Thursday, 15 August 2019

ಸಾಧಾರಣ ಕಾಲದ ಮೂವತ್ತೊಂದನೆಯ ಭಾನುವಾರ



ಪ್ರವೇಶ ಶ್ಲೋಕ                                       ಕೀರ್ತ 37 : 22-23
ಹೇ ಪ್ರಭು, ನನ್ನ ಕೈ ಬಿಡಬೇಡಯ್ಯಾ, ದೇವಾ ನನ್ನಿಂದ ದೂರವಾಗಬೇಡಯ್ಯಾ. ಪ್ರಭೂ, ನನ್ನುದ್ಧಾರಕನೇ, ನನಗೆ ನೆರವಾಗಲು ಬಾ ಬೇಗನೆ.

ಸಭಾ ಪ್ರಾರ್ಥನೆ
ಸರ್ವಶಕ್ತ ಕರುಣಾಳು ದೇವರೇ,
ನಿಮ್ಮ ವಿಶ್ವಾಸಿಗಳು ನಿಮಗೆ ತಕ್ಕ ಹಾಗೂ
ಸ್ತುತ್ಯಾರ್ಹ ಸೇವೆ ಸಲ್ಲಿಸುವುದು ನಿಮ್ಮದೇ ವರವಾಗಿದೆ.
ನೀವು ವಾಗ್ದಾನ ಮಾಡಿದ ಸೌಭಾಗ್ಯದೆಡೆಗೆ
ನಾವು ಎಡವದೆ ಓಡೋಡುತ್ತಾ ಬರುವಂತಾಗಲಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಅರ್ಪಣಾ ಪ್ರಾರ್ಥನೆ
ಪ್ರಭುವೇ, ನಮ್ಮೀ ಬಲಿಯರ್ಪಣೆಯು
ನಿಮ್ಮ ಸನ್ನಿಧಿಗೆ ಪರಿಶುದ್ಧ ಕಾಣಿಕೆಯಾಗಲಿ.
ನಮಗೆ ನಿಮ್ಮ ಕರುಣೆಯ ಸುರಿಮಳೆಯಾಗಲಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ಪರಮ ಪ್ರಸಾದ ಶ್ಲೋಕ                                    ಕೀರ್ತ 15 : 11
ಪ್ರಭೂ, ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು. ನಿನ್ನ ಸನ್ನಿಧಿ ಕೊಡುವುದು ಪರಮಾನಂದವನು.

ಅಥವಾ                                                ಯೊವಾ 6 : 58

ಪ್ರಭು ಇಂತೆನ್ನುತ್ತಾರೆ : ಜೀವಸ್ವರೂಪಿಯಾದ ಪಿತನು ನನ್ನನ್ನು ಕಳುಹಿಸಿಕೊಟ್ಟಿರುವರು. ನಾನು ಅವರಿಂದಲೇ ಜೀವಿಸುತ್ತೇನೆ. ಅಂತೆಯೇ ನನ್ನನ್ನು ಭುಜಿಸುವವನು ನನ್ನಿಂದಲೇ ಜೀವಿಸುತ್ತಾನೆ.
                 
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ನಿಮ್ಮ ಕ್ರಿಯಾಶಕ್ತಿಯು
ನಮ್ಮಲ್ಲಿ ದಿನೇ ದಿನೇ ವೃದ್ಧಿಯಾಗಲಿ.
ಹೀಗೆ ಸ್ವರ್ಗೀಯ ಸಂಸ್ಕಾರಗಳಿಂದ ಚೈತನ್ಯಭರಿತರಾಗಿ
ನೀವು ವಾಗ್ದಾನ ಮಾಡಿದ ವರದಾನವನ್ನು
ನಾವು ಗ್ರಹಿಸಿ ಪಡೆಯುವಂತಾಗಲಿ.

ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

No comments:

Post a Comment