ಪ್ರವೇಶ ಶ್ಲೋಕ ಕೀರ್ತ 67 : 6-7, 36
ದಿವ್ಯಧಾಮದಲ್ಲಿಹ ಆ ದೇವ ತನ್ನ ಆಲಯದಲ್ಲಿಹ ಜನರನು ಒಂದುಗೂಡಿಸಿ, ಸ್ವತಃ ತಾನೇ ತನ್ನ ಪ್ರಜೆಗೆ ಶಕ್ತಿಯನ್ನೀಯುವನು.
ಸಭಾ ಪ್ರಾರ್ಥನೆ
ದೇವರೇ, ನಿಮ್ಮ ಹೊರತು
ಯಾವುದೂ ಶಕ್ತಿಶಾಲಿಯಲ್ಲ, ಪವಿತ್ರವೂ ಅಲ್ಲ.
ನಿಮ್ಮಲ್ಲಿ ನಂಬಿಕೆಯಿಟ್ಟ ನಮ್ಮನ್ನು ಕಾದು ರಕ್ಷಿಸಿರಿ.
ನಿಮ್ಮ ದಯೆಯನ್ನು ಧಾರಾಳವಾಗಿ ನಮ್ಮ ಮೇಲೆ ಸುರಿಸಿರಿ.
ನಿಮ್ಮಾಳ್ವಿಕೆ ಹಾಗೂ ಮಾರ್ಗದರ್ಶನದಡಿ
ತಾತ್ಕಾಲಿಕವಾದವುಗಳನ್ನು ಎಚ್ಚರಿಕೆಯಿಂದ ಉಪಯೋಗಿಸಿ
ಅಮರವಾದವುಗಳಿಗೆ ಬದ್ಧರಾಗಿರುವಂತೆ ಮಾಡಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಅರ್ಪಣಾ ಪ್ರಾರ್ಥನೆ
ಪ್ರಭುವೇ, ನಿಮ್ಮ ಧಾರಾಳತೆಯಿಂದ ಪಡೆದು
ನಿಮಗೆ ಅರ್ಪಿಸಲು ತಂದ ಈ ಕಾಣಿಕೆಗಳನ್ನು ಸ್ವೀಕರಿಸಿರಿ.
ನಿಮ್ಮ ಕೃಪಾವರದ ಮಹಾಶಕ್ತಿಯ ಮೂಲಕ
ಈ ಅತಿ ಪವಿತ್ರ ರಹಸ್ಯಗಳು ಈ ಜೀವನದಲ್ಲಿ
ನಮ್ಮನ್ನು ಪಾವನಗೊಳಿಸಿ ಅನಂತ ಸುಖಕ್ಕೊಯ್ಯಲಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಪರಮ ಪ್ರಸಾದ ಶ್ಲೋಕ ಕೀರ್ತ 102 : 2
ಭಜಿಸು ನನ್ನ ಮನವೇ, ಭಜಿಸು ಪ್ರಭುವನು. ಮರೆಯದಿರು ಆತನ ಉಪಕಾರಗಳಲೊಂದನೂ.
ಅಥವಾ ಮತ್ತಾ 5 : 7-8
ದಯಾವಂತರು ಭಾಗ್ಯವಂತರು, ದೇವರ ದಯೆ ಅವರಿಗೆ ದೊರಕುವುದು. ನಿರ್ಮಲ ಹೃದಯಿಗಳು ಭಾಗ್ಯವಂತರು, ಅವರು ದೇವರನ್ನು ಕಾಣುವರು.
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ನಿಮ್ಮ ದಿವ್ಯ ಕುಮಾರರ ಯಾತನಾಮಯ ಮರಣದ
ನಿತ್ಯ ಸ್ಮಾರಕವಾದ ಸಂಸ್ಕಾರವನ್ನು ನಾವು ಸ್ವೀಕರಿಸಿದ್ದೇವೆ.
ಊಹೆಗೂ ಮೀರಿದ ಅಮೋಘ ಪ್ರೀತಿಯಿಂದ
ಅವರು ನಮಗಿತ್ತ ಈ ವರದಾನವು ನಮ್ಮನ್ನು ನಿತ್ಯ ರಕ್ಷಣೆಗೊಯ್ಯಲಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
No comments:
Post a Comment