Thursday, 15 August 2019

ಪರಮ ಪ್ರಸಾದಕ್ಕೆ ಭೇಟಿ - ಆರಾಧನೆ


ಓ ಪೆಲ್ಲಿಕನ್ ಪಕ್ಷಿ, ಓ ಯೇಸು ಸ್ವಾಮಿ 

ಆಖಿಲ ವಿಶ್ವವ ಪಾಪಾಕ್ರಮದಿ ವಿಮೋಚಿಸಬಲ್ಲ ನಿಮ್ಮ ರಕ್ತದಿ 

ಈ ಕೆಳಂಕಿತ ಪಾಪಿಯ ಶುದ್ಧಿಸಿ 

ಈ ರೂಪದೊಳ್ ನಿಮ್ಮನ್ನೀಗ ನೋಡುವೆ 

ಎನ್ನ ದೇಹ ನೀಗಿರೆಂದು ಬೇಡುವೆ 

ಪ್ರತ್ಯಕ್ಷ ನಿಮ್ಮ ನಾ ನೋಡುವಂತೆ 

ನೀಡಿ ಅನಂತ ಸುಖ ಪಡೆಯುವಂತೆ 

- ಸಂತ ತೋಮಾಸ್ ಅಕ್ವಿನಾಸ್ 






ಪರಮ ಪ್ರಸಾದಕ್ಕೆ ಭೇಟಿ 

ಪ್ರಾರಂಭ ಪ್ರಾರ್ಥನೆ 

ಸ್ವಾಮಿ ಯೇಸುಕ್ರಿಸ್ತರೇ, ನೀವು ಬಲಿಪೀಠದ ಸಂಸ್ಕಾರದಲ್ಲಿ ನಿಜವಾಗಿ ಇದ್ದೀರೆಂದು ನಂಬುತ್ತೇವೆ. ಮನುಷ್ಯರ ಮೇಲೆ ನಿಮಗಿರುವ ಪ್ರೀತಿಯಿಂದ ಹಗಲು ರಾತ್ರಿಯೆನ್ನದೆ ಈ ಪರಮ ಪ್ರಸಾದದಲ್ಲಿ ಇದ್ದು ಪೂರ್ಣ ಪ್ರೀತಿಯಿಂದಲೂ ಸಹಾನುಭೂತಿಯಿಂದಲೂ ನಿಮ್ಮನ್ನು ಕಾಣಲು ಯಾರು ಬರುವರೋ ಎಂದು ಎದುರು ನೋಡುತ್ತಾ, ಕರೆಯುತ್ತಾ ಬಂದವರನ್ನೆಲ್ಲಾ ಆದರದಿಂದ ಸ್ವಾಗತಿಸುತ್ತೀರಿ. ಈ ಪರಮ ಪ್ರಸಾದದಲ್ಲಿ ನೀವು ನಿಜವಾಗಿಯೂ ಇದ್ದೀರೆಂದು ನಾನು ನಂಬುತ್ತೇನೆ. ಅತ್ಯಲ್ಪನಾದ ನಾನು ನನ್ನ ಹೃತ್ಪೂರ್ವಕ ಆರಾಧನೆಯನ್ನು ನಿಮಗೆ ಸಲ್ಲಿಸುತ್ತೇನೆ. ನೀವು ನನಗೆ ಕರುಣಿಸಿರುವ ಎಲ್ಲಾ ಕೃಪಾವರಗಳಿಗಾಗಿ, ಮುಖ್ಯವಾಗಿ ನಿಮ್ಮನ್ನೇ ನನಗೆ ಈ ಪರಮ ಪ್ರಸಾದದಲ್ಲಿ ಕರುಣಿಸಿದ್ದಕ್ಕಾಗಿ, ನಿಮ್ಮ ಪವಿತ್ರ ತಾಯಿಯಾದ ಮರಿಯಮ್ಮನವರನ್ನು ನನ್ನ ಸಹಾಯಕಳನ್ನಾಗಿ ನೇಮಿಸಿರುವುದಕ್ಕಾಗಿ ಮತ್ತು ಈಗ ನಿಮ್ಮನ್ನು ಕಾಣಲು ಈ ದೇವಾಲಯಕ್ಕೆ ನನ್ನನ್ನು ಬರಮಾಡಿದ್ದಕ್ಕಾಗಿ ನಿಮಗೆ ನನ್ನ ವಂದನೆಯನ್ನು ಸಲ್ಲಿಸುತ್ತೇನೆ ಸ್ವಾಮಿ. 

ಮೂರು ಉದ್ದೇಶಗಳಿಗಾಗಿ ನಾವೀಗ ನಿಮ್ಮ ಪ್ರೇಮಭರಿತವಾದ ಹೃದಯವನ್ನು ನಮಿಸುತ್ತೇವೆ: 

1. ಇಷ್ಟು ಆಶ್ಚರ್‍ಯಕರವಾದ ಈ ಪರಮಪ್ರಸಾದವನ್ನು ನನಗೆ ಪಾಲಿಸಿದ್ದಕ್ಕಾಗಿ 

2. ನಮ್ಮ ಶುತ್ರುಗಳು ಈ ದಿವ್ಯ ಪರಮಪ್ರಸಾದದ ವಿರುದ್ಧ ಮಾಡುವ ಭ್ರಷ್ಟಾಚಾರಗಳಿಗೆ ಪ್ರಾಯಶ್ಚಿತ್ತ ಮಾಡುವುದಕ್ಕಾಗಿ 

3. ಈ ಪರಮ ಪ್ರಸಾದದಲ್ಲಿರುವ ನಿಮ್ಮನ್ನು ಜನರು ಎಲ್ಲೆಲ್ಲಿ ತಕ್ಕಂತೆ ಸನ್ಮಾನಿಸುವುದಿಲ್ಲವೊ ಅಥವಾ ನಿಮ್ಮನ್ನು ಕಾಣಲು ಬರುವುದಿಲ್ಲವೋ ಆ ಸ್ಥಳಗಳಲ್ಲೆಲ್ಲ ನಿಮ್ಮನ್ನು ಈ ಭೇಟಿಯ ಮೂಲಕ ಆರಾಧಿಸುವುದಕ್ಕಾಗಿ 

ನನ್ನ ಯೇಸುವೇ, ನನ್ನ ಸಂಪೂರ್ಣ ಹೃದಯದಿಂದ ನಿಮ್ಮನ್ನು ಪ್ರೀತಿಸುತ್ತೇನೆ. ನಿಮ್ಮ ಅಪರಿಮಿತವಾದ ದಯೆಗೆ ವಿರೋಧವಾಗಿ ಎಷ್ಟೋ ಬಾರಿ ಪಾಪಗಳನ್ನು ಮಾಡಿದ್ದಕ್ಕಾಗಿ ನೊಂದುಕೊಳ್ಳುತ್ತೇನೆ. ನಿಮ್ಮ ಕೃಪೆಯ ಸಹಾಯದಿಂದ ಮುಂದಾದರೂ ನಿಮ್ಮನ್ನು ನೋಯಿಸುವುದಿಲ್ಲವೆಂದು ನಿರ್ಧರಿಸುತ್ತೇನೆ. ನಾನು ಅಯೋಗ್ಯನಾದರೂ ಇದೋ ನನ್ನನೇ ಸಂಪೂರ್ಣವಾಗಿ ನಿಮಗೆ ಸಮರ್ಪಿಸುತ್ತೇನೆ. ನನ್ನ ಇಚ್ಛೆ, ನನ್ನ ಒಲವು ನನ್ನ ಆಶೆ, ನನ್ನ ಸರ್ವಸ್ವವನ್ನೂ ನಿಮಗೆ ಅರ್ಪಿಸುತ್ತೇನೆ. ಇಂದಿನಿಂದ ನನ್ನನೂ ನನಗಿರುವುದೆಲ್ಲವನ್ನೂ ನಿಮ್ಮ ಇಚ್ಛೆಯ ಪ್ರಕಾರ ಉಪಯೋಗಿಸಿರಿ. ನಿಮ್ಮ ಪವಿತ್ರ ಪ್ರೀತಿಯನ್ನು ಕೃಪಾವರದ ಅಂತಸ್ತಿನಲ್ಲಿ ಕೊನೆಯವರೆಗೂ ಸ್ಥಿರವಾಗಿ ನಿಲ್ಲುವ ಮತ್ತು ಪ್ರತಿಯೊಂದು ವಿಷಯದಲ್ಲಿಯೂ ನಿಮ್ಮ ಇಚ್ಛೆಯನ್ನು ಸಂಪೂರ್ಣವಾಗಿ ನೆರವೇರಿಸುವ ಭಾಗ್ಯವನ್ನು ನನಗೆ ಕರುಣಿಸಿದರೆ ಸಾಕೆಂದು ಆಸೆಯಿಂದ ಪ್ರಾರ್ಥಿಸುತ್ತೇನೆ. ಶುದ್ಧೀಕರಣ ಸ್ಥಾನದಲ್ಲಿರುವ ಎಲ್ಲಾ ಆತ್ಮಗಳಿಗೆ, ವಿಶೇಷವಾಗಿ ಪರಮಪ್ರಸಾದದ ಭಕ್ತರಿಗೆ ಮತ್ತು ಅತಿ ಪರಿಶುದ್ಧ ಮರಿಯಮ್ಮನವರ ಭಕ್ತರಿಗೆ ಕರುಣೆಯನ್ನು ತೋರಿ, ಎಲ್ಲಾ ಪಾಪಿಷ್ಟರ ಮೇಲೆಯೂ ದಯೆಯನ್ನು ತೋರಿ. ಕೊನೆಯದಾಗಿ ನನ್ನ ಪ್ರಿಯ ರಕ್ಷಕರೇ, ನನ್ನ ಹೃದಯದ ಎಲ್ಲಾ ಉದ್ದೇಶಗಳನ್ನು ನಿಮ್ಮ ಪ್ರೇಮಪೂರ್ಣ ಹೃದಯದ ಆಸೆಗಳೊಂದಿಗೆ ಒಂದಾಗಿಸಿ ಅವುಗಳನ್ನು ನಿಮ್ಮ ನಿತ್ಯ ಪಿತನಿಗೆ ಅರ್ಪಿಸಿ, ನಿಮ್ಮ ಮೇಲಿನ ಪ್ರೀತಿಗಾಗಿ ಅವುಗಳನ್ನು ಅಂಗೀಕರಿಸಿ ನೇರವೇರಿಸುವಂತೆ ನಿಮ್ಮ ಹೆಸರಿನಲ್ಲಿ ಅವರನ್ನು ಪ್ರಾರ್ಥಿಸುತ್ತೇನೆ. ಆಮೆನ್. 

ಮಾನಸಿಕವಾಗಿ ಪರಮ ಪ್ರಸಾದ ಸ್ವೀಕಾರ 

ನನ್ನ ಯೇಸುವೇ, ನೀವು ಈ ದಿವ್ಯ ಪರಮಪ್ರಸಾದದಲ್ಲಿ ಇದ್ದೀರೆಂದು ವಿಶ್ವಾಸಿಸುತ್ತೇನೆ. ನಾನು ನಿಮ್ಮನ್ನು ಎಲ್ಲಕ್ಕಿಂತಲೂ ಮೇಲಾಗಿ ಪ್ರೀತಿಸುತ್ತೇನೆ ಮತ್ತು ನೀವು ನನ್ನಾತ್ಮಕ್ಕೆ ಚಿತ್ತ್ಯಸಬೇಕೆಂದು ಕೋರುತ್ತೇನೆ. ನಿಮ್ಮನ್ನೀಗ ಸಾಂಸ್ಕಾರಿಕವಾಗಿ ಸ್ವೀಕರಿಸಲು ಆಗದಿರುವುದರಿಂದ ಮಾನಸಿಕವಾಗಿಯಾದರೂ ನನ್ನ ಹೃದಯಕ್ಕೆ ಬನ್ನಿರಿ. ನೀವು ನನ್ನಲ್ಲಿ ಬಂದಿದ್ದೀರೆಂದು ನೆನಸಿಕೊಂಡು ನಿಮ್ಮನ್ನು ಸ್ವಾಗತಿಸುತ್ತೇನೆ. ನಿಮ್ಮೊಡನೆ ಸಂಪೂರ್ಣವಾಗಿ ಒಂದಾಗಿರಲು ಬಯಸುತ್ತೇನೆ. ನಾನು ಎಂದೆಂದಿಗೂ ನಿಮ್ಮ ಸಂಗಡ ಇರುವಂತೆ ಮಾಡಿ ಸ್ವಾಮಿ. 

ಪರಮ ಪ್ರಸಾದದ ಭೇಟಿ 

ನನ್ನ ದೃಷ್ಟಿಯೂ ಮನಸ್ಸೂ ಪ್ರತಿ ದಿನ ಅದ ಮೇಲಿರುವುದು  (1 ಅರಸು 9:3) 

ಈ ಮಧುರ ವಾಗ್ದಾನವನ್ನು ಯೇಸು ಪರಮಪ್ರಸಾದದ ಸ್ಥಾಪನೆಯ ಮೂಲಕ ಈಡೇರಿಸಿದ್ದಾರೆ. ಅಲ್ಲಿ ಹಗಲು ರಾತ್ರಿ ತಂಗಿದ್ದಾರೆ. 

ಈ ನನ್ನ ಪ್ರಭುವೇ, ಭಕ್ತರು ನಿಮ್ಮನ್ನು ಸಂಧಿಸಲು ಬಂದು, ನಿಮ್ಮ ಸಂಗಡ ಇದ್ದು, ನಿಮಗೆ ಆರಾಧನೆ ಸಲ್ಲಿಸುವುದು ಹಗಲಿನಲ್ಲಿ ಅಲ್ಲವೇ? ಹೀಗಿರುವಲ್ಲಿ ನೀವು ಹಗಲು ಮಾತ್ರ ಇದ್ದಿದ್ದರೆ ಸಾಕಾಗುತ್ತಿರಲಿಲ್ಲವೇ? ನಿಮ್ಮನ್ನು ಪ್ರತ್ಯೇಕವಾಗಿ ಬಿಟ್ಟು, ದೇವಾಲಯದ ಬಾಗಿಲುಗಳನ್ನು ಮುಚ್ಚಿ, ಜನರು ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದಾಗಲೂ ನೀವು ಮಾತ್ರ ಇಡೀ ರಾತ್ರಿ ಇಲ್ಲಿರುವುದರಿಂದ ಪ್ರಯೋಜನವೇನು? ಹೌದು, ನಿಮ್ಮ ನಡತೆಗೆ ಕಾರಣ ಇದೀಗ ನನಗೆ ತಿಳಿಯಿತು. ಪ್ರೀತಿಯು ನಿಮ್ಮನ್ನು ನಮ್ಮ ಬಂಧಿಯನ್ನಾಗಿ ಮಾರ್ಪಡಿಸಿದೆ. ನೀವು ನಮ್ಮನ್ನು ಅಷ್ಟಾಗಿ ಪ್ರೀತಿಸುವುದರಿಂದ ಈ ಲೋಕಕ್ಕೆ ಕಟ್ಟುಬಿದ್ದು, ಹಗಲಾಗಲೀ, ರಾತ್ರಿಯಾಗಲೀ, ನಮ್ಮನ್ನು ಆಗಲಿರಲು ಸಾಧ್ಯವಿಲ್ಲವಾಗಿದೆ. 

ಈ ನನ್ನ ಅತಿ ಪ್ರಿಯ ರಕ್ಷಕರರೇ, ನಿಮ್ಮ ಪರಿಪೂರ್ಣ ಪ್ರೀತಿಯ ಕಾರಣ ಜನರೆಲ್ಲರೂ ಪರಮಪ್ರಸಾದದಲ್ಲಿರುವ ನಿಮ್ಮ ಬಳಿಯೇ ಇದ್ದು, ಬಲವಂತದಿಂದಲ್ಲದೆ ನಿಮ್ಮನ್ನು ಬಿಟ್ಟು ಹೋಗಬಾರದು. ಒಂದು ವೇಳೆ ನಿಮ್ಮನ್ನು ಬಿಟ್ಟು ಹೋಗಬೇಕಾದರೆ ಅವರೆಲ್ಲರೂ ತಮ್ಮ ತಮ್ಮ ಪೂರ್ಣ ಹೃದಯಗಳನ್ನು ಪೂರ್ಣ ಮಮತೆಯನ್ನೂ ಈ ದಿವ್ಯ ಪೀಠದ ಅಡಿಯಲ್ಲಿಯೇ ಬಿಟ್ಟು ಹೋಗಬೇಕು. ನಮ್ಮ ಕುಂದುಕೊರತೆಗಳನ್ನು ನೀಗಿಸಲು ಮರುದಿನ ನಿಮ್ಮ ಭಕ್ತರನ್ನು ಬರಮಾಡಿಕೊಳ್ಳಲು ತೆರೆದ ಕಣ್ಣುಗಳಿಂದ, ಬಿಚ್ಚು ಹೃದಯದಿಂದ ಕಾದಿರುವ ನೆರವಿನ ದೇವರಾದ ನಿಮ್ಮನ್ನು ಅವರು ಅಧ್ಯಾತ್ಮಿಕವಾಗಿಯಾದರೂ ಬಿಟ್ಟು ಹೋಗಬಾರದು. 

ನನ್ನ ಯೇಸುವೇ, ನಿಜವಾಗಿಯೂ ನಾನು ನಿಮ್ಮ ಮೆಚ್ಚುಗೆಯನ್ನು ಸಂಪಾದಿಸಬೇಕೆಂದಿದ್ದೇನೆ. ನನ್ನ ಪೂರ್ಣ ಇಚ್ಛೆ ಮತ್ತು ನನ್ನ ಪೂರ್ಣ ಪ್ರೀತಿಯನ್ನು ನಿಮಗೆ ಅರ್ಪಿಸುತ್ತೇನೆ. ಓ ಮಹಿಮಾಭರಿತ ದೇವರೇ, ನಮ್ಮ ಹತ್ತಿರವಿದ್ದು ನಮ್ಮ ಒಡನಾಡಿಯಾಗಿರಬೇಕೆಂದು ಮಾತ್ರವಲ್ಲ, ನಿಮ್ಮನ್ನು ಪ್ರೀತಿಸುವವರಿಗೆ ನಿಮ್ಮನ್ನೇ ಪರಮಪ್ರಸಾದದಲ್ಲಿ ಕೊಡಬೇಕೆಂದು ನೀವು ಈ ದಿವ್ಯ ಸಂಸಕಾರದಲ್ಲಿ ಇದ್ದೀರಿ. ಆದರೆ ಸ್ವಾಮಿ, ನಿಮ್ಮ ಮಾಂಸವನ್ನು ಭುಜಿಸಲು ಯಾರು ತಾನೇ ಮುಂದೆ ಬರಲು ಧೈರ್‍ಯಗೊಳ್ಳುವರು? ಅಥವಾ ಅದಕ್ಕೆ ವಿರುದ್ಧವಾಗಿ ನಿಮ್ಮಿಂದ ದೂರ ಸರಿಯಲು ಯಾರಿಂದ ತಾನೇ ಸಾಧ್ಯ? ನಮ್ಮೊಳಗೆ ಪ್ರವೇಶಿಸಿ , ನಮ್ಮ ಹೃದಯಗಳನ್ನು ವಶಪಡಿಸಿಕೊಳ್ಳಬೇಕೆಂಬ ಕಾರಣದಿಂದಲೇ ನೀವಿಲ್ಲಿ ಈ ದ್ರವ್ಯಾಂತರವಾದ ರೊಟ್ಟಿಯಲ್ಲಿ, ಪ್ರಸನ್ನರಾಗಿದ್ದೀರಿ. ನಾವು ನಿಮ್ಮನ್ನು ಸ್ವಾಗತಿಸಬೇಕೆಂದು ಆಶಿಸುತ್ತೀರಿ: ನಮ್ಮೊಡನೆ ಒಂದಾದಾಗ ಆನಂದಿಸುತ್ತೀರಿ, ಇಂದೇ ಬನ್ನಿರಿ. ನನ್ನ ಯೇಸುವೇ, ಬನ್ನಿರಿ. ನೀವು ನನ್ನ ಹೃನ್ಮನಗಳ ದೇವರಾಗುವಂತೆ ನಿಮ್ಮನ್ನು ನನ್ಮೊಳಗೆ ಸ್ವಾಗತಿಸುತ್ತೇನೆ. ನನ್ನ ಪ್ರೀಯ ರಕ್ಷಕರೇ, ನನ್ನ ಇಚ್ಚೆ, ನನ್ನ ಸಂತೋಷ, ನನ್ನ ಸೌಕರ್‍ಯ, ನನಗೆ ಸ್ವಂತವಾದವುಗಳನ್ನೆಲ್ಲಾ ನಿಮ್ಮ ಕೈವಶಮಾಡಿಕೊಟ್ಟು, ನಿಮ್ಮ ಸುಪ್ರೀತಿಗೆ ಶರಣಾಗುತ್ತೇನೆ. 

ಓ ಪ್ರೇಮವೇ, ಓ ಕರುಣಾಮಯಿಯೇ, ನೀವು ನನ್ನ ಇಡೀ ಜೀವಮಾನದ ಒಡೆಯರೂ, ಅರಸರೂ ಆಗಿರಿ. ನನ್ನಲ್ಲಿ ನಿಮ್ಮದಲ್ಲದೆ ನನ್ನದೇನಿದ್ದರೂ ಅದನ್ನೆಲ್ಲಾ ಪ್ರಭುವೇ ನಾಶಮಾಡಿರಿ. 

ಓ ನನ್ನ ಪ್ರೇಮವೇ, ನನ್ನಾತ್ಮವು ನಿಮ್ಮನ್ನು ಪರಮಪ್ರಸಾದದಲ್ಲಿ ಸ್ವೀಕರಿಸಿ, ದೈವವೈಭವ ಭರಿತವಾದ ತರುವಾಯ, ಸೃಷ್ಟಿ ವಸ್ತುಗಳಿಗೆ ಅದು ಪುನಃ ಸೆರೆಬೀಳಲು ಬಿಡಬೇಡಿ. ನಿಮ್ಮನ್ನು ಪ್ರೀತಿಸುತ್ತೇನೆ. ಎಂದೆಂದಿಗೂ ನಿಮ್ಮೊಬ್ಬರನ್ನೇ ನಾನು ಪ್ರೀತಿಸುವೆನು. 

ನಿಮ್ಮ ಪ್ರೇಮ ಸಂಕೋಲೆಯು ನನಗೆ ದಾರಿ ಸೂಚಿಸುವ ಸರಪಣಿಯಾಗಿರಲಿ. 

ಮರಿಯಮ್ಮನವರ ಸನ್ನಿಧಿಯಲ್ಲಿ 

ವರಪ್ರಸಾದವನ್ನು ಕೇಳೋಣ, ಅದನ್ನು ಮರಿಯಮ್ಮನವರ ಮೂಲಕ ಕೇಳಿಕೊಳ್ಳೋಣ, ಎಂದು ಸಂತ ಬರ್ನಾಡರು ಪ್ರಬೋಧಿಸಿದ್ದಾರೆ. ಮರಿಯಮ್ಮನವರು ದಿವ್ಯ ಕೃಪಾವರಗಳ ಭಂಡಾರ ಎಂದು ಸಂತ ಪೀಟರ್ ಡೇಮಿಯನ್ ಹೇಳಿದ್ದಾರೆ. ಅವರಿಗೆ ನಮ್ಮನ್ನು ಐಶ್ಚರ್‍ಯವಂತರನ್ನಾಗಿ ಮಾಡುವ ಸಾಧ್ಯತೆಯೂ ಇದೆ, ಸಮ್ಮತಿಯೂ ಇದೆ. ಆದುದರಿಂದಲೇ ಅವರು ನಮ್ಮೆಲ್ಲರನ್ನು ಉದ್ದೇಶಿಸಿ ಹೇಳುತ್ತಾರೆ: ಯಾರು ಯಾರು ಬೀಳಾಗಿದ್ದರೋ ಅವರು ನನಲ್ಲಿ ಬರಲಿ (ಜ್ಞಾನೋಕ್ತಿ 9:4) ಅತಿ ಶ್ರೇಷ್ಠ ಸಂತಳೇ, ಅತಿ ಕೃಪಾಳು ಕನ್ನಿಕೆಯೇ, ಅತಿ ಮರುಕವುಳ್ಳ ಮಾತೆಯೇ, ನಿಮ್ಮಲ್ಲಿ ಪೂರ್ಣ ನಂಬಿಕೆಯನ್ನಿಟ್ಟು ನಿಮ್ಮ ಆಶ್ರಯಕ್ಕೆ ತನ್ನನ್ನೇ ತಾನು ಒಪ್ಪಿಸುವ ಈ ಪಾಪಿಯನ್ನು ಕರುಣೇಯಿಂದ ಕಾಣಿರಿ. 

ಈ ಪರಿಶುದ್ಧ ದೇವಮಾತೆಯೇ, ನಿಮ್ಮ ಆಶ್ರಯವನ್ನು ಯಾಚಿಸಿ ಓಡಿ ಬರುತ್ತೇವೆ. 

ಅಂತಿಮ ಪ್ರಾಥನೆ 

(ಸಂತ ಮರಿಯಮ್ಮನವರ ಪ್ರಬಲಾಶ್ರಯ ಕೋರಿಕೆಗಾಗಿ) 

ಅತಿ ಪವಿತ್ರ ನಿರ್ಮಲಳಾದ ಕನ್ನಿಕೆಯೇ ಮತ್ತು ತಾಯಿಯಾದ ಮರಿಯಮ್ಮನವರೇ, ನೀವು ನನ್ನ ಪ್ರಭುವಿನ ಮಾತೆಯೂ ಭೂಲೋಕದ ರಾಣಿಯೂ ಪಾಪಿಗಳ ಪಕ್ಷವಾದಿಯೂ, ಅವರ ಭರವಸೆಯೂ ಮತ್ತು ಆಶ್ರಯವೂ ಆಗಿರುವುದರಿಂದ ನಿಮ್ಮಲ್ಲಿಗೆ ಇಂದು ಬಂದಿದ್ದೇನೆ. ನಿಮ್ಮ ಸಹಾಯವು ನನಗೆ ಅಗತ್ಯವಾಗಿದೆ. ಮಹೋನ್ನತ ರಾಣಿಯೇ, ನೀವು ನನಗೆ ಮಾಡಿರುವ ಸಕಲ ಉಪಕಾರಗಳಿಗಾಗಿ ಮುಖ್ಯವಾಗಿ ಎಷ್ಟೋ ಸಾರಿ ಪಾತಾಳಕ್ಕೆ ಪಾತ್ರನಾಗಿದ್ದ ನನ್ನನ್ನು ಪಾರು ಮಾಡಿದ್ದಕ್ಕಾಗಿ ನಿಮ್ಮನ್ನು ಸನ್ಮಾನಿಸಿ ವಂದಿಸುತ್ತೇನೆ. ಪ್ರೇಮಪೂರಿತ ಮಾತೆಯೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನಿಮ್ಮ ಮೇಲಿನ ಪ್ರೀತಿಗಾಗಿ, ನಿಮಗೆ ಸೇವೆ ಮಾಡಲು ಸದಾ ಸಿದ್ಧನಿರುತ್ತೇನೆಂದು ಮಾತು ಕೊಡುತ್ತೇನೆ. ಅಂತೆಯೇ ಇತರರೂ ನಿಮ್ಮನ್ನು ಪ್ರೀತಿಸುವಂತೆ ಮಾಡಲು ನನ್ನ ಕೈಲಾದ ಮಟ್ಟಿಗೆ ಶ್ರಮಿಸುತ್ತೇನೆ. ದೇವರ ನಂತರ ನೀವೇ ನನ್ನ ನಂಬಿಕೆ, ನೀವೇ ನನ್ನ ರಕ್ಷಣೆಯ ಹೊಣೆ. ಮರುಕವುಳ್ಳ ಮಾತೆಯೇ, ನನ್ನನ್ನು ನಿಮ್ಮ ಸೇವಕನನ್ನಾಗಿ ಸ್ವೀಕರಿಸಿ. ದೇವರ ಸನ್ನಿಧಿಯಲ್ಲಿ ನೀವು ತುಂಬಾ ಶಕ್ತಿಯುಳ್ಳವರಾದ್ದರಿಂದ ನನ್ನನ್ನು ಸರ್ವ ಶೋಧನೆಗಳಿಂದ ಪಾರುಮಾಡಿ, ಅವುಗಳ ಮೇಲೆ ಸಾಯುವ ತನಕ ಜಯ ಗಳಿಸುವಂತೆ ಮಾಡಿರಿ: ಯೇಸುಕ್ರಿಸ್ತರನ್ನು ನಾನು ಸರಿಯಾಗಿ ಪ್ರೀತಿಸುವಂತೆ ಸಹಾಯ ಮಾಡಿ. ನನಗೆ ಒಳ್ಳೆಯ ಮರಣ ಲಭಿಸುವಂತೆ ನೆರವಾಗುವಿರೆಂದು ನಂಬಿದ್ದೇನೆ. ಓ ನನ್ನ ತಾಯೇ, ದೇವರ ಮೇಲಿನ ಪ್ರೀತಿಗಾಗಿ ನನ್ನ ಜೀವಮಾನ ಕಾಲದಲ್ಲೂ ನನ್ನ ಸಹಾಯಕಳಾಗಿರಬೇಕೆಂದು ನಿಮ್ಮನ್ನು ಪ್ರಾಥಿಸುತ್ತೇನೆ. ನಾನು ಸ್ವರ್ಗದಲ್ಲಿ ಸುರಕ್ಷಿತವಾಗಿ ನಿಮ್ಮ ಮಹಿಮೆಯನ್ನೂ, ಮರಕವನ್ನೂ ಎಂದೆಂದಿಗೂ ಹಾಡುವ ತನಕ ನೀವು ನನ್ನೊಡನೆ ಇರಬೇಕೆಂದು ಕೇಳಿಕೊಳ್ಳುತ್ತೇನೆ. ಇದೇ ನನ್ನ ಆಕಾಂಕ್ಷೆ ಮಾತೆಯೇ, ಆಮೆನ್ 

No comments:

Post a Comment