Tuesday, 27 August 2019

ಸಾಧಾರಣ ಕಾಲದ ಇಪ್ಪತ್ತೊಂದನೇ ವಾರ ಶುಕ್ರವಾರ

ಸಾಧಾರಣ ಕಾಲದ ಇಪ್ಪತ್ತೊಂದನೇವಾರ ಶುಕ್ರವಾರ 

3೦/ಹಸಿರು/ಶುಕ್ರ/ಐಚ್ಛಿಕ ಸ್ಮರಣೆ - ಸಂತ ಯುಫ್ರೇಸಿಯ (ಕನ್ಯೆ)
ವಾಚನ: 1 ಥೆಸ 4: 1-8
ಕೀರ್ತನೆ - 96:1-2,5-6, 1೦, 11-12 
ಶುಭಸಂದೇಶ - ಮತ್ತಾಯ 25: 1-13,

ವಾಚನ: 1 ಥೆಸ 4: 1-8
ಕಡೆಯದಾಗಿ ಸಹೋದರರೇ, ನೀವು ಹೇಗೆ ಬಾಳಬೇಕು, ದೇವರು ಮೆಚ್ಚುವಂತೆ ಹೇಗೆ ನಡೆದುಕೊಳ್ಳಬೇಕು, ಎಂಬುದನ್ನು ನಮ್ಮಿಂದ ಕಲಿತುಕೊಂಡಿರಿ. ಅಂತೆಯೇ ಜೀವಿಸುತ್ತಿದ್ದೀರಿ. ನಿಮ್ಮ ನಡತೆ ಇನ್ನೂ ಉತ್ತಮಗೊಳ್ಳಬೇಕೆಂದು ಪ್ರಭು ಯೇಸುವಿನ ಹೆಸರಿನಲ್ಲಿ ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ ಹಾಗೂ ಪ್ರಬೋಧಿಸುತ್ತೇವೆ. ಪ್ರಭು ಯೇಸುವಿನ ಅಧಿಕಾರದಿಂದ ನಾವು ನಿಮಗೆ ವಿಧಿಸಿದ ನಿಯಮಗಳನ್ನು ನೀವು ಬಲ್ಲಿರಿ. ನೀವು ಕೆಟ್ಟ ನಡತೆಯನ್ನು ಬಿಟ್ಟು ಪರಿಶುದ್ಧರಾಗಿ ಜೀವಿಸಬೇಕು ಎಂಬುದು ದೇವರ ಚಿತ್ತ. ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಪತ್ನಿಯನ್ನು ಘನತೆ, ಗೌರವದಿಂದಲೂ ಶುದ್ಧ ಮನಸ್ಸಿನಿಂದಲೂ ನಡೆಸಿಕೊಳ್ಳಬೇಕು. ದೇವರ ಅರಿವೇ ಇಲ್ಲದ ಅನ್ಯಜನರಂತೆ ಕಾಮಾತಿರೇಕದಿಂದ ವರ್ತಿಸಬಾರದು. ಈ ವಿಷಯದಲ್ಲಿ ಯಾರೂ ತನ್ನ ಸಹೋದರನನ್ನು ವಂಚಿಸಿ ಅತಿಕ್ರಮಿಸದಿರಲಿ. ಹೀಗೆ ವರ್ತಿಸುವವರು ಪ್ರಭುವಿನ ಪ್ರತೀಕಾರಕ್ಕೆ ಒಳಗಾಗುವರೆಂದು ನಾವು ನಿಮಗೆ ಮುನ್ನೆಚ್ಚರಿಕೆ ಕೊಟ್ಟಿದ್ದೇವೆ. ದೇವರು ನಮ್ಮನ್ನು ಕರೆದಿರುವುದು ಅಶುದ್ಧ ನಡತೆಗಲ್ಲ, ಪರಿಶುದ್ಧ ನಡತೆಗೆ. ಅಂದಮೇಲೆ, ಈ ಬೋಧನೆಯನ್ನು ತಿರಸ್ಕರಿಸುವವನು ಮನುಷ್ಯನನ್ನು ಮಾತ್ರವಲ್ಲ, ನಿಮಗೆ ಪವಿತ್ರಾತ್ಮರನ್ನು ಪ್ರದಾನ ಮಾಡಿರುವ ದೇವರನ್ನೇ ತಿರಸ್ಕರಿಸುತ್ತಾನೆ.

ಕೀರ್ತನೆ - 97:1-2,5-6, 1೦, 11-12
1 : ಇದೆ ಪ್ರಭುವಿನ ಕೈಯಲಿ ರಾಜ್ಯಾಧಿಕಾರ / ಉಲ್ಲಾಸಿಸಲಿ ಧರಣಿಮಂಡಲದಾದ್ಯಂತ / ಸಂತೋಷಿಸಲಿ ಕಡಲಿನ ದ್ವೀಪಗಳೆಲ್ಲ //
2 : ಇವೇ ಮುಗಿಲೂ ಕಾರ್ಮುಗಿಲೂ ಆತನ ಸುತ್ತಲು / ನ್ಯಾಯ-ನೀತಿ ಆತನ ಗದ್ದುಗೆಯಸ್ತಿವಾರಗಳು //
5 : ಸಾರ್ವಭೌಮನಾದ ಪ್ರಭುವಿನ ಮುಂದೆ / ಕರಗುತ್ತವೆ ಬೆಟ್ಟಗುಡ್ಡಗಳು ಮೇಣದಂತೆ //
6 : ಘೋಷಿಸುತ್ತದೆ ಗಗನಮಂಡಲ ಆತನ ನೀತಿಯನು / ಕಾಣುತ್ತವೆ ಸಕಲ ಜನಾಂಗ ಆತನ ಮಹಿಮೆಯನು //
10 : ಕೇಡನು ಹಗೆಮಾಡುವವನಿಗೆ ಪ್ರಭು ಒಲಿವನು / ತನ್ನ ಭಕ್ತರ ಪ್ರಾಣವನು ಕಾಪಾಡುವನು / ದುಷ್ಟರ ಕೈಯಿಂದವರನು ಬಿಡಿಸುವನು //
11 : ಉದಯವಾಗುವುದು ಜ್ಯೋತಿ ಸಜ್ಜನರಿಗೆ / ಆನಂದವಿದೆ ಯಥಾರ್ಥ ಹೃದಯಿಗಳಿಗೆ //
12 : ಸಜ್ಜನರೇ, ಪ್ರಭುವಿನಲಿ ಆನಂದಿಸಿರಿ / ಆತನ ಶ್ರೀನಾಮವನು ಕೊಂಡಾಡಿರಿ //

ಶುಭಸಂದೇಶ - ಮತ್ತಾಯ 25: 1-13
“ಆ ದಿನಗಳಲ್ಲಿ ಸ್ವರ್ಗಸಾಮ್ರಾಜ್ಯ ಹೇಗಿರುವುದು ಎನ್ನುವುದಕ್ಕೆ ಈ ಸಾಮತಿಯನ್ನು ಕೊಡಬಹುದು: ಹತ್ತು ಮಂದಿ ಕನ್ಯೆಯರು ದೀಪಾರತಿ ಹಿಡಿದು ಮದುವಣಿಗನನ್ನು ಎದುರುಗೊಳ್ಳಲು ಹೋದರು. ಅವರಲ್ಲಿ ಐವರು ವಿವೇಕಿಗಳು, ಐವರು ಅವಿವೇಕಿಗಳು, ಅವಿವೇಕಿಗಳು ದೀಪಗಳನ್ನು ತೆಗೆದುಕೊಂಡರೇ ಹೊರತು ಜೊತೆಗೆ ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ. ವಿವೇಕಿಗಳಾದರೋ ದೀಪಗಳ ಜೊತೆಗೆ ಬುಡ್ಡಿಗಳಲ್ಲಿ ಎಣ್ಣೆಯನ್ನೂ ತೆಗೆದುಕೊಂಡರು. ಮದುವಣಿಗ ಬರುವುದು ತಡವಾಯಿತು. ಅವರೆಲ್ಲರೂ ತೂಕಡಿಸುತ್ತಾ ಹಾಗೇ ನಿದ್ರೆಹೋದರು. “ನಡುರಾತ್ರಿಯ ವೇಳೆ. ‘ಇಗೋ, ಮದುವಣಿಗ ಬರುತ್ತಿದ್ದಾನೆ; ಬನ್ನಿ, ಆತನನ್ನು ಎದುರುಗೊಳ್ಳಿ,’ ಎಂಬ ಕೂಗು ಕೇಳಿಸಿತು. ಕನ್ಯೆಯರೆಲ್ಲರೂ ಎದ್ದರು. ತಮ್ಮ ತಮ್ಮ ದೀಪದ ಬತ್ತಿಯನ್ನು ಸರಿಮಾಡಿದರು. ಅವಿವೇಕಿಗಳು, ‘ನಮ್ಮ ದೀಪಗಳು ಆರಿಹೋಗುತ್ತಾ ಇವೆ; ನಿಮ್ಮ ಎಣ್ಣೆಯಲ್ಲಿ ನಮಗೂ ಕೊಂಚ ಕೊಡಿ,’ ಎಂದು ವಿವೇಕಿಗಳನ್ನು ಕೇಳಿಕೊಂಡರು. ಅದಕ್ಕೆ ಅವರು, ‘ನಿಮಗೆ ಕೊಟ್ಟರೆ ನಮಗೂ ನಿಮಗೂ ಸಾಲದೆ ಹೋದೀತು. ನೀವು ಅಂಗಡಿಗೆ ಹೋಗಿ ಕೊಂಡುಕೊಂಡರೆ ಒಳ್ಳೆಯದು,’ ಎಂದರು. ಅಂತೆಯೇ ಅವರು ಎಣ್ಣೆಯನ್ನು ಕೊಂಡುಕೊಳ್ಳಲು ಹೋದಾಗ ಮದುವಣಿಗನು ಬಂದೇಬಿಟ್ಟನು. ಸಿದ್ಧರಾಗಿದ್ದವರು ಅವನ ಸಂಗಡ ವಿವಾಹ ಮಹೋತ್ಸವಕ್ಕೆ ಹೋದರು. ಕಲ್ಯಾಣಮಂಟಪದ ಬಾಗಿಲುಗಳನ್ನು ಮುಚ್ಚಲಾಯಿತು. ಉಳಿದ ಕನ್ಯೆಯರು ಅನಂತರ ಬಂದರು. ‘ಸ್ವಾವಿೂ, ಸ್ವಾವಿೂ, ನಮಗೆ ಬಾಗಿಲು ತೆರೆಯಿರಿ,’ ಎಂದು ಕೂಗಿಕೊಂಡರು. ಅದಕ್ಕೆ ಉತ್ತರವಾಗಿ ಆ ಮದುವಣಿಗ, ‘ಅದಾಗದು, ನೀವು ಯಾರೋ ನನಗೆ ಗೊತ್ತಿಲ್ಲ,’ ಎಂದುಬಿಟ್ಟ. ಆದ್ದರಿಂದ ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು.

ಚಿಂತನೆ
ನಿರೀಕ್ಷಿಸು-ದೇವ ಮಹಿಮನನು
ಮೊದಲನೆಯ ಮಹಾಯುದ್ಧದ ಕಾಲವದು; ಸೈನಿಕರು ಗಡಿ ಪ್ರದೇಶದಲ್ಲಿ, ಇಕ್ಕೆಲಗಳಲ್ಲಿ ಅಪಾಯಕರ ಆಯುಧಗಳನ್ನು ಹಿಡಿದು ಸೆಣಸಾಡುತ್ತಿದ್ದರು. ನಿರಂತರವೂ ಅಣುಬಾಂಬುಗಳ ಸುರಿಮಳೆ ಸುರಿಯುತ್ತಿತ್ತು. ಇಬ್ಬರು ಪ್ರಿಯ ಸ್ನೇಹಿತರು, ಬಹಳ ಆತ್ಮೀಯರಾದರೂ ಪ್ರಾಣಭಯದಿಂದ ಬೇರೆ ಬೇರೆ ಹಡಗುತಾಣಗಳಲ್ಲಿ ತಂಗಬೇಕಾಯಿತು.  ಆದರೆ ಬೆಳಿಗ್ಗೆ ನೋಡಿದಾಗ ಒಬ್ಬ ಮಾತ್ರ ಗುಪ್ತ ನಿವಾಸಕ್ಕೆ ಮರಳಿ ಬಂದಿದ್ದ. ತಡೆಯಲಾರದ ಗೆಳೆಯ, ಸೈನ್ಯಾಧಿಕಾರಿಯಲ್ಲಿ ಗೆಳೆಯನನ್ನು ಹುಡುಕಲು ಹೋಗುವುದಾಗಿ ತಿಳಿಸಿದ. ಸೈನ್ಯಾಧಿಕಾರಿಗೆ ಇದು ಅಪಾಯಕರ ಹಾಗೂ ಅಸಾಧ್ಯ ಕಾರ್ಯವೆಂದು ತಿಳಿದಿತ್ತು. ಆದರೂ ಆತನಿಗೆ ಅನುಮತಿ ನೀಡಿದ. ಸ್ವಲ್ಪ ಸಮಯದ ನಂತರ ಮರಳಿದ ಸ್ನೇಹಿತನನ್ನು ಕಂಡ ಸೈನ್ಯಾಧಿಕಾರಿ; ನಿನ್ನ ಗೆಳೆಯನನ್ನು ಕಂಡೆಯಾ ಎಂದು ಕೇಳಿದ. ಹೌದು ಸರ್ ಆದರೆ ನನ್ನ ಕಂಡ ಕೆಲವೇ ಕ್ಷಣಗಳಲ್ಲಿ ಮರಣವನ್ನಪ್ಪಿದ. ಹಾಗಾದರೆ ನೀನು ಹೋದದ್ದು ಪ್ರಯೋಜನವಾಗಲಿಲ್ಲ. ಸರ್, ನಾನು ಹೋದದ್ದು ಒಳ್ಳೆಯದೇ ಆಯಿತು. ನನ್ನ ಕಂಡದ್ದೆ ಆತ, `ಬಂದೆಯಾ ಗೆಳೆಯಾ, ನೀನು ಬಂದೇ ಬರುವಿಯೆಂದು ನನಗೆ ಖಂಡಿತವಾಗಿ ತಿಳಿದಿತ್ತು' ಎಂದು ಸಾವನ್ನಪ್ಪಿದ ಶಾಂತಿ ಸಮಾಧಾನದಿಂದ.

ಹೌದು ಪ್ರೀತಿಯ ಸಹೋದರರೇ, ಇಂದಿನ ಶುಭಸಂದೇಶವು ದೇವರ ಬರುವಿಕೆಯನ್ನು ವಿಶ್ವಾಸದಿಂದ ನಿರೀಕ್ಷಿಸಲು ಕರೆ ನೀಡುತ್ತದೆ. ದೇವರ ನಿರೀಕ್ಷೆ ಭಕ್ತರಿಗೊಂದು ಪರೀಕ್ಷೆ. ಆದರೆ ಪರೀಕ್ಷೆಯಲ್ಲಿ ಭಕ್ತರಿಗೆ ಯಶಸ್ಸು ಖಂಡಿತ. ನಿರೀಕ್ಷಿಸುತ್ತಿರುವ ಭಕ್ತನನ್ನು ಎಂದೆಂದೂ ದೇವರು ನಿರಾಶೆಗೊಳಿಸುವುದಿಲ್ಲ. ತನ್ನ ಗೆಳೆಯ ಸತ್ತರೂ ಆ ಗೆಳೆಯನನ್ನು ನೋಡಿದೆ ಎಂಬ ಸಂತೃಪ್ತ ಮನೋಭಾವನೆಯಿಂದ ಹಿಂತಿರುಗಿದನೋ ಅದೇ ರೀತಿ ನಮ್ಮನ್ನು ದಯಾಮಯ ದೇವರು ನಿರಾಶೆಗೊಳಿಸುವುದಿಲ್ಲ. ಆದರೆ ಆ ಬುದ್ಧಿವಂತ ಕನ್ನಿಕೆಯರ ಹಾಗೆಯೇ ದೀಪಗಳ ಜೊತೆಯಲ್ಲಿಯೇ ಉರಿಯಲು ಬೇಕಾದ ಎಣ್ಣೆಯನ್ನು ತರುವಂತಹ ನೈಪುಣ್ಯತೆಯನ್ನು ನಮ್ಮಿಂದ ಬಯಸುತ್ತಾರೆ.

ದೇವರು ಬರುವ ಸಮಯವನ್ನು ನಾವು ಅರಿಯೆವು. ಆದರೆ ತಾಳ್ಮೆ, ವಿಶ್ವಾಸದಿಂದ ದೇವರ ಬರುವಿಕೆಯನ್ನು ಕಾಯೋಣ. ನಮ್ಮ ನೆರೆಹೊರೆಯವರಲ್ಲಿ, ಸಹೋದರ ಸಹೋದರಿಯರಲ್ಲಿ, ದೇವರನ್ನು ಕಂಡು ನಮ್ಮ ಸ್ವಾರ್ಥ ಮನೋಭಾವವನ್ನು ತೊರೆದು, ಪ್ರೀತಿಯ ಬೀಜವನ್ನು ಬಿತ್ತುತ್ತಾ ದೇವರ ಆಗಮನದ ಹಾದಿಯನ್ನು ಸಿದ್ಧಪಡಿಸಲು ಕಂಕಣಬದ್ಧರಾಗೋಣವೇ?

ದೇವರ ನಿರೀಕ್ಷೆ ಭಕ್ತರಿಗೊಂದು ಪರೀಕ್ಷೆ

No comments:

Post a Comment