಇಲ್ಲೇ ಇರುವುದು ಒಳ್ಳೆಯದು; ಅಪ್ಪಣೆಯಾಗಲಿ, ಮೂರು ಗುಡಾರಗಳನ್ನು ಕಟ್ಟುವೆವು - ತಮಗೊಂದು, ಮೋಶೆಗೊಂದು ಮತ್ತು ಎಲೀಯನಿಗೊಂದು,” ಎಂದನು. ತಾನು ಏನು ಹೇಳುತ್ತಿರುವೆನೆಂದೇ ಪೇತ್ರನು ಗ್ರಹಿಸಲಿಲ್ಲ. ಆತನು ಇದನ್ನು ಹೇಳುತ್ತಿದ್ದ ಹಾಗೆ ಮೇಘವೊಂದು ಬಂದು ಅವರನ್ನಾವರಿಸಿತು. ಆ ಮೇಘದಲ್ಲಿ ಅವರು ಅದೃಶ್ಯರಾದಾಗ ಶಿಷ್ಯರು ದಿಗಿಲುಗೊಂಡರು. ಅದರೊಳಗಿಂದ, “ಈತನು ನನ್ನ ಪುತ್ರನು; ನಾನು ಆರಿಸಿಕೊಂಡವನು. ಈತನ ಮಾತಿಗೆ ಕಿವಿಕೊಡಿರಿ,” ಎಂಬ ವಾಣಿ ಕೇಳಿಸಿತು. ಆ ವಾಣಿ ಆದಮೇಲೆ ಕಾಣಿಸಿಕೊಂಡವರು ಯೇಸು ಮಾತ್ರ. ಶಿಷ್ಯರು ತಾವು ನೋಡಿದ್ದನ್ನು ಕುರಿತು ಆ ದಿನಗಳಲ್ಲಿ ಏನನ್ನೂ ಹೇಳದೆ, ಯಾರಿಗೂ ತಿಳಿಸದೆ, ತತ್ಕಾಲ ಮೌನದಿಂದ ಇದ್ದರು. ದೆವ್ವ ಹಿಡಿದ ಬಾಲಕನಿಗೆ ಬಿಡುಗಡೆ.
ಚಿಂತನೆ:
ಪುನರುತ್ಥಾನವಿಲ್ಲದ ಕ್ರೈಸ್ತಧರ್ಮ ಇರಬಹುದೇನೋ ಆದರೆ ಶಿಲುಬೆಯಿಲ್ಲದ ಕ್ರೈಸ್ತಧರ್ಮ ಇರಲು ಸಾಧ್ಯವಿಲ್ಲ. ಯೇಸುಕ್ರಿಸ್ತರ ರೂಪಾಂತರವು ಅವರ ಶಿಲುಬೆ, ಮರಣ ಮತ್ತು ಪುನರುತ್ಥಾನದ ಮುನ್ಸೂಚನೆ. ಈ ಘಟನೆಯಿಂದ ಪ್ರಭು ಯೇಸುವೇ ಲೋಕ ರಕ್ಷಕರು ಎಂದು ಶಿಷ್ಯರು ಅರಿಯುತ್ತಾರೆ ಮತ್ತು ತಮ್ಮ ಭ್ರಮಲೋಕದಿಂದ ವಾಸ್ತವಕ್ಕೆ ಬರುತ್ತಾರೆ. " ಈತನು ತನ್ನ ಪುತ್ರನು ನನಗೆ ಪರಮ ಪ್ರಿಯನು" ಎಂಬ ವಾಣಿ ಶಿಷ್ಯರಲ್ಲಿ ವಿಶ್ವಾಸ, ಭರವಸೆಯನ್ನು ಮೂಡಿಸುವುದರೊಂದಿಗೆ ಶಿಲುಬೆ ಬದುಕಿನ ಒಂದು ಭಾಗ ಎಂದು ಮನದಟ್ಟು ಮಾಡುತ್ತೆ. ಇಂದು ಯೇಸು ರೂಪಾಂತರಗೊಂಡಂತೆ ನಮ್ಮ ಬದುಕು ಭಾವ ರೂಪಾಂತರಗೊಳ್ಳಲಿ. ಬಲಿಪೂಜೆಯಲ್ಲಿ ಅರ್ಪಿಸುವ ರೊಟ್ಟಿ ಮತ್ತು ದ್ರಾಕ್ಷರಸ ಯೇಸುವಿನ ಶರೀರ ಮತ್ತು ರಕ್ತವಾಗಿ ಮಾರ್ಪಡುವಂತೆ ನಮ್ಮ ಕಷ್ಟ, ಸಂಕಟಗಳು ನಲಿವಾಗಿ ಮಾರ್ಪಡಲಿ. ತಾಬೋರ್ ಬೆಟ್ಟಾದಲ್ಲಿ ಶಿಷ್ಯರಿಗಾದ ದೈವಾನುಭಾವ ಬಲಿಪೂಜೆಯಲ್ಲಿ ನಮಗೂ ಆಗಲಿ.
No comments:
Post a Comment