Thursday, 15 August 2019

ಸಾಧಾರಣ ಕಾಲದ ಎರಡನೆಯ ಭಾನುವಾರ

ಪ್ರವೇಶ ಶ್ಲೋಕ                                           ಕೀರ್ತ 65 : 4
ದೇವಾ, ಜಗವೆಲ್ಲ ಪೂಜಿಪುದು ನಿನ್ನನು, ಪೊಗಳಿ ಮಾಳ್ಪುದು ಗುಣಗಾನವನು, ಮಹೋನ್ನತನೇ, ಕೀರ್ತಿಸುವುದು ನಿಮ್ಮ ನಾಮವನು.

ಸಭಾ ಪ್ರಾರ್ಥನೆ
ಇಹವನ್ನೂ ಪರವನ್ನೂ ಪರಿಪಾಲಿಸುವ ಸರ್ವಶಕ್ತ  ನಿತ್ಯ ದೇವರೇ,
ನಿಮ್ಮ ಪ್ರಜೆಯ ಕೋರಿಕೆಗಳನ್ನು ಕರುಣೆಯಿಂದ ಆಲಿಸಿರಿ.
ನಮ್ಮ ಕಾಲಕ್ಕೆ ನಿಮ್ಮ ಶಾಂತಿಯನ್ನು ಅನುಗ್ರಹಿಸಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಅರ್ಪಣಾ ಪ್ರಾರ್ಥನೆ
ಪ್ರಭುವೇ, ಎಷ್ಟು ಬಾರಿ ನಾವು ಬಲಿಯನ್ನು ಅರ್ಪಿಸುತ್ತೇವೋ,
ಅಷ್ಟು ಬಾರಿ ನಮ್ಮ ರಕ್ಷಣಾ ಕಾರ್ಯವು ನೆರವೇರುತ್ತದೆ.
ಆದ್ದರಿಂದ ಆಗಾಗ್ಗೆ ಯೋಗ್ಯ ರೀತಿಯಿಂದ
ಅದನ್ನು ನಾವು ಒಪ್ಪಿಸುವಂತೆ ಅನುಗ್ರಹಿಸಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಪರಮ ಪ್ರಸಾದ ಶ್ಲೋಕ                                      ಕೀರ್ತ 22 : 5
ಸಜ್ಜುಗೊಳಿಸುವೆ ನೀ ನನಗೌತಣವನು, ತುಂಬಿ ತುಳುಕಿಸುವೆ ಪಾನಪಾತ್ರೆಯನು ನನ್ನ ದಾಹವನು ತಣಿಸಲೆಂದು.

ಅಥವಾ                                                      1 ಯೊವಾ 4 : 16
ದೇವರು ನಮ್ಮಲ್ಲಿಟ್ಟಿರುವ ಪ್ರೀತಿ ನಮಗೆ ಗೊತ್ತಿದೆ, ಅದರಲ್ಲಿ ನಮಗೆ ವಿಶ್ವಾಸವಿದೆ.

ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ಪ್ರೀತಿ ಸ್ವರೂಪರಾದ ನಿಮ್ಮ ಪವಿತ್ರಾತ್ಮರನ್ನು
ನಮ್ಮ ಮೇಲೆ ಸುರಿಸಿರಿ.
ಒಂದೇ ಸ್ವರ್ಗೀಯ ರೊಟ್ಟಿಯಿಂದ ತೃಪ್ತರಾದ ನಾವು
ಒಂದೇ ವಿಶ್ವಾಸದಲ್ಲಿ ಸಾಮರಸ್ಯದಿಂದ ಬಾಳುವಂತೆ ಮಾಡಿರಿ.

ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

No comments:

Post a Comment