ಪ್ರವೇಶ ಶ್ಲೋಕ ಕೀರ್ತ 73 : 20, 19, 22,23
ನಿನ್ನೊಡಂಬಡಿಕೆಯನು ಗಮನವಿಟ್ಟು ಮಾನ್ಯಮಾಡು ನೀ ಮರೆತುಬಿಡಬೇಡ ನಿನ್ನ ದೀನದಲಿತರನು ಒಮ್ಮೆಗೆ. ಎಚ್ಚೆತ್ತು ದೇವಾ, ನಡೆಸು ನಿನ್ನ ನ್ಯಾಯವನು, ನಿನ್ನನ್ನು ಅರಸುವವರ ಮೊರೆಯನ್ನು ಮರೆಯದಿರು.
ಸಭಾ ಪ್ರಾರ್ಥನೆ
ಸರ್ವಶಕ್ತ ನಿತ್ಯ ದೇವರೇ, ಪವಿತ್ರಾತ್ಮರ ಪ್ರೇರಣೆಯಿಂದ
ನಿಮ್ಮನ್ನು ತಂದೆ ಎಂಬ ನಾಮದಿಂದ
ಸಂಬೋಧಿಸಲು ನಾವು ಧೈರ್ಯತಾಳುತ್ತೇವೆ.
ದತ್ತು ಮಕ್ಕಳೆಂಬ ಮನೋಭಾವನೆಯನ್ನು
ನಮ್ಮ ಹೃದಯಗಳಲ್ಲಿ ಸಂಪೂರ್ಣಗೊಳಿಸಿ
ನೀವು ವಾಗ್ದಾನವಿತ್ತ ಪಿತ್ರಾರ್ಜಿತವನ್ನು ಪಡೆಯಲು
ನಾವು ಯೋಗ್ಯರಾಗುವಂತೆ ಮಾಡಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಅರ್ಪಣಾ ಪ್ರಾರ್ಥನೆ
ಪ್ರಭುವೇ, ನಿಮಗೊಪ್ಪಿಸಲೆಂದೇ
ಕರುಣೆಯಿಂದ ನೀವಿತ್ತ ಹಾಗೂ ಧರ್ಮಸಭೆಯು
ಈಗ ನಿಮಗರ್ಪಿಸುತ್ತಿರುವ ಕಾಣಿಕೆಗಳನ್ನು
ಸಂತುಷ್ಟರಾಗಿ ಸ್ವೀಕರಿಸಿರಿ ಹಾಗೂ ನಿಮ್ಮ ದೈವಿಕ ಶಕ್ತಿಯಿಂದ
ಅವು ನಮಗೆ ಆತ್ಮೋದ್ಧಾರ ತಂದೀಯಲಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಪರಮ ಪ್ರಸಾದ ಶ್ಲೋಕ ಕೀರ್ತ 147 :12, 14
ಜೆರುಸಲೇಮೇ ಕೀರ್ತಿಸು ಪ್ರಭುವನು, ನೀಡುವನು ನಿನಗೆ ಅತ್ಯುತ್ತಮ ಗೋದಿಯನು.
ಅಥವಾ ಯೊವಾ 6 : 51
ಪ್ರಭು ಇಂತೆನ್ನುತ್ತಾರೆ : ಲೋಕೋದ್ಧಾರಕ್ಕಾಗಿ ನಾನು ಅರ್ಪಿಸುವ ನನ್ನ ಮಾಂಸವೇ ನಾನು ಕೊಡುವ ರೊಟ್ಟಿ.
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ನಾವು ಸ್ವೀಕರಿಸಿದ ಐಕ್ಯತೆಯ ಸಂಸ್ಕಾರವು
ನಮ್ಮನ್ನು ರಕ್ಷಿಸಲಿ.
ನಿಮ್ಮ ಸತ್ಯದ ಜ್ಯೋತಿಯಿಂದ
ನಮ್ಮನ್ನು ಬಲಪಡಿಸಲಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
No comments:
Post a Comment