Sunday, 18 August 2019

ಸಾಧಾರಣ ಕಾಲದ ಇಪ್ಪತ್ತನೇ ವಾರ ಮಂಗಳವಾರ

ಸಾಧಾರಣ ಕಾಲದ ಇಪ್ಪತ್ತನೇ ವಾರ ಮಂಗಳವಾರ 

2೦/ಬಿಳಿ/ಮಂಗಳ/ಸಂತ ಬೆರ್ನಾರ್ಡ್ (ಮಠಾ ಮತ್ತು ಧ.ಪಂ) (ಸ್ಮರಣೆ)
1ನೇ ವಾಚನ - ನ್ಯಾಯ 6: 11-24
ಕೀರ್ತನೆ - 85: 9, 11-14
ಶುಭಸಂದೇಶ- ಮತ್ತಾಯ 19:23-3೦

1ನೇ ವಾಚನ - ನ್ಯಾಯ 6: 11-24
ಆಮೇಲೆ ಸರ್ವೇಶ್ವರನ ದೂತನು ಬಂದು ಒಫ್ರದಲ್ಲಿದ್ದ ಓಕ್‍ಮರದ ಅಡಿಯಲ್ಲಿ ಕುಳಿತುಕೊಂಡನು. ಅದು ಅಬೀಯೆಜೆರನ ಗೋತ್ರದವನಾದ ಯೋವಾಷನದಾಗಿತ್ತು. ಅವನ ಮಗ ಗಿದ್ಯೋನನು ಮಿದ್ಯಾನ್ಯರಿಗೆ ಗೊತ್ತಾಗದ ಹಾಗೆ ಅಲ್ಲಿ ದ್ರಾಕ್ಷಿಯ ಆಲೆಯ ಮರೆಯಲ್ಲಿ ಗೋದಿಯನ್ನು ಬಡಿಯುತ್ತಿದ್ದನು. ಸರ್ವೇಶ್ವರನ ದೂತನು ಗಿದ್ಯೋನನಿಗೆ ಪ್ರತ್ಯಕ್ಷನಾಗಿ ಅವನಿಗೆ, “ಪರಾಕ್ರಮಶಾಲಿಯೇ, ಸರ್ವೇಶ್ವರ ನಿನ್ನೊಡನೆ ಇದ್ದಾರೆ” ಎಂದನು. ಆಗ ಗಿದ್ಯೋನನು ಅವನಿಗೆ, “ಸ್ವಾವಿೂ, ಸರ್ವೇಶ್ವರ ನಮ್ಮೊಡನೆ ಇದ್ದರೆ ನಮಗೆ ಇದೆಲ್ಲಾ ಏಕೆ ಸಂಭವಿಸಿತು? ನಮ್ಮ ಹಿರಿಯರು, ಸರ್ವೇಶ್ವರ ಅದ್ಭುತಗಳನ್ನು ನಡಿಸಿ ತಮ್ಮನ್ನು ಈಜಿಪ್ಟಿನಿಂದ ಬಿಡಿಸಿದರೆಂಬುದಾಗಿ ವಿವರಿಸುತ್ತಿದ್ದರು. ಅಂಥ ಅದ್ಭುತಗಳು ಈಗೆಲ್ಲಿವೆ? ಅವರು ನಮ್ಮನ್ನು ತಿರಸ್ಕರಿಸಿ ಮಿದ್ಯಾನ್ಯರ ಕೈಗೆ ಒಪ್ಪಿಸಿ ಬಿಟ್ಟಿದ್ದಾರಲ್ಲಾ,” ಎನ್ನಲು. ಸರ್ವೇಶ್ವರ ಅವನನ್ನು ದಿಟ್ಟಿಸಿ ನೋಡಿ, “ನಾನು ನಿನ್ನನ್ನು ಕಳುಹಿಸುತ್ತೇನೆ, ಹೋಗು; ಈ ನಿನ್ನ ಬಲದಿಂದ ಇಸ್ರಯೇಲರನ್ನು ಮಿದ್ಯಾನ್ಯರಿಂದ ಬಿಡಿಸು,” ಎಂದು ಹೇಳಿದರು. ಆಗ ಗಿದ್ಯೋನನು, “ಸ್ವಾಮೀ, ನಾನು ಇಸ್ರಯೇಲರನ್ನು ರಕ್ಷಿಸುವುದು ಹೇಗೆ? ಮನಸ್ಸೆ ಕುಲದಲ್ಲಿ ನನ್ನ ಮನೆ ಕನಿಷ್ಠವಾದದ್ದು; ಮತ್ತು ನಾನು ನಮ್ಮ ಕುಟುಂಬದಲ್ಲಿ ಅಲ್ಪನು,” ಎಂದನು. ಸರ್ವೇಶ್ವರ ಅವನಿಗೆ, “ನಾನು ನಿನ್ನೊಂದಿಗೆ ಇರುವುದರಿಂದ ನೀನು ಮಿದ್ಯಾನ್ಯರೆಲ್ಲರನ್ನೂ ಒಬ್ಬ ಮನುಷ್ಯನನ್ನೋ ಎಂಬಂತೆ ಸದೆಬಡಿಯುವೆ,” ಎಂದರು. ಗಿದ್ಯೋನನು: “ಸ್ವಾವಿೂ, ದಯವಿರಲಿ; ನನ್ನೊಂದಿಗೆ ಮಾತಾಡುತ್ತಿರುವ ತಾವು ಸ್ವಾಮಿಯವರೇ ಆಗಿದ್ದೀರೆಂಬುದಕ್ಕೆ ನನಗೊಂದು ಗುರುತನ್ನು ಅನುಗ್ರಹಿಸಬೇಕು. ನಾನು ಹೋಗಿ ತಮಗೆ ಕಾಣಿಕೆಯನ್ನು ತೆಗೆದುಕೊಂಡು ಬರುವವರೆಗೆ ತಾವು ಈ ಸ್ಥಳವನ್ನು ಬಿಡಬಾರದು,” ಎಂದು ಬಿನ್ನವಿಸಲು ಅವರು, “ನೀನು ತಿರುಗಿ ಬರುವವರೆಗೆ ನಾನು ಇಲ್ಲೇ ಇರುವೆನು,” ಎಂದರು. ಗಿದ್ಯೋನನು ಮನಗೆ ಹೋಗಿ ಒಂದು ಆಡಿನ ಮರಿಯನ್ನು ಪಕ್ವಮಾಡಿ ಹತ್ತು ಕಿಲೋಗ್ರಾಂ ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಸುಟ್ಟು ಮಾಂಸವನ್ನು ಪುಟ್ಟಿಯಲ್ಲಿಟ್ಟು ಅದರ ರಸವನ್ನು ಬಟ್ಟಲಿನಲ್ಲಿ ಹೊಯ್ದು ಎಲ್ಲವನ್ನೂ ಓಕ್‍ಮರದ ಕೆಳಗೆ ಅವರ ಮುಂದೆ ತಂದಿಟ್ಟನು. ಆಗ ದೇವದೂತನು ಅವನಿಗೆ, “ಮಾಂಸವನ್ನೂ ರೊಟ್ಟಿಗಳನ್ನೂ ಆ ಬಂಡೆಯ ಮೇಲಿಟ್ಟು ರಸವನ್ನು ಹೊಯ್ಯಿ” ಎನ್ನಲು ಅವನು ಹಾಗೆಯೇ ಮಾಡಿದನು. ಅನಂತರ ಸರ್ವೇಶ್ವರನ ದೂತನು ತನ್ನ ಕೈಕೋಲನ್ನು ಚಾಚಿ ಅದರ ತುದಿಯನ್ನು ಆ ರೊಟ್ಟಿಗಳಿಗೂ ಮಾಂಸಕ್ಕೂ ಮುಟ್ಟಿಸಲು ಬಂಡೆಯಿಂದ ಬೆಂಕಿಯೆದ್ದು ಅವೆರಡನ್ನೂ ದಹಿಸಿಬಿಟ್ಟಿತು. ಸರ್ವೇಶ್ವರನ ದೂತನು ಅದೃಶ್ಯನಾದನು. ಆತನು ಸರ್ವೇಶ್ವರನ ದೂತನೆಂದು ಗಿದ್ಯೋನನು ತಿಳಿದು ಭಯಪಟ್ಟು, “ಅಯ್ಯೋ ಸ್ವಾಮಿ, ಸರ್ವೇಶ್ವರಾ, ಸರ್ವೇಶ್ವರನ ದೂತನನ್ನು ಮುಖಾಮುಖಿಯಾಗಿ ನೋಡಿಬಿಟ್ಟೆನಲ್ಲಾ” ಎಂದು ಕೂಗಿದನು. ಆದರೆ ಸರ್ವೇಶ್ವರನು ಅವನಿಗೆ, “ಸಮಾಧಾನದಿಂದಿರು, ಹೆದರಬೇಡ; ನೀನು ಸಾಯುವುದಿಲ್ಲ” ಎಂದನು. ಗಿದ್ಯೋನನು ಅಲ್ಲೇ ಸರ್ವೇಶ್ವರನಿಗಾಗಿ ಒಂದು ಬಲಿಪೀಠವನ್ನು ಕಟ್ಟಿ ಅದಕ್ಕೆ ‘ಯೆಹೋವ ಷಾಲೋಮ್’ ಎಂದು ಹೆಸರಿಟ್ಟನು; ಅದು ಈವರೆಗೂ ಅಬೀಯೆಜೆರ್ ಗೋತ್ರದವರ ಒಫ್ರದಲ್ಲಿರುತ್ತದೆ.

ಕೀರ್ತನೆ - 85: 9, 11-13
8 : ನಾ ಕೇಳುತ್ತಿರುವೆನು, ಪ್ರಭು ಹೇಳುವುದನು / ತನ್ನ ಜನರಿಗಾತ ನುಡಿವುದು ಶಾಂತಿಯನು / ಇನ್ನಾದರು ತೊರೆಯೋಣ ಮೂರ್ಖತೆಯನು //
9 : ಭಯಭಕ್ತಿಯುಳ್ಳವರಿಗಾತನ ರಕ್ಷಣೆ ಸನ್ನಿಹಿತ / ಇದರಿಂದಾತನ ಮಹಿಮೆ ನಾಡಿಲ್ಲಿರುವುದು ನಿರುತ //
10 : ಪ್ರೀತಿಯೂ ಸತ್ಯವೂ ಒಂದನ್ನೊಂದು ಕೂಡಿರುವುವು / ನೀತಿಯೂ ಶಾಂತಿಯೂ ಒಂದನ್ನೊಂದು ಚುಂಬಿಸುವುವು //
11 : ಸತ್ಯತೆಯು ಹುಟ್ಟುವುದು ಭೂಮಿಯಿಂದ / ನೀತಿಯು ದೃಷ್ಟಿಸುವುದು ಗಗನದಿಂದ //
12 : ಪ್ರಭು ಕೊಟ್ಟೇ ತೀರುವನು ಒಳಿತನು / ನಮ್ಮ ನಾಡು ನೀಡುವುದು ಬೆಳೆಯನು //
13 : ನಡೆವುದು ಪ್ರಭುವಿನ ಮುಂದೆ ನೀತಿ / ಮಾಡುವುದು ಆತನ ಹೆಜ್ಜೆಗೆ ಹಾದಿ //

ಶುಭಸಂದೇಶ- ಮತ್ತಾಯ 19:23-3೦
ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, “ಐಶ್ವರ್ಯವಂತನು ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸುವುದು ಕಷ್ಟವೆಂದು ನಿಮಗೆ ಒತ್ತಿ ಹೇಳುತ್ತೇನೆ. ಐಶ್ವರ್ಯವಂತನು ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದಕ್ಕಿಂತಲೂ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಸುಳುವುದು ಸುಲಭ ಎಂಬುದು ನಿಜ,” ಎಂದರು. ಇದನ್ನು ಕೇಳಿದ ಮೇಲಂತೂ ಶಿಷ್ಯರು ಬೆಬ್ಬೆರಗಾದರು. “ಹಾಗಾದರೆ, ಯಾರು ತಾನೆ ಜೀವೋದ್ಧಾರ ಹೊಂದಲು ಸಾಧ್ಯ?” ಎಂದುಕೊಂಡರು. ಯೇಸು ಅವರನ್ನು ನಿಟ್ಟಿಸಿ ನೋಡುತ್ತಾ, “ಮನುಷ್ಯರಿಗಿದು ಅಸಾಧ್ಯ; ಆದರೆ ದೇವರಿಗೆ ಎಲ್ಲವೂ ಸಾಧ್ಯ,” ಎಂದರು. ಪೇತ್ರನು ಆಗ ಮುಂದೆ ಬಂದು, “ನೋಡಿ, ನಾವು ಎಲ್ಲವನ್ನು ಬಿಟ್ಟುಬಿಟ್ಟು ತಮ್ಮನ್ನು ಹಿಂಬಾಲಿಸಿದ್ದೇವೆ. ನಮಗೇನು ದೊರಕುತ್ತದೆ?” ಎಂದು ಕೇಳಿದನು. ಅದಕ್ಕೆ ಯೇಸು, “ನಿಮಗೆ ಸತ್ಯವಾಗಿ ಹೇಳುತ್ತೇನೆ: ಹೊಸ ಸೃಷ್ಟಿಯಲ್ಲಿ ನರಪುತ್ರನು ತನ್ನ ಮಹಿಮಾನ್ವಿತ ಸಿಂಹಾಸನದ ಮೇಲೆ ಆಸೀನನಾಗುವಾಗ, ನನ್ನನ್ನು ಹಿಂಬಾಲಿಸಿರುವ ನೀವು ಕೂಡ, ಇಸ್ರಯೇಲಿನ ಹನ್ನೆರಡು ಗೋತ್ರಗಳಿಗೆ ನ್ಯಾಯಾಧಿಪತಿಗಳಾಗಿ ಹನ್ನೆರಡು ಸಿಂಹಾಸನಗಳ ಮೇಲೆ ಆಸೀನರಾಗುವಿರಿ. ನನ್ನ ನಾಮದ ನಿಮಿತ್ತ ಮನೆಮಠವನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ಅಕ್ಕತಂಗಿಯರನ್ನಾಗಲಿ, ತಂದೆ ತಾಯಿಯರನ್ನಾಗಲಿ, ಮಕ್ಕಳುಮರಿಗಳನ್ನಾಗಲಿ, ಹೊಲಗದ್ದೆಗಳನ್ನಾಗಲಿ ತ್ಯಜಿಸುವ ಪ್ರತಿಯೊಬ್ಬನೂ ನೂರ್ಮಡಿಯಷ್ಟು ಪಡೆಯುವನು; ಮಾತ್ರವಲ್ಲ, ಅಮರಜೀವಕ್ಕೆ ಬಾಧ್ಯಸ್ಥನಾಗುವನು. ಆದರೆ ಮೊದಲಿನವರಲ್ಲಿ ಅನೇಕರು ಕಡೆಯವರಾಗುವರು; ಕಡೆಯವರಲ್ಲಿ ಅನೇಕರು ಮೊದಲಿನವರಾಗುವರು.
ಚಿಂತನೆ
ನಾಳೆ ಎನ್ನುವವನ ಮನೆ ಹಾಳು

ಚಿಕ್ಕ ಮಗುವಿನಿಂದ ಹಿಡಿದು ತಾತನವರೆಗೂ `ನಾಳೆ' ಎನ್ನುವ ವ್ಯಕ್ತಿಗಳಿಗೇನು ಕಡಿಮೆಯಿಲ್ಲ. ಚಿಕ್ಕ ಮಕ್ಕಳಿಗೆ ಕೆಲಸ ಮಾಡಲು ಹೇಳಿದರೆ `ನಾಳೆ' ಎನ್ನುವರು. ಹಲವಾರು ಮಂದಿ ವಿದ್ಯಾರ್ಥಿಗಳು ತಮ್ಮ ಕೆಲಸವನ್ನು ಅಂದೇ ಮಾಡದೆ ಸಮಯವಿದೆ ಎಂದು, ಓದುವುದನ್ನು ನಿಧಾನವಾಗಿ ಆರಂಭಿಸುತ್ತಾರೆ. ಪ್ರತಿಫಲ-ಕೆಲವು ವಿಷಯಗಳಲ್ಲಿ ಅನುತ್ತೀರ್ಣರಾಗಿ, ಕೆಲವು ವರ್ಷಗಳನ್ನು ವ್ಯಯಮಾಡಿ ತಮ್ಮ ಜೀವನದ  ಗತಿಯನ್ನೇ ಬದಲಾಯಿಸುವುದಲ್ಲದೆ, ಹಾಳು ಮಾಡಿಕೊಳ್ಳುವುದೂ ಉಂಟು. ಇದೇ ರೀತಿ ಹಿರಿಯರು ಸಹ ತಮ್ಮ ಕೆಲಸವನ್ನು ಮುಂದೂಡಿ ಸೋಮಾರಿಗಳಾಗುವುದು ಸರ್ವೇ ಸಾಮಾನ್ಯ. ಹೀಗೇ ಒಟ್ಟಿನಲ್ಲಿ ಎಲ್ಲರೂ `ನಾಳೆ' ಎನ್ನುವವರೇ.

ಇಂದಿನ ಆರಾಧನಾವಿಧಿಯು ನಾಳೆ ಎನ್ನುವವನ ಮನೆ-ಮನ ಹಾಳು ಎಂದು ಸಾರುತ್ತಿದೆ. ಕೇವಲ ಲೌಕಿಕ, ಪ್ರಾಪಂಚಿಕ ಜೀವನಕ್ಕೆ ಸೀಮಿತವಾದುದಲ್ಲ, ಈ ನಾಳೆ; ಆಧ್ಯಾತ್ಮಿಕ ಜೀವನಕ್ಕೂ ಸಹ ಅನ್ವಯಿಸುತ್ತದೆ. ಆಧ್ಯಾತ್ಮಿಕವಾಗಿಯೂ ಸಹ ನಾವು ಸಿದ್ಧರಿರಬೇಕು. ಏಕೆಂದರೆ ಯೇಸು ಬರುವ ಸಮಯ ಯಾರಿಗೂ ಗೊತ್ತಿಲ್ಲ. ಆದ್ದರಿಂದ ಆತ್ಮಶುದ್ಧ ಸದಾ ಸಿದ್ಧನಾಗಿರಬೇಕು. ಶುಭಸಂದೇಶದಲ್ಲಿ ಯೇಸು ಪರಿತ್ಯಾಗಕ್ಕೆ ಕರೆ ನೀಡುತ್ತಾರೆ. ಯೇಸುವಿನಲ್ಲಿ ವಿಶ್ವಾಸವಿಟ್ಟು ಪೀಡೆಗಳಿಂದ ಜ್ಞಾನಸ್ನಾನವನ್ನು ಪಡೆದ ನಾವೆಲ್ಲರೂ ಸಹ ಎಲ್ಲಾ ಸೈತಾನನ ಬಂಧನಗಳಿಂದ ಬಿಡುಗಡೆಯಾಗಿ ಕ್ರೈಸ್ತರಾಗುತ್ತೇವೆ. ಅಂದರೆ ನಾವು ದೇವರ ಮಕ್ಕಳು, ದೇವರ ಸಾಮ್ರಾಜ್ಯಕ್ಕೆ ಸೇರಿದವರು. ಆದ್ದರಿಂದ ನಾವು ಬೆಳಕಿನ ಮಕ್ಕಳು. ದೇವರೋ ಬೆಳಕಿನ ಸಂಕೇತ, ನಾವು ರಾತ್ರಿಗೆ ಅಥವಾ ಕತ್ತಲೆಗೆ ಸೇರಿದವರಲ್ಲ-ನಾವು ಸೈತಾನನ ಬಂಧನದಿಂದ ಮುಕ್ತರಾಗಿದ್ದೇವೆ. ಆದ್ದರಿಂದ ಸದಾ ದೇವರ ಬರುವಿಕೆಗಾಗಿ ಕಾಯುತ್ತಿರು ಎಂದು ಯೇಸು ನಮಗೆ ತಿಳಿಸುತ್ತಾರೆ. ಕ್ರೈಸ್ತರಾದ ನಮ್ಮಲ್ಲಿ ದೇವರ ಶಕ್ತಿ ಇದೆ. ಪವಿತ್ರಾತ್ಮರ ವರದಾನ ನಮ್ಮಲ್ಲಿದೆ. ಆದ್ದರಿಂದ ಸೈತಾನನ ಆಯುಧಗಳಾದ ಕುಡುಕುತನ, ಮತ್ತಿತರ ಕೆಟ್ಟ ನಡತೆಗಳನ್ನು ತ್ಯಜಿಸಿ ವಿಶ್ವಾಸ ಎಂಬ ಆಯುಧಗಳಾದ ಕುಡುಕುತನ, ಮತ್ತಿತರ ವರದಾನ ನಮ್ಮಲ್ಲಿದೆ. ಆದ್ದರಿಂದ ಸೈತಾನನ ಆಯುಧಗಳಾದ ಕುಡುಕುತನ, ಮತ್ತಿತರ ಕೆಟ್ಟ ನಡತೆಗಳನ್ನು ತ್ಯಜಿಸಿ ವಿಶ್ವಾಸ ಎಂಬ ಆಯುಧದೊಂದಿಗೆ ಪ್ರೀತಿಯೆಂಬ ನಮ್ಮ ಬಾಳ್ವೆಯೊಂದಿಗೆ ಸದಾ ದೇವರ ಚಿತ್ತವನ್ನು ನೆರವೇರಿಸುತ್ತಾ ದೇವರ ಆಗಮನವನ್ನು ಎದುರು ನೋಡಬೇಕು.

ಕೆಟ್ಟ ಮಾರ್ಗವನ್ನು ತ್ಯಜಿಸಿ ದೇವರ ಆಗಮನವನ್ನು ಎದುರು ನೋಡಬೇಕು. ನಾವು ನಮ್ಮ ಅಂತರಂಗವನ್ನು ಶುದ್ಧವಾಗಿಟ್ಟು ದೇವರನ್ನು ನಿರೀಕ್ಷಿಸಬೇಕು. ಆಧ್ಯಾತ್ಮಿಕ ಜೀವನವನ್ನು ನಿರ್ಲಕ್ಷಿಸಬಾರದು. ಪ್ರಾಪಂಚಿಕ, ಲೌಕಿಕ ಪ್ರಪಂಚದಲ್ಲಿ ಮುಳುಗಿ ಸೈತಾನನ ವಶವಾಗದೆ, ನಮ್ಮ ಪ್ರೀತಿಯ ನಡೆಯೊಂದಿಗೆ, ಪರಿಶುದ್ಧತೆಯ ಬಾಳಿನೊಂದಿಗೆ ದೇವರನ್ನು ಕಾಣಲು ಕಾತುರರಾಗಬೇಕು. ಆದ್ದರಿಂದ ಆತ್ಮ ಶುದ್ಧ ಸದಾಸಿದ್ಧ ಏಕೆಂದರೆ ನಾಳೆ ಎನ್ನುವವನ ಮನೆ-ಮನ ಹಾಳು.


No comments:

Post a Comment