ಸಾಧಾರಣ ಕಾಲದ ಹತ್ತೊಂಬತ್ತನೇ ವಾರ ಸೋಮವಾರ
12/ಹಸಿರು/ಸೋಮ
1ನೇ ವಾಚನ - ರ್ಮೋ 1೦: 12-22
ಕೀರ್ತನೆ - 147: 12-15, 19-2೦
ಶುಭಸಂದೇಶ - ಮತ್ತಾಯ 17: 22-27
1ನೇ ವಾಚನ - ಧರ್ಮೋ 1೦: 12-22
12/ಹಸಿರು/ಸೋಮ
1ನೇ ವಾಚನ - ರ್ಮೋ 1೦: 12-22
ಕೀರ್ತನೆ - 147: 12-15, 19-2೦
ಶುಭಸಂದೇಶ - ಮತ್ತಾಯ 17: 22-27
1ನೇ ವಾಚನ - ಧರ್ಮೋ 1೦: 12-22
“ಆದುದರಿಂದ ಇಸ್ರಯೇಲರೇ, ನೀವು ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿ ಉಳ್ಳವರಾಗಿರಬೇಕು; ಎಲ್ಲ ವಿಷಯಗಳಲ್ಲೂ ಅವರು ಹೇಳುವ ಮಾರ್ಗದಲ್ಲೇ ನಡೆಯಬೇಕು; ಅವರನ್ನು ಪ್ರೀತಿಸುತ್ತಾ ಸಂಪೂರ್ಣವಾದ ಹೃದಯದಿಂದಲೂ ಮನಸ್ಸಿನಿಂದಲೂ ಸೇವೆಮಾಡಬೇಕು; ನಾನು ನಿಮ್ಮ ಒಳಿತಿಗಾಗಿ ಈಗ ಬೋಧಿಸುವ ಅವರ ಆಜ್ಞಾವಿಧಿಗಳನ್ನು ಅನುಸರಿಸುತ್ತಾ ಬರಬೇಕು. ಇಷ್ಟನ್ನೇ ಹೊರತು, ನಿಮ್ಮ ದೇವರಾದ ಸರ್ವೇಶ್ವರ ನಿಮ್ಮಿಂದ ಬೇರೇನನ್ನು ಕೇಳಿಕೊಳ್ಳುವುದಿಲ್ಲ. ಇಗೋ ಕೇಳಿ: ಉನ್ನತೋನ್ನತವಾದ ಆಕಾಶಮಂಡಲವು, ಭೂಮಿಯು ಹಾಗು ಅದರಲ್ಲಿರುವ ಎಲ್ಲವು ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯವೇ. ಆದರೂ ಅವರು ನಿಮ್ಮ ಪಿತೃಗಳಲ್ಲಿ ಇಷ್ಟವುಳ್ಳವರಾಗಿ ಅವರನ್ನು ಪ್ರೀತಿಸಿದರು. ಈಗ ನಿಮ್ಮ ಅನುಭವಕ್ಕೆ ಬಂದಿರುವಂತೆ, ಅವರ ತರುವಾಯ ಅವರ ಸಂತತಿಯವರಾದ ನಿಮ್ಮನ್ನೇ ಎಲ್ಲ ಜನಾಂಗಗಳಿಂದ ಆರಿಸಿಕೊಂಡರು. ಆದುದರಿಂದ ಅವರ ಆಜ್ಞೆಗೆ ಮಣಿಯದ ನಿಮ್ಮ ದುಷ್ಟಸ್ವಭಾವವನ್ನು ಬಿಟ್ಟು ಬಿಟ್ಟು ನಿಮ್ಮ ಹೃದಯದಲ್ಲೇ ಸುನ್ನತಿಮಾಡಿಕೊಳ್ಳಿ. ನಿಮ್ಮ ದೇವರಾದ ಸರ್ವೇಶ್ವರ ದೇವಾದಿದೇವರು. ಸರ್ವೇಶ್ವರಾಧಿ ಸರ್ವೇಶ್ವರ. ಅವರು ಪರಮ ದೇವರೂ ಪರಾಕ್ರಮಿಯೂ ಭಯಂಕರವೂ ಆಗಿದ್ದಾರೆ. ಅವರು ಮುಖದಾಕ್ಷಿಣ್ಯ ನೋಡುವವರಲ್ಲ, ಲಂಚ ತೆಗೆದುಕೊಳ್ಳುವವರಲ್ಲ. ಅನಾಥರಿಗೆ ಮತ್ತು ವಿಧವೆಯರಿಗೆ ನ್ಯಾಯ ದೊರಕಿಸುತ್ತಾರೆ; ಪರದೇಶಿಗಳಾದವರಿಗೆ ಪ್ರೀತಿಯಿಂದ ಅನ್ನವಸ್ತ್ರಗಳನ್ನು ನೀಡುತ್ತಾರೆ. ಈಜಿಪ್ಟ್ ದೇಶದಲ್ಲಿ ನೀವೇ ಪರದೇಶಿಗಳಾಗಿ ಇದ್ದುದನ್ನು ಜ್ಞಾಪಿಸಿಕೊಂಡು ಪರದೇಶದವರಲ್ಲಿ ಪ್ರೀತಿಯಿಡಿ. ನಿಮ್ಮ ದೇವರಾದ ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಾಗಿ ಅವರಿಗೇ ಸೇವೆ ಸಲ್ಲಿಸಿ. ಅವರನ್ನು ಹೊಂದಿಕೊಂಡು ಅವರ ಹೆಸರಿನ ಮೇಲೆಯೇ ಪ್ರಮಾಣಮಾಡಬೇಕು. ಅವರೊಬ್ಬರೇ ನಿಮ್ಮ ಸ್ತುತಿಸ್ತೋತ್ರಕ್ಕೆ ಪಾತ್ರರು; ಅವರು ನಿಮ್ಮ ದೇವರು; ನೀವು ನೋಡಿದ ಆ ಮಹಾಭಯಂಕರವಾದ ಮಹತ್ಕಾರ್ಯಗಳನ್ನು ನಿಮ್ಮ ಪರವಾಗಿ ನಡೆಸಿದವರು ಅವರೇ. ನಿಮ್ಮ ಪಿತೃಗಳು, ಎಪ್ಪತ್ತುಮಂದಿ ಮಾತ್ರ, ಈಜಿಪ್ಟ್ ದೇಶಕ್ಕೆ ಹೋದರು; ಈಗಲಾದರೋ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಆಕಾಶದ ನಕ್ಷತ್ರಗಳಷ್ಟು ಅಸಂಖ್ಯರಾಗುವಂತೆ ಮಾಡಿದ್ದಾರೆ.
ಕೀರ್ತನೆ - 147: 12-15, 19-2೦
12 : ಜೆರುಸಲೇಮೇ, ಕೀರ್ತಿಸು ಪ್ರಭುವನು / ಸಿಯೋನೇ, ಸ್ತುತಿಸು ನಿನ್ನ ದೇವರನು
13 : ಬಲಪಡಿಸಿಹನಾತ ನಿನ್ನ ಹೆಬ್ಬಾಗಿಲ ಅಗುಳಿಗಳನು ಆಶೀರ್ವದಿಸಿಹನು ನಿನ್ನಲ್ಲಿರುವ ಮಕ್ಕಳನು
14 : ನಿನ್ನ ಪ್ರಾಂತದೊಳಗೆಲ್ಲಾ ಇರುವುದು ನೆಮ್ಮದಿ / ನೀಡುವನು ನಿನಗೆ ಅತ್ಯುತ್ತಮ ಗೋದಿ
15 : ಕಳಿಸುವನು ಧರೆಗೆ ತನ್ನ ಆಣತಿ / ಸಿದ್ಧಿಯಾಗುವುದದು ಬಲು ಶೀಘ್ರದಿ.
19 : ತಿಳಿಸಿಹನು ತನ್ನ ವಾಕ್ಯವನು ಯಕೋಬ್ಯರಿಗೆ / ತನ್ನ ವಿಧಿನಿಯಮಗಳನು ಇಸ್ರಯೇಲರಿಗೆ
20 : ಬೇರಾವ ಜನಾಂಗಕ್ಕೂ ಆತ ಹೀಗೆ ಮಾಡಿಲ್ಲ / ಆತನ ವಿಧಿನಿಯಮಗಳನು ಅವರಿಗೆ ತಿಳಿಸಿಲ್ಲ / ಅಲ್ಲೆಲೂಯ!
ಶುಭಸಂದೇಶ - ಮತ್ತಾಯ 17: 22-27
ಶಿಷ್ಯರೆಲ್ಲರು ಒಮ್ಮೆ ಗಲಿಲೇಯದಲ್ಲಿ ಒಟ್ಟಿಗೆ ಸೇರಿದ್ದರು. ಆಗ ಯೇಸು ಅವರಿಗೆ, "ನರಪುತ್ರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು; ಅವರು ಆತನನ್ನು ಕೊಲ್ಲುವರು. ಆದರೆ ಮೂರನೆಯ ದಿನ ಆತನನ್ನು ಪುನರುತ್ಥಾನಗೊಳಿಸಲಾಗುವುದು," ಎಂದರು. ಅದನ್ನು ಕೇಳಿ ಶಿಷ್ಯರು ತುಂಬ ವ್ಯಥೆಗೊಂಡರು. ದೇವಪುತ್ರನಿಂದಲೂ ದೇವಾಲಯಕ್ಕೆ ತೆರಿಗೆ ವಸೂಲಿಯೇ? ಯೇಸು ಮತ್ತು ಶಿಷ್ಯರು ಕಫೆರ್ನವುಮಿಗೆ ಹೋದರು. ದೇವಾಲಯದ ತೆರಿಗೆಯನ್ನು ವಸೂಲಿ ಮಾಡುತ್ತಿದ್ದವರು ಪೇತ್ರನ ಬಳಿಗೆ ಬಂದು, "ನಿಮ್ಮ ಗುರು ತೆರಿಗೆ ಕಟ್ಟುವುದಿಲ್ಲವೇ?" ಎಂದು ವಿಚಾರಿಸಿದರು. ಅದಕ್ಕೆ ಪೇತ್ರನು, "ಹೌದು, ಕಟ್ಟುತ್ತಾರೆ," ಎಂದು ಉತ್ತರವಿತ್ತನು. ಬಳಿಕ ಮನೆಗೆ ಬಂದಾಗ, ಅವನು ಮಾತೆತ್ತುವುದಕ್ಕೆ ಮೊದಲೇ ಯೇಸು "ಸಿಮೋನಾ, ನಿನಗೆ ಏನನ್ನಿಸುತ್ತದೆ? ಇಹಲೋಕದ ರಾಜರು ಕಂದಾಯವನ್ನಾಗಲಿ, ತೆರಿಗೆಯನ್ನಾಗಲಿ ಯಾರಿಂದ ವಸೂಲಿಮಾಡುತ್ತಾರೆ? ತಮ್ಮ ಪುತ್ರರಿಂದಲೋ ಅಥವಾ ಪರರಿಂದಲೋ?" ಎಂದು ಕೇಳಿದರು. "ಪರರಿಂದಲೇ," ಎಂದು ಪೇತ್ರನು ಉತ್ತರಕೊಟ್ಟನು. ಯೇಸು, "ಹಾಗಾದರೆ, ಪುತ್ರರು ತೆರಿಗೆ ಕಟ್ಟಬೇಕಾಗಿಲ್ಲ ತಾನೇ? ಆದರೂ, ನಾವು ಇವರಿಗೆ ಅಡ್ಡಿಯಾಗಬಾರದು. ಎಂದೇ ನೀನು ಸರೋವರಕ್ಕೆ ಹೋಗಿ ಗಾಳಹಾಕು. ಮೊದಲು ಸಿಕ್ಕುವ ಮೀನನ್ನು ಎತ್ತಿಕೊಂಡು ಅದರ ಬಾಯಿ ತೆರೆದು ನೋಡು. ಅದರಲ್ಲಿ ಒಂದು ಬೆಳ್ಳಿ ನಾಣ್ಯ ದೊರಕುವುದು. ಅದನ್ನು ತಂದು ನನ್ನ ಮತ್ತು ನಿನ್ನ ಪರವಾಗಿ ಅವರಿಗೆ ಕೊಡು," ಎಂದರು.
ಚಿಂತನೆ :
ಕ್ರಿಸ್ತನಲ್ಲಿ ಸುಖಾಂತ ಜೀವನ
ಪ್ರೀತಿ ಅದ್ಭುತವಾದದ್ದು, ಅಮೋಘವಾದದ್ದು. ದೇವರ ಪ್ರೀತಿಯಂತೂ ಹೋಲಿಸಲು ಸಾಧ್ಯವಿಲ್ಲದಷ್ಟು ಅಗಾಧವಾದುದು. ಇದೇ ಪ್ರಿತಿ ಇಂದು ನಾವು ದೇವರಿಗೆ ಚಿರಋಣಿಗಳಾಗಿರಲು ಕರೆಯುತ್ತಿದೆ.
ವಿಲಿಯಂ ಷೇಕ್ಸ್‌ಪಿಯರ್ ಆಂಗ್ಲ ನಾಟಕಕಾರನ ಬಹುಪಾಲು ನಾಟಕಗಳಲ್ಲಿ ದುಃಖಾಂತ ಹೊಂದಿರುವ ನಾಟಕಗಳೇ ಹೆಚ್ಚು. ಮನದಾಳದ ಭಾವನೆಗಳನ್ನು ಎಳೆಎಳೆಯಾಗಿ ಬಿಡಿಸಿ ಬರೆದ ಈ ಮಹಾ ಕವಿ ಪ್ರೀತಿ-ಪ್ರೇಮದ ಸಾರಕ್ಕಂತೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ. ಲೈಲಾ-ಮಜನೂರಂತೆ ಪರಸ್ಪರರಿಗಾಗಿ ಪ್ರಾಣನೀಡುವ ಕತೆಯಂತೂ ಇದರಲ್ಲಿ ಬಹು ಮುಖ್ಯ. ಎರಡು ಮನೆತನದ ದ್ವೇಷಗಳ ಮಧ್ಯೆ ಬೆಳೆಯುವ ಈ ಪ್ರೀತಿ, ಪರಸ್ಪರ ಪ್ರಾಣತ್ಯಾಗದೊಂದಿಗೆ ದುಃಖಾಂತಗೊಳ್ಳುತ್ತದೆ. ಬಹುಶಃ ಈ ನಾಟಕ ನೋಡಿ, ಕಂಬನಿ ಹರಿಸದೆ ಹಿಂದಿರುಗುವವರು ಯಾರೂ ಇಲ್ಲ.
ದೇವರು ಸಹ ನಮ್ಮನ್ನು ಇಂತಹ ಪ್ರೀತಿಯಿಂದ ಪ್ರೀತಿಸುತ್ತಾರೆ. ಇಸ್ರಯೇಲ್ ಜನಾಂಗವನ್ನು ತಮ್ಮ ಪ್ರಜೆಯನ್ನಾಗಿ ಸ್ವೀಕರಿಸಿದ ದೇವರು ಅವರಿಗಾಗಿ ಹಲವಾರು ಅದ್ಭುತಕಾರ್ಯಗಳನ್ನು ಮಾಡಿದರು. ಆದರೆ ಅದಕ್ಕೆ ಪ್ರತಿಫಲವಾಗಿ ಬಯಸಿದ್ದು ಕೇವಲ ಪ್ರೀತಿ, ತನ್ನನ್ನು ಮಾತ್ರ ಪ್ರೀತಿಸಿ ಎನ್ನುವ ದೇವರು ಸ್ವಾರ್ಥಿ ಎನಿಸಿದರೂ, ಮಾನವ ನಿರ್ಮಿತ ಕ್ಷುದ್ರ ಗೊಂಬೆಗಳಿಂದ ನಮ್ಮನ್ನು ಹೊರ ತರುವುದು ಸಹ ಅವರ ಉದ್ದೇಶ. ನಾವು ಆತನನ್ನು ತ್ಯಜಿಸಿದರೂ, ಅವರು ಮಾತ್ರ ಹಾಗೆ ಮಾಡಲಿಲ್ಲ.
ಮಾನವ ಪಾಪಿಯಾಗಿ ದೂರ ಸರಿದಾಗ ಯೇಸುಕ್ರಿಸ್ತನನ್ನು ರಕ್ಷಣೆಗಾಗಿ, ದೇವರ ಪ್ರೀತಿಯ ಪರಮೋಚ್ಚ ಸಂಕೇತವಾಗಿ ಅವರು ಕಳುಹಿಸಿದರು. ಪ್ರಭು ಯೇಸು ಜೀವನದಲ್ಲಿ, ಮರಣದಲ್ಲಿ ದೇವರನ್ನು ಬಿಂಬಿಸಿ ದುಃಖಾಂತವಾದಾಗ ದೇವರು ಅವರನ್ನು ಪುನರುತ್ಥಾನಗೊಳಿಸಿ ಸುಖಾಂತ ಸಾರಿದರು. ದೇವರ ಮಕ್ಕಳು ತೆರಿಗೆ ಕಟ್ಟಬೇಕಾಗಿಲ್ಲ ಎಂಬ ತಮ್ಮ ನುಡಿಗಳನ್ನು ಜೀವನದಲ್ಲಿ ಸತ್ಯವಾಗಿಸಿ ತೋರಿಸಿದರು.
ನಮ್ಮ ಪ್ರೀತಿ ಇಂದು ಕೇವಲ ಮಾನವ ನಿರ್ಮಿತ ಸಂಬಂಧಗಳಿಗೆ ಮಾತ್ರ ಮೀಸಲಿಲ್ಲ. ನಮ್ಮ ಪ್ರೀತಿಯ ಪರಿಪೂರ್ಣತೆ ನಾವು ದೇವರನ್ನು ಪ್ರೀತಿಸಿದಾಗ ಮಾತ್ರ. ದೇವರ ಮಕ್ಕಳಾದ ನಮಗೆ ಇದಕ್ಕಾಗಿ ತೆರಿಗೆ ನೀಡಬೇಕಿಲ್ಲ. ಆದರೆ ಹೃದಯದಲ್ಲಿ ಪರಿವರ್ತನೆ, ಕಾಣಬೇಕು. ಈ ಪರಿವರ್ತನೆಯು ಬೆಲೆಗೆ ನಿಲುಕದ್ದಾದರೂ ನಮ್ಮ ಬಾಳನ್ನು ಬೆಳೆಸುವಂತಹುದು.

No comments:
Post a Comment