Sunday, 25 August 2019

ಸಾಧಾರಣ ಕಾಲದ ಇಪ್ಪತ್ತೊಂದನೇ ವಾರ ಮಂಗಳವಾರ

ಸಾಧಾರಣ ಕಾಲದ ಇಪ್ಪತ್ತೊಂದನೇ ವಾರ ಮಂಗಳವಾರ

27/ಬಿಳಿ/ಮಂಗಳ/ಸಂತ ಮೋನಿಕ (ಸ್ಮರಣೆ)
1ವಾಚನ: 1 ಥೆಸ 2: 1-8
ಕೀರ್ತನೆ 139: 1-6
ಶುಭಸಂದೇಶ - ಮತ್ತಾಯ 23: 23-26


1ವಾಚನ: 1 ಥೆಸ 2: 1-8
ಸಹೋದರರೇ, ನಾವು ನಿಮ್ಮಲ್ಲಿಗೆ ಬಂದುದು ವ್ಯರ್ಥವಾಗಲಿಲ್ಲವೆಂಬುದು ನಿಮಗೆ ಗೊತ್ತು. ನಿಮಗೆ ತಿಳಿದಿರುವಂತೆ ನಾವು ನಿಮ್ಮಲ್ಲಿಗೆ ಬರುವ ಮೊದಲೇ ಫಿಲಿಪ್ಪಿ ಪಟ್ಟಣದಲ್ಲಿ ಹಿಂಸೆ, ಅವಮಾನಗಳನ್ನು ಸಹಿಸಿದೆವು. ತೀವ್ರವಾದ ವಿರೋಧವಿದ್ದರೂ ದೇವರ ನೆರವಿನಿಂದ ನಿರ್ಭೀತರಾಗಿ ಶುಭಸಂದೇಶವನ್ನು ನಿಮಗೆ ಸಾರಿದೆವು. ನಮ್ಮ ಬೋಧನೆಯಾದರೋ ದುರುದ್ದೇಶದಿಂದ ಕೂಡಿದುದಲ್ಲ; ಅಶುದ್ಧ ಅಥವಾ ಕಪಟ ಮನಸ್ಸಿನಿಂದ ಮೂಡಿದುದೂ ಅಲ್ಲ. ಶುಭಸಂದೇಶವನ್ನು ಸಾರಲು ನಾವು ಯೋಗ್ಯರೆಂದು ಎಣಿಸಿ, ದೇವರೇ ಈ ಹೊಣೆಯನ್ನು ನಮಗೆ ವಹಿಸಿಕೊಟ್ಟಿದ್ದಾರೆ. ಎಂತಲೇ, ನಾವು ಮನುಷ್ಯರನ್ನು ಮೆಚ್ಚಿಸುವುದಕ್ಕಾಗಿ ಅಲ್ಲ, ಅಂತರಂಗವನ್ನು ಪರಿಶೋಧಿಸುವ ದೇವರನ್ನು ಮೆಚ್ಚಿಸುವುದಕ್ಕಾಗಿ ಈ ಕಾರ್ಯವನ್ನು ನಿರ್ವಹಿಸುತ್ತೇವೆ. ನಿಮಗೆ ತಿಳಿದಿರುವ ಪ್ರಕಾರ ನಾವು ಎಂದಿಗೂ ಮುಖಸ್ತುತಿಗಾಗಿ ಮಾತನಾಡುವವರಲ್ಲ, ಧನದಾಶೆಯನ್ನು ಮರೆಮಾಚುವ ವೇಷಧಾರಿಗಳೂ ಅಲ್ಲ. ಇದಕ್ಕೆ ದೇವರೇ ಸಾಕ್ಷಿ. ಕ್ರಿಸ್ತಯೇಸುವಿನ ಪ್ರೇಷಿತರಾದ ನಾವು ಜನರಿಂದ ಮರ್ಯಾದೆ, ಗೌರವಗಳನ್ನು ಗಳಿಸಬಹುದಾಗಿದ್ದರೂ ನಿಮ್ಮಿಂದಾಗಲಿ, ಇತರರಿಂದಾಗಲಿ ಅವನ್ನು ನಾವು ಬಯಸಲಿಲ್ಲ. ತಾಯಿ ತನ್ನ ಮಕ್ಕಳನ್ನು ಸಾಕಿ ಸಲಹುವಂತೆಯೇ, ನಾವು ನಿಮ್ಮನ್ನು ವಾತ್ಸಲ್ಯದಿಂದ ಕಂಡೆವು. ನೀವು ನಮಗೆ ಇಷ್ಟು ಪ್ರಿಯರಾದ ಕಾರಣ ದೇವರ ಶುಭಸಂದೇಶವನ್ನು ಸಾರುವುದಕ್ಕೆ ಮಾತ್ರವಲ್ಲ, ನಿಮಗಾಗಿ ನಮ್ಮ ಪ್ರಾಣವನ್ನು ನೀಡುವುದಕ್ಕೂ ಸಿದ್ಧರಾಗಿದ್ದೆವು.

ಕೀರ್ತನೆ 139: 1-6
1 : ಪ್ರಭು, ಪರಿಶೋಧಿಸಿರುವೆ ನೀ ನನ್ನನು / ಅರಿತುಕೊಂಡಿರುವೆ ಅಂತರಂಗವನು
2 : ನಾ ಕೂರುವುದೂ ಏಳುವುದೂ ನಿನಗೆ ಗೊತ್ತಿದೆ / ನನ್ನಾಲೋಚನೆ ದೂರದಿಂದಲೇ ನಿನಗೆ ತಿಳಿದಿದೆ
3 : ನನ್ನ ನಡೆಯನು, ನಿದ್ರೆಯನು ನೀ ಬಲ್ಲಾತ / ನನ್ನ ನಡತೆಯೆಲ್ಲವು ನಿನಗೆ ಸುಪರಿಚಿತ
4 : ಪ್ರಭು, ನಾ ಮಾತೆತ್ತುವುದಕ್ಕೆ ಮುಂಚಿತವಾಗಿ / ತಿಳಿದುಹೋಗಿದೆ ಎಲ್ಲ ನಿನಗೆ ಪೂರ್ತಿಯಾಗಿ
5 : ನನ್ನ ಹಿಂದೆಯೂ ಮುಂದೆಯೂ ನೀನಿರುವೆ / ಅಭಯ ಹಸ್ತವನು ನನ್ನ ಮೇಲಿರಿಸಿರುವೆ

6 : ನನ್ನ ಕುರಿತು ನಿನಗಿರುವ ಅರಿವು ಅಗಾಧ / ನನ್ನ ಬುದ್ಧಿಗದು ಸಿಲುಕದಷ್ಟು ಉನ್ನತ. 

ಶುಭಸಂದೇಶ - ಮತ್ತಾಯ 23: 23-26
ಕಪಟ ಧರ್ಮಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪುದೀನ, ಸದಾಪ, ಜೀರಿಗೆ ಮುಂತಾದವುಗಳ ದಶಾಂಶವನ್ನು ದೇವರಿಗೆ ಸಲ್ಲಿಸುತ್ತೀರಿ. ಆದರೆ ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ನ್ಯಾಯನೀತಿ, ದಯೆ ದಾಕ್ಷಿಣ್ಯ, ಪ್ರಾಮಾಣಿಕತೆ ಇವುಗಳನ್ನು ಬದಿಗೊತ್ತಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯ ಮಾಡಬೇಕೆಂದು ಅಲ್ಲ, ಆದರೆ ಇವುಗಳನ್ನೂ ಅನುಷ್ಠಾನಕ್ಕೆ ತರಲೇಬೇಕಿತ್ತು. ಅಂಧ ನಿರ್ದೇಶಕರೇ, ನೀವು ಸೊಳ್ಳೆಯನ್ನೇನೋ ಸೋಸುತ್ತೀರಿ. ಆದರೆ ಒಂಟೆಯನ್ನೇ ನುಂಗಿಬಿಡುತ್ತೀರಿ. ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ನಿಮ್ಮ ತಟ್ಟೆಲೋಟಗಳ ಹೊರಭಾಗಗಳನ್ನೇನೋ ಶುಚಿಮಾಡುತ್ತೀರಿ; ಆದರೆ ಅವುಗಳ ಒಳಭಾಗ ಕೊಳ್ಳೆ ಹಾಗೂ ಲೋಭದ ಗಳಿಕೆಗಳಿಂದ ತುಂಬಿಹೋಗಿದೆ. ಕುರುಡ ಫರಿಸಾಯನೇ, ಮೊತ್ತಮೊದಲು ತಟ್ಟೆ ಲೋಟಗಳ ಒಳಭಾಗವನ್ನು ತೊಳೆ, ಆಗ ಅವುಗಳ ಹೊರಭಾಗವೂ ಶುಚಿಯಾಗುವುದು.

ಚಿಂತನೆ
ಮುಗ್ಧ ಮೌಢ್ಯತೆಯೇ ಅನಾಚಾರ!
ಅದೊಂದು ಆಶ್ರಮ, ಅಲ್ಲೊಬ್ಬ ಗುರುಗಳು. ಪ್ರತಿ ಸಾಯಂಕಾಲ ಪೂಜೆಗೆ ಕುಳಿತಾಗ ಆಶ್ರಮದ ಬೆಕ್ಕು ಮಧ್ಯೆ ಪ್ರವೇಶಿಸಿ, ಅತ್ತಿತ್ತ ಓಡಾಡಿ ಎಲ್ಲವನ್ನೂ ಅಸ್ತವ್ಯಸ್ತಗೊಳಿಸುತ್ತಿತ್ತು. ಪೂಜೆಗೆ ತೊಡಕನ್ನುಂಟುಮಾಡುತ್ತಿತ್ತು. ಭಕ್ತಾದಿಗಳಿಗೆ ಇದರಿಂದ ಬಹಳ ತೊಂದರೆಯಾಗುತ್ತಿತ್ತು. ಆದುದರಿಂದ ಸಂಜೆಯ ಪೂಜೆಯ ಸಮಯದಲ್ಲಿ ಸಂದ್ಯಾವಂದನೆಗೆ ಬೆಕ್ಕನ್ನು ಕಟ್ಟಿ ಹಾಕಬೇಕೆಂದು ಶಿಷ್ಯರಿಗೆ ಆಜ್ಞಾಪಿಸಿದರು. ಗುರುಗಳು ಕಾಲವಾದ ನಂತರ ಕೂಡ ಅವರ ಶಿಷ್ಯರು ಸಂಧ್ಯಾವಂದನೆಯ ಸಮಯದಲ್ಲಿ ಬೆಕ್ಕನ್ನು ಕಟ್ಟಿ ಹಾಕುವ ಪದ್ಧತಿಯನ್ನು ಮುಂದುವರಿಸಿದರು. ಆ ಬೆಕ್ಕು ಸತ್ತಾಗ ಇನ್ನೊಂದು ಬೆಕ್ಕನ್ನು ತಂದು ಸಂಧ್ಯಾವಂದನೆಯ ಸಮಯದಲ್ಲಿ ಕಟ್ಟಿ ಹಾಕತೊಡಗಿದರು. ಶತಮಾನಗಳ ನಂತರ ಸಂದ್ಯಾವಂದನೆ ಬೆಕ್ಕಿಲ್ಲದೆ ನಡೆಯದಾಯಿತು. ಅದೇ ರೀತಿ ಅರ್ಥರಹಿತ ಆಚಾರ ಅನಾಚಾರಕ್ಕೆ ಎಡೆಮಾಡಿಕೊಡುತ್ತದೆ. ಅದರ ಪಾಲನೆಯಿಂದ ಜೀವನ ಅರ್ಥಹೀನ ಮಾತ್ರವಲ್ಲ ಅಸಾಧ್ಯವಾಗಲೂಬಹುದು.

ಹೌದು! ನಾವು ಅನೇಕ ಸಲ, ನಮ್ಮ ಕ್ರೈಸ್ತ ಜೀವನವನ್ನು, ಶಾಸ್ತ್ರ ವಿಧಿ ನಿಯಮಗಳಿಗೆ ಸೀಮಿತವಾಗಿಡುತ್ತೇವೆ. ಅವುಗಳ ಸತ್ವ ಮತ್ತು ತಿರುಳನ್ನು ನಾವು ಮರೆತುಬಿಡುತ್ತೇವೆ. ಇಂದಿನ ವಾಚನಗಳು ಧರ್ಮಶಾಸ್ತ್ರದ ತಿರುಳನ್ನು ಮನದಟ್ಟು ಮಾಡಿಕೊಡುತ್ತವೆ. ಯೇಸುವಿನ ಕಾಲದಲ್ಲಿಯೂ, ಯೆಹೂದ್ಯ ಸಮಾಜವು ಅಸಂಖ್ಯ ನೇಮ ನಿಯಮಗಳ ಪಾಲನೆಯಲ್ಲಿ ತಲ್ಲೀನವಾಗಿತ್ತು. ಇಂತಹ ಹಿನ್ನೆಲೆಯಲ್ಲಿ ಯೇಸುಕ್ರಿಸ್ತರು ಮೋಶೆಯ ಕಾಲದಿಂದ ನಡೆದು ಬಂದ ನಿಯಮ, ಶಾಸ್ತ್ರಗಳಿಗೆ ಹೊಸ ಅರ್ಥವನ್ನು ನೀಡಿದರು. ಧರ್ಮಶಾಸ್ತ್ರದ ಮೂಲವಾದ ಮಾನವೀಯತೆಯನ್ನು ಎತ್ತಿಹಿಡಿದರು. ನೀವು ನಿಮ್ಮ ತಟ್ಟೆ ಲೋಟಗಳ ಹೊರಭಾಗವನ್ನು ಶುಚಿಮಾಡುತ್ತೀರಿ, ಆದರೆ ನಿಮ್ಮ ಒಳಭಾಗವು ಲೋಭದಿಂದಲೂ ಕೆಡುಕಿನಿಂದಲೂ ತುಂಬಿದೆ ಎಂದು ಖಂಡಿಸುತ್ತಾರೆ. ಹೀಗೆ ದಯೆಯೇ ಧರ್ಮದ ಮೂಲ ಎಂದು ಸಾರಿದರು, ಸಾಧಿಸಿದರು.

ನಮ್ಮ ಬಾಹ್ಯ ಆಚರಣೆಗೆ ನಿಜವಾಗಿ ಅರ್ಥ ಬರಬೇಕಾದರೆ, ಮಾನವೀಯತೆ ಅನುಕಂಪ, ಪ್ರೀತಿ ಇವು ನಮ್ಮ ಅಂತರಂಗದಲ್ಲಿ ಸ್ಥಿರವಾಗಿ ನೆಲೆಗೊಳ್ಳಬೇಕು. ಆಗ ಮಾತ್ರ ನಮ್ಮ ಕ್ರೈಸ್ತ ಜೀವನ ಸಾರ್ಥಕವಾಗುತ್ತದೆ.

ಬಹಿರಂಗ ಯಶಸ್ವಿಗಿಂತ, ಅಂತರಂಗ ಸ್ಥಿರವಾಗಿ ಶುದ್ಧ ಜೀವನವೇ ಮುಖ್ಯ

No comments:

Post a Comment