ಪ್ರವೇಶ ಶ್ಲೋಕ ಕೀರ್ತ 69 : 2, 6
ಕರುಣೆಯಿಂದೆನ್ನನು ದೇವಾ ರಕ್ಷಿಸು, ತ್ವರೆಯಾಗಿ ಬಂದು ಪ್ರಭೂ ಉದ್ಧರಿಸು, ನೀನೆನಗೆ ಸಹಾಯಕನು, ರಕ್ಷಕನು ಪ್ರಭು, ತಡಮಾಡದೆ ಬಾ.
ಸಭಾ ಪ್ರಾರ್ಥನೆ
ಪ್ರಭುವೇ, ನಿಮ್ಮ ಭಕ್ತಾದಿಗಳಿಗೆ ಪ್ರಸನ್ನರಾಗಿ
ಅವರ ಪ್ರಾರ್ಥನೆಗಳನ್ನು ಸ್ವಾಗತಿಸಲು ಎಂದಿಗೂ ನಿರಾಕರಿಸದಿರಿ.
ನೀವೇ ನಮ್ಮ ಸೃಷ್ಟಿಕರ್ತರೂ ಮಾರ್ಗದರ್ಶಿಯೂ
ಎಂದು ಹೆಮ್ಮೆಪಡುವ ನಮ್ಮೆಲ್ಲರಿಗಾಗಿ
ನಿಮ್ಮ ಸೃಷ್ಟಿಯನ್ನೆಲ್ಲಾ ಪುನರ್ಸ್ಥಾಪಿಸಿರಿ,
ಪುನರ್ಸ್ಥಾಪಿಸಿದ್ದನ್ನು ಭದ್ರವಾಗಿರಿಸಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಅರ್ಪಣಾ ಪ್ರಾರ್ಥನೆ
ಪ್ರಭುವೇ, ಈ ಕಾಣಿಕೆಗಳನ್ನು ದಯೆಯಿಂದ ಪಾವನಗೊಳಿಸಿರಿ.
ನಮ್ಮೀ ಆಧ್ಯಾತ್ಮಿಕ ಬಲಿಯನ್ನು ಸ್ವೀಕರಿಸಿ
ನಮ್ಮನ್ನೇ ನಿಮಗೆ ನಿತ್ಯ ಕಾಣಿಕೆಯಾಗಿ ಪರಿವರ್ತಿಸಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಪರಮ ಪ್ರಸಾದ ಶ್ಲೋಕ ಜ್ಞಾನ 16 : 20
ಪ್ರಭೂ ನೀವು ನಮಗೆ ಪರಲೋಕದಿಂದ ರೊಟ್ಟಿಯನ್ನು ಕೊಟ್ಟಿರಿ. ಅದು ರುಚಿಕರವಾಗಿ ಎಲ್ಲರಿಗೂ ಒಗ್ಗುವಂಥದ್ದಾಗಿದೆ.
ಅಥವಾ ಯೊವಾ 6 : 35
ನಾನೇ ಜೀವದಾಯಕ ರೊಟ್ಟಿ; ನನ್ನ ಬಳಿಗೆ ಬರುವವನಿಗೆ ಹಸಿವೇ ಇರದು. ನನ್ನಲ್ಲಿ ವಿಶ್ವಾಸ ಇಡುವವನಿಗೆ ಎಂದಿಗೂ ದಾಹವಾಗದು, ಎನ್ನುತ್ತಾರೆ ಪ್ರಭು.
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ನಿಮ್ಮ ಸ್ವರ್ಗೀಯ ವರದಾನದಿಂದ ನಮ್ಮನ್ನು ಚೈತನ್ಯಗೊಳಿಸಿದ್ದೀರಿ.
ನಮಗೆ ನಿಮ್ಮ ಅನವರತ ಪಾಲನೆಯೊಡನೆ ಪ್ರಸನ್ನರಾಗಿರಿ.
ನಿರುತವೂ ನಮ್ಮನ್ನು ಕಾಪಾಡುತ್ತಿರುವ ನೀವು
ನಿತ್ಯ ರಕ್ಷಣೆಗೆ ನಾವು ಯೋಗ್ಯರಾಗುವಂತೆ ಅನುಗ್ರಹಿಸಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
No comments:
Post a Comment