ಪ್ರವೇಶ ಶ್ಲೋಕ ಕೀರ್ತ 83 : 10-11
ನಮ್ಮ ಶಕ್ತಿಯಾದ ದೇವಾ, ಕಟಾಕ್ಷಿಸು ನಿನ್ನ ಅಭಿಷಿಕ್ತನನ್ನು. ನಿನ್ನ ಮಂದಿರದಲ್ಲಿ ಕಳೆದ ದಿನವೊಂದು ತಿಳಿವೆನು ಸಾವಿರ ದಿನಕೂ ಮೇಲೆಂದು.
ಸಭಾ ಪ್ರಾರ್ಥನೆ
ದೇವರೇ, ನಿಮ್ಮನ್ನು ಪ್ರೀತಿಸುವವರಿಗಾಗಿ
ಅಗೋಚರ ಸಂಪತ್ತನ್ನು ಕಾದಿರಿಸಿದ್ದೀರಿ.
ನಮ್ಮ ಹೃದಯಗಳು ನಿಮಗಾಗಿ ಹಾತೊರೆಯುವಂತೆ ಮಾಡಿರಿ.
ಎಲ್ಲದರಲ್ಲೂ ಎಲ್ಲಕ್ಕಿಂತಲೂ ಹೆಚ್ಚಾಗಿ ನಿಮ್ಮನ್ನೇ ಪ್ರೀತಿಸಿ
ಯಾವ ಅಭಿಲಾಷೆಗೂ ಮೀರುವ ನಿಮ್ಮ ವಾಗ್ದಾನಗಳಿಗೆ
ನಾವು ಪಾತ್ರರಾಗುವಂತೆ ಮಾಡಿರಿ.
ನಿಮ್ಮೊಂದಿಗೆ ಪವಿತ್ರಾತ್ಮರ ಐಕ್ಯದಲ್ಲಿ ದೇವರಾಗಿ
ಯುಗಯುಗಾಂತರಕ್ಕೂ ಜೀವಿಸಿ ಆಳುವ
ನಮ್ಮ ಪ್ರಭುವೂ ನಿಮ್ಮ ಪುತ್ರರೂ ಆಗಿರುವ
ಯೇಸು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಅರ್ಪಣಾ ಪ್ರಾರ್ಥನೆ
ಪ್ರಭುವೇ, ನೀವೇ ನಮಗಿತ್ತ ಕೊಡುಗೆಯನ್ನು ನಿಮಗರ್ಪಿಸುತ್ತಿದ್ದೇವೆ.
ನಾವು ಮಾಡುವ ಈ ಮಹಿಮಾಭರಿತ ವಿನಿಮಯದಿಂದ
ನಿಮ್ಮನ್ನೇ ನಾವು ಪಡೆಯುವಂತೆ ಮಾಡಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
ಪರಮ ಪ್ರಸಾದ ಶ್ಲೋಕ ಕೀರ್ತ 129 : 7
ಪ್ರಭುವಿನಲ್ಲಿದೆ ಕರುಣೆ, ಪೂರ್ಣ ವಿಮೋಚನೆ.
ಅಥವಾ ಯೊವಾ 6 : 51-52
ಪ್ರಭು ಇಂತೆನ್ನುತ್ತಾರೆ : ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿ. ಈ ರೊಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ.
ಕೃತಜ್ಞತಾ ಪ್ರಾರ್ಥನೆ
ಪ್ರಭುವೇ, ಈ ಸಂಸ್ಕಾರಗಳಿಂದ
ಕ್ರಿಸ್ತರಲ್ಲಿ ಪಾಲುಗೊಂಡು
ಇಹದಲ್ಲಿ ಅವರ ಅನುರೂಪಿಗಳಾದ ನಾವು
ಪರದಲ್ಲಿ ಅವರ ಸಹಭಾಗಿಗಳಾಗುವಂತೆ ಕರುಣಿಸಿರಿ.
ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.
No comments:
Post a Comment