ಪ್ರವೇಶ ಶ್ಲೋಕ ಕೀರ್ತ 27 : 8-9
ಪ್ರಭುವೇ ತನ್ನ ಪ್ರಜೆಯ ಪ್ರಾಬಲ್ಯವು, ತನ್ನಭಿಷಿಕ್ತನಿಗೆ ಆಶ್ರಯದುರ್ಗವು, ರಕ್ಷಿಸು ನಿನ್ನ ಪ್ರಜೆಯನು ಆಶೀರ್ವದಿಸು ನಿನ್ನ ಜನರನು, ಕುರಿಗಾಹಿ ನೀನಾಗಿರು ಪ್ರಭು, ಹೊತ್ತು ಸಾಗಿಸು ಅವರನು.
ಸಭಾ ಪ್ರಾರ್ಥನೆ
ಪ್ರಭುವೇ, ನಿಮ್ಮ ಪ್ರೀತಿಯಲ್ಲಿ ನೀವು ಬೇರೂರಿಸುವವರಿಗೆ
ಎಂದೆಂದೂ ದಾರಿ ತೋರಿಸುತ್ತೀರಿ.
ನಿಮ್ಮ ಪವಿತ್ರ ನಾಮಕ್ಕೆ ನಾವು ಯೋಗ್ಯ ಭಯಭಕ್ತಿ ಹಾಗೂ
ಪ್ರೀತಿ ತೋರಿಸುವಂತೆ ಅನುಗ್ರಹಿಸಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಅರ್ಪಣಾ ಪ್ರಾರ್ಥನೆ
ಪ್ರಭುವೇ, ಸ್ತುತಿ ಹಾಗೂ ಸಂಧಾನದ
ಈ ಬಲಿಯರ್ಪಣೆಯನ್ನು ಸ್ವೀಕರಿಸಿರಿ.
ಈ ಆಚರಣೆಯಿಂದ ಪರಿಶುದ್ಧಗೊಂಡು
ನಿಮ್ಮನ್ನು ಮೆಚ್ಚಿಸಬೇಕೆಂದು ಹಾತೊರೆಯುವ
ನಮ್ಮ ಹೃದಯದ ಅಭಿಲಾಷೆಯನ್ನು
ನಿಮಗೊಪ್ಪಿಸುವಂತೆ ಮಾಡಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಪರಮ ಪ್ರಸಾದ ಶ್ಲೋಕ ಕೀರ್ತ 144 : 15
ಎಲ್ಲಾ ಜೀವಿಗಳ ಕಣ್ಣು ಪ್ರಭೂ, ನಾಟಿವೆ ನಿನ್ನ ಕಡೆಗೆ. ಕಾಲಕಾಲಕ್ಕೆ ಕೊಡುವೆ ಆಹಾರವನ್ನು ಅವುಗಳಿಗೆ.
ಅಥವಾ ಯೊವಾ 10 : 11,15
ನಾನೇ ಉತ್ತಮ ಕುರಿಗಾಹಿ, ನನ್ನ ಕುರಿಗಳಿಗೋಸ್ಕರ ನನ್ನ ಪ್ರಾಣವನ್ನೇ ಕೊಡುತ್ತೇನೆ, ಎನ್ನುತ್ತಾರೆ ಪ್ರಭು.
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ನಿಮ್ಮ ದಿವ್ಯ ಶರೀರ ಮತ್ತು ರಕ್ತ ಸ್ವೀಕಾರದಿಂದ
ಪುನಶ್ಚೇತನಗೊಂಡು ಭಯಭಕ್ತಿಯಿಂದ ಏನನ್ನು
ನಾವು ಆಚರಿಸುತ್ತೇವೋ
ಆ ವಾಗ್ದತ್ತ ರಕ್ಷಣೆಯನ್ನು ಪಡೆಯುವಂತೆ ಕೃಪೆ ತೋರಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
No comments:
Post a Comment