ಸಾಧಾರಣ ಕಾಲದ ಹತ್ತೊಂಬತ್ತನೇ ವಾರ ಗುರುವಾರ
15/ಬಿಳಿ/ಗುರು/ಪೂಜ್ಯ ಮಾತೆ ಮರಿಯಳ ಸ್ವರ್ಗಸ್ವೀಕೃತ ಮಹೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ
1ನೇ ವಾಚನ - ಪ್ರಕಟಣೆ 11:19:12: 1-6,10
ಕೀರ್ತನೆ - 45: 9-11,15
2ನೇ ವಾಚನ 1ಕೊರಿಂಥ 15: 2೦-27
ಶುಭಸಂದೇಶ - ಲೂಕ 1: 39-56
1ನೇ ವಾಚನ - ಪ್ರಕಟಣೆ 11:19, 12: 1-6,10
ಕೀರ್ತನೆ - 45: 9-11,15
9 : ರಾಜಕುವರಿಯರಿಹರು ನಿನ್ನ ಸ್ತ್ರೀ ಪರಿವಾರದಲಿ / ಪಟ್ಟದ ರಾಣಿಯು ನಿಂತಿಹಳು ನಿನ್ನ ಬಲಪಾಶ್ರ್ವದಲಿ / ಓಫಿರ್ ನಾಡಿನ ಚಿನ್ನಾಭರಣಗಳಿಂದ ಭೂಷಿತಳಾಗಿ //
10 : ಎಲೌ ಕುವರಿಯೇ, ಕೇಳು, ಎನ್ನ ಮಾತಿಗೆ ಕಿವಿಗೊಡು / ನಿನ್ನ ಜನರನು, ತೌರು ಮನೆಯನು ಮರೆತುಬಿಡು //
11 : ಆಗ ಬಯಸುವನು ರಾಜ ನಿನ್ನ ಲಾವಣ್ಯವನು / ಆತನ ಪಾದಕ್ಕೆರಗು, ಆತನೇ ನಿನಗೊಡೆಯನು //
15 : ಆಗಮಿಸುತಿಹರಿದೋ ಸಂಭ್ರಮ ಸಡಗರದಿಂದ / ಪ್ರವೇಶಿಸುತಿಹರು ಅರಮನೆಯನು ಉತ್ಸಾಹದಿಂದ //
2ನೇ ವಾಚನ 1ಕೊರಿಂಥ 15: 2೦-27
15/ಬಿಳಿ/ಗುರು/ಪೂಜ್ಯ ಮಾತೆ ಮರಿಯಳ ಸ್ವರ್ಗಸ್ವೀಕೃತ ಮಹೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ
1ನೇ ವಾಚನ - ಪ್ರಕಟಣೆ 11:19:12: 1-6,10
ಕೀರ್ತನೆ - 45: 9-11,15
2ನೇ ವಾಚನ 1ಕೊರಿಂಥ 15: 2೦-27
ಶುಭಸಂದೇಶ - ಲೂಕ 1: 39-56
1ನೇ ವಾಚನ - ಪ್ರಕಟಣೆ 11:19, 12: 1-6,10
ಸ್ವರ್ಗದಲ್ಲಿನ ದೇವಾಲಯವು ತೆರೆಯಿತು. ದೇವರ ಒಡಂಬಡಿಕೆಯ ಮಂಜೂಷವು ಅಲ್ಲಿರುವುದು ಕಾಣಿಸಿತು; ಇದಲ್ಲದೆ ಮಿಂಚುಗಳು, ಗುಡುಗು, ಗರ್ಜನೆಗಳು ಉಂಟಾದವು. ಭೂಕಂಪವೂ ಆಯಿತು. ಜೋರಾದ ಆಲಿಕಲ್ಲಿನ ಮಳೆ ಸುರಿಯಿತು. ಆಕಾಶದಲ್ಲಿ ಚಿಹ್ನೆಯೊಂದು ಕಾಣಿಸಿಕೊಂಡಿತು. ಮಹಿಳೆಯೊಬ್ಬಳು ಸೂರ್ಯಭೂಷಿತಳಾಗಿದ್ದಳು. ಆಕೆಯ ಪಾದದಡಿ ಚಂದ್ರನಿದ್ದನು. ತಲೆಯ ಮೇಲೆ ಹನ್ನೆರಡು ನಕ್ಷತ್ರ ಖಚಿತವಾದ ಕಿರೀಟವಿತ್ತು. ಆಕೆ ತುಂಬು ಗರ್ಭಿಣಿ, ಪ್ರಸವವೇದನೆಯಿಂದ ನರಳುತ್ತಿದ್ದಳು. ಆಕಾಶದಲ್ಲಿ ಮತ್ತೊಂದು ಚಿಹ್ನೆ ಕಾಣಿಸಿಕೊಂಡಿತು. ಅಲ್ಲಿ ಕೆಂಪು ಘಟಸರ್ಪವೊಂದು ಇತ್ತು. ಅದಕ್ಕೆ ಏಳು ತಲೆಗಳಿದ್ದವು, ಹತ್ತು ಕೊಂಬುಗಳಿದ್ದವು; ಅದರ ಏಳು ತಲೆಗಳ ಮೇಲೆ ಏಳು ಮುಕುಟಗಳಿದ್ದವು. ಅದು ತನ್ನ ಬಾಲದಿಂದ ಮೂರನೆಯ ಒಂದು ಭಾಗದಷ್ಟು ನಕ್ಷತ್ರಗಳನ್ನು ಆಕಾಶದಿಂದ ಸೆಳೆದೆಳೆದು ಅವುಗಳನ್ನು ಭೂಮಿಗೆ ಎಸೆಯಿತು. ಮಗು ಹುಟ್ಟಿದ ಕೂಡಲೇ ಅದನ್ನು ನುಂಗಿ ಬಿಡಬೇಕೆಂದು ಘಟಸರ್ಪವು ಆ ತುಂಬು ಗರ್ಭಿಣಿಯ ಬಳಿಯಲ್ಲಿಯೇ ಕಾಯ್ದುಕೊಂಡಿತು. ಸರ್ವಜನಾಂಗಗಳನ್ನು ಕಬ್ಬಿಣದ ದಂಡದಿಂದ ಆಳಬಲ್ಲಂಥ ಒಂದು ಗಂಡುಮಗುವಿಗೆ ಆಕೆ ಜನ್ಮವಿತ್ತಳು. ಆದರೆ, ಆ ಮಗುವನ್ನು ಸಿಂಹಾಸನದಲ್ಲಿದ್ದ ದೇವರ ಬಳಿಗೆ ಕೊಂಡೊಯ್ಯಲಾಯಿತು. ಆ ಮಹಿಳೆ ಅರಣ್ಯಕ್ಕೆ ಓಡಿಹೋದಳು. ಅಲ್ಲಿ ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಆಕೆಗೆ ಶುಶ್ರೂಷೆಯಾಗಬೇಕೆಂದು ದೇವರೇ ಆ ಸ್ಥಳವನ್ನು ಸಜ್ಜುಗೊಳಿಸಿದ್ದರು. ಸ್ವರ್ಗದಿಂದ ಬಂದ ಮಹಾಶಬ್ದವನ್ನು ನಾನು ಕೇಳಿಸಿಕೊಂಡೆ. ಅದು ಇಂತೆಂದಿತು: “ಇಗೋ, ನಮ್ಮ ದೇವನಿತ್ತ ಜೀವೋದ್ಧಾರ ಸಿದ್ಧಿಸಿದೆ. ಆತನ ಶಕ್ತಿ, ಸಾಮ್ರಾಜ್ಯಗಳು ಕಂಗೊಳಿಸುತ್ತಿವೆ. ಆತನ ಕ್ರಿಸ್ತಾಧಿಪತ್ಯ ಸ್ಥಾಪಿತವಾಗಿದೆ.
ಕೀರ್ತನೆ - 45: 9-11,15
9 : ರಾಜಕುವರಿಯರಿಹರು ನಿನ್ನ ಸ್ತ್ರೀ ಪರಿವಾರದಲಿ / ಪಟ್ಟದ ರಾಣಿಯು ನಿಂತಿಹಳು ನಿನ್ನ ಬಲಪಾಶ್ರ್ವದಲಿ / ಓಫಿರ್ ನಾಡಿನ ಚಿನ್ನಾಭರಣಗಳಿಂದ ಭೂಷಿತಳಾಗಿ //
10 : ಎಲೌ ಕುವರಿಯೇ, ಕೇಳು, ಎನ್ನ ಮಾತಿಗೆ ಕಿವಿಗೊಡು / ನಿನ್ನ ಜನರನು, ತೌರು ಮನೆಯನು ಮರೆತುಬಿಡು //
11 : ಆಗ ಬಯಸುವನು ರಾಜ ನಿನ್ನ ಲಾವಣ್ಯವನು / ಆತನ ಪಾದಕ್ಕೆರಗು, ಆತನೇ ನಿನಗೊಡೆಯನು //
15 : ಆಗಮಿಸುತಿಹರಿದೋ ಸಂಭ್ರಮ ಸಡಗರದಿಂದ / ಪ್ರವೇಶಿಸುತಿಹರು ಅರಮನೆಯನು ಉತ್ಸಾಹದಿಂದ //
2ನೇ ವಾಚನ 1ಕೊರಿಂಥ 15: 2೦-27
ಕ್ರಿಸ್ತ ಯೇಸು ಪುನರುತ್ಥಾನ ಹೊಂದಿದ್ದೇನೋ ಸತ್ಯಸ್ಯ ಸತ್ಯ. ಅವರ ಪುನರುತ್ಥಾನವು, ಸತ್ತವರು ಪುನರುತ್ಥಾನ ಹೊಂದುತ್ತಾರೆ ಎನ್ನುವುದಕ್ಕೆ ಪ್ರಮಾಣ. ಒಬ್ಬ ಮನುಷ್ಯನಿಂದ ಸಾವು ಸಂಭವಿಸಿದಂತೆಯೇ ಒಬ್ಬ ಮನುಷ್ಯನಿಂದಲೇ ಸತ್ತವರಿಗೆ ಪುನರುತ್ಥಾನವು ಪರಿಣಮಿಸಿತು. ಆದಾಮನ ಸಂಬಂಧದಿಂದ ಎಲ್ಲರೂ ಸಾವಿಗೀಡಾದಂತೆ ಕ್ರಿಸ್ತಯೇಸುವಿನ ಸಂಬಂಧದಿಂದ ಎಲ್ಲರೂ ಜೀವಂತರಾಗಿ ಏಳುತ್ತಾರೆ. ಈ ಭಾಗ್ಯವನ್ನು ಒಬ್ಬೊಬ್ಬನೂ ಕ್ರಮಬದ್ಧ ರೀತಿಯಲ್ಲಿ ಪಡೆಯುತ್ತಾನೆ. ಪ್ರಪ್ರಥಮ ಫಲವಾಗಿ ಕ್ರಿಸ್ತಯೇಸುವೇ ಜೀವಂತರಾದರು. ಅನಂತರ, ಕ್ರಿಸ್ತಯೇಸುವಿಗೆ ಸೇರಿದವರು ಯೇಸು ಪುನರಾಗಮಿಸುವಾಗ ಜೀವಂತರಾಗುತ್ತಾರೆ. ಅಂತ್ಯ ಬರುವುದು ಅನಂತರವೇ. ಆಗ ಯೇಸು ಎಲ್ಲಾ ಆಧಿಪತ್ಯವನ್ನೂ ಅಧಿಕಾರವನ್ನೂ ಶಕ್ತಿಯನ್ನೂ ನಿರ್ಮೂಲಮಾಡಿ ತಂದೆಯಾದ ದೇವರಿಗೆ ಸಾಮ್ರಾಜ್ಯವನ್ನು ಒಪ್ಪಿಸಿಕೊಡುವರು. ಶತ್ರುಗಳೆಲ್ಲರನ್ನು ತಮ್ಮ ಪಾದಪೀಠವಾಗಿಸಿಕೊಳ್ಳುವ ತನಕ ಅವರು ರಾಜ್ಯವಾಳಬೇಕಾಗಿದೆ. ಕಟ್ಟಕಡೆಗೆ ನಿರ್ಮೂಲವಾಗುವ ಶತ್ರುವೆಂದರೆ ಮೃತ್ಯುವೇ. “ದೇವರು ಎಲ್ಲವನ್ನು ಅಧೀನಪಡಿಸಿ ಆತನ ಪಾದಪೀಠವನ್ನಾಗಿಸಿದ್ದಾರೆ,” ಎಂದು ಲಿಖಿತವಾಗಿದೆ. “ಎಲ್ಲವನ್ನೂ ಅಧೀನಪಡಿಸಲಾಗಿದೆ,” ಎಂದು ಹೇಳುವಾಗ, ಹಾಗೆ ಅಧೀನಪಡಿಸಿದ ದೇವರು ಅದರಲ್ಲಿ ಸೇರಲಿಲ್ಲ ಎಂಬುದು ಸುಸ್ಪಷ್ಟವಾಗಿದೆ.
ಶುಭಸಂದೇಶ - ಲೂಕ 1: 39-56
ಮರಿಯಳು ಪ್ರಯಾಣಹೊರಟು ಜುದೇಯದ ಗುಡ್ಡಗಾಡಿನಲ್ಲಿರುವ ಒಂದು ಊರಿಗೆ ತ್ವರೆಯಾಗಿ ಬಂದಳು. ಅಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು. ಮರಿಯಳ ವಂದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿದ್ದ ಶಿಶು ನಲಿದಾಡಿತು; ಎಲಿಜಬೇತಳು ಪವಿತ್ರಾತ್ಮಭರಿತಳಾಗಿ ಹರ್ಷೋದ್ಗಾರದಿಂದ ಹೀಗೆಂದಳು: “ಸ್ತ್ರೀಯರಲ್ಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ! ನನ್ನ ಪ್ರಭುವಿನ ತಾಯಿ ನೀನು; ನನ್ನ ಬಳಿಗೆ ಬಂದುದು ಅದೆಂಥ ಭಾಗ್ಯ! ನಿನ್ನ ವಂದನೆಯ ದನಿ ನನ್ನ ಕಿವಿ ತಾಕಿದೊಡನೆ ನಲಿದಾಡಿತು ಆನಂದದಿಂದ, ನನ್ನ ಕರುಳ ಕುಡಿ!ನಂಬಿ ಧನ್ಯಳಾದೆ ನೀನು, ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು.” ಆಗ ಹೀಗೆಂದು ಮರಿಯಳು ಹೊಗಳಿದಳು: “ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ ! ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ !! ತನ್ನ ದಾಸಿಯ ದೀನತೆಯನು ನೆನಪಿಗೆ ತಂದುಕೊಂಡನಾತ ! ಧನ್ಯಳೆಂದು ಹೊಗಳುವರೆನ್ನನು ಇಂದಿನಿಂದ ಸರ್ವ ಜನಾಂಗ !! ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ ! ನಿಜಕ್ಕೂ ಆತನ ನಾಮಧೇಯ ಪರಮಪೂಜ್ಯ !! ಆತನಲ್ಲಿ ಭಯಭಕ್ತಿಯುಳ್ಳವರಿಗೆ ! ಆತನ ಪ್ರೀತಿ ತಲತಲಾಂತರದವರೆಗೆ !!
ಗರ್ವಹೃದಯಿಗಳನಾತ ಚದರಿಸಿರುವನು ! ಪ್ರದರ್ಶಿಸಿರುವನು ತನ್ನ ಬಾಹುಬಲವನು !! ಇಳಿಸಿಹನು ಗದ್ದುಗೆಯಿಂದ ಘನಾಧಿಪತಿಗಳನು ! ಏರಿಸಿರುವನು ಉನ್ನತಿಗೆ ದೀನದಲಿತರನು !! ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ ! ಹೊರದೂಡಿರುವನು ಸಿರಿವಂತರನು ಬರೀಗೈಯಲಿ !!ನೆರವಾದನು ತನ್ನ ದಾಸ ಇಸ್ರಯೇಲನಿಗೆ ! ಪೂರ್ವಜರಿಗಿತ್ತ ವಾಗ್ದಾನದ ಮೇರೆಗೆ !! ಮರೆಯಲಿಲ್ಲ ಆತ ಕರುಣೆತೋರಲು ಅಬ್ರಹಾಮನಿಗೆ ! ಅವನ ಸಂತತಿಗೆ, ಯುಗಯುಗಾಂತರದವರೆಗೆ !! ಮರಿಯಳು ಸುಮಾರು ಮೂರು ತಿಂಗಳು ಎಲಿಜಬೇತಳೊಡನೆ ತಂಗಿದ್ದು ತನ್ನ ಮನೆಗೆ ಹಿಂದಿರುಗಿದಳು.
ಚಿಂತನೆ :
ಮಾತೆ ಮರಿಯಳ ಜೀವನದುದ್ದಕ್ಕೂ ಕಷ್ಟಗಳ ಸುರಿಮಳೆಯೇ ಹಾಸುಹೊಕ್ಕಾಗಿತ್ತು ಆದರೂ ಆಕೆ ದೈವ ಯೋಜನೆಗೆ ಶರಣಾಗಿ ತನ್ನ ವಿಶ್ವಾವನ್ನು ಬಂಡೆಯಂತೆ ಸಶಕ್ತಗೊಳಿಸಿ, ಆ ವಿಶ್ವಾಸದ ದೀವಿಗೆಯ ಪ್ರಖರವಾಗಿ ಪ್ರಜ್ವಲಿಸುವಂತೆ ತನ್ನನ್ನೇ ಸಮರ್ಪಿಸಿಕೊಂಡಿದ್ದಳು. ಅಂತಹ ಧೀರ ಮಹಿಳೆ ಸಂತೃಪ್ತಿಯ ಜೀವನವನ್ನು ಮುಗಿಸಿ ಪರಂಪರೆಯ ನಂಬಿಕೆಯಂತೆ ಸುಮಾರು ಕ್ರಿಸ್ತಶಕ ೪೧ರಲ್ಲಿ ಪ್ರೇಷಿತರ ಸಮ್ಮುಖದಲ್ಲಿ ಮರಣವನ್ನು ಹೊಂದಿದ ನಂತರ ದೇವಾನುಗ್ರಹದಿಂದ ಶರೀರಾತ್ಮಗಳೊಡನೆ ದೇವರ ಅನಂತ ನಿವಾಸವನ್ನು ಸೇರಿದಳು. (The immaculate Mother of God, the ever Virgin Mary, having completed the course of her earthly life, was assumed body and soul into heavenly glory - Pius XII Munificentissimus Deus 44). ಅಲ್ಲಿ ಅವರು ತ್ರೈಏಕದೇವರ ಸಮ್ಮುಖದಲ್ಲಿ ನಿರಂತರವೂ ಪರಿಪೂರ್ಣ ಸಂತೋಷದ ಹೊನಲಿನಲ್ಲಿ ಮಿಂದು, ತೇಲುತ್ತಾ ಆ ಸವಿಯನ್ನು ನಾವೂ ಸಹ ಅನುಭವಿಸಲು ಅನುವಾಗುವಂತೆ ನಮಗಾಗಿ ಪ್ರಾರ್ಥಿಸುತ್ತಿದ್ದಾಳೆ.
ನಮ್ಮ ಮುಕ್ತಿಗಾಗಿ ತನ್ನನ್ನು ಸಮರ್ಪಿಸಿಕೊಂಡು ಲೋಕ ರಕ್ಷಕರನ್ನು ನೀಡಿದ ಆ ವೀರ ವನಿತೆ ದೇವಾನುಗ್ರಹದಿಂದ ಶರೀರಾತ್ಮಗಳೊಡನೆ ಸ್ವರ್ಗದಲ್ಲಿ ರಾರಾಜಿಸುತ್ತಿದ್ದಾಳೆ. ಇದು ನಮ್ಮ ವಿಶ್ವಾಸದ ಪರಮ ಸತ್ಯಗಳಲ್ಲಿ ಒಂದು. ಮಾತೆಯು ದೇವಾನುಗ್ರಹದಿಂದ ಶರೀರಾತ್ಮಗಳೊಡನೆ ಸ್ವರ್ಗ ಸ್ವೀಕೃತಳಾದುದರ ಬಗ್ಗೆ ಪ್ರಾಯಶಃ ಎರಡನೇ ಅಥವ ಮೂರನೇ ಶತಮಾನದಲ್ಲಿ ರಚಿತವಾಗಿರುವ "Transitus Mariae" (The Crossing Over of Mary) ಮತ್ತು ನಾಲ್ಕನೇ ಶತಮಾನದಲ್ಲಿ ರಚಿಸಲಾದ Deus Liber Requiel Maria (The Book of Mary's Repose) ಎಂಬ ಪುಸ್ತಕಗಳಲ್ಲಿ ವಿವರಣೆಯನ್ನು ಕಾಣಬಹುದು. ಆದರೆ ಈ ಪರಮ ಸತ್ಯವು ಪೂರ್ವದ ಧರ್ಮಸಭೆಯಲ್ಲಿ ಹಿಂದಿನಿಂದಲೇ ಪ್ರಚಲಿತದಲ್ಲಿತ್ತು. ಪಶ್ಚಿಮದ ಧರ್ಮಸಭೆ ಅದನ್ನು ಮುಕ್ತವಾಗಿ ಅಂಗಿಕರಿಸಿರಲಿಲ್ಲ. ೧೩ನೇ ಶತಮಾನದಲ್ಲಿ ಆ ಸತ್ಯ ಎಲ್ಲೆಡೆ ಹರಡಿತು. ಅಂದಿನಿಂದ ಈ ಹಬ್ಬವನ್ನು The Feast of Saint Mary the Virgin, Mother of our Lord Jesus Christ and the Falling Asleep of the Blessed Virgin Mary- the Dormition ಎಂಬ ವಿವಿಧ ಹೆಸರುಗಳಿಂದ ಆಚರಿಸುತ್ತಿದ್ದರು.
ದೈವಶಾಸ್ತ್ರಜ್ಞರು ಈ ಪರಮ ಸತ್ಯವನ್ನು ವಿವಿಧ ಆಯಾಮಗಳಲ್ಲಿ ಚರ್ಚಿಸಿದರು. ಮೇ ೧೯೪೬ರಲ್ಲಿ ಈ ಪರಮ ಸತ್ಯವನ್ನು ವ್ಯಾಖ್ಯಾನಿಸಲು ವಿಶ್ವಗುರು ೧೨ನೇ ಪಯಸ್(೧೨ನೇ ಭಕ್ತಿನಾಥರು) ನವರು Deiparae Virginis Mariae ಎಂಬ ವಿಶ್ವಪರಿಪತ್ರವನ್ನು ಹೊರಡಿಸಿ ವಿಶ್ವದ ಎಲ್ಲಾ ಧರ್ಮಾಧ್ಯಕ್ಷರುಗಳನ್ನು ದೈವಶಾಸ್ತ್ರಜ್ಞರುಗಳನ್ನು ಮತ್ತು ಶ್ರೀಸಾಮಾನ್ಯರನ್ನು ಚರ್ಚೆಗೆ ಅಹ್ವಾನಿಸಿದರು. ಇದರಲ್ಲಿ ೧,೧೮೧ ಮಂದಿ ಭಾಗವಹಿಸಿದ್ದರು. ಅದರಲ್ಲಿ ೬ ಜನರು ಮಾತ್ರ ತಮ್ಮ ಬೆಂಬಲವನ್ನು ನೀಡಲು ಹಿಂಜರಿದರು. ಅಂತಿಮವಾಗಿ ನವಂಬರ್ ೧, ೧೯೫೦ರಲ್ಲಿ ವಿಶ್ವಗುರು ೧೨ನೇ ಪಯಸ್‌ರವರು ತಮ್ಮ ಪ್ರೇಷಿತ ಸಂವಿಧಾನ "Munificentissimus Deus" (Most Bountiful God =ಕೊಡುಗೈದಾನಿ ದೇವರು In the Apostolic constitution) ನಲ್ಲಿ “ಮಾತೆ ಮರಿಯಮ್ಮ ದೈವಾನುಗ್ರಹದಿಂದ ತನ್ನ ಲೌಕಿಕ ಜೀವನವನ್ನು ಸಂಪೂರ್ಣಗೊಳಿಸಿ ನಿಧನಳಾದಳು, ನಂತರ "ಶರೀರಾತ್ಮಗಳೊಡನೆ ಸ್ವರ್ಗಸ್ವೀಕೃತಳಾದಳು" ಎಂದು ಘೋಷಿಸಿ ಇದು ವಿಶ್ವಾಸದ ಪರಮ ಸತ್ಯಗಳೊಂದು” ಎಂದು ಘೋಷಿಸಿದರು.
ಅಂದಿನಿಂದ ಧರ್ಮಸಭೆಯು ಆಗಸ್ಟ್ ೧೫ ಅನ್ನು ಸಾರ್ವತ್ರಿಕ ಮಹೋತ್ಸವವಾಗಿ ಆಚರಿಸುತ್ತಿದೆ. ಈ ಮಹೋತ್ಸವವನ್ನು ಕಥೋಲಿಕರು ಮಾತ್ರವಲ್ಲದೆ ಆಂಗ್ಲಿಕನರು, ಈಸ್ಟರ್ನ್ ಆರ್ಥೋಡಾಕ್ಸರು, ಒರಿಯಂಟಲ್ ಆರ್ಥೋಡಾಕ್ಸರು ಸಹ ಆಚರಿಸುತ್ತಾರೆ. ಮಾತೆ ಮರಿಯ ಸದಾ ದೈವಾನುಗ್ರಹಭರಿತಳಾಗಿದ್ದಳು ಹಾಗೂ ಸರ್ವೇಶ್ವರ ಆಕೆಯೊಡನಿದ್ದರು (ಲೂಕ ೧:೨೮). ಇದಕ್ಕೆ ಅನುಗಣವಾಗಿ ಮಾತೆಯು ಶ್ರದ್ಧೆ, ಪ್ರಾಮಾಣಿಕತೆ, ನಿಷ್ಠೆ, ಪರಿಶುದ್ಧತೆ, ಪರ ಪ್ರೀತಿಯಿಂದ ಬಾಳಿದರು. ಎಲ್ಲಕ್ಕಿಂತ ಮಿಗಿಲಾಗಿ ಆಕೆಯ ಆಳವಾದ ವಿಶ್ವಾಸ ಹಾಗೂ ವಿಧೇಯತೆಯು ತ್ರೈಏಕನಿಗೆ ಮೆಚ್ಚಿಗೆಯಾಗಿ ಅವರು ಮಾತೆಗಿತ್ತ ಉದಾರ ಹಾಗೂ ಉಚಿತ ಬಹುಮಾನವೇ ಈ ಅನಂತ ಸೌಭಾಗ್ಯ. "Assumpta est Maria in coelum: gaudent angeli! God has taken Mary - body and soul - to Heaven and the Angels rejoice!
ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ, ಎಚ್ಚರಗೊಳ್ಳಲಿ ನನ್ನ ನಾಡು...
ವಾಲ್ಸ್ ಎಂಬ ಕಾದಂಬರಿಯಲ್ಲಿ ವೈಕೊಮ್ ಮುಹಮದ್ ಬಸೀರ್ ಎಂಬ ಲೇಖಕ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾನೆ:
೧. ನಾನು ಏಕೆ ಸ್ವತಂತ್ರನಾಗಿರಬೇಕು?
೨. ಯಾರಿಗೆ ಸ್ವಾತಂತ್ರ‍್ಯ ಬೇಕು?
ಕಾದಂಬರಿಕಾರ ಇಲ್ಲಿ ಸ್ವಾತಂತ್ರ್ಯದ ಅರ್ಥಹೀನತೆಯ ಬಗ್ಗೆ ಹೇಳುತ್ತಿದ್ದಾನೆ. ಪ್ರೀತಿ ರಹಿತ ಜಗತ್ತಿನಲ್ಲಿ ಅಥವಾ ದ್ವೇಷ ತುಂಬಿದ ಜಗತ್ತಿನಲ್ಲಿ ಸ್ವಾತಂತ್ರ್ಯದ ಬೆಲೆ ಏನು? ಒಂದು ಭ್ರಾತೃತ್ವದ ಸಮುದಾಯದಲ್ಲಿ ಮಾತ್ರ ಸ್ವಾತಂತ್ರ್ಯ ಮತ್ತು ಸಮಾನತೆಗಳಿಗೆ ಅರ್ಥವಿರುವುದು. ನಾವು ಪ್ರಂಚ್ ಕ್ರಾಂತ್ರಿಯ ಧ್ಯೇಯವಾಕ್ಯವನ್ನು ನೆನೆಸಿಕೊಳ್ಳುವುದು ಸೂಕ್ತ: ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ; ಇವುಗಳಲ್ಲಿ ಯಾವುದೂ ಪರಸ್ಪರ ಒಂದರಿಂದ ಬೇರ್ಪಡಿಸಲಾಗದು.
ಕೊನೆಗೆ, ರವೀಂದ್ರನಾಥ ಠಾಕೂರರ ಕವಿತೆಯೊಂದಿಗೆ ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧಗೊಳ್ಳೋಣ.
ಎಲ್ಲಿ ಮನಸ್ಸು ನಿರ್ಭಯವೋ,
ಶಿರ ಎತ್ತರಕ್ಕೆ ನಿಮಿರಿ ನಿಂತಿದೆಯೋ
ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ,
ಎಚ್ಚರಗೊಳ್ಳಲಿ ನನ್ನ ನಾಡು
ಎಲ್ಲಿ ಜ್ಞಾನ ಸ್ವತಂತ್ರವೋ
ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ,
ಎಚ್ಚರಗೊಳ್ಳಲಿ ನನ್ನ ನಾಡು
ಎಲ್ಲಿ ಜಗತ್ತು ಸಂಕುಚಿತವಾದ
ಮನೆಗೋಡೆಗಳಿಂದ ಒಡೆದು
ಚೂರುಚೂರಾಗಿಲ್ಲವೋ
ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ
ಎಚ್ಚರಗೊಳ್ಳಲಿ ನನ್ನ ನಾಡು
ಎಲ್ಲಿ ಮನಸ್ಸನ್ನು ನೀನು ಸತತ
ವಿಸ್ತರಣಶೀಲ ವಿಚಾರ ಕ್ರಿಯೆಗಳಿಗೆ ಮುನ್ನಡೆಸುತ್ತೀಯೋ
ಆ ಸ್ವಾತಂತ್ರ್ಯ ಸ್ವರ್ಗಕ್ಕೆ ಓ ತಂದೆ,
ಎಚ್ಚರಗೊಳ್ಳಲಿ ನನ್ನ ನಾಡು
No comments:
Post a Comment