Sunday, 18 August 2019

ಸಾಧಾರಣ ಕಾಲದ ಇಪ್ಪತ್ತನೇ ವಾರ ಸೋಮವಾರ

ಸಾಧಾರಣ ಕಾಲದ ಇಪ್ಪತ್ತನೇ ವಾರ ಸೋಮವಾರ

19/ಹಸಿರು/ಸೋಮ/ಸಂತ ಜಾನ್ ಯೂಡ್ಸ್ (ಯಾ.)(ಐಚ್ಛಿಕ ಸ್ಮರಣೆ) 
1ನೇ ವಾಚನ - ನ್ಯಾಯ 2: 11-19 
ಕೀರ್ತನೆ- 1೦6: 34-37, 39-4೦,43
ಶುಭಸಂದೇಶ - ಮತ್ತಾಯ 19:16-22

1ನೇ ವಾಚನ - ನ್ಯಾಯ 2: 11-19
ಇಸ್ರಯೇಲರು ಬಾಳ್ ದೇವತೆಯ ಪ್ರತಿಮೆಗಳನ್ನು ಪೂಜಿಸಿ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಗಳಾದರು. ತಮ್ಮ ಪೂರ್ವಜರನ್ನು ಈಜಿಪ್ಟಿನಿಂದ ಕರೆದುತಂದ ದೇವರಾದ ಸರ್ವೇಶ್ವರನನ್ನು ಬಿಟ್ಟು ಅನ್ಯದೇವತೆಗಳನ್ನು ಅಂದರೆ, ತಮ್ಮ ಸುತ್ತಮುತ್ತಲಿನ ಜನಾಂಗಗಳ ದೇವರುಗಳನ್ನು ಅವಲಂಬಿಸಿ ಅವುಗಳಿಗೆ ಅಡ್ಡಬಿದ್ದು ಸರ್ವೇಶ್ವರನನ್ನು ರೇಗಿಸಿದರು. ಅವರು ಸರ್ವೇಶ್ವರನನ್ನು ಬಿಟ್ಟು ‘ಬಾಳ್ ಅಷ್ಟೋರೆತ್’ ಎಂಬ ದೇವತೆಗಳನ್ನು ಪೂಜಿಸತೊಡಗಿದರು. ಆದ್ದರಿಂದ ಸರ್ವೇಶ್ವರನ ಕೋಪ ಅವರ ಮೇಲೆ ಉರಿಯಹತ್ತಿತು; ಅವರನ್ನು ಕೊಳ್ಳೆಹೊಡೆಯುವವರ ಕೈಗೆ ಒಪ್ಪಿಸಿದರು. ಶತ್ರುಗಳು ಅವರನ್ನು ಸುಲಿಗೆ ಮಾಡಿದರು. ಸರ್ವೇಶ್ವರ ಅವರನ್ನು ಅಕ್ಕಪಕ್ಕದ ವೈರಿಗಳಿಗೆ ಮಾರಿಬಿಟ್ಟರು. ಆ ಶತ್ರುಗಳ ಮುಂದೆ ಇಸ್ರಯೇಲರು ನಿಲ್ಲಲಾರದೆ ಹೋದರು. ಮೊದಲೇ ಆಣೆಯಿಟ್ಟು ಹೇಳಿದಂತೆ ಅವರು ಎಲ್ಲಿಗೆ ಹೋದರೂ ಸರ್ವೇಶ್ವರನ ಕೈ ಅವರಿಗೆ ವಿರೋಧವಾಗಿಯೇ ಇತ್ತು. ಅವರಿಗೆ ಬಹಳ ದುಃಖ ಉಂಟಾಯಿತು. ಆಗ ಸರ್ವೇಶ್ವರ ಅವರನ್ನು ಸೂರೆ ಮಾಡುವವರ ಕೈಯಿಂದ ತಪ್ಪಿಸಲು ನ್ಯಾಯಾಧಿಪತಿಗಳನ್ನು ಕಳುಹಿಸಿದರು. ಇಸ್ರಯೇಲರು ಇವರ ಮಾತನ್ನೂ ಕೇಳದೆ ಅನ್ಯದೇವತೆಗಳನ್ನು ಪೂಜಿಸಿ ಅವುಗಳಿಗೆ ಅಡ್ಡಬಿದ್ದು ದೇವದ್ರೋಹಿಗಳಾದರು. ಸರ್ವೇಶ್ವರನ ಆಜ್ಞೆಗಳನ್ನು ಪಾಲಿಸುತ್ತಿದ್ದ ತಮ್ಮ ಪೂರ್ವಜರ ಮಾರ್ಗವನ್ನು ಬೇಗನೆ ತ್ಯಜಿಸಿಬಿಟ್ಟರು. ಅವರಂತೆ ನಡೆಯಲೇ ಇಲ್ಲ. ವೈರಿಗಳ ಹಿಂಸೆಯನ್ನು ತಾಳಲಾರದೆ ಇಸ್ರಯೇಲರು ಗೋಳು ಇಟ್ಟರು. ಸರ್ವೇಶ್ವರ ಅದನ್ನು ಕೇಳಿ ಕನಿಕರಪಟ್ಟು ನ್ಯಾಯಾಧಿಪತಿಗಳನ್ನು ಕಳುಹಿಸಿಕೊಟ್ಟರು; ಜೀವಮಾನವೆಲ್ಲ ಅವರ ಸಂಗಡವೇ ಇದ್ದು ಅವರ ಮುಖಾಂತರ ಇಸ್ರಯೇಲರನ್ನು ಶತ್ರುಗಳಿಂದ ಬಿಡಿಸಿದರು. ತಮ್ಮನ್ನು ಹಿಂಸಿಸುತ್ತಿದ್ದವರ ಕಾಟವನ್ನು ತಾಳದೆ ಮೊರೆಯಿಡುವುದನ್ನು ಸರ್ವೇಶ್ವರ ಕೇಳಿ ಮನಮರುಗಿದರು.
ಅಂಥ ನ್ಯಾಯಾಧಿಪತಿಗಳು ತೀರಿಹೋದ ನಂತರ ಇಸ್ರಯೇಲರು ಮತ್ತೆ ತಮ್ಮ ಹಿಂದಿನವರಿಗಿಂತಲೂ ಭ್ರಷ್ಠರಾಗಿ ಅನ್ಯದೇವತೆಗಳನ್ನು ಅವಲಂಬಿಸಿ, ಅವುಗಳಿಗೆ ಸೇವೆಮಾಡಿ ಅಡ್ಡಬಿದ್ದರು. ಅವರು ತಮ್ಮ ದರ್ಮಾರ್ಗವನ್ನೂ ಹಠಮಾರಿತನವನ್ನೂ ಬಿಡಲೇ ಇಲ್ಲ.

ಕೀರ್ತನೆ- 1೦6: 34-37, 39-4೦,43
34 : ಅನುಸರಿಸಲಿಲ್ಲ ಅವರು ಪ್ರಭುವಿನಾಜ್ಞೆಯನು / ಆತ ಸಂಹರಿಸಲಿಲ್ಲ ಶೋಧಿಸಿದಾ ಜನರನು //
35 : ಅನ್ಯಜನರೊಡನವರು ಕಲೆತು ಬೆರೆತುಹೋದರು / ಅವರ ದುರಾಚಾರಗಳನ್ನೂ ಕಲಿತುಕೊಂಡರು //
36 : ಪೂಜೆಮಾಡಿದರು ಆ ಜನರ ವಿಗ್ರಹಗಳಿಗೆ / ಉರುಲಾದವು ಆ ವಿಗ್ರಹಗಳೆ ಅವರಿಗೆ //
37 : ತಮ್ಮ ಪುತ್ರ ಪುತ್ರಿಯರನೇ ಅರ್ಪಿಸಿದರು / ದೆವ್ವಭೂತಗಳಿಗೆ ಅವರನು ಬಲಿಕೊಟ್ಟರು /
39 : ಅಶುದ್ಧರಾದರವರು ತಮ್ಮ ದುಷ್ಕøತ್ಯಗಳಿಂದ / ದೇವದ್ರೋಹಿಗಳಾದರು ದುರಾಚಾರ ಗಳಿಂದ //
40 : ಕೆರಳಿತು ಕೋಪ ಆ ಜನರ ಮೇಲೆ ಪ್ರಭುವಿಗೆ / ತನ್ನವರಾ ನಡತೆ ಅಸಹ್ಯವಾಯಿತು ಆತನಿಗೆ //
43 : ಪ್ರಭು ಪದೇಪದೇ ವಿಮುಕ್ತಗೊಳಿಸಿದನಾದರೂ / ಪರ್ಯಾಲೋಚಿಸದೆ ಪ್ರತಿಭಟನೆ ಮಾಡಿದರವರು / ಈ ಪರಿಯ ಅಕ್ರಮದ ನಿಮಿತ್ತ ಅವನತಿಗಿಳಿದರು //

ಶುಭಸಂದೇಶ - ಮತ್ತಾಯ 19:16-22
ಒಮ್ಮೆ ಯೇಸುಸ್ವಾಮಿಯ ಬಳಿಗೆ ಒಬ್ಬ ಯುವಕನು ಬಂದು, “ಗುರುದೇವಾ, ಅಮರ ಜೀವವನ್ನು ಪಡೆಯಲು ನಾನು ಒಳ್ಳೆಯದೇನನ್ನು ಮಾಡಬೇಕು?” ಎಂದು ಕೇಳಿದನು. ಅದಕ್ಕೆ ಅವರು, “ಒಳ್ಳೆಯದನ್ನು ಕುರಿತು ನೀನು ನನ್ನನ್ನು ವಿಚಾರಿಸುವುದು ಏಕೆ? ಒಳ್ಳೆಯವರು ಒಬ್ಬರೇ. ನೀನು ಆ ಜೀವಕ್ಕೆ ಪ್ರವೇಶಿಸಬೇಕಾದರೆ ದೈವಾಜ್ಞೆಗಳನ್ನು ಅನುಸರಿಸು,” ಎಂದರು. “ಅವು ಯಾವುವು?” ಎಂದು ಮರುಪ್ರಶ್ನೆ ಹಾಕಿದ. ಅವನಿಗೆ ಯೇಸು, “ನರಹತ್ಯೆಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ನಿನ್ನ ತಂದೆ ತಾಯಿಗಳನ್ನು ಗೌರವಿಸಬೇಕು ಮತ್ತು ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸಬೇಕು,” ಎಂದರು. ಅದಕ್ಕೆ ಆ ಯುವಕ, “ಇವೆಲ್ಲವನ್ನೂ ಅನುಸರಿಸಿಕೊಂಡು ಬಂದಿದ್ದೇನೆ. ನನ್ನಲ್ಲಿ ಇನ್ನೇನು ಕೊರತೆ ಇದೆ?” ಎಂದು ಮತ್ತೆ ಕೇಳಿದ. ಆಗ ಯೇಸು, “ನೀನು ಸಂಪೂರ್ಣನಾಗಬೇಕು ಎಂದಿದ್ದರೆ ಹೋಗು, ನಿನ್ನ ಆಸ್ತಿಯನ್ನೆಲ್ಲಾ ಮಾರಿ, ಬಡಬಗ್ಗರಿಗೆ ದಾನಮಾಡು; ಸ್ವರ್ಗದಲ್ಲಿ ನಿನಗೆ ಸಂಪತ್ತು ಇರುತ್ತದೆ. ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದರು. ಇದನ್ನು ಕೇಳಿದ್ದೇ ಆ ಯುವಕ ಖಿನ್ನಮನಸ್ಕನಾಗಿ ಅಲ್ಲಿಂದ ಹೊರಟೇಹೋದ. ಏಕೆಂದರೆ ಅವನಿಗೆ ಅಪಾರ ಆಸ್ತಿಪಾಸ್ತಿಯಿತ್ತು.
ಚಿಂತನೆ
ಯೇಸು -ದೀನರ ರಕ್ಷಕ
ಬ್ರಿಟಿಷರು ನಮ್ಮ ದೇಶವನ್ನು ಆಳುತ್ತಿದ್ದಂತಹ ಕಾಲದಲ್ಲಿ ಬಡವರಾದ ನಮ್ಮ ದೇಶದ ಜನರಿಗೆ ಬಹಳ ಕಷ್ಟಗಳನ್ನು ಕೊಡುತ್ತಿದ್ದರು. ಮುಖ್ಯವಾಗಿ ರಸ್ತೆಗಳನ್ನು ನಿರ್ಮಿಸುವಂತಹ ಸಮಯದಲ್ಲಿ ಜನರಿಗೆ ತುಂಬಾ ಕಿರುಕುಳ ಮತ್ತು ಕಡಿಮೆ ಕೂಲಿಕೊಟ್ಟು ಕೆಲಸವನ್ನು ಮಾಡಿಸುತ್ತಿದ್ದರು. ಆದ್ದರಿಂದ ಈ ಜನರು ಇವರ ಸಹವಾಸವೇ ಬೇಡವೆಂದು ಹೇಳಿ ಕಾಡುಗಳಲ್ಲಿ ವಾಸಿಸಲು ಮತ್ತು ಅಲ್ಲಿಯೇ ಜೀವಿಸಲು ಪ್ರಾರಂಭಿಸಿದರು. ಇತ್ತ ರಸ್ತೆಯ ಕೆಲಸ ಅರ್ಧವಾಗಿದ್ದುದರಿಂದ ಬ್ರಿಟಿಷರು ಈ ಜನರನ್ನು ಬೆನ್ನಟ್ಟಿ ಬಂದರು. ಬ್ರಿಟೀಷರು ಇವರನ್ನೆಲ್ಲಾ ಪುನಃ ರಸ್ತೆ ನಿರ್ಮಾಣ ಕಾರ್ಯಕ್ಕೆ ಕರೆದುಕೊಂಡು ಹೋದರು. ಇಂತಹ ಪರಿಸ್ಥಿತಿಯಲ್ಲಿ-ಅಲ್ಲೂರಿ ಸೀತರಾಮ ರಾಜೂ ಎಂಬುವವನು ಈ ಬುಡಕಟ್ಟಿನ ಜನರ ನಾಯಕನಾಗಿ ನಿಂತು ನ್ಯಾಯ ನೀತಿಗಾಗಿ ಹೊಡೆದಾಡಿ, ಬುಡಕಟ್ಟಿನ ಜನರಿಗಾಗಿ ತನ್ನ ಬಾಳನ್ನು ಸವೆಸಿದನು. ಇಂದಿನ ಶುಭಸಂದೇಶದಲ್ಲೂ ಧನಿಕ ಯುವಕನನ್ನು, ಆಸ್ತಿಯೆಲ್ಲಾ ಮಾರಿ, ಬಡಬಗ್ಗರಿಗೆ ದಾನಮಾಡಿ ನನ್ನನ್ನು ಹಿಂಬಾಲಿಸು ಎಂದರು ಯೇಸು.
ಪ್ರಭು ಯೇಸು ಶುಭಸಂದೇಶವನ್ನು ಸಾರುವುದಕ್ಕೆ ಈ ಲೋಕಕ್ಕೆ ಬಂದರು ಮತ್ತು ಎಲ್ಲರನ್ನೂ ಪಾಪದಿಂದ ವಿಮುಕ್ತಗೊಳಿಸಲು ದೇವರ ಕುರಿಮರಿಯಾಗಿ ಬಂದರು. ಕುರುಡರಿಗೆ ದೃಷ್ಟಿಯನ್ನು, ರೋಗದಿಂದ ನರಳುವವರಿಗೆ ಆರೋಗ್ಯವನ್ನು ಕೊಟ್ಟರು. 
ಯೇಸು ನಮ್ಮ ಆಧ್ಯಾತ್ಮಿಕ ಕಣ್ಣುಗಳಿಗೆ ದೃಷ್ಟಿಯನ್ನು ಕೊಟ್ಟಿದ್ದಾರೆ. ಯೇಸುವಿನ ಮುಖ್ಯ ಕಾರ್ಯ ಏನೆಂದರೆ ಜನರನ್ನು ರಕ್ಷಿಸುವುದು. ಜೀವನದಲ್ಲಿ ನೊಂದು ಬೆಂದವರಿಗೆ ಸಾಂತ್ವನ ನೀಡುವುದು. ಆದ್ದರಿಂದಲೇ ಯೇಸು ಒಬ್ಬ ಸಮಾಜ ಸುಧಾರಕನಾಗಿ, ಮಾನವನಾಗಿ ಜೀವಿಸಿದರು. ಹಸಿದವರನ್ನು ತೃಪ್ತಿಪಡಿಸಿದರು, ಬಾಯಾರಿದವರ ದಾಹ ನೀಗಿಸಿದರು. ಪ್ರೀತಿಯ ಸ್ನೇಹಿತರೇ, ಜೀವನದಲ್ಲಿ ಸಂತೋಷ ಇಲ್ಲದೆ ಬಾಳುತ್ತಾ ಇದ್ದರೆ, ಜೀವನದಲ್ಲಿ ಕಷ್ಟಗಳನ್ನು ಎದುರಿಸುವವರಾಗಿದ್ದರೆ ಇದೊಂದು ಸುವರ್ಣಾವಕಾಶ. ಏಕೆಂದರೆ ಯೇಸು ನಮಗೆ ತೃಪ್ತಿಯನ್ನು ಕೊಡುವರು. ನಮ್ಮ ದೇಶದಲ್ಲಿ, ಕುಟುಂಬದಲ್ಲಿ ಅನೇಕರು ಶಾಂತಿಯನ್ನು ಕಳೆದುಕೊಂಡಿದ್ದಾರೆ ಮತ್ತು ಸಂತಸವನ್ನು ಮರೆತುಬಿಟ್ಟಿದ್ದಾರೆ. ಏಕೆಂದರೆ ಅವರೆಲ್ಲರೂ ನ್ಯಾಯದಿಂದ ಜೀವಿಸುತ್ತಾ ಇಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ಭೇದ-ಭಾವವನ್ನು ತೋರುತ್ತಾರೆ. ಆದರೆ ನಾವೆಲ್ಲರೂ ಕ್ರೈಸ್ತರು, ಇದು ನಮ್ಮ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅದೇನೆಂದರೆ ಪ್ರಭುಕ್ರಿಸ್ತರು ನಮಗೆ ಕೊಟ್ಟಿರುವುದನ್ನು ನಾವು ಇತರರೊಂದಿಗೆ ಹಂಚಿ ಬಾಳಬೇಕು.
ಯೇಸು-ರಕ್ಷಕ ಮತ್ತು ಬಡವರ ಸಹಾಯಕ

No comments:

Post a Comment