Saturday, 10 August 2019

ಸಾಧಾರಣ ಕಾಲದ ಹತ್ತೊಂಬತ್ತನೇ ವಾರ ಬುಧವಾರ

ಸಾಧಾರಣ ಕಾಲದ ಹತ್ತೊಂಬತ್ತನೇ ವಾರ ಬುಧವಾರ 

14/ಕೆಂಪು/ಬುಧ/ಸಂತ ಮ್ಯಾಕ್ಸಿಮಿಲಿಯನ್ ಕೊಲ್ಬೆ (ಯಾ)
(ರ.ಸಾ) (ಸ್ಮರಣೆ)
1ನೇ  ವಾಚನ - ಧರ್ಮೋ 34:1-12,
ಕೀರ್ತನೆ - 66: 1-3,5,8,16-17
ಶುಭಸಂದೇಶ - ಮತ್ತಾಯ 18: 15-2೦

1ನೇ  ವಾಚನ - ಧರ್ಮೋ 34:1-12,
ಮೋಶೆ ಮೋವಾಬ್ಯರ ಬಯಲು ನಾಡಿನಿಂದ ಜೆರಿಕೋ ಪಟ್ಟಣಕ್ಕೆ ಎದುರಾಗಿ ಇರುವ ನೆಬೋಪರ್ವತಕ್ಕೆ ಹೋಗಿ, ಪಿಸ್ಗಾ ಎಂಬ ಬೆಟ್ಟದ ಶಿಖರವನ್ನು ಹತ್ತಿದನು. ಆಗ ಸರ್ವೇಶ್ವರ ಕಾನಾನ್ ನಾಡೆಲ್ಲವನ್ನು ಅಂದರೆ, ದಾನ್ ಪಟ್ಟಣದವರೆಗಿದ್ದ ಗಿಲ್ಯಾದ್ ಪ್ರಾಂತ್ಯ, ನಫ್ತಾಲಿ ಪ್ರದೇಶ, ಎಫ್ರಯಿಮ್ ಮನಸ್ಸೆಕುಲಗಳವರ ಪ್ರಾಂತ್ಯ, ಪಶ್ಚಿಮ ಸಮುದ್ರದವರೆಗಿದ್ದ ಜುದೇಯನಾಡು, ದಕ್ಷಿಣ ಪ್ರದೇಶ, ಚೋಗರೂರಿನ ತನಕ ಇದ್ದ ಜೆರಿಕೋ ಎಂಬ ಖರ್ಜೂರಗಳ ಪಟ್ಟಣದ ಸುತ್ತಲಿನ ಬಯಲು, ಇದನ್ನೆಲ್ಲಾ ಅವನಿಗೆ ತೋರಿಸಿದರು. ಅನಂತರ, “ನಾನು ಅಬ್ರಹಾಮ್, ಇಸಾಕ್, ಯಕೋಬರಿಗೆ ಪ್ರಮಾಣಮಾಡಿ ಅವರ ಸಂತತಿಯವರಿಗೆ ಕೊಡುವೆನೆಂದು ವಾಗ್ದಾನ ಮಾಡಿದ ನಾಡು ಇದೇ; ಇದನ್ನು ನಿನಗೆ ಪ್ರತ್ಯಕ್ಷವಾಗಿ ತೋರಿಸಿದ್ದೇನೆ. ಆದರೆ ನೀನು ನದಿದಾಟಿ ಅಲ್ಲಿಗೆ ಹೋಗಕೂಡದು,” ಎಂದು ಹೇಳಿದರು. ಸರ್ವೇಶ್ವರನ ಮಾತಿನಂತೆ ಅವರ ದಾಸ ಮೋಶೆ ಅಲ್ಲೇ ಮೋವಾಬ್ಯರ ದೇಶದಲ್ಲಿ ಮೃತನಾದನು. ಮೋವಾಬ್ಯರ ದೇಶದಲ್ಲಿ ಬೇತ್ಪೆ ಗೋರಿಗೆ ಎದುರಾಗಿರುವ ಕಣಿವೆಯಲ್ಲಿ ಅವನ ದೇಹವನ್ನು ಸಮಾಧಿಮಾಡಿದರು. ಅವನ ಸಮಾಧಿ ಎಲ್ಲಿದೆಯೆಂದು ಇಂದಿನವರೆಗೆ ಯಾರಿಗೂ ತಿಳಿಯದು. ಮೋಶೆ ಸಾಯುವಾಗ ನೂರಿಪ್ಪತ್ತು ವರ್ಷದವನಾಗಿದ್ದನು. ಅವನ ಕಣ್ಣು ಮೊಬ್ಬಾಗಲಿಲ್ಲ, ಅವನ ಜೀವಕಳೆ ಕುಂದಿ ಹೋಗಿರಲಿಲ್ಲ. ಮೋವಾಬ್ಯರ ಬಯಲಿನಲ್ಲಿ ಇಸ್ರಯೇಲರು ಮೋಶೆಗಾಗಿ ಮೂವತ್ತು ದಿನ ದುಃಖಿಸಿದರು. ಅಲ್ಲಿಗೆ ಮೋಶೆಯ ಸಂತಾಪದ ದಿನಗಳು ಮುಗಿದವು. ಮೋಶೆ ನೂನನ ಮಗನಾದ ಯೆಹೋಶುವನ ಮೇಲೆ ಹಸ್ತಕ್ಷೇಪಮಾಡಿದ್ದರಿಂದ ಅವನು ಜ್ಞಾನವರಸಂಪನ್ನನಾದನು. ಸರ್ವೇಶ್ವರ ಮೋಶೆಗೆ ಕೊಟ್ಟ ಆಜ್ಞೆಗೆ ಅನುಸಾರ ಇಸ್ರಯೇಲರು ಯೆಹೋಶುವನ ಮಾತಿನ ಪ್ರಕಾರ ನಡೆದರು. ಸರ್ವೇಶ್ವರ ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡಿದರು. ಈಜಿಪ್ಟ್ ದೇಶದಲ್ಲಿ ಫರೋಹನ ಮುಂದೆ ಹಾಗು ಅವನ ಪ್ರಜಾಪರಿವಾರದವರ ಮುಂದೆ ಅವನು ವಿಧವಿಧವಾದ ಪವಾಡಗಳನ್ನೂ ಮಹತ್ಕಾರ್ಯಗಳನ್ನೂ ನಡೆಸಿದನು; ಸರ್ವೇಶ್ವರ ಅವನನ್ನು ಅದಕ್ಕಾಗಿಯೇ ಕಳುಹಿಸಿದ್ದರು. ಇಸ್ರಯೇಲರ ಕಣ್ಮುಂದೆ ವಿಶೇಷ ಭುಜಪರಾಕ್ರಮವನ್ನೂ ಆಶ್ಚರ್ಯಕರವಾದ ಕಾರ್ಯಗಳನ್ನೂ ನಡೆಸಿದನು. ಇಂಥವನಿಗೆ ಸಮಾನನಾದ ಮತ್ತೊಬ್ಬ ಪ್ರವಾದಿ ಈಚೆಗೆ ಇಸ್ರಯೇಲರಲ್ಲಿ ಹುಟ್ಟಲೇ ಇಲ್ಲ.

ಕೀರ್ತನೆ - 66: 1-3,5,8,16-17
1 : ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ /
2 : ಹಾಡಲಿ ಆತನ ಶ್ರೀನಾಮ ಮಹಿಮೆಗೆ //
3 : “ನಿನ್ನ ಕಾರ್ಯಗಳೆನಿತೋ ಚೇತೋಹಾರಿ / ನಿನ್ನ ಪರಾಕ್ರಮಕೆ ಶತ್ರುಗಳು ಪರಾರಿ //
5 : ಬನ್ನಿ, ದೇವನತಿಶಯ ಕಾರ್ಯಗಳ ನೋಡಬನ್ನಿ / ಜನತೆಗಾತ ಮಾಡಿದುದು ಅತ್ಯಾಶ್ಚರ್ಯವೆನ್ನಿ //
8 : ಜನಾಂಗಗಳೇ, ನಮಿಸಿರಿ ನಮ್ಮ ದೇವನನು / ಗಟ್ಟಿಯಾಗಿ ಮಾಡಿರಿ ಅವನ ಗುಣಗಾನವನು //
16 : ಬಂದು ಕೇಳಿರಿ ದೇವನಲಿ ಭಯಭಕ್ತಿಯುಳ್ಳವರೆ / ದೇವನೆನಗೆ ಮಾಡಿದ ಕಾರ್ಯಗಳ ತಿಳಿಸುವೆ ನಿಮಗೆ //
17 : ದೇವನಿಗೆನ್ನ ಮನ ಸ್ವರವೆತ್ತಿ ಮೊರೆಯಿಟ್ಟಿತು / ಆತನ ಸ್ತುತಿ ನನ್ನ ಬಾಯಲಿ ತುಳುಕುತ್ತಿತ್ತು //

ಶುಭಸಂದೇಶ - ಮತ್ತಾಯ 18: 15-2೦
“ನಿನ್ನ ಸೋದರನು ನಿನಗೆ ಅಪರಾಧ ಮಾಡಿದರೆ, ನೀನು ಹೋಗಿ ನೀವಿಬ್ಬರೇ ಇರುವಾಗ, ಅವನ ತಪ್ಪನ್ನು ಮನಗಾಣಿಸು. ಅವನು ನಿನಗೆ ಕಿವಿಗೊಟ್ಟರೆ ಅವನ ಸೋದರತ್ವವನ್ನು ನೀನು ಮತ್ತೆ ಗಳಿಸಿಕೊಂಡಂತಾಗುವುದು. ಒಂದು ವೇಳೆ, ಅವನು ನಿನಗೆ ಕಿವಿಗೊಡದೆ ಹೋದರೆ ಒಬ್ಬಿಬ್ಬರನ್ನು ನಿನ್ನ ಸಂಗಡ ಕರೆದುಕೊಂಡು ಹೋಗು; ಹೀಗೆ ಇಬ್ಬರು ಅಥವಾ ಮೂವರು ಸಾಕ್ಷಿಗಳ ಸಮ್ಮುಖದಲ್ಲಿ ಪ್ರತಿಯೊಂದು ಮಾತೂ ಇತ್ಯರ್ಥವಾಗಲಿ. ಅವರಿಗೂ ಅವನು ಕಿವಿಗೊಡದೆ ಹೋದಲ್ಲಿ ಧರ್ಮಸಭೆಗೆ ತಿಳಿಸು. ಧರ್ಮಸಭೆಗೂ ಅವನು ಕಿವಿಗೊಡದೆ ಹೋದರೆ ಅವನನ್ನು ಧರ್ಮಭ್ರಷ್ಟನೆಂದು ಹಾಗೂ ಬಹಿಷ್ಕøತನೆಂದು ಪರಿಗಣಿಸು. “ನೀವು ಇಹದಲ್ಲಿ ಏನನ್ನು ಬಂಧಿಸುತ್ತೀರೋ ಅದು ಪರದಲ್ಲೂ ಬಂಧಿಸಲಾಗುವುದು; ನೀವು ಇಹದಲ್ಲಿ ಏನನ್ನು ಬಿಚ್ಚುತ್ತೀರೋ ಅದು ಪರದಲ್ಲೂ ಬಿಚ್ಚಲಾಗುವುದು ಎಂದು ನಿಮಗೆ ಖಚಿತವಾಗಿ ಹೇಳುತ್ತೇನೆ. ಸಭಾಪ್ರಾರ್ಥನೆಯ ಪ್ರಭಾವ “ಇನ್ನೂ ನಾನು ನಿಮಗೆ ಹೇಳುವುದು ಏನೆಂದರೆ: ನಿಮ್ಮಲ್ಲಿ ಇಬ್ಬರು ತಾವು ಬೇಡಿಕೊಳ್ಳುವ ಯಾವುದಾದರೊಂದು ವಿಷಯವಾಗಿ ಇಹಲೋಕದಲ್ಲಿ ಒಮ್ಮನಸ್ಸುಳ್ಳವರಾಗಿದ್ದರೆ, ಅದು ಸ್ವರ್ಗದಲ್ಲಿರುವ ನನ್ನ ತಂದೆಯಿಂದ ಅವರಿಗೆ ಕೈಗೂಡುತ್ತದೆ. ಎಲ್ಲಿ ಇಬ್ಬರು, ಮೂವರು ನನ್ನ ನಾಮದಲ್ಲಿ ಸೇರಿರುತ್ತಾರೋ, ಅಲ್ಲಿ ನಾನು ಅವರ ಮಧ್ಯೆ ಇರುತ್ತೇನೆ.”

ಚಿಂತನೆ :
ನುಡಿದಂತೆ ನಡೆ-ಕ್ರಿಸ್ತನೆಡೆ ನಡೆ

ಸಾವು ಈ ಬಾಳಿನ ಅಂತ್ಯ. ಪ್ರತಿ ವ್ಯಕ್ತಿ ಹುಟ್ಟಿದಾಕ್ಷಣ ಆತ ಸಾವಿನ ಸರಪಳಿಯಲ್ಲಿ ಕಾಲಿಡುತ್ತಾನೆ . ಯಾವ ಕ್ಷಣವಾದರೂ ಸರಪಳಿ ಕೊಂಡಿ ಮುರಿಯಬಹುದು. ಆದರೆ ಸಾವು ಕೊನೆಯಲ್ಲ, ಭಯಂಕರವಿರಬಹುದು; ಸಾವು ನಮ್ಮನ್ನು ವಾಸ್ತವ ಬದುಕಿನಡೆಗೆ ಸಾಗಿಸುವ ಒಂದು ವಾಹನ. ಸತ್ತ ವ್ಯಕ್ತಿಯ ಬಗ್ಗೆ ಜನ ಮಾತಾಡುವುದನ್ನು ಎಲ್ಲರೂ ಕೇಳಿರಬಹುದು. ಕೆಲವೊಮ್ಮೆ `ಆತ ದೇವರಂತಹ ಪುಣ್ಯಾತ್ಮ, ಮಹಾತ್ಮ', ಹಲವೊಮ್ಮೆ `ಭೂಮಿಗೆ ಭಾರ'.....ಇದು ಆ ವ್ಯಕ್ತಿ ಬದುಕಿದ ನಂತರ ಜನ ನೀಡುವ ಪ್ರಾಮಾಣಿಕ ಸರ್ಟಿಫಿಕೇಟ್.

ಸಾವು ಹಾಗೂ ವಾಸ್ತವ ಎರಡನ್ನೂ ಒಂದುಗೂಡಿಸಲು ಮೋಶೆಯ ಜೀವನ ಆದರ್ಶಮಯ. ಒಂದು ಇಡೀ ಜನಾಂಗಕ್ಕೆ ನಾಯಕನಾಗಿದ್ದ ಈತ ಜೀವನದ ಹೆಬ್ಬಯಕೆ ಸಮೀಪಿಸಿದಾಗ ಎಲ್ಲಾ ತೊರೆದು ಬೆಟ್ಟದ ಮೇಲೆ ಜೀವದಾನ ಮಾಡಿದ. ಮೋಶೆಯ ಜೀವನದ ನಂತರ ಆತನ ಅಸ್ಥಿಪಂಜರದ ಯಾವ ತುಣುಕೂ ಸಿಗಲಿಲ್ಲ. ಜನ ಆತನಿಗಾಗಿ ಮೂವತ್ತು ದಿನ ಗೋಳಾಡಿದರು. ದೇವರಿಂದ ಬಂದ ಮಾನವ, ಮತ್ತೆ ದೇವರಲ್ಲಿ ನೆಲೆಯಾದ ಎಂಬುದು ಅವರ ಅನಿಸಿಕೆ.


ಹಲವರು ಜೀವನವನ್ನು ಸಂಪೂರ್ಣ ಎರಡು ಭಾಗಗಳಾಗಿ ವಿಭಾಗಿಸುತ್ತಾರೆ. ಒಂದು ಪ್ರಾಯೋಗಿಕವಾದರೆ ಮತ್ತೊಂದು ಕಾಲ್ಪನಿಕ. ಈ ಪ್ರಾಯೋಗಿಕ ಜೀವನ ಅನಾಚಾರಗಳಿಂದ, ಅವಮಾನದಿಂದ ಕೂಡಿದ್ದರೆ ಕಾಲ್ಪನಿಕ ಭಾಗ ಮಾತ್ರ ಭೂತ ಹಾಗೂ ಭವಿಷ್ಯದ ಕನಸುಗಳಿಂದ ಕಂಗೊಳಿಸುತ್ತದೆ. ಪ್ರಭು ಯೇಸು ಮೊದಲನೇ ವರ್ಗದ ವ್ಯಕ್ತಿಗಳಿಗೆ ಇಹದಲ್ಲಿ ನೀವು ಏನು ಬಂಧಿಸುವಿರೋ ಅದನ್ನು ಪರದಲ್ಲೂ ಬಂಧಿಸಲಾಗುವುದು ಎನ್ನುವ ನುಡಿಗಳಲ್ಲಿ ಹೇಳುತ್ತಾರೆ. ಮರಣದ ಭಯ ಈ ವರ್ಗದ ಜನರಿಗೇ ಹೆಚ್ಚು. ತಾನು ಮಾಡಿದ ಕಾರ್ಯಗಳನ್ನು ತಾನು ನಿಂತು ಒಪ್ಪಿಕೊಳ್ಳದೇ ಹೋದ ಹೇಡಿಗಳ ಕತೆಯೇ ಇಂದು ಹೇಳಲಾತೀತವಾದದ್ದು. ಜೀವನವಿಡೀ ದೇವರ ಮಾತನ್ನು ನಂಬಿ ನಡೆದ ಮೋಶೆಗೆ ಸಾವು ಭಯ ತರಲಿಲ್ಲ, ಜೀವನದ ಗುರಿ (ಒಪ್ಪಂದದ ನಾಡು) ಸಾವನ್ನು ದೂರ ಸರಿಸಲಿಲ್ಲ. ಧೈರ್ಯದಿಂದ ಜೀವನವನ್ನು ಎದುರಿಸುವ ಶಕ್ತಿ-ಮೋಶೆಯ ಜೀವನದಲ್ಲೇ ನಾವು ಕಾಣಬಹುದು. ಈ ಗುಂಪಿನಲ್ಲಿ ಅತೀ ಎತ್ತರದಲ್ಲಿ ಕಾಣಿಸುವ ವ್ಯಕ್ತಿ ಯೇಸುಕ್ರಿಸ್ತ. `ನಡೆದಂತೆ ನುಡಿ-ನುಡಿದಂತೆ ನಡೆ' ಹಾಗೆ ನಡೆದು ಮೃತ್ಯುವನ್ನಪ್ಪಿದ ಈತ ನಿಜಕ್ಕೂ ವಾಸ್ತವ ಜೀವನ ಜೀವಿಸಿದ ವಿಶ್ವಮಾನವ. ಆದರೆ ನಮ್ಮ ಭರವಸೆ ಮರಣದಲ್ಲಿಲ್ಲ, ಪ್ರಭುವಿನ ಪುನರುತ್ಥಾನದಲ್ಲಿ.


No comments:

Post a Comment