ಸಾಧರಣ ಕಾಲದ ಇಪ್ಪತ್ತೊಂದನೇ ವಾರ ಸೋಮವಾರ
26/ಹಸಿರು/ಸೋಮ/
1ನೇ ವಾಚನ - 1 ಥೆಸ 1: 1-5,8-10
ಕೀರ್ತನೆ - 149: 1-2, 3-4, 5-7,9
ಶುಭಸಂದೇಶ - ಮತ್ತಾಯ 23: 13-22
1ನೇ ವಾಚನ - 1 ಥೆಸ 1: 1-5,8-10
26/ಹಸಿರು/ಸೋಮ/
1ನೇ ವಾಚನ - 1 ಥೆಸ 1: 1-5,8-10
ಕೀರ್ತನೆ - 149: 1-2, 3-4, 5-7,9
ಶುಭಸಂದೇಶ - ಮತ್ತಾಯ 23: 13-22
1ನೇ ವಾಚನ - 1 ಥೆಸ 1: 1-5,8-10
ಪಿತನಾದ ದೇವರ ಹಾಗೂ ಪ್ರಭುವಾದ ಯೇಸುಕ್ರಿಸ್ತರ ಅನ್ಯೋನ್ಯತೆಯಲ್ಲಿರುವ ಥೆಸಲೋನಿಕದ ಸಭೆಯವರಿಗೆ ಪೌಲ, ಸಿಲ್ವಾನ ಹಾಗೂ ತಿಮೊಥೇಯ ಇವರು ಬರೆಯುವ ಪತ್ರ. ದೈವಾನುಗ್ರಹವೂ ಶಾಂತಿಸಮಾಧಾನವೂ ನಿಮಗೆ ಲಭಿಸಲಿ !ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮನ್ನು ಸ್ಮರಿಸುತ್ತಾ, ನಿಮ್ಮೆಲ್ಲರಿಗಾಗಿ ದೇವರಿಗೆ ನಿರಂತರ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ವಿಶ್ವಾಸಭರಿತವಾದ ನಿಮ್ಮ ಕಾರ್ಯವನ್ನೂ ಪ್ರೀತಿಪೂರಿತವಾದ ನಿಮ್ಮ ದುಡಿಮೆಯನ್ನೂ ಪ್ರಭು ಯೇಸುವಿನಲ್ಲಿ ನೀವಿಟ್ಟಿರುವ ಅಚಲ ನಿರೀಕ್ಷೆಯನ್ನೂ ತಂದೆಯಾದ ದೇವರ ಸನ್ನಿಧಿಯಲ್ಲಿ ಜ್ಞಾಪಿಸಿಕೊಳ್ಳುತ್ತೇವೆ. ಸಹೋದರರೇ, ನೀವು ದೇವರಿಗೆ ಪ್ರಿಯರು; ದೇವರಿಂದಲೇ ಆಯ್ಕೆಗೊಂಡವರು ಎಂದು ನಾವು ಬಲ್ಲೆವು. ನಮ್ಮ ಶುಭಸಂದೇಶ ಕೇವಲ ಬಾಯಿ ಮಾತಿನದಲ್ಲ; ಅದು ಶಕ್ತಿಪೂರ್ಣವಾಗಿ ಪವಿತ್ರಾತ್ಮರ ಸಮೇತವಾಗಿ ಪೂರ್ಣ ಪ್ರಮಾಣದಿಂದ ಬಂದದ್ದು. ನಾವು ನಿಮ್ಮ ನಡುವೆಯಿದ್ದಾಗ, ನಿಮಗೋಸ್ಕರ ಹೇಗೆ ವರ್ತಿಸಿದೆವು ಎಂದು ನೀವೇ ಬಲ್ಲಿರಿ. ಪ್ರಭುವಿನ ಶುಭಸಂದೇಶ ನಿಮ್ಮಿಂದಲೇ ಘೋಷಿತವಾಯಿತು. ದೇವರಲ್ಲಿ ನೀವಿಟ್ಟಿರುವ ವಿಶ್ವಾಸ ಮಕೆದೋನಿಯ ಮತ್ತು ಅಖಾಯದಲ್ಲಿ ಮಾತ್ರವಲ್ಲದೆ ಎಲ್ಲೆಡೆಯಲ್ಲೂ ಪ್ರಸರಿಸಿತು. ಈ ನಿಮ್ಮ ವಿಶ್ವಾಸವನ್ನು ಕುರಿತು ನಾವು ಹೇಳಬೇಕಾದುದು ಏನೂ ಇಲ್ಲ; ಅಲ್ಲಿಯ ಜನರೇ ಹೇಳುತ್ತಾರೆ. ನಾವು ನಿಮ್ಮಲ್ಲಿಗೆ ಬಂದಾಗ, ನೀವು ನಮ್ಮನ್ನು ಹೇಗೆ ಸ್ವಾಗತಿಸಿದಿರಿ; ವಿಗ್ರಹಗಳನ್ನು ತೊರೆದು, ಸತ್ಯ ಹಾಗೂ ಜೀವಸ್ವರೂಪರಾದ ದೇವರ ಕಡೆಗೆ ಹೇಗೆ ಅಭಿಮುಖರಾದಿರಿ; ಸಾವಿನಿಂದ ಜೀವಕ್ಕೆ ಎಬ್ಬಿಸಲಾದ ದೇವರ ಪುತ್ರ ಯೇಸು ಸ್ವರ್ಗದಿಂದ ಪುನರಾಗಮಿಸುವುದನ್ನು ನೀವು ಹೇಗೆ ಎದುರುನೋಡುತ್ತಿದ್ದೀರಿ - ಎಂಬುದನ್ನು ಆ ಜನರೇ ಹೇಳುತ್ತಾರೆ. ಈ ಯೇಸುವೇ ಮುಂದೆ ಬರಲಿರುವ ದೈವಕೋಪದಿಂದ ನಮ್ಮನ್ನು ಪಾರುಮಾಡುವವರು.
ಕೀರ್ತನೆ - 149: 1-2, 3-4, 5-7,9
1 : ಅಲ್ಲೆಲೂಯ ! ಹಾಡಿರಿ ಪ್ರಭುವಿಗೆ ನೂತನ ಕೀರ್ತನೆಯನು / ಭಕ್ತರ ಸಭೆಯಲಿ ಸ್ತುತಿಮಾಡಿರಿ ಆತನನು
2 : ಆನಂದಿಸಲಿ ತಮ್ಮ ಸೃಷ್ಟಿಕರ್ತನಲಿ ಇಸ್ರಯೇಲರು / ತಮ್ಮಾ ರಾಜನಿಗೆ ಜಯಕಾರ ಮಾಡಲಿ ಸಿಯೋನಿನವರು
3 : ಆತನ ನಾಮವನು ಕೀರ್ತಿಸಲಿ ಕುಣಿತದಿಂದ / ಆತನನು ಭಜಿಸಲಿ ತಮಟೆ, ಕಿನ್ನರಿಗಳಿಂದ
4 : ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನು / ಜಯಶೀಲರನ್ನಾಗಿಸುತ್ತಾನೆ ದೀನದಲಿತರನು
5 : ಹಿಗ್ಗಲಿ ಭಕ್ತಾದಿಗಳು ದೊರೆತ ವಿಜಯದಲಿ / ಜಯಕಾರ ಮಾಡಲಿ ತಮ್ಮ ತಮ್ಮ ಶಿಬಿರಗಳಲಿ
6 : ಇರಲಿ ಪ್ರಭುವಿನ ಸ್ತೋತ್ರ ಅವರ ಬಾಯಲಿ / ಇರಲಿ ಇಬ್ಬಾಯಿ ಕತ್ತಿಯು ಅವರ ಕೈಯಲಿ
7 : ಈಪರಿ ಮುಯ್ಯಿತೀರಿಸಲಿ ಜನಾಂಗಗಳಿಗೆ / ವಿಧಿಸಲಿ ದಂಡನೆಯನು ಅನ್ಯ ರಾಷ್ಟ್ರಗಳಿಗೆ
9 : ವಿಧಿಸಲಿ ಅವರಿಗೆ ಲಿಖಿತಾಜ್ಞೆಯ ಶಿಕ್ಷೆಯನು / ಇದು ತರಲಿ ಭಕ್ತರೆಲ್ಲರಿಗೆ ಗೌರವವನು / ಅಲ್ಲೆಲೂಯ!
ಶುಭಸಂದೇಶ - ಮತ್ತಾಯ 23: 13-22
“ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ಸ್ವರ್ಗ ಸಾಮ್ರಾಜ್ಯದ ದ್ವಾರಗಳನ್ನು ಮಾನವರಿಗೆ ಮುಚ್ಚಿದ್ದೀರಿ. ನೀವೂ ಪ್ರವೇಶಿಸುವುದಿಲ್ಲ, ಒಳಕ್ಕೆ ಪ್ರವೇಶಿಸಲು ಯತ್ನಿಸುವವರನ್ನೂ ಬಿಡುವುದಿಲ್ಲ. ಕಪಟ ಧರ್ಮಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಧಿಕ್ಕಾರ! (ವಿಧವೆಯರ ಮನೆಮಾರುಗಳನ್ನು ನೀವು ನುಂಗಿಬಿಡುತ್ತೀರಿ. ನಟನೆಗಾಗಿ ಉದ್ದುದ್ದ ಜಪತಪಗಳನ್ನು ಮಾಡುತ್ತೀರಿ, ನೀವು ಅತಿ ಕಠಿಣವಾದ ದಂಡನೆಗೆ ಗುರಿಯಾಗುವಿರಿ). ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ಕೇವಲ ಒಬ್ಬ ವ್ಯಕ್ತಿಯನ್ನು ಮತಾಂತರಿಸಿಕೊಳ್ಳುವುದಕ್ಕಾಗಿ ಜಲನೆಲಗಳನ್ನು ಸುತ್ತಿ ಬರುತ್ತೀರಿ. ಮತಾಂತರಗೊಂಡ ಬಳಿಕವಾದರೋ ಅವನು ನಿಮಗಿಂತಲೂ ಇಮ್ಮಡಿ ನರಕಕ್ಕೆ ಗುರಿಯಾಗುವಂತೆ ಮಾಡುತ್ತೀರಿ. “ಕುರುಡ ಮಾರ್ಗದರ್ಶಕರೇ, ನಿಮಗೆ ಧಿಕ್ಕಾರ! ಒಬ್ಬನು ದೇವಾಲಯದ ಮೇಲೆ ಆಣೆಯಿಟ್ಟರೆ ಅವನು ಅದಕ್ಕೇನೂ ಬದ್ಧನಲ್ಲ. ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟರೋ, ಅವನು ಅದನ್ನು ನಡೆಸಿಯೇ ತೀರಬೇಕು ಎನ್ನುತ್ತೀರಿ. ದೃಷ್ಟಿಗೆಟ್ಟ ಮತಿಭ್ರಷ್ಟರೇ, ಯಾವುದು ಶ್ರೇಷ್ಠ? ಚಿನ್ನವೋ, ಚಿನ್ನವನ್ನು ಪಾವನಗೊಳಿಸುವ ದೇವಾಲಯವೋ? ಅಂತೆಯೇ, ಒಬ್ಬನು ಬಲಿಪೀಠದ ಮೇಲೆ ಆಣೆಯಿಟ್ಟರೆ ಅದಕ್ಕೇನೂ ಬದ್ಧನಲ್ಲ. ಬಲಿಪೀಠದ ಮೇಲಿರುವ ಕಾಣಿಕೆಗಳ ಮೇಲೆ ಆಣೆಯಿಟ್ಟರೋ, ಅದನ್ನು ಅವನು ನಡೆಸಿಯೇ ತೀರಬೇಕು ಎನ್ನುತ್ತೀರಿ. ದೃಷ್ಟಿಹೀನರೇ! ಯಾವುದು ಶ್ರೇಷ್ಠ? ಕಾಣಿಕೆಯೋ, ಕಾಣಿಕೆಯನ್ನು ಪಾವನಗೊಳಿಸುವ ಬಲಿಪೀಠವೋ? ಬಲಿಪೀಠದ ಮೇಲೆ ಆಣೆಯಿಡುವವನು ಬಲಿಪೀಠದ ಮೇಲೆ ಮಾತ್ರವಲ್ಲ, ಅದರ ಮೇಲಿರುವ ಪ್ರತಿಯೊಂದು ಕಾಣಿಕೆಯ ಮೇಲೂ ಆಣೆಯಿಡುತ್ತಾನೆ. ದೇವಾಲಯದ ಮೇಲೆ ಆಣೆಯಿಡುವವನು ಅದರ ಮೇಲೆ ಮಾತ್ರವಲ್ಲ, ಅದರಲ್ಲಿ ನೆಲೆಸುವ ದೇವರ ಮೇಲೂ ಆಣೆಯಿಡುತ್ತಾನೆ. ಹಾಗೆಯೇ, ಸ್ವರ್ಗದ ಮೇಲೆ ಆಣೆಯಿಡುವವನು ದೇವರ ಸಿಂಹಾಸನದ ಮೇಲೂ ಅದರಲ್ಲಿ ಆಸೀನರಾಗಿರವವರ ಮೇಲೂ ಆಣೆಯಿಡುತ್ತಾನೆ.
ಚಿಂತನೆ
ಚಿಂತನೆ
ಪ್ರೀತಿ-ಪ್ರೇಮ
ಮರಣ ಹೊಂದಿದ್ದಾನೆ ಎಂದು ತಜ್ಞರಿಂದ ತೀರ್ಮಾನಿಸಲಾದ ಒಬ್ಬನನ್ನು ಸಮಾಧಿ ಮಾಡಲೆಂದು ಹೊತ್ತುಕೊಂಡು ಹೋಗಲಾಯಿತು. ಶವಪೆಟ್ಟಿಗೆಯನ್ನು ಗುರಿಗಿಳಿಸಬೇಕು ಎನ್ನುವಷ್ಟರಲ್ಲೇ ಒಳಗಿದ್ದವನು ಮುಚ್ಚಳವನ್ನು ಹೊಡೆಯಲಾರಂಭಿಸಿದ, ಒಡನೆಯೇ ಶವ ಪೆಟ್ಟಿಗೆಯನ್ನು ತೆರೆಯಲಾಯಿತು. ಸತ್ತು ಹೋದ ಎಂದೆಣಿಸಿದ ವ್ಯಕ್ತಿ ಎದ್ದು ಕುಳಿತು ನೀವೇನು ಮಾಡ್ತಾ ಇದ್ದೀರಾ? ನಾನಿನ್ನೂ ಜೀವಂತವಾಗಿಯೇ ಇದ್ದೇನೆ. ಸತ್ತು ಹೋಗಿಲ್ಲ ಎಂದವನೇ ಹೊರಬರಲು ಪ್ರಯತ್ನಿಸಿದ. ಸುತ್ತಲಿದ್ದವರು ಭಯಭ್ರಾಂತರಾಗಿ ಗುರುಗಳು ಮತ್ತು ವೈದ್ಯರು ನೀನು ಮರಣ ಹೊಂದಿದ್ದೀಯೆಂದು ಸಾಭೀತು ಪಡಿಸಿದ್ದಾರೆ. ತಜ್ಞರು ತಪ್ಪು ಮಾಡುವುದುಂಟೆ. ಒಳಗೆ ಸೇರು ನೀನು ಸತ್ತು ಹೋಗಿದ್ದೀಯಾ ಎಂದು ಅವನನ್ನು ಬಲವಂತವಾಗಿ ಶವಪೆಟ್ಟಿಗೆಯಲ್ಲಿ ಮುಚ್ಚಿ, ಶಾಸ್ತ್ರೋಕ್ತವಾಗಿ ಸಮಾಧಿ ಮಾಡಿದರು. ಮಾನವೀಯತೆಯಲ್ಲಿ ಬೆಲೆಯಿರಲಿಲ್ಲ, ಕೇವಲ ನಿಯಮ ಮತ್ತು ಸಂಪ್ರದಾಯಗಳಿಗೆ ಮಾನ್ಯತೆಯಿತ್ತು.
ಇಂದಿನ ಶುಭಸಂದೇಶದಲ್ಲಿ ಪ್ರಭು ಯೇಸು ಧರ್ಮಶಾಸ್ತ್ರಿಗಳು, ಫರಿಸಾಯರನ್ನು ಖಂಡಿಸುವುದನ್ನು ಆಲಿಸಿದೆವು. ಇವರು ಕೇವಲ, ಮೋಶೆಯ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿದರೆ ಹೊರತು, ಮಾನವೀಯತೆಗೆ ಬೆಲೆ ಕೊಡಲಿಲ್ಲ. ಇವರು ತಮ್ಮ ಸಂಕುಚಿತ ಮನೋಭಾವದಿಂದ ಹಳೆ ನಿಯಮದ ಮೌಲ್ಯಗಳನ್ನೇ ಎತ್ತಿ ಹಿಡಿಯುತ್ತಿದ್ದರು. ಶಾಸ್ತ್ರ ವಿಧಿಗಳ ಮೂಲವಾಗಿದ್ದ ದಯೆ, ಕ್ಷಮೆ, ಪ್ರೀತಿಯಂತಹ ಮೌಲ್ಯಗಳನ್ನು ಬದಿಗೊತ್ತಿದ್ದರು. ಜನರ ಹೊಗಳುವಿಕೆಗಾಗಿ ಪ್ರಾರ್ಥನೆಗಳನ್ನು ಮಾಡುತ್ತಿದ್ದರೇ ಹೊರತು, ಆ ಮಹಿಮಾರೂಪಿಯನ್ನು ತಮ್ಮ ಅಂತರಂಗದಲ್ಲಿ ಮತ್ತು ಪರರಲ್ಲಿ ಕಾಣಲು ಮರೆತರು.
ಕ್ರೈಸ್ತನಾಗಿ ಬಾಳಲು ಇಚ್ಛಿಸುವವನಿಗೆ ಅಗತ್ಯವಾದುದು ವಿಶ್ವಾಸ. ಸಂತ ಪೌಲರು ಗಲಾತ್ಯದವರಿಗೆ (ವಚನ ೫:೪-೬)ರಲ್ಲಿ ಹೇಳುವಂತೆಯೇ, ಧರ್ಮಶಾಸ್ತ್ರದ, ವಿಧಿನಿಯಮಗಳನ್ನು ಅನುಸರಿಸುವುದರ ಮೂಲಕವೇ ದೇವರೊಡನೆ ಸತ್ಸಂಬಂಧ ಪಡೆಯಬೇಕೆಂದಿರುವ ನೀವು ಕ್ರಿಸ್ತ ಯೇಸುವಿನಿಂದ ಬೇರ್ಪಟ್ಟಿದ್ದೀರಿ. ದೈವಾನುಗ್ರಗದಿಂದ ದೂರವಾಗಿದ್ದೀರಿ; ಹೌದು! ಪ್ರೀತಿಯ ಸಹೋದರ, ಸಹೋದರಿಯರೇ ನಿಯಮಗಳಿರುವುದು ನಮಗಾಗಿ, ನಾವು ನಿಯಮಗಳಿಗಲ್ಲ. ಆ ಮೋಶೆಯ ನಿಯಮದ ಸಾರವನ್ನು ಅರಿಯಲು ಪ್ರಯತ್ನಿಸೋಣ, ಮಾನವೀಯತೆಗೆ ಮಹತ್ವವನ್ನು ನೀಡಿ, ಪ್ರಭು ಯೇಸುವಿನ ಮಹಿಮೆಯನ್ನು ಎಲ್ಲೆಡೆ ಸಾರೋಣ. ಪ್ರೀತಿ, ದಯೆ ಮತ್ತು ವಿಶ್ವಾಸದಿಂದ ಯೇಸುವಿನ ಮಹಿಮೆಯನ್ನು ಎಲ್ಲೆಡೆ ಸಾರೋಣ, ಪ್ರೀತಿ, ದಯೆ ಮತ್ತು ವಿಶ್ವಾಸದಿಂದ ಯೇಸುವಿನ ಮಹಿಮೆಯಲ್ಲಿ ಪಾಲುಗೊಳ್ಳೋಣ.
ಪ್ರೀತಿಯಿಂದ ಕಾರ್ಯವೆಸಗುವ ವಿಶ್ವಾಸವೇ ಪ್ರಮುಖ
No comments:
Post a Comment